ಒಣ ಚರ್ಮ online desk
ಅಂಕಣಗಳು

ಚಳಿಗಾಲದಲ್ಲಿ ಚರ್ಮದ ಆರೈಕೆ (ಕುಶಲವೇ ಕ್ಷೇಮವೇ)

ಚಳಿಗಾಲದಲ್ಲಿ ಚರ್ಮವು ತೇವಾಂಶವನ್ನು ತ್ವರಿತವಾಗಿ ಕಳೆದುಕೊಳ್ಳುವುದರಿಂದ ಅದನ್ನು ಪರಿಣಾಮಕಾರಿಯಾಗಿ ಮೃದುವಾಗಿ ತೇವಾಂಶದಿಂದ ಇರುವಂತೆ ಮಾಡುವ ಮುಲಾಮನ್ನು ಬಳಸುವುದು ಹಿತಕಾರಿ.

ಇದೀಗ ತಾನೇ ಚಳಿಗಾಲ ಆರಂಭವಾಗಿದೆ. ಜೊತೆಗೆ ಅದಕ್ಕೆ ತಕ್ಕಂತೆ ವಾತಾವರಣದಲ್ಲಿ ಬದಲಾವಣೆ ಕಂಡುಬರುತ್ತಿದೆ. ಹೊರಗಿನ ತಾಪಮಾನ ಹೆಚ್ಚು ಕಡಿಮೆಯಾಗದಿದ್ದರೂ ತಂಪಾಗಿ ಮತ್ತು ಕೆಲವೊಮ್ಮೆ ಒಣಗಿದಂತೆಯೂ ಇರಬಹುದು. ಇದರಿಂದ ನಮ್ಮ ಚರ್ಮ ಒಣಗುತ್ತದೆ. ಇದಲ್ಲದೇ ತೇವಾಂಶ ಮತ್ತು ತಂಪಾದ ಗಾಳಿ ಚರ್ಮದ ನಿರ್ಜಲೀಕರಣ, ಒರಟುತನ ಮತ್ತು ಕಿರಿಕಿರಿಗೆ ಕಾರಣವಾಗಬಹುದು. ಹೀಗಾದಾಗ ಚರ್ಮವನ್ನು ನಯವಾಗಿ ಮತ್ತು ಅರೋಗ್ಯವಾಗಿಟ್ಟುಕೊಳ್ಳುವುದು ಬಹಳ ಮುಖ್ಯ.

ಚರ್ಮದ ನಿರ್ಜಲೀಕರಣ

ಚಳಿಗಾಲದಲ್ಲಿ ಚರ್ಮವು ತೇವಾಂಶವನ್ನು ತ್ವರಿತವಾಗಿ ಕಳೆದುಕೊಳ್ಳುವುದರಿಂದ ಅದನ್ನು ಪರಿಣಾಮಕಾರಿಯಾಗಿ ಮೃದುವಾಗಿ ತೇವಾಂಶದಿಂದ ಇರುವಂತೆ ಮಾಡುವ ಮುಲಾಮನ್ನು ಬಳಸುವುದು ಹಿತಕಾರಿ. ಜೊತೆಗೆ ವಯಸ್ಸಾದಂತೆ ನಮ್ಮ ಚರ್ಮವು ಕಡಿಮೆ ಎಣ್ಣೆಯನ್ನು ಉತ್ಪಾದಿಸುತ್ತದೆ ಮತ್ತು ಶುಷ್ಕತೆಗೆ ಹೆಚ್ಚು ಒಳಗಾಗುತ್ತದೆ. ತಂಪು ವಾತಾವರಣ ಚರ್ಮದ ಮೇಲೆ ಕಠಿಣ ಪರಿಣಾಮ ಬೀರಬಹುದು. ಆಗ ಚರ್ಮಕ್ಕೆ ಅಗತ್ಯವಿರುವ ತೇವಾಂಶ ಕಡಿಮೆಯಾಗಿ ಚರ್ಮ ಒಣಗುತ್ತದೆ.

ಕೆಲವೊಮ್ಮೆ ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯು ಚರ್ಮದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಜೊತೆಗೆ ಒತ್ತಡ ಮತ್ತು ನಿದ್ರೆಯ ಕೊರತೆಯಂತಹ ಇತರ ಜೀವನಶೈಲಿಯ ಅಂಶಗಳಿಗೆ ಕಾರಣವಾಗಬಹುದು. ಇದಲ್ಲದೇ ಎಕ್ಸಿಮಾ, ಸೋರಿಯಾಸಿಸ್ ಮತ್ತು ಡರ್ಮಟೈಟಿಸ್‌ನಂತಹ ಪರಿಸ್ಥಿತಿಗಳು ಕೂಡ ಚರ್ಮವು ಒಣಗಲು ಕಾರಣವಾಗಬಹುದು.

ಒಣ ಚರ್ಮ ಸಮಸ್ಯೆಗೆ ಪರಿಹಾರ

ಶುದ್ಧವಾದ ತೆಂಗಿನ ಎಣ್ಣೆ, ಹರಳೆಣ್ಣೆ, ಎಳ್ಳೆಣ್ಣೆ, ಬಾದಾಮಿ ಎಣ್ಣೆ, ತುಪ್ಪ, ಜೇನುತುಪ್ಪ ಅಥವಾ ಬೆಣ್ಣೆಯನ್ನು ಒಣ ಚರ್ಮ, ಒಡೆದ ಹಿಮ್ಮಡಿಗಳು, ಕೈಗಳು ಮತ್ತು ತುಟಿಗಳಿಗೆ ಹಚ್ಚಿಕೊಳ್ಳುವುದು ಈ ಸಮಸ್ಯೆಗೆ ಉತ್ತಮ ಪರಿಹಾರವಾಗಿದೆ. ಇತ್ತೀಚೆಗೆ ಸಾವಯವ (ಆರ್ಗಾನಿಕ್) ರೀತಿಯಲ್ಲಿ ಈ ಎಣ್ಣೆಗಳನ್ನು ತಯಾರಿಸುತ್ತಾರೆ. ಅವುಗಳನ್ನು ಬಳಸಿದರೂ ಸರಿಯೇ. ಕಾಲಿನಲ್ಲಿ ತೊಂದರೆಯಿದ್ದರೆ ದಪ್ಪ ಮತ್ತು ಮೃದುವಾಗಿರುವ ಕಾಲುಚೀಲ ಧರಿಸಬೇಕು.

ಸ್ನಾನದ ನಂತರ ಚರ್ಮದಲ್ಲಿ ತೇವಾಂಶವನ್ನು ಕಾಯ್ದುಕೊಳ್ಳಲು ಯಾವುದಾದರೂ ಶುದ್ಧ ಎಣ್ಣೆಯನ್ನು ಚರ್ಮಕ್ಕೆ ನಿಧಾನವಾಗಿ ಮಸಾಜ್ ಮಾಡಬಹುದು. ಒಣ ಪ್ರದೇಶಗಳಲ್ಲಿ ವಾಸಿಸುವವರಿಗೆ ಎಳ್ಳಿನ ಎಣ್ಣೆಯು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಮಾಡುವುದರಿಂದ ಚರ್ಮ ಒಣಗುವುದು ಮಾತ್ರವಲ್ಲದೆ ಚರ್ಮದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ

ಕಡಲೆ ಹಿಟ್ಟನ್ನು ಕೆನೆಭರಿತ ಹಾಲಿನಲ್ಲಿ ಕಲಸಿ ಮುಖ ಮತ್ತು ಕೈಕಾಲುಗಳಿಗೆ ಲೇಪಿಸಿ ಹದಿನೈದು ನಿಮಿಷ ಬಿಟ್ಟು ಬೆಚ್ಚನೆಯ ತೊಳೆದರೆ ಉತ್ತಮ. ಪ್ರತಿನಿತ್ಯ ಸೋಪುಗಳನ್ನು ಬಳಸುವ ಬದಲು ಕೆಲವೊಮ್ಮೆ ಹಾಲಿನೊಂದಿಗೆ ಕಡಲೆಹಿಟ್ಟು ಬೆರೆಸಿ ಬಳಸಿ ಚರ್ಮವನ್ನು ಸ್ವಚ್ಛಗೊಳಿಸಬೇಕು. ಲೋಳೆಸರ (ಅಲೋವಿರಾ) ರಸವನ್ನು ಚರ್ಮಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ತೊಳೆಯಬೇಕು. ಪಪ್ಪಾಯ ಪೇಸ್ಟ್ಗೆ ಮೊಸರು, ಜೇನುತುಪ್ಪ ಮತ್ತು ನಿಂಬೆರಸ ಸೇರಿಸಿ ಚರ್ಮಕ್ಕೆ ಲೇಪಿಸಿ ಹತ್ತು ನಿಮಿಷದ ನಂತರ ತಣ್ಣೀರಿನಲ್ಲಿ ತೊಳೆದರೆ ಒಣ ಚರ್ಮ ಮೃದುವಾಗುತ್ತದೆ.

ಒಣ ಚರ್ಮ ತಡೆಗಟ್ಟಲು ಮನೆಮದ್ದು

ಒಣ ಚರ್ಮ ತಡೆಗಟ್ಟಲು ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಮತ್ತು ಹೆಚ್ಚು ಪ್ರೋಟೀನ್‌ಯುಕ್ತ ಆಹಾರ ಸೇವನೆ ಬಹಳ ಮುಖ್ಯ. ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಚರ್ಮ ಒಣಗದಂತೆ ನೋಡಿಕೊಳ್ಳಬೇಕು. ಮನೆ ಅಥವಾ ಕಚೇರಿಯಲ್ಲಿ ಮಾಯಿಶ್ಚರೈಸರನ್ನು ಸದಾ ಕಾಲ ಹಚ್ಚಿಕೊಂಡಿರಬೇಕು. ಚರ್ಮದ ಮೃದುತ್ವ ಕಾಪಾಡಲು ಒಮೆಗಾ 3 ಅಂಶ ಇರುವ ಆಹಾರ ಸೇವಿಸುವುದು, ಪ್ರತಿದಿನ ವ್ಯಾಯಾಮ ಮಾಡುವುದು ಮತ್ತು ಪ್ರತಿನಿತ್ಯ ಬೆಳಗಿನ ಸೂರ್ಯ ಕಿರಣಗಳಿಗೆ ದೇಹವನ್ನು ಒಡ್ಡುವುದು ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮ.

ಚರ್ಮದ ತೇವಾಂಶ ಕಾಪಾಡಿಕೊಳ್ಳಲು ಆಹಾರದ ಕ್ರಮ

ಆಹಾರದಲ್ಲಿ ತೈಲದ ಅಂಶವಿರುವ ಬಾದಾಮಿ, ಕಡಲೆಕಾಯಿ ಬೀಜ ಮತ್ತು ಎಳ್ಳು ಸೇವನೆ ಬಹಳ ಮುಖ್ಯ. ಇದಲ್ಲದೇ ಮಕ್ಕಳಿಗೆ ವಾರಕ್ಕೊಮ್ಮೆಯಾದರೆ ಮೈಗೆಲ್ಲಾ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ತಲೆಗೆ ಮತ್ತು ಮೈಗೆ ಹಚ್ಚಿ ಕನಿಷ್ಠ ಒಂದೆರಡು ಗಂಟೆಗಳ ಕಾಲ ಬಿಟ್ಟು ಸ್ನಾನ ಮಾಡಿಸಬೇಕು, ದೊಡ್ಡವರೂ ಹೀಗೆ ಎಣ್ಣೆ ಹಚ್ಚಿಕೊಂಡು ಸ್ನಾನ ಕೂಡ ಮಾಡಬಹುದು.

ಶುಂಠಿ, ಅರಿಶಿನ, ಅಥವಾ ತುಳಸಿಯಿಂದ ಮಾಡಿದ ಚಹಾ ಸಹ ಕುಡಿಯಬಹುದು. ಇದರಿಂದ ದೇಹಕ್ಕೆ ಜಲಾಂಶ ದೊರಕುತ್ತದೆ. ಆಹಾರದಲ್ಲಿ ತುಪ್ಪ ಸೇರಿಸುವುದರಿಂದ ಆಂತರಿಕ ತೇವಾಂಶವನ್ನು ಸುಧಾರಿಸಬಹುದು.

ಹೊರಗೆ ಹೋಗುವಾಗ ಕೈಗವಸುಗಳು ಮತ್ತು ಟೋಪಿಗಳಂತಹ ಸೂಕ್ತವಾದ ಬಟ್ಟೆಗಳನ್ನು ಧರಿಸಿ ಚರ್ಮವನ್ನು ರಕ್ಷಿಸಿಕೊಳ್ಳುವುದು ಅತ್ಯಗತ್ಯ. ತುಟಿಗಳನ್ನು ಒಡೆಯದಂತೆ ತಪ್ಪಿಸಲು ತುಪ್ಪವನ್ನು ಮೃದುವಾಗಿ ನಿಯಮಿತವಾಗಿ ಸವರಿಕೊಳ್ಳಬೇಕು.

ಚಳಿಗಾಲದಲ್ಲಿ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಆರೋಗ್ಯಕರ ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಚರ್ಮದ ಆರೋಗ್ಯವನ್ನು ಬೆಂಬಲಿಸುವ ವಿಟಮಿನ್ ಎ, ಸಿ ಮತ್ತು ಇ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ನಿಯಮಿತವಾಗಿ ಸೇವಿಸಬೇಕು. (ಉದಾಹರಣೆಗೆ ಪಪಾಯಾ, ಕ್ಯಾರೆಟ್, ಗೆಣಸು, ತಾಜಾ ಪಾಲಕ್ ಜೊತೆಗೆ ತುಪ್ಪ, ಶುಂಠಿ, ಅರಿಷಿನ ಇತ್ಯಾದಿ). ಈ ಆಹಾರಗಳು ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ. ಬೆಚ್ಚಗೆ ಇರುವ ಮತ್ತು ಬೇಯಿಸಿರುವ ಆಹಾರ ಸೇವನೆಯು ಚಳಿಗಾಲಕ್ಕೆ ಉತ್ತಮ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT