ಸೆರೆಬ್ರಲ್ ಪಾಲ್ಸಿ ಒಂದು ಅಪರೂಪದ ನರವೈಜ್ಞಾನಿಕ ಸಮಸ್ಯೆ. ಇದು ಚಲನೆ, ಸ್ನಾಯುಗಳು ಮತ್ತು ಭಂಗಿಯ ಮೇಲೆ ಪರಿಣಾಮ ಬೀರುತ್ತದೆ. ಮೆದುಳಿನ ಅಸಹಜ ಬೆಳವಣಿಗೆ ಅಥವಾ ಬೆಳೆಯುತ್ತಿರುವ ಮೆದುಳಿಗೆ ಹಾನಿಯಾಗುವುದರಿಂದ ಈ ರೋಗ ಉಂಟಾಗುತ್ತದೆ. ಸಾಮಾನ್ಯವಾಗಿ ಮಕ್ಕಳ ಜನನದ ಮೊದಲು, ಜನನದ ಸಮಯದಲ್ಲಿ ಅಥವಾ ಜನನದ ಸ್ವಲ್ಪ ಸಮಯದ ನಂತರ ಇದು ಕಾಣಿಸಿಕೊಳ್ಳುತ್ತದೆ.
ಸೆರೆಬ್ರಲ್ ಪಾಲ್ಸಿ ಜೀವಿತಾವಧಿಯ ಸ್ಥಿತಿಯಾಗಿದ್ದು ಸೌಮ್ಯ ಅಥವಾ ತೀವ್ರವಾಗಿರಬಹುದು. ಮಕ್ಕಳ ಸ್ನಾಯುಗಳು ಮತ್ತು ಚಲನೆಯನ್ನು ನಿಯಂತ್ರಿಸುವ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಭಾರತದಲ್ಲಿ ಸೆರೆಬ್ರಲ್ ಪಾಲ್ಸಿ ಅಪಾಯ ಪ್ರತಿ 1,000 ಮಕ್ಕಳಲ್ಲಿ ಮೂರು ಮಕ್ಕಳಿಗೆ ಇದೆ ಎಂದು ಅಂದಾಜಿಸಲಾಗಿದೆ.
ಸೆರೆಬ್ರಲ್ ಪಾಲ್ಸಿಗೆ ಕಾರಣಗಳು
ಸೆರೆಬ್ರಲ್ ಪಾಲ್ಸಿ ಉಂಟಾಗಲು ಪ್ರಮುಖ ಕಾರಣಗಳು ಗರ್ಭಧಾರಣೆಯ ಸಮಯದಲ್ಲಿ ತಾಯಿಯ ಆರೋಗ್ಯ ಸಮಸ್ಯೆಗಳು (ಅಧಿಕ ರಕ್ತದೊತ್ತಡ, ಡಯಾಬಿಟೀಸ್, ಜ್ವರ, ರುಬೆಲ್ಲಾ, ಸೋಂಕುಗಳು ಇತ್ಯಾದಿ), ಕ್ಲಿಷ್ಟಕರ ಪ್ರಸವ (ಅವಧಿಪೂರ್ವ ಹೆರಿಗೆ, ಆಮ್ಲಜನಕ ಕೊರತೆ, ಮಗುವಿನ ಕಡಿಮೆ ತೂಕ), ಮಗು ಹುಟ್ಟಿದ ನಂತರದ ಸೋಂಕುಗಳು (ಮೆನಿಂಜೈಟಿಸ್, ಎನ್ಸೆಫಲೈಟಿಸ್ ಮುಂತಾದ ಸೋಂಕುಗಳು) ಮತ್ತು ಮಗುವಿನ ತಲೆಗೆ ಆಗುವ ಗಾಯಗಳಾಗಿವೆ. ಹುಟ್ಟಿನ ನಂತರ ಜಾಂಡೀಸ್ ಅತಿಯಾಗಿ ಮೆದುಳಿನ ಮೇಲೆ ಪರಿಣಾಮ ಬೀರುವುದು ಮತ್ತು ಮೆದುಳಿನ ಒಳಗೆ ರಕ್ತಸ್ರಾವವಾದರೂ ಈ ರೋಗ ಕಾಣಿಸಿಕೊಳ್ಳುತ್ತದೆ.
ಈ ರೋಗದಿಂದ ಮಗು ಸಾಮಾನ್ಯವಾಗಿ ಬೆಳೆಯುವ ಲಕ್ಷಣಗಳು ಕುಂಠಿತವಾಗುತ್ತವೆ. ಅವುಗಳೆಂದರೆ:
ಚಲನೆ ಮತ್ತು ಸಮನ್ವಯ ಸಮಸ್ಯೆಗಳು: ನಡೆಯಲು ತೊಂದರೆ ಅಥವಾ ಅಸಹಜ ನಡಿಗೆ (ಕಾಲ್ಬೆರಳುಗಳ ಮೇಲೆ ನಡೆಯುವುದು, ಒಂದು ಪಾದವನ್ನು ಎಳೆಯುವುದು); ಸ್ನಾಯು ಬಿಗಿತ (ಸ್ಪಾಸ್ಟಿಸಿಟಿ) ಅಥವಾ ಫ್ಲಾಪಿನೆಸ್ (ಹೈಪೋಟೋನಿಯಾ); ಅನಿಯಂತ್ರಿತ ಚಲನೆಗಳು (ಡಿಸ್ಟೋನಿಯಾ) ಅಥವಾ ನಡುಕ; ಕಳಪೆ ಸಮತೋಲನ ಮತ್ತು ಸಮನ್ವಯ (ಅಟಾಕ್ಸಿಯಾ) ಮತ್ತು ಮಾತು ಮತ್ತು ಸಂವಹನ ಸಮಸ್ಯೆಗಳು
ಮಾತಿನ ಬೆಳವಣಿಗೆಯ ತೊಂದರೆ: ಮಾತನಾಡಲು ಮತ್ತು ಆಹಾರ ನುಂಗಲು ಮುಖದ ಸ್ನಾಯುಗಳನ್ನು ನಿಯಂತ್ರಿಸುವಲ್ಲಿ ತೊಂದರೆ; ಅರಿವಿನ ಮತ್ತು ಸಂವೇದನಾ ದುರ್ಬಲತೆಗಳು
ಕೆಲವು ಸಂದರ್ಭಗಳಲ್ಲಿ ಕಲಿಕಾ ನ್ಯೂನತೆಗಳು: ದೃಷ್ಟಿ ಅಥವಾ ಶ್ರವಣ ಸಮಸ್ಯೆಗಳು; ಅಪಸ್ಮಾರ
ಇದಲ್ಲದೇ ಮಕ್ಕಳು ಕುಳಿತುಕೊಳ್ಳುವುದು, ತೆವಳುವುದು, ನಡೆಯುವುದು ಮತ್ತು ವಸ್ತುಗಳನ್ನು ಕೈಯಿಂದ ಹಿಡಿದುಕೊಳ್ಳಲು ತೊಂದರೆಯಾಗುತ್ತದೆ.
ಸೆರೆಬ್ರಲ್ ಪಾಲ್ಸಿಗೆ ಚಿಕಿತ್ಸೆ
ಈ ರೋಗಕ್ಕೆ ಯಾವುದೇ ಖಚಿತವಾದ ಚಿಕಿತ್ಸೆ ಇಲ್ಲ, ಆದರೆ ಇದರ ಪರಿಣಾಮವನ್ನು ಕಡಿಮೆ ಮಾಡಲು ಹಲವಾರು ವಿಧಾನಗಳಿವೆ. ಅವುಗಳೆಂದರೆ:
ದೈಹಿಕ ಚಿಕಿತ್ಸೆ: ಚಲನೆ, ಸ್ನಾಯುಗಳ ಸಡಿಲತೆ ಮತ್ತು ಬಲವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸಾಮಾನ್ಯ ವರ್ತನಾ ಚಿಕಿತ್ಸೆ: ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಗೆ ಬೆಂಬಲ ನೀಡುತ್ತದೆ. ಆಹಾರ ಸೇವನೆ, ಡ್ರೆಸ್ಸಿಂಗ್ ಮತ್ತು ಬರೆಯುವಂತಹ ದೈನಂದಿನ ಜೀವನ ಕೌಶಲ್ಯಗಳನ್ನು ಕಲಿಸುತ್ತದೆ.
ಸ್ಪೀಚ್ ಥೆರಪಿ: ಮಾತಿನ ಮೂಲಕ ಸಂವಹನಕ್ಕೆ ಸಹಾಯ ಮಾಡುತ್ತದೆ.
ಔಷಧಿಗಳು: ಸ್ನಾಯು ಸಡಿಲಗೊಳಿಸಲು ಔಷಧಿಗಳನ್ನು ಮತ್ತು ಚುಚ್ಚುಮದ್ದುಗಳನ್ನು ನೀಡಿ ಚಲನೆಗೆ ಸಹಾಯವಾಗುವಂತೆ ಮಾಡುತ್ತವೆ.
ಮೂಳೆ ಶಸ್ತ್ರಚಿಕಿತ್ಸೆ: ಮೂಳೆಗಳು ಅಥವಾ ಕೀಲುಗಳ ವಿರೂಪಗಳನ್ನು ಮೂಳೆ ಶಸ್ತ್ರಚಿಕಿತ್ಸೆ ಸರಿಪಡಿಸುತ್ತದೆ.
ಸಹಾಯಕ ಸಾಧನಗಳು: ಬ್ರೇಸ್‌ಗಳು, ವೀಲ್‌ಚೇರುಗಳು ಮತ್ತು ವಾಕರ್‌ಗಳು ಮಕ್ಕಳ ಚಲನಶೀಲತೆಯನ್ನು ಸಾಕಷ್ಟು ಸುಧಾರಿಸುತ್ತವೆ. ಮಾತು ಬರದೇ ಇರುವ ಮಕ್ಕಳಿಗೆ ಸಂವಹನ ನಡೆಸಲು ಸಂವಹನ ಸಾಧನಗಳು ಸಹಾಯ ಮಾಡುತ್ತವೆ.
ಸೆರೆಬ್ರಲ್ ಪಾಲ್ಸಿ ತಡೆಗೆ ಮುನ್ನೆಚ್ಚರಿಕೆಗಳು
ಸೆರೆಬ್ರಲ್ ಪಾಲ್ಸಿಯನ್ನು ತಡೆಗಟ್ಟಲು ಸಾಧ್ಯವಾಗದಿದ್ದರೂ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಇದರ ಅಪಾಯವನ್ನು ಕಡಿಮೆ ಮಾಡಬಹುದು.
ಗರ್ಭಾವಸ್ಥೆಯಲ್ಲಿ ನಿಯಮಿತ ಪ್ರಸವಪೂರ್ವ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು; ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಪರಿಸ್ಥಿತಿಗಳನ್ನು ಸೂಕ್ತವಾಗಿ ನಿರ್ವಹಿಸಬೇಕು; ಧೂಮಪಾನ, ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯನ್ನು ತ್ಯಜಿಸಬೇಕು ಮತ್ತು ಸೋಂಕುಗಳ ವಿರುದ್ಧ ಸರಿಯಾದ ಲಸಿಕೆಗಳನ್ನು ತೆಗೆದುಕೊಳ್ಳಬೇಕು.
ಹೆರಿಗೆಯ ಸಮಯದಲ್ಲಿ ಸುರಕ್ಷಿತ ಮತ್ತು ಉತ್ತಮವಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ಏನಾದರೂ ತೊಂದರೆಗಳಿದ್ದರೆ ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಬೇಕು. ಗರ್ಭಿಣಿಯರು ಆರೋಗ್ಯಕರ ಆಹಾರ ಮತ್ತು ವಿಹಾರಗಳ ಕಡೆಗೆ ಗಮನ ಕೊಡಬೇಕು. ಸೌಮ್ಯವಾದ ವ್ಯಾಯಾಮಗಳನ್ನು ಮಾಡಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಮೇಲೆ ಗಮನ ಇಡಬೇಕು. ಪ್ರಸವದ ನಂತರ ನವಜಾತ ಮಗುವಿಗೆ ಜಾಂಡೀಸ್ ಮತ್ತಿತರ ಆರೋಗ್ಯ ಸಮಸ್ಯೆಗಳು ಇದ್ದರೆ ಸೂಕ್ತವಾದ ಚಿಕಿತ್ಸೆ ಕೊಡಿಸಬೇಕು.
ಕೊನೆಯದಾಗಿ ಹೇಳುವುದಾದರೆ ಸೆರೆಬ್ರಲ್ ಪಾಲ್ಸಿ ಜೀವಿತಾವಧಿಯವರೆಗೆ ಇರುವ ಗಂಭೀರ ಸ್ಥಿತಿಯಾಗಿದ್ದು ಚಲನೆ ಮತ್ತು ಸ್ನಾಯು ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಗುಣಪಡಿಸಲು ಸಾಧ್ಯವಾಗದಿದ್ದರೂ, ಚಿಕಿತ್ಸೆ, ಔಷಧಿ ಮತ್ತು ಸಹಾಯಕ ಸಾಧನಗಳ ಮೂಲಕ ಜೀವನದ ಗುಣಮಟ್ಟವನ್ನು ಸುಧಾರಿಸಬಹುದು. ಗರ್ಭಾವಸ್ಥೆಯಲ್ಲಿ, ಹೆರಿಗೆ ಮತ್ತು ಶೈಶವಾವಸ್ಥೆಯಲ್ಲಿ ಈ ರೋಗವನ್ನು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಂಡರೆ ಅಪಾಯವನ್ನು ಕಡಿಮೆ ಮಾಡಬಹುದು. ಸರಿಯಾದ ಆರೈಕೆ ಮತ್ತು ಬೆಂಬಲದೊಂದಿಗೆ ಸೆರೆಬ್ರಲ್ ಪಾಲ್ಸಿ ರೋಗಿಗಳು ತೃಪ್ತಿಕರ ಜೀವನವನ್ನು ನಡೆಸಬಹುದು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com