ಡಿಸೆಂಬರ್ 8, ಭಾನುವಾರದಂದು ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಪದಚ್ಯುತರಾದ ಬಳಿಕ, ಆ ದೇಶ ಈಗ ಬಹುಪಾಲು ಬಂಡುಕೋರ ಗುಂಪುಗಳು ಮತ್ತು ಕುರ್ದಿಶ್ ನೇತೃತ್ವದ ಪಡೆಗಳ ನಿಯಂತ್ರಣಕ್ಕೆ ಬಂದಿದೆ. ಸಿರಿಯಾ ಈಗ ಒಂದು ಬದಲಾವಣೆಯ ಹಾದಿಯಲ್ಲಿ ಸಾಗುತ್ತಿದ್ದು, ಅಸ್ಸಾದ್ ಅನುಪಸ್ಥಿತಿಯಲ್ಲಿ ಅವರ ಸರ್ಕಾರವನ್ನು ಒಳಗೊಂಡಿದೆ. ಆದರೆ, ದೇಶದ ಭವಿಷ್ಯದ ಕುರಿತು ಬಹಳಷ್ಟು ಅನಿಶ್ಚಿತತೆಗಳು ಹಾಗೇ ಉಳಿದಿವೆ. ಸಿರಿಯನ್ನರಿಗೆ ಇನ್ನೂ ಯಾರು ಭವಿಷ್ಯದಲ್ಲಿ ಸಿರಿಯಾದ ಚುಕ್ಕಾಣಿ ಹಿಡಿಯಲಿದ್ದಾರೆ, ಸಿರಿಯನ್ ಯುದ್ಧದಲ್ಲಿ ಭಾಗಿಯಾಗಿದ್ದ ರಷ್ಯನ್ ಮಿಲಿಟರಿಯಂತಹ ವಿದೇಶೀ ಪಡೆಗಳಿಗೆ ಏನಾಗಲಿದೆ ಎಂಬುದು ಖಚಿತವಾಗಿ ತಿಳಿದಿಲ್ಲ.
ಸಿರಿಯಾದ ಬಂಡುಕೋರ ಗುಂಪುಗಳು ಡಿಸೆಂಬರ್ 7, ಭಾನುವಾರದಂದು ಸಿರಿಯಾದ ರಾಜಧಾನಿ ಡಮಾಸ್ಕಸ್ ಪ್ರವೇಶಿಸಿದವು. ಆದರೆ, ಅಧ್ಯಕ್ಷ ಬಶರ್ ಅಲ್ ಅಸ್ಸಾದ್‌ರಿಗೆ ನಿಷ್ಠರಾದ ಪಡೆಗಳಿಂದ ಈ ಬಂಡುಕೋರರಿಗೆ ಯಾವುದೇ ಹೇಳಿಕೊಳ್ಳುವಂತಹ ಪ್ರತಿರೋಧವೇ ಎದುರಾಗಲಿಲ್ಲ. ಕಳೆದ ತಿಂಗಳು ಅಲೆಪ್ಪೊ, ಹಾಮಾದಂತಹ ಪ್ರಮುಖ ಸಿರಿಯನ್ ನಗರಗಳನ್ನು ವಶಪಡಿಸಿಕೊಳ್ಳುವ ಮೂಲಕ ಆರಂಭಗೊಂಡ ಈ ಬಂಡುಕೋರ ಕಾರ್ಯಾಚರಣೆ, ರಾಜಧಾನಿಯ ವಶದೊಡನೆ ಒಂದು ಮಟ್ಟಿಗೆ ಮುಕ್ತಾಯ ಕಂಡಿತು. ವರದಿಗಳ ಪ್ರಕಾರ, ಬಂಡುಕೋರರು ರಾಜಧಾನಿ ಡಮಾಸ್ಕಸ್ ನಗರವನ್ನು ವಶಪಡಿಸಿಕೊಳ್ಳುವ ಕೆಲ ಗಂಟೆಗಳ ಮುನ್ನ ಅಸ್ಸಾದ್ ದೇಶ ತ್ಯಜಿಸಿದ್ದು, ಅವರು ಈಗ ಎಲ್ಲಿದ್ದಾರೆ ಎಂಬ ಕುರಿತು ಇನ್ನೂ ಖಚಿತವಾಗಿ ತಿಳಿದುಬಂದಿಲ್ಲ.
ಈ ಬಂಡುಕೋರರ ದಾಳಿಯ ನೇತೃತ್ವವನ್ನು ಇಸ್ಲಾಮಿಕ್ ಗುಂಪಾದ ಹಯಾತ್ ತಹ್ರಿರ್ ಅಲ್ ಶಮಾಮ್ (ಎಚ್‌ಟಿಎಸ್) ವಹಿಸಿತ್ತು. ಎಚ್‌ಟಿಎಸ್ ಸಂಘಟನೆಗೆ ಟರ್ಕಿಯ ಬೆಂಬಲ ಹೊಂದಿರುವ ಸಿರಿಯನ್ ನ್ಯಾಷನಲ್ ಆರ್ಮಿ (ಎಸ್ಎನ್ಎ), ದಕ್ಷಿಣ ಸಿರಿಯಾದ ಸ್ಥಳೀಯ ಹೋರಾಟಗಾರರು, ಮತ್ತು ಇತರ ಗುಂಪುಗಳು ನೆರವಾಗಿದ್ದವು. ಅಸ್ಸಾದ್ ಪದಚ್ಯುತಿಯ ಬಳಿಕ, ಸಿರಿಯಾದಲ್ಲಿ ಸಕ್ರಿಯವಾಗಿರುವ ವಿವಿಧ ಗುಂಪುಗಳು ಇಲ್ಲಿವೆ.
ಮೊದಲಿಗೆ ಹಾಮಾ ನಗರವನ್ನು ವಶಪಡಿಸಿಕೊಂಡ ಬಂಡುಕೋರರು, ಬಳಿಕ ಅಲೆಪ್ಪೋ ನಗರವನ್ನು ಕೈವಶ ಮಾಡಿ, ಅಂತಿಮವಾಗಿ ರಾಜಧಾನಿ ಡಮಾಸ್ಕಸ್ ಅನ್ನು ತಮ್ಮದಾಗಿಸಿಕೊಂಡರು. ಹಯಾತ್ ತಹ್ರಿರ್ ಅಲ್ ಶಮಾಮ್ (ಎಚ್‌ಟಿಎಸ್) ಗುಂಪು ಈ ಬಂಡುಕೋರ ಪಡೆಗಳ ನೇತೃತ್ವ ವಹಿಸಿತ್ತು. ಅಬು ಮೊಹಮ್ಮದ್ ಅಲ್ ಜೊಲಾನಿ (ಆತನ ಮೂಲ ಹೆಸರು ಅಹ್ಮದ್ ಹುಸೇನ್ ಅಲ್ ಶರಾ) ಎಂಬಾತ ಎಚ್‌ಟಿಎಸ್ ನೇತೃತ್ವ ವಹಿಸಿದ್ದಾನೆ. ಈತನೊಬ್ಬ ನುರಿತ ಯೋಧನಾಗಿದ್ದು, 2003ರಲ್ಲಿ ಅಮೆರಿಕಾ ಇಸ್ರೇಲ್ ಮೇಲೆ ಆಕ್ರಮಣ ನಡೆಸಿದ ಸಂದರ್ಭದಲ್ಲಿ, ಅಮೆರಿಕಾ ಸೇನೆಯ ವಿರುದ್ಧ ಹೋರಾಡಿದ್ದ. ಬಂಡುಕೋರರು ಗೆಲುವು ಸಾಧಿಸಿ, ಅಸ್ಸಾದ್ ಪದಚ್ಯುತರಾದ ಬಳಿಕ, ಜೊಲಾನಿ ಭಾನುವಾರ ರಾಜಧಾನಿ ಡಮಾಸ್ಕಸ್‌ಗೆ ಭೇಟಿ ನೀಡಿದ್ದ.
ಬಂಡುಕೋರರ ಇತ್ತೀಚಿನ ದಾಳಿಗೂ ಮುನ್ನ, ಹಯಾತ್ ತಹ್ರಿರ್ ಅಲ್ ಶಮಾಮ್ (ಎಚ್‌ಟಿಎಸ್) ಸಿರಿಯಾದ ವಾಯುವ್ಯ ಭಾಗದ ಇದ್ಲಿಬ್ ಪ್ರಾಂತ್ಯದಲ್ಲಿ ನೆಲೆಯಾಗಿ, ಸಾಲ್ವೇಶನ್ ಗವರ್ನಮೆಂಟ್ ಎಂದು ಕರೆಯುತ್ತಿದ್ದ ತನ್ನದೇ ಆಡಳಿತವನ್ನು ನಡೆಸುತ್ತಿತ್ತು.
ಸಾಲ್ವೇಶನ್ ಗವರ್ನಮೆಂಟ್ ಎನ್ನುವುದು ಎಚ್‌ಟಿಎಸ್ ಗುಂಪು ಸಿದ್ಧಪಡಿಸಿದ ಆಡಳಿತ ವ್ಯವಸ್ಥೆಯಾಗಿದ್ದು, ತನ್ನ ನಿಯಂತ್ರಣದಲ್ಲಿರುವ ಪ್ರದೇಶಗಳ, ಮುಖ್ಯವಾಗಿ ಇದ್ಲಿಬ್ ಪ್ರಾಂತ್ಯದ ಆಡಳಿತವನ್ನು ನಿಯಂತ್ರಿಸುತ್ತದೆ. ಒಂದು ಸ್ಥಳೀಯ ಸರ್ಕಾರದ ರೀತಿ ಕಾರ್ಯ ನಿರ್ವಹಿಸುವ ಸಾಲ್ವೇಶನ್ ಗವರ್ನಮೆಂಟ್, ತನ್ನ ಪ್ರದೇಶದ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ವ್ಯವಸ್ಥೆಗಳನ್ನು ನಿರ್ವಹಿಸುತ್ತದೆ.
2017ರಲ್ಲಿ ಹಲವಾರು ಇಸ್ಲಾಮಿಕ್ ಸಶಸ್ತ್ರ ಸಂಘಟನೆಗಳು ವಿಲೀನಗೊಂಡು, ಎಚ್‌ಟಿಎಸ್ ಸಂಘಟನೆಯನ್ನು ಸ್ಥಾಪಿಸಿದ ಬಳಿಕ, ಸಾಲ್ವೇಶನ್ ಗವರ್ನಮೆಂಟ್ ಸ್ಥಾಪನೆಗೊಂಡಿತು. ಅದಕ್ಕೆ ಮೊದಲು, ಎಚ್‌ಟಿಎಸ್ 2016ರಲ್ಲಿ ಭಯೋತ್ಪಾದಕ ಸಂಘಟನೆಯಾದ ಅಲ್ ಖೈದಾದಿಂದ ಬೇರ್ಪಟ್ಟು, ಜಭಾತ್ ಫತಾ ಅಲ್ ಶಮಾಮ್ ಎಂಬ ಹೆಸರು ಹೊಂದಿತ್ತು. ಅಮೆರಿಕಾ, ಟರ್ಕಿಯಂತಹ ದೇಶಗಳು ಮತ್ತು ವಿಶ್ವಸಂಸ್ಥೆಯಂತಹ ಸಂಘಟನೆಗಳು ಎಚ್‌ಟಿಎಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿವೆ.
ಸಿರಿಯನ್ ನ್ಯಾಷನಲ್ ಆರ್ಮಿಯ (ಎಸ್ಎನ್ಎ) ಭಾಗವಾಗಿರುವ ಬಂಡುಕೋರ ಗುಂಪುಗಳನ್ನು ಟರ್ಕಿ ಬೆಂಬಲಿಸುತ್ತದೆ. ಈ ಗುಂಪುಗಳು ಟರ್ಕಿ ಗಡಿಯ ಬಳಿಯ, ಉತ್ತರ ಸಿರಿಯಾದ ನಗರಗಳಾದ ಆಫ್ರಿನ್, ಸುಲುಕ್, ಮತ್ತು ರಾಸ್ ಅಲ್ ಐನ್‌ನಂತಹ ನಗರಗಳನ್ನು ನಿಯಂತ್ರಿಸುತ್ತಿದ್ದವು. ಕುರ್ದಿಶ್ ನೇತೃತ್ವದ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್) ವಿರುದ್ಧ 2018 ಮತ್ತು 2019ರಲ್ಲಿ ಹೋರಾಡಿದ ಬಳಿಕ, ಎಸ್ಎನ್ಎ ಈ ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು.
ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್) ಎನ್ನುವುದು ಒಂದು ಮಿಲಿಟರಿ ಗುಂಪಾಗಿದ್ದು, ಸಿರಿಯಾದ ಉತ್ತರ ಮತ್ತು ಪೂರ್ವ ಭಾಗದ ಸ್ವಾಯತ್ತ ಆಡಳಿತವನ್ನು ನಿಯಂತ್ರಿಸುತ್ತಿತ್ತು. ಈ ಪ್ರದೇಶ ಸಿರಿಯಾದ ಒಳಗಿದ್ದರೂ, ತನ್ನದೇ ಸ್ಥಳೀಯ ಸರ್ಕಾರವನ್ನು ಹೊಂದಿತ್ತು. ಎಸ್‌ಡಿಎಫ್ ಎಂಬುದು ಹಲವು ಗುಂಪುಗಳನ್ನು ಒಳಗೊಂಡಿದ್ದು, ಪೀಪಲ್ಸ್ ಪ್ರೊಟೆಕ್ಷನ್ ಯುನಿಟ್ಸ್ (ವೈಪಿಜಿ) ಎನ್ನುವ ಕುರ್ದಿಶ್ ಸಶಸ್ತ್ರ ಗುಂಪು ಎಸ್‌ಡಿಎಫ್ ಸಂಘಟನೆಯ ಮುಖ್ಯ ಗುಂಪಾಗಿದೆ. ಆದರೆ ಎಸ್‌ಡಿಎಫ್ ಅರಬ್, ಕ್ರೈಸ್ತರು, ಮತ್ತು ಇತರ ಸಮುದಾಯಗಳ ಹೋರಾಟಗಾರರನ್ನೂ ಒಳಗೊಂಡಿದ್ದು, ಒಂದು ವೈವಿಧ್ಯಮಯ ಪಡೆಯಾಗಿದೆ.
ಈ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್) ಉತ್ತರ ಮತ್ತು ಈಶಾನ್ಯ ಸಿರಿಯಾದ ಬಹುದೊಡ್ಡ ಪ್ರಾಂತ್ಯವನ್ನು ನಿಯಂತ್ರಿಸುತ್ತದೆ. ಇದರಲ್ಲಿ, ರಾಕ್ಕಾ, ಹಸಾಕಾ, ಹಾಗೂ ಪ್ರಾದೇಶಿಕ ಆಡಳಿತದ ರಾಜಧಾನಿಯಾದ ಕಾಮಿಶ್ಲಿಯಂತಹ ಪ್ರಮುಖ ನಗರಗಳೂ ಸೇರಿವೆ. ಅದರೊಡನೆ, ಎಸ್‌ಡಿಎಫ್ ಡೀರ್ ಎಜ್ಜಾರ್ ಪ್ರಾಂತ್ಯದ ಹಲವು ಭಾಗಗಳನ್ನೂ ನಿಯಂತ್ರಣದಲ್ಲಿ ಇಟ್ಟುಕೊಂಡಿದೆ.
ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್) ಟರ್ಕಿಯಲ್ಲಿ ನಿಷೇಧಿತವಾಗಿರುವ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ (ಪಿಕೆಕೆ) ಜೊತೆ ಸಂಪರ್ಕ ಹೊಂದಿದೆ ಎಂದು ಟರ್ಕಿ ಭಾವಿಸಿದೆ. ಆದರೆ ಎಸ್‌ಡಿಎಫ್ ತನಗೂ ಪಿಕೆಕೆಗೂ ಯಾವುದೇ ಸಂಬಂಧವಿಲ್ಲ ಎಂದಿದೆ.
ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ (ಎಸ್‌ಡಿಎಫ್) ಹಾಗೂ ಸಿರಿಯನ್ ನ್ಯಾಷನಲ್ ಆರ್ಮಿಗಳ (ಎಸ್ಎನ್ಎ) ನಡುವಿನ ಕದನ ಇಂದಿಗೂ ಮುಂದುವರಿದಿದೆ. ಭಾನುವಾರ ಮಾನ್‌ಬಿಜ್ ನಗರದ ಸುತ್ತ ಯುದ್ಧ ನಡೆದ ವರದಿಗಳು ಬಂದಿವೆ. ಕಳೆದ ವಾರವಷ್ಟೇ ಎಸ್ಎನ್ಎ ಅಲೆಪ್ಪೊದ ಉತ್ತರದಲ್ಲಿರುವ ರಿಫಾತ್ ಪಟ್ಟಣವನ್ನು ಎಸ್‌ಡಿಎಫ್ ಕೈಯಿಂದ ವಶಪಡಿಸಿಕೊಂಡಿತ್ತು.
ಡಿಸೆಂಬರ್ 6, ಶುಕ್ರವಾರದಂದು ಎಸ್‌ಡಿಎಫ್ ಪಡೆಗಳು ದೀರ್ ಎಜ್ಜಾರ್ ನಗರವನ್ನು ಪ್ರವೇಶಿಸಿದವು. ಭಾನುವಾರದ ವೇಳೆಗೆ ತಾವು ನಗರದ ಒಳಗೆ ನುಗ್ಗಿರುವುದಾಗಿ ಬಂಡುಕೋರ ಸಂಘಟನೆಗಳು ಘೋಷಿಸಿವೆ.
ಭಾನುವಾರ, ಎಸ್‌ಡಿಎಫ್‌ನ ರಾಜಕೀಯ ವಿಭಾಗ ಅಸ್ಸಾದ್ ಸರ್ಕಾರದ ಪತನವನ್ನು ಸಂಭ್ರಮಿಸುತ್ತಿದ್ದ ಸಿರಿಯನ್ ಜನರನ್ನು ಅಭಿನಂದಿಸಿದೆ. ಮುಂದಿನ ದಿನಗಳಲ್ಲಿ ಸಿರಿಯಾದ ಇತರ ಸಂಘಟನೆಗಳೊಡನೆಯೂ ತಾನು ಸಹಕರಿಸುವುದಾಗಿ ಎಸ್‌ಡಿಎಫ್ ಹೇಳಿದೆ.
ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್ ತಾನು ಸಿರಿಯಾದ ರಾಷ್ಟ್ರೀಯ, ಸಾಂಸ್ಕೃತಿಕ, ಮತ್ತು ಸಾಮಾಜಿಕ ನಾಯಕರೂ ಸೇರಿದಂತೆ, ಎಲ್ಲ ಸಿರಿಯನ್ ಗುಂಪುಗಳೊಡಗೂಡಿ ಕೆಲಸ ಮಾಡಲು ಸಿದ್ಧ ಎಂದಿದೆ. ಅದರೊಡನೆ, ದೇಶ ನಿರ್ಮಾಣ ಕಾರ್ಯದಲ್ಲಿ ತೊಡಗಿ, ಎಲ್ಲ ನಾಗರಿಕರನ್ನೂ ಪ್ರತಿನಿಧಿಸುವಂತಹ ವ್ಯವಸ್ಥೆಯನ್ನು ನಿರ್ಮಿಸಲು ತಾನು ಶ್ರಮಿಸುವುದಾಗಿ ಹೇಳಿದೆ.
ಸಿರಿಯಾದ ಮೆಡಿಟರೇನಿಯನ್ ತೀರದಲ್ಲಿ ರಷ್ಯಾ ಎರಡು ಸೇನಾ ನೆಲೆಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ನೌಕಾನೆಲೆಯಾಗಿದ್ದು, ಟಾರ್ಟೌಸ್‌ನಲ್ಲಿದೆ. ಎರಡನೆಯದು ವಾಯುನೆಲೆಯಾಗಿದ್ದು, ಹಮೀಮಿಮ್ ನಲ್ಲಿದೆ. ಭಾನುವಾರ ರಷ್ಯಾದ ವಿದೇಶಾಂಗ ಸಚಿವರು ಸಿರಿಯಾದಲ್ಲಿನ ತಮ್ಮ ಸೇನಾನೆಲೆಗಳು ಕಟ್ಟೆಚ್ಚರದಲ್ಲಿವೆ ಎಂದಿದ್ದರು. ಆದರೆ, ಸದ್ಯದ ಸನ್ನಿವೇಶದಲ್ಲಿ ತಮ್ಮ ನೆಲೆಗಳಿಗೆ ಯಾವುದೇ ಅಪಾಯವಿಲ್ಲವೆಂದೂ ಅವರು ಸ್ಪಷ್ಟಪಡಿಸಿದರು. ಅಂದರೆ, ಈ ನೆಲೆಗಳು ಸಂಭಾವ್ಯ ಅಪಾಯಗಳಿಗೆ ಸಜ್ಜಾಗಿದ್ದರೂ, ಸದ್ಯದ ಮಟ್ಟಿಗೆ ಅವುಗಳಿಗೆ ಅಂತಹ ತೊಂದರೆ ಎದುರಾಗದು.
ರಷ್ಯಾದ ವಿದೇಶಾಂಗ ಸಚಿವಾಲಯ ಅಸ್ಸಾದ್ ಸಿರಿಯಾವನ್ನು ತ್ಯಜಿಸಿ ತೆರಳಿರುವುದನ್ನು ಖಾತ್ರಿಪಡಿಸಿದ್ದು, ತಾನು ಎಲ್ಲ ಸಿರಿಯನ್ ಗುಂಪುಗಳೊಡನೆ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ.
ಅಂತರ್ಯುದ್ಧದ ಬಹುಪಾಲು ಸಮಯದಲ್ಲಿ ರಷ್ಯಾ ಬಂಡುಕೋರರ ವಿರುದ್ಧ ಹೋರಾಡುತ್ತಿದ್ದ ಅಸ್ಸಾದ್ ಪಡೆಗಳಿಗೆ ನೆರವಾಗಿತ್ತು.
ಅಮೆರಿಕಾದ 900ರಷ್ಟು ಸೈನಿಕರು ಈಶಾನ್ಯ ಸಿರಿಯಾದಲ್ಲಿ ನೆಲೆಯಾಗಿದ್ದು, ಎಸ್‌ಡಿಎಫ್ ಜೊತೆಗೂಡಿ ಐಸಿಸ್ ವಿರುದ್ಧ ಹೋರಾಡುತ್ತಿದ್ದಾರೆ. ಅಮೆರಿಕಾ ಜೋರ್ಡಾನ್ ಮತ್ತು ಇರಾಕ್‌ಗಳ ಗಡಿಯ ಬಳಿ ಇರುವ ಸಿರಿಯಾದ ದಕ್ಷಿಣದ ಅಲ್ ತನ್ಫ್ ನಲ್ಲೂ ಒಂದು ಸೇನಾ ನೆಲೆಯನ್ನು ಹೊಂದಿದೆ.
ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಸಿರಿಯಾದಲ್ಲಿ ಸ್ಥಿರತೆ ಕಾಪಾಡಲು ಅಮೆರಿಕನ್ ಯೋಧರು ಸಿರಿಯಾದಲ್ಲೇ ನೆಲೆಸಲಿದ್ದಾರೆ ಎಂದಿದ್ದಾರೆ.
ದಕ್ಷಿಣ ಸಿರಿಯಾದಲ್ಲಿ ವಿವಿಧ ಸಶಸ್ತ್ರ ಗುಂಪುಗಳು ಸರ್ಕಾರಿ ಪಡೆಗಳನ್ನು ಅಲ್ಲಿಂದ ಹೊರಹಾಕಿವೆ. ಯುಕೆ ಮೂಲದ, ಸಿರಿಯನ್ ಅಬ್ಸರ್ವೇಟರಿಯ ಪ್ರಕಾರ, ಈ ಸ್ಥಳೀಯ ಗುಂಪುಗಳು ಶುಕ್ರವಾರದಂದು ಡರಾ ಪ್ರಾಂತ್ಯದ ಬಹುತೇಕ ಭಾಗಗಳು ಮತ್ತು ಡ್ರೂಜ್ ಸಮುದಾಯ ನೆಲೆಸಿರುವ ಸುವೈದಾ ಪ್ರಾಂತ್ಯವನ್ನು ವಶಪಡಿಸಿಕೊಂಡಿವೆ. ಅಂದರೆ, ಸರ್ಕಾರ ಈ ಪ್ರಾಂತ್ಯಗಳ ನಿಯಂತ್ರಣವನ್ನು ಸ್ಥಳೀಯ ಗುಂಪುಗಳೆದುರು ಕಳೆದುಕೊಂಡಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾನುವಾರ ತಾನು ಇಸ್ರೇಲಿ ಪಡೆಗಳಿಗೆ ಗೋಲನ್ ಹೈಟ್ಸ್ ಬಳಿಯ ಬಫರ್ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿದ್ದಾರೆ. ಇಸ್ರೇಲ್ ಮತ್ತು ಸಿರಿಯಾಗಳ ನಡುವೆ 1974ರಲ್ಲಿ ಕದನ ವಿರಾಮ ನಡೆದು, ಉಭಯ ಬದಿಗಳನ್ನು ಪ್ರತ್ಯೇಕಿಸಿ, ಶಾಂತಿ ಸ್ಥಾಪಿಸುವ ಸಲುವಾಗಿ ಈ ಬಫರ್ ಪ್ರದೇಶವನ್ನು ನಿರ್ಮಿಸಲಾಗಿತ್ತು.
1967ರಲ್ಲಿ ಸಿರಿಯಾ ಜೊತೆಗೆ ನಡೆದ ಯುದ್ಧದಲ್ಲಿ ಇಸ್ರೇಲ್ ಗೋಲನ್ ಹೈಟ್ಸ್ ಪ್ರದೇಶವನ್ನು ಸಿರಿಯಾದಿಂದ ವಶಪಡಿಸಿಕೊಂಡಿತು. ಬಳಿಕ 1981ರಲ್ಲಿ ಅಧಿಕೃತವಾಗಿ ಗೋಲನ್ ಹೈಟ್ಸ್ ಅನ್ನು ತನ್ನ ಭೂಪ್ರದೇಶ ಎಂದು ಘೋಷಿಸಿತು.
ಭಾನುವಾರ ಇಸ್ರೇಲಿ ಸೇನಾ ವಕ್ತಾರರಾದ ಅವಿಹಾಯ್ ಅದ್ರಾಯೀ ಅವರು ಸಿರಿಯಾದ ಗಡಿಯ ಬಳಿ ಇರುವ ಕುನೇತ್ರ ಮತ್ತು ಇತರ ಪ್ರದೇಶಗಳಲ್ಲಿರುವ ಇಸ್ರೇಲಿ ನಾಗರಿಕರಿಗೆ ಮನೆಯೊಳಗೆ ಇರುವಂತೆ ಸಲಹೆ ನೀಡಿದ್ದಾರೆ. ಈ ಪ್ರದೇಶದಲ್ಲಿನ ಸದ್ಯದ ಪರಿಸ್ಥಿತಿ ಮಿಲಿಟರಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ.
ಅಲ್ ಮಾನಿಟರ್ ವರದಿಯ ಪ್ರಕಾರ, ಸಿರಿಯನ್ ಪ್ರಧಾನ ಮಂತ್ರಿ ಮೊಹಮ್ಮದ್ ಘಾಜಿ ಅಲ್ ಜಲಾಲಿ ಅವರು ಒಂದು ವೀಡಿಯೋ ಬಿಡುಗಡೆಗೊಳಿಸಿದ್ದು, ತಾನು ಸಿರಿಯಾದಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅವರು ದೇಶದ ಸರ್ಕಾರಿ ಸಂಸ್ಥೆಗಳು ಎಲ್ಲಾ ಸಿರಿಯನ್ನರಿಗೂ ಸೇರಿದ್ದು ಎಂದಿದ್ದು, ಶಾಂತಿಯುತ ಅಧಿಕಾರ ವರ್ಗಾವಣೆಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಎಲ್ಲ ನಾಗರಿಕರಿಗೆ ಪ್ರಯೋಜನವಾಗುವ ರೀತಿಯಲ್ಲಿ ಅವರು ನಾಯಕತ್ವ ಬದಲಾವಣೆಯನ್ನು ಬೆಂಬಲಿಸುತ್ತಿರುವಂತೆ ತೋರುತ್ತಿದೆ.
ಸಿರಿಯನ್ ಪ್ರಧಾನಿ ಮೊಹಮ್ಮದ್ ಘಾಜಿ ಅಲ್ ಜಲಾಲಿ ಅವರು ಸಿರಿಯಾ ಯಾವುದೇ ಪ್ರಾದೇಶಿಕ ಮೈತ್ರಿಕೂಟವನ್ನು ಸೇರದೆಯೂ ತನ್ನ ನೆರೆಯ ದೇಶಗಳೊಡನೆ ಮತ್ತು ಜಗತ್ತಿನೊಡನೆ ಉತ್ತಮ ಸಂಬಂಧ ಹೊಂದಬಹುದು ಎಂದಿದ್ದಾರೆ. ಆದರೆ ಸಿರಿಯನ್ ನಾಗರಿಕರಿಂದ ಚುನಾಯಿತರಾಗುವ ಹೊಸ ನಾಯಕರು ಈ ಕುರಿತು ನಿರ್ಧಾರ ಕೈಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರದ ಪುನರ್ ರಚನೆಯ ಸಂದರ್ಭದಲ್ಲಿ ಅಸ್ಸಾದ್ ಜಲಾಲಿಯವರನ್ನು ಸಿರಿಯಾದ ಪ್ರಧಾನಿಯಾಗಿ ನೇಮಿಸಿದ್ದರು. ಮೊದಲು ಜಲಾಲಿ 2014ರಿಂದ 2016ರ ತನಕ ಸಂವಹನ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2014ರಿಂದ, ಅವರು ನಾಗರಿಕರನ್ನು ದಮನಿಸುತ್ತಿದ್ದಾರೆ ಎಂದು ಆರೋಪಿಸಿ, ಐರೋಪ್ಯ ಒಕ್ಕೂಟ ಅವರ ವಿರುದ್ಧ ನಿರ್ಬಂಧ ಹೇರಿತ್ತು.
ಅಲ್ ಮಾನಿಟರ್ ಪ್ರಕಾರ, ಭಾನುವಾರ ಮಾತನಾಡಿರುವ ಗೊಲಾನಿ ಯೋಧರು ಸಾರ್ವಜನಿಕ ಸಂಸ್ಥೆಗಳ ಒಳಗೆ ಪ್ರವೇಶಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಸ್ಥೆಗಳು ಅಧಿಕೃತವಾಗಿ ಹಸ್ತಾಂತರವಾಗುವ ತನಕವೂ ಜಲಾಲಿಯವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಿಸಲಿವೆ ಎಂದು ಗೊಲಾನಿ ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ವೀಡಿಯೋಗಳು ಹರಿದಾಡಿದ್ದು, ಅದರಲ್ಲಿ ಜಲಾಲಿಯವರನ್ನು ಬಂಡುಕೋರರು ರಕ್ಷಣೆಯೊಂದಿಗೆ ಕರೆದೊಯ್ಯುವುದು ಕಂಡುಬಂದಿದೆ. ಇದು ಜಲಾಲಿ ಸರ್ಕಾರಿ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಬಂಡುಕೋರರೊಡನೆ ಸಹಕರಿಸಿ ಕಾರ್ಯಾಚರಿಸುತ್ತಿರುವುದನ್ನು ಖಚಿತಪಡಿಸಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)