ಮೆದುಳಿನ ಆರೋಗ್ಯ  online desk
ಅಂಕಣಗಳು

ಮೆದುಳಿನ ಆರೋಗ್ಯ (ಕುಶಲವೇ ಕ್ಷೇಮವೇ)

ದಿನನಿತ್ಯ ಉತ್ತಮ ಗುಣಮಟ್ಟದ ನಿದ್ರೆ ಮೆದುಳಿನ ಆರೋಗ್ಯದ ಮತ್ತೊಂದು ನಿರ್ಣಾಯಕ ಅಂಶವಾಗಿದೆ. ಮೆದುಳು ತನ್ನನ್ನು ತಾನೇ ಸರಿಪಡಿಸಿಕೊಳ್ಳಲು ಮತ್ತು ನೆನಪುಗಳನ್ನು ಸಂಗ್ರಹಿಸಲು ನಿದ್ರೆಯ ಸಮಯವನ್ನು ಬಳಸುತ್ತದೆ.

ಇತ್ತೀಚೆಗಷ್ಟೇ ವಿಶ್ವ ಮೆದುಳಿನ ದಿನವನ್ನು (ಜುಲೈ 22) ಆಚರಿಸಲಾಯಿತು. ನಾವು ಆರೋಗ್ಯವಾಗಿರಲು ದೈಹಿಕ ಆರೋಗ್ಯದಷ್ಟೇ ಮೆದುಳಿನ ಆರೋಗ್ಯವೂ ಬಹಳ ಮುಖ್ಯ ಎಂಬುದನ್ನು ಈ ದಿನ ಪ್ರತಿವರ್ಷ ನೆನಪಿಸುತ್ತದೆ. ಈ ವರ್ಷದ ವಿಶ್ವ ಮೆದುಳಿನ ದಿನದ ಘೋಷವಾಕ್ಯ ʼಎಲ್ಲ ವಯಸ್ಸಿನವರಿಗೆ ಮೆದುಳಿನ ಆರೋಗ್ಯʼ.

ವಿಶ್ವ ಮಿದುಳಿನ ದಿನ

ವಿಶ್ವ ನರವಿಜ್ಞಾನ ಒಕ್ಕೂಟವು ವಿಶ್ವ ಆರೋಗ್ಯ ಸಂಸ್ಥೆಯ ಸಹಯೊಗದೊಂದಿಗೆ ವಿಶ್ವ ಮಿದುಳಿನ ದಿನವನ್ನು 2014ರಲ್ಲಿ ವಿಶ್ವ ಮೆದುಳಿನ ಆರೋಗ್ಯ ದಿನಾಚರಣೆಯನ್ನು ಆರಂಭಿಸಿತು. ಸಮಗ್ರ ಆರೋಗ್ಯದಲ್ಲಿ ಮೆದುಳಿನ ಪಾತ್ರವನ್ನು ಸಾರುವುದು, ನರವೈಜ್ಞಾನಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನು ಹೆಚ್ಚಿಸುವುದು, ತಡೆಗಟ್ಟುವುದು ಮತ್ತು ವಿಶ್ವಾದ್ಯಂತ ಮೆದುಳಿನ ಆರೈಕೆಯನ್ನು ಪ್ರತಿಪಾದಿಸುವುದು ಈ ದಿನದ ಗುರಿಯಾಗಿದೆ.

ನಮ್ಮ ಒಟ್ಟಾರೆ ಆರೋಗ್ಯಕ್ಕೆ ಅದರಲ್ಲಿಯೂ ವಿಶೇಷವಾಗಿ ನಾವು ವಯಸ್ಸಾದಂತೆ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಆರೋಗ್ಯಕರ ಮೆದುಳು ನಮಗೆ ಸ್ಪಷ್ಟವಾಗಿ ಯೋಚಿಸಲು, ವಿಷಯಗಳನ್ನು ನಿಖರವಾಗಿ ನೆನಪಿಟ್ಟುಕೊಳ್ಳಲು ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರಲು ಅನುವು ಮಾಡಿಕೊಡುತ್ತದೆ. ಮೆದುಳಿನ ಆರೋಗ್ಯದ ಪ್ರಮುಖ ಮಾರ್ಗವೆಂದರೆ ನಿಯಮಿತ ದೈಹಿಕ ಚಟುವಟಿಕೆ. ವ್ಯಾಯಾಮವು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನಲ್ಲಿ ಜೀವಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ನಡಿಗೆ, ತೋಟಗಾರಿಕೆ ಅಥವಾ ಲಘುವಾಗಿರುವ ಸರಳ ಚಟುವಟಿಕೆಗಳು ಸಹ ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.

ಮಿದುಳಿನ ಆರೋಗ್ಯದಲ್ಲಿ ಪೌಷ್ಠಿಕಾಂಶದ ಪಾತ್ರ

ಮೆದುಳನ್ನು ಆರೋಗ್ಯಕರವಾಗಿಡುವಲ್ಲಿ ಪೌಷ್ಠಿಕಾಂಶವು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ತಾಜಾ ಹಸಿರು ತರಕಾರಿಗಳು, ಬಗೆ ಬಗೆ ಸೊಪ್ಪುಗಳು, ಹಣ್ಣುಗಳು, ಬೀಜಗಳು, ಧಾನ್ಯಗಳು ಮತ್ತು ಸಾಲ್ಮನ್ ಅಥವಾ ಸಾರ್ಡೀನ್ಗಳಂತಹ ಎಣ್ಣೆಯುಕ್ತ ಮೀನುಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವು ಮೆದುಳಿನಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಸಸ್ಯ ಆಧಾರಿತ ಆಹಾರಗಳು ಮತ್ತು ಆರೋಗ್ಯಕರ ಕೊಬ್ಬಿರುವ ಆಹಾರಗಳು ಆಲ್ಜೈಮರ್ ಕಾಯಿಲೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ಸಂಸ್ಕರಿಸಿದ ಆಹಾರಗಳು, ಸಿಹಿ ತಿಂಡಿಗಳು ಮತ್ತು ಅತಿಯಾದ ಉಪ್ಪು-ಖಾರ ಇರುವ ಪದಾರ್ಥಗಳ ಸೇವನೆಯನ್ನು ಮಿತಿಗೊಳಿಸುವುದು ಮುಖ್ಯವಾಗಿದೆ. ಏಕೆಂದರೆ ಈ ಪದಾರ್ಥಗಳು ಹೃದಯ ಮತ್ತು ಮೆದುಳಿಗೆ ಹಾನಿ ಉಂಟುಮಾಡುತ್ತವೆ.

ಉತ್ತಮ ನಿದ್ರೆ ಮೆದುಳಿನ ಆರೋಗ್ಯದ ನಿರ್ಣಾಯಕ ಅಂಶ

ದಿನನಿತ್ಯ ಉತ್ತಮ ಗುಣಮಟ್ಟದ ನಿದ್ರೆ ಮೆದುಳಿನ ಆರೋಗ್ಯದ ಮತ್ತೊಂದು ನಿರ್ಣಾಯಕ ಅಂಶವಾಗಿದೆ. ಮೆದುಳು ತನ್ನನ್ನು ತಾನೇ ಸರಿಪಡಿಸಿಕೊಳ್ಳಲು ಮತ್ತು ನೆನಪುಗಳನ್ನು ಸಂಗ್ರಹಿಸಲು ನಿದ್ರೆಯ ಸಮಯವನ್ನು ಬಳಸುತ್ತದೆ. ವಯಸ್ಕರು ಪ್ರತಿ ರಾತ್ರಿ ಎಂಟು ಗಂಟೆಗಳ ಕಾಲ ನಿದ್ರೆ ಮಾಡಬೇಕು. ದೀರ್ಘಕಾಲ ನಿದ್ರೆ ಸರಿಯಾಗಿ ಮಾಡದಿದ್ದರೆ ನಮ್ಮ ನೆನಪಿನ ಶಕ್ತಿಯು ಕುಂಠಿತವಾಗುತ್ತದೆ. ಆದ್ದರಿಂದ ಗುಣಮಟ್ಟದ ನಿದ್ರೆ ಮಾಡುವುದು ನಮ್ಮ ಆದ್ಯತೆಯಾಗಬೇಕು. ಮಲಗುವ ಮುನ್ನ ಆಹಾರ, ಕಾಫೀ/ಟೀ ಸೇವನೆ, ಟಿವಿ/ಮೊಬೈಲ್ ಫೋನ್ ಬಳಕೆ ಮತ್ತು ಅತಿಯಾಗಿ ಮನರಂಜನೆ ಕಾರ್ಯಕ್ರಮಗಳನ್ನು ನೋಡಬಾರದು. ನಿಯಮಿತವಾಗಿ ನಿದ್ರೆಯ ವೇಳಾಪಟ್ಟಿಯನ್ನು ಇಟ್ಟುಕೊಳ್ಳಬೇಕು ಮತ್ತು ಮಲಗಲು ಅನುಕೂಲವಾಗುವ ವಾತಾವರಣವನ್ನು ಮನೆಯಲ್ಲಿ ರೂಪಿಸಿಕೊಳ್ಳಬೇಕು. ಮಲಗುವ ಮೊದಲು ಮೆದುಳನ್ನು ಶಾಂತಗೊಳಿಸಲು ಲಘು ಓದು ಮತ್ತು ಸುಶ್ರಾವ್ಯ ಸಂಗೀತವನ್ನು ಕೇಳಬೇಕು. ಬೆಳಕು ಮಂದವಾಗಿರಬೇಕು ಮತ್ತು ಹಾಸಿಗೆ-ದಿಂಬು ಮತ್ತು ಹೊದಿಕೆಗಳನ್ನು ಸ್ವಚ್ಛವಾಗಿಡಬೇಕು.

ಕ್ರಿಯಾಶೀಲ ಮೆದುಳು

ನಾವು ಅರೋಗ್ಯವಾಗಿ ಸಕ್ರಿಯ ಜೀವನ ನಡೆಸಲು ಮೆದುಳು ಕ್ರಿಯಾಶೀಲವಾಗಿರುವುದು ಬಹಳ ಮುಖ್ಯ. ಮೆದುಳು ಕ್ರಿಯಾಶೀಲವಾಗಲು ಪುಸ್ತಕಗಳನ್ನು ಓದುವುದು, ಒಗಟುಗಳನ್ನು ಬಿಡಿಸುವುದು, ಹೊಸ ಭಾಷೆ ಅಥವಾ ಸಂಗೀತ ವಾದ್ಯವನ್ನು ಕಲಿಯುವುದು ಅಥವಾ ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ಮೆದುಳಿನಲ್ಲಿ ಹೊಸ ಹೊಸ ಸಂಪರ್ಕಗಳು ಏರ್ಪಡುತ್ತವೆ. ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಚುರುಕುತನ ಹೆಚ್ಚುತ್ತದೆ. ಈ ಸಂಪರ್ಕಗಳು ಮೆದುಳಿಗೆ ವಯಸ್ಸಾಗುವುದನ್ನು ಕಡಿಮೆ ಮಾಡುತ್ತವೆ.

ಸಾಮಾಜಿಕ ಸಂವಹನ ನಮ್ಮ ಭಾವನಾತ್ಮಕ ಮತ್ತು ಮತ್ತು ಮೆದುಳಿನ ಆರೋಗ್ಯಕ್ಕೆ ಅತ್ಯಗತ್ಯ. ಮನೆಯವರೊಂದಿಗೆ ಅರ್ಥಪೂರ್ಣ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳುವುದು, ಸಮುದಾಯ ಚಟುವಟಿಕೆಗಳಿಗೆ ಸೇರುವುದು ಅಥವಾ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದು ಒಂಟಿತನ ಮತ್ತು ಖಿನ್ನತೆಯ ಭಾವನೆಗಳನ್ನು ಕಡಿಮೆ ಮಾಡುತ್ತದೆ.

ಮೆದುಳಿನ ಆರೋಗ್ಯದ ಮೇಲೆ ಒತ್ತಡದ ಪರಿಣಾಮ

ಒತ್ತಡವು ಮೆದುಳಿನ ಆರೋಗ್ಯದ ಮೇಲೆ ಪ್ರಬಲ ಪರಿಣಾಮ ಬೀರುತ್ತದೆ. ನಾವು ಎಚ್ಚರವಾಗಿರಲು, ಕೆಲಸದ ಕಡಿಮೆ ಗಮನ ಹರಿಸಲು ಮತ್ತು ಸವಾಲುಗಳಿಗೆ ಪ್ರತಿಕ್ರಿಯಿಸಲು ಅಲ್ಪಸ್ವಲ್ಪ ಒತ್ತಡ ಸಹಾಯ ಮಾಡುತ್ತದೆ. ಆದರೆ ದೀರ್ಘಕಾಲದವರೆಗೆ ಒತ್ತಡ ಹೆಚ್ಚಾಗಿದ್ದರೆ ಅದು ಮೆದುಳಿಗೆ ಹಾನಿ ಮಾಡುತ್ತದೆ. ದೇಹವು ಒತ್ತಡಕ್ಕೊಳಗಾದಾಗ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ನಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇವು ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಪ್ರಾರಂಭಿಸುತ್ತವೆ. ನೆನಪು ಮತ್ತು ಕಲಿಕೆಗೆ ನೆರವಾಗುವ ಮೆದುಳಿನ ಹಿಪ್ಪೊಕ್ಯಾಂಪಸ್ ಭಾಗ ದೀರ್ಘಕಾಲಿಕ ಒತ್ತಡದಿಂದ ಕುಗ್ಗುತ್ತದೆ. ಇದರಿಂದ ನೆನಪಿನ ಸಮಸ್ಯೆಗಳು ಉದ್ಭವಿಸುತ್ತವೆ ಮತ್ತು ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ತೊಂದರೆಯಾಗುತ್ತದೆ. ಒತ್ತಡವು ಆತಂಕ ಮತ್ತು ಖಿನ್ನತೆಯ ಅಪಾಯವನ್ನು ಹೆಚ್ಚಿಸುತ್ತದೆ. ಒತ್ತಡದಲ್ಲಿದ್ದಾಗ ನಿದ್ರೆ ಸರಿಯಾಗಿ ಬರುವುದಿಲ್ಲ. ಮೆದುಳಿನಲ್ಲಿರುವ ಸಂಪರ್ಕಗಳನ್ನು ದುರ್ಬಲಗೊಳಿಸುತ್ತದೆ, ಸ್ಪಷ್ಟವಾಗಿ ಯೋಚಿಸಲು ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ.

ಒಟ್ಟಾರೆಯಾಗಿ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ದಿನನಿತ್ಯ ವ್ಯಾಯಾಮ, ಬಿರುಸು ನಡಿಗೆ, ಧ್ಯಾನ ಮತ್ತು ಆಳವಾದ ಉಸಿರಾಟ ಮಾಡಬೇಕು. ಜೊತೆಗೆ ಪ್ರಕೃತಿಯಲ್ಲಿ ಸಮಯ ಕಳೆಯುವುದು, ಪ್ರೀತಿಪಾತ್ರರ ಜೊತೆ ಮಾತನಾಡುವುದು ಅಥವಾ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT