ಇತ್ತೀಚೆಗೆ ಅಮೆರಿಕ ಉಪಾಧ್ಯಕ್ಷ ಜೆಡಿ ವಾನ್ಸ್ ಸಾರ್ವಜನಿಕ ಸಂವಾದವೊಂದರಲ್ಲಿ ಹೇಳಿದ ಕೆಲವು ಮಾತುಗಳು ಭಾರತೀಯರ ನಡುವೆ ಚರ್ಚೆ ಎಬ್ಬಿಸಿದೆ. ಭಾರತೀಯ ಸಂಜಾತ ಮಹಿಳೆ ಉಷಾರನ್ನು ತಮ್ಮ ಬಾಳ ಸಂಗಾತಿಯಾಗಿ ಹೊಂದಿರುವ ವಾನ್ಸ್, ತನ್ನ ಹೆಂಡತಿ ಎಂದಾದರೂ ಕ್ರೈಸ್ತ ಮತ ಒಪ್ಪಿಕೊಳ್ಳುತ್ತಾಳೆ ಎಂಬ ನಿರೀಕ್ಷೆ ಇದೆ ಎಂದು ಮಾತನಾಡಿರುವುದು ಹಾಗೂ ತಮ್ಮ ಮಕ್ಕಳನ್ನು ಕ್ರೈಸ್ತರಾಗಿ ಬೆಳೆಸುತ್ತಿರುವ ಬಗ್ಗೆ ಗರ್ವದಿಂದ ಮಾತನಾಡಿರುವುದು ಚರ್ಚೆಗಳು ಹುಟ್ಟಿಕೊಂಡಿರುವ ಹಿನ್ನೆಲೆ.
ಅಷ್ಟೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯಗಳ ಬಗ್ಗೆ ಮಾತನಾಡುವ ಅಮೆರಿಕದಲ್ಲಿ ‘ಕ್ರೈಸ್ತರಾದರೆ ಮಾತ್ರ ಪರಿಪೂರ್ಣ’ ಎಂಬ ಚಿಂತನೆ ತಲೆದೋರಿರುವುದೇಕೆ ಎನ್ನುವುದು ಟೀಕಾಕಾರರ ಪ್ರಶ್ನೆ. ನಿನ್ನ ಹೆಂಡತಿ ಕ್ರೈಸ್ತಳಾಗಿಯೇ ಪರಿವರ್ತಿತಳಾಗಬೇಕು ಎಂದೇಕೆ ಬಯಸುತ್ತೀಯಾ? ಅಲ್ಲದೇ, ಸಮಾನ ಹಕ್ಕಿನ ಬಗ್ಗೆ ಮಾತನಾಡುವ ಅಮೆರಿಕದಲ್ಲಿ ಅಧಿಕಾರಸ್ಥನೊಬ್ಬ ತನ್ನ ಮಕ್ಕಳಿಗೆ ಅವರ ಪ್ರಾಪ್ತ ವಯಸ್ಸಿನಲ್ಲಿ ತಾಯಿಯ ಇಲ್ಲವೇ ತಂದೆಯ ಮತವನ್ನು, ನಂಬಿಕೆಯನ್ನು ಅವರಾಗಿಯೇ ಆಯ್ದುಕೊಳ್ಳುವುದಕ್ಕೆ ಅನುವು ಮಾಡಿಕೊಡಬೇಕಲ್ಲವೇ? ವ್ಯಕ್ತಿಯೊಬ್ಬ ತಾನು ಗರ್ವದಿಂದ ಕ್ರೈಸ್ತನೆಂದೋ, ಮುಸ್ಲಿಂ ಎಂದೋ, ಯಹೂದಿಯೆಂದೋ ಹೇಳಿಕೊಳ್ಳುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಆದರೆ ಜಗತ್ತು ಸಹ ಅದೇ ದಾರಿಗೆ ಬರಬೇಕು ಎಂದುಕೊಳ್ಳುವುದರಲ್ಲೇ ಸಮಸ್ಯೆ ಶುರುವಾಗುತ್ತದೆ. ಜೆಡಿ ವಾನ್ಸ್ ಮಾತುಗಳಲ್ಲಿ ಇಂಥದೊಂದು ಧೋರಣೆ ಪ್ರತಿಫಲಿಸಿರುವುದರಿಂದಲೇ ಅದು ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ಇಲ್ಲದಿದ್ದರೆ ಅದು ಗಂಡ-ಹೆಂಡತಿ ನಡುವೆ ಪ್ರಸ್ತುತವಾಗುವ ಮಾತು, ನಾವಾದರೂ ಏಕೆ ತಲೆಕೆಡಿಸಿಕೊಳ್ಳೋಣ ಎನ್ನಬಹುದಿತ್ತು. ಇಂಥ ಮಾತುಗಳಿಂದ ಆತನ ಪತ್ನಿ ಉಷಾಗೆ ಏನೂ ತೊಂದರೆ ಇಲ್ಲವಾದರೆ ನಾವೇಕೆ ಅದರ ಬಗ್ಗೆ ಚರ್ಚಿಸಬೇಕು ಎಂದುಕೊಳ್ಳಬಹುದಿತ್ತು.
ನಮ್ಮದು ಮಾತ್ರವೇ ಸರಿದಾರಿ. ಉಳಿದವರ ಪ್ರತಿಭೆ, ಸಮಾಜಕ್ಕೆ ಕೊಡುಗೆ, ತಮ್ಮೊಂದಿಗಿನ ಬಾಂಧವ್ಯ ಇವೆಲ್ಲವೂ ಉತ್ತಮವೇ ಆಗಿದ್ದರೂ ತಮ್ಮ ಮತದೊಂದಿಗೆ ಹೊಂದಾಣಿಕೆ ಆಗದ ಹೊರತೂ ಅವರನ್ನು ಒಪ್ಪಲಾಗದು ಎಂಬ ಧೋರಣೆಯಿಂದ ಜಗತ್ತಿಗೆ ಹಲವು ಬಗೆಯ ಅನ್ಯಾಯಗಳಾಗಿವೆ. ಇವನ್ನು ಚರ್ಚಿಸುವುದಕ್ಕೆ ಜೆಡಿ ವಾನ್ಸ್ ಮನೋಧೋರಣೆಯನ್ನು ನೆಪವಾಗಿಟ್ಟುಕೊಳ್ಳೋಣ. ಏಕೆಂದರೆ ‘ಆಧುನಿಕ’ರಾದ ಮಾತ್ರಕ್ಕೆ ಇಂಥ ಧೋರಣೆಗಳು ನಶಿಸುತ್ತವೆ ಎಂದಾಗಿದ್ದರೆ, ಶಿಕ್ಷಣ-ಅಧಿಕಾರ-ಹಣ ಎಲ್ಲದರಲ್ಲೂ ಸಂಪನ್ನವಾಗಿರುವ ಜೆಡಿ ವಾನ್ಸ್ ಥರದ ವ್ಯಕ್ತಿ, “ತನ್ನ ಹೆಂಡತಿ ಕನ್ವರ್ಟ್ ಆಗುವುದಕ್ಕೆ ಕಾಯುತ್ತಿದ್ದೇನೆ” ಎಂಬರ್ಥದಲ್ಲಿ ಮಾತನಾಡುವ ಸನ್ನಿವೇಶ ಬರಬಾರದಾಗಿತ್ತು.
ಜೆಡಿ ವಾನ್ಸ್ ಬಗ್ಗೆ ಚರ್ಚಿಸುವುದು ಈ ಅಂಕಣದ ಉದ್ದೇಶವಲ್ಲ. ಆದರೆ, ಎಲ್ಲವೂ ತಮ್ಮ ಮತಗ್ರಂಥಗಳಿಗೆ ಹೊಂದಿಕೆಯಾಗಬೇಕು ಎಂಬ ಪಾಶ್ಚಾತ್ಯ ಧೋರಣೆಗೂ ವೈಯಕ್ತಿಕ ನೆಲೆಯಲ್ಲಿ ಜೆಡಿ ವಾನ್ಸ್ ಧೋರಣೆಗೂ ತುಂಬ ವ್ಯತ್ಯಾಸವೇನಿಲ್ಲ. ಈ ಧೋರಣೆ ಬಹುದೊಡ್ಡ ಅಪಚಾರ ಮಾಡಿರುವುದು ಇತಿಹಾಸಕ್ಕೆ.
ನಮಗೆಲ್ಲ ಪಠ್ಯ ಪುಸ್ತಕ ಹಾಗೂ ಸಾಮಾನ್ಯ ಗೂಗಲ್ ಹುಡುಕಾಟದಲ್ಲಿ ಸಹ ಭಾರತವು ಐದು ಸಾವಿರ ವರ್ಷಗಳ ನಾಗರಿಕತೆ ಇತಿಹಾಸ ಹೊಂದಿದೆ ಎಂಬೊಂದು ವಾಕ್ಯವನ್ನು ಸಾಮಾನ್ಯವಾಗಿ ತಲೆಗಿಳಿಸಲಾಗಿದೆ. ಈ ಪ್ರಾಚೀನತೆಯನ್ನಿಟ್ಟುಕೊಂಡೇ ನಾವು ಸಹ ಅಭಿಮಾನಪಟ್ಟುಕೊಂಡಿರುತ್ತೇವೆ.
ಅದೇಕೆ ಈ ಕಾಲಮಿತಿ ಭಾರತದ ವಿಚಾರದಲ್ಲಾಗಲೀ, ಇತರರ ವಿಚಾರದಲ್ಲಾಗಲೀ ಇನ್ನೂ ಹಿಂದಕ್ಕೆ ಹೋಗಲಾರದು ಎಂಬ ಪ್ರಶ್ನೆ ಹಾಕಿಕೊಂಡರೆ ಅಲ್ಲೂ ಮತ ಕಾರಣವೇ ಇದೆ. ಏಕೆಂದರೆ ಬೈಬಲ್ ಪ್ರಕಾರ ಭೂಮಿಯಲ್ಲಿ ಸೃಷ್ಟಿಕಾರ್ಯವಾಗಿರುವುದೇ ಆರು ಸಾವಿರ ವರ್ಷಗಳ ಹಿಂದಷ್ಟೇ. ಹೀಗಾಗಿ ಸಿಂಧು ನಾಗರಿಕತೆ ಸೇರಿದಂತೆ ಯಾವುದೇ ನಾಗರಿಕತೆಯನ್ನಾದರೂ ಇದಕ್ಕಿಂತ ಹಿಂದೆ ಕಾಲಾನುಕ್ರಮಣಿಕೆಯಲ್ಲಿ ಇರಿಸದ ರಾಜಕೀಯವೊಂದಿದೆ ಎಂದು ಇತ್ತೀಚೆಗೆ ಹಲವು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹದಿನೇಳನೇ ಶತಮಾನದ ವೇಳೆಗೆ ಇವತ್ತು ಯಾವುದನ್ನು ವಿಜ್ಞಾನ ಎನ್ನುತ್ತೇವೋ ಅದು ಜನಪ್ರಿಯ ಸ್ಥಿತಿಗೆ ಬರುವುದಕ್ಕೆ ಶುರುವಾಯಿತು ಎಂದು ಗುರುತಿಸಬಹುದು. ಚಲನೆಯ ಪ್ರಾಥಮಿಕ ನಿಯಮಗಳನ್ನು ಜಗತ್ತಿಗೆ ಕೊಟ್ಟ ಐಸಾಕ್ ನ್ಯೂಟನ್ ಸಹ ವಿಶ್ವವು ಸುಮಾರು ಕ್ರಿಸ್ತಪೂರ್ವ 4,000 ವರ್ಷಗಳ ಹಿಂದೆ ಆರಂಭವಾಯಿತೆಂಬುದನ್ನು ಒಪ್ಪಿಕೊಂಡಿದ್ದರು. ಏಕೆಂದರೆ ನ್ಯೂಟನ್ ವಿಜ್ಞಾನಿಯಾಗಿದ್ದರ ಜತೆಜತೆಗೆ ಕ್ರೈಸ್ತ ಮತಾರಾಧಕ ಸಹ. ಏಕೆಂದರೆ ಅದಕ್ಕಿಂತ ಹಿಂದೆ 1650ರಲ್ಲಿ ಆಗಿಹೋಗಿದ್ದ ಆರ್ಕಬಿಷಪ್ ಜೇಮ್ಸ್ ಉಷರ್ ಎಂಬ ವ್ಯಕ್ತಿ ಬೈಬಲ್ ವ್ಯಾಖ್ಯಾನದ ಆಧಾರದಲ್ಲಿ, ವಿಶ್ವವು ಪ್ರಾರಂಭವಾಗಿದ್ದು ಕ್ರಿಸ್ತಪೂರ್ವ 4004ನೇ ಇಸ್ವಿಯ ಭಾನುವಾರದ ಅಕ್ಟೋಬರ್ 23ರಂದು ಎಂದು ವ್ಯಾಖ್ಯಾನಿಸಿದ್ದರು. ಅಬ್ರಾಹಮಿಕ್ ಮೂಲದ್ದೇ ಮೊದಲ ಮತವಾಗಿರುವ ಯಹೂದಿಗಳ ಕ್ಯಾಲೆಂಡರ್ ಸಹ 3761 ಕ್ರಿಸ್ತಪೂರ್ವಕ್ಕೆ ಹೋಗಿ ನಿಲ್ಲುತ್ತದೆ.
ಹೀಗಾಗಿ, ಆರು ಸಾವಿರ ವರ್ಷಗಳಿಗಿಂತಲೂ ಹಿಂದೆ ಯಾವುದಾದರೂ ಜನವಸತಿ ನಾಗರಿಕತೆ ಹಂತದಲ್ಲಿ ಅಭಿವೃದ್ಧಿಯಾಗಿತ್ತು ಎಂದು ಒಪ್ಪಿಕೊಂಡ ತಕ್ಷಣವೇ ಈ ಮತಾಧಾರಿತ ಕಾಲಾನುಕ್ರಮಣಿಕೆ ಅಲ್ಲಾಡಿಹೋಗುತ್ತದೆ. ತಮ್ಮ ದೇವರು ಸೃಷ್ಟಿಕಾರ್ಯ ಮಾಡುವುದಕ್ಕೆ ಮುಂಚೆಯೇ ನಾಗರಿಕತೆ ಇತ್ತು ಎಂದು ಒಪ್ಪಿಕೊಳ್ಳುವುದು ಅಭಾಸವಾಗಿಹೋಗುತ್ತದಲ್ಲವೇ? ಹೀಗಾಗಿ, ನಂತರದ ವಿಜ್ಞಾನಯುಗವು ಬಿಗ್ ಬ್ಯಾಂಗ್ ಇತ್ಯಾದಿಗಳ ಮೂಲಕ ಬಿಲಿಯಾಂತರ ವರ್ಷಗಳ ಹಿಂದೆ ವಿಶ್ವಸೃಷ್ಟಿಯಾಯಿತೆಂದು ಹೇಳಿದ್ದರೂ, ನಾಗರಿಕತೆ ಹಾಗೂ ಮಾನವ ಇತಿಹಾಸ ಕಥನವನ್ನು ಮಾತ್ರ ಬಿಬ್ಲಿಕಲ್ ಪರಿಧಿಗೆ ಅಪಚಾರವಾಗದಂತೆ ಇಟ್ಟುಕೊಳ್ಳುವ ಸರ್ಕಸ್ ಒಂದನ್ನು ಪಾಶ್ಚಾತ್ಯ ವಿದ್ವಾಂಸ ವರ್ಗ ಮಾಡಿಕೊಂಡೇ ಬಂತು.
ಸಿಂಧು-ಸರಸ್ವತಿ ನಾಗರಿಕತೆಯು ವೈದಿಕ ಸಂಸ್ಕೃತಿಗಿಂತ ಭಿನ್ನ ಹೌದೇ, ಅದರ ಕಾಲ ಯಾವುದು ಎಂಬೆಲ್ಲ ಚರ್ಚೆಗಳು ಹಲವು ಆಯಾಮಗಳಲ್ಲಿವೆ. ಅದರ ಚರ್ಚೆ ಇಲ್ಲಿ ಬೇಡ. ಆದರೆ, ಭಾರತದಲ್ಲಿ ಸ್ವಾತಂತ್ರ್ಯೋತ್ತರವಾಗಿ ಸಿಕ್ಕ ಹಲವು ವೈಜ್ಞಾನಿಕ ಆಧಾರಗಳನ್ನೇ ಗಮನಿಸಿದರೆ ಅಲ್ಲೊಂದು ಸ್ವಾರಸ್ಯದ ಕತೆ ಇದೆ. 2000ದ ಹೊತ್ತಿಗೆ ಹರ್ಯಾಣದ ಬಿರ್ರಣ ಎಂಬಲ್ಲಿ ನಡೆದ ಉತ್ಖನನದಲ್ಲಿ ಸಿಕ್ಕ ಇದ್ದಿಲು ಇತ್ಯಾದಿ ಅವಶೇಷಗಳನ್ನು ಕಾರ್ಬನ್ ಡೇಟಿಂಗ್ ಗೆ ಒಳಪಡಿಸಿದಾಗ ಅದು ಸಾಮಾನ್ಯ ಶಕೆಗಿಂತ ಏಳೂವರೆ-ಆರು ಸಾವಿರ ವರ್ಷಗಳ ಹಿಂದಕ್ಕೆ ಹೋಗುವುದು ದೃಢಪಟ್ಟಿತು. ಉತ್ಖನನವಾದ ಸ್ಥಳವು ನಗರೀಕರಣಕ್ಕಿಂತ ಮುಂಚಿನ ಜನವಸತಿಯನ್ನು ಪ್ರತಿನಿಧಿಸುತ್ತಿತ್ತು. ಬಲೊಚಿಸ್ತಾನ ಪ್ರಾಂತ್ಯದಲ್ಲಿರುವ ಮೆಹರಗಢದಲ್ಲಿ ಫ್ರೆಂಚ್ ಪುರಾತತ್ತ್ವ ತಜ್ಞರೊಬ್ಬರ ನಾಯಕತ್ವದಲ್ಲಿ 1974ರಲ್ಲಿ ಉತ್ಖನನ ನಡೆದಿತ್ತು. ಅದು ಸಾರಿದ ಸಂಗತಿ ಎಂದರೆ - ಕ್ರಿಸ್ತಪೂರ್ವ 7,000 ದಿಂದ 5,500ರ ನಡುವೆ ಅಲ್ಲೊಂದು ಕೃಷಿಕೇಂದ್ರಿತ ಜನವಸತಿ ಇತ್ತು ಎಂದು. ಹರ್ಯಾಣದ ರಾಖಿಗಢಿಯಲ್ಲಿ 2023ರ ವೇಳೆಗೆ ನಡೆದ ಮೂರನೇ ಹಂತದ ಉತ್ಖನನಗಳು ಸಹ ಕ್ರಿಸ್ತಪೂರ್ವ 7,000 ವರ್ಷಗಳ ಹಿಂದೆಯೇ ಅಲ್ಲಿ ಶಿಸ್ತುಬದ್ಧ ಜನವಸತಿ ಇದ್ದಿರಬಹುದೆಂಬುದನ್ನು ಸೂಚಿಸುತ್ತವೆ.
ಇಂಥ ವಿಷಯಗಳೆಲ್ಲ ಪ್ರವರ್ಧಮಾನಕ್ಕೆ ಬರುವುದಕ್ಕೆ ಅಡ್ಡಿಯಾಗಿರುವುದು “ನಮ್ಮಿಂದಲೇ ಎಲ್ಲ ಶುರುವಾಯಿತು, ನಮ್ಮ ಮಾರ್ಗವನ್ನೇ ಎಲ್ಲರೂ ತುಳಿಯಬೇಕು” ಎನ್ನುವ ಪಾಶ್ಚಾತ್ಯ ಮನಸ್ಥಿತಿಯೇ.
ಎಲ್ಲ ಮತಗಳ ತಿರುಳೂ ಒಂದೇ ಬಿಡಿ ಎಂದು ಹೇಳುವುದು ಎಲ್ಲರನ್ನೂ ಮೆಚ್ಚಿಸುವ ಭಾಷಣಕ್ಕೆ ಸರಿಹೊಂದುವ ವಾಕ್ಯವಾಗಬಹುದು. ಆದರೆ ಮತನಂಬಿಕೆಗಳು ವ್ಯಾವಹಾರಿಕ ಜೀವನವನ್ನು ರೂಪಿಸುವ ಮನೋಧರ್ಮವನ್ನು ಸಹ ನಮಗರಿವಿಲ್ಲದಂತೆ ರೂಪಿಸುತ್ತವೆ.
ಭಾರತದ ಮತಗಳನ್ನೇ ನೀವು ವಿಶ್ಲೇಷಿಸಿ ನೋಡಿ. ವೈದಿಕವನ್ನು ವಿರೋಧಿಸಿ ಬೌದ್ಧ, ಜೈನ ಮತಗಳೆಲ್ಲ ಬಂದವು ಎಂದು ಒಂದು ಹಂತದವರೆಗೆ ವಾದಿಸಬಹುದು. ಆದರೆ ಭಾರತದಲ್ಲಿ ಹುಟ್ಟಿದ ಎಲ್ಲ ಮತಗಳಲ್ಲೂ ಇರುವ ಸಾಮ್ಯವೆಂದರೆ, ಬೇರೆ-ಬೇರೆ ವಿಧಗಳಲ್ಲಿ ಕರ್ಮ ಸಿದ್ಧಾಂತದ ಪ್ರತಿಪಾದನೆ ಹಾಗೂ ಇದೊಂದೇ ಜೀವನವಲ್ಲ ಎಂಬುದರ ಅರಿವು. ಹಾಗೆಂದೇ ವೇದವನ್ನು ಪುರಸ್ಕರಿಸುವ ಹಾಗೂ ವೇದ ಪಾರಮ್ಯ ಒಲ್ಲದ ಮತಗಳೆರಡರಲ್ಲೂ ಪುನರ್ಜನ್ಮ ಇದ್ದೇ ಇದೆ.
ಯಹೂದಿ, ಕ್ರೈಸ್ತ, ಇಸ್ಲಾಂ ಮತಗಳು ಹೇಳುತ್ತಿರುವುದರಲ್ಲಿರುವ ಒಂದು ಸಾಮ್ಯ ಎಂದರೆ ಒಂದೇ ಬದುಕಿನ ಪ್ರತಿಪಾದನೆ. ಅಂದರೆ, ಸಾವಿನ ಅನಂತರ ನೀವು ಗೋರಿಗಳಲ್ಲಿದ್ದುಕೊಂಡು ‘ಅಂತಿಮ ತೀರ್ಪಿನ ದಿನ’ಕ್ಕಾಗಿ ಕಾಯುತ್ತೀರಿ. ವಿಶ್ವವು ಕೊನೆಗೊಳ್ಳುವ ದಿನದಂದು ದೇವರು ಮತ್ತು ಪ್ರವಾದಿಯರೆಲ್ಲ ಬಂದು ಯಾರು ಸ್ವರ್ಗಕ್ಕೆ ಹೋಗಬೇಕು, ಮತ್ಯಾರು ನರಕಕ್ಕೆ ಎಂಬುದು ನಿಶ್ಚಯವಾಗುತ್ತದೆ.
ಭಾರತದ ಮತಗಳಲ್ಲಿ ಹಾಗಲ್ಲ. ನೀನು ಯಾರಿಗೋ ಮೋಸ ಮಾಡಿ ಲಾಭ ಮಾಡಿಕೊಂಡಿರುವುದನ್ನು ಈಗೇನೋ ಸಂಭ್ರಮಿಸುತ್ತಿರಬಹುದು. ಅದಕ್ಕೆ ನೀನು ಬೆಲೆ ತೆರಲೇಬೇಕು, ಈಗಲ್ಲದಿದ್ದರೆ ಮುಂದಿನ ಜನ್ಮದಲ್ಲಿ! ಭಾರತದ ಯಾವ ಮತಗಳಲ್ಲೂ ಸ್ವರ್ಗ-ನರಕಗಳು ಶಾಶ್ವತವಾಗಿ ತಂಗುವ ಸ್ಥಾನವೇ ಅಲ್ಲ.
ಆರ್ಥಿಕವಾಗಿ ಸಹ ಇದು ಭಿನ್ನ ಮನೋಭೂಮಿಕೆಯನ್ನೇ ರೂಪಿಸುತ್ತದೆ. ಇರುವುದೊಂದೇ ಜೀವನ, ಅನುಭವಿಸಿಬಿಡು ಎಂಬ ರೋಚಕ ಯೋಚನೆಗಿಲ್ಲಿ ಜಾಗವಿಲ್ಲ.
ವ್ಯಾವಹಾರಿಕ ಜಗತ್ತಿನಲ್ಲಿ ವ್ಯಕ್ತಿ ಮತ್ತು ದೇಶಗಳು ಐಡೆಂಟಿಟಿ ಇಲ್ಲದೇ ಬದುಕಲಾರವು. ಈ ಐಡೆಂಟಿಟಿ ಎಂಬುದು ಆಗಾಗ ಬದಲಾಗುತ್ತಿರುತ್ತದೆ. ಹಣ, ಅಧಿಕಾರ, ಮತ, ಸಂಸ್ಕೃತಿ ಹೀಗೆಲ್ಲ ಹಲವು ಬಗೆಗಳಲ್ಲಿ ಐಡೆಂಟಿಟಿ ಕಟ್ಟಿಕೊಳ್ಳಲಾಗುತ್ತದೆ. ಇತ್ತೀಚಿನ ಹಲವು ದಶಕಗಳಲ್ಲಿ ಪಾಶ್ಚಾತ್ಯ ಜಗತ್ತಿನ ಐಡೆಂಟಿಟಿ ಹಣದ್ದಾಗಿತ್ತು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಡಾಲರಿನದ್ದಾಗಿತ್ತು. ಡಾಲರ್ ಬಲದಿಂದ ಭಾರತದಂಥ ದೇಶಗಳಿಂದ ಎಂಥದೇ ಪ್ರತಿಭೆಗಳನ್ನು ತನ್ನವರನ್ನಾಗಿ ಖರೀದಿಸಬಹುದಾಗಿತ್ತು, ಯಾವುದೇ ಸಂಪನ್ಮೂಲಗಳನ್ನು ತನ್ನ ನಾಗರಿಕರಿಗೆ ಕೇವಲ ಡಾಲರ್ ಛಾಪಿಸುವ ಸಾಮರ್ಥ್ಯ ಇಟ್ಟುಕೊಂಡು ಒದಗಿಸಿಕೊಡಬಹುದಾಗಿತ್ತು, ತನ್ನ ಮಾತು ಕೇಳದ ಯಾವುದೇ ದೇಶದ ಅಧಿಕಾರ ಕೇಂದ್ರವನ್ನೇ ಇದೇ ಡಾಲರಿನ ಬಲ ಉಪಯೋಗಿಸಿಕೊಂಡು ಬದಲಾಯಿಸಿಬಿಡಬಹುದಾಗಿತ್ತು. ಅಂಥದೊಂದು ಡಾಲರ್ ವ್ಯವಸ್ಥೆ ಬಲ ಕಳೆದುಕೊಳ್ಳಲಿರುವ ಆರಂಭದ ಘಟ್ಟದಲ್ಲಿ ಜಗತ್ತಿದೆ.
ಹಾಗೆಂದೇ ಅಮೆರಿಕ ಮತ್ತು ಪಾಶ್ಚಾತ್ಯ ಜಗತ್ತು ಮತ್ತೆ ಕ್ರೈಸ್ತ ಐಡೆಂಟಿಟಿಯಲ್ಲಿ ತನ್ನ ಪ್ರಾಬಲ್ಯ ಹಾಗೂ ಗುರುತುಗಳನ್ನು ಜಳಪಳಿಸುವ ಸಾಧ್ಯತೆಗಳಿವೆ. ಅಮೆರಿಕದಲ್ಲಿ ನೆಲೆ ನಿಂತು ಹಣಕಾಸು ಯಶಸ್ಸು ಸಾಧಿಸಿರುವ ಭಾರತೀಯರನ್ನು ಗುರಿಯಾಗಿರಿಸಿಕೊಂಡು ಹಿಂಸೆಯ ಘಟನೆಗಳು ವರದಿಯಾಗುವುದಕ್ಕೆ ಪ್ರಾರಂಭವಾಗಿವೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಬಹುದು.
ಹೆಂಡತಿ ಕ್ರೈಸ್ತಳಾಗದೇ ಉಳಿದಿರುವುದೊಂದು ಕುಂದು ಎಂಬರ್ಥದಲ್ಲಿ ಜೆಡಿ ವಾನ್ಸ್ ಮಾತನಾಡಿರುವುದು ಕೇವಲ ಗಂಡ-ಹೆಂಡತಿ ನಡುವಿನ ವಿಷಯ ಅಲ್ಲ. ಅಮೆರಿಕದಲ್ಲಿ ಅಧಿಕಾರಸ್ಥರಾಗಿರುವ ಹಾಗೂ ಅವರನ್ನು ಬೆಂಬಲಿಸಿರುವ ಅಲ್ಲಿನ ಜನತೆಯ ಬಹುದೊಡ್ಡ ಭಾಗದ ಮನೋಧರ್ಮದ ಪ್ರತಿಫಲನವಿದು.
- ಚೈತನ್ಯ ಹೆಗಡೆ
cchegde@gmail.com