ವ್ಯಾಪಾರ ಮಾಡಬೇಕು, ಏನಾದರೂ ಸಣ್ಣ ಉದ್ಯಮ ಶುರು ಮಾಡಬೇಕು ಎನ್ನುವ ತವಕ ಬಹಳಷ್ಟು ಜನರಿಗೆ ಇರುತ್ತದೆ ಅದಕ್ಕೆ ಸರಿಯಾದ ತಯಾರಿ ಅವರಲ್ಲಿ ಇರುವುದಿಲ್ಲ. ಆ ಕ್ಷಣದ ಜೋಷ್ ಇರಬಹುದು ಅಥವಾ ಕೆಲಸಕ್ಕೆ ಹೋದರೆ ಅಲ್ಲಿ ಬೇರೊಬ್ಬರು ಹೇಳಿದ್ದು ಕೇಳಬೇಕಾಗುತ್ತದೆ ಎನ್ನುವ ಕಾರಣವಿರಬಹುದು. ಒಟ್ಟಾರೆ ಸಮಾಜದ ಒಂದು ವರ್ಗದ ಜನರಿಗೆ ಕೆಲಸ ಮಾಡುವುದಕ್ಕಿಂತ ಕೆಲಸ ಸೃಷ್ಟಿ ಮಾಡುವುದರಲ್ಲಿ ಖುಷಿ ಸಿಗುತ್ತದೆ.
ಈ ರೀತಿಯ ಮನಸ್ಥಿತಿ ಇರುವವರ ಸಂಖ್ಯೆ ಬಹಳ ಕಡಿಮೆ. ಏಕೆಂದರೆ ವೇತನಕ್ಕೆ ಕೆಲಸ ಮಾಡುವಾಗ ತಿಂಗಳು ಮುಗಿದ ತಕ್ಷಣ ಒಪ್ಪಿಕೊಂಡಿರುವ ವೇತನ ಸಿಗುತ್ತದೆ. ಅದೇ ವ್ಯಾಪಾರಸ್ಥ ಎಲ್ಲರಿಗೂ ಕೊಡುವುದನ್ನು ಕೊಟ್ಟು ಉಳಿದದ್ದು ತಾನು ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಇರುತ್ತದೆ. ಪೇ ಚೆಕ್ ಮೆಂಟಾಲಿಟಿ ಇದೆಯಲ್ಲ ಅದು ಸ್ಥಿರತೆಯನ್ನು ಬಯಸುತ್ತದೆ. ಸ್ವಲ್ಪ ಏರುಪೇರಾದರೂ ಒತ್ತಡವನ್ನು ಅನುಭವಿಸುತ್ತಾರೆ. ಹೊಸತಿಗೆ, ಬದಲಾವಣೆಗೆ ಹೆದರುತ್ತಾರೆ. ಅದೇ ವ್ಯಾಪಾರಸ್ಥ ಮನಸ್ಥಿತಿ ಇರುವವರು ಬದಲಾವಣೆಗೆ ಹೆದರುವುದಿಲ್ಲ. ಹೊಸತು, ಬದಲಾವಣೆ ಎಂದರೆ ಅವರಲ್ಲಿ ಹೊಸ ಹುಮ್ಮಸ್ಸು ಶುರುವಾಗುತ್ತದೆ.
ಜಗತ್ತಿನಲ್ಲಿ ಸಿರಿವಂತಿಕೆಯನ್ನು ಪಡೆದುಕೊಂಡ ಜನರನ್ನು ನೋಡುತ್ತಾ ಹೋದರೆ ಅದರಲ್ಲಿ 70 ಪ್ರತಿಶತ ಜನ ಅಂದರೆ ನೂರು ಜನ ಸಿರಿವಂತರಲ್ಲಿ 70 ಜನ ವ್ಯಾಪಾರಸ್ಥರು, ಉಳಿದ 30 ರಲ್ಲಿ 27 ಪ್ರತಿಶತ ಹೂಡಿಕೆದಾರರು, ಮತ್ತು ಇನ್ನುಳಿದ 3 ಪ್ರತಿಶತ ಜನ ಆಟಗಾರರು, ಸಿನಿಮಾ ತಾರೆಯರು, ಜನರನ್ನು ರಂಜಿಸುವವರು. ಈ ಅಕ್ಷರಗಳನ್ನು ಬರೆಯಲು ಕಾರಣ, ವೇತನಕ್ಕೆ ಕೆಲಸ ಮಾಡಿ ಇಲ್ಲಿಯವರೆಗೆ ಯಾರೊಬ್ಬರೂ ಜಗತ್ತು ಅಚ್ಚರಿ ಪಡುವ ಮಟ್ಟಿನ ಸಂಪತ್ತು ಸೃಷ್ಟಿಸಿಲ್ಲ ಎನ್ನುವುದನ್ನು ಹೇಳುವುದಕ್ಕೆ! ಎಲ್ಲರೂ ವ್ಯಾಪಾರಸ್ಥರಾಗಲು ಖಂಡಿತ ಸಾಧ್ಯವಿಲ್ಲ.
ಜಗತ್ತಿನ ಬಹುಸಂಖ್ಯಾತ ಜನ ತಮ್ಮ ಸಮಯವನ್ನು ವ್ಯಾಪಾರ ಮಾಡುತ್ತಾರೆ. ಅವರಿಗೆ ನಾವು ಹೀಗೆ ಮಾಡುತ್ತಿದ್ದೇವೆ ಎನ್ನುವ ಆಲೋಚನೆ ಕೂಡ ಬಂದಿರುವುದಿಲ್ಲ. ಒಂದು ದಿನದಲ್ಲಿ 24 ಗಂಟೆಗಳು ನಮ್ಮೆಲ್ಲರಿಗೂ ಸಿಕ್ಕಿದೆ. ಆದರೆ ಬಹುತೇಕರು ಅದರಲ್ಲಿ 8 ಗಂಟೆಯನ್ನು ಮಾರಾಟ ಮಾಡಿಬಿಡುತ್ತಾರೆ. ಈ ರೀತಿ ಮಾರಾಟ ಮಾಡುವಾಗ ಕೂಡ ಸಮಯವನ್ನು ಸರಿಯಾದ ಬೆಲೆಗೆ ಮಾರಾಟ ಮಾಡಿದ್ದೇವೆಯೇ ಎನ್ನುವುದನ್ನು ಕೂಡ ಅವರು ಪರಿಶೀಲಿಸುವುದಿಲ್ಲ. ಹೀಗಾಗಿ ಮೆಜಾರಿಟಿ ಜನ ಸದಾ ಗೊಣಗಾಟದಲ್ಲಿ ದಿನವನ್ನು ಕಳೆಯುತ್ತಾರೆ.
ವ್ಯಾಪಾರಸ್ಥ ಜನ ಎಲ್ಲದರಲ್ಲೂ ಉತ್ತಮ ಎನ್ನುವಂತಿಲ್ಲ. ಶುರು ಮಾಡಿದ ನೂರು ವ್ಯಾಪಾರದಲ್ಲಿ 90 ಕ್ಕೂ ಹೆಚ್ಚು ಪ್ರಥಮ ವರ್ಷದಲ್ಲಿ ಅವಸಾನ ಹೊಂದುತ್ತವೆ. ಉಳಿದ ಹತ್ತು ಪ್ರತಿಶತದಲ್ಲಿ 90 ಪ್ರತಿಶತ ಎರಡು ವರ್ಷ ಮುಗಿಸುವುದರಲ್ಲಿ ಉಸ್ಸಪ್ಪಾ ಎಂದು ನೆಲ ಕಚ್ಚುತ್ತವೆ. ಹೀಗಾಗಿ ವ್ಯಾಪಾರ ಯಾವುದೇ ಇರಲಿ ಯಶಸ್ಸಿನ ಸ್ಟ್ರೈಕ್ ರೇಟ್ ಬಹಳ ಕಡಿಮೆ. ನೂರರಲ್ಲಿ ಒಂದು ಪ್ರತಿಶತ ಗೆದ್ದರೆ ಅದು ಸಾಧನೆ. ಅದೇಕೆ ವ್ಯಾಪಾರಗಳು ಸೋಲುತ್ತವೆ? ಎನ್ನುವ ಪ್ರಶ್ನೆಯನ್ನು ಬಹಳ ಸೀರಿಯಸ್ಸಾಗಿ ತೆಗೆದುಕೊಂಡು ಗಮನಿಸುತ್ತಾ ಬಂದಾಗ ತಿಳಿಯುವ ಅಂಶಗಳನ್ನು ನೋಡಿದರೆ ಹೀಗೆಲ್ಲಾ ಆಗಲು ಸಾಧ್ಯವೇ ಎನ್ನಿಸುತ್ತದೆ. ಇಲ್ಲಿನ ಅಂಶಗಳು ಸಣ್ಣ ಉದ್ದಿಮೆಗಳಿಗೆ ಹೆಚ್ಚು ಹೊಂದುತ್ತದೆ. ನೆನಪಿರಲಿ ಭಾರತದಂತಹ ದೊಡ್ಡ ದೇಶದಲ್ಲಿ ಈ ರೀತಿಯ ಸಣ್ಣಪುಟ್ಟ ಅಂಗಡಿ ಮುಂಗಟ್ಟು ನಡೆಸುವ, ಸಣ್ಣ ಪುಟ್ಟ ಅಂದರೆ ಐದಾರು ಜನ ಸೇರಿ ನಡೆಸುವ ಫ್ಯಾಕ್ಟಾರಿ ಇತ್ಯಾದಿಗಳು ಭಾರತದ ಜಿಡಿಪಿಯ 40 ಪ್ರತಿಶತ ದೇಣಿಗೆ ನೀಡುತ್ತಿವೆ.
ಸಣ್ಣ ಉದ್ದಿಮೆ ಎಂದು ನಾವು ಅದನ್ನು ಕಡೆಗಣಿಸುತ್ತೇವೆ. ಆದರೆ ಗಮನಿಸಿ ಅವರು ಕೆಲಸವಿಲ್ಲ ಎಂದು ಕುಳಿತವರಲ್ಲ. ತಮಗೂ ಕೆಲಸ ಸೃಷ್ಟಿಸಿಕೊಂಡು ಸಮಾಜದಲ್ಲಿ ಇನ್ನೊಂದೆರೆಡು ಕೆಲಸ ಸೃಷ್ಟಿಸಿದವರು. ಇಂತಹ ಮನಸ್ಥಿತಿಯವರು ಕೂಡ ಸೋಲುವುದಕ್ಕೆ ಕಾರಣಗಳನ್ನು ನೋಡೋಣ. ಇವುಗಳನ್ನು ಅವರು ಸರಿಪಡಿಸಿಕೊಂಡರೆ ಖಂಡಿತ ಯಶಸ್ಸಿನ ಸ್ಟ್ರೈಕ್ ರೇಟ್ ಹೆಚ್ಚಾಗುತ್ತದೆ.
ಲೊಕೇಶನ್: ಬಹಳಷ್ಟು ಸಣ್ಣ ವ್ಯಾಪಾರ ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಒಳ್ಳೆಯ ಜಾಗ, ಅದರಲ್ಲೂ ಹೆಚ್ಚು ಜನ ಓಡಾಡುವ ಜಾಗ ವ್ಯಾಪಾರಕ್ಕೆ ಸೂಕ್ತವಾಗುತ್ತದೆ. ಮುಕ್ಕಾಲು ಪಾಲು ಜನ ಒಳ್ಳೆಯ ಜಾಗವನ್ನು ಗುರುತಿಸುವಲ್ಲಿ ಸೋಲುತ್ತಾರೆ. ಹೀಗಾಗಿ ವ್ಯಾಪಾರವೂ ಸೋಲುತ್ತದೆ. ಅನುಭವವಿಲ್ಲದ ಕಾರಣ ಈ ರೀತಿ ಆಗುತ್ತದೆ. ಉದಾಹರಣೆಗೆ ಟೈಲರಿಂಗ್ ಶಾಪ್ ಮೊದಲನೇ ಮಹಡಿಯಲ್ಲಿ ಅಥವಾ ಎರಡನೇ ಮಹಡಿಯಲ್ಲಿ ಇಟ್ಟರೆ, ಲಿಫ್ಟ್ ಇದ್ದರೂ ಜನ ಹೋಗುವುದಿಲ್ಲ. ನಡೆದಾಡುವಾಗ ಸ್ವಲ್ಪವೂ ತೊಂದರೆಯಾಗದೆ, ಹೆಚ್ಚಿನ ಶ್ರಮವಿಲ್ಲದೆ ಕ್ಷಣದಲ್ಲಿ ಅಂಗಡಿಯನ್ನು ಹೊಕ್ಕುವಂತೆ ಇರಬೇಕು. ಇದೆ ಮಾತು ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಕ್ಲಿನಿಕ್ ನಡೆಸುವ ವೈದ್ಯರಿಗೂ ಅನ್ವಯಿಸಬಹುದು.
ನಡೆವಳಿಕೆ: ಆಂಗ್ಲ ಭಾಷೆಯಲ್ಲಿ ನಾವು ಇದನ್ನು ಆಟಿಟ್ಯೂಡ್ ಎನ್ನಬಹುದು. ಗ್ರಾಹಕನ ಜೊತೆಗಿನ ನಡೆವಳಿಕೆ ಬಹಳ ಮುಖ್ಯವಾದದ್ದು. ಪ್ರಥಮ ಬಾರಿಗೆ ವ್ಯಾಪಾರ ಶುರು ಮಾಡಿದವರಲ್ಲಿ ಇನ್ನೂ ಸೋಲು ಪಾಠ ಕಲಿಸಿರುವುದಿಲ್ಲ. ಅದರಲ್ಲೂ ಅವರಿಗೆ ಬಂಡವಾಳ ಕಷ್ಟಪಡದೆ ಸಿಕ್ಕಿದ್ದರೆ ಅವರಲ್ಲಿ ತಾನು ಇತರರಿಗಿಂತ ಭಿನ್ನ ಎನ್ನುವ ಅಹಂಭಾವ ಹೆಚ್ಚಾಗಿರುತ್ತದೆ. ವ್ಯಾಪಾರ ಮೊದಲೆರೆಡು ತಿಂಗಳು ನಿರೀಕ್ಷೆಗಿಂತ ಚೆನ್ನಾಗಿ ನಡೆದಿದ್ದರೆ ಆಗ ಗೊತ್ತಿಲ್ಲದೇ ಒಂದು ಸಣ್ಣ ಇಗೋ ಶುರುವಾಗಿರುತ್ತದೆ. ಯಶಸ್ಸು ಎನ್ನುವುದು ಕ್ಷಣದಲ್ಲಿ ನಮ್ಮನ್ನು ಬಿಟ್ಟು ಹೋಗಬಹುದು ಎನ್ನುವ ಅರಿವು ಇರುವುದಿಲ್ಲ. ಗ್ರಾಹಕ ವ್ಯಪಾರಸ್ಥನ ಜೊತೆ ಜಗಳಕ್ಕೆ ಇಳಿಯುವುದಿಲ್ಲ. ಆದರೆ ಆತನ ನಡವಳಿಕೆಯನ್ನು ಗಮನಿಸುತ್ತಾ ಇರುತ್ತಾನೆ. ಬಾಯಿ ಮಾತಿನ ಮೂಲಕ ಎಷ್ಟೋ ವ್ಯಾಪಾರ ಗಗನ ಮುಟ್ಟಿವೆ. ಹಾಗೆ ನೆಲ ಕಚ್ಚಿವೆ. ಹೀಗಾಗಿ ಗ್ರಾಹಕರ ಮುಂದೆ ತೋರಿಸುವ ಇಗೋ ಕುಸಿತಕ್ಕೆ ಕಾರಣವಾಗುತ್ತದೆ.
ಉತ್ತಮ ನೆಟ್ವರ್ಕಿಂಗ್ ಹೊಂದಿಲ್ಲದಿರುವುದು: ನೀವು ರಾಜಸ್ಥಾನಿ, ಗುಜರಾತಿ, ಮಾರ್ವಾಡಿ ಅಂಗಡಿಯವರನ್ನು ನೋಡಿ. ನೀವು ಅವರ ಅಂಗಡಿಗೆ ಒಮ್ಮೆ ಹೊಕ್ಕರೆ ನೀವು ಕೇಳುವ ಪದಾರ್ಥ ಅವರ ಬಳಿ ಇಲ್ಲದಿದ್ದರೂ ಅವರು ನಿಮ್ಮನ್ನು ಖಾಲಿ ಕೈಯಲ್ಲಿ ಕಳಿಸುವುದಿಲ್ಲ. ಐದು ನಿಮಿಷದಲ್ಲಿ ತರುತ್ತೇನೆ ಎನ್ನುತ್ತಾರೆ. ತಮ್ಮ ಕಮ್ಯುನಿಟಿಯ ಇತರ ವ್ಯಾಪಾರಸ್ಥರನ್ನು ಕೇಳಿ ಆ ಪದಾರ್ಥ ತಂದು ಕೊಡುತ್ತಾರೆ. ಅವರಲ್ಲಿ ಒಂದು ಹೊಂದಾವಣಿಕೆಯಿದೆ, ಒಂದು ಅಂಡರ್ಸ್ಟ್ಯಾಂಡಿಂಗ್ ಇದೆ. ಇವೆಲ್ಲವೂ ಇಲ್ಲದ ಸ್ಟಾಂಡ್ ಅಲೋನ್ ರೀತಿಯ ವ್ಯಾಪಾರಗಳು ಕುಸಿಯುವ ಸಾಧ್ಯತೆ ಬಹಳ ಹೆಚ್ಚು. ಇದು ಕೇವಲ ಮಾರಾಟಕ್ಕೆ ಮಾತ್ರವಲ್ಲ, ಖರೀದಿಗೆ ಅನ್ವಯ.
ಗ್ರಾಹಕನ ಫೀಡ್ಬ್ಯಾಕ್ ಸರಿಯಾಗಿ ಸ್ವೀಕರಿಸದೆ ಇರುವುದು: ಇದು ಎಲ್ಲಾ ಪದಾರ್ಥಗಳಿಗೂ ಅನ್ವಯ. ಅದರಲ್ಲೂ ಹೋಟೆಲ್ ಉದ್ದಿಮೆಯಲ್ಲಿ ಸ್ವಲ್ಪ ಹೆಚ್ಚು ಅನ್ವಯ. ಏಕೆಂದರೆ ಇಲ್ಲಿಗೆ ಜನ ಪದೇಪದೇ ಬರುತ್ತಾರೆ. ತಾವು ಹೇಳಿದ ಅಂಶವನ್ನು ಗಣನೆಗೆ ತೆಗೆದುಕೊಂಡಿದ್ದಾರೆ ಅಥವಾ ಇಲ್ಲ ಎನ್ನುವುದು ಅವರಿಗೆ ಬೇಗ ಗೊತ್ತಾಗುತ್ತದೆ. ಗ್ರಾಹಕ ಜಗಳಕ್ಕೆ ಇಳಿಯುವುದಿಲ್ಲ ಆತ ನಿಧಾನವಾಗಿ ಬೇರೆ ಹೋಟೆಲ್ಗೆ ಹೋಗುತ್ತಾನೆ. ಒಂದು ಸಣ್ಣ ಉದಾಹರಣೆ ಹೇಳುತ್ತೇನೆ. ಹೋಟೆಲ್ ಯಾವುದೇ ಇರಲಿ ವಡೆಯನ್ನು ವಡಾ ಎನ್ನುವುದನ್ನು, ದೋಸೆಯನ್ನು ದೋಸಾ, ದೋಷಾ ಎನ್ನುವುದನ್ನು ನಾನು ವಿರೋಧಿಸುತ್ತೇನೆ. ಅದು ಕನ್ನಡಿಗರಿಗೆ ಮಾಡುವ ಅವಮಾನ ಎಂದು ಭಾವಿಸುತ್ತೇನೆ. ಎಲ್ಲಡೆ ತಿದ್ದಿಕೊಳ್ಳಲು ಮನವಿಯನ್ನು ಮಾಡುತ್ತೇನೆ. ಅವರು ತಿದ್ದಿಕೊಳ್ಳದೆ ಹೋದರೆ ನಾನು ಎಂದಿಗೂ ಅಂತಹ ಹೋಟೆಲ್ಗೆ ಮರಳಿ ಹೋಗುವುದಿಲ್ಲ. ಪ್ರತಿ ಗ್ರಾಹಕನಿಗೂ ಹೀಗೆ ಹಲವಾರು ಕಾರಣಗಳು ಇರುತ್ತವೆ.
ಮಾರ್ಕೆಟಿಂಗ್ ಕೊರತೆ: ಇವತ್ತಿನ ದಿನದಲ್ಲಿ ಒಂದು ಚಲನಚಿತ್ರ ತೆಗೆಯಲು 100 ರೂಪಾಯಿ ಬೇಕಾದರೆ ಆ ಚಿತ್ರವನ್ನು ಪ್ರೊಮೋಟ್ ಮಾಡಲು 40 ರೂಪಾಯಿ ವ್ಯಯಿಸಬೇಕು ಎನ್ನುವಂತಾಗಿದೆ. ಪದಾರ್ಥ ಅದೆಷ್ಟೇ ಚೆನ್ನಾಗಿರಲಿ ಇಂತಹ ಒಂದು ಪದಾರ್ಥ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಗ್ರಾಹಕನಿಗೆ ತಿಳಿಯದೆ ಹೋದರೆ ಪದಾರ್ಥ ಸೋಲುತ್ತದೆ. ಕೇವಲ ಮಾರ್ಕೆಟಿಂಗ್ನಿಂದ ಮಾತ್ರ ಪದಾರ್ಥ ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಇಂದಿನ ಕಾಲಘಟ್ಟದಲ್ಲಿ ಪದಾರ್ಥವೂ ಉತ್ಕೃಷ್ಟ್ವವಾಗಿರಬೇಕು, ಮಾರ್ಕೆಟಿಂಗ್ ಕೂಡ ಜೋರಾಗಿರಬೇಕು. ಎರಡರಲ್ಲಿ ಒಂದು ಸರಿಯಾಗಿ ಇರದಿದ್ದರೂ ಕುಸಿತ ತಪ್ಪಿದ್ದಲ್ಲ.
ಇಲ್ಲ ಎನ್ನಲು ಕಲಿಯದೇ ಇರುವುದು: ವ್ಯಾಪಾರದಲ್ಲಿ ಇಲ್ಲ, ಕ್ಷಮಿಸಿ ಎನ್ನುವುದನ್ನು ಬೇಗ ಕಲಿಯಬೇಕು. ಇಲ್ಲ ಎನ್ನುವುದು ಕೇವಲ ನೆಗಟಿವ್ ಅಲ್ಲ. ಉದಾಹರಣೆಗೆ ಸಾಲ ಕೊಡುವುದಿಲ್ಲ ಎನ್ನುವುದು, ಅಥವಾ ೩೦ ದಿನದ ಮೇಲೆ ಸಾಲದ ಅವಧಿ ವಿಸ್ತರಿಸಲು ಸಾಧ್ಯವಿಲ್ಲ ಎನ್ನುವುದು ಪಾಲಿಸಿ ರೂಪದಲ್ಲಿರಬೇಕು. ದಾಕ್ಷಿಣ್ಯಕ್ಕೆ, ವ್ಯಾಪಾರ ವೃದ್ಧಿಸಲಿ ಎನ್ನುವ ಕಾರಣಕ್ಕೆ ಇಲ್ಲ ಎನ್ನುವ ಜಾಗದಲ್ಲಿ ಯಸ್, ಯಸ್ ಎನ್ನುತ್ತಾ ಹೋಗುವುದು ಕ್ಯಾಶ್ ಫ್ಲೋ ಗೆ ಅಡ್ಡಿ ಉಂಟು ಮಾಡುವ ಸಾಧ್ಯತೆ ಹೆಚ್ಚು. ಪದಾರ್ಥವನ್ನು ನೀಡುವ ಸಮಯದ ಬಗ್ಗೆ ಕೂಡ ನಿಲುವು ಸ್ಪಷ್ಟವಾಗಿರಬೇಕು. ಆರ್ಡರ್ ಸಿಗಲಿ ಎನ್ನುವ ಕಾರಣಕ್ಕೆ ಹತ್ತು ದಿನ ಆಗುವ ಕೆಲಸವನ್ನು ಐದು ದಿನದಲ್ಲಿ ಪೂರ್ಣಗೊಳಿಸಿ ಕೊಡುತ್ತೇನೆ ಎನ್ನುವುದು ತಪ್ಪು.
ವರ್ಕ್ ಫ್ಲೋ ಚಾರ್ಟ್ ಮತ್ತು ಪ್ಲಾನಿಂಗ್ ಕೊರತೆ: ನಾವು ಪ್ರವಾಸ ಹೊರಟರೆ ಅದಕ್ಕೊಂದು ರೋಡ್ ಮ್ಯಾಪ್ ಹಾಕಿಕೊಳ್ಳುತ್ತೇವೆ ಅಲ್ಲವೇ? ಎಷ್ಟು ದಿನ, ಎಷ್ಟು ಹಣ, ಹೇಗೆ ಹೋಗುವುದು, ಏನು ನೋಡುವುದು, ಏನು ತಿನ್ನುವುದು? ಥೇಟ್ ಹಾಗೆ ಬಿಸಿನೆಸ್ ಶುರು ಮಾಡಿದಾಗ ಆದಾಯ ವ್ಯಯದ ಬಗ್ಗೆ, ಬ್ರೇಕ್ ಈವನ್ ಬಗ್ಗೆ, ಕೆಲಸ ಹೇಗೆ ಸಾಗಬೇಕು ಎನ್ನುವುದರ ಬಗ್ಗೆ, ಹಣದ ಹರಿವಿನ ಬಗ್ಗೆ, ಹೀಗೆ ಸಣ್ಣ ಸಣ್ಣ ಅಂಶಗಳನ್ನೂ ಪ್ಲಾನ್ ಮಾಡಿರಬೇಕು. ಪ್ಲಾನ್ ಮಾಡಿದಂತೆ ಸಾಗದಿದ್ದರೆ ಏನು ಮಾಡಬೇಕು ಎನ್ನುವ ಪ್ಲಾನ್ ಬಿ ಕೂಡ ಸಿದ್ಧವಿರಬೇಕು. ಇದಿಲ್ಲದ ಕಾರಣ ಸೋಲಾಗುತ್ತಿದೆ.
ಭಾವನೆಯನ್ನು ವ್ಯಾಪಾರದಲ್ಲಿ ಮಿಕ್ಸ್ ಮಾಡುವುದು: ವ್ಯಾಪಾರದಲ್ಲಿ ಭಾವನೆ ಮಬೆರೆಸುವಂತಿಲ್ಲ. ಸಂಬಂಧದಲ್ಲಿ ಸಾಧ್ಯವಾದಷ್ಟೂ ವ್ಯಾಪಾರ ಮಾಡದಿರುವುದು ಉತ್ತಮ. ಪಾಲುದಾರಿಕೆ ವ್ಯವಹಾರಗಳಿಂದಲೂ ದೂರವಿರಿವುದು ಒಳ್ಳೆಯದು. ಯಾವುದೇ ತೆರನಾದ ಭಾವನೆ ವ್ಯಾಪಾರಕ್ಕೆ ಮಾರಕ. ವ್ಯಾಪಾರದಲ್ಲಿ ಮೊದಲಿಗೆ ಪಾಲಿಸಿ, ಬಿಸಿನೆಸ್ ಫಾರ್ಮ್ಯಾಟ್ ನಿರ್ಧರಿಸಬೇಕು ಮತ್ತು ಅದನ್ನು ಪಾಲಿಸಬೇಕು. ಅಲ್ಲಿ ಭಾವನೆ ಮತ್ತು ಸಂಬಂಧಗಳಿಗೆ ಜಾಗವಿಲ್ಲ.
ಫೈನಾನ್ಸಿಯಲ್ ಕಮಿಟ್ಮೆಂಟ್ ಉಳಿಸಿಕೊಳ್ಳದೆ ಇರುವುದು: ಹೇಳಿದ ಸಮಯಕ್ಕೆ ಹಣ ನೀಡದಿರುವುದು, ವೇತನ ನೀಡದಿರುವುದು, ಚೆಕ್ ಬೌನ್ಸ್, ನಾಳೆ, ನಾಳೆ ಎನ್ನುವುದು ಇವೆಲ್ಲವೂ ಮಾರುಕಟ್ಟೆಯಲ್ಲಿ ಹೆಸರನ್ನು ಕೆಡಿಸುತ್ತವೆ. ಒಬ್ಬ ವ್ಯಾಪಾರಸ್ಥನಿಗೆ ಮಾತು ಬಹಳ ಮುಖ್ಯವಾಗುತ್ತದೆ. ಒಮ್ಮೆ ಒಪ್ಪಿಕೊಂಡ ಹಣಕಾಸು ಒಪ್ಪಂದವನ್ನು ಯಾವುದೇ ಕಾರಣಕ್ಕೂ ಮುರಿಯಬಾರದು. ಎದ್ದು ವ್ಯಾಪಾರವನ್ನು ಕುಸಿಯುವಂತೆ ಮಾಡುತ್ತದೆ. ಒಮ್ಮೆ ಕೆಟ್ಟ ಹೆಸರು ಗಳಿಸಿಕೊಂಡು ಬಿಟ್ಟರೆ ನಂತರ ಮಾರುಕಟ್ಟೆಯಲ್ಲಿ ಹಣ, ವ್ಯಾಪಾರ ಎರಡೂ ಗಳಿಸುವುದು ಕಷ್ಟ.
ಕೊನೆಮಾತು: ವ್ಯಾಪಾರ ಏಕೆ ಕುಸಿಯುತ್ತದೆ ಎನ್ನುವುದಕ್ಕೆ ಇಂತಹ ನೂರು ಕಾರಣಗಳು ಸಿಗುತ್ತವೆ. ಮೇಲಿನವು ಕೇವಲ ಕಾರಣಗಳಲ್ಲ. ಇದು ಅಪರಾಧ. ಮಾರುಕಟ್ಟೆ ಒಬ್ಬರಿಂದ ನಿರ್ಮಾಣ ಆಗಿಲ್ಲ. ಆದರೆ ಮಾರುಕಟ್ಟೆಗೂ ಒಂದು ರೀತಿ ನೀತಿ, ನಿಯಮಗಳಿವೆ. ಈ ನಿಯಮಗಳನ್ನು ಯಾರೂ ಜೋರಾಗಿ ಹೇಳುವುದಿಲ್ಲ. ಆದರೆ ಇದರಿಂದ ಆಚೀಚೆ ಹೋದರೆ ಅದನ್ನು ಸೀರಿಯಸ್ಸಾಗಿ ಪರಿಗಣಿಸಲಾಗುತ್ತದೆ. ವ್ಯಾಪಾರದಲ್ಲಿ ಒಮ್ಮೆ ಸೋತರೆ ಮತ್ತೆ ವಿಶ್ವಾಸಗಳಿಸಿಕೊಳ್ಳುವುದು ಕಷ್ಟಸಾಧ್ಯ. ಹೀಗಾಗಿ ಎಡವುವ ಮುನ್ನ ಎಚ್ಚರವಿರಲಿ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com