ನೌಕಾಪಡೆಯ ದಿನ 
ಅಂಕಣಗಳು

ಆಪರೇಷನ್ ಟ್ರೈಡೆಂಟ್: ಭಾರತ ಏಕೆ ಡಿಸೆಂಬರ್ 4ರಂದು ನೌಕಾಪಡೆಯ ದಿನವನ್ನು ಆಚರಿಸುತ್ತದೆ?

ಭಾರತೀಯ ನೌಕಾಪಡೆಯ ದಿನದ ಇತಿಹಾಸ 1944ರಷ್ಟು ಹಿಂದಕ್ಕೆ ಸಾಗುತ್ತದೆ. ಆಗ ರಾಯಲ್ ಇಂಡಿಯನ್ ನೇವಿ ಅಕ್ಟೋಬರ್ 21ರಂದು ಮೊದಲ ಬಾರಿಗೆ ನೌಕಾಪಡೆಯ ದಿನವನ್ನು ಆಚರಿಸಿತ್ತು.

ಪ್ರತಿವರ್ಷವೂ ಡಿಸೆಂಬರ್ 4ರಂದು ಭಾರತ ನೌಕಾಪಡೆಯ ದಿನವನ್ನು ಹೆಮ್ಮೆ ಮತ್ತು ಉತ್ಸಾಹದಿಂದ ಆಚರಿಸುತ್ತದೆ. ಈ ವಿಶೇಷ ದಿನ ಕೇವಲ ಪೆರೇಡ್‌ಗಳು ಮತ್ತು ಪ್ರದರ್ಶನಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಬದಲಿಗೆ, ಇದು ಭಾರತದ ಮಿಲಿಟರಿ ಇತಿಹಾಸದಲ್ಲಿ ಒಂದು ಮಹತ್ವದ ದಿನವಾಗಿದ್ದು, ಹಗಲು ರಾತ್ರಿ ಎನ್ನದೆ ನಮ್ಮ ಸಮುದ್ರಗಳನ್ನು ರಕ್ಷಿಸುವ ವೀರ ಯೋಧರನ್ನು ಗೌರವಿಸುವ ಅವಕಾಶವಾಗಿದೆ.

ಭಾರತೀಯ ನೌಕಾಪಡೆಯ ದಿನದ ಇತಿಹಾಸ 1944ರಷ್ಟು ಹಿಂದಕ್ಕೆ ಸಾಗುತ್ತದೆ. ಆಗ ರಾಯಲ್ ಇಂಡಿಯನ್ ನೇವಿ ಅಕ್ಟೋಬರ್ 21ರಂದು ಮೊದಲ ಬಾರಿಗೆ ನೌಕಾಪಡೆಯ ದಿನವನ್ನು ಆಚರಿಸಿತ್ತು. ಇದರ ಉದ್ದೇಶ ಸರಳವಾಗಿತ್ತು - ದೇಶವನ್ನು ರಕ್ಷಿಸುವಲ್ಲಿ ನೌಕಾಪಡೆಯ ಪಾತ್ರವನ್ನು ಹೆಚ್ಚು ಜನರಿಗೆ ತಲುಪಿಸುವುದೇ ಇದರ ಗುರಿಯಾಗಿತ್ತು. ಇದಕ್ಕಾಗಿ ಕರಾವಳಿ ನಗರಗಳಾದ ಬಾಂಬೇ, ಕರಾಚಿಗಳಲ್ಲಿ ಪೆರೇಡ್‌ಗಳನ್ನು ನಡೆಸಿ, ಸಮುದ್ರದಿಂದ ದೂರವಿರುವ ಪ್ರದೇಶಗಳಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಾಯಿತು. ಇದಕ್ಕೆ ಬಂದ ಪ್ರತಿಕ್ರಿಯೆ ನಿಜಕ್ಕೂ ಅದ್ಭುತವಾಗಿತ್ತು. ಜನರು ನೌಕಾಪಡೆಯ ಕುರಿತು ತಿಳಿದುಕೊಳ್ಳಲು ಅಪಾರ ಆಸಕ್ತಿ ಹೊಂದಿದ್ದರು. ಈ ಆಚರಣೆ ದೇಶಾದ್ಯಂತ ದೇಶಭಕ್ತಿಯ ಭಾವನೆಯನ್ನು ಉದ್ದೀಪಿಸಿತ್ತು.

ಈ ಯಶಸ್ಸಿನಿಂದ ಪ್ರೇರಣೆ ಪಡೆದ ನೌಕಾಪಡೆಯ ಅಧಿಕಾರಿಗಳು ಈ ದಿನವನ್ನು ಪ್ರತಿ ವರ್ಷವೂ ಆಚರಿಸಲು ನಿರ್ಧರಿಸಿದರು. ಆದರೆ, ತಂಪಾದ ವಾತಾವರಣದ ಅನುಕೂಲ ಪಡೆಯುವ ದೃಷ್ಟಿಯಿಂದ ನೌಕಾಪಡೆಯ ದಿನವನ್ನು 1945ರಲ್ಲಿ ಡಿಸೆಂಬರ್ 1ಕ್ಕೆ ಮಾರ್ಪಡಿಸಲಾಯಿತು. ಅದಾದ ನಂತರ, ಹಲವಾರು ವರ್ಷಗಳ ಕಾಲ ನೌಕಾಪಡೆಯ ದಿನವನ್ನು ಡಿಸೆಂಬರ್ 15ರಂದು ಆಚರಿಸಲಾಯಿತು. ಆ ದಿನದ ಸುತ್ತಲಿನ ಸಂಪೂರ್ಣ ವಾರವನ್ನು ನೌಕಾಪಡೆಯ ವಾರವನ್ನಾಗಿ ಸಂಭ್ರಮಿಸಲಾಗುತ್ತಿತ್ತು. ಆದರೆ, ಮೇ 1972ರಲ್ಲಿ ನಡೆದ ಹಿರಿಯ ನೌಕಾಪಡೆ ಅಧಿಕಾರಿಗಳ ಸಭೆಯಲ್ಲಿ ಒಂದು ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಯಿತು. ಅವರು ನೌಕಾಪಡೆಯ ದಿನವನ್ನು ಡಿಸೆಂಬರ್ 4ರಂದು ಆಚರಿಸಲು ನಿರ್ಧರಿಸಿದರು. ಆದರೆ, ಈ ಆಯ್ಕೆಯ ಹಿಂದೆ ಒಂದು ಅಷ್ಟೇ ಬಲವಾದ ಕಾರಣವೂ ಇತ್ತು.

ಡಿಸೆಂಬರ್ 4, 1971ರಂದು, ಭಾರತ - ಪಾಕಿಸ್ತಾನಗಳ ನಡುವಿನ ಯುದ್ಧದಲ್ಲಿ, ಭಾರತೀಯ ನೌಕಾಪಡೆ ನಮ್ಮ ಭೂಪ್ರದೇಶದಲ್ಲಿ ನೌಕಾಪಡೆಯ ಯುದ್ಧದ ಚಿತ್ರಣವನ್ನೇ ಬದಲಾಯಿಸುವಂತಹ ಒಂದು ದಿಟ್ಟ ಮತ್ತು ಯಶಸ್ವಿ ಕಾರ್ಯಾಚರಣೆಯನ್ನು ಕೈಗೊಂಡಿತು. ಭಾರತೀಯ ಕ್ಷಿಪಣಿ ಬೋಟುಗಳು ಪಾಕಿಸ್ತಾನದ ನೌಕಾ ಕಾರ್ಯಾಚರಣೆಗಳ ಹೃದಯವಾದ ಕರಾಚಿ ಬಂದರಿನ ಮೇಲೆ ಗಂಭೀರ ದಾಳಿ ನಡೆಸಿದವು. ಆಪರೇಷನ್ ಟ್ರೈಡೆಂಟ್ ಎಂದು ಹೆಸರಾದ ಈ ಅಚ್ಚರಿಯ ದಾಳಿ ಪಾಕಿಸ್ತಾನದ ಇಂಧನ ಸಂಗ್ರಹ ಟ್ಯಾಂಕ್‌ಗಳನ್ನು ನಾಶಗೊಳಿಸಿ, ಪೂರೈಕೆ ಹಡಗುಗಳು ಮತ್ತು ಇತರ ಸಮುದ್ರ ತೀರದ ವ್ಯವಸ್ಥೆಗಳನ್ನು ಧ್ವಂಸಗೊಳಿಸಿತು. ಈ ದಾಳಿ ಪಾಕಿಸ್ತಾನಕ್ಕೆ ಅಪಾರ ಹಾನಿ ಉಂಟುಮಾಡಿದ್ದು ಮಾತ್ರವಲ್ಲದೆ, ಭಾರತದ ಬಳಿ ಪ್ರಬಲ, ಸಮರ್ಥವಾದ ನೌಕಾಪಡೆ ಇದೆ ಎನ್ನುವ ಸಂದೇಶವನ್ನು ಜಗತ್ತಿಗೆ ರವಾನಿಸಿತ್ತು.

ಇದೇ ಸಮಯದಲ್ಲಿ, ಭಾರತದ ವಿಮಾನ ವಾಹಕ ನೌಕೆಯಾಗಿದ್ದ ಐಎನ್ಎಸ್ ವಿಕ್ರಾಂತ್‌ನ ಯುದ್ಧ ವಿಮಾನಗಳು ಚಿತ್ತಗಾಂಗ್ ಮತ್ತು ಖುಲ್ನಾದಲ್ಲಿದ್ದ ಶತ್ರುಗಳ ವಾಯುನೆಲೆಗಳ ಮೇಲೆ ದಾಳಿ ನಡೆಸಿದವು. ಈ ಪ್ರದೇಶಗಳು ಇಂದು ಸ್ವತಂತ್ರ ಬಾಂಗ್ಲಾದೇಶದ ಭಾಗವಾಗಿವೆ. ಅರಬ್ಬೀ ಸಮುದ್ರ ಮತ್ತು ಹಿಂದೂ ಮಹಾಸಾಗರ ಎರಡರಿಂದಲೂ ನಡೆದ ಈ ಸಂಯೋಜಿತ ದಾಳಿಗಳು ಅತ್ಯುತ್ತಮ ಯೋಜನೆ, ಧೈರ್ಯ ಮತ್ತು ತಂಡವಾಗಿ ಕಾರ್ಯಾಚರಿಸುವುದರ ಪ್ರತೀಕವಾಗಿದ್ದವು.

1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾರತ ಗೆಲುವು ಸಾಧಿಸಲು ಈ ಕಾರ್ಯಾಚರಣೆಯೇ ಪ್ರಮುಖ ತಿರುವಾಗಿತ್ತು. ಆದ್ದರಿಂದಲೇ ಡಿಸೆಂಬರ್ 4ನ್ನು ಭಾರತದ ಮೊದಲ ಪ್ರಮುಖ ನೌಕಾಪಡೆಯ ಕಾರ್ಯಾಚರಣೆಯನ್ನು ಸ್ಮರಿಸುವ ಸಲುವಾಗಿ ನೌಕಾಪಡೆಯ ದಿನವನ್ನಾಗಿ ಆಚರಿಸಲು ಆರಂಭಿಸಲಾಯಿತು. ಇಂದು ನೌಕಾಪಡೆಯ ದಿನವನ್ನು ಕೇವಲ ಈ ಐತಿಹಾಸಿಕ ಗೆಲುವನ್ನು ಸ್ಮರಿಸಲು, ಗೌರವಿಸಲು ಮಾತ್ರವೇ ಆಚರಿಸುತ್ತಿಲ್ಲ. ಬದಲಿಗೆ, ಪ್ರತಿದಿನವೂ ನಮ್ಮ ಸಮುದ್ರಗಳನ್ನು ಸುರಕ್ಷಿತವಾಗಿಡಲು ಶ್ರಮಿಸುವ ಸಾವಿರಾರು ನೌಕಾಪಡೆಯ ಯೋಧರ ಬದ್ಧತೆ ಮತ್ತು ತ್ಯಾಗಗಳನ್ನೂ ಈ ದಿನ ಗೌರವಿಸಲಾಗುತ್ತದೆ.

ಭಾರತ 7,500 ಕಿಲೋಮೀಟರ್‌ಗೂ ಹೆಚ್ಚಿನ ಕರಾವಳಿ ತೀರವನ್ನು ಹೊಂದಿದೆ. ಇಷ್ಟು ವಿಶಾಲ ಪ್ರದೇಶವನ್ನು ಸುರಕ್ಷಿತವಾಗಿಡಲು ನಿರಂತರ ಕಣ್ಗಾವಲಿನ ಅಗತ್ಯವಿದೆ. ಭಾರತೀಯ ನೌಕಾಪಡೆ ನಮ್ಮ ಸಮುದ್ರ ಗಡಿಗಳನ್ನು ಕಾಯುತ್ತಿದ್ದು, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನೆರವಾಗಿ, ಸಮುದ್ರದಲ್ಲಿ ತೊಂದರೆಗೆ ಸಿಲುಕಿದವರನ್ನು ರಕ್ಷಿಸುತ್ತದೆ. ಅದರೊಡನೆ, ವ್ಯಾಪಾರಿ ಹಡಗುಗಳು ನಮ್ಮ ಸಮುದ್ರ ಪ್ರದೇಶಗಳಲ್ಲಿ ಸುರಕ್ಷಿತವಾಗಿ ಸಾಗುವುದನ್ನು ನೌಕಾಪಡೆ ಖಾತ್ರಿಪಡಿಸುತ್ತದೆ.

2025ರ ನೌಕಾಪಡೆಯ ದಿನವನ್ನು 'ಕಾಂಬ್ಯಾಟ್ ರೆಡಿ, ಕೊಹೆಸಿವ್ ಆ್ಯಂಡ್ ಸೆಲ್ಫ್ ರಿಲಯಂಟ್' (ಸಮರ ಸನ್ನದ್ಧ, ಒಗ್ಗಟ್ಟು ಮತ್ತು ಸ್ವಾವಲಂಬಿ) ಎಂಬ ಥೀಮ್ ಅಡಿಯಲ್ಲಿ ಆಚರಿಸಲಾಗುತ್ತಿದೆ. ಈ ಥೀಮ್ ನೌಕಾಪಡೆಯ ಮೂರು ಪ್ರಮುಖ ಲಕ್ಷಣಗಳಾದ ಸದಾ ಕಾರ್ಯಾಚರಣೆಗೆ ಸನ್ನದ್ಧವಾಗಿರುವುದು, ಏಕೀಕೃತ ಪಡೆಯಾಗಿ ಒಗ್ಗಟ್ಟಿನಿಂದ ಕಾರ್ಯಾಚರಿಸುವುದು, ಮತ್ತು ವಿದೇಶಗಳ ಮೇಲೆ ಅವಲಂಬಿಸುವುದರ ಬದಲು ನಮ್ಮದೇ ಶಕ್ತಿ ಮತ್ತು ತಂತ್ರಜ್ಞಾನಗಳನ್ನು ಬಳಸುವುದನ್ನು ಪ್ರತಿನಿಧಿಸುತ್ತದೆ.

ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತೀಯ ನೌಕಾಪಡೆ ಭಾರತದಲ್ಲೇ ನಿರ್ಮಿತವಾಗಿರುವ ಯುದ್ಧ ನೌಕೆಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಆಯುಧ ಉಪಕರಣಗಳನ್ನು ಹೆಚ್ಚು ಹೆಚ್ಚು ಬಳಸಲಾರಂಭಿಸಿದೆ. ಇದು ನಮ್ಮನ್ನು ಶಕ್ತಿಯುತವಾಗಿಸುವುದು ಮಾತ್ರವಲ್ಲದೆ, ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಿ, ನಮ್ಮ ಆರ್ಥಿಕತೆಗೂ ಉತ್ತೇಜನ ನೀಡುತ್ತದೆ.

ಈ ವರ್ಷದ ನೌಕಾಪಡೆಯ ದಿನದ ಪ್ರಮುಖ ಆಚರಣೆಗಳು ತಿರುವನಂತಪುರದ ಷಣ್ಮುಗಂ ಸಮುದ್ರ ತೀರದಲ್ಲಿ ಡಿಸೆಂಬರ್ 3 ಹಾಗೂ 4ರಂದು ನೆರವೇರುತ್ತಿವೆ. ನೌಕಾಪಡೆ ಉದ್ದೇಶಪೂರ್ವಕವಾಗಿಯೇ ಈ ವರ್ಷದ ಆಚರಣೆಗಳನ್ನು ಪ್ರಮುಖ ನೌಕಾನೆಲೆಗಳಿಂದ ಹೊರಗೆ ಆಚರಿಸುತ್ತಿದೆ. ಇದರಿಂದ ಹೆಚ್ಚಿನ ಜನರಿಗೆ, ಅದರಲ್ಲೂ ದೇಶದ ವಿವಿಧ ಭಾಗಗಳ ಜನರಿಗೆ ನೌಕಾಪಡೆಯ ಸಾಮರ್ಥ್ಯವನ್ನು ಕಣ್ಣಾರೆ ನೋಡುವ ಅವಕಾಶ ಲಭಿಸುತ್ತದೆ. ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥರೂ ಆದ ರಾಷ್ಟ್ರಪತಿ ದ್ರೌಪದಿ ಮುರ್ಮು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದರು. ಅವರೊಡನೆ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲರಾದ ರಾಜೇಂದ್ರ ಅರ್ಲೇಕರ್, ಮತ್ತು ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಉಪಸ್ಥಿತರಿದ್ದರು.

ಈ ಕಾರ್ಯಾಚರಣಾ ಪ್ರದರ್ಶನ ಭಾರತದ ಸಮುದ್ರ ಸಾಮರ್ಥ್ಯದ ಅಮೋಘ ದರ್ಶನ ನೀಡಿತ್ತು. ಅಂದಾಜು 20 ಪ್ರಮುಖ ಯುದ್ಧ ನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳು, ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಸೇರಿದಂತೆ, ಅಂದಾಜು 32 ಏರ್‌ಕ್ರಾಫ್ಟ್‌ಗಳು ಭಾಗವಹಿಸಿ, ವಿವಿಧ ಪ್ರದರ್ಶನಗಳನ್ನು ನೀಡಿದವು. ಸಮುದ್ರ ತೀರದಲ್ಲಿ ನೆರೆದಿದ್ದ ಸಾವಿರಾರು ಜನರು ಆಗಸದಲ್ಲಿ ಕಣ್ಣು ನೆಟ್ಟು, ತಮ್ಮ ಮುಂದೆ ನಡೆಯುತ್ತಿದ್ದ ಅದ್ಭುತವಾದ ಪ್ರದರ್ಶನಕ್ಕೆ ಸಾಕ್ಷಿಯಾದರು. ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣಗೊಂಡ, ರಾಷ್ಟ್ರೀಯ ಹೆಮ್ಮೆಯನ್ನು ತಂದಿರುವ, ಭಾರತದ ಮೊದಲ ದೇಶೀಯ ನಿರ್ಮಾಣದ ವಿಮಾನವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು. ಎಎನ್ಎಸ್ ವಿಕ್ರಾಂತ್ ನೌಕೆಯ ಡೆಕ್‌ನಿಂದ ಯುದ್ಧ ವಿಮಾನವೊಂದು ಆಗಸಕ್ಕೆ ಚಿಮ್ಮಿದಾದ ಸಾರ್ವಜನಿಕರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.

ಈ ಪ್ರದರ್ಶನದಲ್ಲಿ ಭಾರತದ ಮಹತ್ವದ ನೌಕಾಪಡೆಯ ಕಮಾಂಡೋಗಳಾದ ಮಾರ್ಕೋಸ್ ನಡೆಸಿದ ಕಡಲ್ಗಳ್ಳತನ ನಿರೋಧಕ ಕಾರ್ಯಾಚರಣೆಯೂ ಪ್ರಮುಖವಾಗಿತ್ತು. ಇದರೊಡನೆ, ವಿಮಾನಗಳ ಸಂಯೋಜಿತ ಹಾರಾಟ, ಪ್ಯಾರಾಗ್ಲೈಡಿಂಗ್ ಪ್ರದರ್ಶನಗಳು, ಮತ್ತು ಮುಂಚೂಣಿ ಫ್ರಿಗೇಟ್‌ಗಳು ಮತ್ತು ಕ್ಷಿಪಣಿ ಕಾರ್ವೆಟ್‌ಗಳ ಪ್ರದರ್ಶನಗಳೂ ಸೇರಿದ್ದವು. ಸೀ ಕ್ಯಾಡೆಟ್ ಕಾರ್ಪ್ಸ್ ಸಾಂಪ್ರದಾಯಿಕ ಹಾರ್ನ್‌ಪೈನ್ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು. ಇದರೊಡನೆ, ಸಿಡಿಮದ್ದುಗಳ ಪ್ರದರ್ಶನ ಸಂಭ್ರಮಕ್ಕೆ ಇನ್ನಷ್ಟು ಮೆರುಗು ನೀಡಿತ್ತು.

ನಾವು ಪ್ರತಿದಿನ ನಮ್ಮ ಶಿಕ್ಷಣ, ಉದ್ಯೋಗ, ಸಂಭ್ರಮಾಚರಣೆಗಳಲ್ಲಿ ತೊಡಗಿರುವ ಸಂದರ್ಭದಲ್ಲಿ, ನಮ್ಮ ವೀರ ಯೋಧರು ನೌಕೆಗಳನ್ನು ಏರಿ, ಕಾರ್ಯಾಚರಿಸುತ್ತಾ, ನಮ್ಮ ಸುರಕ್ಷತೆ ಮತ್ತು ಹಿತಾಸಕ್ತಿಗಳ ರಕ್ಷಣೆ ನಡೆಸುತ್ತಿದ್ದಾರೆ ಎನ್ನುವುದನ್ನು ನಮಗೆ ನೆನಪಿಸುತ್ತದೆ. ಈ ದಿನ ನಮ್ಮ ನೌಕಾ ಪರಂಪರೆಯ ಕುರಿತು ಹೆಮ್ಮೆ ಮೂಡಿಸಿ, ನಮ್ಮ ವೀರ ಯೋಧರು ಮತ್ತು ಅವರ ಕುಟುಂಬಗಳು ನಡೆಸಿರುವ ತ್ಯಾಗಗಳನ್ನು ನೆನಪಿಸುತ್ತದೆ

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೆಂಪೇಗೌಡ ಏರ್ ಪೋರ್ಟ್ ಲ್ಲಿ 62 ಸೇರಿ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದಾಗಲು ಕಾರಣವೇನು?: ತನಿಖೆ ಆರಂಭಿಸಿದ DGCA

ಸಂಚಾರಿ ಸಾಥಿ ಆ್ಯಪ್: ಮೋದಿ ಸರ್ಕಾರ 'ಯೂ ಟರ್ನ್', ಮಧ್ಯಮ ವರ್ಗದ ಜನರಿಗೆ ಸಿಕ್ಕ ಅಪರೂಪದ ಜಯ! ಹೇಗೆ?

ನನ್ನ ಜ್ಯೋತಿಷಿ ಗುರುಗಳಿಗೆ 4 ನೇ ಹಂತದ ಕ್ಯಾನ್ಸರ್ ಇದೆ: ನಿದ್ರೆ ಇಲ್ಲದ ರಾತ್ರಿ ಕಳೆದಿದ್ದೇನೆ, ಕೌತುಕ ಹುಟ್ಟಿಸಿದ ರಾಜ್ ನಿಡಿಮೋರು ಮಾಜಿ ಪತ್ನಿ!

ಇಂದು ಸಂಜೆ ರಷ್ಯಾ ಅಧ್ಯಕ್ಷ Vladimir Putin ಭಾರತಕ್ಕೆ ಆಗಮನ: ರಾತ್ರಿ ಪ್ರಧಾನಿ ಮೋದಿಯಿಂದ ಖಾಸಗಿ ಔತಣಕೂಟ

ಬೆಳಗಾವಿ ಚಳಿಗಾಲ ಅಧಿವೇಶನ: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ತಂತ್ರ, ತಿರುಗೇಟು ನೀಡಲು ಸಿಎಂ ಪ್ರತಿತಂತ್ರ

SCROLL FOR NEXT