ನಿದ್ರಾಹೀನತೆ (ಸಂಗ್ರಹ ಚಿತ್ರ) 
ಅಂಕಣಗಳು

ನಿದ್ರಾಹೀನತೆ: ಜೀವನಶೈಲಿ ಬದಲಾವಣೆಯೇ ಮದ್ದು (ಕುಶಲವೇ ಕ್ಷೇಮವೇ)

​ಮನುಷ್ಯನ ದೈಹಿಕ–ಮಾನಸಿಕ ವಿಶ್ರಾಂತಿಯ ಸಮಯ ಎಂದರೆ ನಿದ್ರೆ. ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಆರೋಗ್ಯವಾಗಿರಲು ಪ್ರತಿನಿತ್ಯ ಎಂಟು ಗಂಟೆಗಳ ನಿದ್ರೆ ಅತ್ಯವಶ್ಯಕ.

ಮನುಷ್ಯನ ದೈಹಿಕ–ಮಾನಸಿಕ ವಿಶ್ರಾಂತಿಯ ಸಮಯ ಎಂದರೆ ನಿದ್ರೆ. ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಆರೋಗ್ಯವಾಗಿರಲು ಪ್ರತಿನಿತ್ಯ ಎಂಟು ಗಂಟೆಗಳ ನಿದ್ರೆ ಅತ್ಯವಶ್ಯಕ. ಮನುಷ್ಯರೂ ಸೇರಿದಂತೆ ಭೂಮಿಯಲ್ಲಿ ವಾಸಿಸುವ ಎಲ್ಲಾ ಜೀವಿಗಳಿಗೆ ಆಹಾರ, ನೀರು ಮತ್ತು ಗಾಳಿಯಂತೆ ಸಾಕಷ್ಟು ನಿದ್ರೆ ಅರೋಗ್ಯಕ್ಕೆ ಬಹಳ ಮುಖ್ಯ.

ನಿದ್ರಾಹೀನತೆ ಎಂದರೇನು?

ನಿದ್ರಾಹೀನತೆ ಎಂದರೆ ನಿದ್ರೆ ಸರಿಯಾಗಿ ಬರದೇ ಇರದಿರುವುದು. ಇದರಿಂದ ಸದಾಕಾಲ ಮಂಪರಿನ ಸ್ಥಿತಿ, ಶಕ್ತಿಯ ಕೊರತೆ, ಇರಿಸುಮುರಿಸು ಮತ್ತು ಕೆಲವೊಮ್ಮೆ ಖಿನ್ನತೆ ಉಂಟಾಗಬಹುದು. ನಿದ್ರಾಹೀನತೆಯು ಅಲ್ಪಕಾಲಿಕ ಅಥವಾ ದೀರ್ಘಕಾಲಿಕವಾಗಿ ಕಾಡಬಹುದು.

ಮಾನಸಿಕ ಒತ್ತಡ, ಯೋಚನೆ, ಎದೆಯುರಿ, ಋತುಬಂಧ, ಔಷಧಗಳು, ಮದ್ಯಪಾನ ಅಥವಾ ಬೇರೆ ಮಾದಕವಸ್ತುಗಳ ಪರಿಣಾಮ, ಸರಿಯಾದ ಸಮಯಕ್ಕೆ ನಿದ್ರಿಸದೇ ಇರುವುದು ಅಥವಾ ಅನಿಯಮಿತ ಕೆಲಸದ ಅವಧಿ ಅಥವಾ ನೈಟ್ ಶಿಫ್ಟ್ ನಿದ್ರಾಹೀನತೆಗೆ ಸಾಮಾನ್ಯ ಕಾರಣಗಳು. ಇದರಿಂದ ದೇಹದ ಜೈವಿಕ ಗಡಿಯಾರಕ್ಕೆ ಅಡ್ಡಿಯಾಗುತ್ತದೆ.

ಆರೋಗ್ಯದ ಮೇಲೆ ನಿದ್ರಾಹೀನತೆಯ ಪರಿಣಾಮ

ಒಂದು ಅಂದಾಜಿನ ಪ್ರಕಾರ ವಯಸ್ಕರಲ್ಲಿ ಶೇಕಡಾ 15ರಷ್ಟು ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ವಯಸ್ಸಾದಂತೆ ಇದರ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಪುರುಷರಿಗಿಂತ ಮಹಿಳೆಯರು ಇದಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ನಿದ್ರಾಹೀನತೆಯಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ದಣಿವು ಮತ್ತು ಕಿರಿಕಿರಿಯನ್ನು ಅನುಭವಿಸುತ್ತಾರೆ. ಕೆಲವೊಮ್ಮೆ ತೂಕಡಿಕೆ ಬಂದರೂ ಅವರಿಗೆ ನಿದ್ರೆ ಮಾಡಲು ಆಗುವುದಿಲ್ಲ.

ಆಧುನಿಕ ಜಗತ್ತಿನಲ್ಲಿ ಅದರಲ್ಲಿಯೂ ವಿಶೇಷವಾಗಿ ಕೊರೊನಾ ಮಹಾಮಾರಿ ಸಮಯದಲ್ಲಿ ನಿದ್ರಾಹೀನತೆ ಸಮಸ್ಯೆ ಹೆಚ್ಚಾಗಿದೆ. ಸರಿಯಾದ ಸಮಯದಲ್ಲಿ ಸರಿಯಾಗಿ ನಿದ್ರೆ ಮಾನಸಿಕ ನೆಮ್ಮದಿ ಹಾಗೂ ದೈಹಿಕ ಯೋಗಕ್ಷೇಮಕ್ಕೆ ಅತ್ಯಗತ್ಯ ಎಂದು ಸಂಶೋಧನೆಗಳು ಸಾಬೀತು ಮಾಡಿವೆ. ನಿದ್ರಾಹೀನತೆ ಬುದ್ದಿ ಮತ್ತು ಭಾವನಾತ್ಮಕ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ.

ಇತ್ತೀಚೆಗಂತೂ ಪೋಷಕರು ಮಕ್ಕಳಿಗೆ ಮೊಬೈಲ್ ಫೋನನ್ನು ಕೊಟ್ಟು ಗೇಮ್ಸ್ ಆಡಲು ಅಥವಾ ಕಾರ್ಟೂನುಗಳನ್ನು ನೋಡಲು ಕೊಡುತ್ತಾರೆ. ರಾತ್ರಿಯ ಹೊತ್ತು ಗಂಟಗಟ್ಟಲೇ ಮಕ್ಕಳು ಮೊಬೈಲ್ ಫೋನನ್ನು ಹಿಡಿದುಕೊಂಡು ಕೂರುತ್ತಾರೆ. ಇದರಿಂದ ಅವರ ಕಣ್ಣಿಗಷ್ಟೇ ಅಲ್ಲ ನಿದ್ರಿಸುವ ಅವಧಿಯ ಮೇಲೆಯೂ ಪರಿಣಾಮ ಆಗುತ್ತದೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು. ಬೆಳೆಯುವ ಮಕ್ಕಳಿಗೆ ಕನಿಷ್ಠ ಒಂಬತ್ತು-ಹತ್ತು ಗಂಟೆಗಳ ನಿದ್ರೆ ಬೇಕೇಬೇಕು.

ಜೀವನಶೈಲಿ ಬದಲಾವಣೆಯಿಂದ ನಿದ್ರಾಹೀನತೆ ದೂರ

ನಿದ್ರೆ ಸರಿಯಾಗಿ ಮಾಡದಿರುವುದು, ಅಡೆತಡೆಯ ನಿದ್ದೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರುತ್ತದೆ. ನಿದ್ರಾಹೀನತೆಯಿಂದ ಮಾನಸಿಕ ಖಿನ್ನತೆ, ರಕ್ತದ ಒತ್ತಡ, ಬೊಜ್ಜು ಮತ್ತಿತರ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದ್ದರಿಂದ ನಿದ್ರಾಹೀನತೆ ಉಂಟಾಗದಂತೆ ಜೀವನಶೈಲಿಯನ್ನು ಬದಲಿಸಿಕೊಳ್ಳುವುದೇ ಉತ್ತಮ ಮಾರ್ಗ.

  • ರಾತ್ರಿ ಊಟ ಮಾಡುವ ಸಮಯ ಮತ್ತು ಮಲಗುವ ಸಮಯದ ನಡುವೆ ಮೂರು ಗಂಟೆಗಳ ಅಂತರ ಇರಬೇಕು. ಉದಾಹರಣೆಗೆ ರಾತ್ರಿ ಎಂಟು ಗಂಟೆಗೆ ಊಟ ಮಾಡಿದರೆ ಹನ್ನೊಂದು ಗಂಟೆಗೆ ಮಲಗಬಹುದು.
  • ಟಿವಿ, ಮೊಬೈಲ್ ಫೋನ್ ಹಾಗೂ ಲ್ಯಾಪ್‍ಟಾಪ್‍ನಿಂದ ರಾತ್ರಿಯ ಹೊತ್ತು ಆದಷ್ಟೂ ದೂರವಿರಬೇಕು.
  • ಮಲಗುವ ಮುನ್ನ ಮನಸ್ಸು ಹಗುರಾಗಿರಬೇಕು. ಸದಭಿರುಚಿಯ ಪುಸ್ತಕಗಳನ್ನು ಓದಿಯೋ, ಆಹ್ಲಾದವಿಯುವ ಸಂಗೀತವನ್ನು ಆಲಿಸಿಯೋ ನಿದ್ರೆಗೆ ತಯಾರಾಗಬೇಕು. ಯಾವುದಾದರೂ ಕೊರೆಯುವ ಯೋಚನೆಗಳಿದ್ದರೆ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು.
  • ಮಲಗುವ ಕೋಣೆಯಲ್ಲಿ ಆದಷ್ಟು ನೈಸರ್ಗಿಕವಾಗಿ ಗಾಳಿ ಬೀಸುವ ಹಾಗೆ ಕಿಟಕಿಗಳನ್ನು ತೆರೆದಿಡಬೇಕು. ಲೈಟ್ ಡಿಮ್ ಆಗಿದ್ದರೆ ಒಳ್ಳೆಯದು.
  • ಹಗಲುಹೊತ್ತಿನಲ್ಲಿ ನಿದ್ರೆ ಮಾಡಿದಲ್ಲಿ ರಾತ್ರಿ ಮಲಗಿದ ಕೂಡಲೇ ನಿದ್ರೆ ಬರುವುದಿಲ್ಲ. ಮುಸ್ಸಂಜೆಯ ನಿದ್ರೆ, ಹಗಲುನಿದ್ರೆಗಳು ಅನಾರೋಗ್ಯಕರ ಅಭ್ಯಾಸ.
  • ರಾತ್ರಿ ನಿದ್ರೆ ಬರಲಿ ಅಥವಾ ಬರದೇ ಇರಲಿ ಕಣ್ಣು ಮುಚ್ಚಿ ಮಲಗಿಕೊಳ್ಳಿ. ಇದರಿಂದಲೂ ಶರೀರಕ್ಕೆ ಸಾಕಷ್ಟು ಆರಾಮ ಸಿಗುತ್ತದೆ. ಈ ಮಧ್ಯೆಯೂ ಕೂಡ ನಿಮಗೆ ನಿದ್ರೆ ಬಾರದೆ ಇದ್ದಲ್ಲಿ ಲೈಟ್ ಹಾಕಬೇಡಿ ಹಾಗೂ ಮೊಬೈಲ್ ಫೋನ್ ಉಪಯೋಗಿಸಬೇಡಿ. ಹಾಗೆಯೇ ಶಾಂತಿಯಿಂದ ಮಲಗಿಕೊಳ್ಳಿ. ಹತ್ತು ನಿಮಿಷಗಳಲ್ಲಿ ನಿದ್ರೆ ಬರುತ್ತದೆ.
  • ರಾತ್ರಿಯ ಹೊತ್ತು ಕಾಫೀ/ಟೀಗಳಿಂದ ಸಾಧ್ಯವಾದಷ್ಟು ದೂರವಿರಿ. ಧೂಮಪಾನ ಮತ್ತು ಮದ್ಯಪಾನ ಬೇಡವೇ ಬೇಡ,.
  • ರಾತ್ರಿಯ ಊಟ ಹಗುರವಾಗಿದ್ದರೆ ಒಳ್ಳೆಯದು. ಅತಿ ಸಿಹಿ, ಮಸಾಲೆಯುಕ್ತ ಪದಾರ್ಥಗಳ ಸೇವನೆ ಬೇಡ.
  • ಸಡಿಲವಾದ ಉಡುಪು ಧರಿಸಿ. ವ್ಯಾಯಾಮ, ದೈಹಿಕ ಶ್ರಮ ಉತ್ತಮ ನಿದ್ದೆಗೆ ಸಹಾಯಕ.
  • ರಾತ್ರಿಯ ಹೊತ್ತು ನೀರನ್ನು ಹೆಚ್ಚು ಕುಡಿಯಬಾರದು. ನಿದ್ರೆಯ ಮಧ್ಯದಲ್ಲಿ ಮೂತ್ರ ವಿಸರ್ಜನೆಗೆಂದು ಎದ್ದರೆ ಮತ್ತೆ ನಿದ್ರೆ ಬರುವುದು ಕಷ್ಟವಾಗಬಹುದು.
  • ಆರೋಗ್ಯಕರ ನಿದ್ರೆಯ ಅಭ್ಯಾಸವು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾದುದು. ಇದು ಬಹಳಷ್ಟು ಜನರಿಗೆ ಗೊತ್ತಿದೆ. ಅದರೂ ಸರಿಯಾಗಿ ನಿದ್ರೆ ಮಾಡುವುದನ್ನು ಕಡೆಗಣಿಸಲಾಗುತ್ತದೆ. ಈ ಬಗ್ಗೆ ಬಹಳ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಅದರಲ್ಲಿಯೂ ಮಹಾನಗರಗಳಲ್ಲಿ ವಾಸಿಸುವ ಜನರು ನಿದ್ರೆಯ ಉತ್ತಮ ಅಭ್ಯಾಸವನ್ನು ಇಟ್ಟುಕೊಂಡಿರಬೇಕು.
  • ನಿದ್ರಾಹೀನತೆಯು ಒಂದು ವಾರಕ್ಕಿಂತ ಹೆಚ್ಚು ಕಾಡಿದರೆ ತಡ ಮಾಡದೇ ವೈದ್ಯರನ್ನು ಕಂಡು ಸೂಕ್ತ ಔಷಧಿ ಮತ್ತು ಚಿಕಿತ್ಸೆಯನ್ನು ಪಡೆಯಬೇಕು.

ನಿದ್ರಾಹೀನತೆಗೆ ಆಯುರ್ವೇದದಲ್ಲಿ ಪರಿಹಾರ

ಆಯುರ್ವೇದದಲ್ಲಿ ನಿದ್ರಾಹೀನತೆ ಉತ್ತಮ ಪರಿಹಾರವಿದೆ. ಈ ಸಮಸ್ಯೆ ಇದ್ದವರು ಒಂದು ಚಮಚ ಬ್ರಾಹ್ಮಿ ಚೂರ್ಣಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಮಲಗುವ ಸ್ವಲ್ಪ ಸಮಯ ಮುಂಚೆ ಸೇವಿಸಬೇಕು. ಡಯಾಬಿಟಿಸ್ ಇದ್ದವರು ಜೇನುತುಪ್ಪಕ್ಕೆ ಬದಲಾಗಿ ಬಿಸಿನೀರನ್ನು ಬಳಸಬಹುದು.

ಅರ್ಧ ಚಮಚ ಗಸಗಸೆಯನ್ನು ಎರಡು ಅಥವಾ ಮೂರು ಗಂಟೆಗಳ ಕಾಲ ಕುಡಿಯುವ ನೀರಿನಲ್ಲಿ ನೆನೆಸಿ ಮಲಗುವ ಮುಂಚೆ ಅದನ್ನು ಅಗಿದು ತಿಂದು ನೀರನ್ನು ಕುಡಿಯಬೇಕು.

ದೀರ್ಘಕಾಲ ನಿದ್ರಾಹೀನತೆ ಸಮಸ್ಯೆ ಇದ್ದವರು ಶಿರೋಧಾರಾ ಮತ್ತು ಶಿರೋಪಿಚು ಚಿಕಿತ್ಸೆಗಳನ್ನು ಪಡೆಯಬಹುದು. ಅಯುರ್ವೇದ ವೈದ್ಯರನ್ನು ಸಂಪರ್ಕಿಸಿ ಅವರು ಹೇಳಿದಂತೆ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡು ನಿದ್ರಾಹೀನತೆ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT