90 ಸ್ಥಾನಗಳನ್ನು ಹೊಂದಿರುವ ಹರ್ಯಾಣ ವಿಧಾನಸಭೆ ಅಕ್ಟೋಬರ್ 5ರಂದು ಚುನಾವಣೆ ಎದುರಿಸುತ್ತಿದೆ. ಕಳೆದ ಎರಡು ಅವಧಿಗಳಿಗೆ, ಅಂದರೆ ಒಂದು ದಶಕದಿಂದ, ರಾಜ್ಯದಲ್ಲಿದ್ದದ್ದು ಬಿಜೆಪಿ ಆಡಳಿತ. ಈ ಬಾರಿ ಅದನ್ನು ಬದಲಾಯಿಸಿ ತಾನು ಅಧಿಕಾರದಲ್ಲಿ ವಿರಾಜಮಾನನಾಗುವೆನೆಂಬ ಉಮೇದು ಕಾಂಗ್ರೆಸ್ ಪಾಳೆಯದಲ್ಲಿದೆ. ಪ್ರತಿಬಾರಿ ಚುನಾವಣೆ ಬಂದಾಗಲೂ ಪ್ರತಿಪಕ್ಷ ಸ್ಥಾನದಲ್ಲಿರುವವರು ಹೀಗೆ ಅಂದುಕೊಳ್ಳಲೇಬೇಕು, ಇದರಲ್ಲೇನು ವಿಶೇಷ ಎಂದಿರಾ? ವಿಶೇಷವೇನೆಂದರೆ, ಈ ವರ್ಷವಷ್ಟೇ ಆಗಿರುವ ಲೋಕಸಭೆ ಚುನಾವಣೆಯಲ್ಲಿ ಹರ್ಯಾಣ ಮತ ಹಾಕಿರುವ ರೀತಿ ಕಾಂಗ್ರೆಸ್ಸಿಗೆ ಜಯದ ವಿಶ್ವಾಸವನ್ನು ಹೆಚ್ಚಾಗಿ ಕೊಡುತ್ತಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಅಲ್ಲಿನ ಹತ್ತೂ ಲೋಕಸಭೆ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಆದರೆ, 2024ರ ಲೋಕಸಭೆ ಚುನಾವಣೆಯ ಫಲಿತಾಂಶ ಗಮನಿಸಿದರೆ ಹರ್ಯಾಣದಲ್ಲಿ ಬಿಜೆಪಿ-ಕಾಂಗ್ರೆಸ್ ಸಮಬಲ. ಇಬ್ಬರೂ ಐದೈದು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಂದೇ ಈ ಬಾರಿ ಹರ್ಯಾಣ ಪ್ರಚಾರಾಂದೋಲನಗಳಲ್ಲಿ ರಾಹುಲ್ ಗಾಂಧಿ ಉತ್ಸುಕತೆಯಿಂದಲೇ ಸಮಾವೇಶಗಳನ್ನು ಮಾಡಿದ್ದಾರೆ. ಇತ್ತ, ನರೇಂದ್ರ ಮೋದಿ ಸಹ ನಾಲ್ಕು ಬೃಹತ್ ಸಮಾವೇಶಗಳನ್ನು ನಡೆಸಿದ್ದಾರೆ.
ಜಾತಿ ಮತ್ತು ಜಾಟ್ - ಈ ಎರಡು ಪದಗಳಲ್ಲಿದೆ ಹರ್ಯಾಣ ಸಮೀಕರಣ
ಹತ್ತು ವರ್ಷಗಳ ಕಾಲ ಬಿಜೆಪಿ ಅಧಿಕಾರದಲ್ಲಿದ್ದಿದ್ದರಿಂದ ಸಹಜವಾಗಿ ಆಡಳಿತ-ವಿರೋಧಿ ಅಲೆ ಇದೆಯಾದ್ದರಿಂದ ಕಾಂಗ್ರೆಸ್ಸಿಗೆ ಗೆಲವಿನ ಸಾಧ್ಯತೆ ಹೆಚ್ಚಿರಬಹುದು ಎಂದು ವಿಶ್ಲೇಷಿಸುವಷ್ಟು ಸರಳವಿಲ್ಲ ಹರ್ಯಾಣ ಚುಣಾವಣೆ. ಅಲ್ಲಿ ಆಡಳಿತ ವಿರೋಧಿ ಅಲೆಯೇನೂ ಸಾರ್ವತ್ರಿಕವಾಗಿ ಹರಡಿರುವುದರ ಬಗ್ಗೆ ಹೆಚ್ಚಿನ ವರದಿಗಳಿಲ್ಲ. ಆದರೆ ಜಾಟರು ಬಿಜೆಪಿ ವಿರುದ್ಧ ಮುನಿಸಿಕೊಂಡಿದ್ದಾರೆ ಎಂಬ ಮಾತು ಈ ವರ್ಷದ ಲೋಕಸಭೆ ಚುನಾವಣೆಯಲ್ಲೂ ಕೇಳಿಬಂದಿತ್ತು, ಈಗಲೂ ಕೇಳಿಬರುತ್ತಿದೆ.
ಹರ್ಯಾಣವನ್ನು ಜಾಟ್ ಲ್ಯಾಂಡ್ ಎಂದೇ ಕರೆಯುವ ರೂಢಿ. ಹಾಗಂತ ಹರ್ಯಾಣದಲ್ಲಿ ಇದೇ ದೊಡ್ಡ ಜಾತಿವರ್ಗ ಎಂದೇನಿಲ್ಲ. ಒಬಿಸಿ ಸಮುದಾಯದ ನಂತರ ಜಾಟರು ಒಂದು ದೊಡ್ಡ ವೊಟ್ ಸಮೂಹ ಎಂದು ಗುರುತಿಸಲಾಗುತ್ತದೆ. ಆದರೆ ಒಬಿಸಿಗಳು ಹಲವು ಜಾತಿಗಳಲ್ಲಿ ಹರಡಿರುವುದರಿಂದ, ಅಲ್ಲಿನ ಮತ ವಿಭಜನೆ ಸಾಧ್ಯತೆಗಳು ಹೆಚ್ಚಿರುವುದರಿಂದ ಜಾಟರು ಒಂದು ಜಾತಿಯಾಗಿ ಹರ್ಯಾಣದ ಚುನಾವಣೆಯ ರಾಜಕೀಯ ನಿರ್ಧರಿಸುವಲ್ಲಿ ಪ್ರಮುಖರಾಗುತ್ತಾರೆ.
ಜಾಟರಿಗೇಕೆ ಬಿಜೆಪಿ ಮೇಲೆ ಸಿಟ್ಟು?
ಜಾಟ್ ಸಮುದಾಯ ಮುಖ್ಯವಾಗಿ ಎರಡು ಜೀವನಾಧಾರ ಪದ್ಧತಿಗಳಲ್ಲಿ ತೊಡಗಿಸಿಕೊಂಡಿದೆ. ಮೊದಲನೆಯದಾಗಿ, ಜಾಟರು ಹೆಚ್ಚಿನದಾಗಿ ಕೃಷಿ ಭೂಮಿಯ ಒಡೆತನವನ್ನು ಹೊಂದಿದ್ದಾರೆ. ಹೇಗೆ ಪಂಜಾಬಿನಲ್ಲಿ ಭೂ ಒಡೆತನ ಹೊಂದಿರುವವರು ಕೇಂದ್ರದ ಕೃಷಿ ಸುಧಾರಣೆಗಳ ವಿರುದ್ಧ ತಿರುಗಿಬಿದ್ದರೋ ಅದೇ ಮನೋಭಾವ ಹರ್ಯಾಣದ ಜಾಟರಲ್ಲಿಯೂ ವ್ಯಕ್ತವಾಗಿತ್ತು. ದೆಹಲಿಯಲ್ಲಿ ರೈತರನ್ನು ಪೊಲೀಸರು ಥಳಿಸಿದ್ದಾರೆ ಎಂಬ ವ್ಯಾಖ್ಯಾನಗಳು ಜಾಟ್ ಸಮುದಾಯದ ಅಹಮಿಕೆಗೆ ಭಾರಿ ಹೊಡೆತವನ್ನೇ ಕೊಟ್ಟಿವೆ. ಹೀಗಾಗಿಯೇ ಬಿಜೆಪಿಯ ಹಲವು ಅಭ್ಯರ್ಥಿಗಳಿಗೆ ಲೋಕಸಭೆ ಚುನಾವಣೆಯ ವೇಳೆ ಪ್ರಚಾರಕ್ಕೆ ಹೋದಾಗಲೇ ಪ್ರತಿಭಟನೆಗಳ ಬಿಸಿ ತಟ್ಟಿತ್ತು. ಆ ಚುನಾವಣೆಯಲ್ಲಿ ಬಿಜೆಪಿಯ ಐದು ಸ್ಥಾನಗಳನ್ನು ಕಸಿದ ನಂತರ ಈ ನಿಟ್ಟಿನಲ್ಲಿ ಜಾಟರ ಸಿಟ್ಟು ಕಡಿಮೆಯಾಗಿದೆಯೋ, ಇಲ್ಲವೋ ಎಂಬುದಕ್ಕೆ ಈ ಚುನಾವಣೆಯೇ ಉತ್ತರ ಹೇಳಬೇಕು.
ಎರಡನೆಯದಾಗಿ, ಜಾಟರು ಸೇನೆಯಲ್ಲಿ ಉದ್ಯೋಗಕ್ಕೆ ಸೇರುವುದರಲ್ಲೂ ಮುಂಚೂಣಿಯಲ್ಲಿದ್ದಾರೆ. ಮೋದಿ ಸರ್ಕಾರದ ಅಗ್ನಿಪಥ ಯೋಜನೆಯು ಯುವಕರನ್ನು ಸಣ್ಣ ಅವಧಿಗಷ್ಟೇ ಸೇನೆಯಲ್ಲಿ ದುಡಿಸಿಕೊಂಡು ನಂತರ ನಿರುದ್ಯೋಗಕ್ಕೆ ತಳ್ಳಲಿದೆ ಎಂಬ ಪ್ರತಿಪಕ್ಷಗಳ ವ್ಯಾಖ್ಯಾನವು ಇಲ್ಲೆಲ್ಲ ಭಾರಿ ಕೆಲಸ ಮಾಡಿದೆ.
ಬಿಜೆಪಿಯ ಯೋಜನೆ ಏನು?
ಜಾಟರ ಚೌಕಾಶಿಯಿಂದ ತಪ್ಪಿಸಿಕೊಳ್ಳಬೇಕಾದರೆ ಬಿಜೆಪಿಯನ್ನು ಒಬಿಸಿಗಳು ದೊಡ್ಡಮಟ್ಟದಲ್ಲಿ ಕೈಹಿಡಿಯಬೇಕು, ಜತೆಯಲ್ಲೇ ಎಸ್ ಸಿ ಸಮುದಾಯದ ಮತಗಳೂ ಕೈಹಿಡಿಯಬೇಕು. ಜತೆ ಜತೆಗೆ ಜಾಟರ ಮತಗಳು ಒಟ್ಟೊಟ್ಟಾಗಿ ಕಾಂಗ್ರೆಸ್ಸಿಗೆ ಹೋಗದೇ ಸ್ವಲ್ಪ ವಿಭಜನೆ ಆದರೆ ಬಿಜೆಪಿಗೆ ಅನುಕೂಲ. ಈಗಿನ ಸರ್ಕಾರದಲ್ಲಿ ಲೋಕಸಭೆ ಚುನಾವಣೆ ಬರುವವರೆಗೂ ಬಿಜೆಪಿ ಜತೆಯಲ್ಲಿದ್ದ ಜನ ನಾಯಕ ಜನತಾ ಪಕ್ಷವು ಜಾಟರ ಮತಗಳನ್ನು ಸೆಳೆಯಬಲ್ಲದು. ಅಂತೆಯೇ ಐ ಎನ್ ಎಲ್ ಡಿ ಸಹ. ಇವೆರಡೂ ಕಾಂಗ್ರೆಸ್ಸಿಗೆ ಎಷ್ಟು ಪೈಪೋಟಿ ಕೊಡುತ್ತವೆ ಎನ್ನುವುದರ ಮೇಲೆಯೂ ಬಿಜೆಪಿ ಭವಿಷ್ಯ ನಿಂತಿದೆ.
ಉಳಿದಂತೆ, ಹರ್ಯಾಣದಲ್ಲಿ ಜಾಟರಿಗೆ ಪ್ರತಿಯಾಗಿ ಉಳಿದವರನ್ನು ಧ್ರುವೀಕರಿಸಿ ಗೆಲ್ಲುವ ಯೋಜನೆಯನ್ನು ಬಿಜೆಪಿ ಮೊದಲಿನಿಂದಲೂ ಮಾಡಿಕೊಂಡುಬಂದಿದೆ. ಈಗ ಕೇಂದ್ರದಲ್ಲಿ ಸಚಿವರಾಗಿರುವ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಮನೋಹರಲಾಲ ಕಟ್ಟರ್ ಅವರೂ ಜಾಟ್ ಆಗಿರಲಿಲ್ಲ, ಪಂಜಾಬಿನ ಖತ್ರಿ ಸಮುದಾಯಕ್ಕೆ ಸೇರಿದ್ದರು. ಲೋಕಸಭೆ ಚುನಾವಣೆ ಎದುರಲ್ಲಿ ಅವರನ್ನು ಬದಲಿಸಿ ಬಿಜೆಪಿಯು ನಯಾಬ್ ಸಿಂಗ್ ಸೈನಿಯನ್ನು ಮುಖ್ಯಮಂತ್ರಿಯಾಗಿಸಿತು. ಒಬಿಸಿ ಗುಂಪಿನಲ್ಲಿ ಬರುವ ಉದ್ಯಾನದ ಹೂಮಾಲಿಯ ಜಾತಿಯನ್ನು ಸೂಚಿಸುವ ಸಮುದಾಯದಿಂದ ಮುಖ್ಯಮಂತ್ರಿಯನ್ನು ರೂಪಿಸಿದ್ದರ ಹಿಂದಿನ ಸಂದೇಶವಂತೂ ಸ್ಪಷ್ಟ. ಜಾಟರ ಏಕಸ್ವಾಮ್ಯಕ್ಕೆ ಪ್ರತಿಯಾಗಿ ತಾವು ಸಣ್ಣ ಸಣ್ಣ ಜಾತಿಯವರಿಗೆ ಅಧಿಕಾರ ಹಂಚುತ್ತೇವೆಂಬ ಸಂದೇಶ ಇಲ್ಲಿದೆ.
2010ರಲ್ಲಿ ಹರ್ಯಾಣದ ಮಿರ್ಚಪುರದಲ್ಲಿ ಜಾಟ್ ಸಮುದಾಯಕ್ಕೆ ಸೇರಿದ ಉದ್ರಿಕ್ತ ಗುಂಪು ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದ ಮನೆಗಳ ಮೇಲೆ ಬೆಂಕಿ ಹಚ್ಚಿ ಸಾವು-ನೋವುಗಳಿಗೆ ಕಾರಣವಾಗಿತ್ತು. ಈ ಘಟನೆ ನಡೆದಾಗ ಕಾಂಗ್ರೆಸ್ಸಿನ ಭುಪಿಂದರ ಹೂಡಾ ಸರ್ಕಾರ ಹರ್ಯಾಣದಲ್ಲಿತ್ತು. ಪ್ರಧಾನಿ ನರೇಂದ್ರ ಮೋದಿ ಇದನ್ನು ತಮ್ಮ ಭಾಷಣಗಳಲ್ಲಿ ನೆನಪಿಸುವ ಮೂಲಕ ಪರಿಶಿಷ್ಟ ಜಾತಿಯವರನ್ನೂ ಬಿಜೆಪಿ ಜತೆಗೆ ಹೆಚ್ಚಾಗಿ ಜೋಡಿಸಿಕೊಳ್ಳುವ ಸಂದೇಶದ ಸಿಗ್ನಲ್ ಕೊಟ್ಟಿದ್ದಾರೆ. ಆದರೆ, ಐ ಎನ್ ಎಲ್ ಡಿ ಈ ಬಾರಿ ಬಿ ಎಸ್ ಪಿ ಜತೆ ಮೈತ್ರಿ ಹೊಂದಿದ್ದು ಅದು ಎಸ್ ಸಿ ಮತಗಳನ್ನು ಎಷ್ಟು ಪ್ರಭಾವಿಸಲಿದೆ ಎಂಬುದೂ ಮುಖ್ಯವಾಗುತ್ತದೆ.
ಒಟ್ಟಿನಲ್ಲಿ, ಜಾಟರ ಒಗ್ಗಟ್ಟಿನ ವಿರುದ್ಧ ಅಷ್ಟೇ ತೀವ್ರವಾಗಿ ಒಬಿಸಿ-ದಲಿತ-ಬ್ರಾಹ್ಮಣರನ್ನು ಮತ್ತೊಂದು ಮಗ್ಗುಲಿನಲ್ಲಿ ತನ್ನತ್ತ ಧ್ರುವೀಕರಿಸಿಕೊಳ್ಳುವುದು ಸಾಧ್ಯವಾದರೆ ಬಿಜೆಪಿ ಮತ್ತೆ ಮೂರನೇ ಅವಧಿಗೆ ಹರ್ಯಾಣದಲ್ಲಿ ಅಧಿಕಾರ ಹಿಡಿಯಬಲ್ಲದು ಎಂಬುದು ಈ ಹೊತ್ತಿನ ವಿಶ್ಲೇಷಣೆಗೆ ಸಿಗುತ್ತಿರುವ ಅಂಶ.
- ಚೈತನ್ಯ ಹೆಗಡೆ
cchegde@gmail.com