ನಿಸಾರ್ ಉಪಗ್ರಹ (ನಾಸಾ - ಇಸ್ರೋ ಸಿಂಥೆಟಿಕ್ ಅಪರ್ಚರ್ ರೇಡಾರ್ ಎನ್ನುವುದರ ಹೃಸ್ವರೂಪ) ನಾಸಾ ಮತ್ತು ಇಸ್ರೋ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ವಿಶೇಷ ಭೂ ವೀಕ್ಷಣಾ ಉಪಗ್ರಹವಾಗಿದೆ. ಭೂ ವೀಕ್ಷಣಾ ಯೋಜನೆಗಾಗಿ ಒಂದು ನೈಜ ಹಾರ್ಡ್‌ವೇರ್ ನಿರ್ಮಿಸಲು ಇದೇ ಮೊದಲ ಬಾರಿಗೆ ಇಸ್ರೋ ಮತ್ತು ನಾಸಾ ಸಂಸ್ಥೆಗಳು ಕೈಜೋಡಿಸಿವೆ. ನಿಸಾರ್ ಉಪಗ್ರಹ ಬಾಹ್ಯಾಕಾಶದಿಂದ ಅತ್ಯಂತ ವಿಸ್ತೃತವಾದ ಛಾಯಾಚಿತ್ರಗಳನ್ನು ತೆಗೆದು, ವಿಜ್ಞಾನಿಗಳಿಗೆ ಭೂಮಿಯ ಮೇಲ್ಮೈ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ನೆರವಾಗಲಿದೆ.
ನಿಸಾರ್ ಉಪಗ್ರಹದ ಕಾರ್ಯಗಳೇನು?
ನಿಸಾರ್ ಭೂಮಿಯನ್ನು ವೀಕ್ಷಿಸುತ್ತಾ, ಹಲವು ವಿಚಾರಗಳನ್ನು ಗುರುತಿಸಲಿದೆ. ಅವೆಂದರೆ:
ಭೂಕಂಪಗಳು, ಭೂಕುಸಿತಗಳು, ಪ್ರವಾಹಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು.
ಹವಾಮಾನ ಬದಲಾವಣೆಯ ಪರಿಣಾಮವಾಗಿ ಕರಗುತ್ತಿರುವ ಹಿಮ ನದಿಗಳು, ಮಂಜುಗಡ್ಡೆಗಳು.
ಬೆಳೆಯುತ್ತಿರುವ ಅಥವಾ ನಶಿಸುತ್ತಿರುವ ಅರಣ್ಯಗಳು ಅಥವಾ ಜೌಗು ಪ್ರದೇಶಗಳು.
ನಿಸಾರ್ ಒದಗಿಸುವ ಈ ಮಾಹಿತಿಗಳು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಲು ಪರಿಹಾರ ತಂಡಗಳಿಗೆ ನೆರವಾಗಲಿದೆ. ಅದರೊಡನೆ, ಭೂಮಿಯ ವಾತಾವರಣದ ಬದಲಾವಣೆಯನ್ನು ಗಮನಿಸಲು ವಿಜ್ಞಾನಿಗಳಿಗೆ ನೆರವಾಗುತ್ತದೆ.
ನಿಸಾರ್ ಯಾಕೆ ವಿಶೇಷವಾಗಿದೆ?
ನಿಸಾರ್ ಸಿಂಥೆಟಿಕ್ ಅಪರ್ಚರ್ ರೇಡಾರ್ (ಎಸ್ಎಆರ್) ಎಂಬ ತಂತ್ರಜ್ಞಾನವನ್ನು ಬಳಸುತ್ತದೆ. ಇದು ರೇಡಾರ್ ಅಲೆಗಳನ್ನು ಬಾಹ್ಯಾಕಾಶದಿಂದ ಕಳುಹಿಸಿ, ಭೂಮಿಯ ಮೇಲ್ಮೈಯಿಂದ ಪ್ರತಿಧ್ವನಿಸುವ ತರಂಗಗಳನ್ನು ಸೆರೆಹಿಡಿಯುತ್ತದೆ. ಸಾಮಾನ್ಯ ಕ್ಯಾಮರಾಗಳ ರೀತಿಯಲ್ಲದೆ, ಎಸ್ಎಆರ್ ರಾತ್ರಿಯ ವೇಳೆ, ಅಥವಾ ಮೋಡಗಳ ಮೂಲಕ, ಮಳೆ, ಹೊಗೆ ಮತ್ತು ಕಾಡುಗಳ ಮೂಲಕವೂ ವೀಕ್ಷಿಸಬಲ್ಲದು.
ನಿಸಾರ್ ಉಪಗ್ರಹವನ್ನು ವಿಶೇಷವಾಗಿಸುವುದೆಂದರೆ, ಅದು ಏಕಕಾಲದಲ್ಲಿ ಎರಡು ರೀತಿಯ ರೇಡಾರ್ ಬ್ಯಾಂಡ್‌ಗಳನ್ನು ಬಳಸುವುದು.
ಎಲ್ ಬ್ಯಾಂಡ್ ರೇಡಾರ್ (ಉದ್ದನೆಯ 25 ಸೆಂಟಿಮೀಟರ್ ತರಂಗಗಳು)
ಎಸ್ ಬ್ಯಾಂಡ್ ರೇಡಾರ್ (ಸಣ್ಣದಾದ 10 ಸೆಂಟಿಮೀಟರ್ ತರಂಗಗಳು)
ಈ ರೀತಿಯಲ್ಲಿ ಎರಡು ಭಿನ್ನವಾದ ತರಂಗಾಂತರಗಳನ್ನು ಬಳಸುವುದರಿಂದ, ಉಪಗ್ರಹಕ್ಕೆ ಭೂಮಿಯ ಮೇಲ್ಮೈಯಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು ಗುರುತಿಸಲು ಮತ್ತು ನೆಲದಾಳದ ಚಲನವಲನಗಳನ್ನು ಗಮನಿಸಲು ಸಾಧ್ಯವಾಗುತ್ತದೆ. ಇಂತಹ ಶಕ್ತಿಶಾಲಿ ಸಂಯೋಜನೆಯ ಕಾರಣದಿಂದ ನಿಸಾರ್ ಭೂಮಿಯ ಮೇಲ್ಮೈಯ ಅತ್ಯಂತ ಸಂಪೂರ್ಣವಾದ, ಮತ್ತು ಸ್ಪಷ್ಟವಾದ ಛಾಯಾಚಿತ್ರಗಳನ್ನು ಒದಗಿಸುತ್ತದೆ.
ನಿಸಾರ್ ಉಪಗ್ರಹ ಒಂದು ಬೃಹತ್ತಾದ, ವೃತ್ತಾಕಾರದ ರೇಡಾರ್ ರಿಫ್ಲೆಕ್ಟರ್ ಆ್ಯಂಟೆನಾ ಹೊಂದಿದ್ದು, ಇದು 12 ಮೀಟರ್ (ಅಂದಾಜು 39 ಅಡಿ) ಅಗಲವಿದ್ದು, ಬಹುತೇಕ ಒಂದು ಟೆನ್ನಿಸ್ ಅಂಕಣದ ಗಾತ್ರದಲ್ಲಿದೆ. ಈ ಆ್ಯಂಟೆನಾ ಇಷ್ಟು ದೊಡ್ಡದಾಗಿರುವುದರಿಂದ, ಅದನ್ನು ರಾಕೆಟ್ ಒಳಗೆ ಹಿಡಿಸುವಂತೆ ಮಾಡಲು ಉಡಾವಣೆಯ ವೇಳೆ ಅದನ್ನು ಮಡಚಿಡಲಾಗುತ್ತದೆ.
ಬಾಹ್ಯಾಕಾಶಕ್ಕೆ ತೆರಳಿದ ಬಳಿಕ, ಈ ಆ್ಯಂಟೆನಾ ಒಂದು ಕೊಡೆಯ ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಇದಕ್ಕಾಗಿ 'ಡಿಪ್ಲಾಯಬಲ್ ಬೂಮ್' ಎಂಬ ಯಾಂತ್ರಿಕತೆಯನ್ನು ಬಳಸಲಾಗುತ್ತದೆ. ಈ ವಿಶೇಷ ಯಾಂತ್ರಿಕತೆ ಆ್ಯಂಟೆನಾವನ್ನು ಜೋಪಾನವಾಗಿ ತೆರೆದು, ಅದನ್ನು ಬಾಹ್ಯಾಕಾಶದಲ್ಲಿ ಬಿಡಿಸಿ ಇಡುತ್ತದೆ. ಆ ಮೂಲಕ ಇದು ಭೂಮಿಯ ದೂರ ದೂರದ ಪ್ರದೇಶಗಳಿಗೂ ರೇಡಾರ್ ಸಂಕೇತಗಳನ್ನು ಕಳುಹಿಸಿ, ಮರಳಿ ಸ್ವೀಕರಿಸಲು ಸಾಧ್ಯವಾಗುತ್ತದೆ.
ನಿಸಾರ್ ಉಪಗ್ರಹವನ್ನು ಭೂಮಿಯ ಮೇಲ್ಮೈಯಿಂದ ಅಂದಾಜು 747 ಕಿಲೋಮೀಟರ್ ಎತ್ತರದಲ್ಲಿರುವ ಸನ್ ಸಿಂಕ್ರೊನಸ್ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಈ ಕಕ್ಷೆ ಉಪಗ್ರಹವನ್ನು ಪ್ರತಿ ಬಾರಿಯೂ ಒಂದೇ ಸಮಯದಲ್ಲಿ ಭೂಮಿಯ ನಿರ್ದಿಷ್ಟ ಸ್ಥಳದ ಮೇಲೆ ಹಾದು ಹೋಗುವಂತೆ ಮಾಡುತ್ತದೆ. ಇದು ಉಪಗ್ರಹಕ್ಕೆ ಭೂಮಿಯ ಚಲನೆ ಅಥವಾ ಹಿಮನದಿಗಳ ಕರಗುವಿಕೆಯಂತಹ ನಿಧಾನವಾದ ಬದಲಾವಣೆಗಳನ್ನು ಗುರುತಿಸಲು ಸಹಾಯಕವಾಗಿದೆ.
ನಿಸಾರ್ ಪ್ರತಿ 98.5 ನಿಮಿಷಗಳಿಗೆ ಒಂದು ಬಾರಿಯಂತೆ ಭೂಮಿಯ ಪರಿಭ್ರಮಣೆ ನಡೆಸಲಿದ್ದು, ಪ್ರತಿಯೊಂದು ಪ್ರದೇಶವನ್ನೂ ಪ್ರತಿ ಹನ್ನೆರಡು ದಿನಗಳಿಗೆ ಒಂದು ಬಾರಿಯಂತೆ ಸ್ಕ್ಯಾನ್ ಮಾಡಲಿದೆ. ಅಂದರೆ, ಇದು ಒಂದು ಬಾರಿ ದಕ್ಷಿಣದಿಂದ ಉತ್ತರಕ್ಕೆ (ಏರು ಹಾದಿ) ಚಲಿಸಿದರೆ, ಇನ್ನೊಂದು ಬಾರಿ ಉತ್ತರದಿಂದ ದಕ್ಷಿಣಕ್ಕೆ (ಇಳಿಯುವ ಹಾದಿ) ಚಲಿಸುತ್ತದೆ. ಈ ಮೂಲಕ, ಸರಾಸರಿ ಪ್ರತಿ ಆರು ದಿನಗಳಿಗೆ ಒಂದು ಬಾರಿಯಂತೆ ಪ್ರತಿಯೊಂದು ಸ್ಥಳವನ್ನೂ ಪರಿಶೀಲಿಸಲಾಗುತ್ತದೆ.
ನಿಸಾರ್ ಉಪಗ್ರಹದ ಮಾಹಿತಿಗಳನ್ನು ಹೇಗೆ ಬಳಸಲಾಗುತ್ತದೆ?
ನಿಸಾರ್ ಉಪಗ್ರಹ ಒದಗಿಸುವ ಮಾಹಿತಿಗಳು ಹಲವು ಕ್ಷೇತ್ರಗಳಿಗೆ ಪ್ರಯೋಜನಕಾರಿಯಾಗಲಿದೆ: ವಿಜ್ಞಾನಿಗಳು ಹವಾಮಾನ, ನೈಸರ್ಗಿಕ ವಿಕೋಪಗಳು, ಮತ್ತು ಪರಿಸರ ವ್ಯವಸ್ಥೆಗಳನ್ನು ಪರಿಶೀಲಿಸುತ್ತಾರೆ.
ಕೃಷಿಕರು ಮಣ್ಣಿನ ತೇವಾಂಶ ಮತ್ತು ಬೆಳೆಗಳ ಆರೋಗ್ಯವನ್ನು ಗಮನಿಸಬಹುದು. ನೀರಿನ ನಿರ್ವಹಣಾಕಾರರು ನದಿಗಳು, ಕೆರೆಗಳು ಮತ್ತು ಕ್ಷಾಮದ ಸಾಧ್ಯತೆಗಳನ್ನು ಗಮನಿಸಬಹುದು.
ನಗರ ಯೋಜಕರು ಮುಳುಗುತ್ತಿರುವ, ಅಥವಾ ಬದಲಾಗುತ್ತಿರುವ ಪ್ರದೇಶಗಳನ್ನು ಗಮನಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ನಾಸಾ ಈ ಮಾಹಿತಿಗಳನ್ನು ಉಚಿತವಾಗಿ ಆನ್‌ಲೈನ್ ಮೂಲಕ ಒದಗಿಸುತ್ತದೆ. ಈ ಮೂಲಕ ವಿಜ್ಞಾನಿಗಳಿಂದ ವಿದ್ಯಾರ್ಥಿಗಳ ತನಕ, ಪ್ರತಿಯೊಬ್ಬ ವ್ಯಕ್ತಿಯೂ ಈ ಮಾಹಿತಿಯನ್ನು ಬಳಸಿಕೊಳ್ಳಬಹುದು.
ನಿಸಾರ್ ಯಾವಾಗ ಮತ್ತು ಎಲ್ಲಿಂದ ಉಡಾವಣೆಯಾಗಲಿದೆ?
ನಿಸಾರ್ ಉಪಗ್ರಹವನ್ನು ಭಾರತದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ನಿರ್ಮಾಣದ ಜಿಎಸ್ಎಲ್‌ವಿ ಮಾರ್ಕ್ 2 ರಾಕೆಟ್ ಮೂಲಕ ಜುಲೈ ತಿಂಗಳಲ್ಲಿ ಉಡಾವಣೆಗೊಳಿಸುವ ನಿರೀಕ್ಷೆಗಳಿವೆ. ಈ ಉಪಗ್ರಹ ಅಂದಾಜು 3 ಟನ್ ತೂಕ ಹೊಂದಿದ್ದು, ಬಾಹ್ಯಾಕಾಶದಲ್ಲಿ ಕನಿಷ್ಠ ಮೂರು ವರ್ಷ ಕಾರ್ಯ ನಿರ್ವಹಿಸಲಿದೆ.
ನಾಸಾದ ಕೊಡುಗೆಗಳು
ನಾಸಾ ತನ್ನ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯ (ಜೆಪಿಎಲ್) ಮೂಲಕ ಕೆಳಕಂಡ ವ್ಯವಸ್ಥೆಗಳನ್ನು ನಿರ್ಮಿಸಿದೆ:
ಎಲ್ ಬ್ಯಾಂಡ್ ರೇಡಾರ್ ವ್ಯವಸ್ಥೆ
12 ಮೀಟರ್ ರೇಡಾರ್ ಪ್ರತಿಫಲಕ ಆ್ಯಂಟೆನಾ
ಬಾಹ್ಯಾಕಾಶದಲ್ಲಿ ಆ್ಯಂಟೆನಾವನ್ನು ತೆರೆಯಲು ಡಿಪ್ಲಾಯಬಲ್ ಬೂಮ್
ಅತ್ಯಂತ ವೇಗದ ಮಾಹಿತಿ ವ್ಯವಸ್ಥೆ
ಜಿಪಿಎಸ್ ರಿಸೀವರ್‌ಗಳು
ಸಾಲಿಡ್ ಸ್ಟೇಟ್ ರೆಕಾರ್ಡರ್
ಪೇಲೋಡ್ ಮಾಹಿತಿ ಉಪ ವ್ಯವಸ್ಥೆ
ನಾಸಾದ ಗೊಡ್ಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ ಎಲ್ ಬ್ಯಾಂಡ್ ಮಾಹಿತಿಗಳನ್ನು ಸ್ವೀಕರಿಸಲು ನಿಯರ್ ಸ್ಪೇಸ್ ನೆಟ್‌ವರ್ಕ್ ಅನ್ನು ನಿರ್ವಹಿಸಲಿದೆ.
ಇಸ್ರೋದ ಕೊಡುಗೆಗಳು
ಇಸ್ರೋ ಸಹ ನಿಸಾರ್ ಯೋಜನೆಯಲ್ಲಿ ಸಮಾನವಾದ ಮುಖ್ಯ ಪಾತ್ರವನ್ನು ನಿರ್ವಹಿಸಿದೆ. ಇಸ್ರೋದ ಕಾರ್ಯಗಳು:
ಎಸ್ ಬ್ಯಾಂಡ್ ರೇಡಾರ್ (ಸ್ಪೇಸ್ ಅಪ್ಲಿಕೇಶನ್ ಸೆಂಟರ್‌ನಲ್ಲಿ ನಿರ್ಮಾಣ)
ಉಪಗ್ರಹದ ಮುಖ್ಯ ದೇಹ (ಸ್ಪೇಸ್‌ಕ್ರಾಫ್ಟ್ ಬಸ್, ಯು ಆರ್ ರಾವ್ ಉಪಗ್ರಹ ಕೇಂದ್ರದಲ್ಲಿ ನಿರ್ಮಾಣ)
ಉಡಾವಣಾ ವಾಹನ (ಜಿಎಸ್ಎಲ್‌ವಿ ಮಾರ್ಕ್ 2, ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ನಿರ್ಮಾಣ)
ಉಡಾವಣಾ ಕಾರ್ಯಾಚರಣೆ (ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ)
ಬಾಹ್ಯಾಕಾಶದಲ್ಲಿ ಉಪಗ್ರಹ ನಿಯಂತ್ರಣ (ಐಎಸ್‌ಟಿಆರ್‌ಎಸಿ ನಿರ್ವಹಿಸುತ್ತದೆ)
ಮಾಹಿತಿ ಸಂಸ್ಕರಣೆ ಮತ್ತು ಹಂಚಿಕೆ (ಎಸ್ ಬ್ಯಾಂಡ್ ರೇಡಾರ್, ಎನ್ಆರ್‌ಎಸ್‌ಸಿ ನಡೆಸುತ್ತದೆ)
ಎಲ್ಲ ಬಿಡಿಭಾಗಗಳನ್ನೂ ಭಾರತಕ್ಕೆ ತಂದು, ಭಾರತದಲ್ಲೇ ಜೋಡಿಸಲಾಗಿದೆ. ಅದರೊಡನೆ, ಅಂತಿಮ ಪರೀಕ್ಷೆಗಳನ್ನೂ ಭಾರತದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
ನಿಸಾರ್ ಯೋಜನೆಯ ಕುರಿತ ಆಲೋಚನೆಗಳು ಹಿಂದೆ, ಅಂದರೆ 2007ರಲ್ಲೇ ಆರಂಭಗೊಂಡಿದ್ದವು. ಆಗ ನಾಸಾ ಎಲ್ ಬ್ಯಾಂಡ್ ಅನ್ನು ಬಳಸುವ ನೂತನ ಉಪಗ್ರಹವನ್ನು ನಿರ್ಮಿಸುವ ಯೋಜನೆಯನ್ನು ಪ್ರಸ್ತಾಪಿಸಿತ್ತು. ಬಳಿಕ, 2014ರಲ್ಲಿ ಇಸ್ರೋ ಮತ್ತು ನಾಸಾಗಳು ಪರಸ್ಪರ ಕೈಜೋಡಿಸಿ, ಎರಡೂ ರೇಡಾರ್‌ಗಳನ್ನು ಒಯ್ಯುವಂತಹ ಒಂದೇ ಶಕ್ತಿಶಾಲಿ ಉಪಗ್ರಹವನ್ನು ನಿರ್ಮಿಸಲು ಸಿದ್ಧವಾದವು. ಅಂದಿನಿಂದ ನಿಸಾರ್ ಯೋಜನೆಯ ಕನಸನ್ನು ನನಸಾಗಿಸಲು ಇಸ್ರೋ ಮತ್ತು ನಾಸಾಗಳು ನಿಕಟವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿವೆ.
ನಿಸಾರ್ ಯೋಜನೆಗೆ ಒಟ್ಟು ಅಂದಾಜು 1.5 ಬಿಲಿಯನ್ ಡಾಲರ್ (12,500 ಕೋಟಿ ರೂಪಾಯಿ) ವೆಚ್ಚವಾಗಿದ್ದು, ಆ ಮೂಲಕ ನಿಸಾರ್ ಇಲ್ಲಿಯತನಕ ನಿರ್ಮಾಣಗೊಂಡಿರುವ ಅತ್ಯಂತ ವೆಚ್ಚದಾಯಕ ಭೂ ವೀಕ್ಷಣಾ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಇಷ್ಟೊಂದು ವೆಚ್ಚ ಮಾಡಿದ್ದರೂ, ಈ ಉಪಗ್ರಹ ಜನರು, ಭೂಮಿ, ನೀರು ಮತ್ತು ಸಂಪೂರ್ಣ ಭೂಮಿಯನ್ನು ರಕ್ಷಿಸಲು ಹೊಸ ಮಾರ್ಗೋಪಾಯಗಳನ್ನು ಒದಗಿಸುವ ಮೂಲಕ ಮಹತ್ವದ ಉಪಗ್ರಹವಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ನಿಸಾರ್ ಎಲ್ ಬ್ಯಾಂಡ್ ಮತ್ತು ಎಸ್ ಬ್ಯಾಂಡ್ ರೇಡಾರ್ ಎರಡನ್ನೂ ಜೊತೆಯಾಗಿ ಬಳಸುವ ಮೊತ್ತಮೊದಲ ಉಪಗ್ರಹವಾಗಿದೆ.
ಇದು ಹಗಲು ಮತ್ತು ರಾತ್ರಿಗಳಲ್ಲಿ, ಯಾವುದೇ ರೀತಿಯ ಹವಾಮಾನ ಪರಿಸ್ಥಿತಿಯಲ್ಲೂ ಸಮರ್ಥವಾಗಿ ಭೂಮಿಯನ್ನು ವೀಕ್ಷಿಸಬಲ್ಲದು. 240 ಕಿಲೋಮೀಟರ್‌ಗಳಷ್ಟು ವಿಶಾಲವಾದ ಭೂ ಪ್ರದೇಶವನ್ನು ಏಕಕಾಲಕ್ಕೆ ಗಮನಿಸಬಲ್ಲದು. ಇದು ಪ್ರತಿಯೊಂದು ಸ್ಥಳವನ್ನೂ ತಲಾ ಆರು ದಿನಗಳಿಗೊಮ್ಮೆ ಪರಿಶೀಲಿಸುತ್ತದೆ.
ರೇಡಾರದ ಆ್ಯಂಟೆನಾ 12 ಮೀಟರ್‌ಗಳಷ್ಟು ಅಗಲವಿದ್ದು, ಉಡಾವಣೆಯ ವೇಳೆಗೆ ಮುಚ್ಚಿರುತ್ತದೆ. ಬಾಹ್ಯಾಕಾಶಕ್ಕೆ ತೆರಳಿದ ಬಳಿಕ, ಆ್ಯಂಟೆನಾ ತೆರೆಯಲ್ಪಡುತ್ತದೆ. ಇದು ಭೂಮಿಯಿಂದ 747 ಕಿಲೋಮೀಟರ್ ಎತ್ತರದಲ್ಲಿರುವ ಸನ್ ಸಿಂಕ್ರೊನಸ್ ಕಕ್ಷೆಯಲ್ಲಿ ಪರಿಭ್ರಮಣೆ ನಡೆಸಲಿದೆ.
ಭಾರತದಿಂದ ಜಿಎಸ್ಎಲ್‌ವಿ ಮಾರ್ಕ್ 2 ರಾಕೆಟ್ ಮೂಲಕ ಉಡಾವಣೆಗೊಳ್ಳಲಿದೆ. ನಿಸಾರ್ ಉಪಗ್ರಹ ಕಲೆಹಾಕುವ ಮಾಹಿತಿಗಳು ಎಲ್ಲರಿಗೂ ಉಚಿತವಾಗಿ ಲಭ್ಯವಾಗಲಿವೆ. ನಾಸಾ ಮತ್ತು ಇಸ್ರೋಗಳು ಸತತ ಹತ್ತು ವರ್ಷಗಳ ಕಾಲ ಜೊತೆಯಾಗಿ ಕಾರ್ಯಾಚರಿಸುವ ಮೂಲಕ ನಿಸಾರ್ ಉಪಗ್ರಹವನ್ನು ನಿರ್ಮಿಸಿವೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com