ಜಗತ್ತಿನ ಎಲ್ಲ ಆರ್ಥಿಕ ಸವಾಲುಗಳ ನಡುವೆ ಭಾರತ ಮುನ್ನುಗ್ಗುತ್ತಿದೆ ಎಂದು ಈಗೊಂದೆರಡು ವರ್ಷಗಳಿಂದ ಇದ್ದ ಗ್ರಹಿಕೆಗೆ ಹೊಡೆತ ಬಿದ್ದಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈಗೆರಡು ತಿಂಗಳುಗಳ ಹಿಂದಿನಿಂದಲೇ ಭಾರತದ ಮಾರುಕಟ್ಟೆಯಲ್ಲಿನ ತಮ್ಮ ಹೂಡಿಕೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದದ್ದು ಎಲ್ಲರ ಗಮನಕ್ಕೆ ಬಂದಿತ್ತು.
ನವೆಂಬರ್ ಅಂತ್ಯದಲ್ಲಿ ಪ್ರಕಟವಾದ, ಜುಲೈ-ಸೆಪ್ಟೆಂಬರ್ ಅವಧಿಯ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ದರವು ಬಹಿರಂಗವಾಗುತ್ತಲೇ ಭಾರತದ ಅರ್ಥವ್ಯವಸ್ಥೆ ಬಗ್ಗೆ ಆಸಕ್ತಿ ಇರುವವರೆಲ್ಲ ಇನ್ನಷ್ಟು ಮಂಕು ಕವಿಸಿಕೊಂಡರು. ಶೇ 5.4ರಷ್ಟಿರುವ ಈ ದರವು ಕಳೆದ ಏಳು ತ್ರೈಮಾಸಿಕಗಳಲ್ಲೇ ಅತಿ ಕಡಿಮೆಯದ್ದು. ಒಂದು ವರ್ಷ ಹಿಂದಕ್ಕೆ ಹೋದರೆ, 2023ರ ಇದೇ ಜುಲೈ - ಸೆಪ್ಟೆಂಬರ್ ತ್ರೈಮಾಸಿಕ ಜಿಡಿಪಿ ಬೆಳವಣಿಗೆ ದರ ಶೇ. 8.1ರಲ್ಲಿತ್ತು ಎಂಬುದನ್ನು ಗಮನಕ್ಕೆ ತಂದುಕೊಂಡಾಗ ಈಗಿನ ಕಳಪೆ ಪ್ರದರ್ಶನದ ಮಟ್ಟ ಮನದಟ್ಟಾಗುತ್ತದೆ.
2025ರ ವಿತ್ತೀಯ ವರ್ಷದಲ್ಲಿ ಭಾರತದ ಜಿಡಿಪಿ ದರ ಶೇ. 7 ಇರಲಿದೆ ಎಂದು ಈ ಹಿಂದೆ ಅಂದಾಜಿಸಿದ್ದ ಏಷ್ಯನ್ ಡಿವಲಪ್ಮೆಂಟ್ ಬ್ಯಾಂಕ್, ಡಿಸೆಂಬರ್ 11ಕ್ಕೆ ನೀಡಿದ ವರದಿಯಲ್ಲಿ ಅದನ್ನು ಶೇ. 6.5ಕ್ಕೆ ಇಳಿಸಿದೆ. ಡಿಸೆಂಬರ್ 6ಕ್ಕೆ ನಮ್ಮದೇ ರಿಸರ್ವ್ ಬ್ಯಾಂಕ್ ಸಹ ಈ ಮೊದಲು ಹೇಳಿದ್ದ ಶೇ. 7.2ರ ಜಿಡಿಪಿ ನಿರೀಕ್ಷೆಯನ್ನು ಶೇ. 6.6ಕ್ಕೆ ಇಳಿಸಿದೆ.
ಜಿಡಿಪಿ ಬೆಳವಣಿಗೆ ಕುಗ್ಗುವುದಕ್ಕೆ ಹಲವು ಕಾರಣಗಳಿರುತ್ತವೆ. ಕೆಲವೊಮ್ಮೆ ವಸ್ತು-ಸೇವೆಗಳ ಬೇಡಿಕೆಯೇ ಕಡಿಮೆ ಆಗಿರುತ್ತದೆ. ಇನ್ನು ಕೆಲವೊಮ್ಮೆ ಜಾಗತಿಕ ಪೂರೈಕೆ ಸರಪಳಿಯಲ್ಲಾಗುವ ವ್ಯತ್ಯಯಗಳು ಉತ್ಪಾದನೆಯನ್ನೇ ಕುಂಠಿತಗೊಳಿಸಿರುತ್ತವೆ. ಕೇಂದ್ರ ಸರ್ಕಾರ ಸಹ ಯಾವುದೇ ಒಂದು ಅಂಶವನ್ನು ಹೊಣೆ ಮಾಡುತ್ತಿಲ್ಲ. ಮುಂದಿನ ತ್ರೈಮಾಸಿಕದ ಹೊತ್ತಿಗೆ ಜಿಡಿಪಿ ದರ ಚೇತರಿಸಿಕೊಳ್ಳುತ್ತದೆ ಎಂಬ ವಿಶ್ವಾಸದ ಮಾತುಗಳು ಕೇಂದ್ರದ ಸಚಿವರ ಮೂಲಕ ಬರುತ್ತಿವೆ. ಆದರೆ, ಆರ್ಥಿಕ ದರ ಮುಗ್ಗರಿಸುತ್ತಿರುವುದರ ಕುರಿತ ಕಸಿವಿಸಿಯ ತುಸುಮಟ್ಟದ ಸಿಟ್ಟನ್ನು ಖಾಸಗಿ ಉದ್ದಿಮೆಗಳತ್ತ ಸರ್ಕಾರ ಹರಿಸಬಹುದೇನೋ. ಯಾವುದೇ ಸಚಿವರು ಆ ನಿಟ್ಟಿನಲ್ಲಿ ಮಾತನಾಡಿಲ್ಲವಾದರೂ, ವಿತ್ತ ಸಚಿವಾಲಯದ ಮುಖ್ಯ ಸಲಹೆಕಾರರು ಅದೇ ಧ್ವನಿಯಲ್ಲಿ ಮಾತನಾಡಿರುವುದು ಗಮನಾರ್ಹ.
ಭಾರತದ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟದ ಪ್ರಾತಿನಿಧಿಕ ಸಂಸ್ಥೆಯಾಗಿರು ಫಿಕ್ಕಿ, ಕ್ವೆಸ್ ಎಂಬ ಸಂಸ್ಥೆ ಜತೆಗೂಡಿ ಅಧ್ಯಯನ ವರದಿಯೊಂದನ್ನು ತಂದಿದೆ. ಅದಿನ್ನೂ ಸಾರ್ವಜನಿಕವಾಗಿರದ ವರದಿಯು ಕೆಲವು ಮಾಧ್ಯಮ ವೇದಿಕೆಗಳಿಗೆ ಸಿಕ್ಕಿದೆ. ಅದನ್ನೇ ಇಟ್ಟುಕೊಂಡು ಇದೀಗ ವಿತ್ತ ಸಚಿವಾಲಯ ಮತ್ತು ಕಾರ್ಪೋರೇಟ್ ಕಚೇರಿಗಳಲ್ಲಿ ಚರ್ಚೆಗಳು ಶುರುವಾಗಿವೆ. ಆ ವರದಿ ಹೇಳುತ್ತಿದೆ ಎನ್ನಲಾಗಿರುವ ಅಂಶದ ಸಾರವಿಷ್ಟು - “ಖಾಸಗಿ ಉದ್ದಿಮೆಗಳು ಕಳೆದ ಹದಿನೈದು ವರ್ಷಗಳಲ್ಲೇ ಅತಿಹೆಚ್ಚು ಎಂಬಂತಹ ಲಾಭ ಮಾಡುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಕಾರ್ಪೋರೇಟ್ ಕಂಪನಿಗಳ ಲಾಭಾಂಶವು ನಾಲ್ಕುಪಟ್ಟು ಹೆಚ್ಚಾಗಿದ್ದರೂ ಅವು ನೌಕರರಿಗೆ ಕೊಡುವ ಸಂಬಳದಲ್ಲಿ ಮಾತ್ರ ಗಣನೀಯ ಏರಿಕೆ ಮಾಡುತ್ತಿಲ್ಲ.”
ವಿತ್ತ ಸಚಿವಾಲಯದ ಮುಖ್ಯ ಸಲಹೆಗಾರರ ಹುದ್ದೆಯಲ್ಲಿರುವ ವಿ. ಅನಂತನಾಗೇಶ್ವರನ್ ಅವರು ಈ ಬಾರಿಯ ಆರ್ಥಿಕ ಸಮೀಕ್ಷೆಯಲ್ಲೇ ಕಾರ್ಪೋರೇಟ್ ವಲಯದ ಉದ್ಯೋಗಸೃಷ್ಟಿಯ ಮಹತ್ವವನ್ನು ಒತ್ತಿ ಹೇಳಿದ್ದರು. ಖಾಸಗಿ ಕಂಪನಿಗಳು ನಿರೀಕ್ಷೆಗೆ ತಕ್ಕಂತೆ ಉದ್ಯೋಗಸೃಷ್ಟಿ ಮಾಡುತ್ತಿಲ್ಲ ಎಂಬ ಧ್ವನಿಯೊಂದು ಅಲ್ಲಿತ್ತು. ಇದೀಗ ಸಹಜವಾಗಿಯೇ ಫಿಕಿ ವರದಿಯು ಕಾರ್ಪೋರೇಟ್ ವಲಯದ ಮೇಲೆ ಸರ್ಕಾರದ ಒತ್ತಡ ಇನ್ನಷ್ಟು ಹೆಚ್ಚುವಂತೆ ಮಾಡಲಿದೆ. ಕಾರ್ಪೊರೇಟ್ ಕಂಪನಿಗಳ ಜತೆಗಿನ ಹಲವು ಸಭೆಗಳಲ್ಲಿ ಅದಾಗಲೇ ಅನಂತ ನಾಗೇಶ್ವರನ್ ಅವರು ಫಿಕಿ ವರದಿಯನ್ನು ಉಲ್ಲೇಖಿಸಿರುವುದಾಗಿ ಮಾಧ್ಯಮ ವರದಿಗಳು ಬರುತ್ತಿವೆ.
2019 ಮತ್ತು 2023ರ ಅವಧಿಯಲ್ಲಿ, ಫಿಕಿ ಸಮೀಕ್ಷೆ ಹೇಳುವ ಪ್ರಕಾರ, ಬ್ಯಾಂಕಿಂಗ್ ಹಾಗೂ ಫೈನಾನ್ಸ್ ವಲಯದ ಕಂಪನಿಗಳಲ್ಲಿ ಸಂಬಳವು ಸರಾಸರಿ 2.8 ಶೇಕಡ ಏರಿಕೆಯನ್ನಷ್ಟೇ ಕಂಡಿದೆ. ಎಂಜಿನಿಯರಿಂಗ್-ಮನುಫಾಕ್ಚರಿಂಗ್-ಪ್ರಾಸೆಸಿಂಗ್ ವಲಯದಲ್ಲಂತೂ ಕೇವಲ ಶೇ. 0.8ರ ಸಂಬಳ ಏರಿಕೆ ಆಗಿದೆ. ಐಟಿಯಲ್ಲಿ ಶೇ. 4 ಹಾಗೂ ಎಫ್ ಎಂ ಸಿ ಜಿಯಲ್ಲಿ ಶೇ. 5.4. ಇವೆಲ್ಲ ಹಣದುಬ್ಬರದ ಪ್ರಮಾಣಕ್ಕೆ ಹೋಲಿಸಿದಾಗ ಬಹಳ ಕಡಿಮೆ ಏರಿಕೆಯೇ.
ಸರ್ಕಾರವನ್ನು ಪ್ರತಿನಿಧಿಸುತ್ತಿರುವವರ ವಾದದ ಸಾರಾಂಶ ಇಷ್ಟು. ಬಿಸಿನೆಸ್ಸಿಗೆ ಪೂರಕ ನಿಯಮಗಳಿಗೆ ಒತ್ತಾಯಿಸಿ ಆ ನಿಟ್ಟಿನಲ್ಲಿ ಸರ್ಕಾರದಿಂದ ಸವಲತ್ತು-ತೆರಿಗೆ ವಿನಾಯತಿಗಳನ್ನೆಲ್ಲ ಪಡೆದ ಮೇಲೆ ಅದಕ್ಕೆ ತಕ್ಕಂತೆ ಸಂಪತ್ತು ಸೃಷ್ಟಿ ಹಾಗೂ ವಿತರಣೆ ಕಾರ್ಯದಲ್ಲಿ ಖಾಸಗಿ ಉದ್ದಿಮೆಗಳು ತೊಡಗಿಕೊಳ್ಳಬೇಕು. ಆದರೆ ಇಲ್ಲಾಗುತ್ತಿರುವುದೇನೆಂದರೆ, ಕಳೆದ ನಾಲ್ಕು ವರ್ಷಗಳಿಂದ ಉತ್ತಮ ಲಾಭ ಮಾಡುತ್ತಿರುವ ಕಂಪನಿಗಳು ಆ ಲಾಭಾಂಶವನ್ನು ಉದ್ಯೋಗಿಗಳತ್ತ ಹರಿಸುವಲ್ಲಿ ಆಸಕ್ತಿ ವಹಿಸಿಲ್ಲ. ಯಾವಾಗ ಉದ್ಯೋಗದಲ್ಲಿರುವವರ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗುವುದಿಲ್ಲವೋ ಆಗ ಅವರ ವಸ್ತು-ಸೇವೆಗಳ ಉಪಭೋಗ ಕಡಿಮೆ ಆಗುತ್ತದೆ. ಅದು ಜಿಡಿಪಿ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತದೆ.
ಇದಕ್ಕೆ ಕಾರ್ಪೋರೇಟ್ ವಲಯದವರ ಪ್ರತಿವಾದವೂ ಇದೆ. ಉದ್ಯೋಗಿಗಳ ಉತ್ಪಾದಕತೆ ನಿರೀಕ್ಷಿತವಾಗಿಲ್ಲ. ಹೀಗಾಗಿಯೇ ಉತ್ಪಾದಕತೆ ಹಾಗೂ ಕೌಶಲ ತೋರುವ ಕೆಲವರಿಗಷ್ಟೇ ಸಂಬಳ ಏರಿಕೆಯಾಗುತ್ತದೆ ಎಂಬ ವಾದಗಳು ಉದ್ಯಮದ ಕಡೆಯಿಂದ ಇವೆ. ಇವೇನೇ ಇದ್ದರೂ, ಜಿಡಿಪಿ ಬೆಳವಣಿಗೆ ದರ ನಿರೀಕ್ಷೆಗಿಂತ ಕಡಿಮೆಯಾದರೆ ಮುಂದಿನ ದಿನಗಳಲ್ಲಿ ಈ ನಿಟ್ಟಿನ ಚರ್ಚೆಗಳು ಮತ್ತಷ್ಟು ಬಿಸಿಯೇರುವುದಂತೂ ನಿಶ್ಚಿತ.
- ಚೈತನ್ಯ ಹೆಗಡೆ
cchegde@gmail.com