ಕೆಎಸ್ ಈಶ್ವರಪ್ಪ (ಸಂಗ್ರಹ ಚಿತ್ರ) 
ಅಂಕಣಗಳು

ದಿಲ್ಲಿಯಲ್ಲಿ ಈಶ್ವರಪ್ಪ ಪರದಾಟ: ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆಯೇ ಸಮಸ್ಯೆ (ಸುದ್ದಿ ವಿಶ್ಲೇಷಣೆ)

-ಯಗಟಿ ಮೋಹನ್'ನನ್ನ ಮಗನಿಗೆ ಲೋಕಸಭೆಗೆ ಟಿಕೆಟ್ ಕೊಡಿ'... ಹೀಗೆ ವರಿಷ್ಠರಿಗೆ ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ದುಂಬಾಲು ಬಿದ್ದಿದ್ದಾರೆ.

'ನನ್ನ ಮಗನಿಗೆ ಲೋಕಸಭೆಗೆ ಟಿಕೆಟ್ ಕೊಡಿ'...

ಹೀಗೆ ವರಿಷ್ಠರಿಗೆ ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ದುಂಬಾಲು ಬಿದ್ದಿದ್ದಾರೆ. ಅವರ ಬೇಡಿಕೆಗೆ ಯಾವುದೇ ಸ್ಪಷ್ಟ ಉತ್ತರ ಅಥವಾ ಖಚಿತ ಭರವಸೆ ದಿಲ್ಲಿ ವರಿಷ್ಠರಿಂದ ಸಿಕ್ಕಿಲ್ಲ.  ಹಾಗಂತ ಅವರೂ ನಿರಾಶರಾಗಿಲ್ಲ. 

ಪುತ್ರ ಕೆ.ಈ.ಕಾಂತೇಶ್ ರನ್ನು ಹಾವೇರಿ ಲೋಕಸಭಾ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ನಿಟ್ಟಿನಲ್ಲಿ ಈಗಾಗಲೇ ಸರಿ ಸುಮಾರು ಆರು ತಿಂಗಳಿನಿಂದ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡು ಪಕ್ಷದ ಮುಖಂಡರೂ ಸೇರಿದಂತೆ ವಿವಿಧ ಸಮುದಾಯಗಳ ಮಠಾಧೀಶರನ್ನೂ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.

ಹಾವೇರಿ ಕ್ಷೇತ್ರದ ಹಾಲಿ ಸಂಸದ ಶಿವಕುಮಾರ್ ಉದಾಸಿ ವೈಯಕ್ತಿಕ ಕಾರಣಗಳ ಹಿನ್ನಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಹಿನ್ನಲೆಯಲ್ಲಿ ಈಶ್ವರಪ್ಪ ಪ್ರಯತ್ನ ಮುಂದುವರಿಸಿದ್ದಾರೆ. ಅವರ ಪುತ್ರನಿಗೆ ಬಿಜೆಪಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತದೋ ಇಲ್ಲವೋ ಇನ್ನೂ ಖಚಿತವಾಗಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಹಾಲಿ ಕೆಲವು ಸಂಸದರ ಕುರಿತೇ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೆನರಾ ಕ್ಷೇತ್ರದ ಹಾಲಿ ಸದಸ್ಯ ಅನಂತ ಕುಮಾರ ಹೆಗಡೆ, ಬೀದರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಹಲವರ ವಿರುದ್ಧ ಅಸಮಾಧಾನದ ಮಾತುಗಳು ಗುರುವಾರ ಬೆಂಗಳೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕೇಳಿ ಬಂದಿದೆ. ಯಥಾ ಪ್ರಕಾರ ಈ ಎಲ್ಲ ಅಭಿಪ್ರಾಯಗಳನ್ನು ಪಕ್ಷದ ವರಿಷ್ಟರ ಗಮನಕ್ಕೆ ತರುವುದಾಗಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಒಂದಂತೂ ಖಚಿತ. ರಾಜ್ಯದಲ್ಲಿ ಪಕ್ಷದ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಗೆಲ್ಲಬೇಕೆಂದರೆ ಬರೀ ಮೋದಿ ಅಲೆಯೊಂದನ್ನೇ ನೆಚ್ಚಿಕೊಂಡರೆ ಆಗುವುದಿಲ್ಲ, ರಾಜ್ಯ ರಾಜಕಾರಣದ ಸ್ಥಳೀಯ ವಿದ್ಯಮಾನಗಳನ್ನೂ ಗಣನಗೆ ತೆಗೆದುಕೊಳ್ಳಬೇಕು ಎಂಬ ಅಭಿಪ್ರಾಯ ಬಿಜೆಪಿ ಸಭೆಯಲ್ಲಿ ಮುಖಂಡರಿಂದ ಕೇಳಿ ಬಂದಿದೆ.  ದಿಲ್ಲಿ ನಾಯಕತ್ವ ಯಾವ ತೀರ್ಮಾನ ತೆಗೆದುಕೊಳ್ಳುತ್ತದೋ ಕಾದು ನೋಡಬೇಕು.

ಈಶ್ವರಪ್ಪ ಪರದಾಟ

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದವರ ಪೈಕಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಜತೆಯಲ್ಲೇ ಕೇಳಿ ಬರುವ ಹೆಸರು ಎಂದರೆ ಕೆ.ಎಸ್. ಈಶ್ವರಪ್ಪ ಅವರದ್ದು. 80 ರ ದಶಕದ ಆರಂಭದ ದಿನಗಳಲ್ಲಿ ಯಡಿಯೂರಪ್ಪನವರ ಜತೆ ಸರಿಸಾಟಿಯಾಗಿ ನಿಂತು ಪಕ್ಷವನ್ನು ಸಂಘಟಿಸಿ ಅದಕ್ಕೊಂದು ಗಟ್ಟಿ ನೆಲೆ ಕಲ್ಪಿಸುವಲ್ಲಿ ಅವರ ಪಾತ್ರವೂ ದೊಡ್ಡದು. ಎಷ್ಟೋ ಸಂದರ್ಭಗಳಲ್ಲಿ ಈ ಇಬ್ಬರೂ ನಾಯಕರು ಸ್ಕೂಟರ್ ನಲ್ಲಿ ಪ್ರವಾಸ ಕೈಗೊಂಡು ಸಂಘಟನೆಗೆ ದುಡಿದಿದ್ದನ್ನು ಪಕ್ಷದ ಹಿರಿಯ ಕಾರ್ಯಕರ್ತರು ಮುಖಂಡರು ಈಗಲೂ ಸ್ಮರಿಸುತ್ತಾರೆ.

ಹಿಂದುಳಿದ ವರ್ಗದ ಕುರುಬ ಸಮಾಜಕ್ಕೆ ಸೇರಿದ ಈಶ್ವರಪ್ಪ ಪಕ್ಷದ ರಾಜ್ಯಾಧ್ಯಕ್ಷ, ಮಂತ್ರಿ ಉಪ ಮುಖ್ಯಮಂತ್ರಿ, ವಿಧಾನ ಪರಿಷತ್ ನ ಪ್ರತಿಪಕ್ಷದ ನಾಯಕ ಸೇರಿದಂತೆ  ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದರೂ ಪಕ್ಷದಲ್ಲಿ ಯಡಿಯೂರಪ್ಪನವರಂತೆ ಪ್ರಶ್ನಾತೀತ ನಾಯಕನಾಗಿ ರೂಪುಗೊಂಡಿಲ್ಲದೇ ಇಲ್ಲ ಎಂಬುದೇ ಆಶ್ಚರ್ಯಕರ ಸಂಗತಿ. ತಮ್ಮ  ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ಹಿಂದುತ್ವದ ಸಿದ್ಧಾಂತಕ್ಕೆ ಸೀಮಿತವಾಗಿ ಗುರುತಿಸಿಕೊಂಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೆ ಹಿಂದುಳಿದ ವರ್ಗದ ಪ್ರಶ್ನಾತೀತ ನಾಯಕರಾಗಿ ರೂಪುಗೊಳ್ಳಲಿಲ್ಲ. ಈವತ್ತಿಗೂ ಆಪ್ತ ವಲಯದಲ್ಲಿರುವ ಸ್ನೇಹಿತರು ಅವರನ್ನು ಈ ಕುರಿತು ಖಾಸಗಿಯಾಗಿಯೂ ಪ್ರಶ್ನಿಸಿ ಛೇಡಿಸಿದರೆ ಅವರಿಂದ ನಾನು ಜಾತಿ ರಾಜಕಾರಣಿಯಲ್ಲ. ನನ್ನದು ಹಿಂದುತ್ವದ ಸಿದ್ದಾಂತ ಸಂಘದ ನಿಲುವೇ ನನ್ನ ನಿಲುವು ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ. ಇಂಥ ಈಶ್ವರಪ್ಪ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇದ್ದಾಗ ಬೆಂಗಳೂರು ಅರಮನೆ ಮೈದಾನದಲ್ಲಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶವನ್ನು ಅದ್ಧೂರಿಯಾಗಿ ಸಂಘಟಿಸಿ ಯಶಸ್ವಿಯಾಗಿದ್ದರೂ ಅದೂ ಯಡಿಯೂರಪ್ಪನವರ ಪ್ರಭಾ ವಲಯದಲ್ಲಿ ಸೇರಿ ಹೋಯಿತು. ತಾವೊಬ್ಬ ಹಿಂದುಳಿದ ವರ್ಗಗಳ ನಾಯಕ ಎಂದು ಅವರು ಗುರುತಿಸಿಕೊಳ್ಳುವ ಹೊತ್ತಿಗೆ ತಡವಾಗಿ ಹೋಗಿತ್ತು. ಆ ನಿಟ್ಟಿನಲ್ಲಿ ಅವರು ಮಾಡಿದ ಒಂದೆರಡು ಪ್ರಯತ್ನಗಳೂ ಅನೇಕ ಗೊಂದಲಗಳಿಂದಾಗಿ ಪ್ರಯತ್ನ ನೀಡಲಿಲ್ಲ. 

ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನಿರಾಕರಿಸುವುದೆಂಬ ಸುಳಿವು ದೊರೆತಾಗ ಚುನಾವಣಾ ರಾಜಕಾರಣದಿಂದ ಸ್ವಯಂ ನಿವೃತ್ತಿ ಘೋಷಿಸಿದ ಈಶ್ವರಪ್ಪ ತಮ್ಮ ಮಗನನ್ನು ಮುಂಚೂಣಿ ರಾಜಕಾರಣಕ್ಕೆ ತರುವ ಪ್ರಯತ್ನ ಮಾಡಿದರಾದರೂ ಬಿಜೆಪಿ ಅವರ ಪುತ್ರನಿಗೆ ಶಿವಮೊಗ್ಗದಿಂದ ಸ್ಪರ್ಧಿಸಲು ಟಿಕೆಟ್ ನೀಡಲಿಲ್ಲ. ಬದಲಾಗಿ ಪಕ್ಷದ ಮುಖಂಡ ಚೆನ್ನ ಬಸಪ್ಪ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತು. ನೋವು ಮರೆತ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದ ತುಂಬಾ ಓಡಾಡಿ ಅಭ್ಯರ್ಥಿಯನ್ನು ಗೆಲ್ಲಿಸಿದರು.  

ಪಕ್ಷ , ಸಂಘಟನೆಗಾಗಿ ಸತತವಾಗಿ ದುಡಿದ ಅವರೀಗ ಪಕ್ಷದಲ್ಲಿ ಒಂದು ರೀತಿ ಒಂಟಿಯಾಗಿದ್ದಾರೆ. ತಮ್ಮ ಮಗನಿಗೆ ಹಾವೇರಿಯಿಂದ ಸ್ಪರ್ಧಿಸಲು ಒಂದು ಅವಕಾಶ ಮಾಡಿಕೊಡಿ ಎಂದು ಕೋರಿ ವರಿಷ್ಟರಿಗೆ ದುಂಬಾಲು ಬೀಳುವ ಸನ್ನಿವೇಶಕ್ಕೆ ಸಿಲುಕಿದ್ದಾರೆ.  ತಮ್ಮ ಕಣ್ಣ ಮುಂದೆಯೇ ಬೆಳೆದ ಈಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಬಿ.ವೈ.ವಿಜಯೇಂದ್ರ ಅವರ ನಾಯಕತ್ವವನ್ನು ಒಪ್ಪಿಕೊಳ್ಳುವ ಅನಿವಾರ್ಯ ಪರಿಸ್ಥಿತಿಗೂ ಈಗ ಅವರು ಇಷ್ಟವಿಲ್ಲದಿದ್ದರೂ ಸಿಲುಕಿದ್ದಾರೆ. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಸಂದರ್ಭದಲ್ಲಿ ಬಿಜೆಪಿಯ ದಿಲ್ಲಿ ನಾಯಕರು ಸೌಜನ್ಯಕ್ಕಾದರೂ ತಮ್ಮ ಜತೆ ಸಮಾಲೋಚಿಸಲಿಲ್ಲ ಎಂಬ ನೋವೂ ಅವರನ್ನು ಕಾಡುತ್ತಿದೆ. ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ರಾಜಕಾರಣದಲ್ಲಿ ತಮ್ಮನ್ನು ಗುರುತಿಸಿಕೊಂಡಿರುವ ಕಾಂತೇಶ್ ಗೆ ಹಾವೇರಿಯಿಂದ ಸ್ಪರ್ಧೆಗೆ ಟಿಕೆಟ್ ಸಿಕ್ಕರೆ ಮೋದಿ ಜನಪ್ರಿಯತೆ, ಯಡಿಯೂರಪ್ಪ ಅವರ ಪ್ರಭಾವ, ಮತ್ತು ಅಧಿಕ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗಗಳ ಮತದಾರರು ತಮ್ಮ ಕೈ ಹಿಡಿಯಬಹುದು ಎಂಬ ದೂರಗಾಮಿ ಲೆಕ್ಕಾಚಾರ ಈಶ್ವರಪ್ಪ ಅವರದ್ದು. ಆದರೆ ಆಂತರಿಕ ಕಚ್ಚಾಟ ಹೆಚ್ಚುತ್ತಿರುವ ಬಿಜೆಪಿಯಲ್ಲಿ ಅವರ ಆಸೆ ಈಡೇರುತ್ತದೆಯೆ? ಎಂಬುದು ಸದ್ಯದ ಪ್ರಶ್ನೆ. ಮಾಜಿ ಸಚಿವ ಹಾಗೂ ಯಡಿಯೂರಪ್ಪನವರ ಬೆಂಬಲಿಗ ಎಂದೇ ಗುರುತಿಸಿಕೊಂಡಿರುವ ಬಿ.ಸಿ.ಪಾಟೀಲ್ ಈಶ್ವರಪ್ಪ ಪ್ರಯತ್ನಕ್ಕೆ ಅಡ್ಡಗಾಲಾಗಿದ್ದಾರೆ.  

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯವರಿಗೆ ಈ ಬಾರಿ ಉಡುಪಿ –ಚಿಕ್ಕಮಗಳೂರಿನಿಂದ ಸ್ಪರ್ಧೆಗೆ ಅವಕಾಶ ಮಾಡಿಕೊಡುವುದು ಬೇಡ ಎಂದು ಆ ಭಾಗದ ಕಾರ್ಯಕರ್ತರು, ಮುಖಂಡರು ಪಟ್ಟು ಹಿಡಿದಿದ್ದಾರೆ. ಇಲ್ಲೂ ಬಿಜೆಪಿಯಲ್ಲಿನ ಗುಂಪುಗಾರಿಕೆಯೇ ಪ್ರಮುಖ ಪಾತ್ರ ವಹಿಸಿದೆ. ಈ ಕ್ಷೇತ್ರದಿಂದ ಹಿಂದುಳಿದ ವರ್ಗಗಳ ಆಯೋಗದ ಹಾಲಿ ಅಧ್ಯಕ್ಷ , ಜನತಾ ಪರಿವಾರದ ತಮ್ಮ ಹಳೆಯ ಸಂಗಾತಿ ಜಯಪ್ರಕಾಶ ಹೆಗ್ಡೆ ಯವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ. ಶೋಭಾ ಅವರಿಗೆ ಟಿಕೆಟ್ ತಪ್ಪಿದರೆ ಪಕ್ಷದ ಅಭ್ಯರ್ಥಿಯಾಗಿ ತಾನು ಕಣಕ್ಕಿಳಿಯುವುದು ಸುಲಭವಾಗಬಹುದು ಎಂಬುದು ಮಾಜಿ ಸಚಿವ ಸಿ.ಟಿ.ರವಿ ಲೆಕ್ಕಾಚಾರ. ಆದರೆ ಇಲ್ಲೂ ಯಡಿಯೂರಪ್ಪನವರ ಮಾತೇ ಅಂತಿಮವಾಗುವ ಸಾಧ್ಯತೆಗಳಿವೆ. ಹೀಗಾದಾಗ ಶೋಭಾ ಕರಂದ್ಲಾಜೆಯವರೇ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿಯಬಹುದು.  ಇಡೀ ರಾಜ್ಯದಲ್ಲಿ ಕುತೂಹಲಕ್ಕೆ ಕಾರಣವಾಗಿರುವ ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಈ ಬಾರಿ ತನ್ನ ಅಭ್ಯರ್ಥಿಯಾಗಿ ಸುಮಲತ ಅವರನ್ನೇ ಬಿಜೆಪಿ ಕಣಕ್ಕಿಳಿಸುತ್ತದೆಯೋ ಅಥವಾ ಮೈತ್ರಿ ಕೂಟ ದ ಸಹಭಾಗಿ ಪಕ್ಷ ಜೆಡಿಎಸ್ ಗೆ ಕ್ಷೇತ್ರವನ್ನು ಬಿಟ್ಟುಕೊಡುತ್ತದೋ ಎಂಬುದು ಸದ್ಯಕ್ಕೆ ಕುತೂಹಲ. 

ಸುಮಲತ ಮಂಡ್ಯ ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಜೆಡಿಎಸ್ ವಿರುದ್ಧ ಸ್ಪರ್ಧಿಸಿದ್ದ ಅವರನ್ನು ಬಿಜೆಪಿ ಬಹಿರಂಗವಾಗೇ ಬೆಂಬಲಿಸಿದ್ದರೆ ಕಾಂಗ್ರೆಸ್ ಜೆಡಿಎಸ್ ಜತೆಗಿದ್ದುಕೊಂಡೇ ಪರೋಕ್ಷವಾಗಿ ಅವರ ಗೆಲುವಿಗೆ ಸಹಕಾರ ನೀಡಿತ್ತು. ಬದಲಾದ ಪರಿಸ್ಥಿತಿಯಲ್ಲಿ ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ತಯಾರಿಯಲ್ಲಿದ್ದಾರೆ. ಲೋಕಸಭೆಗೆ ಆಯ್ಕೆಯಾದ ನಂತರ ಸುಮಲತಾ ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದರೂ ಈವರೆಗೆ  ಸಂಸದೀಯ ಪಕ್ಷದ ಸಹ ಸದಸ್ಯೆಯಾಗಿಯೂ ಗುರುತಿಸಿಕೊಂಡಿಲ್ಲ. ಸುಮಲತಾ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದರೆ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಡ್ಯದಿಂದ ಕಣಕ್ಕಿಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ದೇಶಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪುವ ಸಾಧ್ಯತೆ ಕಡಿಮೆ.

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಈ ಬಾರಿ ಕೇಂದ್ರ ಸಚಿವರಾದ ಜೈಶಂಕರ್ ಅಥವಾ ಶ್ರೀಮತಿ ನಿರ್ಮಲಾ ಸಿತಾರಾಮನ್ ಅವರನ್ನು ಕಣಕ್ಕಿಳಿಸುವ ಮಾತುಗಳು ಕೇಳಿ ಬರುತ್ತಿದೆ. ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರೂ ಚಲಾವಣೆಗೆ ಬಂದಿದೆ.  ಜನಾನುರಾಗಿ ಕೇಂದ್ರ ಸಚಿವರೂ ಆಗಿದ್ದ ದಿವಂಗತ ಅನಂತ್ ಕುಮಾರ್ ಈ ಹಿಂದೆ ಇದೇ ಕ್ಷೇತ್ರ ಪ್ರತಿನಿಧಿಸಿದ್ದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ವಿಧಾನ ಪರಿಷತ್ ಗೂ ಆಯ್ಕೆ ಮಾಡಲಿಲ್ಲ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ತೇಜಸ್ವಿ ಸೂರ್ಯ ಅಭ್ಯರ್ಥಿಯಾಗುವ ಸಂದರ್ಭದಲ್ಲೂ ಅವರನ್ನು ಕಡೆಗಣಿಸಲಾಯಿತು. ಈ ಬಾರಿ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂಬ ಒತ್ತಾಯ ಪಕ್ಷದಲ್ಲಿ ದಿನೇ ದಿನೇ ಬಲವಾಗುತ್ತಿದೆ. 

ಸಂತೋಷ್ ಶಿಷ್ಯರಿಗೆ ಕೊಕ್?

ಲೋಕಸಭಾ ಚುನಾವಣೆಗೆ ಹೊಸ ಮುಖಗಳ ಆಯ್ಕೆಗೆ ಬಿಜೆಪಿ ಮಣೆ ಹಾಕಿದರೆ ಮೈಸೂರಿನಲ್ಲಿ ಪ್ರತಾಪ ಸಿಂಹ ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ. ಇವರಿಬ್ಬರೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಶಿಷ್ಯರು. ಮೈಸೂರನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟು ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅಥವಾ ಬೆರೊಬ್ಬರು ಅಭ್ಯರ್ಥಿ ಆದರೆ ಮೈತ್ರಿಯೂ ಸಫಲ, ಶತ್ರು ಸಂಹಾರವೂ ಆಗುತ್ತದೆ ಎಂಬುದು ಯಡಿಯೂರಪ್ಪ ಅವರ ತಂತ್ರ. ಕೆನರಾ ಕ್ಷೇತ್ರದಲ್ಲಿ ಅನಂತಕುಮಾರ ಹೆಗಡೆ ವಿರುದ್ಧ ಪಕ್ಷದ ಕಾರ್ಯಕರ್ತರು, ಮುಖಂಡರೇ ಬಂಡಾಯ ಎದ್ದಿದ್ದಾರೆ.

-ಯಗಟಿ ಮೋಹನ್
yagatimohan@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT