ಜುಲೈ 2006ರಲ್ಲಿ, ಇಸ್ರೇಲ್ ಲೆಬನಾನ್ ಮೇಲೆ ಆಕ್ರಮಣ ನಡೆಸಿದಾಗ ತೈಲ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿತ್ತು. ಬಹುತೇಕ 10% ಹೆಚ್ಚಳ ಕಂಡ ತೈಲ ಬೆಲೆ, ಪ್ರತಿ ಬ್ಯಾರಲ್‌ಗೆ 80 ಡಾಲರ್‌ಗೆ ತಲುಪಿತ್ತು. ಜಾಗತಿಕ ಇಂಧನ ಮಾರುಕಟ್ಟೆಗಳಿಗೆ ಅತ್ಯಂತ ಮಹತ್ವದ ಈ ಪ್ರದೇಶದಲ್ಲಿನ ಯುದ್ಧ ತೈಲ ಪೂರೈಕೆಯನ್ನು ಅಸ್ತವ್ಯಸ್ತಗೊಳಿಸಬಹುದು ಎಂಬ ಆತಂಕ ಈ ರೀತಿಯ ಬೆಲೆ ಹೆಚ್ಚಳಕ್ಕೆ ಕಾರಣವಾಗಿತ್ತು.
ಈಗಿನ ಮಧ್ಯ ಪೂರ್ವದ ಪರಿಸ್ಥಿತಿಯಂತೂ ಇನ್ನೂ ಕಠಿಣವಾಗಿದೆ. ಇದರ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಲೆಬನಾನ್‌ನಲ್ಲಿ ಪೇಜರ್, ವಾಕಿಟಾಕಿಗಳ ಸ್ಫೋಟ, ಪ್ರಮುಖ ಹೆಜ್ಬೊಲ್ಲಾ ಮುಖಂಡರ ಹತ್ಯೆ, ಕೆಲವೇ ದಿನಗಳ ಹಿಂದೆ ಟೆಲ್ ಅವೀವ್ ಅನ್ನು ಗುರಿಯಾಗಿಸಿ ಇರಾನ್ ನಡೆಸಿದ ಕ್ಷಿಪಣಿ ದಾಳಿಗಳನ್ನು ಗಮನಿಸಿ. ಈ ವಿದ್ಯಮಾನಗಳು ಪ್ರಸ್ತುತ ಚಕಮಕಿ ಎಷ್ಟರಮಟ್ಟಿಗೆ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂಬುದಕ್ಕೆ ಸಾಕ್ಷಿಯಾಗಿವೆ.
2006ರಲ್ಲಿ, ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದೇನೋ ಎಂದು ಇಂಧನ ಮಾರುಕಟ್ಟೆ ಆತಂಕ ಹೊಂದಿತ್ತು. ಅಂತಹ ಸಮಸ್ಯೆ ಎದುರಾಗದು ಎಂದು ಬಹಳಷ್ಟು ಜನರು ಭಾವಿಸಿದ್ದರೂ, ಹಾಗೇನಾದರೂ ಆದರೆ ಎಂಬ ಗುಮಾನಿಯೇ ತೈಲ ಬೆಲೆ 10% ಏರುವಂತೆ ಮಾಡಿತ್ತು. ಪೂರೈಕೆಯ ಕುರಿತ ಅತ್ಯಂತ ಸಣ್ಣ ಕಳವಳಗಳಿಗೂ ಮಾರುಕಟ್ಟೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂದು ಇದು ತೋರಿಸಿತ್ತು.
ಆದರೆ, ಈಗಿನ ಸ್ಥಿತಿಯಲ್ಲಿ ತೈಲ ಪೂರೈಕೆಗೆ ನಿಜಕ್ಕೂ ಅಪಾಯ ಎದುರಾಗಿದೆ. ಪರಿಸ್ಥಿತಿ ಈಗ ಎಷ್ಟರಮಟ್ಟಿಗೆ ತೀವ್ರತೆ ಪಡೆದುಕೊಂಡಿದೆ ಎಂದರೆ, ಕಳೆದ ವಾರ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅವರು ಬಹಿರಂಗವಾಗಿಯೇ ಇಸ್ರೇಲನ್ನು ಟೀಕಿಸಿದ್ದರು. ಅಕ್ಟೋಬರ್ 4ರಂದು, ಬೈಡನ್ "ನಾನೇನಾದರೂ ಇಸ್ರೇಲಿನ ಸ್ಥಾನದಲ್ಲಿದ್ದರೆ ತೈಲಾಗಾರಗಳ ಮೇಲೆ ಆಕ್ರಮಣ ನಡೆಸುವ ಬದಲು ಬೇರೆ ಪರ್ಯಾಯ ಮಾರ್ಗವನ್ನು ಕುರಿತು ಆಲೋಚಿಸುತ್ತಿದ್ದೆ" ಎಂದಿದ್ದರು. ಆಶ್ಚರ್ಯಕರವಾಗಿ, ಇಸ್ರೇಲ್ ಇರಾನಿನ ತೈಲಾಗಾರಗಳ ಮೇಲೆ ಆಕ್ರಮಣ ನಡೆಸುವ ಕುರಿತು ನೇರ ಮಾತುಕತೆ ನಡೆದಿದೆ ಎಂದು ಶ್ವೇತ ಭವನ ಖಚಿತಪಡಿಸಿದೆ. ಇದು ವಾಸ್ತವವಾಗಿ ಆತಂಕ ಮೂಡಿಸುವ ವಿಚಾರವಾಗಿದೆ.
ಆದರೆ, ತೈಲ ಮಾರುಕಟ್ಟೆ ಮಾತ್ರ ಮಧ್ಯ ಪೂರ್ವದಲ್ಲಿನ ಅಪಾಯಗಳಿಗೆ ಈ ಹಿಂದಿನಂತೆ ತೀವ್ರವಾಗಿ ಪ್ರತಿಕ್ರಿಯಿಸುತ್ತಿಲ್ಲ. ಯುದ್ಧದ ಕುರಿತ ಆತಂಕ ಈಗ ಸಣ್ಣ ಮಟ್ಟಿನದಾಗಿದ್ದು, ಬೇಗನೇ ಮಾಯವಾಗುತ್ತಿದೆ.
ತೈಲ ಮಾರುಕಟ್ಟೆಗಳ ತಣ್ಣನೆಯ ಪ್ರತಿಕ್ರಿಯೆ ಹಣಕಾಸು ಮಾರುಕಟ್ಟೆಗಳ ಟ್ರೆಂಡಿನ ಭಾಗವಾಗಿದ್ದು, ಒಟ್ಟಾರೆ ಚಂಚಲತೆ ಕಡಿಮೆಯಾಗಿದೆ. ಸರಳವಾಗಿ ಹೇಳುವುದಾದರೆ, ಹಣಕಾಸು ಮಾರುಕಟ್ಟೆಗಳು ಹಿಂದಿನಂತೆ ಆಗಾಗ್ಗೆ ಏರಿಳಿತ ಹೊಂದುತ್ತಿಲ್ಲ. ಅವುಗಳು ಈಗ ಸ್ಥಿರವಾಗಿದ್ದು, ಊಹಿಸಲು ಸಾಧ್ಯವಿದೆ.
ಹಿಂದೆಲ್ಲ ಇಂಧನ ಮಾರುಕಟ್ಟೆಗಳು "ಒಂದು ವೇಳೆ ಹೀಗಾದರೆ" ಎಂಬ ಸನ್ನಿವೇಶಗಳನ್ನು, ಅದರಲ್ಲೂ ತೈಲ ಬೆಲೆಗೆ ಸಂಬಂಧಿಸಿದಂತೆ ಅತ್ಯಂತ ಕೆಟ್ಟ ಸನ್ನಿವೇಶವನ್ನು ಊಹಿಸುತ್ತಿದ್ದವು. ಅಂದರೆ, ಮಾರುಕಟ್ಟೆಗಳು ಅತ್ಯಂತ ಕೆಟ್ಟ ಸನ್ನಿವೇಶಗಳಾದ ಇಂಧನ ಕೊರತೆ, ಪೂರೈಕೆ ಅಸ್ತವ್ಯಸ್ತತೆಯಂತಹ ವಿದ್ಯಮಾನಗಳಿಗೆ ಸಿದ್ಧತೆ ನಡೆಸಿ, ಅವುಗಳಿಗೆ ತಕ್ಕಂತೆ ಇಂಧನ ಬೆಲೆಯನ್ನು ಸರಿಹೊಂದಿಸುತ್ತಿದ್ದವು.
ಇಂತಹ ವ್ಯಾಪಾರದ ತೀರ್ಮಾನಗಳನ್ನು ಕೈಗೊಳ್ಳಲು 1970ರ ತೈಲ ಪೂರೈಕೆ ಬಿಕ್ಕಟ್ಟು, ಮತ್ತು 1980ರ ದಶಕದಇರಾನ್ ಮತ್ತು ಇರಾಕ್ ಯುದ್ಧ, ಮತ್ತು 1990ರ ಕುವೈತ್ ಆಕ್ರಮಣದಂತಹ ವಿದ್ಯಮಾನಗಳು ಕಾರಣವಾಗಿದ್ದವು. ಅಂದರೆ, ತೈಲ ವ್ಯಾಪಾರ ಹಿಂದಿನ ಘಟನೆಗಳಾದ ತೈಲದ ಕೊರತೆ, ಮತ್ತು ಕದನಗಳಿಂದ ಪ್ರಭಾವಿಸಲ್ಪಟ್ಟಿತ್ತು.
ಆದರೆ ಅಂತಹ ಅಪಾಯದ ನೆನಪುಗಳು ಇಂದು ಅಷ್ಟು ತೀವ್ರವಾಗಿಲ್ಲ. ಇಂದಿನ ಆಧುನಿಕ ತೈಲ ವ್ಯಾಪಾರ ಕೊಠಡಿಯನ್ನು ಪ್ರವೇಶಿಸಿದರೆ, ಅಲ್ಲಿರುವ 35ರ ಕೆಳಗಿನ ಜನರು ಮಧ್ಯ ಪೂರ್ವದ ದೀರ್ಘಕಾಲೀನ ತೈಲ ಪೂರೈಕೆ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಅನುಭವಿಸಿಲ್ಲ.
ಕಳೆದ ಎರಡು ದಶಕಗಳಲ್ಲಿ ಸಮಸ್ಯೆಗಳು ಉಂಟಾಗಿದ್ದರೂ, ಅವುಗಳಿಂದ ಉಂಟಾದ ವ್ಯತ್ಯಯ ಸಣ್ಣ ಅವಧಿಯದಾಗಿತ್ತು. ಅದರಲ್ಲೂ, ಇತ್ತೀಚಿನ ತೈಲ ಪೂರೈಕೆ ವ್ಯತ್ಯಯಗಳಿಗೆ ತೈಲ ಬಳಕೆದಾರ ರಾಷ್ಟ್ರಗಳು ಇರಾನ್, ವೆನೆಜುವೆಲಾ, ಮತ್ತು ರಷ್ಯಾದಂತಹ ಪೂರೈಕೆದಾರರ ಮೇಲೆ ನಿರ್ಬಂಧ ಹೇರಿದ್ದು ಕಾರಣವಾಗಿತ್ತು.
ಇಸ್ರೇಲ್ ಏನಾದರೂ ಇರಾನಿನ 90% ತೈಲ ರಫ್ತಿನ ಮುಖ್ಯ ಟರ್ಮಿನಲ್ ಆಗಿರುವ ಖರ್ಗ್ ದ್ವೀಪದ ಮೇಲೆ ದಾಳಿ ಮಾಡಿತು ಎಂದುಕೊಳ್ಳೋಣ. ಅದಕ್ಕೆ ಪ್ರತಿಯಾಗಿ, ಇರಾನ್ ಸೌದಿ ಅರೇಬಿಯಾ, ಕುವೈತ್ ಮತ್ತು ಯುಎಇಗಳಲ್ಲಿರುವ ತೈಲಾಗಾರಗಳ ಮೇಲೆ ದಾಳಿ ಮಾಡಿದರೆ, ಆದರಿಂದ ಜಾಗತಿಕ ತೈಲ ಪೂರೈಕೆಗೆ ದೊಡ್ಡ ಅಡಚಣೆ ಉಂಟಾಗುತ್ತದೆ. ಉದ್ವಿಗ್ನತೆಗಳು ಹೆಚ್ಚಾಗಿ, ಒಂದು ಪೂರ್ಣ ಪ್ರಮಾಣದ ಪ್ರಾದೇಶಿಕ ಯುದ್ಧ ಆರಂಭಗೊಳ್ಳುತ್ತದೆ. ಇದರ ಪರಿಣಾಮವಾಗಿ, ಮಧ್ಯ ಪೂರ್ವದ ತೈಲ ಪೂರೈಕೆಯ ಮುಖ್ಯ ಮಾರ್ಗವಾದ ಹೊರ್ಮುಸ್ ಜಲಸಂಧಿ ಮುಚ್ಚಲ್ಪಡುತ್ತದೆ. ಹಾಗೇನಾದರೂ ಆದರೆ, ಅದರ ಪರಿಣಾಮ ಗಂಭೀರವಾಗಲಿದ್ದು, ಕೇವಲ ತೈಲ ಬೆಲೆಯಲ್ಲಿ 10% ಏರಿಕೆಗೆ ಸೀಮಿತವಾಗಿರುವುದಿಲ್ಲ.
ಆದರೂ ವ್ಯಾಪಾರಿಗಳು ಯಾಕೆ ಇಷ್ಟು ಪ್ರಶಾಂತವಾಗಿದ್ದಾರೆ? ಹಣಕಾಸಿನ ಜಗತ್ತಿನಲ್ಲಿ 'ಈಗ ಕಾಲ ಬದಲಾಗಿದೆ' ಎಂಬ ಹೇಳಿಕೆ ಅತ್ಯಂತ ಅಪಾಯಕಾರಿ ಮನೋಭಾವ ಎನ್ನಲಾಗುತ್ತದೆ. ಆದರೆ, ಈಗಿನ ಪರಿಸ್ಥಿತಿ ನಿಜಕ್ಕೂ ವಿಶಿಷ್ಟವಾಗಿ ತೋರುತ್ತಿದೆ. ಇಂದಿನ ಭೌಗೋಳಿಕ ರಾಜಕಾರಣದ ಅಪಾಯಗಳು ಹಿಂದಿನ ಘಟನೆಗಳಿಗೆ ಹೋಲಿಸಿದರೆ ತೈಲ ಮಾರುಕಟ್ಟೆಯ ಮೇಲೆ ಏಕೆ ಭಿನ್ನವಾಗಿ ಪ್ರಭಾವ ಬೀರುತ್ತವೆ ಎನ್ನುವುದಕ್ಕೆ ಐದು ಮುಖ್ಯ ಕಾರಣಗಳಿವೆ.
ಅಮೆರಿಕಾ ಈಗ ಜಗತ್ತಿನ ಅತಿದೊಡ್ಡ ತೈಲ ಉತ್ಪಾದಕನಾಗಿದ್ದು, ಅದು ಮಧ್ಯ ಪೂರ್ವದ ತೈಲಕ್ಕೆ ಭಾರೀ ಪ್ರಮಾಣದಲ್ಲಿ ಅವಲಂಬಿತವಾಗಿಲ್ಲ. ಜುಲೈ 2006ರಲ್ಲಿ, ಅಮೆರಿಕಾ ದಿನವೊಂದಕ್ಕೆ 6.8 ಮಿಲಿಯನ್ ಬ್ಯಾರಲ್ ತೈಲ ಉತ್ಪಾದಿಸುತ್ತಿತ್ತು. ಆದರೆ ಇಂದು, ಅಮೆರಿಕಾ ಪ್ರತಿದಿನ 20.1 ಮಿಲಿಯನ್ ಬ್ಯಾರಲ್ ತೈಲ ಉತ್ಪಾದಿಸುತ್ತದೆ. 2006ರಲ್ಲಿ ಅಮೆರಿಕಾ ದಾಖಲೆಯ 12.5 ಮಿಲಿಯನ್ ಬ್ಯಾರಲ್ ಪೆಟ್ರೋಲಿಯಂ ಆಮದು ಮಾಡಿಕೊಳ್ಳುತ್ತಿತ್ತು. ಆ ಪ್ರಮಾಣ ಈಗ ಅಂದಾಜು 1.5 ಮಿಲಿಯನ್ ಬ್ಯಾರಲ್‌ಗೆ ಇಳಿದಿದೆ. ತೈಲದ ಮೇಲೆ ಅಮೆರಿಕಾದ ನಿಯಂತ್ರಣ ಮಧ್ಯ ಪೂರ್ವದ ಸಮಸ್ಯೆ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದನ್ನು ತಡೆಯುವುದಿಲ್ಲ. ಬದಲಿಗೆ, ಮಾರುಕಟ್ಟೆ ಹೇಗೆ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಬದಲಾಯಿಸುತ್ತದೆ.
ತೈಲ ಪೂರೈಕೆ ಕಡಿಮೆಯಾಗದಂತೆ ತಡೆಯಲು ನಾವು ಏನು ಮಾಡಲೂ ಸಿದ್ಧ ಎಂದು ಪಾಶ್ಚಾತ್ಯ ದೇಶಗಳು ಸ್ಪಷ್ಟಪಡಿಸಿವೆ. ಅಂದರೆ ಅವುಗಳು ತಮ್ಮ ತುರ್ತು ಅಗತ್ಯದ ತೈಲ ಸಂಗ್ರಹವನ್ನು ಕೊನೆಯ ಕ್ಷಣದ ತನಕ ಕಾಯದೆ ಬಳಸಿ, ತೈಲ ಪೂರೈಕೆ ಸ್ಥಿರವಾಗಿಸಲು ಪ್ರಯತ್ನಿಸಲಿವೆ. ತಮ್ಮ ರಾಜಕೀಯ ಗೌರವಕ್ಕೆ ಧಕ್ಕೆಯಾದರೂ ಪರವಾಗಿಲ್ಲ ಎಂದು ಕೆಲವು ತೈಲ ಉತ್ಪಾದಕ ದೇಶಗಳ ಮೇಲಿನ ನಿರ್ಬಂಧ ತೆರವುಗೊಳಿಸಿವೆ. ತೈಲ ಪೂರೈಕೆಯನ್ನು ಸ್ಥಿರವಾಗಿರಿಸಲು ಮತ್ತು ತೈಲ ಬೆಲೆ ಹೆಚ್ಚು ಏರಿಕೆ ಕಾಣದಂತೆ ತಡೆಯಲು ಅವು ಈ ಕ್ರಮಗಳನ್ನು ಕೈಗೊಂಡಿವೆ. ಇದನ್ನು ಇತ್ತೀಚಿನ ವರ್ಷಗಳಲ್ಲಿ ಕೇಂದ್ರೀಯ ಬ್ಯಾಂಕ್‌ಗಳು ಸ್ಟಾಕ್ ಮತ್ತು ಬಾಂಡ್ ಮಾರುಕಟ್ಟೆಗಳನ್ನು ಶಾಂತವಾಗಿಸಲು ಮಧ್ಯ ಪ್ರವೇಶಿಸಿರುವುದಕ್ಕೆ ಹೋಲಿಸಬಹುದು. ಇದು ತೈಲ ಬೆಲೆ ಸ್ಥಿರಗೊಳಿಸಿ, ಹೂಡಿಕೆದಾರರಿಗೆ ಧೈರ್ಯ ತುಂಬುತ್ತದೆ. ವಾಷಿಂಗ್ಟನ್ ನಿಂದ ಟೋಕಿಯೋ ತನಕ ತೈಲ ನೀತಿ ನಿರೂಪಕರು ತೈಲ ಪೂರೈಕೆ ವ್ಯತ್ಯಯ ತಡೆಯಲು ಸಮರ್ಥ ಕ್ರಮಗಳನ್ನು ಕೈಗೊಳ್ಳಲು ಸಿದ್ಧರಿದ್ದಾರೆ. ಉದಾಹರಣೆಗೆ, ಅವರು ತಮ್ಮ ಸಂಗ್ರಹದಿಂದ ದೊಡ್ಡ ಪ್ರಮಾಣದ ತೈಲ ಬಿಡುಗಡೆಗೊಳಿಸಿ, ತೈಲ ಬೆಲೆ ಸ್ಥಿರಗೊಳಿಸಲು ಪ್ರಯತ್ನಿಸಬಹುದು.
ಕಳೆದ 20 ವರ್ಷಗಳಲ್ಲಿ, ತೈಲ ಉತ್ಪಾದಕ ದೇಶಗಳು ಪೂರೈಕೆ ಸಮಸ್ಯೆಗಳಿಂದ ಕ್ಷಿಪ್ರವಾಗಿ ಚೇತರಿಸಿಕೊಳ್ಳುವ ಸಾಮರ್ಥ್ಯ ಪ್ರದರ್ಶಿಸಿವೆ. 2019ರಲ್ಲಿ, ಸೌದಿ ತೈಲಾಗಾರಗಳಾದ ಅಬ್‌ಕಾಯ್ಕ್ ಮತ್ತು ಖುರಾಯಿಸ್‌ಗಳ ಮೇಲೆ ದಾಳಿಗಳಾದಾಗ, ದೇಶದ ತೈಲ ಪೂರೈಕೆ ಅಂದಾಜು 50% ಕುಸಿತ ಕಂಡಿತ್ತು. ಅದು ಸರಿಹೋಗಲು ಕೆಲವು ತಿಂಗಳುಗಳೇ ಬೇಕು ಎಂದು ಅಂದಾಜಿಸಲಾಗಿತ್ತು. ಆದರೆ ಅದು ಕೆಲವೇ ದಿನಗಳಲ್ಲಿ ಸಹಜ ಸ್ಥಿತಿಗೆ ಬಂದಿತ್ತು. ಮೊಅಮ್ಮರ್ ಗಡಾಫಿಯ ವಿರುದ್ಧದ 2011ರ ಬಂಡಾಯದ ನಡುವೆಯೂ ಲಿಬಿಯಾದ ತೈಲ ಉದ್ಯಮ ಸ್ಥಿರವಾಗಿತ್ತು. 2003ರ ಅಮೆರಿಕಾದ ದಾಳಿಯಲ್ಲೂ ಇರಾಕಿನ ತೈಲೋದ್ಯಮ ಉಳಿದುಕೊಂಡಿತ್ತು. ಇವೆಲ್ಲ ಘಟನೆಗಳು ತೈಲ ವ್ಯಾಪಾರಿಗಳಿಗೆ ಸುರಕ್ಷತೆಯ ಭಾವನೆಯನ್ನಂತೂ ಮೂಡಿಸಿವೆ.
ತೈಲ ಆಪ್ಷನ್ಸ್ ಮಾರುಕಟ್ಟೆ ಹೆಚ್ಚು ಹೊಂದಿಕೊಳ್ಳುವಂತಿದ್ದು, ಬೆಲೆಯ ಬದಲಾವಣೆಯ ಕುರಿತು ಅಪಾಯಕಾರಿ ಊಹೆ ಮಾಡುವ ಬದಲು, ವ್ಯಾಪಾರಿಗಳಿಗೆ ಉತ್ತಮ ಬೆಲೆಗೆ ವಿಮೆ ಪಡೆಯಲು ಅನುಮತಿಸುತ್ತದೆ. ಇದು ಅವರನ್ನು ದೊಡ್ಡ ನಷ್ಟಗಳಿಂದ ರಕ್ಷಿಸುತ್ತದೆ. 2006ರಲ್ಲಿ, ಟ್ರೇಡರ್‌ಗಳು ಪ್ರತಿದಿನ ಬ್ರೆಂಟ್ ಕ್ರೂಡ್‌ನ 10,000 ಕಾಲ್ ಆಪ್ಷನ್‌ಗಳನ್ನು (ಬೆಲೆ ಹೆಚ್ಚಳದಿಂದ ರಕ್ಷಿಸುವ ಒಪ್ಪಂದಗಳು) ಖರೀದಿಸುತ್ತಿದ್ದರು. ಈಗ ಅದು ಅವರು ಪ್ರತಿದಿನ 1,50,000 ಕಾಲ್ ಆಪ್ಷನ್ ಖರೀದಿಸುತ್ತಿದ್ದಾರೆ. ಇತ್ತೀಚೆಗೆ ಈ ಸಂಖ್ಯೆ 3,50,000ವನ್ನೂ ತಲುಪಿತ್ತು. ಮಾರುಕಟ್ಟೆಯಲ್ಲಿ ಹೆಚ್ಚಿನ ದ್ರವ್ಯತೆ ವ್ಯಾಪಾರಿಗಳಿಗೆ ತೈಲ ಬೆಲೆಯಲ್ಲಿ ಭಾರೀ ಹೆಚ್ಚಳ ತರದೆಯೇ ಅಪಾಯದಿಂದ ಪಾರಾಗಲು ಸುಲಭ ಮಾರ್ಗಗಳನ್ನು ಒದಗಿಸುತ್ತದೆ.
ಈಗ ವ್ಯಾಪಾರಿಗಳಿಗೆ ಕಡಿಮೆ ಬೆಲೆಗೆ ಉಪಗ್ರಹ ಚಿತ್ರಗಳು ಲಭಿಸುವುದರಿಂದ ಯುದ್ಧದ ಅನಿಶ್ಚಿತತೆಯೂ ಕಡಿಮೆಯಾಗಿದೆ. ಈ ಛಾಯಾಚಿತ್ರಗಳು ಅವರಿಗೆ ಯುದ್ಧದಲ್ಲಿ ಏನಾಗುತ್ತಿದೆ ಎಂದು ಆಗಿಂದಾಗ್ಗೆ ತಿಳಿಯಲು ನೆರವಾಗುತ್ತವೆ. ಉಪಗ್ರಹಗಳು ಬಂದರಿನಿಂದ ತೆರಳುವ ಹಡಗುಗಳನ್ನು ಗಮನಿಸುವುದನ್ನೂ ಸುಲಭವಾಗಿಸಿವೆ. ಅಂದರೆ ತೈಲ ಮಾರುಕಟ್ಟೆ ವಾಸ್ತವ ಮಾಹಿತಿಯ ಮೇಲೆ ಹೆಚ್ಚು ಅವಲಂಬನೆ ಹೊಂದಬಹುದು.
ಹಾಗೆಂದು ಹಿಂದಿನ ಯಶಸ್ಸುಗಳು ಭವಿಷ್ಯದಲ್ಲೂ ಅದೇ ಫಲಿತಾಂಶ ಒದಗಿಸುತ್ತವೆ ಎನ್ನಲಾಗದು. ಮಧ್ಯ ಪೂರ್ವದಲ್ಲಿ ದೊಡ್ಡ ಪ್ರಮಾಣದ ಪ್ರಾದೇಶಿಕ ಯುದ್ಧ ಉಂಟಾದರೆ, ತೈಲ ಮಾರುಕಟ್ಟೆಗಳು ಗಂಭೀರ ಸಮಸ್ಯೆ ಎದುರಿಸಬಹುದು. ಅದರಿಂದಾಗಿ, ತೈಲ ಬೆಲೆಯೂ ಬದಲಾಗಬಹುದು. ಮೇಲೆ ನಮೂದಿಸಿರುವ ಐದು ಕಾರಣಗಳು ಮಾರುಕಟ್ಟೆಯನ್ನು ಸದೃಢವಾಗಿಸಲು ನೆರವಾಗಿದ್ದರೂ, ಅಪಾಯಗಳನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದಿಲ್ಲ. ಅವುಗಳ ಪರಿಣಾಮವಾಗಿ, ಜನರು ಅತಿಯಾದ ಆತ್ಮವಿಶ್ವಾಸ ಹೊಂದಿದರೆ, ಕೊನೆ ಗಳಿಗೆಯಲ್ಲಿ ಅದು ಸಮಸ್ಯೆಗೆ ಕಾರಣವೂ ಆದೀತು. ಅಂತಿಮವಾಗಿ, ಅವಶ್ಯಕತೆ ಬಿದ್ದಾಗ ಕೈಗೊಳ್ಳುವ ಉತ್ತಮ ಆಯ್ಕೆಗಳೇ ತೈಲ ಮಾರುಕಟ್ಟೆಯಲ್ಲಿ ನೆರವಿಗೆ ಬರುತ್ತವೆ.
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)