(ಸಾಂಕೇತಿಕ ಚಿತ್ರ) 
ಅಂಕಣಗಳು

ಹಣ ಬಯಸಿದಷ್ಟೂ ದೂರವಾಗುತ್ತೆ ಏಕೆ? (ಹಣಕ್ಲಾಸು)

ಹಣಕ್ಲಾಸು-378-ರಂಗಸ್ವಾಮಿ ಮೂಕನಹಳ್ಳಿ

ಹಣ ಯಾರಿಗೆ ಬೇಡ ಹೇಳಿ? ಬುದ್ಧಿ ತಿಳಿಯುವುದಿಲ್ಲ ಎಂದು ನಾವು ಹೇಳುವ ಪುಟಾಣಿಗಳಿಂದ, ಇಂದೋ, ನಾಳೆಯೋ ಕಾಲನ ಕರೆಗೆ ಓಗೊಡಬೇಕಾಗಿರುವ ಹಿರಿಯರವರೆಗೆ, ವಯಸ್ಸು, ಜಾತಿ, ಧರ್ಮ, ಭಾಷೆ, ದೇಶ, ಪ್ರದೇಶ ಹೀಗೆ ಎಲ್ಲವನ್ನೂ ಮೀರಿ ಎಲ್ಲರಿಗೂ ಹಣ ಬೇಕೇ ಬೇಕು.

ಹಣವೆನ್ನುವುದು ವಿನಿಮಯ ಮಾಧ್ಯಮ. ನಮಗೇನು ಬೇಕು ಅದನ್ನ ಕೊಳ್ಳುವುದು ಹೇಗೆ? ಬದಲಿಗೆ ನಾವೇನಾದರೂ ಕೊಡಬೇಕಲ್ಲ? ಪ್ರತಿ ಬಾರಿಯೂ ನಾವು ಚಿನ್ನವನ್ನೂ ಮತ್ತಿನೇನ್ನನೋ ಒಯ್ಯಲು ಸಾಧ್ಯವಿಲ್ಲ. ಹೀಗಾಗಿ ಹಣ ಎನ್ನುವುದು ಸುಲಭವಾಗಿ ಕೈ ಬದಲಾಯಿಸಲು ಸಾಧ್ಯವಾಗುವ ಸಾಧನವಾಗಿ ಮನುಷ್ಯ ಸೃಷ್ಟಿ ಮಾಡಿಕೊಂಡ. ಅದು ಇಂದು ಅನಿವಾರ್ಯವಾಗಿದೆ.

ಎರಡು ಅಥವಾ ಮೂರು ವರ್ಷದ ಮಕ್ಕಳ ಕೈಗೆ ಹಣ ನೀಡಿ ಪುನಃ ಅದನ್ನ ಮರಳಿ ಪಡೆಯಲು ಪ್ರಯತ್ನಿಸಿ ನೋಡಿ! ಹಣದ ಶಕ್ತಿ, ಮಹಿಮೆ, ಅದರ ಸೋಂಕಿನ ಗುಣ ಎಷ್ಟೆಂದು ನಿಮಗೆ ಅರಿವಿಗೆ ಬರುತ್ತದೆ. ಇನ್ನು ಹಿರಿಯರು ಇಲ್ಲಿನ ಆರ್ಥಿಕತೆಯ ಆಟದಲ್ಲಿ ನಿವೃತ್ತಿ ಹೊಂದಿದ್ದರೂ ಸಹ ಮನೆಯ ಸಾಸಿವೆ ಡಬ್ಬಿಯಲ್ಲಿ, ಪ್ಯಾಂಟಿನ ಸೀಕ್ರೆಟ್ ಜೋಬಿನಲ್ಲಿ ಒಂದಷ್ಟು ಹಣವನ್ನ ಅವಿಸಿಟ್ಟಿರುತ್ತಾರೆ. ಹಣದ ಮಹಿಮೆ ಅಂತಹುದ್ದು. ಒಟ್ಟಿನಲ್ಲಿ ಹಣ ಯಾವಾಗ? ಯಾರಿಗೆ? ಹೇಗೆ? ಮತ್ತು ಏಕೆ? ಬೇಕಾಗುತ್ತದೆ ಎಂದು ಹೇಳಲು ಬಾರದು. ಹೀಗಾಗಿ ಹಣವನ್ನ ನಾವು ನಾಳೆಗೆ, ಕಾಣದ ಸನ್ನಿವೇಶಕ್ಕೆ ಎಂದು ತೆಗೆದಿಸಿರುವುದು, ಸಂಗ್ರಹಿಸುವುದು ಕೂಡ ಶುರು ಮಾಡಿದೆವು. ಒಟ್ಟಿನಲ್ಲಿ ಹಣ ಎನ್ನುವುದು ಎಲ್ಲರಿಗೂ ಅತ್ಯಂತ ಅವಶ್ಯಕವಾಗಿ ಬೇಕಾಗಿರುವ ವಸ್ತುವಾಗಿ ಪರಿವರ್ತನೆ ಆಗಿ ಹೋಯ್ತು.

ಬಯಸಿದಷ್ಟೂ ದೂರವಾಗುತ್ತೆ ಏಕೆ?
ಆದರೆ ಈ ಹಣವಿದೆಯಲ್ಲ ಅದಕ್ಕೆ ಒಂದು ವಿಚಿತ್ರ ಗುಣವಿದೆ. ನಾವು ಅದನ್ನ ಬಹಳ ಪ್ರೀತಿಯಿಂದ ಪಡೆಯಲು, ಅಪ್ಪಿಕೊಳ್ಳಲು ಹೋದಷ್ಟೂ ಅದು ಒಂದು ಹೆಜ್ಜೆ ಹಿಂದೆ ಹೋಗುತ್ತದೆ. ನಾವು ಡೆಸ್ಪರೇಟ್, ಹತಾಶರಾದಷ್ಟೂ ಅದು ನಮ್ಮನ್ನ ಇನ್ನಷ್ಟು ಹತಾಶೆಯ ಕೂಪಕ್ಕೆ ದೂಡುತ್ತಾ ಹೋಗುತ್ತದೆ. ಹಣವನ್ನ ನಾವು ಪಡೆದುಕೊಳ್ಳುವ ಹಂಬಲ ಹೆಚ್ಚಾದಷ್ಟೂ ಅದು ನಮ್ಮಿಂದ ದೊರಾಗುತ್ತದೆ ಎನ್ನುವ ಸರಳ ಸತ್ಯವನ್ನ ನಾನು ಕಂಡುಕೊಂಡಿದ್ದೇನೆ. ನಮ್ಮ ನೆರಳನ್ನ ನಾವು ಹಿಡಿಯುವ ಪ್ರಯತ್ನವನ್ನ ನಾವೆಷ್ಟೇ ಮಾಡಿದರೂ ಅದನ್ನ ನಾವು ಹಿಡಿಯಲು ಸಾಧ್ಯವಿಲ್ಲ. ಹಿಡಿಯಲು ಹೋದಷ್ಟೂ ಅದು ನಮ್ಮಿಂದ ದೊರೆಯಾಗುತ್ತಲೇ ಹೋಗುತ್ತದೆ.

ಹಣ ಬಯಸಿದಷ್ಟೂ ದೂರವಾಗದೇ ಇರುವುದಕ್ಕೆ ಪರಿಹಾರವೇನು? 

ಒಂದು ಸರಳ ಸತ್ಯ ನಮಗೆ ಗೊತ್ತಾಗಿದೆ, ನಾವೆಷ್ಟೇ ಪ್ರಯತ್ನ ಪಟ್ಟರೂ ನಮ್ಮ ನೆರಳನ್ನ ಹಿಡಿಯಲಾರೆವು ಎನ್ನುವುದು ಆ ಸತ್ಯ. ಹಾಗಾದರೆ ಹಣದ ಮೇಲಿನ ವ್ಯಾಮೋಹ ತ್ಯಜಿಸಿ, ಲೋಕದ ಇತರರು ಆಡುವ ಆಟವನ್ನ ನೋಡುತ್ತಾ ಸುಮ್ಮನೆ ಕುಳಿತು ಬಿಡೋಣವೇ? ಹಾಗೊಮ್ಮೆ ನಾವು ಇಂತಹ ನಿರ್ಧಾರವನ್ನ ತೆಗೆದುಕೊಂಡರೆ ಅದಕ್ಕಿಂತ ದೊಡ್ಡ ತಪ್ಪು ಬೇರೊಂದಿಲ್ಲ! ಗಮನಿಸಿ ಇದಕ್ಕೆ ಉತ್ತರ, ಪರಿಹಾರವನ್ನ ನಾನು ಕಂಡು ಕೊಂಡಿದ್ದೇನೆ!! ಆ ಪರಿಹಾರವನ್ನ ನಿಮಗೆ ಹೇಳುತ್ತೇನೆ. ಅದನ್ನ ನೀವು ಕೂಡ ನಿಮ್ಮದಾಗಿಸಿ ಕೊಳ್ಳಬಹುದು. ಅದಕ್ಕೆ ನೀವೇನು ಬಹಳ ಕಷ್ಟ ಪಡುವ ಅವಶ್ಯಕತೆಯಿಲ್ಲ. ಸರಳ ರೇಖೆಯಲ್ಲಿ ಸಹಜ ನಡಿಗೆಯಿದ್ದರೆ ಸಾಕು. ಅಷ್ಟೊಂದು ಸುಲಭವೇ? ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ 'ಹೌದು' ಬಹಳ ಸುಲಭ.

ನಮ್ಮ ನೆರಳನ್ನ ನಾವು ಹಿಡಿಯಲು ಹೋದರೆ ಅದು ಸಾಧ್ಯವಿಲ್ಲ , ಅದು ಮುಂದಕ್ಕೆ ಹೋಗುತ್ತದೆ , ಅದೇ ನೀವು ಅದನ್ನ ಹಿಡಿಯುವ ಪ್ರಯತ್ನ ಬಿಟ್ಟು, ಧೀಮಂತವಾಗಿ ತಲೆಯೆತ್ತಿ, ಎದೆಯುಬ್ಬಿಸಿ ನಡೆಯುತ್ತಾ ಹೋದರೆ ಏನಾಗುತ್ತದೆ? ನೆರಳು ನಿಮ್ಮನ್ನ ಹಿಂಬಾಲಿಸುತ್ತದೆ! ಹಣದ ಮೂಲ ಗುಣ ಕೂಡ ಇದೆ!! ಈ ಗುಣವನ್ನ ಅರಿಯಲಾಗದೆ ಇದ್ದಾಗ ಜೀವನ ಪೂರ್ತಿ ಹಣವನ್ನ ಗಳಿಸಲು ಅದರ ಹಿಂದೆ ಓಡುತ್ತಲೇ ಇರುತ್ತೇವೆ. ಇದ್ಯಾವ ಸೀಮೆ ಉದಾಹರಣೆ? ನೆರಳಿಗೂ, ಹಣಕ್ಕೂ ತಾಳೆ ಹಾಕುತ್ತೀರಿ? ನಾವು ಸುಮ್ಮನೆ ನಡೆಯುತ್ತಾ ಹೋದರೆ ನೆರಳು ಹಿಂಬಾಲಿಸುತ್ತೆ ನಿಜ ಆದರೆ ಹಣ? ಅದು ಸುಮ್ಮನೆ ಬರುತ್ತದೆಯೇ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಉದ್ಭವಾಗಿದ್ದರೆ ಅದು ಸಹಜ. ಅದಕ್ಕೂ ಉತ್ತರವಿದೆ. ನೆನಪಿಡಿ ಈ ಜಗತ್ತಿನಲ್ಲಿ ಉತ್ತರವಿಲ್ಲದ ಪ್ರಶ್ನೆಗಳೇ ಇಲ್ಲ!

ನಾವು ಮಾಡುವ ಕೆಲಸವನ್ನ ಶ್ರದ್ಧೆಯಿಂದ, ಉತ್ಸಾಹದಿಂದ ಮಾಡುತ್ತಾ ಹೋಗಬೇಕು. ಮಾಡುವ ಕಾರ್ಯದಿಂದ ನನಗೆಷ್ಟು ಹಣ ಬಂದೀತು? ಎನ್ನುವ ಲೆಕ್ಕಾಚಾರಕ್ಕಿಂತ ಮಾಡುವ ಕೆಲಸ, ನೀಡುವ ಸೇವೆಯ ಮೇಲೆ ಅತೀವ ಗಮನವಿದ್ದಲ್ಲಿ ಹಣವೆನ್ನುವುದು ತಾನಾಗೇ ನಮ್ಮಿಂದೆ ಬಂದೆ ಬರುತ್ತದೆ. ಇದು ಸತ್ಯ. ಇದಕ್ಕೆ ಕೂಡ ಹೆಚ್ಚಿನ ಶ್ರಮ ಬೇಕಿಲ್ಲ. ನಾವು ಮಾಡುವ ಕೆಲಸದ ಮೇಲೆ, ನಮ್ಮ ಮೇಲೆ ನಮಗೆ ಅತೀವವಾದ ನಂಬಿಕೆ ಬೇಕು. ಇದರರ್ಥ ಕೂಡ ಸರಳ, ನಾವು ಮಾಡುವ ಕೆಲಸ ಅಥವಾ ನೀಡುವ ಸೇವೆ ಮೇನ್ ಪ್ರಾಡಕ್ಟ್ ಆಗಿರಬೇಕು. ಹಣ ಬೈ ಪ್ರಾಡಕ್ಟ್ ಆಗಿಸಿಕೊಳ್ಳಬೇಕು. ನಮ್ಮ ಮೂಲ ಉದ್ದೇಶ ಹಣ ಮಾಡುವುದಾಗಿಸಿಕೊಂಡರೆ ಅದರಲ್ಲಿ ನಾವು ಸೋಲುವ ಸಂಭಾವ್ಯತೆ ಇದ್ದೆ ಇರುತ್ತದೆ. ನಮ್ಮ ಕೆಲಸ ಅಥವಾ ಸೇವೆಯನ್ನ ಮುಖ್ಯವಾಗಿಸಿಕೊಂಡಲ್ಲಿ ಸೋಲಿನ ಭಯ ಇಲ್ಲವಾಲಾಗುತ್ತದೆ.

ನೀವೇ ಯೋಚಿಸಿ ನೋಡಿ, ನಮ್ಮ ಕೈಲಿ ಏನಿದೆ ಅದರ ಮೇಲೆ ಮಾತ್ರ ನಮ್ಮ ನಿಯಂತ್ರಣವಿರುತ್ತದೆ. ಉಳಿದವುಗಳ ಮೇಲೆ ನಮ್ಮ ನಿಯಂತ್ರಣವಿಲ್ಲ. ಹಣ ಮಾಡುವುದು, ಜನ ಮನ್ನಣೆಗಳಿಸುವುದು, ಜಗತ್ವಿಖ್ಯಾತಿ ಪಡೆಯುವುದು ಹೀಗೆ ಪಟ್ಟಿ ಬೆಳೆಸಬಹುದು, ಇದ್ಯಾವುದೂ ನಮ್ಮ ಕೈಲಿಲ್ಲ. ಹಾಗಾದರೆ ನಮ್ಮ ಕಲಿರುವುದು ಏನು? ನಾವು ಕಲಿತ ವಿದ್ಯೆ, ನಾವು ಮಾಡುವ ಕೆಲಸ, ನೀಡುವ ಸೇವೆ, ಇವಿಷ್ಟರ ಮೇಲೆ ಮಾತ್ರ ನಮ್ಮ ನಿಯಂತ್ರಣವಿದೆ. ಹೀಗಾಗಿ ನಮ್ಮ ಕೈಲಿರುವುದನ್ನ ನಾವು ಸರಿಯಾಗಿ ಮಾಡುತ್ತಾ ಹೋದರೆ, ಸಮಾಜ, ಜಗತ್ತು ನಮ್ಮ ಕೆಲಸವನ್ನ, ಸೇವೆಯನ್ನ ಮೆಚ್ಚುತ್ತಾ ಹೋಗುತ್ತದೆ. ಹಣ ತಾನಾಗೇ ಹಿಂದೆ ಬರುತ್ತದೆ. ಹಣಕ್ಕೆ ಬೇರೆ ದಾರಿಯಿಲ್ಲ, ಯಾರೆಲ್ಲಾ ತಮ್ಮ ಕರ್ತವ್ಯಗಳನ್ನ ಸರಿಯಾಗಿ ಮಾಡುತ್ತಾರೆ ಅದು ಅವರಿಂದೆ ಹೋಗದೆ ಬೇರೆ ದಾರಿಯಿಲ್ಲ.

ನಿಮ್ಮಲ್ಲೀಗ ಇನ್ನೊಂದು ಪ್ರಶ್ನೆ ಉದ್ಭವಾಗಿರುತ್ತದೆ! 

ಸುತ್ತಮುತ್ತ ಕಷ್ಟಪಟ್ಟು ದುಡಿಯುತ್ತಿರುವ ಅನೇಕರನ್ನ ನೋಡಿ, ಅವರು ಕೂಡ ತಮ್ಮ ಕೆಲಸವನ್ನ ಮಾಡುತ್ತಿದ್ದಾರೆ ಆದರೂ ಅವರ ಹಿಂದೆ ಏಕೆ ಹಣ ಹೋಗುತ್ತಿಲ್ಲ? ನೀವು ಅವರನ್ನ ಗಮನಿಸಿ ನೋಡಿ, ಹಣದ ಬಗ್ಗೆ ಅವರಲ್ಲಿ ಉಡಾಫೆ ಮನೋಭಾವವಿರುತ್ತದೆ, ಅವರು ಹತ್ತಾರು ವ್ಯಸನಗಳ ದಾಸರಾಗಿರುತ್ತರೆ. ಹೀಗಾಗಿ ಅವರು ತಮ್ಮ ಸ್ಥಿತಿಯಿಂದ ಮೇಲೇರಲಾಗುವುದಿಲ್ಲ. ಹಾಗೆಯೇ ಬರಿ ಕೈಯಲ್ಲಿ ಬಂದ ಅಸಂಖ್ಯರು ಇಂದು ಸ್ಥಿತಿವಂತರಾಗಿದ್ದರೆ. ಪ್ರಯತ್ನದಿಂದ ಪರಮಾತ್ನನ್ನ ಪಡೆಯಬಹುದು, ಇನ್ನು ಹಣ ಗಳಿಸುವುದು ಅದ್ಯಾವ ದೊಡ್ಡ ಲೆಕ್ಕ?

ಹಣಗಳಿಸುವುದು ಬಹಳ ಮುಖ್ಯ, ಏಕೆಂದರೆ ನಾವೆಷ್ಟೇ ಒಳ್ಳೆಯವರಾಗಿದ್ದರೂ, ಎಷ್ಟೇ ಒಳ್ಳೆಯ ಕಾರ್ಯವನ್ನ ಮಾಡಲು ಬಯಸಿದರೂ ಹಣದ ಸಹಾಯವಿಲ್ಲದೆ, ಬೆಂಬಲವಿಲ್ಲದೆ ಅದನ್ನ ನಾವು ಸಾಧಿಸಲಾರೆವು. ರಾಮಾಯಣದ ಯುದ್ಧಕಾಂಡ 83-33 ರಲ್ಲಿನ ಒಂದು ಉಕ್ತಿ: ಅರ್ಥೇನ ಹಿ ವಿಯುಕ್ತಸ್ಯ ಪುರುಷಸ್ಯಾಲ್ಪತೇಜಸಂ! ವ್ಯುಚ್ಛಿದ್ಯೇನೇ ಕ್ರಿಯಾಂ ಸರ್ವಾ ಗ್ರೀಷ್ಮೇ ಕುಸುರಿತೋ ಯಥಾ!!

ಇದರರ್ಥ ಧನಹೀನನಾಗಿರುವ ಮನುಷ್ಯ ನಿಸ್ತೇಜನಾಗಿ ಕಾಣುತ್ತಾನೆ, ಆತನ ಎಲ್ಲಾ ಕಾರ್ಯಗಳೂ ಬೇಸಿಗೆಯಲ್ಲಿ ನೀರಿನ ಹೊಂಡಗಳು ಇಂಗಿ ಹೋಗುವಂತೆ ತಾವಾಗೇ ನಶಿಸಿ ಹೋಗುತ್ತವೆ. ಹೀಗಾಗಿ ಹಣವಂತರಾಗಬೇಕು. ಹಣವಂತರಾಗುವುದು, ಸ್ಥಿತಿವಂತರಾಗುವುದು ತಪ್ಪಲ್ಲ.

ಹಣದ ಹಿಂದೆ ಹೋಗುವುದು ಬೇಡ, ಹಣ ನಮ್ಮಿಂದೆ ಬರುವಂತೆ ಮಾಡಿಕೊಳ್ಳುವ ಜಾಣ್ಮೆ ನಮ್ಮದಾಗಲಿ. ಅದಕ್ಕೆ ಇರುವ ಸರಳ ಮಂತ್ರ-ಕೆಲಸ/ಸೇವೆ ಮುಖ್ಯವಾಗಲಿ-ಮೇನ್ ಪ್ರಾಡಕ್ಟ್, ಹಣ ಬೈ ಪ್ರಾಡಕ್ಟ್ ಆಗಿರಲಿ. ನೆನಪಿರಲಿ ನಮ್ಮ ನಿಯಂತ್ರಣದಲ್ಲಿ ಏನಿದೆ ಅದನ್ನ ಮಾತ್ರ ನಾವು ಸರಿಯಾಗಿ ಮಾಡಲು ಸಾಧ್ಯ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರವೇ ಅಡ್ಡಿ ಸೃಷ್ಟಿಸುತ್ತಿದೆ: DCM ಡಿ.ಕೆ. ಶಿವಕುಮಾರ್

ಧರ್ಮಸ್ಥಳ ಬುರುಡೆ ಪ್ರಕರಣ: ಸಾಕ್ಷಿ-ದೂರುದಾರ ಚಿನ್ನಯ್ಯನಿಗೆ ಜಾಮೀನು ಮಂಜೂರು

SCROLL FOR NEXT