ಕ್ಯಾನ್ಸರ್ ಎಂಬ ಶಬ್ದ ಕೇಳಿದರೆ ಈಗಲೂ ಅನೇಕರು ಭಯದಿಂದ ನಡುಗುತ್ತಾರೆ. ಆದರೆ ವೈದ್ಯಕೀಯ ಕ್ಷೇತ್ರದ ಪ್ರಗತಿ ಮತ್ತು ಜನರಲ್ಲಿ ಅರಿವು ಹೆಚ್ಚುತ್ತಿರುವುದರಿಂದ ಕ್ಯಾನ್ಸರನ್ನು ಸಮಯದಲ್ಲಿ ಪತ್ತೆಹಚ್ಚಿ ನಿಯಂತ್ರಿಸುವುದು ಸಾಧ್ಯವಾಗಿದೆ. ಔಷಧೋಪಚಾರಗಳ ಜೊತೆಗೆ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಗಳು ಕೂಡ ರೋಗನಿಗ್ರಹಕ್ಕೆ ಮಹತ್ವದ ಪಾತ್ರ ವಹಿಸುತ್ತವೆ.
ಇತ್ತೀಚಿನ ಸಂಶೋಧನೆಗಳು ತೋರಿಸಿರುವಂತೆ ಕೆಲವು ಮನೆಮದ್ದುಗಳು ಮತ್ತು ಸ್ವಾಭಾವಿಕ ಆಹಾರ ಪದಾರ್ಥಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಹಸಿಮೆಣಸು, ಅರಿಶಿನ, ಟೊಮಾಟೋ, ತುಳಸಿ, ಬೆಟ್ಟದ ನೆಲ್ಲಿಕಾಯಿ, ಪಾಲಕ್ ಸೊಪ್ಪು ಮೊದಲಾದವುಗಳಲ್ಲಿ ಇರುವ ಉತ್ಕರ್ಷಣಾ ವಿರೋಧಿ ಅಂಶಗಳು (ಆಂಟಿ ಆಕ್ಸಿಡೆಂಟ್‌ಗಳು) ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇಂತಹ ಸಸ್ಯಸಾರ ಮತ್ತು ಮನೆಮದ್ದುಗಳ ಸೇವನೆ ಮತ್ತು ಉಪಯೋಗದಿಂದ ಹಲವಾರು ರೋಗಗಳ ಬಾರದಂತೆ ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳಬಹುದು. ಈ ಬಗ್ಗೆ ಒಮ್ಮೆ ದೃಷ್ಟಿ ಹಾಯಿಸೋಣ ಬನ್ನಿ.
ಅರಿಶಿನ ಭಾರತೀಯ ಅಡುಗೆಯಲ್ಲಿ ಬಳಸುವ ಪ್ರಧಾನ ವಸ್ತುವಾಗಿದೆ ಮತ್ತು ಸಕ್ರಿಯ ಸಂಯುಕ್ತ ಕರ್ಕ್ಯುಮಿನ್‌ಗೆ ಹೆಸರುವಾಸಿಯಾಗಿದೆ. ಕರ್ಕ್ಯುಮಿನ್ನಿನಲ್ಲಿ ಉರಿಯೂತ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳಿವೆ. ಇದರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಲಾಗಿದೆ. ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಮತ್ತು ನಿರ್ವಹಣೆಯಲ್ಲಿಯೂ ಅರಿಶಿನ ಮಹತ್ವದ ಪಾತ್ರ ವಹಿಸಬಹುದು ಎಂಬುದರ ಕುರಿತು ಸಂಶೋಧನೆ ನಡೆಯುತ್ತಿದೆ. ಕ್ಯಾನ್ಸರಿನ ತೊಂದರೆ ಇರುವವರಿಗೆ ಅರಿಶಿನದ ನಿಯಮಿತ ಸೇವನೆ ಹಿತಕಾರಿ ಎಂದು ಶಿಫಾರಸು ಮಾಡಲಾಗಿದೆ. ದಿನನಿತ್ಯದ ಆಹಾರದಲ್ಲಿ ಅರಿಶಿನವನ್ನು ಸೇರಿಸಿದಿರೆ ಅದರ ಚಿಕಿತ್ಸಕ ಗುಣಗಳ ಲಾಭ ರೋಗಿಗಳಿಗೆ ಖಂಡಿತ ಆಗುತ್ತದೆ. ಕ್ಯಾನ್ಸರ್ ತಡೆಗಟ್ಟುವಿಕೆಯ ಹೊರತಾಗಿ ಕ್ಯಾನ್ಸರ್ ಗಡ್ಡೆಯ ಬೆಳವಣಿಗೆಗೆ ಕಾರಣವಾಗುವ ಜೀವಕೋಶಗಳನ್ನು ನಿಯಂತ್ರಣ ಮಾಡಲು ಕರ್ಕ್ಯುಮಿನ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅಧ್ಯಯನ ಮಾಡಲಾಗುತ್ತಿದೆ. ಒಂದು ಚಿಟಿಕೆ ಕರಿಮೆಣಸಿನೊಂದಿಗೆ ಅರಿಶಿನವನ್ನು ಸೇರಿಸಿದಾಗ ದೇಹದಲ್ಲಿ ಕರ್ಕ್ಯುಮಿನ್‌ನ ಹೀರಿಕೊಳ್ಳುವಿಕೆ ಗಮನಾರ್ಹವಾಗಿ ಹೆಚ್ಚಾಗುತ್ತದೆ. ಅರಿಶಿನವನ್ನು ಬೆಚ್ಚಗಿನ ಹಾಲಿಗೆ ಬೆರೆಸಿದರೂ, ಸ್ಮೂಥಿಗಳಲ್ಲಿ ಬೆರೆಸಿದರೂ ಅಥವಾ ದೈನಂದಿನ ಅಡುಗೆಗೆ ಸೇರಿಸಿದರೂ, ದೇಹಕ್ಕೆ ಚೈತನ್ಯ, ರಕ್ಷಣೆ ಮತ್ತು ಹೊಳಪನ್ನು ತುಂಬುವ ಸರಳ ಮತ್ತು ನೈಸರ್ಗಿಕ ಮಾರ್ಗವಾಗಿದೆ.
ಟೊಮೆಟೋಗಳು ಪ್ರಾಸ್ಟೇಟ್ ಮತ್ತು ಹೊಟ್ಟೆಯ ಕ್ಯಾನ್ಸರ್ ಸೇರಿದಂತೆ ಕೆಲವು ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುವ ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿದೆ ಲೈಕೋಪೀನ್ನಿನಿಂದ ಸಮೃದ್ಧವಾಗಿವೆ. ಲೈಕೋಪೀನ್ ಸ್ವತಂತ್ರ ಅಣುಗಳನ್ನು (ಫ್ರೀ ರಾಡಿಕಲ್‌ಗಳನ್ನು) ತಟಸ್ಥಗೊಳಿಸಲು ಮತ್ತು ಜೀವಕೋಶಗಳಿಗೆ ಆಗುವ ಉತ್ಕರ್ಷಣಾ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಕ್ಯಾನ್ಸರ್ ಬೆಳವಣಿಗೆಯಲ್ಲಿ ಪ್ರಮುಖ ಅಂಶವಾಗಿದೆ. ಟೊಮೆಟೊಗಳನ್ನು ಆಹಾರದಲ್ಲಿ ನಿಯಮಿತವಾಗಿ ಸೇರಿಸುವುದು ಬಹಳ ಸರಳ. ಸಾಂಪ್ರದಾಯಿಕ ಭಾರತೀಯ ಆಹಾರಗಳಲ್ಲಿ (ಸಾರು, ಸಾಂಬಾರ್, ಉಪ್ಪಿಟ್ಟು, ಭಾತ್ ಇತ್ಯಾದಿ) ಅಥವಾ ಸಾಸ್‌ಗಳಂತೆ ಟೊಮೆಟೊಗಳನ್ನು ಬೇಯಿಸುವುದರಿಂದ ಲೈಕೋಪೀನ್‌ನ ಜೈವಿಕ ಲಭ್ಯತೆಯನ್ನು ಹೆಚ್ಚಿಸಬಹುದು, ಇದು ದೇಹವು ಈ ಪೋಷಕಾಂಶವನ್ನು ಹೀರಿಕೊಳ್ಳಲು ಮತ್ತು ಪ್ರಯೋಜನ ಪಡೆಯಲು ಸುಲಭವಾಗುತ್ತದೆ. ಕಚ್ಚಾ, ಹುರಿದ ಅಥವಾ ಮಿಶ್ರಣ ಮಾಡಿದ ವಿವಿಧ ಟೊಮೆಟೊ ಆಧಾರಿತ ಭಕ್ಷ್ಯಗಳು ಪ್ರತಿದಿನ ವಿವಿಧ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ.
ನಾವು ಅತ್ಯಂತ ಪವಿತ್ರ ಮತ್ತು ಪೂಜ್ಯ ಎಂದು ನಂಬಿರುವ ತುಳಸಿಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಇದರ ಪ್ರಮುಖ ಸಂಯುಕ್ತಗಳಲ್ಲಿ ಒಂದಾದ ಯುಜೆನಾಲ್ ವಿಶೇಷವಾಗಿ ಸ್ತನ ಕ್ಯಾನ್ಸರ್ ವಿರುದ್ಧ ಸಂಭಾವ್ಯ ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿಗೆ. ತುಳಸಿಯನ್ನು ವೈದ್ಯರು ಅದರ ಉತ್ಕರ್ಷಣ ನಿರೋಧಕ, ಉರಿಯೂತ ನಿವಾರಕ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಲಕ್ಷಣಗಳಿಗಾಗಿ ಶಿಫಾರಸು ಮಾಡುತ್ತಾರೆ. ಗಿಡಮೂಲಿಕೆ ಚಹಾಗಳಲ್ಲಿ ಅಥವಾ ಭಕ್ಷ್ಯಗಳನ್ನು ಅಲಂಕರಿಸಲು ಬಳಸುವ ತುಳಸಿಯ ನಿಯಮಿತ ಸೇವನೆಯು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆಗೆ ಸಹಾಯ ಮಾಡುತ್ತದೆ.
ಬೆಟ್ಟದ ನೆಲ್ಲಿಕಾಯಿ ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳ ಪ್ರಬಲ ಮೂಲವಾಗಿದೆ. ಈ ಸಂಯುಕ್ತಗಳು ಫ್ರೀ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಬೆಂಬಲಿಸಲು ಸಹಾಯ ಮಾಡುತ್ತವೆ. ಇವೆರಡೂ ಕ್ಯಾನ್ಸರ್ ತಡೆಗಟ್ಟುವಲ್ಲಿ ನಿರ್ಣಾಯಕವಾಗಿವೆ. ಬೆಟ್ಟದ ನೆಲ್ಲಿಕಾಯಿಯನ್ನು ಉಪ್ಪಿನಕಾಯಿ ಹಾಕಲು, ಸಾರು, ಚಿತ್ರಾನ್ನ, ತೊಕ್ಕು, ಜ್ಯೂಸ್ ಮಾಡಲು ಮತ್ತು ಒಣಗಿಸಿ ಪುಡಿ ಮಾಡಿ ಬೇಕಾದ ಭಕ್ಷ್ಯಗಳಿಗೆ ಹುಳಿ ರುಚಿಗಾಗಿ ಬಳಸುತ್ತಾರೆ. ಇದು ರೋಗನಿರೋಧಕ ಶಕ್ತಿ ಹೆಚ್ಚಾಗಲು ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ.
ಪಾಲಕ್ ಸೊಪ್ಪಿನಲ್ಲಿ ಫೋಲೇಟ್ ಅಂಶ ಸಮೃದ್ಧವಾಗಿದೆ, ಇದು ಡಿಎನ್‌ಎ ದುರಸ್ತಿ ಮತ್ತು ಸಂಶ್ಲೇಷಣೆಯಲ್ಲಿ ಪಾತ್ರವಹಿಸುವ ಬಿ ವಿಟಮಿನ್ ಆಗಿದೆ. ಆರೋಗ್ಯಕರ ಜೀವಕೋಶಗಳನ್ನು ಕಾಪಾಡಿಕೊಳ್ಳಲು ಮತ್ತು ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳನ್ನು ತಡೆಗಟ್ಟಲು ಸಾಕಷ್ಟು ಫೋಲೇಟ್ ಸೇವನೆ ಅತ್ಯಗತ್ಯ. ಸಲಾಡ್‌ಗಳು, ಸೂಪ್‌ಗಳು ಅಥವಾ ಬೇಯಿಸಿದ ಭಕ್ಷ್ಯಗಳ ಮೂಲಕ ಪಾಲಕ್ ಸೊಪ್ಪನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಕೊನೆಮಾತು: ನಾವು ಅರೋಗ್ಯದಿಂದಿರಲು ಸದಾ ದುಬಾರಿ ಔಷಧಿಗಳು ಬೇಕಾಗಿಲ್ಲ. ಬದಲಾಗಿ ನಮ್ಮ ಅಡುಗೆಮನೆಯಲ್ಲಿರುವ ಸರಳ ಪದಾರ್ಥಗಳಲ್ಲಿಯೇ ಔಷಧೀಯ ಖಜಾನೆ ಇದೆ --- ಅರಿಶಿನದ ಉರಿಯೂತ ನಿರೋಧಕ ಶಕ್ತಿಯಿಂದ ಹಿಡಿದು ನೆಲ್ಲಿಕಾಯಿಯ ವಿಟಮಿನ್ ಸಿ ಪೋಷಕಾಂಶದವರೆಗೆ. ಈ ನೈಸರ್ಗಿಕ ಆಹಾರ ಪದಾರ್ಥಗಳನ್ನು ನಿತ್ಯ ಸೇವಿಸುವುದು ನಮ್ಮ ದೇಹ-ಮನಸ್ಸಿಗೆ ಶಕ್ತಿ, ರಕ್ಷಣಾ ಸಾಮರ್ಥ್ಯ ಮತ್ತು ದೀರ್ಘಾಯುಷ್ಯ ನೀಡುವ ಸುಲಭವಾದ ಮಾರ್ಗವಾಗಿದೆ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com