ಭಾರತದ ನೆರೆಯ ರಾಷ್ಟ್ರಗಳು online desk
ಅಂಕಣಗಳು

2025ರ ಹೊಸ್ತಿಲಲ್ಲಿ ಭಾರತದ 'ನೆರೆಮನೆ' ಗತಿ ಹೇಗೆಲ್ಲ ಕೆಟ್ಟುನಿಂತಿದೆ ನೋಡಿ… (ತೆರೆದ ಕಿಟಕಿ)

ಚೀನಾವು ಪ್ರಬಲವಾಗುತ್ತಲೇ ನೇಪಾಳವು ಅತ್ತ ವಾಲುತ್ತ ಭಾರತವನ್ನು ಒಂದರ್ಥದಲ್ಲಿ ಬ್ಲಾಕ್ಮೇಲ್ ಮಾಡುತ್ತಿದೆ. ಈ ನೇಪಾಳ ಮತ್ತು ಶ್ರೀಲಂಕಾದಂಥ ದೇಶಗಳು ಲಾಗಾಯ್ತಿನಿಂದಲೂ ಇಂಥದೊಂದು ಆಟವನ್ನು ತಮ್ಮ ಲಾಭಕ್ಕಾಗಿ ಆಡಿಕೊಂಡುಬಂದಿವೆ.

ವರ್ಷದ ಕೊನೆಯ ತಿಂಗಳಿನಲ್ಲಿರುವ ಈ ಹೊತ್ತಿನಲ್ಲಿ ಅದಾಗಲೇ ಹೊಸ ವರ್ಷದ ಭವಿಷ್ಯ ವಿಶ್ಲೇಷಣೆಗಳು ಶುರುವಾಗಿರುತ್ತವೆ. ಅದ್ಯಾವ ಗ್ರಹ ಯಾವ ರಾಶಿಗೆ ಜಿಗಿಯುತ್ತದೆ ಮತ್ತದರಿಂದ ಯಾರಿಗೆ ಏನೆಲ್ಲ ಫಲ…ಹತ್ತಿರದ ರಾಶಿಮನೆಗಳಲ್ಲಿ ಇರುವವರಿಗೆ ಯಾವೆಲ್ಲದರ ಪ್ರಭಾವಗಳಾಗುತ್ತವೆ ಅಂತೆಲ್ಲ ಥರಹೇವಾರಿ ವಿಶ್ಲೇಷಣೆಗಳು. ಈ ಅಂಕಣದ ವಿಷಯ ಅದೇನಲ್ಲ, ಆದರೆ ದೇಶವೊಂದರ ನೆರೆಮನೆಗಳಲ್ಲಿ ಇರುವ ಸ್ಥಿತಿ ಅದರ ಭವಿಷ್ಯದ ಮೇಲೆ ಪರಿಣಾಮ ಬೀರಿಯೇ ಬೀರುತ್ತದೆ. 2024 ಅಂತ್ಯವಾಗುತ್ತಿರುವ ಹೊತ್ತಿನಲ್ಲಿ ಭಾರತಕ್ಕೆ ಸಿಗುತ್ತಿರುವ ಚಿತ್ರಣ ಈ ನಿಟ್ಟಿನಲ್ಲಿ ನಿರಾಶಾದಾಯಕವೇ. ನೆರೆಮನೆಯವರನ್ನು ಸಂಭಾಳಿಸುವುದೇ ಭಾರತಕ್ಕೆ 2025ರ ಬಹುದೊಡ್ಡ ಸವಾಲಾಗಿ ನಿಲ್ಲುತ್ತಿರುವಂತೆ ಈ ಹೊತ್ತಿನಲ್ಲಿ ಗೋಚರವಾಗುತ್ತಿದೆ. ಅಷ್ಟರಮಟ್ಟಿಗೆ, ಭಾರತದ ಗಡಿಗೆ ತಾಗಿಕೊಂಡಿರುವ ಹೆಚ್ಚಿನ ನೆರೆಮನೆಗಳೆಲ್ಲವೂ ಪ್ರತಿಕೂಲ ಸ್ಥಿತಿಯನ್ನು ತಲುಪಿಬಿಟ್ಟಿವೆ!

2014ರಿಂದೀಚಿಗಿನ ಇಷ್ಟು ವರ್ಷಗಳಲ್ಲಿ ಜಾಗತಿಕಮಟ್ಟದಲ್ಲಿ ಭಾರತಕ್ಕೆ ಬಹುದೊಡ್ಡ ವರ್ಚಸ್ಸನ್ನು ತಂದುಕೊಟ್ಟಿದ್ದ ಬೆಳವಣಿಗೆ ಎಂದರೆ ರಾಜತಾಂತ್ರಿಕ ಬಾಂಧವ್ಯಗಳ ಸ್ಥಾಪನೆಯಲ್ಲಿ ಅದು ಮುಂಚೂಣಿಗೆ ಬಂದಿದ್ದ ರೀತಿ. ಭಾರತವು ಜಗತ್ತಿನ ಯಾವುದೇ ದೇಶದ ಮಾತು ಕೇಳಿಸುತ್ತದೆ ಇಲ್ಲವೇ ತನಗೆ ಸಮಸ್ಯೆ ಆಗಿರುವಲ್ಲಿ ಆಕ್ರಮಣಶೀಲತೆ ತೋರಿಸಿ ಪರಿಹಾರ ದೊರಕಿಸಿಕೊಳ್ಳುತ್ತದೆ ಎಂಬ ಗ್ರಹಿಕೆಯೊಂದು ನೆಲೆಗೊಳ್ಳುವಂತೆ ಆಗಿತ್ತು. ಕೋವಿಡ್ ಥರದ ಸಂಕಷ್ಟಗಳು ಬಂದಾಗ ಮತ್ಯಾವುದೇ ಸೂಪರ್ ಪವರ್ ಎಂದು ಕರೆಸಿಕೊಳ್ಳುವ ದೇಶಗಳಿಗಿಂತ ಭಾರತವೇ ಸಹಾಯಕ್ಕೆ ಬರುತ್ತದೆ ಎಂಬ ಭಾವನೆ ಸಹ ಗಟ್ಟಿಯಾಗಿತ್ತು. ಆದರೆ, ಇತ್ತೀಚಿನ ಕೆಲವು ತಿಂಗಳುಗಳಲ್ಲಿ ನಡೆದಿರುವ ವಿದ್ಯಮಾನಗಳು ಭಾರತದ ಅಂಥದೊಂದು ಜಾಗತಿಕ ವರ್ಚಸ್ಸಿಗೆ ಅಕ್ಕಪಕ್ಕದಲ್ಲೇ ಹೊಡೆತ ಬಿದ್ದಿರುವುದನ್ನು ನಿರೂಪಿಸುತ್ತವೆ. ಭಾರತದ ನೆರೆಯ ಪಾಕಿಸ್ತಾನ ಮತ್ತು ಚೀನಾಗಳನ್ನು ಭಾರತವು ಯಾವತ್ತಿಗೂ ಘನಮಿತ್ರ ಎಂದೇನೂ ಎಣಿಸುವ ಸ್ಥಿತಿಯಲ್ಲಿರಲಿಲ್ಲ. ಆದರೆ, ಅವನ್ನು ಹೊರತಾಗಿಸಿದ ಇತರ ನೆರೆಯವರಲ್ಲೂ ಈಗ ಭಾರತ ವಿರೋಧಿ ಕಂಪನಗಳು ದಟ್ಟವಾಗಿರುವುದು ಆತಂಕದ ವಿಷಯ. 

ಭಾರತಕ್ಕೆ ತಲೆನೋವಾಗಿರುವ ನೇಪಾಳದ ನಡೆಗಳು

2008ರಲ್ಲಿ ನೇಪಾಳದಲ್ಲಿ ರಾಜಸತ್ತೆ ಕೊನೆಗೊಂಡು ಕಮ್ಯುನಿಸ್ಟ್ ಶಕ್ತಿಗಳು ಅಧಿಕಾರ ಹಿಡಿದಾಗಿನಿಂದಲೂ ಭಾರತ ಮತ್ತು ನೇಪಾಳಗಳ ನಡುವೆ ವಿಶ್ವಾಸ ಕದಡಿದ ಸ್ಥಿತಿಯೇ ಇದೆ. ಆದರೆ ಸಾಂಸ್ಕೃತಿಕವಾಗಿ ನೇಪಾಳಕ್ಕೆ ಭಾರತದಿಂದ ಬಿಡಿಸಿಕೊಳ್ಳಲಾಗದ ರೀತಿಯಲ್ಲಿ ಬೇರುಗಳಿವೆ. ಹಾಗೆಂದೇ, ಕಮ್ಯುನಿಸ್ಟ್ ನಾಯಕರೇ ಅಧಿಕಾರಶೃಂಗದಲ್ಲಿ ಕುಳಿತಾಗಲೂ ಭಾರತದೊಂದಿಗೆ ಸಂಬಂಧ ಸುಧಾರಿಸಿಕೊಳ್ಳುತ್ತ ಸಾಗಿದರು. ಭಾರತ ಸಹ ನೇಪಾಳದಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಕೈಗೊಂಡಿತಲ್ಲದೇ, ಸಾಲ ಹಾಗೂ ನೈಸರ್ಗಿಕ ವಿಪತ್ತುಗಳು ಸಂಭವಿಸಿದಾಗ ಸಹಾಯ ನೀಡುವಲ್ಲಿ ಮುಂಚೂಣಿಯಲ್ಲೇ ಇದೆ. 

ಆದರೆ, ಸ್ವಾತಂತ್ರ್ಯಪೂರ್ವದಿಂದಲೂ ನೇಪಾಳಕ್ಕೆ ಭಾರತವು ತನ್ನ ವಿಷಯದಲ್ಲಿ ದೊಡ್ಢಣ್ಣನಂತೆ ವರ್ತಿಸುವುದಕ್ಕೆ ಬಿಡಬಾರದು ಎಂಬ ಬಿಗುಮಾನಯುಕ್ತ ಎಚ್ಚರಿಕೆ. ಬ್ರಿಟಿಷರು ಗೊರ್ಖಾಗಳನ್ನು ಸೇನೆಯಲ್ಲಿ ಪ್ರಾಶಸ್ತ್ಯದಿಂದಿರಿಸಿಕೊಳ್ಳುತ್ತಿದ್ದ ಕಾರಣ, ಕಾರ್ಯತಂತ್ರದ ದೃಷ್ಟಿಯಿಂದ ಸ್ವಾತಂತ್ರ್ಯಪೂರ್ವದ ನೇಪಾಳದ ಅಂದಿನ ರಾಜಸತ್ತೆಯು ಬ್ರಿಟಿಷ್ ಹಿತಾಸಕ್ತಿಗಳ ಜತೆಯೇ ಹೆಚ್ಚಿನದಾಗಿ ಗುರುತಿಸಿಕೊಂಡಿತ್ತು.

ಇದೀಗ ವರ್ತಮಾನಕ್ಕೆ ಬಂದರೆ, ಚೀನಾವು ಪ್ರಬಲವಾಗುತ್ತಲೇ ನೇಪಾಳವು ಅತ್ತ ವಾಲುತ್ತ ಭಾರತವನ್ನು ಒಂದರ್ಥದಲ್ಲಿ ಬ್ಲಾಕ್ಮೇಲ್ ಮಾಡುತ್ತಿದೆ. ಈ ನೇಪಾಳ ಮತ್ತು ಶ್ರೀಲಂಕಾದಂಥ ದೇಶಗಳು ಲಾಗಾಯ್ತಿನಿಂದಲೂ ಇಂಥದೊಂದು ಆಟವನ್ನು ತಮ್ಮ ಲಾಭಕ್ಕಾಗಿ ಆಡಿಕೊಂಡುಬಂದಿವೆ. ಚೀನಾದ ಕಡೆ ವಾಲುವುದು ಬೇಡ ಎಂದು ಭಾರತವು ಇವುಗಳಿಗೆ ಯೋಜನೆಗಳನ್ನು ಹರಿಸುತ್ತದೆ ಹಾಗೂ ಇವು ಭಾರತದತ್ತ ವಾಲುವುದನ್ನು ತಪ್ಪಿಸುವುದಕ್ಕೆ ಚೀನಾ ಸಾಲ ಕೊಡುತ್ತದೆ. ಈ ಪೈಪೋಟಿಯನ್ನು ತಮ್ಮ ಲಾಭಕ್ಕೆ ದುಡಿಸಿಕೊಳ್ಳುವ ಹಂತದಲ್ಲಿ ಅಲ್ಲಿನ ರಾಜಕಾರಣವು ಕೆಲವೊಮ್ಮೆ ಅತಿಯಾದ ಅವಕಾಶವಾದಿತನವನ್ನು ಪ್ರದರ್ಶಿಸುತ್ತದೆ.

ನೇಪಾಳದ ವಿಚಾರದಲ್ಲಿ ಮೊನ್ನೆ ಆಗಿರುವುದೂ ಅದೇ. ಇತ್ತೀಚೆಗೆ ನೇಪಾಳದಲ್ಲಿ ಕೆಪಿ ಶರ್ಮ ಒಲಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ನೇಪಾಳದಲ್ಲಿ ಯಾರೇ ಹೊಸದಾಗಿ ಅಧಿಕಾರಕ್ಕೆ ಬಂದರೂ ಅವರ ಮೊದಲ ಭೇಟಿ ಭಾರತಕ್ಕಾಗಿರುತ್ತದೆ. ಇದೊಂದು ಸಂಪ್ರದಾಯ. ನೇಪಾಳದಲ್ಲಿ ಪ್ರತಿ ಅವಧಿಗೆ ಚುನಾವಣೆ ಎದುರಿಸಿ ಆಯ್ಕೆಯಾದವರು ಬಹುತೇಕ ಈ ಸಂಪ್ರದಾಯ ಪಾಲಿಸಿದ್ದಾರೆ. ಆದರೆ ಈ ಬಾರಿ ನೇಪಾಳದ ಪ್ರಧಾನಿ ಕೆಪಿ ಶರ್ಮ ಒಲಿ ತಮ್ಮ ಮೊದಲ ರಾಜತಾಂತ್ರಿಕ ಭೇಟಿಯನ್ನು ಚೀನಾಕ್ಕೆ ನೀಡುವುದರ ಮೂಲಕ ನವದೆಹಲಿಗೆ ಸಂಕಷ್ಟದ ಸೂಚನೆಯೊಂದನ್ನು ರವಾನಿಸಿದ್ದಾರೆ. ಈಗ ಎಂಟು ವರ್ಷದ ಹಿಂದೆ ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆ ಸೇರಿಕೊಳ್ಳುವುದಕ್ಕೆ ನೇಪಾಳ ತಾತ್ತ್ವಿಕ ಒಪ್ಪಿಗೆ ನೀಡಿತ್ತು. ಈ ಬಾರಿಯ ಬೀಜಿಂಗ್ ಭೇಟಿಯಲ್ಲಿ ಚೀನಾದ ಅಧ್ಯಕ್ಷರ ಕೈಕುಲುಕಿರುವ ಒಲಿ, ಈ ಯೋಜನೆಗಳ ಅನುಷ್ಠಾನಕ್ಕೆ ಚೌಕಟ್ಟು ರೂಪಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಹೀಗಾಗಿ ನೇಪಾಳದಲ್ಲಿ ಚೀನಾ ತನ್ನ ಸ್ಥಾನ ಬಲಪಡಿಸಿಕೊಳ್ಳುವ ಸನ್ನಿವೇಶ ಖಾತ್ರಿಯಾಗಿದೆ. ಭಾರತಕ್ಕಿದು ಹಿನ್ನಡೆಯ ವಿಷಯವೇ ಸರಿ. 

 ಮತ್ತೆ ಮಿಸುಕಾಡಿದೆ ಶ್ರೀಲಂಕಾ

ಮೊದಲೇ ಹೇಳಿದಂತೆ ಶ್ರೀಲಂಕಾವೆಂಬ ದ್ವೀಪರಾಷ್ಟ್ರ ಮೊದಲಿನಿಂದಲೂ ಭಾರತ ಹಾಗೂ ಚೀನಾಗಳೆರಡನ್ನೂ ತನ್ನ ಲಾಭಕ್ಕೆ ಬೇಕಾದಂತೆ ಬಳಸಿಕೊಳ್ಳುತ್ತಲೇ ಇದೆ. ಆದರೆ, ಈಗೆರಡು ವರ್ಷಗಳ ಹಿಂದೆ ಅದು ಆರ್ಥಿಕ ದಿವಾಳಿತನ ಹಾಗೂ ರಾಜಕೀಯ ಅರಾಜಕತೆಗೆ ಜಾರಿದಾಗ ಬೇರೆಲ್ಲ ದೇಶಗಳಿಗಿಂತ ಮುಂಚೂಣಿಯಲ್ಲಿ ನಿಂತು ಜೀವದಾನ ಮಾಡಿದ್ದು ಭಾರತವೇ. ಆ ಸಂದರ್ಭದಲ್ಲೇನೋ ಶ್ರೀಲಂಕಾದ ರಾಜಕಾರಣಿಗಳು, ಕ್ರಿಕೆಟ್ ಸೆಲಿಬ್ರಿಟಿಗಳೆಲ್ಲ ಭಾರತವನ್ನು ಬಹಳವೇ ಹೊಗಳಿದರು. ಆದರೆ, ಯಾವಾಗ ಅಮೆರಿಕದ ಡೀಪ್ ಸ್ಟೇಟ್ ಅದಾನಿ ಉದ್ಯಮದ ಮೇಲೆ ಪ್ರಶ್ನೆಗಳೇಳುವಂತೆ ಮಾಡಿ ಅದರ ಜಾಗತಿಕ ಮೂಲಸೌಕರ್ಯ ಯೋಜನೆಗಳಿಗೆ ಹಿನ್ನಡೆಯಾಗುವಂತೆ ಮಾಡಿತೋ, ಇದೇ ಧ್ವನಿಗೆ ತಕ್ಕಂತೆ ತನ್ನ ಧ್ವನಿಯನ್ನೂ ಸೇರಿಸುವುದಕ್ಕೆ ಹೊರಟಿದೆ ಶ್ರೀಲಂಕಾ.

ಶ್ರೀಲಂಕಾ ತಾನು ಖುದ್ದು ಕುಸಿದು ಕುಳಿತಿರುವುದರಲ್ಲಿ ಭ್ರಷ್ಟಾಚಾರದ ಪಾತ್ರ ದೊಡ್ಡದಿದೆ. ಹಾಗಿರುವಾಗ ಈಗದಕ್ಕೆ ಅದಾನಿ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದೆಯೇ ಎಂದು ತನಿಖೆ ಮಾಡುವ ಉತ್ಸಾಹ ಬಂದಿದೆ. ಕೊಲಂಬೊದ ಸರಕು ಸಾಗಾಣಿಕೆ ಬಂದರಿನ ಅಭಿವೃದ್ಧಿಗೆ ಸ್ಥಳೀಯ ಕಂಪನಿಯೊಂದಿಗೆ ಜಂಟಿ ಒಪ್ಪಂದದಲ್ಲಿರುವ ಅದಾನಿ ಸಮೂಹ ಅದರಲ್ಲಿ ಶೇ. 51ರ ಪಾಲು ಹೊಂದಿದೆ. ಅಮೆರಿಕದಲ್ಲಿ ಅದಾನಿ ಸಮೂಹದ ಮೇಲಿನ ಆರೋಪಗಳು ಕೇಳಿಬರುತ್ತಲೇ ಶ್ರೀಲಂಕಾದ ರಾಜಕಾರಣವೂ ಒತ್ತಡಕ್ಕೆ ಸಿಲುಕಿದೆ. ಏಕೆಂದರೆ, ಈಗಿರುವ ಆಡಳಿತಾರೂಢ ಬಣದ ನೇತಾರರು ಚುನಾವಣೆ ವೇಳೆ ಶ್ರೀಲಂಕಾದಲ್ಲಿ ಅದಾನಿ ಸಮೂಹದ ಉಪಸ್ಥಿತಿ ಬಗ್ಗೆ ಭಾರಿ ಪ್ರಶ್ನೆಗಳನ್ನೇ ಎತ್ತಿದ್ದರು. ಅಧಿಕಾರಕ್ಕೆ ಬಂದ ನಂತರ ನಿಲವು ಬದಲಾಯಿಸಿ ಆ ಯೋಜನೆ ಮುಂದುವರಿಸಿದರು. ಇದೀಗ, ಕೊಲಂಬೊ ಬಂದರು ಅಭಿವೃದ್ಧಿ ಒಪ್ಪಂದದಿಂದ ಶ್ರೀಲಂಕಾವು ಹಿಂತೆಗೆಯುವ ಸಾಧ್ಯತೆಯೇನೋ ಕಡಿಮೆ. ಏಕೆಂದರೆ ಇಲ್ಲಿ ಅದಾನಿ ಸಮೂಹಕ್ಕೆ ಅಮೆರಿಕದ ಹೂಡಿಕೆಯೂ ಇದೆ. ಆದರೆ, 440 ಮಿಲಿಯನ್ ಡಾಲರುಗಳ 20 ವರ್ಷಗಳ ವಿದ್ಯುತ್ ಯೋಜನೆಯನ್ನು ಅಲ್ಲಿನ ಸರ್ಕಾರ ಮರುಪರಿಶೀಲನೆಯಲ್ಲಿರಿಸಿದೆ. ಭಾರತಕ್ಕೆ ಸೇರಿದ ಖಾಸಗಿ ಉದ್ಯಮವೊಂದನ್ನು ಹೊರಗಿಡುವುದಕ್ಕೆ ಪ್ರಯತ್ನಿಸುವುದೆಂದರೆ ಅದರರ್ಥ ಪರೋಕ್ಷವಾಗಿ ತನ್ನ ನೆಲದಲ್ಲಿ ಭಾರತದ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳುವುದು ಎಂಬುದೇ ಆಗಿದೆ. ಹೀಗೆ ಶ್ರೀಲಂಕಾದಲ್ಲಿ ಭಾರತದ ಪ್ರಭಾವ ತಗ್ಗಿದೆಡೆಗಳಲ್ಲೆಲ್ಲ ಚೀನಾ ಆವರಿಸಿಕೊಳ್ಳುತ್ತದೆ ಎಂಬುದು ಜಾಗತಿಕ ರಾಜಕಾರಣದ ವಾಸ್ತವ. 

ಮಣಿಪುರದ ಬೆಂಕಿಯ ಹಿಂದೆ ಮ್ಯಾನ್ಮಾರ್

ಕೇಂದ್ರದಲ್ಲಿ ಮೋದಿ ಸರ್ಕಾರ ಬರುವುದಕ್ಕೂ ಮುಂಚೆ ಇಡೀ ಈಶಾನ್ಯ ಭಾರತವೇ ದೊಂಭಿ, ಬಂದ್, ನಕ್ಸಲ್ ಹಿಂಸಾಚಾರ ಇತ್ಯಾದಿಗಳಿಗೆ ಸುದ್ದಿಯಲ್ಲಿರುತ್ತಿತ್ತು. 2014ರಿಂದೀಚೆ ಅಲ್ಲಿ ಆಗಿರುವ ರಾಜಕೀಯ ಬದಲಾವಣೆಗಳು, ಬೃಹತ್ ಮೂಲಸೌಕರ್ಯಗಳು ಹಾಗೂ ನಕ್ಸಲ್ ನಿಗ್ರಹದ ಕಾರಣಗಳಿಂದ ಈಶಾನ್ಯದ ರಾಜ್ಯಗಳೆಲ್ಲ ಬಹುತೇಕ ಶಾಂತವಾಗಿದ್ದವು. ಹೀಗೆ ಈಶಾನ್ಯವನ್ನು ಶಾಂತವಾಗಿರಿಸುವಲ್ಲಿ ಭಾರತದ ಗಡಿ ಹಂಚಿಕೊಂಡಿರುವ ಮ್ಯಾನ್ಮಾರ್ ಸಹಕಾರವೂ ದೊಡ್ಡ ಕೊಡುಗೆ ಕೊಟ್ಟಿತ್ತು. 2015ರಲ್ಲಿ ಭಾರತೀಯ ಸೇನೆಯು ಮ್ಯಾನ್ಮಾರಿನಲ್ಲಿ ಅವಿತಿದ್ದ ಭಾರತದ ಬಂಡುಕೋರ ಗುಂಪುಗಳನ್ನು ಗಡಿದಾಟಿ ಬೇಟೆ ಆಡಿದ್ದು ಇದಕ್ಕೊಂದು ಉದಾಹರಣೆ. 

ಆದರೆ, ಅದೇ ಮ್ಯಾನ್ಮಾರ್ ಮೂಲದಿಂದಲೇ ಈಗ ಮಣಿಪುರದಲ್ಲಿ ಮತ್ತೆ ಅಶಾಂತಿ ಭುಗಿಲೆದ್ದಿದೆ. 2023ರ ಮೇನಲ್ಲಿ ಕುಕಿ ಮತ್ತು ಮೈತೇಯಿಗಳ ನಡುವೆ ಸಂಘರ್ಷ ತಾರಕಕ್ಕೇರಿದ್ದು ಕೆಲತಿಂಗಳ ನಂತರ ತಹಬಂದಿಗೆ ಬಂದಿತ್ತು. ಮತ್ತೀಗ ಮಣಿಪುರದಲ್ಲಿ ಎದ್ದಿರುವ ಹಿಂಸೆಯ ಹಿಂದೆ ಕುಕಿಗಳಿಗೆ ಬೆಂಬಲವಾಗಿ ನಿಂತಿರುವ, ಮ್ಯಾನ್ಮಾರಿನಿಂದ ಒಳನುಸುಳಿರುವ ದೊಡ್ಡಜನಸಮೂಹವಿದೆ ಎಂಬ ಸ್ಫೋಟಕ ಹೇಳಿಕೆಯನ್ನು ಮುಖ್ಯಮಂತ್ರಿಯೇ ನೀಡಿದ್ದಾರೆ. ಈ ಬಾರಿ ಮ್ಯಾನ್ಮಾರ್ ನೆಲದಿಂದ ವ್ಯಕ್ತವಾಗುತ್ತಿರುವ ರಾಜಕೀಯ ಹೇಳಿಕೆಗಳು ಭಾರತದ ಬಗ್ಗೆ ಕಟುತನವನ್ನೇ ಹೊಂದಿವೆ ಎಂಬುದು ಪರಿಸ್ಥಿತಿ ಆತಂಕಕಾರಿಯಾಗಿ ಬದಲಾಗಿರುವುದರ ಸೂಚನೆ. 

ಬಾಂಗ್ಲಾದೇಶದಲ್ಲಿ ಕೊನೆಗೂ ನಕ್ಕ ಪಾಕಿಸ್ತಾನ?

1971ರಲ್ಲಿ ಪಾಕಿಸ್ತಾನದ ಆಳ್ವಿಕೆಯಿಂದ ಬೇರ್ಪಡಿಸಿ ಬಾಂಗ್ಲಾ ವಿಮೋಚನೆ ಮಾಡಿದ್ದೇ ಭಾರತ. ಶೇಖ್ ಹಸೀನಾ ಅವರ ಆಡಳಿತವಿದ್ದಷ್ಟು ದಿನ ಬಹುಮಟ್ಟಿಗೆ ಅಲ್ಲಿನ ಮತಾಂಧತೆ ಹತೋಟಿಯಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಚೀನಾದತ್ತ ವಾಲಿದ್ದ ಹಸೀನಾರ ನಡೆಯ ಹೊರತಾಗಿಯೂ, ಅಲ್ಲಿ ಹಿಂದುಗಳ ಮೇಲೆ ಅತ್ಯಾಚಾರ ಮಾಡಿದ್ದವರಿಗೆ ಗಲ್ಲು ಶಿಕ್ಷೆಯಾಗುವಷ್ಟರಮಟ್ಟಿಗೆ ಸಮಾಧಾನದ ಸ್ಥಿತಿ ಇತ್ತು.  

ಯಾವಾಗ ಅಮೆರಿಕದ ಡೀಪ್ ಸ್ಟೇಟ್ ಅಲ್ಲಿ ಹಸೀನಾರನ್ನು ಪದಚ್ಯುತಗೊಳಿಸಿ ಮೊಹಮ್ಮದ್ ಯೂನಸ್ಸರನ್ನಿರಿಸಿತೋ ಅಂದಿನಿಂದ ಅಲ್ಲಿ ಅಳಿದುಳಿದ ಹಿಂದುಗಳ ಮಾರಣಹೋಮ, ಅವಮಾನಗಳೇ ಆಗುತ್ತಿವೆ. ಜನವರಿ ಮಧ್ಯಭಾಗದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಮೇಲೆ ಮೊಹಮ್ಮದ್ ಯೂನಸ್ಸಿಗೆ ಅಮೆರಿಕದಿಂದ ಸಿಗುತ್ತಿರುವ ಬೆಂಬಲ ಕಡಿಮೆಯಾಗಬಹುದು ಎಂಬ ವಿಶ್ಲೇಷಣೆಗಳಿವೆ. ಆದರೆ, ಇಸ್ಲಾಂ ತೀವ್ರವಾದ ಎಂಬುದು ಒಂದು ಉನ್ಮಾದ. ಬಾಂಗ್ಲಾದೇಶ ಅದರ ತೆಕ್ಕೆಗೆ ಬಿದ್ದಾಗಿದೆ. ಇನ್ನಲ್ಲಿ ಯೂನಸ್ ಇದ್ದರೂ, ಮತ್ಯಾರೂ ಬಂದರೂ ಹಿಂದುಗಳ ಸ್ಥಿತಿ ಮತ್ತೆ ಸಮಾಧಾನದ ಹಳಿಗೆ ಬರುವ ಲಕ್ಷಣಗಳೇನೂ ಕಾಣುತ್ತಿಲ್ಲ. ಅಲ್ಲಿಗೆ, ಯಾವುದರಿಂದ ಅವತ್ತಿನ ಪೂರ್ವ ಪಾಕಿಸ್ತಾನವು ಸ್ವಾತಂತ್ರ್ಯವನ್ನು ಬಯಸಿತ್ತೋ, ಯಾವ ಪಾಕಿಸ್ತಾನದಿಂದ ಆಗುತ್ತಿದ್ದ ಮಾನಭಂಗ ಮತ್ತು ಕೊಲೆಗಳಿಗೆ ಪರಿಹಾರವನ್ನು ಕೇಳಿತೋ ಅಂಥ ಬಾಂಗ್ಲಾದೇಶವೀಗ ತನ್ನ ಅತ್ಯಾಚಾರಿಯನ್ನೇ ಅಪ್ಪಿಕೊಂಡು ಭಾರತವನ್ನು ವಿಲನ್ ಮಾಡುತ್ತಿದೆ. 

ಪಾಕಿಸ್ತಾನ ಮತ್ತು ಚೀನಾಗಳು ಭಾರತಕ್ಕೆ ಯಾವತ್ತಿಗೂ ಪ್ರತಿಕೂಲವೇ ಆಗಿರುವ ತಥ್ಯವನ್ನು ಹೆಚ್ಚು ವಿವರಿಸಬೇಕಿಲ್ಲ. ಭಾರತದ ನೈರುತ್ಯಕ್ಕಿರುವ ದ್ವೀಪರಾಷ್ಟ್ರ ಮಾಲ್ಡೀವ್ಸ್ ಸಹ ಕಳೆದೊಂದು ವರ್ಷದಲ್ಲಿ ಚೀನಾದ ತೆಕ್ಕೆಯಲ್ಲಿರಿಸಿಕೊಂಡಿದೆ. ಇದ್ದಿದ್ದರಲ್ಲಿ ಭಾರತಕ್ಕೆ ಪ್ರತಿಕೂಲವಾಗದೇ ಸದ್ಯಕ್ಕುಳಿದಿರುವುದು ಭೂತಾನ್. ಹೀಗಾಗಿ, 2025ರ ವರ್ಷದಲ್ಲಿ ಭಾರತವನ್ನು ಕೇಂದ್ರವಾಗಿರಿಸಿಕೊಂಡು ಅದರ ಪಕ್ಕಕ್ಕಿರುವ ಯಾವ ಮನೆಗಳನ್ನು ಗಮನಿಸಿದರೂ ‘ರಾಹುಕಾಲ’ವೇ ಕವಿದಂತಿದೆ.

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT