ಪ್ರಧಾನಿ ಮೋದಿ, ಬಾಂಗ್ಲಾ ಹಂಗಾಮಿ ಸರ್ಕಾರದ ಮುಖ್ಯಸ್ಥ ಯೂನಸ್ online desk
ಅಂಕಣಗಳು

ಬಾಂಗ್ಲಾದಲ್ಲಿ ಮತ್ತೆ ನರಮೇಧ: ಬುದ್ಧಿ ಕಲಿಸಲು ಭಾರತದ ಬಳಿ ಇರುವ ಬ್ರಹ್ಮಾಸ್ತ್ರ ಯಾವುದು? (ತೆರೆದ ಕಿಟಕಿ)

ತುಳಸಿ ಗಬಾರ್ಡ್ ಅವರು ಇಸ್ಕಾನಿನ ಅನುಯಾಯಿಯೇ ಆಗಿರುವುದರಿಂದ, ಸನಾತನ ಶ್ರದ್ಧೆ ಹೊಂದಿರುವುದರಿಂದ ಬಾಂಗ್ಲಾದೇಶದ ಈಗಿನ ಆಡಳಿತಗಾರರ ಪಾಲಿಗೆ ಬಿಸಿತುಪ್ಪವಾಗುತ್ತಾರೆ ಎಂಬುದೊಂದು ನಿರೀಕ್ಷೆ.

ಬಾಂಗ್ಲಾದೇಶದಲ್ಲಾಗುತ್ತಿರುವ ವಿದ್ಯಮಾನಗಳನ್ನು ಗಮನಿಸುವ ಭಾರತೀಯನಿಗೆ ಅಲ್ಲಿನ ಹಿಂದುಗಳ ಮೇಲಾಗುತ್ತಿರುವ ಅನಾಚಾರ ಹಾಗೂ ಭಾರತದ ವಿರುದ್ಧ ಈಗಿನ ಯೂನಸ್ ಸರ್ಕಾರಕ್ಕಿರುವ ಅನಾದರಕ್ಕೆ ಅತೀವ ಯಾತನೆಯಾಗುತ್ತದೆ.

ಸ್ವಲ್ಪ ಐತಿಹಾಸಿಕ ತಿಳಿವಳಿಕೆ ಹೊಂದಿದವರಿಗಂತೂ ಕೇವಲ ಯಾತನೆ ಮಾತ್ರವಲ್ಲ, ಹತಾಶೆಯೂ ಕಾಡುತ್ತದೆ. ಕೊನೆಗೂ ಪಾಕಿಸ್ತಾನ ಗೆದ್ದುಬಿಟ್ಟಿತ್ತಲ್ಲ ಎಂಬ ಹತಾಶೆ ಅದು. ಅಂದರೆ…1971ರಲ್ಲಿ ಬಾಂಗ್ಲಾದೇಶ ವಿಮೋಚನೆಯಾಗುವುದಕ್ಕೆ ಭಾರತೀಯ ಯೋಧರ ಶೌರ್ಯ-ಬಲಿದಾನಗಳಿದ್ದವು. ಆಗ ಪೂರ್ವ ಪಾಕಿಸ್ತಾನ ಎಂದು ಕರೆಸಿಕೊಳ್ಳುತ್ತಿದ್ದ ಬಾಂಗ್ಲಾದೇಶದಲ್ಲಿ ಬಂಗಾಳಿಯೇತರ ಭಾಷೆ ಮಾತನಾಡುವ ಮುಸ್ಲಿಮರ ದೊಡ್ಡ ವರ್ಗ ಪಾಕಿಸ್ತಾನದ ಪರವಾಗಿತ್ತು.

ಬಂಗಾಳಿಗಳು ಹಾಗೂ ಅವರ ಪೈಕಿ ಹೆಚ್ಚಿನದಾಗಿ ಹಿಂದುಗಳು ಇವರ ಪರವಾಗಿ ಭಾರತವು ಅವತ್ತಿಗೆ ಅಮೆರಿಕವನ್ನು ಸಹ ಎದುರುಹಾಕಿಕೊಂಡು ಯುದ್ಧ ಮಾಡಿ ಜಯಶಾಲಿಯಾಗಿತ್ತು. ಆದರೆ, ಈ ವರ್ಷ ಅಲ್ಲಿ ಶೇಖ್ ಹಸೀನಾ ಪದಚ್ಯುತಿ ಆಗುತ್ತಿದ್ದಂತೆಯೇ ಅಲ್ಲಿ ಪಾಕಿಸ್ತಾನದ ಐಡಿಯಾ ಆಫ್ ಇಸ್ಲಾಂ ಮತ್ತೆ ಗೆದ್ದುಬಿಟ್ಟಿತಲ್ಲ ಎಂಬುದು ಹತಾಶೆಗೆ ದೂಡುವ ವಿಷಯ.

ಡಿಸೆಂಬರ್ ತಿಂಗಳೆಂದರೆ ಅದು ಬಾಂಗ್ಲಾದೇಶವು ತನ್ನ ಸ್ವಾತಂತ್ರ್ಯವನ್ನು ಸಂಭ್ರಮಿಸಬೇಕಾದ ದಿನ. ಆದರೆ ಈಗ ಬಾಂಗ್ಲಾದೇಶದ ಆಡಳಿತಸೂತ್ರವನ್ನು ತನ್ನ ಕೈವಶ ಮಾಡಿಕೊಂಡಿರುವ ಮೊಹಮ್ಮದ್ ಯೂನಸ್ ಸರ್ಕಾರಕ್ಕೆ ಪಾಕಿಸ್ತಾನದ ಜತೆಗೆ ಬೆಚ್ಚಗಿನ ಸ್ನೇಹ. ಹೀಗಿರುವಾಗ ಪಾಕಿಸ್ತಾನಕ್ಕೆ ಬೇಜಾರಾಗುತ್ತದಲ್ಲ ಎಂದು ತನ್ನ ಚರಿತ್ರೆಗೇ ಗೋರಿ ಕಟ್ಟುವ ಹಂತಕ್ಕೆ ಬಾಂಗ್ಲಾದೇಶ ಬಂದು ನಿಂತಿದೆ. ಭಾರತದ ಜತೆ ಈಗ ಬಾಂಗ್ಲಾದೇಶಕ್ಕೆ ಎಲ್ಲವಕ್ಕೂ ತಕರಾರು. ಚಿತ್ತಗಾಂವ್ ಬಂದರಿಗೆ ಭಾರತಕ್ಕೆ ಇದ್ದ ನೇರ ಪ್ರವೇಶವನ್ನು ಪ್ರತಿಬಂಧಿಸಿ, ಅಲ್ಲಿಗೆ ಪಾಕಿಸ್ತಾನದ ಹಡಗುಗಳನ್ನು ಸ್ವಾಗತಿಸುವ ಕುರಿತೂ ಬಾಂಗ್ಲಾದೇಶ ಯೋಚನಾಪ್ರವೃತ್ತವಾಗಿದೆ. ಬಾಂಗ್ಲಾದೇಶದಲ್ಲಿ ಅಳಿದುಳಿದಿದ್ದ ಹಿಂದುಗಳ ಪೈಕಿ ನೌಕರಿಗಳಲ್ಲಿದ್ದವರೆಲ್ಲ ಅದನ್ನು ಕಳೆದುಕೊಂಡಿದ್ದಾರೆ. ಪ್ರತಿನಿತ್ಯ ಮುಸ್ಲಿಂ ಪುಂಡರ ಅತ್ಯಾಚಾರ-ಅವಮಾನಗಳ ಅಡಿ ಬದುಕುವುದು ಅಲ್ಲಿನ ಅಧಿಕೃತ ಆಡಳಿತ ಪದ್ಧತಿಯೇ ಆಗಿಬಿಟ್ಟಿದೆ.

ಈ ಕರಾಳತೆಯನ್ನು ಇನ್ನೂ ಹಲವು ಮಗ್ಗಲುಗಳಲ್ಲಿ ವಿವರಿಸುತ್ತ ಹೋಗಬಹುದಾದರೂ, ಈಗಿರುವ ಪ್ರಶ್ನೆ ಎಂದರೆ - ಈ ನಿಟ್ಟಿನಲ್ಲಿ ಭಾರತ ಕಂಡುಕೊಳ್ಳಬಹುದಾದ ಪರಿಹಾರವಾದರೂ ಏನು ಅನ್ನೋದು. ಈ ನಿಟ್ಟಿನಲ್ಲಿ ಹಲವು ಸಾಧ್ಯತೆಗಳ ವಿಶ್ಲೇಷಣೆಗಳೆಲ್ಲ ಹರಿದಾಡುತ್ತಿವೆ. ಆ ಪೈಕಿ ಯಾವುದೆಲ್ಲ ವಾಸ್ತವಕ್ಕೆ ಹತ್ತಿರ ಹಾಗೂ ಬಾಂಗ್ಲಾದೇಶದ ಬಗ್ಗೆ ಭಾರತೀಯನೊಬ್ಬ ತನ್ನ ಎದೆಯಲ್ಲಿಳಿಸಿಕೊಳ್ಳಬೇಕಾದ ಕಟುಸತ್ಯವೇನು ಎಂಬುದನ್ನು ಈ ಅಂಕಣದಲ್ಲಿ ವಿಶ್ಲೇಷಿಸುವ ಪ್ರಯತ್ನ ಮಾಡೋಣ. 

ಟ್ರಂಪ್ ಬಂದರೆ ಸರಿಯಾಗುತ್ತದೆ ಎಂಬ ಉತ್ಪೇಕ್ಷಿತ ನಿರೀಕ್ಷೆ

ಈ ಹಿಂದೆ ಶೇಖ್ ಹಸೀನಾ ಆಡಳಿತ ಸಹ ನಿಧಾನಕ್ಕೆ ಚೀನಾವನ್ನು ಬಹಳ ಒಳಗೆ ಬಿಟ್ಟುಕೊಂಡಿತ್ತು ಎಂಬುದು ನಿರಾಕರಿಸಲಾಗದ ಸತ್ಯ. ಆದರೆ, ಮತ್ಯಾವುದೇ ಆಡಳಿತಕ್ಕಿಂತ ಬಾಂಗ್ಲಾದೇಶವು ಭಾರತದಮಟ್ಟಿಗೆ ಸ್ನೇಹಿಯಾಗಿದ್ದದ್ದು ಹಾಗೂ ತಕ್ಕಮಟ್ಟಿಗೆ ಇಸ್ಲಾಂ ಮೂಲಭೂತವಾದಿಗಳನ್ನು ಅಂಕುಶದಲ್ಲಿ ಇಟ್ಟದ್ದು ಹಸೀನಾ ಅವಧಿ ಮಾತ್ರವೇ. ಇಂಥ ಹಸೀನಾರನ್ನು ಬದಲಿಸಬೇಕೆಂಬ ಮಾತುಗಳನ್ನು ಅಮೆರಿಕವು ಬಾಂಗ್ಲಾದೇಶದ ಚುನಾವಣೆಗಳ ಸಂದರ್ಭದಲ್ಲಿಯೇ ಬಹಿರಂಗವಾಗಿ ಆಡಿತ್ತಾದರೂ ಹಸೀನಾ ಅದನ್ನು ತನ್ನದೇ ಆದ ರೀತಿಯಲ್ಲಿ ಅರಗಿಸಿಕೊಂಡರು. ಆದರೆ ತದನಂತರ ಹಸೀನಾರ ವಿರುದ್ಧ ಪ್ರತಿಭಟನೆಗಳೇಳುವಂತೆ ಮಾಡಿ, ಅವರನ್ನು ದೇಶಭ್ರಷ್ಟವಾಗಿಸಿ, ಮಹಮ್ಮದ್ ಯೂನಸ್ಸರನ್ನು ಅಲ್ಲಿನ ಆಡಳಿತ ಸೂತ್ರದಲ್ಲಿರಿಸಿದ್ದು ಅಮೆರಿಕದ ‘ಡೀಪ್ ಸ್ಟೇಟ್’ ಎಂದು ವಿಶ್ಲೇಷಿಸಲಾಗುತ್ತದೆ. ಈ ಡೀಪ್ ಸ್ಟೇಟ್ ಎನ್ನುವುದು ಅಮೆರಿಕದ ಅಧಿಕಾರಿಗಳ ವಲಯ, ರಕ್ಷಣಾ ಗುತ್ತಿಗೆಗಳು, ಉದ್ಯಮ ಎಲ್ಲದರಿಂದೊಡಗೂಡಿದ ಪ್ರತಿಷ್ಟಿತರ ಗುಂಪು.

ಆದರೆ, ಜನವರಿ 20ಕ್ಕೆ ಅಧಿಕಾರ ವಹಿಸಿಕೊಳ್ಳಲಿರುವ ಡೊನಾಲ್ಡ್ ಟ್ರಂಪ್ ಈ ಡೀಪ್ ಸ್ಟೇಟ್ ಹಿತಾಸಕ್ತಿಗಳಿಗೆ ವಿರೋಧಿ. ಅಲ್ಲದೇ, ಇಸ್ಲಾಮಿಕ್ ಉಗ್ರವಾದದ ವಿರುದ್ಧವೂ ಗಟ್ಟಿ ನಿಲವು ಹೊಂದಿರುವವರಿವರು. ಅಮೆರಿಕದ ಗುಪ್ತಚರ ವ್ಯವಸ್ಥೆಯ ನಿಯಂತ್ರಣದ ಹುದ್ದೆಯನ್ನು ಡೊನಾಲ್ಡ್ ಟ್ರಂಪ್ ಅವರು ತುಳಸಿ ಗಬ್ಬಾರ್ಡ್ ಅವರಿಗೆ ನೀಡಿದ್ದಾರೆ. ತುಳಸಿ ಅವರು ಇಸ್ಕಾನಿನ ಅನುಯಾಯಿಯೇ ಆಗಿರುವುದರಿಂದ, ಸನಾತನ ಶ್ರದ್ಧೆ ಹೊಂದಿರುವುದರಿಂದ ಬಾಂಗ್ಲಾದೇಶದ ಈಗಿನ ಆಡಳಿತಗಾರರ ಪಾಲಿಗೆ ಬಿಸಿತುಪ್ಪವಾಗುತ್ತಾರೆ ಎಂಬುದೊಂದು ನಿರೀಕ್ಷೆ.

ಯೂನಸ್ ಅವರನ್ನು ಯಾವ NGO ಮತ್ತು ಅಕಾಡೆಮಿಕ್ ವಲಯವು ನೊಬೆಲ್ ಸಿಗುವಂತೆ ನೋಡಿಕೊಂಡಿತೋ, ಮತ್ಯಾವ ಹಿತಾಸಕ್ತಿಗಳು ಆ ವ್ಯಕ್ತಿಯನ್ನು ಬಾಂಗ್ಲಾದೇಶದ ಆಡಳಿತ ಚುಕ್ಕಾಣಿಯಲ್ಲಿ ಕೂರಿಸಿವೆಯೋ ಅವೆಲ್ಲ ಟ್ರಂಪ್ ಅವರ ವಿರುದ್ಧ ಪಾಳೆಯದಲ್ಲಿರುವ ಶಕ್ತಿಗಳು ಎಂಬುದೇನೋ ನಿಜ. ಹಾಗೆಂದು, ಟ್ರಂಪ್ ಆಡಳಿತವು ಬಾಂಗ್ಲಾದೇಶದ ವಿದ್ಯಮಾನಗಳನ್ನು ಭಾರತಕ್ಕೆ ಸಮಾಧಾನವಾಗುವಂತೆ ಸುಧಾರಿಸಿಬಿಡುತ್ತದೆ ಎಂಬುದು ಅತಿಯಾದ ನಿರೀಕ್ಷೆಯಾಗುತ್ತದೆ. ಯಾರಿಗೆ ಗೊತ್ತು, ಬಾಂಗ್ಲಾದೇಶವನ್ನು ಟ್ರಂಪ್ ಆಡಳಿತವು ಭಾರತದೊಂದಿಗೆ ವ್ಯಾಪಾರ ಚೌಕಾಶಿಯ ದಾಳವಾಗಿಯೂ ಬಳಸೀತೇನೋ. ಇಷ್ಟಕ್ಕೂ, ಮತ್ಯಾವುದೋ ಶಕ್ತಿ ನಮ್ಮ ಹಿತಾಸಕ್ತಿಗಳಿಗೆ ಪೂರಕವಾಗಿ ಕೆಲಸ ಮಾಡಬೇಕು ಎಂದು ನಿರೀಕ್ಷಿಸುವುದೇ ಅಪ್ರಾಯೋಗಿಕ ಎನಿಸುತ್ತದೆ.

ಅಕ್ಕಿ- ಭಾರತದ ಬಳಿ ಇರುವ ಮಹಾ ಅಸ್ತ್ರ

ಇವತ್ತಿಗೆ ಬಾಂಗ್ಲಾದೇಶಕ್ಕೆ ಸಾಲ ಬೇಕೆಂದರೆ ತನ್ನ ಹಿತಾಸಕ್ತಿ ಈಡೇರಿಸಿಕೊಳ್ಳುವ ಕಾರಣಕ್ಕೆ ಚೀನಾವೇ ಸಹಕರಿಸಬಹುದೇನೋ. ಪಾಕಿಸ್ತಾನದಂಥ ದೇಶಗಳು ಒಂದಿಷ್ಟು ಶಸ್ತ್ರ ಮತ್ತು ಉಗ್ರರ ಬಲವನ್ನು ಕೊಟ್ಟು ಯೂನಸ್ ಆಡಳಿತವನ್ನು ಪೊರೆದುಬಿಡಬಲ್ಲವು. ಅದಾಗಲೇ ಭಾರತದ ಅದಾನಿ ಸಮೂಹವು ಬಾಂಗ್ಲಾದೇಶದ ವಿದ್ಯುತ್ ಬಾಕಿಯ ಮೊತ್ತವನ್ನು ಪರಿಗಣಿಸಿ ಅದಕ್ಕೆ ಶಕ್ತಿ ಪೂರೈಕೆ ಮಾಡುತ್ತಿದ್ದ ತನ್ನ ಘಟಕವನ್ನು ಸ್ಥಗಿತವಾಗಿಸಿದೆ. ಇದರಿಂದ ಬಾಂಗ್ಲಾದೇಶದ ಹಲವು ಪ್ರಾಂತ್ಯಗಳು ವಿದ್ಯುತ್ ಕೊರತೆ ಎದುರಿಸುತ್ತಿವೆ. ಆದರೆ, ಇಂಥವನ್ನೆಲ್ಲ ಅಲ್ಲಿನ ಆಡಳಿತಸೂತ್ರ ಹಿಡಿದವರು ಸಹಿಸಿಬಿಡಬಲ್ಲರೇನೋ. ಅಂಥ ಅಗತ್ಯಬಿದ್ದರೆ, ಇಂಧನ ಪೂರೈಕೆ ವಿಚಾರದಲ್ಲಿ ಇಸ್ಲಾಮಿಕ್ ದೇಶಗಳು ಬಾಂಗ್ಲಾದೇಶಕ್ಕೆ ಸ್ವಲ್ಪಮಟ್ಟಿಗಿನ ಸಹಕಾರವನ್ನು ಕೊಟ್ಟುಬಿಡಬಲ್ಲವು.

ಆದರೆ, ಬಾಂಗ್ಲಾದೇಶವು ಭವಿಷ್ಯದಲ್ಲಿ ಆಹಾರ ಬಿಕ್ಕಟ್ಟೊಂದನ್ನು ದಿಟ್ಟಿಸಿ ನೋಡುತ್ತಿದೆ. ಈ ವಿಚಾರದಲ್ಲಿ ಮಾತ್ರ ಅದರ ಈಗಿನ ಮಿತ್ರಪಟ್ಟಿಯಲ್ಲಿರುವ ಯಾವ ದೇಶಗಳೂ ಸಹಕರಿಸಲಾರವು. ಪಾಕಿಸ್ತಾನಕ್ಕೆ ಖುದ್ದು ಹೊಟ್ಟೆಗೆ ಹಿಟ್ಟಿಲ್ಲ. ಚೀನಾ ಸಹ ಇತ್ತೀಚಿನ ವರ್ಷಗಳಲ್ಲಿ ಭಾರತದಿಂದಲೇ ಅಕ್ಕಿ ಆಮದು ಮಾಡಿಕೊಳ್ಳುತ್ತಿದೆ. ಬತ್ತ ಬೆಳೆಯುವುದಕ್ಕೆ ಅತಿಯಾದ ನೀರು ಖರ್ಚು ಏಕೆಂದು ಚೀನಾವು ಸುಲಭಕ್ಕೆ ಭಾರತದಿಂದ ಅಕ್ಕಿ ತರಿಸಿಕೊಳ್ಳುತ್ತಿದೆ ಎಂಬ ವಾದಗಳಿವೆ. ಆದರೆ ವಾಸ್ತವ ಏನೆಂದರೆ, ಭೂಪಟದಲ್ಲಿ ಚೀನಾ ವಿಸ್ತಾರದಿಂದಲೇ ಕಾಣಿಸಿಕೊಂಡರೂ ಅದರ ಕೃಷಿಯೋಗ್ಯ ಭೂಮಿ ಕಡಿಮೆ ಪ್ರಮಾಣದ್ದು. ಹತ್ತಿರ ಹತ್ತಿರ ಜಗತ್ತಿನ ಜನಸಂಖ್ಯೆಯ ಶೇ. 20ರಷ್ಟು ಮಂದಿಗೆ ಹೊಟ್ಟೆ ತುಂಬಿಸಬೇಕಿರುವ ಚೀನಾದ ಬಳಿ ಜಗತ್ತಿನ ಕೃಷಿಯೋಗ್ಯ ಭೂಮಿಯ ಶೇ. 7ರ ಪಾಲಷ್ಟೇ ಇದೆ. 2021-22ರಲ್ಲಿ ಚೀನಾವು ಭಾರತದಿಂದ 16.34 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಆಮದು ಮಾಡಿಕೊಂಡಿತ್ತು. ಹೀಗಿರುವ ಚೀನಾವು ಬಾಂಗ್ಲಾದೇಶಕ್ಕೆ ಬತ್ತ ಬೆಳೆದು ಮಾರುವುದಂತೂ ದೂರದ ಮಾತು. 

ಹಾಗಾದರೆ ಬಾಂಗ್ಲಾದೇಶ ಎದುರಿಸುತ್ತಿರುವ ಆಹಾರದ ಬಿಕ್ಕಟ್ಟು ಹೇಗಿದೆ? ಭಾರತದ ಬಗ್ಗೆ ದ್ವೇಷದ ಮಾತುಗಳನ್ನಾಡಿಕೊಂಡಿರುವ ಸಂದರ್ಭದಲ್ಲೇ ಬಾಂಗ್ಲಾದೇಶದ ಮಧ್ಯಾವಧಿ ಸರ್ಕಾರವು ಭಾರತದಿಂದ 50,000 ಟನ್ನುಗಳ ಅಕ್ಕಿ ಖರೀದಿಸುವ ನಿರ್ಣಯ ಕೈಗೊಂಡಿದೆ. ಜಗತ್ತಿನ ಹಲವು ಖಾಸಗಿ ಸೇವಾ ಸಂಸ್ಥೆಗಳು ಬಾಂಗ್ಲಾದೇಶದಲ್ಲಿ ಬೀಡುಬಿಟ್ಟಿರುವ ಹತ್ತು ಲಕ್ಷಕ್ಕೂ ಹೆಚ್ಚಿನ ರೋಹಿಂಗ್ಯ ಮುಸ್ಲಿಮರನ್ನು ಉದ್ದೇಶಿಸಿಕೊಂಡು ಹಸಿವಿನ ಅಧ್ಯಯನ ನಡೆಸಿವೆ. ವರ್ಲ್ಡ್ ಫುಡ್ ಪ್ರೊಗ್ರಾಂ ಕಡೆಯಿಂದ ನೀಡುತ್ತಿದ್ದ ಪಡಿತರ ವ್ಯವಸ್ಥೆಯಲ್ಲಿ ಕಡಿತವಾಗಿದ್ದರಿಂದ ಶಿಬಿರಗಳಲ್ಲಿರುವ ಶೇ. 90ರಷ್ಟು ಮುಸ್ಲಿಮರು ಆಹಾರ ಕೊರತೆ ಎದುರಿಸಿದ್ದಾರೆ. ಶೇ. 15ರಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ಹೆಚ್ಚಾಗಿದೆ ಎಂದು ವರದಿಯೊಂದು ಸಾರುತ್ತಿದೆ. 

ಅದು ಬಾಂಗ್ಲಾದೇಶದ ಪ್ರಜೆಗಳಿರಲಿ, ಅಲ್ಲಿರುವ ರೋಹಿಂಗ್ಯ ನಿರಾಶ್ರಿತರಿರಲಿ ಯಾವಾಗ ಹೊಟ್ಟೆಗೆ ಕಷ್ಟವಾಗುತ್ತದೆಯೋ ಆಗ ದೇಶದಲ್ಲಿ ಅರಾಜಕತೆ ಶುರುವಾಗುತ್ತದೆ. ಯೂನಸ್ ಥರದವರಿಗೆ ಜನಸಮೂಹವನ್ನು ನಿಯಂತ್ರಿಸಲು ಕಷ್ಟವಾಗತೊಡಗುವುದೇ ಆವಾಗ. 

ಡಿಸೆಂಬರ್ 17ರ ಅಂಕಿ-ಅಂಶದ ಪ್ರಕಾರ ಅಲ್ಲಿನ ಸರ್ಕಾರದ ಬಳಿ 11.48 ಲಕ್ಷ ಟನ್ನುಗಳ ಆಹಾರಧಾನ್ಯ ದಾಸ್ತಾನಿದೆ. ಈ ಪೈಕಿ 7.48 ಲಕ್ಷ ಟನ್ ಅಕ್ಕಿ. ವಾರ್ಷಿಕವಾಗಿ ಬಾಂಗ್ಲಾದೇಶದ ಪಡಿತರ ವ್ಯವಸ್ಥೆಯಲ್ಲಿ ವಿತರಿಸುವುದಕ್ಕೆ ಬೇಕಾಗುವ ಧಾನ್ಯದ ಪ್ರಮಾಣ 26.52 ಲಕ್ಷ ಟನ್. ಕೊರತೆ ತುಂಬುವುದೆಲ್ಲಿಂದ? ಅಷ್ಟರಲ್ಲಿ ಸುಗ್ಗಿ ಬಂದುಬಿಡುತ್ತದೆ, ಹೊಸದಾಗಿ ಬತ್ತದ ಬೆಳೆ ಕೈಗೆ ಬರುತ್ತದೆ ಎಂದೆಲ್ಲ ಸಮಜಾಯಿಷಿಗಳಿದ್ದರೂ ಅದು ದೇಶದ ಹೊಟ್ಟೆ ತುಂಬಿಸುವುದಕ್ಕೆ ಸಾಕಾಗುತ್ತದೆ ಎಂಬ ಬಗ್ಗೆಯೇನೂ ನಿಖರತೆ ಇಲ್ಲ. ಗಮನಿಸಬೇಕಾದ ಅಂಶ ಎಂದರೆ, ಯಾವುದೇ ದೇಶ ಕೇವಲ ಪಡಿತರದ ಬೇಡಿಕೆ ಈಡೇರಿಸಿದರೆ ಸಾಲದು. ಮುಕ್ತ ಮಾರುಕಟ್ಟೆಯಲ್ಲಿ ಸಿಗುವ ಅಕ್ಕಿಯೂ ಕೈಗೆಟಕುವ ದರದಲ್ಲಿರಬೇಕಾಗುತ್ತದೆ. ಇಲ್ಲದಿದ್ದರೆ ಹಣದುಬ್ಬರ ಏರಿ ಅರಾಜಕತೆಗೆ ದಾರಿಯಾಗುತ್ತದೆ. 

ಬಾಂಗ್ಲಾದೇಶದ ಆಹಾರಧಾನ್ಯ ಕೊರತೆ ಎನ್ನುವುದು ಇನ್ನೊಂದೆರಡು ವರ್ಷಗಳಲ್ಲಿ ಸುಧಾರಿಸಿಕೊಳ್ಳಬಹುದಾದ ಅಂಶವಾಗಿಯೂ ಉಳಿದಿಲ್ಲ. ಏಕೆಂದರೆ, ಇತ್ತೀಚಿನ ವರ್ಷಗಳಲ್ಲಿ ಅಲ್ಲಿ ನಿರಂತರವಾಗಿ ಕಾಡುತ್ತಿರುವ ನೆರೆ ಹಾಗೂ ಇನ್ನೊಂದೆಡೆ ಸಮುದ್ರದ ಉಬ್ಬರಗಳು ಆಹಾರ ಉತ್ಪಾದನೆಯನ್ನೇ ಕುಂಠಿತಗೊಳಿಸಿವೆ. ಸಮುದ್ರ ತೀರಕ್ಕೆ ಹೊಂದಿಕೊಂಡಿದ್ದ ಬಹುದೊಡ್ಡ ಬತ್ತ ಬೆಳೆಯುವ ಪ್ರದೇಶವು ಸಮುದ್ರದ ಉಬ್ಬರದಿಂದ ಮಣ್ಣನ್ನು ಲವಣಮಯವಾಗಿಸಿಕೊಂಡು ಕೃಷಿಗೆ ಅನರ್ಹವಾಗಿವೆ. 2050ರ ಹೊತ್ತಿಗೆ ಬಾಂಗ್ಲಾದೇಶದ ಶೇ. 17ರಷ್ಟು ಭೂಭಾಗ ಸಮುದ್ರ ತಳ ಸೇರಿರುತ್ತದೆ ಎಂದು ಅಧ್ಯಯನ ವರದಿಗಳು ಸಾರಿವೆ. ಇದರ ಸೂಚನೆಗಳು ಬಾಂಗ್ಲಾದೇಶದಲ್ಲಿ ಅದಾಗಲೇ ಅನುಭವವೇದ್ಯವಾಗಿದ್ದು, ಕೃಷಿ ಅವಲಂಬಿಸಿದ್ದ ಸಾವಿರಾರು ಕುಟುಂಬಗಳು ನಿರಾಶ್ರಿತವಾಗಿವೆ. 

ಇಂದಿಗೂ ಮುಂದಿಗೂ ಬಾಂಗ್ಲಾದೇಶದ ಆಹಾರ ಬೇಡಿಕೆಗೆ ಪೂರೈಕೆ ಜಾಲವಾಗಬಲ್ಲ ಏಕೈಕ ದೇಶ ಭಾರತ. ಈಗ ಬಾಂಗ್ಲಾದೇಶವು ಭಾರತದಿಂದ ಖರೀದಿಗೆ ಮುಂದಾಗಿರುವ 50 ಸಾವಿರ ಟನ್ನುಗಳೂ ಸೇರಿದಂತೆ, ಭವಿಷ್ಯದಲ್ಲಿ ಸಹ ಅಲ್ಲಿಗೆ ವ್ಯಾಪಾರವಾಗಿಹೋಗಲಿರುವ ಅಕ್ಕಿಯನ್ನು ಭಾರತ ತಡೆದರೆ ಏನಾಗುತ್ತದೆ? ಮಿಲಿಟರಿಯನ್ನು ಬಳಸದೆಯೇ ಬಾಂಗ್ಲಾದೇಶದ ಮೇಲೆ ಶಸ್ತ್ರಪ್ರಯೋಗ ಮಾಡಿದಂತಾಗುತ್ತದೆ. ಪಾಕಿಸ್ತಾನಕ್ಕೆ ಸಿಂಧು ನದಿಯ ನೀರಿನ ಪಾಲಿನ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಿಂದೊಮ್ಮೆ “ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದು ಸಾಧ್ಯವಿಲ್ಲ” ಎಂದು ಹೇಳಿದ್ದಾಗಿ ವರದಿಯಾಗಿತ್ತು. ಭಾರತದೊಂದಿಗೆ ಅಹಂಕಾರದ ವ್ಯವಹಾರಕ್ಕೆ ಇಳಿದಿರುವ, ರಾಷ್ಟ್ರೀಯ ಭದ್ರತೆಗೆ ಭವಿಷ್ಯದ ಸವಾಲೂ ಆಗಿ ಪರಿವರ್ತಿತವಾಗಹೊರಟಿರುವ ಬಾಂಗ್ಲಾದೇಶಕ್ಕೂ ಅಕ್ಕಿ ವಿಚಾರದಲ್ಲೂ ಅಂಥದೇ ಮಾತುಗಳನ್ನಾಡುವುದಕ್ಕೀಗ ಕಾಲ ಕೂಡಿ ಬರುತ್ತಿದೆ ಎಂದೆನಿಸುತ್ತಿದೆ.

ಬಾಂಗ್ಲಾದೇಶದ ಬಗ್ಗೆ ಇಷ್ಟು ಕಟುವಾಗಿ ಯೋಚಿಸಬೇಕಿರುವುದೇಕೆ? 

ಬಾಂಗ್ಲಾದೇಶದಲ್ಲಿ ಈಗಿರುವ ಆಡಳಿತ ತಪ್ಪು ಮಾಡುತ್ತಿದೆ ಎಂದಮಾತ್ರಕ್ಕೆ ಅಲ್ಲಿನ ಜನರಿಗೆ ಆಹಾರ ಪೂರೈಕೆಯೇ ಇಲ್ಲದಂತೆ ಮಾಡುವ ಯೋಚನೆಗಳನ್ನೆಲ್ಲ ಭಾರತೀಯರ ಜನಮಾನಸದಲ್ಲಿ ಬಿತ್ತುವುದು ಸರಿಯೇ ಎಂಬ ಆದರ್ಶವಾದಿ ಪ್ರಶ್ನೆಯೊಂದು ಏಳಬಹುದೇನೋ. ಈ ಆದರ್ಶವು ಶಾಂತಿಕಾಲದಲ್ಲಿ ಸರಿ. ಆದರೆ, ಪೂರ್ವ ಪಾಕಿಸ್ತಾನವಾಗಿದ್ದ ಕಾಲದಲ್ಲಿ, 1971ರಲ್ಲಿ ಬಾಂಗ್ಲಾ ವಿಮೋಚನೆಗೂ ಮುಂಚೆ, ಅಲ್ಲಿಂದ ಭಾರತಕ್ಕೆ ಸಿಕ್ಕಿದ್ದೇನು ಎಂಬ ಚರಿತ್ರೆಯ ಅರಿವಿರಬೇಕಾಗುತ್ತದೆ. 1970-71ರಲ್ಲಿ ಪಾಕಿಸ್ತಾನದ ಸೇನೆ ಹಾಗೂ ಅವತ್ತಿಗೆ ಪೂರ್ವ ಪಾಕಿಸ್ತಾನದಲ್ಲೇ ಇದ್ದುಕೊಂಡು ಪಾಕಿಸ್ತಾನಕ್ಕೆ ಬೆಂಬಲಿಸಿದ್ದ ಮುಸ್ಲಿಮರೆಲ್ಲ ಸೇರಿಕೊಂಡು 30 ಲಕ್ಷ ಮಂದಿಯನ್ನು ನರಮೇಧ ಮಾಡಿದರು. ಈ ಪೈಕಿ ಶೇ. 90ಕ್ಕಿಂತ ಹೆಚ್ಚು ಹಿಂದುಗಳೇ. ಸುಮಾರು 4 ಲಕ್ಷ ಮಹಿಳೆಯರನ್ನು ನಡುರಸ್ತೆಯಲ್ಲಿ ರೇಪ್ ಮಾಡಿ ಅವರಲ್ಲಿ ಹೆಚ್ಚಿನವರನ್ನು ಲೈಂಗಿಕ ತೃಷೆ ತೀರಿಸುವ ಗುಲಾಮರನ್ನಾಗಿ ಮಾಡಿಕೊಳ್ಳಲಾಯಿತು. 

ಇದೀಗ ಮತ್ತೆ ಬಾಂಗ್ಲಾದೇಶವು ಅದೇ ದಾರಿಯಲ್ಲಿರುವಾಗ ಭಾರತವು ತನ್ನೆದುರಿಗಿರುವ ಕಟು ಆಯ್ಕೆಗಳನ್ನು ಪರಿಶೀಲಿಸಲೇಬೇಕಲ್ಲವೇ?

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT