ಸಾಂಕೇತಿಕ ಚಿತ್ರ online desk
ಅಂಕಣಗಳು

ಭೈರವ ಮತ್ತು ರುದ್ರ: ಭಾರತದ ನೂತನ ಶಕ್ತಿ

ಸಾಮಾನ್ಯವಾಗಿ ಭಾರತೀಯ ಸೇನೆಯಲ್ಲಿರುವ ಒಂದು ಬ್ರಿಗೇಡ್ 3,000 ಅಥವಾ ಅದಕ್ಕೂ ಹೆಚ್ಚಿನ ಯೋಧರನ್ನು ಹೊಂದಿದ್ದು, ಅವು ಮೂರರಿಂದ ನಾಲ್ಕು ಬಟಾಲಿಯನ್‌ಗಳಾಗುತ್ತವೆ.

ಭಾರತೀಯ ಸೇನೆ ಬಹಳ ವೇಗವಾಗಿ ಬದಲಾಗುತ್ತಿದೆ. ಹೆಚ್ಚು ಕ್ಷಿಪ್ರ ಮತ್ತು ಯುದ್ಧ ಸನ್ನದ್ಧ ಸೇನೆಯಾಗುವ ಸಲುವಾಗಿ, ಭಾರತೀಯ ಸೇನೆ ಭೈರವ್ ಲೈಟ್ ಕಮಾಂಡೋ ಬಟಾಲಿಯನ್‌ಗಳು ಎನ್ನುವ ಸಣ್ಣ, ಮತ್ತು ಪ್ರಬಲ ದಾಳಿ ನಡೆಸಬಲ್ಲ, ಮತ್ತು ನಮ್ಮ ಉತ್ತರ ಮತ್ತು ಪಶ್ಚಿಮದ ಗಡಿಗಳಲ್ಲಿ ವೇಗವಾಗಿ ಕಾರ್ಯಾಚರಿಸಲು ತರಬೇತಿ ಹೊಂದಿರುವ ಪಡೆಗಳನ್ನು ಸಿದ್ಧಪಡಿಸುತ್ತಿದೆ. ಈ ಭೈರವ ಪಡೆಗಳು ಹೊಸ ರುದ್ರ ಬ್ರಿಗೇಡ್ ಪರಿಕಲ್ಪನೆಯ ಭಾಗವಾಗಿವೆ. ರುದ್ರ ಬ್ರಿಗೇಡ್‌ಗಳು ಟ್ಯಾಂಕ್‌ಗಳು, ಆರ್ಟಿಲರಿ, ಮತ್ತು ಇಂಜನಿಯರಿಂಗ್ ಬೆಂಬಲ ಹೊಂದಿದ್ದು, ಭೈರವ್ ಬಟಾಲಿಯನ್‌ಗಳು ಸಣ್ಣ, ಚಲನಶೀಲ ಕಮಾಂಡೋಗಳನ್ನು ಹೊಂದಿದ್ದು, ಕ್ಲಿಷ್ಟಕರ ಪರಿಸರಗಳಲ್ಲಿ ಕ್ಷಿಪ್ರ ದಾಳಿ, ಕಣ್ಗಾವಲು, ಮತ್ತು ವಿಧ್ವಂಸಕ ಕ್ರಮ ಕೈಗೊಳ್ಳಲು ಸೂಕ್ತವಾಗಿವೆ.

ಒಂದು ಬಟಾಲಿಯನ್ ಸಾಮಾನ್ಯವಾಗಿ 900-1000 ಯೋಧರನ್ನು ಹೊಂದಿದ್ದು, ಓರ್ವ ಕರ್ನಲ್ ನೇತೃತ್ವ ವಹಿಸಿರುತ್ತಾರೆ. ಇದು ಸೇನೆಯ ಪ್ರಮುಖ ಸೆಣಸಾಟದ ತಂಡವಾಗಿದ್ದು, ಸ್ವತಂತ್ರ ಕಾರ್ಯಾಚರಣೆ ನಡೆಸಬಲ್ಲದು. ಪ್ರತಿಯೊಂದು ಭೈರವ್ ಬಟಾಲಿಯನ್ ಸಹ ಸಣ್ಣದಾಗಿದ್ದು, ತಲಾ ಅಂದಾಜು 120 ಸದಸ್ಯರ ನಾಲ್ಕು ತಂಡಗಳಾಗಿ ವಿಭಜಿಸಲ್ಪಟ್ಟಿರುತ್ತದೆ. ಈ ತಂಡಗಳು ತಮ್ಮದೇ ಸಂವಹನ, ಕಣ್ಗಾವಲು, ಮತ್ತು ಆಯುಧ ವ್ಯವಸ್ಥೆಗಳಿಂದ ನಿರ್ಮಿತವಾಗಿದ್ದು, ಯುದ್ಧ ರಂಗದಲ್ಲಿ ಕ್ಷಿಪ್ರ, ನಮ್ಯ ಮತ್ತು ಸ್ವಾವಲಂಬಿಯಾಗಿರುತ್ತವೆ.

ಸಾಮಾನ್ಯವಾಗಿ ಭಾರತೀಯ ಸೇನೆಯಲ್ಲಿರುವ ಒಂದು ಬ್ರಿಗೇಡ್ 3,000 ಅಥವಾ ಅದಕ್ಕೂ ಹೆಚ್ಚಿನ ಯೋಧರನ್ನು ಹೊಂದಿದ್ದು, ಅವು ಮೂರರಿಂದ ನಾಲ್ಕು ಬಟಾಲಿಯನ್‌ಗಳಾಗುತ್ತವೆ. ಇದೊಂದು ಮಧ್ಯಮ ಹಂತದ ವ್ಯವಸ್ಥೆಯಾಗಿದ್ದು, ಒಂದು ಬಟಾಲಿಯನ್‌ಗಿಂತ ದೊಡ್ಡದು ಮತ್ತು ಒಂದು ಡಿವಿಷನ್‌ನಿಂದ ಸಣ್ಣದಾಗಿರುತ್ತದೆ. ಭೈರವ್ ಕಮಾಂಡೋಗಳಿಗೆ ಬೆಂಬಲ ಒದಗಿಸುವ ಸಲುವಾಗಿ ರುದ್ರ ಬ್ರಿಗೇಡ್‌ಗಳು ಟ್ಯಾಂಕ್‌ಗಳು, ಆರ್ಟಿಲರಿ, ಇಂಜಿನಿಯರ್‌ಗಳು ಮತ್ತು ಲಾಜಿಸ್ಟಿಕ್ ವ್ಯವಸ್ಥೆಗಳನ್ನು ಹೊಂದಿವೆ.

2016 ಸರ್ಜಿಕಲ್ ದಾಳಿಗಳು ಮತ್ತು 2020ರ ಚೀನಾ ಜೊತೆಗಿನ ಗಲ್ವಾನ್ ಚಕಮಕಿಯ ಬಳಿಕ ಭೈರವ್ ಪಡೆಗಳ ಪರಿಕಲ್ಪನೆ ಬೆಳೆಯಿತು. ಆರ್ಮಿ ಟ್ರೈನಿಂಗ್ ಕಮಾಂಡ್ (ಎಆರ್‌ಟ್ರಾಕ್) ಸೇರಿದಂತೆ ಸೇನಾ ಯೋಜಕರು ಹಗುರವಾದ ಕಮಾಂಡೋ ಮಾದರಿಯ ಪಡೆಗಳನ್ನು ನೂತನ ಇಂಟಗ್ರೇಟೆಡ್ ಬ್ಯಾಟಲ್ ಗ್ರೂಪ್ (ಐಬಿಜಿ) ಒಳಗೆ ಸೇರ್ಪಡೆಗೊಳಿಸುವ ಅವಶ್ಯಕತೆಯನ್ನು ಮನಗಂಡರು. ಐಬಿಜಿಗಳು ಸ್ವಯಂಪೂರ್ಣವಾದ, ಬ್ರಿಗೇಡ್ ಗಾತ್ರದ ರಚನೆಗಳಾಗಿದ್ದು, ಪದಾತಿದಳ, ಆಯುಧಗಳು, ಮತ್ತು ವಾಯು ರಕ್ಷಣೆಯನ್ನೂ ಹೊಂದಿದ್ದು, ಯಾವುದೇ ಅಪಾಯಕ್ಕೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಬಲ್ಲವು. ಈ ವ್ಯವಸ್ಥೆಯಡಿ ರುದ್ರ ಬ್ರಿಗೇಡ್‌ಗಳು ವಿರೋಧಿಗಳಿಗೆ ಭಾರೀ ಹೊಡೆತ ನೀಡಬಲ್ಲವಾಗಿದ್ದು, ಭೈರವ್ ಬಟಾಲಿಯನ್‌ಗಳು ಕ್ಷಿಪ್ರ ಮತ್ತು ನಿಖರ ಹೊಡೆತ ನೀಡಬಲ್ಲವು.

ಕನಿಷ್ಠ ಐದು ಭೈರವ್ ಬಟಾಲಿಯನ್‌ಗಳನ್ನು ಈಗಾಗಲೇ ನಿರ್ಮಿಸಲಾಗಿದ್ದು, ಮೊದಲ ತಂಡಗಳನ್ನು ಸದ್ಯದಲ್ಲೇ ಉತ್ತರ, ಪೂರ್ವ ಮತ್ತು ಪಶ್ಚಿಮ ಕಮಾಂಡ್‌ಗಳಿಗೆ ನಿಯೋಜಿಸಲಾಗುತ್ತದೆ. ಸೈನಿಕರನ್ನು ಪದಾತಿ ದಳದ ಬಟಾಲಿಯನ್‌ಗಳಲ್ಲಿನ ಘಾತಕ್ ಪ್ಲಟೂನ್‌ಗಳಿಂದ ಆರಿಸಲಾಗುತ್ತದೆ. ಅವರಿಗೆ ದಾಳಿ ಮತ್ತು ಸನಿಹ ಯುದ್ಧದ ತರಬೇತಿ ನೀಡಲಾಗುತ್ತದೆ. ಒಂದು ಪ್ಲಟೂನ್ 30-40 ಯೋಧರನ್ನು ಹೊಂದಿದ್ದು, ಲೆಫ್ಟಿನೆಂಟ್ ಅದರ ನೇತೃತ್ವ ವಹಿಸುತ್ತಾರೆ. ಇದು ಸೇನೆಯ ಅತ್ಯಂತ ಸಣ್ಣ ಕಾರ್ಯತಂತ್ರದ ಪಡೆ. ಭೈರವ್ ಪಡೆಗಳಿಂದ ಆಯ್ಕೆಯಾಗುವ ವಿಭಾಗಗಳು ಕಮಾಂಡೋ, ಪರ್ವತ ಅಥವಾ ಅರಣ್ಯ ಯುದ್ಧಗಳಲ್ಲಿ ಡಿಸ್ಟಿಂಗ್ವಿಷ್ಡ್ (ಡಿಎಸ್) ಗ್ರೇಡ್‌ಗಳನ್ನು ಹೊಂದಿದ್ದು, ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಸ್ಕೂಲ್ (ಎಚ್ಎಡಬ್ಲ್ಯುಎಸ್), ಕೌಂಟರ್ ಇನ್ಸರ್ಜೆನ್ಸಿ ಆ್ಯಂಡ್ ಜಂಗಲ್ ವಾರ್‌ಫೇರ್ ಸ್ಕೂಲ್ (ಸಿಐಜೆಡಬ್ಲ್ಯುಎಸ್) ಮತ್ತು ಪ್ಯಾರಾ ಸ್ಪೆಷಲ್‌ ಫೋರ್ಸಸ್‌ಗಳ ಅನುಭವಿ ತರಬೇತುದಾರರನ್ನು ಹೊಂದಿರುತ್ತವೆ. ಅವರ ಆರಂಭಿಕ ತರಬೇತಿ ಎರಡೂವರೆ ತಿಂಗಳು ಇರಲಿದ್ದು, ಹೆಚ್ಚುವರಿ ತರಬೇತಿಗಳನ್ನು ಒದಗಿಸಲಾಗುತ್ತದೆ.

ಭೈರವ್ ಬಟಾಲಿಯನ್‌ಗಳು ವೇಗವಾಗಿ ಸಾಗುವ, ಹಗುರ ವಾಹನಗಳು, ಸಣ್ಣ ಬೋಟುಗಳು ಮತ್ತು ಲಾಯ್ಟರಿಂಗ್ ಕ್ಷಿಪಣಿಗಳನ್ನು ಅಳವಡಿಸಿರುವ ಡ್ರೋನ್‌ಗಳನ್ನು ಹೊಂದಿದ್ದು, ಕಣ್ಗಾವಲು ಮತ್ತು ನಿಖರ ದಾಳಿ ನಡೆಸಬಲ್ಲವು. ಈ ಪಡೆಗಳ ಆಯುಧಗಳಲ್ಲಿ ಮೋರ್ಟಾರ್‌ಗಳು (ಸಣ್ಣದಾದ, ಸಾಗಿಸಬಹುದಾದ ಗನ್‌ಗಳಾಗಿದ್ದು, ಬಾಂಬ್‌ಗಳೆಂದು ಕರೆಯುವ ಸ್ಫೋಟಕ ಶೆಲ್‌ಗಳನ್ನು ಎತ್ತರದ, ಬಾಗಿದ ಪಥದಲ್ಲಿ ಸಿಡಿಸುತ್ತವೆ), ಮೆಷಿನ್ ಗನ್‌ಗಳು, ಮತ್ತು ಟ್ಯಾಂಕ್ ನಿರೋಧಕ ಕ್ಷಿಪಣಿಗಳು, ಮತ್ತು ಇಲೆಕ್ಟ್ರಾನಿಕ್ ಹಾಗೂ ಗುಪ್ತಚರ ಉಪಕರಣಗಳು ಸೇರಿವೆ. ಪ್ಯಾರಾ ಸ್ಪೆಷಲ್ ಪಡೆಗಳ ರೀತಿಯಲ್ಲದೆ, ಇವು ವಿಮಾನಗಳಿಂದ ಸಾಮಗ್ರಿಗಳ ಪೂರೈಕೆಯನ್ನು ಅವಲಂಬಿಸದೆ, ಭೂಮಿ ಮತ್ತು ಹೆಲಿಕಾಪ್ಟರ್ ಆಧಾರಿತ ಕಾರ್ಯಾಚರಣೆಗಳಲ್ಲಿ ಪ್ರಾವೀಣ್ಯತೆ ಸಂಪಾದಿಸಿರುತ್ತವೆ.

ಯುದ್ಧದ ಸಂದರ್ಭದಲ್ಲಿ, ಭೈರವ್ ವಿಭಾಗಗಳು ಶತ್ರು ನೆಲೆಗಳ ಮೇಲೆ ದಾಳಿ ನಡೆಸಿ, ಪೂರೈಕೆ ಸರಪಳಿ ಕಡಿತಗೊಳಿಸಿ, ರುದ್ರ ಬ್ರಿಗೇಡ್‌ಗಳು ನುಗ್ಗುವ ಮುನ್ನವೇ ಶತ್ರುಗಳನ್ನು ದುರ್ಬಲಗೊಳಿಸಿರುತ್ತವೆ. ಇದು ಪ್ಯಾರಾ ಸ್ಪೆಷಲ್ ಪಡೆಗಳ ಒತ್ತಡ ಕಡಿಮೆಗೊಳಿಸಿ, ಯುದ್ಧಭೂಮಿಯ ಕಮಾಂಡರ್‌ಗಳಿಗೆ ಸಣ್ಣ, ನಿಖರ ದಾಳಿಗಳಿಗೆ ಹೆಚ್ಚಿನ ಅನುಕೂಲತೆ ಒದಗಿಸುತ್ತದೆ. ಜೊತೆಯಾಗಿ, ಭೈರವ್ ಮತ್ತು ರುದ್ರ ರಚನೆಗಳು ವೇಗವಾದ ನಿರ್ಧಾರ ಕೈಗೊಳ್ಳುವಿಕೆ, ಸರಳ ಸಾಗಾಣಿಕೆ ಮತ್ತು ಹೆಚ್ಚಿನ ಯುದ್ಧ ಸಿದ್ಧತೆಗಳನ್ನು ಸೇನೆಗೆ ಒದಗಿಸುತ್ತವೆ.

ಇದು ರಕ್ಷಣಾ ಮನಸ್ಥಿತಿಯಿಂದ ಭಾರತ ಆಧುನಿಕ, ತಂತ್ರಜ್ಞಾನ ಆಧಾರಿತ, ಪಡೆಯಾಗಿ ಬದಲಾಗುವುದಕ್ಕೆ ಸಾಕ್ಷಿಯಾಗಿದೆ. ಭೈರವ್ ಮತ್ತು ರುದ್ರ ವಿಭಾಗಗಳು ಹಳೆ ಕಾಲದ ಧೈರ್ಯ ಮತ್ತು ಆಧುನಿಕ ಯುದ್ಧೋಪಕರಣಗಳ ಮಿಶ್ರಣವಾಗಿ, ಸ್ಮಾರ್ಟ್ ಆಗಿ ಹೋರಾಡುವ, ಮತ್ತು ಕ್ಷಿಪ್ರವಾಗಿ ದಾಳಿ ನಡೆಸುವ ಭಾರತದ ನಿರ್ಧಾರಕ್ಕೆ ಸಾಕ್ಷಿಯಾಗಿವೆ. ಮಂಜುಗಟ್ಟಿದ ಪರ್ವತಗಳಿಂದ ಬಿಸಿಯಾದ ಮರುಭೂಮಿಗಳ ತನಕ, ಈ ವ್ಯವಸ್ಥೆಗಳು ಡ್ರೋನ್‌ಗಳು, ಇಲೆಕ್ಟ್ರಾನಿಕ್ ದಾಳಿಗಳು ಅಥವಾ ಹೈಬ್ರಿಡ್ ಯುದ್ಧಗಳಂತಹ ಆಧುನಿಕ ದಾಳಿಗಳನ್ನು ಅಸಾಧಾರಣ ವೇಗ ಮತ್ತು ನಿಖರತೆಯಿಂದ ನಿವಾರಿಸಲು ವಿನ್ಯಾಸಗೊಂಡಿವೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಸಾಲದ ಹೊರೆ! ಆದರೆ, ಇನ್ನೂ ಅಪಾಯದ ಗಂಟೆ ಮೊಳಗಿಲ್ಲ ಏಕೆ? ಇಲ್ಲಿದೆ ಮಾಹಿತಿ...

ಮಹಿಳಾ ಏಕದಿನ ವಿಶ್ವಕಪ್ 2025: ಚೊಚ್ಚಲ ಪ್ರಶಸ್ತಿ ಗೆದ್ದ ಬೆನ್ನಲ್ಲೇ 'ನಾಯಕತ್ವ' ತ್ಯಜಿಸಲು ಹರ್ಮನ್‌ಪ್ರೀತ್ ಕೌರ್ ಗೆ ಹೆಚ್ಚಿದ ಒತ್ತಡ! ಕಾರಣವೇನು?

ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ: ಈಗಿನ ಸಿನಿಮಾಗಳಲ್ಲಿ ಸಾಮಾಜಿಕ ಕಾಳಜಿ, ಗುಣಮಟ್ಟ ಕ್ಷೀಣ- ಸಿಎಂ ಸಿದ್ದರಾಮಯ್ಯ

ಭಾರತಕ್ಕೆ ಮೆಹುಲ್ ಚೋಕ್ಸಿ ಹಸ್ತಾಂತರ ಮುಂದೂಡಿಕೆ: 'ಸುಪ್ರೀಂ'ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹೊಸ ತಂತ್ರ!

ಭಾರತದಲ್ಲಿ ಕುಟುಂಬ ರಾಜಕೀಯ ಜನ್ಮಸಿದ್ಧ ಹಕ್ಕು ಎನ್ನುವಂತಾಗಿದೆ: ಶಶಿ ತರೂರ್

SCROLL FOR NEXT