ಯುಗಾದಿ ಆಹಾರ  online desk
ಅಂಕಣಗಳು

ಯುಗಾದಿ: ಆಹಾರ ಮತ್ತು ಆರೋಗ್ಯ (ಕುಶಲವೇ ಕ್ಷೇಮವೇ)

ಯುಗಾದಿ ಹಬ್ಬದಲ್ಲಿ ತಲೆಗೆ ಮತ್ತು ಮೈಗೆ ಸುಗಂಧ ತೈಲವನ್ನು ಹಚ್ಚಿ ಮಾಲೀಸು ಮಾಡಿಕೊಂಡು ಸ್ನಾನ ಮಾಡಬೇಕು.

ಯುಗಾದಿಯ ಹೊಸ ವರ್ಷಾಚರಣೆಯಂದು ಬೇವಿನೊಂದಿಗೆ ಬೆಲ್ಲ ಸೇವಿಸುವುದರಿಂದ ಕಾಯಿಲೆಗಳಿಂದ ದೂರವಿರಬಹುದು. ಬೇವು ಮತ್ತು ಬೆಲ್ಲದ ಸೇವನೆಯು ಬದುಕಿನಲ್ಲಿ ಕಹಿ ಮತ್ತು ಸಿಹಿ ಎರಡನ್ನು ಸಮನಾಗಿ ಹಂಚಿಕೊಳ್ಳಬೇಕೆಂಬ ವಿಚಾರವನ್ನು ಸಾರುವುದು ಒಂದೆಡೆಯಾದರೆ ಇನ್ನೊಂದೆಡೆ ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬೇವು ಬೇರಿನಿಂದ ಹಿಡಿದು ಹಣ್ಣಿನವರೆಗೂ ಔಷಧೀಯ ಗುಣಗಳನ್ನು ಹೊತ್ತು ನಿಂತಿರುವ ಬಹು ಉಪಯೋಗಿ ಮರ. ಅದಕ್ಕಾಗಿ “ಹಳ್ಳಿಯ ಆಸ್ಪತ್ರೆ”ಎಂಬ ಅನ್ವರ್ಥ ನಾಮವು ಬೇವಿಗಿದೆ.

ಯುಗಾದಿ ಸ್ನಾನ

ಯುಗಾದಿ ಹಬ್ಬದಲ್ಲಿ ತಲೆಗೆ ಮತ್ತು ಮೈಗೆ ಸುಗಂಧ ತೈಲವನ್ನು ಹಚ್ಚಿ ಮಾಲೀಸು ಮಾಡಿಕೊಂಡು ಸ್ನಾನ ಮಾಡಬೇಕು. ಎಳ್ಳೆಣ್ಣೆಯನ್ನು ಇಲ್ಲವೇ ಗುಲಾಬಿ ತೈಲವನ್ನು ಸ್ವಲ್ಪ ಬಿಸಿಮಾಡಿ ಮೈಗೆಲ್ಲ ಹಚ್ಚಿ ಬೆರಳುಗಳಿಂದ ಮೇಲ್ಮುಖವಾಗಿ ಮಾಲೀಸು ಮಾಡಬೇಕು. ಇದರಿಂದ ದೇಹದ ಉಷ್ಣವು ದೂರವಾಗುವುದಲ್ಲದೇ ಮನಸ್ಸು ಉಲ್ಲಾಸವಾಗಿರುತ್ತದೆ. ಕೀಲು ನೋವು, ಸೊಂಟ ನೋವು ಮತ್ತು ಬೆನ್ನು ನೋವು ಕಡಿಮೆಯಾಗುತ್ತದೆ. ನಿದ್ರೆ ಚೆನ್ನಾಗಿ ಬರುತ್ತದೆ. ಕಣ್ಣಿನ ದೃಷ್ಟಿಗೂ ಇದು ಒಳ್ಳೆಯದು. ಜೊತೆಗೆ ಚರ್ಮವು ಕಾಂತಿಯುತವಾಗಿ ಹೊಳೆಯುತ್ತದೆ. ಚರ್ಮದಲ್ಲಿರುವ ನವೆ, ಗುಳ್ಳೆ ಮುಂತಾದ ತೊಂದರೆಗಳು ಮಾಯವಾಗುತ್ತವೆ.

ಯುಗಾದಿಯ ಅಡುಗೆಯಲ್ಲಿ ಬೇವು-ಬೆಲ್ಲ ಬಳಕೆ

ಯುಗಾದಿಯ ಅಡುಗೆಯಲ್ಲಿ ಬೇವು-ಬೆಲ್ಲ ಪ್ರಧಾನ ಸ್ಥಾನ ಪಡೆದಿದೆ. ಬೇವಿನ ಹೂಗಳನ್ನು ಒಣಗಿಸಿಟ್ಟುಕೊಂಡು ಸಾಂಬಾರು ಮಾಡುವಾಗ ಬಳಸಬೇಕು. ಅಲ್ಲದೇ ಒಣಗಿದ ಬೇವಿನ ಹೂವುಗಳನ್ನು ನಮಗೆ ಬೇಕೆನಿಸಿದಾಗಲೆಲ್ಲ ಎಣ್ಣೆಯಲ್ಲಿ ಹುರಿದು ಬಿಸಿ ಅನ್ನದೊಂದಿಗೆ ಉಪ್ಪು ಮತ್ತು ತುಪ್ಪ ಬೆರೆಸಿ ತಿನ್ನಬೇಕು. ಇದು ರುಚಿಕರ ಮತ್ತು ಆರೋಗ್ಯಕರ.

ಬೆಂಗಳೂರು, ಮೈಸೂರು ಸೀಮೆಗಳಲ್ಲಿ ಬೇವಿನೆಲೆಯನ್ನು ಬೆಲ್ಲದೊಂದಿಗೆ ಬೆರೆಸಿ ತಿನ್ನುತ್ತಾರೆ. ಉತ್ತರ ಕರ್ನಾಟಕದಲ್ಲಿ ಹೊಸ ಮಡಕೆಯಲ್ಲಿ ಹುರಿಗಡಲೆ ಪುಡಿ, ಬೆಲ್ಲದ ಪುಡಿ, ಹುಣಸೆಹುಳಿ ಬೆರೆಸಿ ಪಾನೀಯ ತಯಾರಿಸಿ ಅದಕ್ಕೆ ಬೇಸಿಗೆ ಹಣ್ಣುಗಳಾದ ಕಲ್ಲಂಗಡಿ, ಕರ್ಬೂಜ, ಬಾಳೆ, ದ್ರಾಕ್ಷಿ ಮುಂತಾದ ಹಣ್ಣುಗಳನ್ನು ಸಣ್ಣದಾಗಿ ಹೆಚ್ಚಿ ಪಾನೀಯಕ್ಕೆ ಬೆರೆಸಿ ಕುಡಿಯುತ್ತಾರೆ. ಇದಕ್ಕೆ ಎಳೆಯ ಬೇವಿನೆಲೆ ಇಲ್ಲವೇ ಬೇವಿನ ಹೂಗಳನ್ನು ಬೆರೆಸುತ್ತಾರೆ.

ಯುಗಾದಿಯ ಅಡುಗೆಯಲ್ಲಿ ಮಾವಿನಕಾಯಿ, ದಾಳಿಂಬೆ ಬಳಕೆ

ಯುಗಾದಿಯಂದು ಪ್ರಧಾನವಾಗಿ ಸೇವಿಸುವ ಮಾವಿನ ಕಾಯಿಯ ಹುಳಿ ಮತ್ತು ಒಗಚು ರುಚಿ ನಾಲಿಗೆಗೆ ಬಲು ಹಿತ. ಈ ಹಬ್ಬದಲ್ಲಿ ಮಾಡುವ ಮಾವಿನಕಾಯಿ ಚಿತ್ರಾನ್ನ, ಚಟ್ನಿ, ಬಿಸಿ ಉಪ್ಪಿನಕಾಯಿ ಎಲ್ಲವೂ ಸ್ವಾದಿಷ್ಟ ಮತ್ತು ಆರೋಗ್ಯಕರ.

ಹುರಿಗಡಲೆಯ ಪುಡಿ ತಯಾರಿಸಿ ಅದಕ್ಕೆ ಬೆಲ್ಲ, ತುರಿದ ಒಣಕೊಬ್ಬರಿ ಸೇರಿಸಿ ಹುಣಸೆ ಹುಳಿ, ಗೋಡಂಬಿ, ಬಾದಾಮಿ, ದ್ರಾಕ್ಷಿ, ಆಕ್ರೋಟ, ಚರ್ರಿ ಮುಂತಾದವುಗಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿಕೊಂಡು ಬೆರೆಸಬೇಕು. ಇದಕ್ಕೆ ಸ್ವಲ್ಪ ಮಾವಿನಕಾಯಿ ತುರಿದು ಹಾಕಬೇಕು. ಬೇವಿನ ಹೂಗಳನ್ನು ಹಾಕಬೇಕು. ಇದಕ್ಕೆ ಹಾಲು, ನೀರು ಬೆರೆಸಿ ಹೊಸ ಮಡಕೆಯಲ್ಲಿಟ್ಟು ಇಲ್ಲವೇ ಫ್ರಿಡ್ಜ್ ನಲ್ಲಿಟ್ಟು 3-4 ಗಂಟೆ ಬಿಟ್ಟು ತಿನ್ನುವುದರಿಂದ ತಂಪಾಗಿ, ರುಚಿಕರವಾಗಿ, ಪುಷ್ಟಿಕರವಾಗಿರುತ್ತದೆ. ಬೇವೆಂದರೆ ಕಹಿ ಎಂದು ಓಡಿಹೋಗುವ ಮಕ್ಕಳೂ ಖುಷಿಯಿಂದ ತಿನ್ನುತ್ತಾರೆ. ಐಸ್‌ಕ್ರೀಂ ತರಹ ಮುದನೀಡುತ್ತದೆ.

ಈ ಕಾಲದಲ್ಲಿ ಹೇರಳವಾಗಿ ಸಿಗುವ ದಾಳಿಂಬೆ ಹಣ್ಣು ಹುಳಿ, ಒಗರು, ಸಿಹಿರಸದಿಂದ ಕೂಡಿದೆ. ದಾಳಿಂಬೆಯಲ್ಲಿ ಸುಣ್ಣಾಂಶ, ರಂಜಕದ ಅಂಶ, ಅಧಿಕವಾಗಿದೆ. ಅಲ್ಲದೇ ವಿಟಮಿನ್ ಸಿ ಅಂಶ ಹೆಚ್ಚಾಗುವುದರಿಂದ (100 ಗ್ರಾಂ ಹಣ್ಣಿನಲ್ಲಿ 16 ಮಿಲಿಗ್ರಾಂ) ಚರ್ಮದಲ್ಲಿ ಉಷ್ಣದಿಂದ ಉಂಟಾಗುವ ಗುಳ್ಳೆಗಳನ್ನ ತಡೆಯುವುದಲ್ಲದೇ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಬಾಯಿಹುಣ್ಣು, ಕಣ್ಣುರಿ, ತಲೆನೋವುಗಳಿಂದೆಲ್ಲ ರಕ್ಷಿಸುತ್ತದೆ.

ಒಬ್ಬಟ್ಟಿನ ಸಾರು

ಯುಗಾದಿಗೆ ಒಬ್ಬಟ್ಟಿನ ಸಾರು ತಯಾರಿಸುವುದು ವಾಡಿಕೆ. ಒಬ್ಬಟ್ಟಿನ ಸಾರಿಗೆ ದಾಳಿಂಬೆಯ ರಸ ಬೆರೆಸಿ ತಯಾರಿಸಿದರೆ ಅದರ ರುಚಿ ಮತ್ತಷ್ಟು ಹೆಚ್ಚಿಸುವುದಲ್ಲದೇ ದೇಹದ ಉಷ್ಣತೆಯನ್ನು ಕಾಪಾಡುತ್ತದೆ.

ತೊಗರಿಬೇಳೆ ಇಲ್ಲವೇ ಹೆಸರುಬೇಳೆಯನ್ನು ಚೆನ್ನಾಗಿ ಬೇಯಿಸಿ, ಕಟ್ಟು ತೆಗೆದು ಇದಕ್ಕೆ ಜೀರಿಗೆ, ಶುಂಠಿ, ಹಿಪ್ಪಲಿ, ಧನಿಯಪುಡಿ ಬೆರೆಸಬೇಕು. ದಾಳಿಂಬೆ ರಸ, ಉಪ್ಪು ಬೆರೆಸಬೇಕು. ಬೆಲ್ಲವನ್ನು ಹಾಕಬೇಕು. ಒಗ್ಗರಣೆ ಕೊಟ್ಟು ಮೇಲೆ ಕೊತ್ತಂಬರಿ ಸೊಪ್ಪು ಹಾಕಬೇಕು. ದಾಳಿಂಬೆಯ ಸಾರು ಪಿತ್ತದಿಂದ ಬಳಲುವವರಿಗೆ ಒಳ್ಳೆಯದು. ಅಲ್ಲದೇ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಯುಗಾದಿಯ ಅಡುಗೆಯಲ್ಲಿ ಹೆಸರುಬೇಳೆ ಬಳಕೆ

ಬಿಸಿಲು ಹೆಚ್ಚಾಗುವ ಕಾಲದ ಇದಾದ್ದರಿಂದ ಈ ಕಾಲದಲ್ಲಿ ಹೆಸರುಬೇಳೆಯ ಸೇವನೆ ದೇಹದ ಉಷ್ಣತೆಯನ್ನು ಕಾಪಾಡುವಲ್ಲಿ ಸಹಕಾರಿ.

  • ಮೊಳಕೆ ಬರಿಸಿದ ಹೆಸರುಕಾಳಿನ ಬಳಕೆ ದೇಹದ ತೂಕವನ್ನು ನಿಯಂತ್ರಿಸುವುದಲ್ಲದೇ ಶಕ್ತಿಯನ್ನು ಕೊಡುತ್ತದೆ.

  • ಹೆಸರುಬೇಳೆ ಬೇಯಿಸಿ ಕಟ್ಟುತೆಗೆದು ಅದಕ್ಕೆ ಜೀರಿಗೆ, ಧನಿಯ, ಒಣಮೆಣಸಿಕಾಯಿ ಪುಡಿ(ಖಾರದ ಪುಡಿ) ಉಪ್ಪು ಬೆರೆಸಿ ಸಾರು ತಯಾರಿಸಬೇಕು. ಇದಕ್ಕೆ ಇಂಗು ಒಗ್ಗರಣೆ ಕೊಡಬಹುದು.

  • ನೆನೆಸಿದ ಹೆಸರುಕಾಳು ಇಲ್ಲವೇ ಹೆಸರುಬೇಳೆಗೆ ತೆಂಗಿನ ತುರಿ, ಸೌತೆಕಾಯಿ, ಗಜ್ಜರಿತುರಿ ಕೊತ್ತಂಬರಿ ಸೊಪ್ಪು ಉಪ್ಪು ಬೆರೆಸಬೇಕು. ಬೇಕೆನಿಸಿದರೆ ಒಗ್ಗರಣೆ ಕೊಡಬೇಕು.

  • ಅಕ್ಕಿ ಇಲ್ಲವೇ ಕೆಂಪಕ್ಕಿ ಇಲ್ಲವೇ ನವಣೆ ಅಕ್ಕಿ ಇಲ್ಲವೇ ಸಾಮೆ ಅಕ್ಕಿಯನ್ನು ಮತ್ತು ಹೆಸರುಬೇಳೆಯನ್ನು ಹುರಿದು ಜೀರಿಗೆ, ಮೆಣಸು, ಉದ್ದು ಬೆರೆಸಿ ಕುಕ್ಕರಿನಲ್ಲಿ ಬೇಯಿಸಬೇಕು.

  • ಹೆಸರುಬೇಳೆ ಮತ್ತು ಅಕ್ಕಿ (ಕೆಂಪಕ್ಕಿ ಇಲ್ಲವೇ ಸಿರಿಧಾನ್ಯಗಳ ಅಕ್ಕಿ) ತುಪ್ಪದಲ್ಲಿ ಹುರಿದು ಬೆಲ್ಲ, ತೆಂಗಿನಕಾಯಿ ತುರಿ ಬೆರೆಸಿ ಕುಕ್ಕರಿನಲ್ಲಿ ಬೇಯಿಸಿ. ಏಲಕ್ಕಿ ಪುಡಿ ಬೆರೆಸಬೇಕು.

  • ಹೆಸರು ಬೇಳೆ ಬೇಯಿಸಿ ಕಟ್ಟು ತೆಗೆಯಬೇಕು. ಕೊತ್ತಂಬರಿ, ಜೀರಿಗೆ, ಶುಂಠಿ, ಉಪ್ಪು ಹಾಕಿ ಎರಡು ಲೋಟ ಮಜ್ಜಿಗೆಯಲ್ಲಿ ಬೆರೆಸಬೇಕು. ಇದು ಶಕ್ತಿದಾಯಕ, ಜೀರ್ಣವನ್ನು ಹೆಚ್ಚಿಸುತ್ತದೆ ಮತ್ತು ದಾಹ ಶಮನವಾಗಿ ಕೆಲಸ ಮಾಡುತ್ತದೆ.

ಹೀಗೆ ಯುಗಾದಿಯ ಸಂದರ್ಭದಲ್ಲಿ ನಾವು ತಯಾರಿಸುವ ಪ್ರತಿಯೊಂದು ಖಾದ್ಯದಲ್ಲಿ ಬಳಸುವ ಪ್ರತಿಯೊಂದು ಪದಾರ್ಥದಲ್ಲಿಯೂ ಪೌಷ್ಟಿಕಾಂಶಗಳಿವೆ. ಇದರಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT