ಅಂಕಣಗಳು

Heat Stroke ಅಥವಾ ಶಾಖಾಘಾತ: ಲಕ್ಷಣಗಳು, ತ್ವರಿತ ಚಿಕಿತ್ಸೆ (ಕುಶಲವೇ ಕ್ಷೇಮವೇ)

ಹೀಟ್ ಸ್ಟ್ರೋಕ್ ಒಂದು ಗಂಭೀರ ವೈದ್ಯಕೀಯ ಸ್ಥಿತಿ. ತೀವ್ರವಾದ ಉಷ್ಣ/ಶಾಖದ ಸ್ಥಿತಿಗೆ ದೀರ್ಘಕಾಲ ದೇಹವನ್ನು ಒಡ್ಡಿಕೊಳ್ಳುವುದರಿಂದ ಮತ್ತು ಅತಿ ಹೆಚ್ಚು ತಾಪಮಾನದಲ್ಲಿ ಕೆಲಸ ಮಾಡುವುದರಿಂದ ಅಥವಾ ತೀವ್ರ ದೈಹಿಕ ಚಟುವಟಿಕೆಗಳನ್ನು ನಡೆಸುವುದರಿಂದ ಉಂಟಾಗುತ್ತದೆ.

ಇತ್ತೀಚೆಗೆ ಬಿಸಿಲು ದಿನೇ ದಿನೇ ಹೆಚ್ಚಾಗುತ್ತಿದ್ದು ತಾಪಮಾನ ಹೆಚ್ಚಾಗುತ್ತಿದೆ. ಸಾಮಾನ್ಯ ದೈನಂದಿನ ಉಷ್ಣತೆ 36-38 ಡಿಗ್ರಿ ಸೆಲ್ಸಿಯಸ್ ಆಗಿದೆ. ಉತ್ತರ ಕರ್ನಾಟಕದ ರಾಯಚೂರು, ಬೀದರೆ, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತಾಪಮಾನ 40-44 ಡಿಗ್ರಿ ಸೆಲ್ಸಿಯಸ್ಸಿಗೆ ಏರಿ ಜನರು ಶಾಖಾಘಾತವನ್ನು (ಹೀಟ್ ಸ್ಟ್ರೋಕ್) ತಡೆಯಲಾಗದೇ ಹೈರಾಣಾಗಿದ್ದಾರೆ. ಉತ್ತರ ಭಾರತದಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಹೀಟ್ ಸ್ಟ್ರೋಕ್ ಗೆ ಕಾರಣಗಳು

ಹೀಟ್ ಸ್ಟ್ರೋಕ್ ಒಂದು ಗಂಭೀರ ವೈದ್ಯಕೀಯ ಸ್ಥಿತಿ. ತೀವ್ರವಾದ ಉಷ್ಣ/ಶಾಖದ ಸ್ಥಿತಿಗೆ ದೀರ್ಘಕಾಲ ದೇಹವನ್ನು ಒಡ್ಡಿಕೊಳ್ಳುವುದರಿಂದ ಮತ್ತು ಅತಿ ಹೆಚ್ಚು ತಾಪಮಾನದಲ್ಲಿ ಕೆಲಸ ಮಾಡುವುದರಿಂದ ಅಥವಾ ತೀವ್ರ ದೈಹಿಕ ಚಟುವಟಿಕೆಗಳನ್ನು ನಡೆಸುವುದರಿಂದ ಉಂಟಾಗುತ್ತದೆ. ಇದರಿಂದ ಅಪಾಯಕಾರಿ ಆರೋಗ್ಯ ತೊಡಕುಗಳು ಕಾಣಿಸಿಕೊಳ್ಳುತ್ತವೆ. ಹೀಟ್ ಸ್ಟ್ರೋಕಿಗೆ ತಕ್ಷಣ ಚಿಕಿತ್ಸೆಯನ್ನು ನೀಡಬೇಕು. ಇಲ್ಲದಿದ್ದರೆ ತೊಂದರೆಯಾಗುವುದು ಖಚಿತ. ಇದರಿಂದ ಹಲವು ರೀತಿಯ ದೈಹಿಕ ತೊಂದರೆಗಳು, ನಿರ್ಜಲೀಕರಣದ ಜೊತೆಗೆ ಪ್ರಾಣಕ್ಕೂ ಕುತ್ತು ಬರಬಹುದು.

ಹೀಟ್ ಸ್ಟ್ರೋಕ್ ಲಕ್ಷಣಗಳು

ಸಾಮಾನ್ಯವಾಗಿ ಹೀಟ್ ಸ್ಟ್ರೋಕ್ ಉಂಟಾದಾಗ ತಲೆತಿರುಗುವಿಕೆ, ತೀವ್ರ ತಲೆನೋವು, ಗೊಂದಲ ಮತ್ತು ಕಿರಿಕಿರಿಯಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ದೇಹದ ತಾಪಮಾನ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹೃದಯ ಬಡಿತ ಹೆಚ್ಚಳ ಮತ್ತು ಉಸಿರಾಟದ ಗತಿ ತ್ವರಿತವಾಗುತ್ತದೆ. ಹೆಚ್ಚಿನ ಶಾಖದಿಂದಾಗಿ ಚರ್ಮವು ಬಿಸಿಯಾಗಿ ಹೆಚ್ಚಾಗಿ ಬೆವರುತ್ತದೆ ಮತ್ತು ಕೆಂಪಾಗುತ್ತದೆ. ಕೆಲವೊಮ್ಮೆ ಒಣಗುತ್ತದೆ. ನಿಧಾನವಾಗಿ ವಾಕರಿಕೆ, ಮನಸ್ಥಿತಿಯಲ್ಲಿ ಚಂಚಲತೆ, ವಾಂತಿ, ಅತಿಸಾರ ಮತ್ತು ಜಠರಗರುಳಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸ್ನಾಯು ಸೆಳೆತ, ದೌರ್ಬಲ್ಯ ಮತ್ತು ಆಯಾಸದ ಅನುಭವವಾಗುತ್ತದೆ.

ಹೀಟ್ ಸ್ಟ್ರೋಕ್ ಗೆ ತ್ವರಿತ ಚಿಕಿತ್ಸೆ

ಹೀಟ್ ಸ್ಟ್ರೋಕಿನ ಪರಿಣಾಮದಿಂದ ಬಚಾವಾಗಲು ಮೊದಲಿಗೆ ದೇಹದ ತಾಪಮಾನವನ್ನು ಕಡಿಮೆ ಮಾಡಲು ಪ್ರತಿ ದಿನ ಕನಿಷ್ಠ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು. ಚರ್ಮ ಹೆಚ್ಚು ಬಿಸಿಯಾಗಿದ್ದರೆ ಒದ್ದೆ ಬಟ್ಟೆಯಿಂದ ಮೈಯನ್ನು ಚೆನ್ನಾಗಿ ಒರೆಸಬೇಕು. ದೇಹವನ್ನು ತಂಪಾಗಿಸಬೇಕು. ಬಿಗಿ ಅಥವಾ ದಪ್ಪ ಬಟ್ಟೆಯನ್ನು ಧರಿಸಿದ್ದರೆ ತಕ್ಷಣ ಬಿಚ್ಚಿ ತೆಳುವಾದ ಹತ್ತಿ ಬಟ್ಟೆಯನ್ನು ಧರಿಸಿ ತಂಪು ಗಾಳಿ ದೇಹವನ್ನು ಮುಟ್ಟುವಂತೆ ನೋಡಿಕೊಳ್ಳಬೇಕು. ಗಾಢ ಬಣ್ಣದ ಬಟ್ಟೆಗಳನ್ನು ಹಾಕಿಕೊಳ್ಳಬಾರದು. ಏಕೆಂದರೆ ಅವು ಶಾಖವನ್ನು ಹೀರಿಕೊಳ್ಳುತ್ತವೆ. ತಣ್ಣೀರನ್ನು ಮೈಗೆ ಸಿಂಪಡಿಸಬೇಕು. ಫ್ಯಾನ್ ಅಥವಾ ಎಸಿ ಲಭ್ಯವಿದ್ದರೆ ಬಳಕೆ ಮಾಡಿ. ಇದರಿಂದ ದೇಹದ ಉಷ್ಣತೆಯನ್ನು ಬಹುಬೇಗ ನಿಯಂತ್ರಿಸಬಹುದು. ಪರಿಸ್ಥಿತಿ ಸುಧಾರಿಸುವ ತನಕ ಕಾಫಿ/ಟೀ ಸೇವನೆ ಬೇಡ.

ದೇಹವನ್ನು ತಂಪಾಗಿರಿಸಲು ಈ ಸಮಯದಲ್ಲಿ ಅತಿಯಾಗಿ ಐಸ್ ಕ್ರೀಂ ಅಥವಾ ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚು ಸಕ್ಕರೆ ಹಾಕಿರುವ ಸಿದ್ಧ ತಂಪುಪಾನೀಯಗಳನ್ನು ಅತಿಯಾಗಿ ಕುಡಿಯುವುದೂ ಸಲ್ಲದು.

ಹೀಟ್ ಸ್ಟ್ರೋಕ್ ಆದಾಗ ಆಹಾರ ಕ್ರಮ ಹೀಗಿರಲಿ...

ಸಾಕಷ್ಟು ನೀರಿನಂಶ ಇರುವ ಆಹಾರ ಸೇವಿಸಿ. ಗಂಜಿ, ಹಾಲು ಮತ್ತು ಎಳನೀರು ಹೆಚ್ಚಾಗಿ ಸೇವಿಸಿ ನೀರಿಗೆ ಲಾವಂಚದ ಬೇರು, ತುಳಸಿ ಬೀಜ ಮತ್ತು ಚಿಯಾ ಬೀಜಗಳನ್ನು ಸೇರಿಸಿ ಕುಡಿದರೆ ಉತ್ತಮ. ಆಹಾರಕ್ಕೆ ಹೆಚ್ಚು. ಖಾರ ಮತ್ತು ಮಸಾಲೆ ಪದಾರ್ಥಗಳನ್ನು ಹಾಕುವುದು ಬೇಡ. ನೆಲ್ಲಿಕಾಯಿ ಜ್ಯೂಸ್ ಮತ್ತು ಮೊರಬ್ಬ ಸೇವಿಸಿ. ನೀರಿನಂಶ ಹೆಚ್ಚಾಗಿರುವ ಸೌತೆಕಾಯಿಯನ್ನು ತಿಂದರೆ ದೇಹವೂ ತಂಪಾಗುತ್ತದೆ. ಜೊತೆಗೆ ಕಲ್ಲಂಗಡಿ ಮತ್ತು ಕರಬೂಜ ಹಣ್ಣುಗಳನ್ನು ಇಡಿಯಾಗಿ ಅಥವಾ ಸಕ್ಕರೆ ಬೆರೆಸದೇ ಜ್ಯೂಸ್ ಮಾಡಿ ಕುಡಿಯಬಹುದು. ದೇಹವನ್ನು ತಂಪಾಗಿಸುವ ಹೆಸರುಕಾಳನ್ನು ಬೇಯಿಸಿ ರುಬ್ಬಿಕೊಂಡು ಬೆಲ್ಲ ಸೇರಿಸಿ ಕುಡಿದರೆ ಸಿಹಿಯೊಂದಿಗೆ ಆರೋಗ್ಯವೂ ಉತ್ತಮವಾಗುತ್ತದೆ. ಕೊತ್ತಂಬರಿ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ತಂಬುಳಿ ಮಾಡಿ ನಿತ್ಯವೂ ಸೇವಿಸಿದರೆ ಒಳ್ಳೆಯದು.

ಪ್ರತಿದಿನ ಕನಿಷ್ಠ ಎರಡು ಲೋಟ ತಿಳಿ ಮಜ್ಜಿಗೆಯನ್ನು ಸೇವಿಸಿ. ಮಜ್ಜಿಗೆಗೆ ಸ್ವಲ್ಪ ಉಪ್ಪು ಮತ್ತು ನೀರನ್ನು ಸೇರಿಸಿ ಸೇವಿಸಿದರೆ ಹಿತ. ಹುಣಸೆ ಹಣ್ಣು ದೇಹದ ತಾಪ ಕಡಿಮೆ ಮಾಡಲು ಸಹಾಯಕವಾಗಿದೆ. ಇದು ಹಲವಾರು ವಿಟಮಿನ್ ಮತ್ತು ಖನಿಜಗಳಿಂದ ತುಂಬಿರುವ ಸಮೃದ್ಧ ಆಹಾರವಾಗಿದೆ. ಹುಣಸೆಹಣ್ಣಿಗೆ ಸ್ವಲ್ಪ ನೀರು ಬೆರಿಸಿ ಬೆಲ್ಲ ಅಥವಾ ಜೇನುತುಪ್ಪ ಸೇರಿಸಿ ದಿನಕ್ಕೊಂದು ಬಾರಿ ಸೇವಿಸಿದರೆ ದೇಹದ ತಾಪಮಾನ ಕಡಿಮೆಯಾಗುತ್ತದೆ.

ಬೇಸಿಗೆಯಲ್ಲಿ ಧಾರಾಳವಾಗಿ ಸಿಗುವ ಮಾವಿನ ಕಾಯಿಯನ್ನು ಚೆನ್ನಾಗಿ ಬೇಯಿಸಿ ಚಿಟಿಕೆ ಉಪ್ಪು, ಜೀರಿಗೆ, ಸಕ್ಕರೆ ಸೇರಿಸಿ ಮಿಕ್ಸಿ ಮಾಡಿ ನೀರು ಸೇರಿಸಿ ಜ್ಯೂಸಿನಂತೆ ಮಾಡಿಕೊಂಡು ಮಿತವಾಗಿ ಸೇವಿಸಿ. ಹರಳೆಣ್ಣೆ, ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆಯಿಂದ ದೇಹವನ್ನು ಮೃದುವಾಗಿ ಮಸಾಜು ಮಾಡಿಕೊಂಡರೆ ದೇಹದ ತಾಪಮಾನ ನಿಯಂತ್ರಣ ಬರುತ್ತದೆ.

ಹೀಟ್ ಸ್ಟ್ರೋಕ್ ಆಗದಂತೆ ತಡೆಯುವುದು ಹೇಗೆ?

ಬಿಸಿಲ ಧಗೆ ಹೆಚ್ಚಾಗಿರುವ ಸಮಯದಲ್ಲಿ ಆದಷ್ಟೂ ಹೊರಾಂಗಣ ಚಟುವಟಿಕೆಯನ್ನು ಮಿತಿಗೊಳಿಸಬೇಕು. ಸಾಮಾನ್ಯವಾಗಿ ಪ್ರತಿದಿನ 10 ಗಂಟೆಯಿಂದ ಸಂಜೆ 5-6 ಗಂಟೆಯವರೆಗೆ ಶ್ರಮದಾಯಕ ಕೆಲಸಗಳನ್ನು ಮಾಡಬಾರದು. ಕೆಲಸಕ್ಕೆ ಹೋಗುವವರನ್ನು ಬಿಟ್ಟು ಇತರರು ಆದಷ್ಟೂ ಹೊರಗೆ ಹೋಗದಿರುವುದೇ ಒಳ್ಳೆಯದು. ಹೊರಗೆ ಹೋದರೆ ಹೆಚ್ಚು ಬಿಸಿಲಿಗೆ ಮೈ ಒಡ್ಡಬಾರದು. ಕೊಡೆಯನ್ನು ಕಡ್ಡಾಯವಾಗಿ ಬಳಸಬೇಕು. ವಿರಾಮ ತೆಗೆದುಕೊಳ್ಳಬೇಕು. ಕರ್ಚೀಫನ್ನು ನೀರಿನಿಂದ ತೋಯಿಸಿ ಮುಖವನ್ನು ಒರೆಸಿಕೊಳ್ಳಬೇಕು.

ಮಕ್ಕಳು, ವೃದ್ಧರು ಮತ್ತು ದೀರ್ಘಕಾಲದ ವೈದ್ಯಕೀಯ ಸಮಸ್ಯೆಗಳಿಂದ ಬಳಲುವವರ ಮೇಲೆ ನಿಗಾ ಇರಿಸಿ, ಏಕೆಂದರೆ ಅವರು ಶಾಖ ಸಂಬಂಧಿತ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಅವರು ಆಗಾಗ ನೀರನ್ನು ಕುಡಿಯುತ್ತಲೇ ಇರಬೇಕು. ಒಟ್ಟಾರೆ ಹೇಳುವುದಾದರೆ ಹೀಟ್ ಸ್ಟ್ರೋಕಿಗೆ ಸಂಬಂಧಿಸಿದ ತೊಡಕುಗಳನ್ನು ತಡೆಗಟ್ಟಲು ತ್ವರಿತ ಚಿಕಿತ್ಸೆಯು ನಿರ್ಣಾಯಕವಾಗಿದೆ. ಆದ್ದರಿಂದ ಈ ಬಗ್ಗೆ ಎಚ್ಚರದಿಂದ ಇರಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT