ಡಿಸೆಂಬರ್ 30, ಮಂಗಳವಾರ ಬಾಂಗ್ಲಾದೇಶ ತನ್ನ ಅತ್ಯಂತ ಪ್ರಭಾವಿ ಮತ್ತು ವಿವಾದಾತ್ಮಕ ನಾಯಕರಲ್ಲಿ ಒಬ್ಬರನ್ನು ಕಳೆದುಕೊಂಡಿತು. ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ, ಖಲೀದಾ ಜಿಯಾ ದೀರ್ಘಾವಧಿಯ ಅನಾರೋಗ್ಯದ ಕಾರಣದಿಂದ ತನ್ನ 80ನೇ ವಯಸ್ಸಿನಲ್ಲಿ ನಿಧನರಾದರು. ಅವರ ಮರಣ ಬಾಂಗ್ಲಾದೇಶದ ರಾಜಕೀಯ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಾಯವನ್ನು ಮುಕ್ತಾಯಗೊಳಿಸಿದೆ. ಈ ಅಧ್ಯಾಯ ಧೈರ್ಯ, ದ್ವೇಷ, ಸಾಧನೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಆಳವಾದ ದೇಶದೊಳಗಿನ ವಿಭಜನೆಗೆ ಹೆಸರಾಗಿತ್ತು.
ಖಲೀದಾ ಜಿಯಾ ಅವರನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಮೊದಲಿಗೆ ಅವರು ಎಂತಹ ರಾಜಕೀಯ ಪರಂಪರೆಯೊಡನೆ ವಿವಾಹ ಮಾಡಿಕೊಂಡರು ಎನ್ನುವುದನ್ನು ಗಮನಿಸಬೇಕಾಗುತ್ತದೆ. 1945ರಲ್ಲಿ, ಫೇಣಿಯಲ್ಲಿ ಒಂದು ಸಾಮಾನ್ಯ ವ್ಯಾಪಾರ ಕುಟುಂಬದಲ್ಲಿ ಖಲೀದಾ ಖಾನಮ್ ಜನಿಸಿದರು. 'ಪುತುಲ್' ಎನ್ನುವ ಅಡ್ಡ ಹೆಸರಿನಿಂದ ಪರಿಚಿತರಾಗಿದ್ದ ಖಲೀದಾ, ಸ್ವ ಇಚ್ಛೆಯಿಂದ ಸಾರ್ವಜನಿಕ ಜೀವನವನ್ನು ಪ್ರವೇಶಿಸಲಿಲ್ಲ. ಬದಲಿಗೆ, ಅವರಿದ್ದ ಪರಿಸ್ಥಿತಿಗಳು ಅವರನ್ನು ರಾಜಕೀಯ ಪ್ರವೇಶಿಸುವಂತೆ ಮಾಡಿದವು. ತನ್ನ 15ರ ಸಣ್ಣ ವಯಸ್ಸಿಗೇ ಅವರು ಜಿಯಾಉರ್ ರೆಹಮಾನ್ ಎಂಬ ಯುವ ಸೇನಾಧಿಕಾರಿಯೊಡನೆ ವಿವಾಹವಾದರು. ಜಿಯಾಉರ್ ರೆಹಮಾನ್ ಬಾಂಗ್ಲಾದೇಶದ ಸ್ವಾತಂತ್ರ್ಯದ ಬಳಿಕ ಅತ್ಯಂತ ಪ್ರಮುಖ ನಾಯಕರಲ್ಲಿ ಒಬ್ಬರಾದರು.
ಬಹುತೇಕ ಎರಡು ದಶಕಗಳ ಕಾಲ ಖಲೀದಾ ಜಿಯಾ ರಾಜಕಾರಣದಿಂದ ದೂರ ಉಳಿದು, ತನ್ನ ಕುಟುಂಬದ ಕಡೆಗೆ ಗಮನ ಹರಿಸುತ್ತಿದ್ದರು. ಈ ವೇಳೆ ಅವರ ಪತಿ ತನ್ನ ಹುದ್ದೆಯಲ್ಲಿ ಮೇಲೆ ಮೇಲೆ ಬೆಳೆಯುತ್ತಿದ್ದರು. ಜಿಯಾಉರ್ ರೆಹಮಾನ್ 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಜಿಯಾಉರ್ ರೆಹಮಾನ್, ದೇಶದ ಸ್ವಾತಂತ್ರ್ಯದ ಬಳಿಕ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಸ್ಥಾಪಿಸಿ, ಬಳಿಕ ಬಾಂಗ್ಲಾದೇಶದ ಅಧ್ಯಕ್ಷರೂ ಆದರು. ಆದರೆ, 1981ರಲ್ಲಿ ಬಂಡುಕೋರ ಮಿಲಿಟರಿ ಅಧಿಕಾರಿಗಳಿಂದ ಕೊಲೆಯಾಗುವ ಮೂಲಕ ಜಿಯಾಉರ್ ರೆಹಮಾನ್ ಆಡಳಿತ ಅಂತ್ಯಗೊಂಡಿತು.
ಈ ಕ್ಷಣ ಖಲೀದಾ ಜೀವನವನ್ನು ಶಾಶ್ವತವಾಗಿ ಬದಲಾಯಿಸಿತು.
ಮನಸ್ಸಿಲ್ಲದ ಮನಸ್ಸಿನಿಂದ ರಾಜಕೀಯ ಪ್ರವೇಶಿಸಿದ ಖಲೀದಾ, ಬಿಎನ್‌ಪಿ ನಾಯಕತ್ವವಿಲ್ಲದೆ ಕಷ್ಟಪಡುತ್ತಿದ್ದಾಗ ಅದರ ನೇತೃತ್ವ ವಹಿಸಿದರು. ಮಿಲಿಟರಿ ಆಡಳಿತಗಾರ ಮುಹಮ್ಮದ್ ಇರ್ಶಾದ್ ಅಧಿಕಾರದ ಮೇಲೆ ತನ್ನ ಹಿಡಿತ ಬಲಪಡಿಸುತ್ತಿದ್ದಾಗ, ಬಿಎನ್‌ಪಿಗೆ ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸುವಂತಹ ನಾಯಕತ್ವದ ಅಗತ್ಯವಿತ್ತು. ಖಲೀದಾ 1984ರಲ್ಲಿ ಬಿಎನ್‌ಪಿಯ ಅಧಿಕಾರ ವಹಿಸಿಕೊಂಡರು. ಬಹುತೇಕ ಇದೇ ಸಮಯದಲ್ಲಿ, ಬಾಂಗ್ಲಾದೇಶದ ಸ್ಥಾಪಕ ನಾಯಕರಾದ ಶೇಖ್ ಮುಜಿಬುರ್ ರೆಹಮಾನ್ ಪುತ್ರಿ, ಶೇಖ್ ಹಸೀನಾ ಸಹ ಆವಾಮಿ ಲೀಗ್ ಪಕ್ಷದ ನಾಯಕತ್ವ ವಹಿಸಿಕೊಂಡಿದ್ದರು. ಈ ಮೂಲಕ ದಕ್ಷಿಣ ಏಷ್ಯಾದ ಅತ್ಯಂತ ತೀವ್ರ ರಾಜಕೀಯ ವೈಷಮ್ಯದ ಯುಗ, 'ಕಾದಾಡುವ ಬೇಗಂ'ಗಳ ಕಾರುಬಾರು ಆರಂಭಗೊಂಡಿತು.
1980ರ ದಶಕದಾದ್ಯಂತ ಖಲೀದಾ ಜಿಯಾ ಮತ್ತು ಶೇಖ್ ಹಸೀನಾ ಇರ್ಶಾದ್ ನೇತೃತ್ವದ ಸರ್ವಾಧಿಕಾರಿ ಆಡಳಿತದ ವಿರುದ್ಧ ಸಾಮೂಹಿಕ ಹೋರಾಟ, ಪ್ರತಿಭಟನೆಗಳ ನೇತೃತ್ವ ವಹಿಸಿದ್ದರು. ಆಳವಾದ ವೈಯಕ್ತಿಕ ಮತ್ತು ರಾಜಕೀಯ ದ್ವೇಷದ ಹೊರತಾಗಿಯೂ, ಅವರು ದೇಶದಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪಿಸುವ ಸಲುವಾಗಿ ಆಗಾಗ ಕೈಜೋಡಿಸಿದ್ದರು. ಅವರ ಹೋರಾಟಗಳು 1990ರಲ್ಲಿ ಫಲ ನೀಡಿ, ಇರ್ಶಾದ್ ಆಡಳಿತದಿಂದ ಕೆಳಗಿಳಿಯುವಂತಾಯಿತು.
1991ರಲ್ಲಿ, ಒಂದು ತಟಸ್ಥ ಮಧ್ಯಂತರ ಸರ್ಕಾರದ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು. ಚುನಾವಣೆಯಲ್ಲಿ ಬಿಎನ್‌ಪಿ ಗೆಲುವು ಸಾಧಿಸಿ, ಖಲೀದಾ ಜಿಯಾ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ ಎನಿಸಿದರು.
ಅವರ ಮೊದಲ ಅವಧಿ (1991-96) ಅವರನ್ನು ಅತ್ಯಂತ ಧನಾತ್ಮಕವಾಗಿ ನೆನಪಿಟ್ಟುಕೊಳ್ಳಬಹುದಾದ ಅವಧಿ ಎನಿಸಿತು. ದೇಶದಲ್ಲಿ ಸಾಕ್ಷರತಾ ಪ್ರಮಾಣ ಕ್ಷಿಪ್ರವಾಗಿ ಏರಿಕೆ ಕಂಡಿತು, ಆರ್ಥಿಕ ಸುಧಾರಣೆಗಳಿಂದ ವಿದೇಶೀ ಹೂಡಿಕೆಗಳು ಬಂದವು, ಮತ್ತು ಸ್ಥಳೀಯ ಆಡಳಿತವೂ ಬಲಗೊಂಡಿತು. ಖಲೀದಾ ಜಿಯಾ ತನ್ನ ಪತಿಯ ವಿಕೇಂದ್ರೀಕರಣ ಮತ್ತು ಗ್ರಾಮೀಣ ಹಂತದ ಸುಧಾರಣೆಗಳ ದೂರದೃಷ್ಟಿಯ ಯೋಜನೆಗಳನ್ನು ಜಾರಿಗೆ ತಂದರು.
ಆದರೆ, 2001ರಿಂದ 2006ರ ಖಲೀದಾ ಜಿಯಾ ಎರಡನೇ ಅವಧಿ ಅತ್ಯಂತ ನಿರ್ಣಾಯಕ ಬದಲಾವಣೆ ಹೊಂದಿ, ಇಂದಿನ ತನಕವೂ ಬಾಂಗ್ಲಾದೇಶದ ರಾಜಕೀಯ ಮತ್ತು ಪ್ರಾದೇಶಿಕ ಸಂಬಂಧಗಳನ್ನು ರೂಪಿಸುತ್ತಲೇ ಇದೆ.
ಅಧಿಕಾರವನ್ನು ಭದ್ರಪಡಿಸಿಕೊಳ್ಳುವ ಸಲುವಾಗಿ, ಖಲೀದಾ ಜಿಯಾ 1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನೂ ವಿರೋಧಿಸಿದ್ದ ಜಮಾತ್ ಎ ಇಸ್ಲಾಮಿ ಸೇರಿದಂತೆ, ತೀವ್ರವಾದಿ ಮುಸ್ಲಿಂ ಗುಂಪುಗಳೊಡನೆ ಮೈತ್ರಿ ಸಾಧಿಸಿದರು. ಈ ರಾಜಕೀಯ ರಾಜಿಗೆ ಭಾರೀ ಬೆಲೆ ತೆರಬೇಕಾಗಿ ಬಂತು. ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಭಾವನೆಗಳು ಕೇವಲ ಬಾಯಿ ಮಾತಿಗೆ ಸೀಮಿತವಾಗದೆ, ಆಡಳಿತ ನೀತಿಯ ಭಾಗವೇ ಆಯಿತು.
ಖಲೀದಾ ಜಿಯಾ ಆಡಳಿತದ ಅವಧಿಯಲ್ಲಿ, ಭಾರತ ವಿರೋಧಿ ಬಂಡುಕೋರ ಗುಂಪುಗಳಿಗೆ ಬಾಂಗ್ಲಾದೇಶದಲ್ಲಿ ಸುರಕ್ಷಿತ ಕಾರ್ಯಾಚರಣೆಗೆ ಅವಕಾಶ ಲಭಿಸಿತು. ಗಡಿಯಾಚೆಗಿನ ಭಯೋತ್ಪಾದನೆಗೆ, ಅದರಲ್ಲೂ ಈಶಾನ್ಯ ಭಾರತದ ರಾಜ್ಯಗಳಲ್ಲಿನ ಉಗ್ರವಾದಕ್ಕೆ ಸಂಬಂಧಿಸಿದಂತೆ ಭಾರತದ ಕಳವಳಗಳನ್ನು ಬಾಂಗ್ಲಾದೇಶ ಕಡೆಗಣಿಸಿತು. ಇದೇ ಸಮಯದಲ್ಲಿ, ಖಲೀದಾ ಜಿಯಾ ಆಡಳಿತ ಪಾಕಿಸ್ತಾನದೊಡನೆ ಆತ್ಮೀಯ ಸಂಬಂಧ ಹೊಂದಲಾರಂಭಿಸಿ, ಅದನ್ನು ಒಂದು 'ಇಸ್ಲಾಮಿಕ್ ಸೋದರ ರಾಷ್ಟ್ರ' ಎಂಬಂತೆ ಬಿಂಬಿಸಲಾರಂಭಿಸಿತು. ಇದೇ ವೇಳೆ ಭಾರತವನ್ನು ಬಾಂಗ್ಲಾದೇಶದ ಪ್ರಮುಖ ವಿರೋಧಿ ಎಂಬ ಭಾವನೆ ಮೂಡಿಸಲಾಯಿತು.
ನೀರು ಹಂಚಿಕೆ, ಅದರಲ್ಲೂ ತೀಸ್ತಾ ನದಿ ವಿವಾದ ತೀವ್ರಗೊಂಡಿತು. ಈ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸುವ ಬದಲು, ಈ ಬೆಳವಣಿಗೆ ಬಾಂಗ್ಲಾದೇಶದ ಸಾರ್ವಭೌಮತ್ವದ ಮೇಲಿನ ಹಲ್ಲೆ ಎಂಬಂತೆ ಬಿಂಬಿಸಲಾಯಿತು. ಬಿಎನ್‌ಪಿ ನಿರಂತರವಾಗಿ ತನ್ನನ್ನು ತಾನು 'ಇಸ್ಲಾಮಿಕ್ ಬಂಗಾಳ'ದ ರಕ್ಷಕ ಎಂಬಂತೆ ಪ್ರದರ್ಶಿಸುವುದನ್ನು ಹೆಚ್ಚಿಸಿ, ಹಿಂದೂ ಬಹುಸಂಖ್ಯಾತ, ಭಾರತದ ಪಶ್ಚಿಮ ಬಂಗಾಳಕ್ಕಿಂತ ಬಾಂಗ್ಲಾದೇಶ ಭಿನ್ನ ಎಂಬಂತೆ ಬಿಂಬಿಸಲಾರಂಭಿಸಿತು.
ಈ ಕಾರ್ಯ ವಿಧಾನ ಬಾಂಗ್ಲಾದೇಶದ ವಿದೇಶಾಂಗ ನೀತಿಯನ್ನು ಅಪಾರವಾಗಿ ಧ್ರುವೀಕರಿಸಲಾರಂಭಿಸಿತು. ಭಾರತದ ಜೊತೆಗಿನ ಸಹಕಾರಕ್ಕೆ ಬೆಂಬಲ ನೀಡುವುದನ್ನು ಬಾಂಗ್ಲಾದೇಶಕ್ಕೆ ಬಗೆಯುವ ದ್ರೋಹ ಎಂಬಂತೆ ಕಾಣಲಾಯಿತು. ಇನ್ನು ಭಾರತ ದ್ವೇಷವನ್ನು ರಾಷ್ಟ್ರೀಯತೆ ಎಂಬಂತೆ ಬೆಂಬಲಿಸಲಾಯಿತು. ಖಲೀದಾ ಜಿಯಾ ಭಾರತ ವಿರೋಧಿ ಭಾವನೆಗಳನ್ನು ಆಯುಧವಾಗಿಸಿ, ಆ ಮೂಲಕ ಬಿಎನ್‌ಪಿ ಪಕ್ಷ ಆವಾಮಿ ಲೀಗ್‌ಗಿಂತ ಭಿನ್ನ ಎಂದು ತೋರಿಸಲು ಪ್ರಯತ್ನ ನಡೆಸಿದರು ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಆದರೆ, 2006 - 07ರಲ್ಲಿ ಹಂಗಾಮಿ ಸರ್ಕಾರವನ್ನು ಹಾಳು ಮಾಡುವ ಪ್ರಯತ್ನ ತಿರುಮಂತ್ರವಾಗಿ ಪರಿಣಮಿಸಿತು. ಮಿಲಿಟರಿ ಮಧ್ಯ ಪ್ರವೇಶಿಸಿ, 2008ರಲ್ಲಿ ಚುನಾವಣೆಗಳು ನಡೆದು, ಶೇಖ್ ಹಸೀನಾ ಅಧಿಕಾರಕ್ಕೆ ಮರಳಿದರು. ಮುಂದಿನ 15 ವರ್ಷಗಳ ಅವಧಿಯಲ್ಲಿ ಖಲೀದಾ ನಿರಂತರವಾಗಿ ಭ್ರಷ್ಟಾಚಾರ ಪ್ರಕರಣಗಳು, ಬಂಧನಗಳನ್ನು ಎದುರಿಸಿ, ದೀರ್ಘಕಾಲ ಗೃಹ ಬಂಧನದಲ್ಲೇ ಕಳೆಯುವಂತಾಗಿ, ಬಿಎನ್‌ಪಿ ದುರ್ಬಲವಾಗುತ್ತಾ ಸಾಗಿತ್ತು.
ಇನ್ನು 2010ರ ಬಳಿಕ ಖಲೀದಾ ಆರೋಗ್ಯವೂ ಹದಗೆಡತೊಡಗಿತು. 2024ರಲ್ಲಿ ಸಾಮೂಹಿಕ ಪ್ರತಿಭಟನೆಗಳು ಶೇಖ್ ಹಸೀನಾ ಸರ್ಕಾರವನ್ನು ಉರುಳಿಸಿದಾಗ ಖಲೀದಾ ಜಿಯಾ ಈ ಬೆಳವಣಿಗೆಯನ್ನು ಸ್ವಾಗತಿಸಿದರೂ, ಅವರಿಗೆ ರಾಜಕೀಯಕ್ಕೆ ಮರಳಲು ದೈಹಿಕ ಆರೋಗ್ಯ ಅನುಮತಿ ನೀಡುತ್ತಿರಲಿಲ್ಲ. ಖಲೀದಾ ಸಾವಿನ ಕೆಲ ಸಮಯಕ್ಕೆ ಮುನ್ನ ಬಾಂಗ್ಲಾದೇಶಕ್ಕೆ ಮರಳಿರುವ ಆಕೆಯ ಮಗ, ತಾರಿಕ್ ರೆಹಮಾನ್ ಈಗ ತಾಯಿಯ ರಾಜಕೀಯ ಪರಂಪರೆಯ ವಾರಸುದಾರರಾಗಿದ್ದಾರೆ.
ಖಲೀದಾ ಜಿಯಾ ಜೀವನವನ್ನು ಸರಳವಾಗಿ ಹೀಗೆ ಎಂದು ತೀರ್ಪಿಗೆ ಒಳಪಡಿಸಲು ಸಾಧ್ಯವಿಲ್ಲ. ಆಕೆ ಒಂದು ಸಂಪ್ರದಾಯವಾದಿ ಸಮಾಜದಲ್ಲಿ ಅಡೆತಡೆಗಳನ್ನು ನಿವಾರಿಸಿ, ಮಿಲಿಟರಿ ಸರ್ವಾಧಿಕಾರದ ವಿರುದ್ಧ ಸೆಣಸಿದವರು. ಆದರೂ ಆಕೆ ಬಾಂಗ್ಲಾದೇಶದ ನಿರ್ಮಾಣವನ್ನೇ ವಿರೋಧಿಸಿದ್ದ ಗುಂಪುಗಳಿಗೂ ನ್ಯಾಯಸಮ್ಮತತೆ ಒದಗಿಸಿ, ಧಾರ್ಮಿಕ ರಾಜಕಾರಣವನ್ನು ಇನ್ನಷ್ಟು ತೀವ್ರಗೊಳಿಸಿ, ಪ್ರಾದೇಶಿಕ ದ್ವೇಷವನ್ನು ಬಳಸಿಕೊಂಡರು.
ಖಲೀದಾ ಜಿಯಾ ಕಥೆ ನಾಯಕತ್ವ ಎನ್ನುವುದು ಕೇವಲ ಅಧಿಕಾರ ಹೊಂದುವುದು ಮಾತ್ರವಲ್ಲ, ಬದಲಿಗೆ ನಂತರ ಆಡಳಿತ ನಡೆಸುವ ದಿಕ್ಕನ್ನೂ ಒಳಗೊಂಡಿದೆ ಎನ್ನುವುದನ್ನು ನೆನಪಿಸುತ್ತದೆ. ಖಲೀದಾ ಬಾಂಗ್ಲಾದೇಶವನ್ನು ಶಾಶ್ವತವಾಗಿ ಬದಲಾಯಿಸಿ ಹಾಕಿದರು. ಅಂತಿಮವಾಗಿ ಆ ಬದಲಾವಣೆಗಳು ಬಾಂಗ್ಲಾದೇಶವನ್ನು ಬಲಪಡಿಸಿದವೋ, ಅಥವಾ ವಿಭಜಿಸಿದವೋ ಎನ್ನುವ ಪ್ರಶ್ನೆಗೆ ಈಗ ಆಕೆಯ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶ ಸ್ವತಃ ಉತ್ತರ ಕಂಡುಕೊಳ್ಳಬೇಕಿದೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com