ಇರಾನ್ ರಾಜಧಾನಿ ಟೆಹರಾನ್‌ನಲ್ಲಿ ಹಿರಿಯ ಹಮಾಸ್ ಮುಖಂಡನ ಬರ್ಬರ ಹತ್ಯೆಯಾದ ಬಳಿಕ, ಭದ್ರತಾ ವೈಫಲ್ಯದ ಕಾರಣಕ್ಕಾಗಿ ಇರಾನ್ ಹನ್ನೆರಡಕ್ಕೂ ಹೆಚ್ಚು ಜನರನ್ನು ಬಂಧಿಸಿದೆ. ಬಂಧನಕ್ಕೊಳಗಾದವರಲ್ಲಿ ಉನ್ನತ ಗುಪ್ತಚರ ಅಧಿಕಾರಿಗಳು, ಮಿಲಿಟರಿ ನಿರ್ವಹಿಸುತ್ತಿರುವ ಟೆಹರಾನ್‌ನ ಅತಿಥಿ ಗೃಹದ ಸಿಬ್ಬಂದಿಗಳು, ಮತ್ತಿತರರು ಸೇರಿದ್ದಾರೆ. ಪ್ರಸ್ತುತ ಘಟನೆಯ ವಿಚಾರಣೆಯ ಕುರಿತು ಮಾಹಿತಿ ಹೊಂದಿರುವ ಇಬ್ಬರು ಇರಾನಿಯನ್ನರು ತನಿಖೆಯ ಪ್ರಗತಿಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಕತಾರ್‌ನಲ್ಲಿ ಹಮಾಸ್ ಸಂಘಟನೆಯ ರಾಜಕೀಯ ವಿಭಾಗದ ನೇತೃತ್ವ ವಹಿಸಿಕೊಂಡಿದ್ದ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಯ ಬಳಿಕ, ಈ ಬಂಧನಗಳು ನಡೆದಿವೆ. ಇಸ್ಮಾಯಿಲ್ ಹನಿಯೆಹ್ ಇರಾನಿನ ನೂತನ ಅಧ್ಯಕ್ಷರಾದ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಇರಾನ್ ರಾಜಧಾನಿ ಟೆಹರಾನ್‌ಗೆ ತೆರಳಿ, ರಾಜಧಾನಿಯ ಉತ್ತರ ಭಾಗದಲ್ಲಿದ್ದ ಅತಿಥಿ ಗೃಹದಲ್ಲಿ ತಂಗಿದ್ದ ವೇಳೆ ಹತ್ಯೆಗೀಡಾಗಿದ್ದರು.
ಹನಿಯೆಹ್ ಹತ್ಯೆ ಇರಾನ್ ನಾಯಕತ್ವದ ಗುಪ್ತಚರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದ್ದು, ಇರಾನ್ ಭಾರೀ ಟೀಕೆಗಳನ್ನು ಎದುರಿಸುವಂತಾಯಿತು. ಇರಾನ್ ನೂತನ ಅಧ್ಯಕ್ಷರು ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳ ಒಳಗೆ, ಅತ್ಯಂತ ಹೆಚ್ಚಿನ ಭದ್ರತೆ ಹೊಂದಿದ್ದ ಪ್ರದೇಶದಲ್ಲಿ ಹನಿಯೆಹ್ ಹತ್ಯೆ ನಡೆದಿದ್ದು ಇರಾನ್ ಪಾಲಿಗೆ ಅವಮಾನಕರ ಘಟನೆಯಾಗಿತ್ತು.
ಇರಾನಿನ ಇಂಟರ್ನ್ಯಾಷನಲ್ ಕ್ರೈಸಿಸ್ ಗ್ರೂಪ್ ನಿರ್ದೇಶಕರಾದ ಅಲಿ ವಾಯೆಜ್ ಇರಾನ್‌ಗೆ ತನ್ನದೇ ಪ್ರಾಂತ್ಯಗಳನ್ನು ಮತ್ತು ತನ್ನ ಮುಖ್ಯ ಸಹಯೋಗಿಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶವೇನಾದರೂ ಇದರಿಂದ ರವಾನೆಯಾದರೆ, ಅದು ಇರಾನಿಯನ್ ಆಡಳಿತಕ್ಕೆ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಅಂದರೆ, ಇದರಿಂದ ಇರಾನಿನ ಶತ್ರುಗಳಿಗೆ ಇಸ್ಲಾಮಿಕ್ ರಿಪಬ್ಲಿಕ್ ಅನ್ನು ಮಣಿಸಲು ಸಾಧ್ಯವಾಗದಿದ್ದರೂ, ಅದರ ನಾಯಕತ್ವವನ್ನು ಗುರಿಯಾಗಿಸಲು ಸಾಧ್ಯವಿದೆ ಎಂಬ ಕಲ್ಪನೆ ಮೂಡುತ್ತದೆ.
ಮಧ್ಯ ಪೂರ್ವ ಮತ್ತು ಇರಾನಿನ ಅಧಿಕಾರಿಗಳು ಘಟನೆಯ ಕುರಿತು ಹೇಳಿಕೆ ನೀಡಿದ್ದು, ಹನಿಯೆಹ್ ನೆಲೆಸಿದ್ದ ಅತಿಥಿ ಗೃಹದ ಕೊಠಡಿಯಲ್ಲಿ ಹನಿಯೆಹ್ ಉಳಿದುಕೊಳ್ಳಲು ಆಗಮಿಸುವ ಕನಿಷ್ಠ ಎರಡು ತಿಂಗಳ ಹಿಂದೆಯೇ ಅಳವಡಿಸಿದ್ದ ಭಾರೀ ಸ್ಫೋಟಕವನ್ನು ಸಿಡಿಸಿ ಆತನ ಹತ್ಯೆಗೈಯಲಾಗಿದೆ ಎಂದಿದ್ದಾರೆ.
ಜುಲೈ 31, ಬುಧವಾರದಂದು ಇರಾನಿನ ಅಧಿಕಾರಿಗಳು ಮತ್ತು ಹಮಾಸ್ ಸಂಘಟನೆ ಹನಿಯೆಹ್ ಹತ್ಯೆಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಆರೋಪಿಸಿದ್ದರು. ಹಲವಾರು ಅಮೆರಿಕನ್ ಅಧಿಕಾರಿಗಳೂ ಈ ವಾದವನ್ನು ಒಪ್ಪಿಕೊಂಡಿದ್ದರು. ಇಸ್ರೇಲ್ ಈ ಮೊದಲೇ ತಾನು ಹಮಾಸ್‌ನ ನಾಯಕತ್ವ ಮತ್ತು ಮಿಲಿಟರಿ ಸಾಮರ್ಥ್ಯವನ್ನು ಇಲ್ಲವಾಗಿಸುವುದಾಗಿ ಹೇಳಿತ್ತಾದರೂ, ಬಾಂಬ್ ಅಳವಡಿಸಿದ್ದರ ಜವಾಬ್ದಾರಿ ವಹಿಸಿಕೊಂಡಿಲ್ಲ.
ಇರಾನಿನ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್‌ನ ಬೇಹುಗಾರಿಕೆಯಲ್ಲಿ ಪರಿಣತವಾದ ಗುಪ್ತಚರ ವಿಭಾಗ ಈ ತನಿಖೆಯನ್ನು ಕೈಗೆತ್ತಿಕೊಂಡಿದೆ. ಈ ವಿಭಾಗದ ಸಿಬ್ಬಂದಿಗಳು ಈಗಾಗಲೇ ಅನುಮಾನಾಸ್ಪದ ವ್ಯಕ್ತಿಗಳಿಗೆ ಹುಡುಕಾಟ ಆರಂಭಿಸಿದ್ದು, ಆ ಮೂಲಕ ಹನಿಯೆಹ್ ಹತ್ಯೆಯನ್ನು ಆಲೋಚಿಸಿದ, ಸಹಾಯ ಮಾಡಿದ, ಮತ್ತು ಹತ್ಯೆ ಕೈಗೊಂಡವರನ್ನು ಕಂಡುಹಿಡಿಯುವ ಪ್ರಯತ್ನ ನಡೆಸುತ್ತಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಇಬ್ಬರು ಅಧಿಕಾರಿಗಳು ತಿಳಿಸಿದ್ದಾರೆ.
ಹನಿಯೆಹ್ ಹತ್ಯೆಯ ಬಳಿಕ, ಈ ಕುರಿತು ಹೇಳಿಕೆ ನೀಡಿರುವ ರೆವಲ್ಯೂಷನರಿ ಗಾರ್ಡ್ಸ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಹೆಚ್ಚುವರಿ ಮಾಹಿತಿಗಳನ್ನು ಶೀಘ್ರವಾಗಿ ಒದಗಿಸಲಾಗುವುದು ಎಂದಿದೆ.
ಇಲ್ಲಿಯತನಕ ರೆವಲ್ಯೂಷನರಿ ಗಾರ್ಡ್ಸ್ ಬಂಧನಗಳಿಗೆ ಸಂಬಂಧಿಸಿದಂತೆ ಅಥವಾ ಸ್ಫೋಟಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಮಾಹಿತಿಗಳನ್ನು ಹಂಚಿಕೊಂಡಿಲ್ಲ. ಆದರೆ, ರೆವಲ್ಯೂಷನರಿ ಗಾರ್ಡ್ಸ್ ಶೀಘ್ರವಾಗಿ ತೀವ್ರ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ. ಈ ಹತ್ಯೆಗೆ ಪ್ರತಿಕ್ರಿಯೆಯಾಗಿ, ಇರಾನಿನ ಸರ್ವೋಚ್ಚ ನಾಯಕ ಅಯಾತೊಲ್ಲ ಅಲಿ ಖಮೇನಿ ಈಗಾಗಲೇ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸಲು ಆದೇಶ ನೀಡಿದ್ದಾರೆ ಎನ್ನಲಾಗಿದೆ.
ರೆವಲ್ಯೂಷನರಿ ಗಾರ್ಡ್ಸ್ ಇಷ್ಟೊಂದು ಆಳವಾದ ತನಿಖೆ ನಡೆಸುತ್ತಿರುವುದು ಹನಿಯೆಹ್ ಹತ್ಯೆ ಇರಾನನ್ನು ಯಾವ ಮಟ್ಟಕ್ಕೆ ನಲುಗಿಸಿದೆ ಎಂಬುದನ್ನು ಸೂಚಿಸುತ್ತಿದೆ.
ಹನಿಯೆಹ್ ಮತ್ತು ಆತನ ಪ್ಯಾಲೆಸ್ತೀನಿಯನ್ ಅಂಗರಕ್ಷಕನ ಸಾವಿಗೆ ಕಾರಣವಾದ ಸ್ಫೋಟ ಕೇವಲ ಗುಪ್ತಚರ ಮತ್ತು ಭದ್ರತಾ ವೈಫಲ್ಯ ಮಾತ್ರವೇ ಆಗಿರಲಿಲ್ಲ. ಈ ಹತ್ಯೆ ಓರ್ವ ಮುಖ್ಯ ಸಹಯೋಗಿಯನ್ನು ಉಳಿಸಿಕೊಳ್ಳುವಲ್ಲಿ ಮತ್ತು ಮೊಸಾದ್ ಒಳನುಸುಳುವಿಕೆಯನ್ನು ತಡೆಯುವಲ್ಲಿ ಇರಾನಿನ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಆ ಮೂಲಕ ಇರಾನಿನ ಗೌರವಕ್ಕೆ ಭಾರೀ ಧಕ್ಕೆ ತಂದಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ಇದೊಂದು ಅತಿದೊಡ್ಡ ಎಚ್ಚರಿಕೆಯ ಗಂಟೆಯಂತಿದೆ. ಒಂದು ವೇಳೆ ಇಸ್ರೇಲ್ ಇರಾನ್ ರಾಜಧಾನಿಯಲ್ಲಿ, ಅಷ್ಟೊಂದು ಬಿಗಿ ಭದ್ರತೆ ಹೊಂದಿದ್ದ, ಗುಂಡು ನಿರೋಧಕ ಕಿಟಕಿಗಳು, ವಾಯು ದಾಳಿ ರಕ್ಷಣೆ, ರೇಡಾರ್ ವ್ಯವಸ್ಥೆ ಹೊಂದಿದ್ದ ಕಟ್ಟಡದಲ್ಲಿ ನೆಲೆಸಿದ್ದ ಪ್ರಮುಖ ಅತಿಥಿಯ ಮೇಲೆ ದಾಳಿ ಎಸಗಿ ಹತ್ಯೆ ನಡೆಸುವ ಸಾಮರ್ಥ್ಯ ಹೊಂದಿದೆ ಎಂದಾದರೆ, ಇದರಿಂದ ಇರಾನಿನಲ್ಲಿ ನಿಜಕ್ಕೂ ಯಾರೂ ಸುರಕ್ಷಿತರಲ್ಲ ಎಂಬ ಭಾವನೆ ಮೂಡಿದೆ.
"ಇರಾನ್ ಎದುರಿಸಿರುವ ಈ ಭಾರೀ ಭದ್ರತಾ ವೈಫಲ್ಯದ ಪರಿಣಾಮವಾಗಿ ಅದು ಹೊಸ ನೀತಿಗಳು ಮತ್ತು ಕಾರ್ಯತಂತ್ರಗಳನ್ನು ಹೊಂದುವುದು ಅನಿವಾರ್ಯವಾಗಿದೆ. ಇದಕ್ಕಾಗಿ, ಒಂದು ವೇಳೆ ಇಸ್ರೇಲ್ ಒಳನುಸುಳುವಿಕೆ ನಡೆದಿದ್ದರೆ ಅದರ ಗುಪ್ತಚರರನ್ನು ಬಂಧಿಸುವುದು, ಅಥವಾ ಹೊರಗಿನಿಂದಲೇ ಇಸ್ರೇಲ್ ಈ ದಾಳಿ ನಡೆಸಿದೆ ಎಂದಾದರೆ ಇಸ್ರೇಲ್ ಮೇಲೆ ಪ್ರತಿದಾಳಿ ನಡೆಸುವ ಆಯ್ಕೆಗಳು ಇರಾನ್ ಮುಂದಿವೆ. ಅಥವಾ ಇವೆರಡೂ ಆಯ್ಕೆಗಳ ಮಿಶ್ರಣವನ್ನೂ ಇರಾನ್ ಆರಿಸಬಹುದು" ಎಂದು ಟೆಹರಾನ್ ಮೂಲದ ರಾಜಕೀಯ ವಿಶ್ಲೇಷಕ ಸಾಸನ್ ಕರೀಮಿ ಅಭಿಪ್ರಾಯ ಪಟ್ಟಿದ್ದಾರೆ.
ಹನಿಯೆಹ್ ಹತ್ಯೆಯಾಗುವ ಕೆಲವೇ ಗಂಟೆಗಳ ಮುನ್ನ, ಹನಿಯೆಹ್ ಮತ್ತು ಇರಾನಿನ ಸರ್ವೋಚ್ಚ ನಾಯಕ ಖಮೇನಿ ಭೇಟಿಯಾಗಿದ್ದರು. ಹನಿಯೆಹ್ ಮತ್ತು ಸರ್ವೋಚ್ಚ ನಾಯಕರ ನಡುವೆ ಇದ್ದ ಆಪ್ತ ಸಂಬಂಧವೂ ಕಳವಳಕ್ಕೆ ಕಾರಣವಾಗಿದೆ.
ಆಗಸ್ಟ್ 2ರಂದು ಟೆಹರಾನ್‌ನಲ್ಲಿ ಹನಿಯೆಹ್ ಅಂತಿಮ ಸಂಸ್ಕಾರ ನೆರವೇರಿತು. ಈ ಸಂದರ್ಭದಲ್ಲಿ, ಮೃತ ದೇಹಕ್ಕೆ ಇಸ್ಲಾಮಿಕ್ ಪದ್ಧತಿಗಳನ್ನು ನಡೆಸಲು ಸ್ವತಃ ಖಮೇನಿ ಆಗಮಿಸಿದ್ದರು. ಆ ವೇಳೆ ಅವರ ಸುತ್ತಲೂ ಎಂದಿಗಿಂತಲೂ ಬಹಳ ಹೆಚ್ಚು ಅಂಗರಕ್ಷಕರು ಕಂಡುಬಂದಿದ್ದರು. ಖಮೇನಿ ಕೇವಲ ಕೆಲವು ಕ್ಷಣಗಳಷ್ಟೇ ಅಲ್ಲಿದ್ದು, ಹನಿಯೆಹ್ ಪುತ್ರನನ್ನು ಭೇಟಿಯಾಗಿ, ತಕ್ಷಣವೇ ಅಲ್ಲಿಂದ ತೆರಳಿದ್ದರು.
ಇರಾನ್ ಮತ್ತು ಇಸ್ರೇಲ್‌ಗಳ ನಡುವೆ ದೀರ್ಘ ಕಾಲದಿಂದಲೂ ರಹಸ್ಯ ಚಕಮಕಿ ನಡೆಯುತ್ತಲೇ ಬಂದಿದೆ. ಇಸ್ರೇಲ್ ಈಗಾಗಲೇ ಒಂದು ಡಜನ್‌ಗೂ ಹೆಚ್ಚು ಇರಾನಿಯನ್ ಪರಮಾಣು ವಿಜ್ಞಾನಿಗಳು ಮತ್ತು ಮಿಲಿಟರಿ ನಾಯಕರನ್ನು ಹತ್ಯೆಗೈದಿದೆ. ಈ ಪಟ್ಟಿಯಲ್ಲಿ ಒಬ್ಬರಾದ, ಇರಾನಿನ ಉನ್ನತ ಪರಮಾಣು ವಿಜ್ಞಾನಿ ಮೊಹ್ಸೆನ್ ಫಖ್ರಿಜಾದೆ ಸಹ ಸೇರಿದ್ದು, ಅವರನ್ನು ರಿಮೋಟ್ ಕಂಟ್ರೋಲ್ ಚಾಲಿತ, ಎಐ ಆಧಾರಿತ ರೋಬೋಟ್ ಬಳಸಿ 2020ರಲ್ಲಿ ಇಸ್ರೇಲ್ ಹತ್ಯೆಗೈದಿತ್ತು. ಇಸ್ರೇಲ್ ಇರಾನಿನ ಮೂಲಭೂತ ವ್ಯವಸ್ಥೆಗಳನ್ನು ಸಹ ಧ್ವಂಸಗೊಳಿಸಿದ್ದು, ಫೆಬ್ರವರಿ ತಿಂಗಳಲ್ಲಿ ಅನಿಲ ಪೈಪ್‌ಗಳನ್ನು ನಾಶಪಡಿಸಿತ್ತು. ಅದರೊಡನೆ ಇರಾನಿನ ಮಿಲಿಟರಿ ಮತ್ತು ಪರಮಾಣು ನೆಲೆಗಳ ಮೇಲೂ ದಾಳಿ ನಡೆಸಿತ್ತು.
ಇರಾನ್ ಪ್ರತಿಯೊಂದು ದಾಳಿಯ ಬಳಿಕವೂ ಸಾಕಷ್ಟು ತನಿಖೆಗಳನ್ನು ನಡೆಸಿದ್ದು, ಅದಕ್ಕೆ ಜವಾಬ್ದಾರರಾದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು. ಇರಾನ್ ತನ್ನ ಉನ್ನತ ಗುಪ್ತಚರ ಮುಖ್ಯಸ್ಥನನ್ನೂ ವಜಾಗೊಳಿಸಿತ್ತು, ಮಿಲಿಟರಿ ಕಮಾಂಡರ್‌ನನ್ನು ಬಂಧಿಸಿತ್ತು, ಮತ್ತು ತಾನು ಇಸ್ರೇಲಿನ ಗೂಢಚಾರ ಜಾಲವನ್ನು ಭೇದಿಸಿರುವುದಾಗಿ ಆಗಾಗ ಹೇಳಿಕೆಗಳನ್ನೂ ನೀಡುತ್ತಿತ್ತು.
ಹನಿಯೆಹ್ ಹತ್ಯೆಗೆ ಕೇವಲ ನಾಲ್ಕು ದಿನಗಳ ಹಿಂದೆ, ಇರಾನಿನ ಗುಪ್ತಚರ ಸಚಿವರಾದ ಸೆಯೆದ್ ಎಸ್ಮಾಯಿಲ್ ಖಾತಿಬ್ ಅವರು ಸ್ಥಳೀಯ ಮಾಧ್ಯಮಗಳೊಡನೆ ಮಾತನಾಡುತ್ತಾ, "ಪ್ರತಿದಿನವೂ ನಮ್ಮ ವಿಜ್ಞಾನಿಗಳನ್ನು ಹತ್ಯೆಗೈಯುತ್ತಿದ್ದ, ನಮ್ಮ ಮುಖ್ಯ ಮೂಲಭೂತ ತಾಣಗಳನ್ನು ನಾಶಪಡಿಸುತ್ತಿದ್ದ ಮೊಸಾದ್ ಗೂಢಚಾರರ ಜಾಲವನ್ನು ನಾವು ಭೇದಿಸಿ, ನಾಶಪಡಿಸಿದ್ದೇವೆ" ಎಂದು ಹೇಳಿಕೆ ನೀಡಿದ್ದರು.
ಆದರೆ ಅದಾದ ಕೇವಲ ನಾಲ್ಕು ದಿನಗಳಲ್ಲೇ ಇರಾನಿಗೆ ಹನಿಯೆಹ್ ಹತ್ಯೆಯ ಆಘಾತಕಾರಿ ಸುದ್ದಿ ಅಪ್ಪಳಿಸಿತ್ತು.
ಹನಿಯೆಹ್ ಸಾವಿನ ಬಳಿಕ, ಇರಾನಿನ ಭದ್ರತಾ ಏಜೆಂಟ್‌ಗಳು ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್‌ಗೆ ಸೇರಿದ್ದ ಆ ಅತಿಥಿ ಗೃಹದ ಮೇಲೆ ದಾಳಿ ನಡೆಸಿದ್ದರು. ಅತಿಥಿ ಗೃಹಕ್ಕೆ ಹನಿಯೆಹ್ ಆಗಾಗ ಆಗಮಿಸುತ್ತಿದ್ದು, ಪ್ರತಿ ಬಾರಿಯೂ ಅದೇ ಕೊಠಡಿಯಲ್ಲಿ ತಂಗುತ್ತಿದ್ದ ಎನ್ನಲಾಗಿದೆ. ಏಜೆಂಟ್‌ಗಳು ಅತಿಥಿಗೃಹದ ಸಿಬ್ಬಂದಿಗಳನ್ನು ಪ್ರತ್ಯೇಕವಾಗಿಟ್ಟು, ಕೆಲವರನ್ನು ಬಂಧಿಸಿದ್ದಾರೆ. ಅವರ ವೈಯಕ್ತಿಕ ಫೋನ್‌ಗಳು ಸೇರಿದಂತೆ, ಎಲ್ಲ ಇಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಇಬ್ಬರು ಇರಾನಿಯನ್ ಅಧಿಕಾರಿಗಳು ಖಾತ್ರಿಪಡಿಸಿದ್ದಾರೆ.
ಏಜೆಂಟರ ಇನ್ನೊಂದು ತಂಡ ರಾಜಧಾನಿ ಟೆಹರಾನಿನ ಭದ್ರತೆಗೆ ಜವಾಬ್ದಾರರಾಗಿರುವ ಹಿರಿಯ ಮಿಲಿಟರಿ ಮತ್ತು ಗುಪ್ತಚರ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದೆ. ಏಜೆಂಟರು ಈಗಾಗಲೇ ಕೆಲವು ಅಧಿಕಾರಿಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ಪೂರ್ಣಗೊಳ್ಳುವ ತನಕ ಅವರು ವಶದಲ್ಲೇ ಇರಲಿದ್ದಾರೆ ಎಂದು ಇರಾನಿಯನ್ ಅಧಿಕಾರಿಗಳು ವಿವರಿಸಿದ್ದಾರೆ.
ಅತಿಥಿ ಗೃಹದ ಮೇಲೆ ವಿಚಾರಣಾ ದಾಳಿ ನಡೆಸಿದ ಸಂದರ್ಭದಲ್ಲಿ, ಭದ್ರತಾ ಏಜೆಂಟರು ಅಲ್ಲಿನ ಪ್ರತಿಯೊಂದು ಅಂಗುಲವನ್ನೂ ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಕಳೆದ ಕೆಲವು ತಿಂಗಳುಗಳ ಸಿಸಿಟಿವಿ ದೃಶ್ಯಾವಳಿಗಳು, ಅತಿಥಿಗಳ ಪಟ್ಟಿಯನ್ನು ಗಮನಿಸಿದ್ದಾರೆ. ಅದರೊಡನೆ, ಸಿಬ್ಬಂದಿಗಳ ಓಡಾಟಗಳನ್ನೂ ಪರಿಶೀಲಿಸಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿಗಳನ್ನು ಆಯ್ಕೆ ಮಾಡಿಕೊಳ್ಳುವ ಮುನ್ನವೇ ಅವರ ಇತ್ಯೋಪರಿಗಳನ್ನು ಸರಿಯಾಗಿ ತಿಳಿಯಲಾಗಿರುತ್ತದೆ. ಅವರೆಲ್ಲರೂ ಸ್ವಯಂಸೇವಕ ಅರೆ ಮಿಲಿಟರಿ ಪಡೆಯ ಗಾರ್ಡ್ಸ್ ಮತ್ತು ಬಸಿಜ್ ರ‌್ಯಾಂಕ್‌ನಿಂದ ಬಂದವರಾಗಿದ್ದಾರೆ ಎಂದು ಅನಾಮಧೇಯ ಇರಾನಿಯನ್ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಸ್ತುತ ತನಿಖೆಯನ್ನು ಇರಾನಿನ ಆಂತರಿಕ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೂ ವಿಸ್ತರಿಸಲಾಗಿದೆ. ಏಜೆಂಟರು ತಿಂಗಳುಗಳ ಹಿಂದಿನ ಕ್ಯಾಮರಾ ದೃಶ್ಯಾವಳಿಗಳನ್ನು ಗಮನಿಸುತ್ತಿದ್ದು, ಆಗಮನ ಮತ್ತು ನಿರ್ಗಮನ ದೃಶ್ಯಗಳನ್ನು ವೀಕ್ಷಿಸುತ್ತಿದ್ದಾರೆ. ಮೊಸಾದ್ ಸಂಸ್ಥೆಯ ಹಂತಕರ ತಂಡದ ಸದಸ್ಯರು ಇನ್ನೂ ಇರಾನ್‌ನಲ್ಲೇ ಇದ್ದಾರೆ ಎಂದು ಇರಾನ್ ಅನುಮಾನ ಹೊಂದಿದ್ದು, ಅವರನ್ನು ಬಂಧಿಸುವ ಗುರಿ ಹಾಕಿಕೊಂಡಿದೆ.
ಅನಾಮಧೇಯನಾಗಿ ಉಳಿಯಲು ಬಯಸಿರುವ ರೆವಲ್ಯೂಷನರಿ ಗಾರ್ಡ್ಸ್ ಸದಸ್ಯರೊಬ್ಬರು ಈ ಕುರಿತು ಮಾಧ್ಯಮಗಳಿಗೆ ಗುಪ್ತವಾಗಿ ಮಾಹಿತಿ ನೀಡಿದ್ದು, ತನಗೆ ಬಂಧನಗಳಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಆದರೆ ಕಳೆದ ಎರಡು ದಿನಗಳ ಅವಧಿಯಲ್ಲಿ, ಹಿರಿಯ ಅಧಿಕಾರಿಗಳ ಭದ್ರತಾ ಕ್ರಮಗಳು ಸಂಪೂರ್ಣವಾಗಿ ಬದಲಾಗಿವೆ ಎಂದು ಹೇಳಿದ್ದಾರೆ. ಹಿರಿಯ ಅಧಿಕಾರಿಗಳ ಭದ್ರತಾ ವ್ಯವಸ್ಥೆ ಬದಲಾಗಿದ್ದು, ಅವರ ಮೊಬೈಲ್ ಫೋನ್‌ಗಳನ್ನೂ ಈಗಾಗಲೇ ಬದಲಿಸಲಾಗಿದೆ. ಒಂದಷ್ಟು ಹಿರಿಯ ಅಧಿಕಾರಿಗಳನ್ನು ಈಗಾಗಲೇ ಬೇರೆಡೆಗೆ ಸ್ಥಳಾಂತರಿಸಲಾಗಿದೆ.
ಭದ್ರತೆಗೆ ಸಂಬಂಧಿಸಿದ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದ ಇರಾನಿನ ಮಾಜಿ ಅಧ್ಯಕ್ಷ ಹಸನ್ ರೌಹಾನಿ ಈ ಕುರಿತು ಹೇಳಿಕೆ ನೀಡಿದ್ದು, ಇರಾನಿನಲ್ಲಿ ಹನಿಯೆಹ್ ಹತ್ಯೆ ನಡೆಸುವ ಮೂಲಕ ನೂತನ ಸರ್ಕಾರ ಆರಂಭಗೊಳ್ಳುತ್ತಿದ್ದಂತೆಯೇ ಇಸ್ರೇಲ್ ಇರಾನಿನ ಭದ್ರತೆ ಮತ್ತು ಸ್ಥಿರತೆಯನ್ನು ಹಾಳುಗೆಡವಲು ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ. ಈ ಅಪಾಯವನ್ನು ಎದುರಿಸಲು ಇರುವ ಸೂಕ್ತ ಉಪಾಯವೆಂದರೆ, ಇರಾನಿನ ಭದ್ರತೆ, ಗುಪ್ತಚರ ಮತ್ತು ಮಿಲಿಟರಿ ವಿಭಾಗಗಳು ಜೊತೆಯಾಗಿ ಕಾರ್ಯಾಚರಿಸಿ, ತಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ರೌಹಾನಿ ಸಲಹೆ ನೀಡಿದ್ದಾರೆ.
ಅಮೆರಿಕಾದ ಸೆಕ್ರೆಟರಿ ಆಫ್ ಸ್ಟೇಟ್ ಆ್ಯಂಟನಿ ಬ್ಲಿಂಕನ್ ಅವರು ಜಿ7 ರಾಷ್ಟ್ರಗಳೊಡನೆ ಸಮಾಲೋಚಿಸುವ ಸಂದರ್ಭದಲ್ಲಿ, ಮುಂದಿನ ಒಂದರಿಂದ ಎರಡು ದಿನಗಳ ಅವಧಿಯಲ್ಲಿ ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದಿದ್ದಾರೆ.
ಬ್ಲಿಂಕನ್ ಈ ಕಳವಳಗಳನ್ನು ಇತರ ಜಿ7 ನಾಯಕರೊಡನೆ ಹಂಚಿಕೊಂಡಿದ್ದು, ಇದೇ ಸಂದರ್ಭದಲ್ಲಿ ಅಮೆರಿಕಾ ಮಧ್ಯ ಪೂರ್ವ ಪ್ರದೇಶದಲ್ಲಿ ಉದ್ವಿಗ್ನತೆ ಕಡಿಮೆಗೊಳಿಸಿ, ಪೂರ್ಣ ಪ್ರಮಾಣದ ಯುದ್ಧ ಆರಂಭಗೊಳ್ಳದಂತೆ ತಡೆಯುವ ಪ್ರಯತ್ನ ನಡೆಸುತ್ತಿದೆ. ಇತ್ತೀಚಿನ ಗುರುತರ ದಾಳಿಗಳಲ್ಲಿ ಓರ್ವ ಹಿರಿಯ ಹೆಜ್ಬೊಲ್ಲಾ ಕಮಾಂಡರ್ ಮತ್ತು ಓರ್ವ ಹಮಾಸ್ ನಾಯಕರು ಸಾವಿಗೀಡಾಗಿದ್ದು, ಇದಕ್ಕೆ ಇರಾನ್ ಪ್ರತೀಕಾರದ ದಾಳಿ ನಡೆಸುವುದು ಸಹಜ ಬೆಳವಣಿಗೆ ಎಂದು ಅಮೆರಿಕಾ ಭಾವಿಸಿದೆ. ಆದರೆ, ಇರಾನ್ ತೀವ್ರ ಪ್ರಮಾಣದಲ್ಲಿ ದಾಳಿ ನಡೆಸದಂತೆ ಅದರ ಮೇಲೆ ಒತ್ತಡ ಹೇರಿ ತಡೆಯುವುದು ಪೂರ್ಣ ಪ್ರಮಾಣದ, ವಿಶಾಲ ವ್ಯಾಪ್ತಿಯ ಯುದ್ಧ ತಲೆದೋರದಂತೆ ತಡೆಯಲು ಕೈಗೊಳ್ಳಬೇಕಾದ ಅವಶ್ಯಕ ಕ್ರಮ ಎಂದು ಬ್ಲಿಂಕನ್ ಪ್ರತಿಪಾದಿಸಿದ್ದಾರೆ.
ಇರಾನ್ ಯಾವ ದಿನ, ಸಮಯದಲ್ಲಿ ಇಸ್ರೇಲ್ ಮೇಲೆ ದಾಳಿ ನಡೆಸಬಹುದು ಎನ್ನುವುದು ಖಚಿತವಾಗಿಲ್ಲದಿದ್ದರೂ, ಸೋಮವಾರ ಬೆಳಗ್ಗೆಯೂ ಈ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಬ್ಲಿಂಕನ್ ಎಚ್ಚರಿಕೆ ನೀಡಿದ್ದಾರೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)