ಸಂಗ್ರಹ ಚಿತ್ರ online desk
ಅಂಕಣಗಳು

'ವೇಣೀಸಂಹಾರ'ಕ್ಕೊಂದು ವಿಜಯದಶಮಿ...

ಧೂಮ್ರಲೋಚನ ದೇವಿಯ ಹುಂಕಾರಮಾತ್ರದಿಂದಲೇ ಭಸ್ಮವಾಗಿ ಹೋದ. ಚಾಮುಂಡಿಯಂತೂ “ಯಾರು ಯಾರ ಕೂದಲನ್ನು ಎಳೆಯುತ್ತಾರೆ ನೋಡಿಯೇಬಿಡೋಣ ಬಾ” ಎನ್ನುವವಳಂತೆ ಚಂಡನನ್ನು ಅವನ ಕೂದಲಿನಿಂದಲೇ ಹಿಡಿದು ಎತ್ತಿ ತಲೆಯನ್ನು ಕತ್ತರಿಸಿ ಕೊಂದಳು.

ಬರಹ: ನಚಿಕೇತ್ ಹೆಗಡೆ

“ಅವನ ಜುಟ್ಟು ನನ್ನ ಕೈಯಲ್ಲಿದೆ” ಎನ್ನುವುದು ಒಬ್ಬನ ಅಹಂಕಾರದ ಉತ್ಕಟತೆ ಅವನಿಂದ ಆಡಿಸಬಹುದಾದ ಬಹಳ ತೀವ್ರವಾದ ಮಾತು.

ಆದರೆ ಹಾಗೆ ಹೇಳುತ್ತಿರುವವನಿಗೆ ಒಂದು ಕ್ಷಣದ ಮಟ್ಟಿಗಾದರೂ ತನ್ನ ಕೂದಲಗಂಟೇ ಮೃತ್ಯುವಿನ ಹಿಡಿತದಲ್ಲಿದೆ ಮತ್ತು ಕ್ಷಣಕ್ಷಣಕ್ಕೂ ನನ್ನನ್ನು ಈ ಅಹಂಕಾರದ ಮಾಯೆಯೊಳಗಿಂದ ಕೊಂಚ ಕೊಂಚವೇ ತನ್ನತ್ತ ಸೆಳೆದುಕೊಳ್ಳುತ್ತಿದ್ದಾನೆ ಎನ್ನುವುದು ತಿಳಿದರೆ, ಅವನಿಗೆ ಒಂದು ಹಿಡಿಯಷ್ಟಾದರೂ ಧರ್ಮದ ಕೆಲಸ ಮಾಡಬೇಕು ಅಂತ ಅನಿಸಲಿಕ್ಕೆ ಸಾಕು. ಹಾಗೆಂದೇ “ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್” ಎಂದಿತು ಆರ್ಷವಾಕ್ಯ!

ಹೆಣ್ಣು-ಹೊನ್ನು-ಮಣ್ಣಿಗಾಗಿ ಹೋರಾಡುತ್ತೇವೆ ಎನ್ನುತ್ತ ಅಹಂಕಾರಕ್ಕೆ ಪರಾಕ್ರಮದ ಬಣ್ಣ ಬಳಿದವರ ಚರಿತೆ ಹಲವನ್ನು ಗಮನಿಸಿದರೆ ಬಹುಶಃ ಹೆಣ್ಣಿನಷ್ಟು ಗಂಡಿನ ಅಹಂಕಾರವನ್ನು ಕೆರಳಿಸಿದ ಸಂಗತಿ ಮತ್ತೊಂದಿರಲಿಕ್ಕಿಲ್ಲ. ಅಂಥ ಪುರುಷಾಹಂಕಾರದ ಒಟ್ಟಿಗೇ ಆ ಜೀವದ ಒಳಗೊಂದು ಸ್ತ್ರೀಸಹಜವಾದ ಕರುಣೆ, ಸ್ಪಂದನೆ, ಮಾರ್ದವತೆ ಅಡಗಿರುತ್ತದಲ್ಲ, ಅದನ್ನು ಉತ್ಕಟವಾಗಿ ಹೊರತಂದ ಶ್ರೇಯವೂ ಹೆಣ್ಣಿಗೇ ಸಲ್ಲಬೇಕಾದ್ದು. ಹಾಗಾಗಿಯೇ ಆರ್ಷಕಾವ್ಯಗಳುದ್ದಕ್ಕೂ ಕಂಡುಬರುವುದು ಒಂದುಕಡೆ ಹೆಣ್ಣನ್ನು ಬಲಾತ್ಕಾರದಿಂದ ತನ್ನವಳನ್ನಾಗಿಸಿಕೊಳ್ಳುವ ಹವಣಿಕೆಯವರ ಮತ್ತು ಆ ಹವಣಿಗೆ ಬಲಿಯಾದವಳ ರಕ್ಷಣೆಗೆ ನಿಂತವರ ನಡುವಣ ತಿಕ್ಕಾಟವೇ. ಸೂಕ್ಷ್ಮವಾಗಿ ನೋಡಿದರೆ ‘ಹೆಣ್ಣಿಗಾಗಿ ಹೋರಾಟ’ ಎನ್ನುವುದೂ ಇಬ್ಬಗೆಯಾಗಿಬಿಟ್ಟಿದೆ!

ಮಾನವೀಯ ಮೌಲ್ಯಗಳಿಗೆ ಕಾವ್ಯದ ಶರೀರವನ್ನು ನೀಡಿದ, ಮೌಲ್ಯಗಳ ಉತ್ಕರ್ಷವನ್ನು, ಗೆಲುವನ್ನು ಹಬ್ಬವಾಗಿಸಿದ ಪರಂಪರೆಗೆ ಹೆಣ್ಣಿನ ಸ್ಥೈರ್ಯವನ್ನು ಕೆಣಕಿದವರ ವಿರುದ್ಧ, ಅದನ್ನು ಎತ್ತಿಹಿಡಿದವರ ಗೆಲುವನ್ನು ಸಂಭ್ರಮಿಸದೆ ಇರಲಾಗಲಿಲ್ಲವೆಂದು ತೋರುತ್ತದೆ. ಹಾಗೆಂದೇ ‘ವಿಜಯದಶಮಿ’ ಎನ್ನುವುದು ಭಿನ್ನ ಭಿನ್ನ ಯುಗಗಳಲಿ ಆಕೆಯ ಕೂದಲಿಗೆ ಕೈಹಾಕಿದವರು ಕೊನೆಯುಸಿರೆಳೆದ ದಿನವಾಗಿಯೇ ನೆನೆಯಲ್ಪಡುತ್ತದೆ.

ರಾಮಾಯಣದಲ್ಲಿ ಕೇಶಗ್ರಾಹ

ಅವನಿಗೆ ಅಂತಃಪುರದಲ್ಲಿ ಹೆಣ್ಣುಗಳಿಗೇನೂ ಕೊರತೆಯಿರಲಿಲ್ಲ. ಭಾರತದವರಷ್ಟೇ ಅಲ್ಲ. ಅವರನ್ನು ನಿವಾಳಿಸಿ ತೆಗೆಯಬಲ್ಲ ಯವನದೇಶದ ಸುಂದರಿಯರೂ ದಂಡಿಯಾಗಿಯೇ ತುಂಬಿದ್ದರು. ಆದರೆ ಸಂಗ್ರಹವು ಆಶೆಯನ್ನು ಹೆಚ್ಚಿಸುತ್ತಲೇ ಹೋಗುವುದು ಪ್ರಕೃತಿಯ ವಿಲಕ್ಷಣ ನಿಯಮವಷ್ಟೇ. ಶೂರ್ಪನಖಿಯಿಂದ ಸೀತೆಯ ಸೌಂದರ್ಯದ ಹರಹನ್ನು ಕೇಳಿದ ರಾವಣನಿಗೆ ಇದೊಂದು ತನ್ನ ಜನಾನಾದಲ್ಲಿ ಇರಲೇಬೇಕಾದ ‘ವಸ್ತು’ ಎನ್ನಿಸಿತು. ಅವಳನ್ನು ವಂಚಿಸಿ ತರಲು ಸಂನ್ಯಾಸಿಯ ವೇಷ ಧರಿಸಿಯೇ ಹೋದ. ಹೇಸರಗತ್ತೆಗಳಿಂದ ಕೂಡಿದ ರಥದಲ್ಲಿ ಆಕೆಯನ್ನು ಅಪಹರಿಸಿ ತರತೊಡಗಿದ. ಮಾರ್ಗಮಧ್ಯದಲ್ಲಿ ಜಟಾಯುವಿನೊಂದಿಗೆ ಯುದ್ಧವೂ ನಡೆದು ಅವನನ್ನು ಮುಗಿಸಿದ ಮೇಲೆ ತನ್ನಿಂದ ತಪ್ಪಿಸಿಕೊಂಡು ಓಡುತ್ತಿದ್ದ ಸೀತೆಯನ್ನು ನೋಡಿದ. ಅವಳೋ ಮರವೊಂದನ್ನು ಗಟ್ಟಿಯಾಗಿ ಅಪ್ಪಿಕೊಂಡು ವಿಲಪಿಸುತ್ತಿದ್ದವಳು. ಇವ ಹಿಂದಿನಿಂದ ಅವಳ ಮುಡಿಗೆ ಕೈ ಹಾಕಿದ. ತನ್ನ ಕೊನೆಯನ್ನು ತಾನೇ ಬರಸೆಳೆದುಕೊಳ್ಳುತ್ತಿರುವೆನೋ ಎಂಬಂತೆ ಸೆಳೆದ.

“ಜೀವಿತಾಂತಾಯ ಕೇಶೇಷು ಜಗ್ರಾಹಾಂತಕಸಂನಿಭಃ”

ಈ ದಾರುಣವಾದ ದೃಶ್ಯವನ್ನು ಬ್ರಹ್ಮನೂ, ಬ್ರಹ್ಮರ್ಷಿಗಳೂ ಏಕಕಾಲಕ್ಕೆ ನೋಡಿದರು. ಬ್ರಹ್ಮ ಉದ್ಗರಿಸಿದ, “ಕಾರ್ಯ ಸಿದ್ಧಿಸಿತು”! (ಕೃತಂ ಕಾರ್ಯಮಿತಿ ಶ್ರೀಮಾನ್ ವ್ಯಾಜಹಾರ ಪಿತಾಮಹಃ”)

ಹೌದು. ಅಂದು ನಿಜಕ್ಕೂ ರಾವಣನ ಶವಪೆಟ್ಟಿಗೆಗೆ ಮೊದಲ ಮೊಳೆ ಬಿದ್ದ ದಿನವೇ ಆಗಿತ್ತು. ಸೀತೆಯ ಸರ್ಪಸದೃಶವಾದ ಕೂದಲನ್ನು ಹಿಡಿದೆಳೆದ ರಾವಣ ಹತ್ತೂ ತಲೆಗಳನ್ನೂ ಬೋಳಿಸಿಕೊಂಡು ಕತ್ತೆಯ ಮೇಲೆ ಸವಾರಿ ಮಾಡುತ್ತ ದಕ್ಷಿಣ ದಿಕ್ಕಿನತ್ತ ನಡೆದಂತೆ ತ್ರಿಜಟೆಗೆ ಕನಸು ಬಿತ್ತು. ಅದಕ್ಕೆ ತಕ್ಕಂತೆ ಆಶ್ವೀಜ ಶುದ್ಧ ದಶಮಿಯ ದಿನ ಕೊನೆಯ ಮೊಳೆಯೂ ಬಿದ್ದು ರಾವಣ ಕೊನೆಯುಸಿರೆಳೆದ. ರಾಮನ ವಿಜಯವಾಯಿತು. ಅದೇ ‘ವಿಜಯದಶಮಿಯಾಯಿತು’.

ಮಹಾಭಾರತದಲ್ಲೊಂದು ವೇಣೀಸಂಹಾರ

‘ಜಿತಂ’

ಶಕುನಿಯ ಬಾಯಿಯಿಂದ ಕ್ಷಣಕ್ಷಣಕ್ಕೂ ಅಟ್ಟಹಾಸದೊಂದಿಗೆ ಕೂಡಿ ಬರುತ್ತಿದ್ದ ಪದ ಅದು. ಹಸು-ಕುರಿ-ಕೋಣಗಳೂ, ಅಯುತ-ನಿಯುತ-ಪದ್ಮಗಳಷ್ಟು ಲೆಕ್ಕದ ಸಂಪತ್ತೂ ಕೌರವರ ಪಾಲಾಗಿ ತನ್ನನ್ನೂ ಸೋತ ಯುಧಿಷ್ಠಿರ ಕಳೆದುಕೊಳ್ಳಲು ಇನ್ನೇನೂ ಇಲ್ಲದೆ ಕೈಚೆಲ್ಲಿ ಕೂತಿದ್ದ. ಶಕುನಿ ಬಿಟ್ಟಾನೆಯೇ? “ನಿನ್ನ ಪತ್ನಿ ಒಬ್ಬಳು ಉಳಿದಿದ್ದಾಳಲ್ಲ?” ಎಂದ! (ವಿಚಿತ್ರವೆಂದರೆ ಆ ಹೊತ್ತು ಶಕುನಿಗೂ ಪಾಂಡವರ ಇತರ ಪತ್ನಿಯರ ನೆನಪೇ ಆಗಲಿಲ್ಲ!) ಸರಿ. ಅವಳನ್ನೂ ಪಣಕ್ಕಿಟ್ಟದ್ದಾಯಿತು. ಸೋತದ್ದೂ ಆಯಿತು. ಬಹಳ ಸಭ್ಯಸ್ಥ ಅಂತ ಸೋಗು ಹಾಕಿದ್ದ ಕರ್ಣ ದುಃಶಾಸನನಿಗೆ ದ್ರೌಪದಿಯನ್ನು ಸಭೆಗೆ ಕರೆತರಲು ಕುಮ್ಮಕ್ಕು ನೀಡಿದ. ದುಃಶಾಸನನಿಗೆ ಬೇಕಾದದ್ದೂ ಅದೇ ಆಗಿತ್ತು. ಅಂತಃಪುರಕ್ಕೆ ನುಗ್ಗಿದವನೇ ಆಕೆಯ ನೀಳವಾದ ಕೂದಲಿಗೆ ಕೈಹಾಕಿ ದರದರನೆ ಎಳೆದುತಂದ. “ದೀರ್ಘೇಷು ನೀಲೇಷ್ವಥ ಚೋರ್ಮಿಮತ್ಸು ಜಗ್ರಾಹ ಕೇಶೇಷು ನರೇಂದ್ರಪತ್ನೀಂ”

ತನ್ನ ಪತ್ನಿಗೊದಗಿದ ಈ ದುಃಸ್ಥಿತಿಯನ್ನು ಕಂಡ ಭೀಮ ಕಟಕಟನೆ ಹಲ್ಲುಕಡಿಯುತ್ತ “ಈ ಪಾಪಿಯ ರಕ್ತವನ್ನು ಕುಡಿಯದೆ ಬಿಡೆ” ಎನ್ನುತ್ತ ಅಬ್ಬರಿಸಿದ. ಮುಂದೆ ‘ವಿಜಯದಶಮಿಯ’ ದಿನ ವಿಜಯ ಎಂದೇ ಹೆಸರಾದ ಅರ್ಜುನ ವಿರಾಟಯುದ್ಧದಲ್ಲಿ, ಉತ್ತರಗೋಗ್ರಹಣ ಪ್ರಸಂಗದಲ್ಲಿ ಪಗಡೆಯಾಟದ ಸಂದರ್ಭದಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡಿದವನನ್ನೂ, ಅವನನ್ನು ಪ್ರೋತ್ಸಾಹಿಸಿದವರನ್ನೂ, ಮರುಮಾತಾಡದೆ ಗುಮ್ಮಗಿದ್ದವರನ್ನೂ ವಿವಸ್ತ್ರರನ್ನಾಗಿಸಿದ. ಆಕೆಯ ಮುಡಿಬಿಚ್ಚಿದವರ ವೀರಮುಡಿಯನ್ನು ಅಸ್ತವ್ಯಸ್ತವಾಗಿಸಿದ. ಈ ವಿಜಯವನ್ನು ನಮ್ಮ ಪರಂಪರೆ ಕುರುಕ್ಷೇತ್ರದ ವಿಜಯಕ್ಕಿಂತಲೂ ಹೆಚ್ಚು ಮಾನ್ಯಮಾಡಿರುವಂತಿದೆ. ಹಾಗೆಂದೇ ಮಹಾಭಾರತದ ಪಾರಾಯಣವನ್ನು ವಿರಾಟಪರ್ವದಿಂದ ಆರಂಭಿಸಬೇಕು ಎನ್ನುವುದೊಂದು ಸಂಪ್ರದಾಯ!

ಶೃಂಗಾರದ ದೃಶ್ಯದಲ್ಲಿಯೂ ವೀರರಸವನ್ನು ಮೂಡಿಸಬಲ್ಲ ಭಟ್ಟ ನಾರಾಯಣ ತನ್ನ ‘ವೇಣೀಸಂಹಾರ’ ನಾಟಕದಲ್ಲಿ ಇದನ್ನು ಇನ್ನೂ ಒಂದು ಹಂತ ಮುಂದಕ್ಕೆ ಕೊಂಡುಹೋಗಿದ್ದಾನೆ. ಅಲ್ಲಿ ದ್ರೌಪದಿಯ ಕೇಶಪಾಶ ಕುರುಕುಲಕ್ಕೆ ಧೂಮಕೇತುವಾಗಿ ಪರಿಣಮಿಸುತ್ತದೆ. ಕುಪಿತಕೃತಾಂತನ (ಯಮನ) ಸಖನಾಗುತ್ತದೆ. ಭೀಮ ಕೇವಲ ದುಃಶಾಸನನ ರಕ್ತವನ್ನು ಕುಡಿಯುವುದಷ್ಟೇ ಅಲ್ಲ. ದುರ್ಯೋಧನನ ತೊಡೆಯನ್ನು ಮುರಿದು ಅದರಿಂದ ಹೊಮ್ಮಿದ ರಕ್ತದಿಂದ ದ್ರೌಪದಿಯ ಮುಡಿಯನ್ನು ನೆನೆಸಿ ಅದನ್ನು ಕಟ್ಟುವುದಾಗಿ ಪ್ರತಿಜ್ಞೆಗೈಯುತ್ತಾನೆ. ಹದಿಮೂರು ವರ್ಷಗಳಿಂದ ಕೆಡೆದ ಕೂದಲನ್ನೇ ಇಳಿಬಿಟ್ಟುಕೊಂಡದ್ದರಿಂದ ಮುಡಿಗಟ್ಟುವ ಕಲೆಯನ್ನೇ ಮರೆತ ದ್ರೌಪದಿಗೆ ದುರ್ಯೋಧನನ ಮರಣಾನಂತರ ತನ್ನ ಪ್ರತಿಜ್ಞೆಯನ್ನು ತೀರಿಸುವ ಹೊತ್ತಿನಲ್ಲಿ ಅದನ್ನು ನೆನಪಿಸುತ್ತಾನೆ. ವೇಣೀಸಂಹಾರವೆಂದರೆ ಮುಡಿಕಟ್ಟುವುದೆಂದೇ ಅರ್ಥ!

ಸಪ್ತಶತಿಯಲ್ಲೊಂದು ಕೇಶಾಕರ್ಷಣ ಪ್ರಕರಣ

ಹೆಸರೇ ಹೇಳುವಂತೆ ಅವಳು ದುರ್ಗೆ. ಅವಳನ್ನು ತಲುಪುವುದು ಆರ್ತರಾದ ಭಕ್ತರಿಗೂ ಕಷ್ಟ. ಅಂಥದ್ದರಲ್ಲಿ ಮದಗರ್ವಿತರಾದ ರಾಕ್ಷಸರು ತಲುಪಬಲ್ಲರೇ? ಆದರೂ ಅವರಿಗೊಂದು ಹುಂಬಧೈರ್ಯ. ಹಿಂದೊಮ್ಮೆ ಕೌಶಿಕೀದೇವಿಯ ಸೌಂದರ್ಯವನ್ನು ಕೇಳಿ ಆಕೆಯನ್ನು ಕಾಮಿಸಿದ ಶುಂಭ ನಿಶುಂಭರು ಆಕೆಯ ಬಳಿ ದೂತನೊಬ್ಬನನ್ನು ಕಳಿಸಿದರು. “ತಮ್ಮಿಬ್ಬರಲ್ಲಿ ಯಾರಾದರೊಬ್ಬನನ್ನು ವರಿಸು” ಎನ್ನುವ ಸಂದೇಶದೊಂದಿಗೆ. ಕೌಶಿಕಿ ತಾನು ತನ್ನನ್ನು ಯುದ್ಧದಲ್ಲಿ ಸೋಲಿಸುವವರನ್ನು ಮಾತ್ರ ವರಿಸುವೆ ಎಂದಳು. ಈ ದೂತ ನಾಲಿಗೆಯನ್ನು ಕೊಂಚ ಹೆಚ್ಚೇ ಹರಿಯಬಿಟ್ಟ. “ಹೆಚ್ಚು ಮಾತನಾಡಬೇಡ. ಶುಂಭನಿಶುಂಭರಲ್ಲಿ ಯಾರಾದರೊಬ್ಬನ ಬಳಿ ಹೋಗು. ಅದಿಲ್ಲದಿದ್ದರೆ ನಿನ್ನ ಕೂದಲನ್ನು ಹಿಡಿದು ಎಳೆದುಕೊಂಡು ಹೋಗಬೇಕಾದ ಪ್ರಸಂಗ ಬಂದೀತು. ಅದು ಮರ್ಯಾದೆಗೇಡು”!

(ಸಾ ತ್ವಂ ಗಚ್ಛ ಮಯೈವೋಕ್ತಾ ಪಾರ್ಶ್ವಂ ಶುಂಭನಿಶುಂಭಯೋಃ। ಕೇಶಾಕರ್ಷಣನಿರ್ಧೂತಗೌರವಾ ಮಾ ಗಮಿಷ್ಯಸಿ॥)

ಈ ಬೆದರಿಕೆ ಸಾಲಲಿಲ್ಲ. ಶುಂಭನಿಶುಂಭರು ಧೂಮ್ರಲೋಚನ ಎನ್ನುವ ರಾಕ್ಷಸನನ್ನು ಕಳಿಸಿದರು. ಅವನೂ ಅದೇ ಮಾತನ್ನು ಪುನರುಚ್ಚರಿಸಿದ. “ತತೋ ಬಲಾನ್ನಯಾಮ್ಯೇಷ ಕೇಶಾಕರ್ಷಣವಿಹ್ವಲಾಮ್”

ಮತ್ತೊಮ್ಮೆ ಹೆಣ್ಣೊಬ್ಬಳ ಸ್ವಾಭಿಮಾನದ ಪ್ರತೀಕವಾದ ಕೂದಲಿಗೆ ಮಾತಿನಲ್ಲಿಯಾದರೂ ಇಬ್ಬರು ಕೈಹಾಕಿದರು. ಇವರನ್ನು ಬಿಡುವುದು ಹೇಗೆ?

ಕಡೆಗೂ ಯುದ್ಧವೇ ಸಂಭವಿಸಿತು. ಧೂಮ್ರಲೋಚನ ದೇವಿಯ ಹುಂಕಾರಮಾತ್ರದಿಂದಲೇ ಭಸ್ಮವಾಗಿ ಹೋದ. ಚಾಮುಂಡಿಯಂತೂ “ಯಾರು ಯಾರ ಕೂದಲನ್ನು ಎಳೆಯುತ್ತಾರೆ ನೋಡಿಯೇಬಿಡೋಣ ಬಾ” ಎನ್ನುವವಳಂತೆ ಚಂಡನನ್ನು ಅವನ ಕೂದಲಿನಿಂದಲೇ ಹಿಡಿದು ಎತ್ತಿ ತಲೆಯನ್ನು ಕತ್ತರಿಸಿ ಕೊಂದಳು. “ಗೃಹೀತ್ವಾ ಚಾಸ್ಯ ಕೇಶೇಷು ಶಿರಸ್ತೇನಾಸಿನಾಽಚ್ಛಿನತ್”

ಮುಗಿಸುವ ಮುನ್ನ

ಚರಿತ್ರೆಯ ಉದ್ದಕ್ಕೂ ‘ಇದೂ ತನ್ನಂತೆಯೇ ಒಂದು ಜೀವ’ ಎನ್ನುವುದನ್ನು ಮರೆತು ಹೆಣ್ಣಿನ ಮುಡಿಗೆ ಕೈಹಾಕಿದವರು ಹಲವರು. ಮರುಭೂಮಿಯ ಮತದವರಾಗಿದ್ದರೆ ಅವರಿಗೆ ಏನಾದರೊಂದು ಬಿರುದುಕೊಟ್ಟು ಗೌರವಿಸುತ್ತಿದ್ದರೋ ಏನೋ. ಆದರೆ ನಮ್ಮಲ್ಲಂತೂ ಅವರನ್ನು ಸುದೈವವಶಾತ್ ‘ರಾಕ್ಷಸರು’ ಅಂತಲೇ ಗುರುತಿಸಿದ್ದಾರೆ. ಅವರ ವಿರುದ್ಧ ನಿಂತವರನ್ನು ದೈವಾಂಶಸಂಭೂತರೆಂದೇ ಗೌರವಿಸಿದ್ದಾರೆ. ಅವರ ಗೆಲುವನ್ನು ವಿಜಯದಶಮಿಯಾಗಿಸಿದ್ದಾರೆ. ಕೇಶವನ್ನು ಹಿಡಿದು ಎಳೆಯುವಾಗಿನ ಆಕೆಯ ಚೀತ್ಕಾರ ಗಂಡಿನಲ್ಲಿ ವಿಕೃತ ಆನಂದವನ್ನು ಉಂಟುಮಾಡಿದರೆ ಅವನು ಪಶು. ಕಾರುಣ್ಯವನ್ನು ಜಿನುಗಿಸಿದರೆ ಮನುಷ್ಯ. ಇದನ್ನು ಸನಾತನ ಕಂಡುಕೊಂಡಿದೆ. ಇಂಥ ಹೊತ್ತಿನಲ್ಲಿ ಕೊಲ್ಕತ್ತಾದ ಆಸ್ಪತ್ರೆಯ ಕೇಸಿನ ಬೀಭತ್ಸತೆ ಮರೆಯಾಗುವ ಮುನ್ನವೇ ಮೊನ್ನೆ ನವರಾತ್ರಿಯ ಆಚರಣೆಯನ್ನು ಮುಗಿಸಿ ಹೊರಟಿದ್ದ ಮಗುವೊಂದು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಯಿತಲ್ಲ, ಅದಕ್ಕೆ ಕಾರಣವಾದವರ ಅಂತ್ಯದ ನೆನಪಿನಲ್ಲಿಯೂ ಒಂದು ವಿಜಯದಶಮಿ ನಡೆಯಲಿ. ಕ್ಷಾತ್ರೋದ್ದೀಪನವಾಗಲಿ…

- ನಚಿಕೇತ್ ಹೆಗಡೆ

nachikethegde266@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT