ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ಅಂಕಣಗಳು

ಹಕ್ಕಿ ಜ್ವರ ಅಥವಾ ಬರ್ಡ್ ಫ್ಲೂ (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ

ನೆರೆಯ ರಾಜ್ಯವಾದ ಕೇರಳದಲ್ಲಿ ಹಕ್ಕಿ ಜ್ವರ (ಬರ್ಡ್ ಫ್ಲೂ) ಕಾಣಿಸಿಕೊಂಡಿದ್ದು ರಾಜ್ಯ ಸರ್ಕಾರ ಈ ಬಗ್ಗೆ ಗಡಿ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಿದೆ. ಕೋಳಿ ಸಾಗಣೆ ಬಗ್ಗೆ ವಿಶೇಷ ನಿಗಾ ಇರಿಸಲಾಗಿದೆ.

ಬರ್ಡ್ ಫ್ಲೂ ಸೋಂಕು

ಏವಿಯನ್ ಇನ್ ಫ್ಲುಯೆಂಜಾ ಎಂದು ಕರೆಯಲಾಗುವ ಬರ್ಡ್ ಫ್ಲೂ ಅಥವಾ ಹಕ್ಕಿ ಜ್ವರ ಮೂಲಭೂತವಾಗಿ ಪಕ್ಷಿಗಳ (ಕೋಳಿ, ಬಾತುಕೋಳಿ ಇತ್ಯಾದಿ) ಮೇಲೆ ಪರಿಣಾಮ ಬೀರುವ ಒಂದು ವೈರಾಣು ಸೋಂಕು. ಇದು ದೇಶೀಯ ಕೋಳಿಗಳಿಗೆ ಸುಲಭವಾಗಿ ಹರಡುತ್ತದೆ. ಸೋಂಕಿತ ಪಕ್ಷಿಗಳ ಮಲ, ಮೂಗಿನ ಸ್ರಾವ ಅಥವಾ ಬಾಯಿ ಅಥವಾ ಕಣ್ಣುಗಳಿಂದ ಸ್ರವಿಸುವಿಕೆಯ ಸಂಪರ್ಕದ ಮೂಲಕ ಈ ರೋಗವು ಮನುಷ್ಯರಿಗೆ ಹರಡುತ್ತದೆ.

ಹಕ್ಕಿ ಜ್ವರದಿಂದ ವೈರಸ್‌ಗಳ ಕೆಲವು ತಳಿಗಳು ಮಾನವರು ಮತ್ತು ಇತರ ಪ್ರಾಣಿಗಳಿಗೆ ಸಹ ಸೋಂಕು ತರಬಹುದು. ಇವುಗಳಲ್ಲಿ ಮಾನವರಿಗೆ ಸೋಂಕು ತಗಲುವ ಅತ್ಯಂತ ಸಾಮಾನ್ಯವಾದ ವೈರಸ್ H5N1. ಇದು ಹಕ್ಕಿ ಜ್ವರದ ಸಾಮಾನ್ಯ ರೂಪವಾಗಿದೆ. ಇದು ಪಕ್ಷಿಗಳಿಗೆ ಮಾರಕವಾಗಿದೆ ಮತ್ತು ಇದರೊಂದಿಗೆ ಸಂಪರ್ಕಕ್ಕೆ ಬರುವ ಮಾನವರು ಮತ್ತು ಇತರ ಪ್ರಾಣಿಗಳ ಮೇಲೆ ಸುಲಭವಾಗಿ ಪರಿಣಾಮ ಬೀರುತ್ತದೆ.

ಬರ್ಡ್ ಫ್ಲೂ ಇತಿಹಾಸ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಹಕ್ಕಿ ಜ್ವರವನ್ನು 1997ರಲ್ಲಿ ಮಾನವರಲ್ಲಿ ಪತ್ತೆ ಹಚ್ಚಲಾಯಿತು ಮತ್ತು ಹಲವಾರು ಪ್ರಕರಣಗಳಲ್ಲಿ ಇದು ಸಾವಿಗೂ ಕಾರಣವಾಯಿತು. 2020ರಿಂದ ಈಚೆಗೆ ರೋಗಕಾರಕ ಎಚ್5ಎನ್1 ವೈರಸ್ ಪ್ರಪಂಚದಾದ್ಯಂತ ಹೆಚ್ಚು ಹೆಚ್ಚು ಹರಡುತ್ತಿದೆ. ಈ ವೈರಸ್ 80ಕ್ಕೂ ಹೆಚ್ಚು ದೇಶಗಳಲ್ಲಿ (ಡಿಸೆಂಬರ್ 2023 ರಂತೆ) ಪಕ್ಷಿಗಳಿಗೆ ಸೋಂಕು ತಗುಲಿತು ಮತ್ತು ವಾಣಿಜ್ಯ ಕೋಳಿ ಸಾಕಣೆ ಕೇಂದ್ರಗಳಲ್ಲಿ ಲಕ್ಷಾಂತರ ಕೋಳಿಗಳನ್ನು ಕೊಲ್ಲಲು ಕಾರಣವಾಯಿತು. ಕಾಲಕಾಲಕ್ಕೆ ಬರ್ಡ್ ಫ್ಲೂ ವೈರಸ್ಸಿನ ಒಂದು ರೂಪವು ಕಾಡು ಪಕ್ಷಿಗಳಿಂದ ಕೋಳಿ ಸಾಕಣೆ ಕೇಂದ್ರಗಳಿಗೆ ಹರಡುತ್ತಿವೆ ಮತ್ತು ಸಾಕಿರುವ ಪಕ್ಷಿಗಳ ಇಕ್ಕಟ್ಟಾದ ಗೋದಾಮುಗಳಲ್ಲಿ ಪುನರಾವರ್ತನೆಯಾಗುತ್ತದೆ. ನಂತರ ತ್ವರಿತವಾಗಿ ಹೆಚ್ಚು ರೋಗಕಾರಕ ಫ್ಲೂ ವೈರಸ್ ಆಗಿ ಬೆಳೆಯುತ್ತಿದೆ.

ಬರ್ಡ್ ಫ್ಲೂ ಲಕ್ಷಣಗಳು

ಹಕ್ಕಿ ಜ್ವರದ ಸಾಮಾನ್ಯ ಲಕ್ಷಣಗಳು ಕೆಮ್ಮು, ಅತಿಸಾರ, ಉಸಿರಾಟದ ತೊಂದರೆಗಳು, ಜ್ವರ, ತಲೆನೋವು, ಸ್ನಾಯು ನೋವು ಮತ್ತು ಗಂಟಲು ಕೆರೆತ. ಈ ಲಕ್ಷಣಗಳ ಆಧಾರದ ಮೇಲೆ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿ ಅವುಗಳ ಪರಿಣಾಮ ಹೆಚ್ಚಾಗದಂತೆ ವೈದ್ಯರು ನೋಡಿಕೊಳ್ಳುತ್ತಾರೆ. ತೀವ್ರತರವಾದ ಪ್ರಕರಣಗಳಿಗೆ ಆಸ್ಪತ್ರೆಗೆ ಸೇರಿಸಬೇಕಾಗಬಹುದು, ವಿಶೇಷವಾಗಿ ನ್ಯುಮೋನಿಯಾದಂತಹ ತೊಡಕುಗಳು ಹೆಚ್ಚಾದಾಗ ಆಸ್ಪತ್ರೆಯಲ್ಲಿ ಪೂರಕ ಆಮ್ಲಜನಕ ಮತ್ತು ಅಗತ್ಯವಿರುವ ಚಿಕಿತ್ಸೆಯನ್ನು ಪಡೆಯಬಹುದು.

ಜನರಲ್ಲಿ ಬರ್ಡ್ ಫ್ಲೂ ವೈರಸ್ ಸೋಂಕನ್ನು ಕೇವಲ ರೋಗಲಕ್ಷಣಗಳಿಂದ ಕಂಡುಹಿಡಿಯಲಾಗುವುದಿಲ್ಲ. ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಲೇಬೇಕು. ಬರ್ಡ್ ಫ್ಲೂ ವೈರಸ್ ಸೋಂಕನ್ನು ಸಾಮಾನ್ಯವಾಗಿ ಸೋಂಕು ತಗುಲಿರುವ ವ್ಯಕ್ತಿಯ ಮೂಗು ಅಥವಾ ಗಂಟಲು ಸ್ವ್ಯಾಬ್ ಸಂಗ್ರಹಿಸುವ ಮೂಲಕ ರೋಗನಿರ್ಣಯ ಮಾಡಲಾಗುತ್ತದೆ. ಅನಾರೋಗ್ಯದ ಮೊದಲ ಕೆಲವು ದಿನಗಳಲ್ಲಿ ಸ್ವ್ಯಾಬನ್ನು ಸಂಗ್ರಹಿಸಿದಾಗ ಪರೀಕ್ಷೆಯು ಹೆಚ್ಚು ನಿಖರವಾಗಿರುತ್ತದೆ.

ಹಕ್ಕಿ ಜ್ವರದಿಂದ ಪಾರಾಗುವುದು ಹೇಗೆ?

ಹಕ್ಕಿ ಜ್ವರದಿಂದ ಪಾರಾಗಲು ಮೊದಲು ಸೋಂಕಿತ ಪಕ್ಷಿಗಳೊಂದಿಗೆ ಸಂಪರ್ಕ ಹೊಂದಬಾರದು. ಏಕೆಂದರೆ ಸೋಂಕಿತ ಪಕ್ಷಿಗಳು ಅಥವಾ ಅವುಗಳ ಹಿಕ್ಕೆಗಳೊಂದಿಗಿನ ನೇರ ಸಂಪರ್ಕದ ಮೂಲಕ ಮಾನವರಿಗೆ ಹಕ್ಕಿ ಜ್ವರ ಹರಡುತ್ತದೆ. ಮಾಂಸಾಹಾರ ಸೇವಿಸುವವರು ಸರಿಯಾಗಿ ಬೇಯಿಸಿದ ಕೋಳಿ ಅಥವಾ ಮೊಟ್ಟೆಗಳನ್ನು ಸೇವಿಸುವುದರಿಂದ ಹಕ್ಕಿ ಜ್ವರ ಹರಡುವುದಿಲ್ಲ. ಇಂತಹ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಕೈಗಳನ್ನು ಸದಾಕಾಲ ಸ್ವಚ್ಛವಾಗಿಟ್ಟುಕೊಳ್ಳಬೇಕು. ಬಿಸಿ ನೀರು ಮತ್ತು ಸೋಪು ಹಾಕಿ ಆಹಾರ ಸೇವನೆಗೆ ಮೊದಲು ಅಥವಾ ಅದನ್ನು ತಯಾರಿಸುವ ಮೊದಲು ಕೈಗಳನ್ನು ಸರಿಯಾಗಿ ತೊಳೆಯಬೇಕು. ಸರಿಯಾಗಿ ಬೇಯಿಸದೆ ಇರುವ ಕೋಳಿ ಅಥವಾ ಮೊಟ್ಟೆಗಳನ್ನು ಸೇವಿಸಬಾರದು.

ತೆರೆದ ಮಾರುಕಟ್ಟೆ ಅಥವಾ ಹಕ್ಕಿಗಳು ಹೆಚ್ಚಿರುವಂತಹ ಮಾರುಕಟ್ಟೆಯಿಂದ ದೂರವಿರಬೇಕು. ಕೋಳಿ ಸಾಕಣೆದಾರರು ಅಥವಾ ಪಶುವೈದ್ಯರಂತಹ ಪಕ್ಷಿಗಳೊಂದಿಗೆ ಕೆಲಸ ಮಾಡುವ ಜನರು ವೈರಸ್ಗೆ ಒಡ್ಡಿಕೊಳ್ಳುವುದನ್ನು ತಡೆಯಲು ಸೂಕ್ತವಾದ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಬಳಸಬೇಕು.

ಹೊರಗೆ ಹೋದಾಗ ಹೋಟೆಲ್ ಮತ್ತಿತರ ಕಡೆ ಇಂತಹ ಆಹಾರ ಸೇವಿಸಬೇಕಾದರೆ ಎಚ್ಚರಿಕೆ ವಹಿಸಬೇಕು. ಹಸಿ ಮೊಟ್ಟೆಗಳನ್ನು ನೇರವಾಗಿ ಸೇವಿಸಬಾರದು. ಹೊರಸ್ಥಳಗಳಿಗೆ ಹೋಗಬೇಕಾದಾಗ ಪ್ರಯಾಣಕ್ಕೆ ಮೊದಲು ಇದರ ಬಗ್ಗೆ ಮಾಹಿತಿ ತಿಳಿದು ಹೊರಡಬೇಕು. ಹಕ್ಕಿ ಜ್ವರ ಬರದಂತೆ ತಡೆಯಲು ಸಾಧ್ಯವಿಲ್ಲದೇ ಇದ್ದರೂ ಅದರ ಅಪಾಯವನ್ನು ಕಡಿಮೆ ಮಾಡಬಹುದು. ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಪಾಶ್ಚರೀಕರಿಸಿದ ಡೈರಿ ಉತ್ಪನ್ನಗಳನ್ನೇ ಹೆಚ್ಚು ಬಳಸಬೇಕು. ಬಹಳ ನೆನಪಿಟ್ಟುಕೊಳ್ಳಬೇಕಾದ ವಿಷಯವೇನೆಂದರೆ ಮೊಟ್ಟೆ ಮತ್ತು ಹಾಲಿನಿಂದ ಹಕ್ಕಿಜ್ವರ ಬರುವ ಅಪಾಯ ತೀರಾ ಕಡಿಮೆ. ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ಹಕ್ಕಿ ಜ್ವರ ಅಥವಾ ಬೇರೆ ಯಾವುದೇ ಅಪಾಯವಿಲ್ಲ.

SCROLL FOR NEXT