ಕಳೆದ ಇಪ್ಪತೈದು ವರ್ಷಕ್ಕೂ ಹೆಚ್ಚು ಕಾಲ ಜಪಾನ್ ದೇಶ ಡಿಫ್ಲೇಷನ್ ನಲ್ಲಿತ್ತು. ಇದು ಇನ್ಫ್ಲೇಶನ್ ಗೆ ವಿರುದ್ಧವಾದದ್ದು. ಇನ್ಫ್ಲೇಶನ್ನನ್ನು ಹಣದುಬ್ಬರ ಎನ್ನುತ್ತವೆ. ಡಿಫ್ಲೇಷನ್ ಅನ್ನು ಹಣದ ಕುಸಿತ ಎನ್ನಬಹುದು. ಸರಳವಾಗಿ ಹೇಳಬೇಕೆಂದರೆ ಸಮಾಜದಲ್ಲಿನ ಸರಕು ಮತ್ತು ಸೇವೆಯ ಮೇಲಿನ ಬೆಲೆ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆಗೆ ಡಿಫ್ಲೇಷನ್ ಎನ್ನುತ್ತೇವೆ. ಉದಾಹರಣೆ ನೋಡಿ ವರ್ಷದ ನಂತರ ಭಾರತದಂತ ದೇಶದಲ್ಲಿ ಹಾಲಿನ ಬೆಲೆ 30 ರೂಪಾಯಿ ಇದದ್ದು 32 ಅಥವಾ 35 ಆಗುತ್ತೆ ಆದರೆ ಜಪಾನ್ ನಲ್ಲಿ ಹಾಲಿನ ಬೆಲೆ ಏರುವ ಬದಲು ಕುಸಿಯುತ್ತೆ. ಈ ಉದಾಹರಣೆಯನ್ನ ಸಮಾಜದ ಇತರ ಸರಕು ಮತ್ತು ಸೇವೆಗೂ ಅಳವಡಿಸಿಕೊಳ್ಳಿ.
ಸಮಾಜ ಅಭಿವೃದ್ಧಿ ಪಥದಲ್ಲಿ ಸಾಗಲು ಒಂದು ಮಟ್ಟದ ಇನ್ಫ್ಲೇಶನ್ ಅಗತ್ಯ. ನೀವು ಕೂಡಿಟ್ಟ ಹಣಕ್ಕೆ ಬಡ್ಡಿಯೇ ಇಲ್ಲ! ನೀವು ಸಾಲದಲ್ಲಿ ಕಾರು ಕೊಂಡರೆ ಅದಕ್ಕೂ ಬಡ್ಡಿಯಿಲ್ಲ. ಇತ್ತೀಚೆಗಂತೂ ನೆಗೆಟಿವ್ ಇಂಟರೆಸ್ಟ್ ಹಾವಳಿ ಬೇರೆ ಇಲ್ಲಿ ಹೆಚ್ಚಾಗಿದೆ. ಅಂದರೆ ಕಾರಿನ ಬೆಲೆ ಹತ್ತು ಸಾವಿರ ಎಂದುಕೊಳ್ಳಿ ಕಾರು ಮಾರುವ ಸಂಸ್ಥೆ ಗ್ರಾಹಕರಿಗೆ ಕಾರು ಕೊಳ್ಳಲು ಪ್ರೇರೇಪಿಸಿ ವರ್ಷದ ನಂತರ 9,800 ಕೊಟ್ಟರೆ ಸಾಕು ಎನ್ನುತ್ತದೆ! ಇಂತಹ ಸನ್ನಿವೇಶ ಪ್ರಥಮ ಒಂದೆರೆಡು ವರ್ಷ ಬಹಳ ಖುಷಿ ನೀಡುತ್ತದೆ. ಕಂಡದ್ದೆಲ್ಲಾ ಕೊಳ್ಳಬಹುದು ಎನ್ನುವ ಖುಷಿ. ಅದರಲ್ಲೂ ಹೆಚ್ಚು ವರಮಾನವಿಲ್ಲದವರಿಗೆ ಇದು ವರದಾನ. ಆದರೆ ಸಮಾಜ ಒಂದು ವರ್ಗದಿಂದ ಮುಂದೆ ಸಾಗುವುದಿಲ್ಲ ನೋಡಿ. ಹೆಚ್ಚು ಹಣವಿರವವರಿಗೆ ಇದು ಬೇಸರ ಉಂಟು ಮಾಡುತ್ತದೆ. ಜಗತ್ತಿನೆಲ್ಲೆಡೆ ಜನ ಹಣದ ಸಹಾಯದಿಂದ ಹಣವನ್ನು ದುಡಿಯುತ್ತಿದ್ದರೆ ನಾವು ಮಾತ್ರ ಕೈಕಟ್ಟಿ ಕುಳಿತ್ತಿದ್ದೇವೆ ಎನ್ನುವ ಭಾವನೆ ಜಪಾನಿನ ಹೂಡಿಕೆದಾರರಲ್ಲಿ ಬರುತ್ತಿತ್ತು. ಹೀಗಾಗಿ ಅವರು ಜಪಾನಿನಲ್ಲಿ ಹೂಡಿಕೆ ಮಾಡುವುದರ ಬದಲು ಅಮೇರಿಕಾ, ಭಾರತ, ಚೀನಾದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದರು. ಉಳ್ಳವರು ಮಾಡುವುದು ಸರಿ. ಆದರೆ ಇಲ್ಲದವರು ಸಹ ಸಾಲ ಮಾಡಿ ಹೂಡಿಕೆ ಮಾಡಲು ಶುರು ಮಾಡಿದರು. ಜಪಾನಿನಲ್ಲಿ ಸಾಲದ ಮೇಲಿನ ಬಡ್ಡಿದರ ಸೊನ್ನೆ ಇದ್ದ ಕಾರಣ ಬಹಳಷ್ಟು ಜನ ಅಲ್ಲಿಂದ ಹಣವನ್ನು ಸಾಲದ ರೂಪದಲ್ಲಿ ಪಡೆದು ಆ ಹಣವನ್ನು ಬೇರೆ ದೇಶಗಳಲ್ಲಿ ಹೂಡಿಕೆ ಮಾಡಿ ಐದಾರು ಪ್ರತಿಶತ ಹಣವನ್ನು ಗಳಿಸಿ ಕೊಳ್ಳುತ್ತಿದ್ದರು. ಇಷ್ಟು ವರ್ಷದ ಈ ಸ್ವರ್ಣ ಯುಗ ಮುಗಿದಿದೆ.
ಜಪಾನಿನಲ್ಲಿ ಇಂದಿಗೆ ಬಡ್ಡಿದರ 2.5 ರಿಂದ 2.8ರ ವರೆಗೆ ಬಂದು ನಿಂತಿದೆ. ಅಂದರೆ ಸಾಲದ ಮೇಲಿನ ಮೊತ್ತಕ್ಕೆ ಈ ದರದಲ್ಲಿ ಬಡ್ಡಿಯನ್ನು ತೆರೆಬೇಕಾಗುತ್ತದೆ. ಸಾಲದ ಮೇಲೆ ಬಡ್ಡಿಯಿಲ್ಲ ಎನ್ನುವ ಕಾರಣಕ್ಕೆ ಸಾಲ ಮಾಡಿ ಹೂಡಿಕೆ ಮಾಡಿದ್ದ ಜನರಿಗೆ ಈಗ ಸಂಕಷ್ಟ ಶುರುವಾಗಿದೆ. ಇಂದಿನ ದಿನದಲ್ಲಿ ಜಾಗತಿಕ ಮಟ್ಟದಲ್ಲಿ ಅಸ್ಥಿರತೆ ಇರುವ ಕಾರಣ ಗಳಿಸುವ ಹಣದ ಗ್ಯಾರಂಟಿ ಇಲ್ಲವಾಗಿದೆ. ಗಳಿಸಿದರೂ ಅದರಲ್ಲಿ ವಿದೇಶಿ ವಿನಿಮಯ, ತೆರಿಗೆ ಇತ್ಯಾದಿಗಳನ್ನು ತೆಗೆದು ಉಳಿಯುವುದು ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೂಡಿಕೆದಾರ ತನ್ನ ಹಣವನ್ನು ಹಿಂಪಡೆದು ಜಪಾನಿನಲ್ಲಿ ಮಾಡಿದ ಸಾಲವನ್ನು ತೀರಿಸಲು ಶುರು ಮಾಡಿದ್ದಾನೆ. ಇದಿನ್ನೂ ಆರಂಭದ ಹಂತದಲ್ಲಿದೆ. ಇದು ಪ್ರಮುಖವಾಗಿ ಎರಡು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ಒಂದು ಇದು ಅಮೇರಿಕಾ ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗುತ್ತದೆ. ಎರಡು ಜಪಾನಿನಲ್ಲಿ ಹಣದ ಹರಿವು ಹೆಚ್ಚಾಗಿಸುತ್ತದೆ. ಜನ ಸಾಲ ತೆಗೆದುಕೊಳ್ಳುವುದು ನಿಲ್ಲಿಸಿದಾಗ ಬ್ಯಾಂಕಿಂಗ್ ವ್ಯವಸ್ಥೆ ಕುಸಿತ ಕಾಣುತ್ತದೆ.
ಕಳೆದ 25 ವರ್ಷದಿಂದ ನಡೆದು ಬಂದ ದಾರಿ ಬದಲಾಗಲು ಕಾರಣಗಳೇನು ಎನ್ನುವುದನ್ನು ನೋಡೋಣ.
ಬಾಹ್ಯ ಕಾರಣಗಳು:
ಯೆನ್ ಅಮೆರಿಕನ್ ಡಾಲರ್ ಮತ್ತಿತರ ಕರೆನ್ಸಿ ಎದುರು ಕುಸಿತ ಕಂಡಿದೆ. ಟ್ರೇಡ್ ಕುಸಿತ, ಆಂತರಿಕ ಬಳಕೆ ಕಡಿಮೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಕುಸಿದ ಯೆನ್ ಆಮದು ಖರ್ಚನ್ನು ಏರಿಸುತ್ತದೆ. ಇದು ಎಲ್ಲಾ ಪದಾರ್ಥಗಳ ಬೆಲೆ ಏರಿಕೆಗೆ ಕಾರಣವಾಗುತ್ತದ್ದೆ.
ಜಾಗತಿಕವಾಗಿ ಎಲ್ಲಾ ಪದಾರ್ಥಗಳ ಬೆಲೆ ಏರಿಕೆ ಆಗಿದೆ. ಸಹಜವಾಗೇ ಅದು ಜಪಾನ್ ದೇಶದ ಮೇಲೂ ಪ್ರಭಾವ ಬೀರಿದೆ. ಪದಾರ್ಥಗಳ ಬೆಲೆ ಏರಿಕೆ ಜಪಾನ್ ದೇಶದಲ್ಲಿ ಹಣದುಬ್ಬರಕೆ ದಾರಿ ಮಾಡಿಕೊಟ್ಟಿದೆ.
ತೆರಿಗೆ ಹೆಚ್ಚಳ ಮತ್ತು ಅನಿಶ್ಚಿತತೆ ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. ಹೀಗಾಗಿ ಕಳೆದ 25 ವರ್ಷದಲ್ಲಿ ಕಾಣದ ಬೆಲೆ ಏರಿಕೆ ಇಂದು ಜಪಾನಿನ ಸಮಾಜದಲ್ಲಿ ಕಾಣುತ್ತಿದ್ದೇವೆ.
ಆಂತರಿಕ ಕಾರಣಗಳು:
ಬೆಲೆ ಏರಿಕೆ ಆಗುತ್ತಿದಂತೆ ಕೆಲಸಗಾರರ ವೇತನ ಕೂಡ ಹೆಚ್ಚಳ ಆಗಬೇಕು. ಕೆಲವೊಂದು ವರ್ಗದಲ್ಲಿ ಇದಾಗಿದೆ. ಅವರು ಖರ್ಚು ಮಾಡುತ್ತಿದ್ದಾರೆ. ಇನ್ನೊಂದು ದೊಡ್ಡ ವರ್ಗಕ್ಕೆ ವೇತನ ಹೆಚ್ಚಳ ನಿರೀಕ್ಷಿಸಿದ ಮಟ್ಟದಲ್ಲಿ ಆಗಿಲ್ಲ. ಹೀಗಾಗಿ ಬ್ಯಾಂಕುಗಳು ಠೇವಣಿ ಮೇಲೆ ಬಡ್ಡಿ ನೀಡಲು ಶುರು ಮಾಡಿವೆ.
ಸೇವೆಗಳಲ್ಲಿ ಕೂಡ ಗಣನೀಯ ಬದಲಾವಣೆಯಾಗಿದೆ. ಇದೊಂದು ವರ್ತುಲವಿದ್ದಂತೆ, ಒಂದರ ಬೆಲೆ ಹೆಚ್ಚಾದರೆ ಇನ್ನೊಂದು ಹೆಚ್ಚಾಗುತ್ತದೆ.
ಬೆಲೆ ಹೆಚ್ಚಳದ ಕಾರಣ ಆಂತರಿಕ ಬೇಡಿಕೆಯಲ್ಲಿ ಒಂದಷ್ಟು ಕುಸಿತವಾಗಿದೆ.
ಹಣದುಬ್ಬರವನ್ನು ತಹಬದಿಗೆ ತರಲು ಬ್ಯಾಂಕ್ ಆಫ್ ಜಪಾನ್ ಬಡ್ಡಿ ದರವನ್ನು ಹೆಚ್ಚಿಸಿದೆ. ಇದು ಬೇರೆಯ ಫಲಿತಾಂಶಕ್ಕೂ ಎಡೆ ಮಾಡಿಕೊಟ್ಟಿದೆ.
ಇದು ಜಪಾನ್ ದೇಶದ ಆಂತರಿಕ ಸಮಸ್ಯೆ ಎಂದು ಸುಮ್ಮನೆ ಕೂರಲಾಗುವುದಿಲ್ಲ. ಇವತ್ತಿನ ದಿನದಲ್ಲಿ ಜಗತ್ತಿನ ಎಲ್ಲಾ ಆರ್ಥಿಕತೆಯೂ ಒಂದರ ಮೇಲೆ ಇನ್ನೊಂದು ಅವಲಂಬಿತವಾಗಿವೆ. ಜಪಾನ್ ಕುಸಿತ ಕಂಡರೆ ಅದು ನೇರವಾಗಿ ಅಮೆರಿಕನ್ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಅಮೇರಿಕಾ ಕುಸಿತ ಕಂಡರೆ ಅದು ಜಗತ್ತಿನ ಇತರ ದೇಶಗಳಿಗೂ ತಟ್ಟುತ್ತದೆ. ಭಾರತದ ಐಟಿ ವಲಯ ಅಮೆರಿಕಾದ ಮೇಲೆ ಬಹಳ ಅವಲಂಬಿತವಾಗಿದೆ. ಹೀಗಾಗಿ ಅಮೇರಿಕಾ ಕುಸಿದರೆ ಅದು ಭಾರತೀಯ ಷೇರು ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತದೆ.
ಎಲ್ಲಕ್ಕೂ ಮೊದಲಿಗೆ ಜಪಾನ್ ಭಾರತದ ಎಫ್ ಡಿ ಐ ಅಂದರೆ ಫಾರಿನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಮಾಡುವ ದೇಶಗಳಲ್ಲಿ ಪ್ರಮುಖ ದೇಶವಾಗಿದೆ. ಜಪಾನ್ ಆರ್ಥಿಕತೆಯಲ್ಲಿ ಆಗುವ ಬದಲಾವಣೆ ಭಾರತದ ಹೂಡಿಕೆಯ ಮೇಲೆ ಖಂಡಿತ ಪರಿಣಾಮವನ್ನು ಬೀರುತ್ತದೆ. ಆದರೆ ಇದು ಯಾವ ಕಡೆ ಸಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು. ಜಪಾನಿಯರು ಹೂಡಿಕೆ ಮಾಡಿದ ಹಣವನ್ನು ವಾಪಸ್ಸು ಪಡೆದು ತಮ್ಮ ಸಾಲವನ್ನು ತೀರಿಸಿದರೆ ಆಗ ಬ್ಯಾಂಕುಗಳ ಬಳಿ ಹಣ ಶೇಖರಣೆಯಾಗುತ್ತದೆ. ಸಾಲಕ್ಕೆ ಬೇಡಿಕೆ ಕುಸಿಯುತ್ತದೆ. ಆಗ ಬ್ಯಾಂಕಿನ ವ್ಯವಸ್ಥೆ ಕುಸಿಯುತ್ತದೆ. ಅನ್ಯ ಮಾರ್ಗವಿಲ್ಲದೆ ಅವು ಭಾರತ ಅಥವಾ ಇನ್ನಿತರ ದೇಶದಲ್ಲಿ ಮರು ಹೂಡಿಕೆ ಮಾಡುತ್ತವೆ. ಈ ರೀತಿಯ ಬದಲಾವಣೆಗೆ ಸಮಯ ತೆಗೆದುಕೊಳ್ಳುತ್ತದೆ. ಅಷ್ಟು ಸಮಯ ಭಾರತದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ತಪ್ಪಿಸಲಾಗುವುದಿಲ್ಲ.
ಷೇರು ಮಾರುಕಟ್ಟೆ ಜೊತೆಗೆ ಬೇರೆ ಎಲ್ಲಾ ಅಭಿವೃದ್ಧಿಯ ವಿಷಯದಲ್ಲೂ ಒಂದಷ್ಟು ಹಿನ್ನಡೆಯಾಗುವುದು ತಪ್ಪಿಸಲಾಗುವುದಿಲ್ಲ. ಇವೆಲ್ಲವುಗಳ ನಡುವೆ ಒಂದಷ್ಟು ನೆಮ್ಮದಿ ತರುವ ವಿಷಯವೆಂದರೆ ಭಾರತದ ಆಂತರಿಕ ಬೇಡಿಕೆ ಮತ್ತು ಹಣದ ಹರಿವು ಬಹಳ ಚೆನ್ನಾಗಿದೆ. ಅಲ್ಲದೆ ಭಾರತ ಕೇವಲ ಜಪಾನ್ ದೇಶದ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಹೀಗಾಗಿ ಜಪಾನ್ ಕುಸಿತ ಕಂಡರೂ ಭಾರತದಲ್ಲಿ ತೀವ್ರ ಬದಲಾವಣೆ ಆಗುವುದಿಲ್ಲ. ಒಂದಷ್ಟು ತಲ್ಲಣ ತಪ್ಪಿಸಲೂ ಆಗುವುದಿಲ್ಲ.
ಕೊನೆಮಾತು: ಇವತ್ತಿಗೆ ಜಾಗತಿಕವಾಗಿ ಎಲ್ಲಾ ದೊಡ್ಡ ಆರ್ಥಿಕತೆಗಳೂ ಬೇರೆ ದೇಶಗಳ ಆರ್ಥಿಕತೆ ಜೊತೆಗೆ ಅವಲಂಬಿತವಾಗಿದೆ. ಇದು ಹೇಗೆ ಎಂದರೆ ಜಪಾನ್ ಕುಸಿತ ಅಮೇರಿಕಾ ಕುಸಿತಕ್ಕೂ, ಅಮೇರಿಕಾ ಕುಸಿತ ಜಗತ್ತಿನ ಬೇರೆ ದೇಶಗಳ ಆರ್ಥಿಕತೆ ಕುಸಿತಕ್ಕೂ ಕಾರಣವಾಗುತ್ತದೆ. ವಿಪರ್ಯಾಸವೆಂದರೆ ಜಪಾನ್ ಕುಸಿತದಿಂದ ಶುರುವಾದ ಈ ಆರ್ಥಿಕ ಕುಸಿತ ಮತ್ತಷ್ಟು ಜಪಾನ್ ಕುಸಿತಕ್ಕೆ ಕಾರಣವಾಗುತ್ತದೆ. ಈ ಎಲ್ಲಾ ಬದಲಾವಣೆಗಳನ್ನು ಬ್ಯಾಂಕ್ ಆಫ್ ಜಪಾನ್ ಗಮನಿಸುತ್ತಿರುತ್ತದೆ. ಕುಸಿತವನ್ನು ತಡೆಯಲು ಬೇಕಾಗುವ ಎಲ್ಲಾ ಮಾರ್ಗಗಳನ್ನು ಕೂಡ ಅದು ಹುಡಕುತ್ತದೆ. ಇಂದಿಗೆ ಶುರುವಾಗಿರುವ ಈ ಕುಸಿತ ಇನ್ನಷ್ಟು ಕುಸಿತವಾಗದಂತೆ ಅದು ತಡೆಯುವ ಪ್ರಯತ್ನವನ್ನು ಮಾಡುತ್ತದೆ. ಭಾರತ ಸರಕಾರ, ಭಾರತೀಯ ರಿಸರ್ವ್ ಬ್ಯಾಂಕು ಕೂಡ ಜಪಾನಿನಲ್ಲಿ ಆಗುತ್ತಿರುವ ಬದಲಾವಣೆಯ ಮೇಲೆ ನಿಗಾವಹಿಸುತ್ತದೆ. ಹೂಡಿಕೆದಾರರಾಗಿ ನಾವವು ಕೂಡ ಜಪಾನಿನಲ್ಲಿ ಆಗುತ್ತಿರುವ ಬದಲಾವಣೆಯ ಮೇಲೆ ಒಂದಷ್ಟು ಗಮನ ಹರಿಸಬೇಕಾಗುತ್ತದೆ. ನಮ್ಮ ಹೂಡಿಕೆಯ ಹಣ ಉಳಿಸಿಕೊಳ್ಳಬೇಕು ಎಂದರೆ ಜಗತ್ತಿನ ಎಲ್ಲಾ ಆಗುಹೋಗುಗಳ ಮೇಲೆ ಕಣ್ಣಿಟ್ಟಿರುವುದು ಇಂದಿನ ದಿನದ ಅವಶ್ಯಕತೆ.