ಲಿಪೋಮಾ ಎಂದರೆ ಚರ್ಮದ ಅಡಿಯಲ್ಲಿ ಬೆಳೆಯುವ ಕೊಬ್ಬಿನ ಅಂಗಾಂಶದ ಮೆದುವಾದ ಗಡ್ಡೆ. ಮೃದುವಾಗಿ ಮತ್ತು ನಿಧಾನವಾಗಿ ಬೆಳೆಯುವ ಲಿಪೋಮಾ ಗಡ್ಡೆಗಳು ಸಾಮಾನ್ಯವಾಗಿ ಹಾನಿಕಾರಕವಲ್ಲ. ಚರ್ಮದ ಈ ರಚನೆಗಳು ದೇಹದ ಯಾವ ಭಾಗದಲ್ಲಿಯಾದರೂ ಕಾಣಿಸಿಕೊಳ್ಳಬಹುದು ಆದರೂ ಸಾಮಾನ್ಯವಾಗಿ ಕುತ್ತಿಗೆ, ಭುಜಗಳು, ಬೆನ್ನು, ತೋಳುಗಳು, ತೊಡೆಗಳು ಮತ್ತು ಹೊಟ್ಟೆಯ ಮೇಲೆ ಕಂಡುಬರುತ್ತವೆ.
ಈ ಕೊಬ್ಬಿನ ಸಣ್ಣ ಗಡ್ಡೆಗಳು ಬಹುತೇಕ ನೋವುರಹಿತವಾಗಿರುತ್ತವೆ ಮತ್ತು ಆಕಾರದಲ್ಲಿ ಚಿಕ್ಕದಾಗಿರುತ್ತವೆ (ಸುಮಾರು 2-5 ಸೆಂಟಿಮೀಟರ್ ಗಾತ್ರ). ಕೆಲವೊಮ್ಮೆ ದೊಡ್ಡದಾಗಿ ಬೆಳೆಯಬಹುದು. ಲಿಪೋಮಾ ಗಡ್ಡೆಗಳು ತೆಳುವಾಗಿದ್ದು ಮುಟ್ಟಿದಾಗ ಮೃದು ಅಥವಾ ರಬ್ಬರಿನಂತೆ ಭಾಸವಾಗುತ್ತವೆ. ಒತ್ತಿದಾಗ ಅವು ಚರ್ಮದ ಕೆಳಗೆ ಸ್ವಲ್ಪ ಚಲಿಸಬಹುದು. ಲಿಪೋಮಾ ಗಡ್ಡೆ ಕ್ಯಾನ್ಸರ್ ಗಡ್ಡೆ ಅಲ್ಲ ಮತ್ತು ಕ್ಯಾನ್ಸರ್ ಆಗಿ ಬದಲಾಗುವುದೂ ಇಲ್ಲ. ಯಾರಿಗಾದರೂ ಈ ಗಡ್ಡೆಯು ಅಸಾಧಾರಣವಾಗಿ ವೇಗವಾಗಿ ಬೆಳೆದು ನೋವನ್ನು ಉಂಟುಮಾಡಿದರೆ ಅಥವಾ ಗಾತ್ರದಲ್ಲಿ ಬದಲಾವಣೆಯಾದರೆ ತಕ್ಷಣ ವೈದ್ಯರಿಗೆ ಅದನ್ನು ತೋರಿಸಬೇಕು. ಅವರು ಸೂಕ್ತ ಪರೀಕ್ಷೆ ಮಾಡಿ ಪರಿಹಾರ ನೀಡುತ್ತಾರೆ.
ಲಿಪೋಮಾ ಗಡ್ಡೆಗಳ ನಿಖರವಾದ ಕಾರಣವನ್ನು ಸಂಪೂರ್ಣವಾಗಿ ಈವರೆಗೆ ಅರ್ಥಮಾಡಿಕೊಳ್ಳಲಾಗಿಲ್ಲವಾದರೂ ತಳಿಶಾಸ್ತ್ರ, ಬೊಜ್ಜು, ಅಧಿಕ ಕೊಲೆಸ್ಟರಾಲ್ ಮತ್ತು ಚಯಾಪಚಯ ಕ್ರಿಯೆಯ ತೊಂದರೆಗಳಂತಹ ಕೆಲವು ಅಂಶಗಳು ಇದಕ್ಕೆ ಕಾರಣವಾಗಬಹುದು.
ಬಹುತೇಕ ಲಿಪೋಮಾ ಗಡ್ಡೆಗಳು ಯಾವುದೇ ಪ್ರಮುಖ ರೋಗವನ್ನು ಉಂಟುಮಾಡುವುದಿಲ್ಲ. ಅವುಗಳ ಸಾಮಾನ್ಯ ಲಕ್ಷಣಗಳು ಹೀಗಿವೆ:
ಮೃದು ರಚನೆ - ಲಿಪೋಮಾ ಗಡ್ಡೆಯನ್ನು ಮುಟ್ಟಿದಾಗ ಅದು ಮೃದು ಮತ್ತು ಸಂಕುಚಿತವಾಗಿರುತ್ತದೆ.
ನಿಧಾನ ಬೆಳವಣಿಗೆ - ಲಿಪೋಮಾ ಗಡ್ಡೆ ಗಳು ಬಹಳ ನಿಧಾನವಾಗಿ ಬೆಳೆಯುತ್ತವೆ.
ಚಲಿಸಬಲ್ಲ ಚರ್ಮದ ರಚನೆ - ಒತ್ತಿದಾಗ ಈ ಗಡ್ಡೆಯು ಚರ್ಮದ ಕೆಳಗೆ ಸುಲಭವಾಗಿ ಚಲಿಸುತ್ತದೆ.
ನೋವುರಹಿತತೆ - ಲಿಪೋಮಾ ಗಡ್ಡೆ ಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುವುದಿಲ್ಲ, ಆದರೆ ಅವು ನರಗಳ ಮೇಲೆ ಒತ್ತಿದರೆ ಅಥವಾ ರಕ್ತನಾಳಗಳನ್ನು ಹೊಂದಿದ್ದರೆ ನೋವು ಉಂಟಾಗಬಹುದು.
ಸಣ್ಣ ಗಾತ್ರ – ಲಿಪೋಮಾ ಗಡ್ಡೆಗಳು ಸಾಮಾನ್ಯವಾಗಿ ಸಣ್ಣದಾಗಿರುತ್ತವೆ ಆದರೆ ಕೆಲವು ಸಂದರ್ಭಗಳಲ್ಲಿ 10 ಸೆಂಟಿಮೀಟರಿಗಿಂತ ದೊಡ್ಡದಾಗಿ ಬೆಳೆಯಬಹುದು.
ಬಹಳಷ್ಟು ಬಾರಿ ಲಿಪೋಮಾ ಗಡ್ಡೆ ಒಂದೊಂದೇ ಕಾಣಿಸಿಕೊಳ್ಳುತ್ತವೆ. ಆದರೆ ಕೆಲವು ಜನರಿಗೆ ಬಹಳ ಲಿಪೋಮಾ ಗಡ್ಡೆಗಳಿದ್ದರೆ ಆ ಸ್ಥಿತಿಯನ್ನು ಮಲ್ಟಿಪಲ್ ಲಿಪೋಮಾಟೋಸಿಸ್ ಎಂದು ಕರೆಯಲಾಗಿದೆ. ಇದು ಆನುವಂಶಿಕವಾಗಿದೆ.
ಸಾಮಾನ್ಯವಾಗಿ ಲಿಪೋಮಾ ಗಡ್ಡೆಗಳು ಹಾನಿಕಾರಕವಲ್ಲ. ಇದಕ್ಕೆ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಕೆಲವರು ಲಿಪೋಮಾವನ್ನು ತೆಗೆದುಹಾಕಲು ಸ್ಥಳೀಯ ಅರಿವಳಿಕೆ ಅಡಿಯಲ್ಲಿ ಸಣ್ಣ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಾರೆ. ಶಸ್ತ್ರಚಿಕಿತ್ಸೆಯ ಕಾರ್ಯವಿಧಾನವು ಸರಳವಾಗಿದೆ ಮತ್ತು ನಂತರ ಅದರ ಗುರುತು ಸಣ್ಣದಾಗಿ ಇರುತ್ತದೆ.
ಲಿಪೋಮಾ ಗಡ್ಡೆ ನೋವಿನಿಂದ ಕೂಡಿದ್ದರೆ ಅಥವಾ ದೊಡ್ಡದಾಗಿದ್ದರೆ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಕೆಲವೊಮ್ಮೆ ಲಿಪೋಸಕ್ಷನ್ ಮೂಲಕ ಚರ್ಮದ ಕೊಬ್ಬಿನ ಅಂಗಾAಶವನ್ನು ಹೀರಿಕೊಳ್ಳಲು ತೆಳುವಾದ ಸೂಜಿಯನ್ನು ಬಳಸಲಾಗುತ್ತದೆ. ಈ ವಿಧಾನವು ಕಡಿಮೆ ಆಕ್ರಮಣಕಾರಿಯಾಗಿದ್ದು ಸಂಪೂರ್ಣ ಲಿಪೋಮಾ ಗಡ್ಡೆಯನ್ನು ತೆಗೆದುಹಾಕಲು ಇದರಿಂದ ಸಾಧ್ಯವಿರದಿರಬಹುದು. ಇದಲ್ಲದೇ ಸ್ಟೆರಾಯ್ಡ್ ಚುಚ್ಚುಮದ್ದುಗಳನ್ನು ನೀಡಿ ಲಿಪೋಮಾ ಗಡ್ಡೆಯನ್ನು ಆಕಾರದಲ್ಲಿ ಕುಗ್ಗಿಸಬಹುದು. ಆದರೆ ಅವುಗಳು ಅದನ್ನು ಸಂಪೂರ್ಣವಾಗಿ ತೆಗೆದುಹಾಕುವುದಿಲ್ಲ. ಆದರೆ ಗಾತ್ರವನ್ನು ಕಡಿಮೆ ಮಾಡಲು ಇದು ತಾತ್ಕಾಲಿಕ ಪರಿಹಾರವಾಗಿದೆ.
ಲಿಪೋಮಾ ಗಡ್ಡೆಗಳನ್ನು ತಡೆಯುವುದು ಹೇಗೆ?
ಲಿಪೋಮಾ ಗಡ್ಡೆಗಳನ್ನು ತಡೆಯಲು/ಕಡಿಮೆ ಮಾಡಲು ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬಹುದು. ಅವುಗಳೆಂದರೆ..
ಅಧಿಕ ತೂಕ ಅಥವಾ ಬೊಜ್ಜು ಇರುವುದು ಲಿಪೋಮಾ ಗಡ್ಡೆಗಳ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸಬಹುದು. ಆದ್ದರಿಂದ ನಿಯಮಿತ ವ್ಯಾಯಾಮ (ನಡಿಗೆ, ಯೋಗ, ಜಾಗಿಂಗ್) ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಸಮತೋಲಿತ ಆಹಾರದಲ್ಲಿರುವ ಪೌಷ್ಟಿಕಾಂಶಗಳು ದೇಹದಲ್ಲಿ ಕೊಬ್ಬಿನ ಶೇಖರಣೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ನಾರುಭರಿತ ಆಹಾರಗಳನ್ನು (ಹಣ್ಣುಗಳು, ತರಕಾರಿಗಳು, ಧಾನ್ಯಗಳು) ಯಥೇಚ್ಛವಾಗಿ ಸೇವಿಸಬೇಕು. ಆರೋಗ್ಯಕರ ಕೊಬ್ಬಿರುವ ಆಹಾರವನ್ನು (ಕಡ್ಲೆಬೀಜ, ಬಾದಾಮಿ, ಆವಕಾಡೊಗಳು, ಆಲಿವ್ ಎಣ್ಣೆ) ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಸಂಸ್ಕರಿತ ಆಹಾರಗಳು, ಸಕ್ಕರೆ ಪಾನೀಯಗಳು ಮತ್ತು ಹೆಚ್ಚುವರಿ ಕೆಂಪು ಮಾಂಸವನ್ನು ತಪ್ಪಿಸಿ. ಒಮೆಗಾ-3 ಇರುವ ಮೀನು, ಅಗಸೆಬೀಜಗಳು, ವಾಲ್ನಟ್ಸ್ ತಿನ್ನಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಕೊಲೆಸ್ಟರಾಲ್ ಹೆಚ್ಚಾಗದಂತೆ ನೋಡಿಕೊಳ್ಳಬೇಕು.
ಗಿಡಮೂಲಿಕೆ ಚಹಾಗಳು (ಹಸಿರು ಚಹಾ, ಅರಿಶಿನ ಚಹಾ) ಮತ್ತು ನಿರ್ವಿಷಗೊಳಿಸುವ ಆಹಾರಗಳು ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪ್ರತಿದಿನ ಸಾಕಷ್ಟು ನೀರು ಕುಡಿಯುವುದರಿಂದ ದೇಹದಲ್ಲಿರುವ ತ್ಯಾಜ್ಯ ಮತ್ತು ವಿಷಕಾರಿ ವಸ್ತುವನ್ನು ಹೊರಹಾಕಲು ಮತ್ತು ಚಯಾಪಚಯ ಕ್ರಿಯೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮದ್ಯಪಾನ ಮತ್ತು ಧೂಮಪಾನ ಯಾವುದೇ ಕಾರಣಕ್ಕೂ ಬೇಡ: ಮದ್ಯಪಾನ ಮತ್ತು ತಂಬಾಕು ಉತ್ಪನ್ನಗಳು ಕೊಬ್ಬಿನ ಶೇಖರಣೆ ಮತ್ತು ಉರಿಯೂತಕ್ಕೆ ಕಾರಣವಾಗಬಹುದು. ಆದ್ದರಿಂದ ಇವೆರಡರಲ್ಲೂ ತೊಡಗುವುದು ಬೇಡ.
ನಿಯಮಿತ ವ್ಯಾಯಾಮ: ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಹೆಚ್ಚುವರಿ ಕೊಬ್ಬನ್ನು ಕರಗಿಸಲು ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಒತ್ತಡ ನಿರ್ವಹಣೆ: ಇಂದಿನ ದಿನಗಳಲ್ಲಿ ಜನರಿಗೆ ಮಾನಸಿಕ ಒತ್ತಡ ಒಂದಲ್ಲ ಒಂದು ಕಾರಣಕ್ಕೆ ಕಾಣಿಸಿಕೊಳ್ಳುತ್ತದೆ. ಈ ಬಗ್ಗೆ ಎಚ್ಚರದಿಂದ ಇರುವುದು ಒಳಿತು. ಏಕೆಂದರೆ ದೀರ್ಘಕಾಲದ ಒತ್ತಡವು ಚಯಾಪಚಯ ತೊಂದರೆಗಳಿಗೆ ಕಾರಣವಾಗಬಹುದು. ಧ್ಯಾನ, ಆಳವಾದ ಉಸಿರಾಟ ಮತ್ತು ಯೋಗಾಭ್ಯಾಸ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಒಟ್ಟಾರೆಯಾಗಿ ಹೇಳುವುದಾದರೆ ಲಿಪೋಮಾ ಗಡ್ಡೆಯು ಚರ್ಮದ ಅಡಿಯಲ್ಲಿ ಬೆಳೆಯುವ ನಿರುಪದ್ರವ ಕೊಬ್ಬಿನ ಗಡ್ಡೆಯಾಗಿದೆ. ಮೃದು, ನೋವುರಹಿತ ಮತ್ತು ನಿಧಾನವಾಗಿ ಬೆಳೆಯುವ, ಸಾಮಾನ್ಯವಾಗಿ ನೋವು, ಅಸ್ವಸ್ಥತೆ ಅಥವಾ ಕಾಸ್ಮೆಟಿಕ್ ಸಮಸ್ಯೆಗಳನ್ನು ಉಂಟುಮಾಡದ ಹೊರತು ಯಾವುದೇ ಚಿಕಿತ್ಸೆಯ ಅಗತ್ಯವಿರುವುದಿಲ್ಲ.
ಲಿಪೋಮಾ ಗಡ್ಡೆಗಳನ್ನು ತಡೆಗಟ್ಟಲು ಯಾವುದೇ ಸಾಧಿತ ಮಾರ್ಗವಿಲ್ಲದಿದ್ದರೂ, ಆರೋಗ್ಯಕರ ಜೀವನಶೈಲಿ, ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ವೇಗವಾಗಿ ಬೆಳೆಯುತ್ತಿರುವ, ನೋವಿನಿಂದ ಕೂಡಿದ ಅಥವಾ ಆಕಾರ ಬದಲಾಗುತ್ತಿರುವ ಚರ್ಮದ ಗಡ್ಡೆಯ ಕಂಡುಬಂದರೆ ತಡಮಾಡದೇ ವೈದ್ಯರಿಗೆ ತೋರಿಸಬೇಕು.
ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com