ರಾಮ (ಸಾಂಕೇತಿಕ ಚಿತ್ರ) online desk
ಅಂಕಣಗಳು

ಹೌದು…ಯಾರದು ರಾಮನ ಕೈಗೆ ಶಸ್ತ್ರ ಕೊಟ್ಟದ್ದು? (ತೆರೆದ ಕಿಟಕಿ)

ಅಸ್ತ್ರ ಕೆಳಗಿಟ್ಟಿದ್ದೇ ಆದರೆ ಇಷ್ಟರಲ್ಲಿ ಭಾರತವೂ ಈ ಹಿಂದೆ ನೈಲ್, ಯುಪ್ರಟಿಸ್-ಟೈಗ್ರಿಸ್ ನದಿಬಯಲುಗಳಲ್ಲಿ ಹುಟ್ಟಿದ್ದ ನಾಗರಿಕತೆಗಳು ತಮ್ಮ ಅಸ್ತಿತ್ವ ಕಳೆದುಕೊಂಡು ಇನ್ನೇನೋ ಆಗಿಹೋದವೋ ಹಾಗಾಗುತ್ತಿತ್ತು

ರಾಮನ ಕೈಯಲ್ಲಿ ಶಸ್ತ್ರ ಹಿಡಿಸಿಬಿಟ್ಟಿದ್ದಾರೆ ಎಂಬುದು ಬುದ್ಧಿಜೀವಿ ಗಣದಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರ ಇತ್ತೀಚಿನ ಆತಂಕ. ಅಂಥ ವ್ಯಕ್ತಿಗಳ ಬಗ್ಗೆ ಚರ್ಚೆ ಏನೂ ಬೇಕಿಲ್ಲ. ಏಕೆಂದರೆ, ಹೆಚ್ಚಿನ ಸಂದರ್ಭಗಳಲ್ಲಿ ಹೀಗೆ ಹೇಳಿಕೆ ಕೊಡುವವರು ಅದು ಸೃಷ್ಟಿಸುವ ಶಾಕ್ ವೇವ್ ಸಮಾಜಕ್ಕೆ ತಾಗಿ ತನಗೆ ಪ್ರತಿಕ್ರಿಯೆ ಬರಲಿ ಎಂಬ ಆಸೆಯನ್ನಷ್ಟೇ ಹೊತ್ತಿರುತ್ತಾರೆಯೇ ಹೊರತು ಮತ್ಯಾವ ಕಾಳಜಿಯನ್ನಲ್ಲ. ಹಾಗೆಂದೇ, ಜಗತ್ತೆಲ್ಲ ಅರೆಮುಚ್ಚಿದ ಕಣ್ಣುಗಳ ಧ್ಯಾನದಲ್ಲಿರಬೇಕು, ಬಂದೂಕು ತುಕ್ಕು ಹಿಡಿಯಬೇಕು ಎಂದೆಲ್ಲ ಕವಿತೆ ಹೊಸೆಯುವವರು ನಕ್ಸಲ್ ಹಿಂಸಾಚಾರವನ್ನು ಸಮರ್ಥಿಸಿಕೊಳ್ಳುವುದಿದೆ.

ಆದರೆ, ಜಗತ್ತಿನಲ್ಲಿರುವ ಮಿಲಿಟರಿ ಬಲ ಹಾಗೂ ಸರ್ಕಾರಗಳಿಂದಲೇ ಪರಿಸ್ಥಿತಿಗಳು ಬಿಗಡಾಯಿಸಿವೆ ಎಂದು ನಂಬುವ ವೋಕ್ ಮನಸ್ಥಿತಿ ಮೊದಲೂ ಇತ್ತು, ಈಗಲೂ ಇದೆ. ಬಲ ಪ್ರದರ್ಶನ, ಯುದ್ಧತಂತ್ರ ಇಂಥವನ್ನೆಲ್ಲ ಯೋಚಿಸುವುದೇ ತಪ್ಪು ಕೆಲಸ ಎಂಬ ಭಾವನೆ ಹೊತ್ತವರೂ ಇದ್ದಾರೆ. ಯಾರೋ ಏಕೆ, ಸ್ವಾತಂತ್ರ್ಯ ಸಿಕ್ಕ ಹೊಸ್ತಿಲಿನಲ್ಲಿ ಖುದ್ದು ಜವಹರಲಾಲ್ ನೆಹರು, “ನಾವು ಯಾರ ಮೇಲೂ ದಾಳಿ ಮಾಡುವ ಯೋಚನೆ ಹೊಂದಿಲ್ಲವಾದ್ದರಿಂದ ಭಾರತಕ್ಕೆ ಸೇನೆಯ ಅವಶ್ಯವೇ ಇಲ್ಲ. ಆಂತರಿಕ ವ್ಯವಸ್ಥೆ ನಿರ್ವಹಣೆಗೆ ಪೊಲೀಸ್ ಬಲ ಇದ್ದರೆ ಸಾಕು” ಎಂಬ ಯೋಚನೆ ಹೊಂದಿದ್ದರೆಂಬ ಬಗ್ಗೆ ಅನೇಕ ವರದಿಗಳಿವೆ. ಅದಕ್ಕೆ ಸರಿಯಾಗಿ ಎರಡನೇ ವಿಶ್ವಯುದ್ಧದ ಸಮಯದಲ್ಲಿ ವ್ಯಾಪ್ತಿ ಹೆಚ್ಚಿಸಿಕೊಂಡಿದ್ದ ಬಾರತೀಯ ಸೇನೆಯ ಬಲವನ್ನು ಇಳಿಸಲಾಯಿತು. ಭಾರತ ಹೀಗೆಲ್ಲ ಶಾಂತಿಯ ಹಾಡು ಹಾಡುತ್ತಿದೆ ಎಂದು ಎದುರಾಳಿಗಳೇನೂ ಮನ ಕರಗಿಸಿಕೊಂಡು ಕುಳಿತುಕೊಳ್ಳಲಿಲ್ಲ. ಸ್ವಾತಂತ್ರ್ಯದ ಬೆನ್ನಲ್ಲೇ ಪಾಕಿಸ್ತಾನವು ಭಾರತದ ವಿರುದ್ಧ ಶಸ್ತ್ರ ಎತ್ತಿತು. 1962ರಲ್ಲಿ ಸೂಕ್ತ ಸಲಕರಣೆ, ತಯಾರಿಗಳಿಲ್ಲದ ಕಾರಣಕ್ಕೆ ಚೀನಾದ ವಿರುದ್ಧ ಭಾರತದ ಸೇನೆ ಅವಮಾನ ಅನುಭವಿಸಬೇಕಾಯಿತು.

ಅಹಿಂಸೆ ಮತ್ತು ಕ್ಷಾತ್ರ ವೈರುಧ್ಯವಲ್ಲ

ಬಲವನ್ನು ಹೊಂದಿರುವುದೇ ಹಿಂಸೆಯನ್ನು ಕಡಿಮೆ ಮಾಡುವ ಅತ್ಯಂತ ಪರಿಣಾಮಕಾರಿ ಮಾರ್ಗ. ಬಲವಿಲ್ಲದ ಬುದ್ಧಿವಂತಿಕೆ ದೀರ್ಘಕಾಲಕ್ಕೆ ಮುಂದುವರಿಯುವುದು ಕಷ್ಟ ಎನ್ನುವುದು ಚರಿತ್ರೆ ಹೇಳುವ ಪ್ರಮುಖ ಪಾಠ. ಏಕೆಂದರೆ ಬುದ್ಧಿವಂತಿಕೆ ಉಪಯೋಗಿಸಿ ಏನೆಲ್ಲ ಸೃಜನಶೀಲತೆ- ತಾಂತ್ರಿಕತೆಗಳನ್ನು ಸಾಧಿಸಿದ್ದರೂ, ಅವೇನೇ ಸಂಪತ್ತು ಸೃಷ್ಟಿಸಿದರೂ ಅವನ್ನೆಲ್ಲ ಕಾಪಾಡಿಟ್ಟುಕೊಳ್ಳುವುದಕ್ಕೆ ಕ್ಷಾತ್ರ ಬೇಕು. ಇದು ತುಂಬ ಸರಳ ಸತ್ಯವಾದರೂ ವೋಕ್ ಮನಸ್ಥಿತಿ ಇದನ್ನೂ ಮರೆಸಿಬಿಡುತ್ತದೆ ಎಂಬುದು ಆಶ್ಚರ್ಯವೇ.

ಅಹಿಂಸೆ ಎಂಬುದು ದೊಡ್ಡ ಮೌಲ್ಯ ಎನ್ನುವುದಕ್ಕೆ ಬುದ್ಧಿಜೀವಿಗಳು ಬೇಕಾಗಿಲ್ಲ. ಬೇರೆಯವರ ಹಣಕ್ಕೆ ಆಸೆ ಪಡಬೇಡ, ಕದಿಯಬೇಡ, ಎಲ್ಲವೂ ಈಶ್ವರನಿಂದ ಆವರಿಸಿರುವುದೇ ಆದ್ದರಿಂದ ಅದನ್ನು ಅನುಭವಿಸುವಾಗ ಕೃತಜ್ಞ ಭಾವವಿರಲಿ, ಪರರ ಹಿಂಸೆ-ನಿಂದನೆಗಳು ಬೇಡ… ಇಂಥವನ್ನೇ ಸನಾತನ ಶ್ರದ್ಧೆ ಹೇಳಿಕೊಂಡುಬಂದಿದೆ. ಸಾಮಾನ್ಯ ಬದುಕಿನಲ್ಲಿ ಇವೆಲ್ಲವೂ ಇರಬೇಕು. ಅದರರ್ಥ, ನಿನ್ನನ್ನು ಮತ್ತು ನಿನ್ನ ಸಂಸ್ಕೃತಿಯನ್ನು ಮುಗಿಸುತ್ತೇನೆ ಎಂದು ಆಕ್ರಮಣಕಾರಿ ಎದುರು ನಿಂತಿರುವಾಗ ಅಲ್ಲಿ ಅಹಿಂಸೆ ಪಠಿಸು ಎಂದು ಸನಾತನ ಸಂಸ್ಕೃತಿ ಹೇಳುವುದಿಲ್ಲ. ಅಹಿಂಸೆ ಪರಮ ಧರ್ಮವೇ ಆಗಿದ್ದರೂ, ಧರ್ಮಕ್ಕೇ ಆತಂಕ ಬಂದ ಸಂದರ್ಭದಲ್ಲಿ ಅದರ ರಕ್ಷಣೆಗೆ ಹಿಂಸೆ ಸಮ್ಮತ ಎನ್ನುತ್ತದದು. ಹಾಗೆಂದೇ ರಾಮ ಸೇರಿದಂತೆ ನಮ್ಮೆಲ್ಲ ದೇವಾನುದೇವತೆಗಳ ಕೈಯಲ್ಲಿ ಶಸ್ತ್ರಗಳಿವೆ, ಅಂತೆಯೇ ಅಭಯ ಮುದ್ರೆಯೂ ಇದೆ.

ಕ್ಷಾತ್ರದ ಚೌಕಟ್ಟಿನಲ್ಲಿ ಭಾರತ ಚರಿತೆ

ಹೊರಗಿನವರು ಭಾರತದ ಮೇಲೆ ದಂಡೆತ್ತಿ ಬಂದಿದ್ದರಲ್ಲಿ ಅಲೆಕ್ಸಾಂಡರ್ ಉದಾಹರಣೆ ಮೊದಲಿನದು ಎಂದು ನೋಡುವುದಾದರೆ, ಪುರೂರವ (ಪೊರಸ್)ನಿಂದ ಹಿಡಿದು ಮಾಲವ ಮತ್ತು ಶೂದ್ರಕ ಪಂಗಡದವರೆಗೆ ಧೀರೋದ್ದಾತ್ತವಾಗಿ ಹೋರಾಡಿರುವುದರಲ್ಲೇನೂ ಕೊರತೆ ಇರಲಿಲ್ಲ. ಹಾಗೆಂದೇ, ಅಲೆಕ್ಸಾಂಡರ್ ಭಾರತದ ಹೊರಸೀಮೆಗಳನ್ನಷ್ಟೇ ಮುಟ್ಟಿ ಹಿಂತಿರುಗಬೇಕಾಯಿತಲ್ಲದೇ ದೊಡ್ಡಮಟ್ಟದಲ್ಲಿ ತನ್ನ ಸೇನೆಯನ್ನು ಕಳೆದುಕೊಳ್ಳಬೇಕಾಯಿತು. ಆದರೆ ಈ ಎಲ್ಲ ಪ್ರತಿರೋಧಗಳು ಆಯಾ ಪ್ರಾಂತ್ಯದ್ದಾಗಿದ್ದವು. ಆಗಿನ ಕಾಲಕ್ಕೆ ಮಗಧದಲ್ಲಿ ಪ್ರಬಲರಾಗಿದ್ದ ನಂದ ಸಾಮ್ರಾಜ್ಯಕ್ಕೆ ಇದು ತನ್ನ ಮೇಲಾಗುತ್ತಿರುವ ಆಕ್ರಮಣ ಎನಿಸಲಿಲ್ಲ. ಅಲೆಕ್ಸಾಂಡರ್ ಸೇನೆಯನ್ನು ಬಡಿದು ಬೆನ್ನಟ್ಟುವುದಕ್ಕೆ ಏಕೀಕೃತ ಬಲದ ಸೇನೆಯೊಂದು ಇಲ್ಲಿರಲಿಲ್ಲ.

ಯಾವಾಗ ಈ ಪ್ರಕರಣಕ್ಕೆ ಪ್ರತಿಕ್ರಿಯೆ ಎಂಬಂತೆ ಚಾಣಕ್ಯ-ಚಂದ್ರಗುಪ್ತರು ಮಹಾಸೇನಾಬಲವೊಂದನ್ನು ಕಟ್ಟಿನಿಲ್ಲಿಸಿದರೋ ಅಲ್ಲಿಯೇ ಭಾರತದ ಸಾಮ್ರಾಜ್ಯಶಕ್ತಿ ಹಾಗೂ ಚಕ್ರವರ್ತಿ ಪರಿಕಲ್ಪನೆಗಳು ಪುನರುಜ್ಜೀವನವಾದವು. ಅಲೆಕ್ಸಾಂಡರನ ಕನಸು ತಾನು ಪೂರೈಸುತ್ತೇನೆಂದು ಬಂದ ಸೆಲುಕಸ್ ನಿಕೇಟರ್ ಭಾರತದ ಬದಲಾಗಿರುವ ಸೈನ್ಯ ವಾಸ್ತವಕ್ಕೆ ಬೆಚ್ಚಿಬಿದ್ದು ಶಾಂತಿ ಸಂಧಾನ ಮಾಡಿಕೊಳ್ಳಬೇಕಾಯಿತು. ಇವತ್ತಿಗೆ ಬುದ್ಧಿಜೀವಿಗಳೆಂದು ಗುರುತಿಸಿಕೊಂಡವರ ಗಣದಲ್ಲಿ ಹೆಚ್ಚಿನವರು ಪ್ರಶಂಸಿಸುವ ಅಶೋಕ ಇಂಥದೊಂದು ಸೈನ್ಯ ಸಾಮ್ರಾಜ್ಯದ ಕೊಡುಗೆಯೇ. ಕಳಿಂಗ ಯುದ್ಧದಲ್ಲಾದ ಸಾವುನೋವುಗಳ ಬಗ್ಗೆ ಅಶೋಕನ ಮನವೆಷ್ಟೇ ಮಿಡಿದಿದ್ದಿರಬಹುದು. ಹಾಗೆಂದು ಅಶೋಕನ ಜೀವಮಾನವಿರುವವರೆಗೂ ಕಳಿಂಗವೇನೂ ಸ್ವತಂತ್ರವಾಗಲಿಲ್ಲ. ಅಹಿಂಸೆಯ ರಮಣೀಯ ಕಲ್ಪನೆಗೆ ಸಿಕ್ಕು ಅಶೋಕ ಅಸ್ತ್ರವನ್ನೇನೂ ಕೆಳಗಿಡಲಿಲ್ಲ. ಜಗತ್ತಿನ ಹಲವೆಡೆ ಈ ಅವಧಿಯಲ್ಲಿ ಬೌದ್ಧಮತ ಪಸರಿಸುವುದಕ್ಕೆ ಅದರ ತತ್ತ್ವಬಲದ ಜತೆಗೆ ಭಾರತದ ಅಂದಿನ ಸಾಮ್ರಾಜ್ಯಬಲ, ಅದು ಹೊಂದಿದ್ದ ಸಂಪನ್ಮೂಲ ಕಾರಣ.

ತದನಂತರ ಇದೇ ಮೌರ್ಯ ಸಾಮ್ರಾಜ್ಯದಲ್ಲಿ ಬೃಹದ್ರಥನ ಕಾಲ ಬಂದಾಗ ಅಹಿಂಸೆಯ ರಮಣೀಯ ಕಲ್ಪನೆ ಮಿತಿಮೀರಿತು. ಸೇನೆ ಕೃಶವಾಯಿತಲ್ಲದೇ, ಸಾಮಾಜಿಕ ಜೀವನದಲ್ಲಿ ಸಹ ಅಹಿಂಸೆಯ ಅನರ್ಥಕಾರಿ ಹೇರಿಕೆ ಆಗಿದ್ದರಿಂದ ಮೀನು ಹಿಡಿಯುವುದೂ ಅಪರಾಧ ಎಂಬಂತಾಯಿತು. ಆಗ ಮತ್ತೆ ಬೃಹತ್ ಭಾರತದ ಒಳಗೆ ಬಂದವರು ಗ್ರೀಕರು. ಗಮನಿಸಿ… ಭಾರತವು ಬೌದ್ಧಮತದ ಮೂಲಕ ಉದಾರ ಸಂಸ್ಕೃತಿಯನ್ನು ಪಸರಿಸಿದೆಯಾದ್ದರಿಂದ ಅದರ ಮೇಲೆ ಆಕ್ರಮಣ ಮಾಡದೇ ಸುಮ್ಮನಿರೋಣ ಎಂದೇನೂ ಅವತ್ತಿನ ಎದುರಾಳಿ ಯೋಚಿಸಲಿಲ್ಲ. ನೀವೆಷ್ಟೇ ಉನ್ನತರು, ಉದಾತ್ತರಾಗಿದ್ದರೂ ಶಸ್ತ್ರಬಲ ಕುಗ್ಗಿಸಿಕೊಳ್ಳುವುದೆಂದರೆ ಶರಣಾಗತಿಯನ್ನು ಆಹ್ವಾನಿಸಿಕೊಂಡಂತೆ. ಆ ಹಂತದಲ್ಲಿ ಬೃಹದ್ರಥನ ಸೇನಾಧಿಕಾರಿಯೇ ಆಗಿದ್ದ ಪುಷ್ಯಮಿತ್ರ ಶುಂಗ, ಮೌರ್ಯ ವಂಶದ ಆ ದುರ್ಬಲ ರಾಜನನ್ನು ಕೊನೆಗೊಳಿಸಿ ತಾನು ಅಧಿಕಾರ ಸೂತ್ರ ಹಿಡಿದುಕೊಂಡು ವಿದೇಶಿ ಆಕ್ರಮಣಕಾರರನ್ನು ಹಿಂದಕ್ಕಟ್ಟಿದ ಎಂದು ಚರಿತ್ರೆ ಹೇಳುತ್ತದೆ. ಈ ಅಧ್ಯಾಯವನ್ನು ಬುದ್ಧಿಜೀವಿ ಇತಿಹಾಸಕಾರರು ಅದು ಬೌದ್ಧರ ಹಿಡಿತ ತಪ್ಪಿಸುವುದಕ್ಕೆ ಬ್ರಾಹ್ಮಣನಾದ ಪುಷ್ಯಮಿತ್ರ ನಡೆಸಿದ ಮಸಲತ್ತೆಂಬಂತೆ ನೋಡುತ್ತಾರಾದರೂ ವಾಸ್ತವದಲ್ಲಿ ಅದು ಕ್ಷಾತ್ರಬಲದ ಮರುಸ್ಥಾಪನೆಯಷ್ಟೆ.

ಇದೇ ಅಸ್ತ್ರಬಲದಲ್ಲಿ ಮುಂದೆ ಸಮುದ್ರಗುಪ್ತ ಹಾಗೂ ಚಂದ್ರಗುಪ್ತ ವಿಕ್ರಮಾದಿತ್ಯ ಭಾರತವನ್ನು ಮತ್ತೆ ಒಂದು ಛತ್ರದಡಿ ತಂದ ಕಾರಣದಿಂದಲೇ, ಆ ಕ್ಷಾತ್ರದ ನೆರಳಲ್ಲಿ ಬ್ರಹ್ಮಗುಪ್ತ, ವರಾಹಮಿಹಿರ, ಆರ್ಯಭಟ್ಟ, ಕಾಳಿದಾಸ ಇತ್ಯಾದಿ ವಿದ್ವಾಂಸರ ಮೂಲಕ ವಿಜ್ಞಾನ ಮತ್ತು ಸಾಹಿತ್ಯಗಳಲ್ಲಿ ಮೇರು ಸಾಧನೆಗಳಾದವು. ಭಾರತದ ಈ ಚಿನ್ನದ ಯುಗವನ್ನು ಹೂಣರ ಆಕ್ರಮಣದ ವಿರುದ್ಧ ರಕ್ಷಿಸಿದ್ದು ಸ್ಕಂದಗುಪ್ತನ ಕ್ಷಾತ್ರ. ಶತಮಾನಗಳ ನಂತರ ಗುಪ್ತರ ಈ ಬಲ ಕ್ಷೀಣಿಸಿದಾಗಲೇ ಹೂಣರು ತಕ್ಷಶಿಲೆಯನ್ನು ಧರಾಶಾಹಿಯಾಗಿಸಿ, ಉಜ್ಜಯಿನಿವರೆಗೂ ಬಂದು ಕುಳಿತದ್ದು. ಹರಿದು-ಹಂಚಿದ್ದ ಹಲವು ವಂಶಾಡಳಿತಗಳನ್ನು ಸೇನಾ ಕಾರ್ಯಾಚರಣೆಗಾಗಿ ಮೈತ್ರಿಯ ಅಡಿ ತಂದು ಹೂಣರ ಮಿಹಿರಕುಲನನ್ನು ಹಿಮ್ಮೆಟಿಸಿದ್ದು ಮಾಳ್ವದ ಯಶೋಧರ್ಮ.

ಮುಂದೆ ಹಲವು ಶತಮಾನಗಳವರೆಗೆ ಭಾರತವು ಮೊದಲಿಗೆ ಇಸ್ಲಾಂ ಆಕ್ರಮಣ ಹಾಗೂ ನಂತರ ಯುರೋಪಿಯನ್ ಆಕ್ರಮಣದಡಿ ಬದುಕಿತು. ಆಗಲೂ ಮೇವಾಡದಿಂದ ವಿಜಯನಗರದವರೆಗೆ, ಅಹೋಮಿನಿಂದ ಮರಾಠರವರೆಗೆ ಅಸಂಖ್ಯ ವೀರರು ಪ್ರತಿರೋಧ ಒಡ್ಡುತ್ತಲೇ ಬಂದಿದ್ದರಿಂದ ನಾವೀಗ ಕತೆ ಹೇಳುವುದಕ್ಕೆ ಉಳಿದುಕೊಂಡಿದ್ದೇವೆ. ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಕ್ರಾಂತಿಕಾರಿಗಳ ರಕ್ತ ನಿರಂತರ ಚೆಲ್ಲುತ್ತಲೇ ಇತ್ತು. 1946ರಲ್ಲಿ ನೌಕಾಸೇನೆಯಲ್ಲೇ ಬ್ರಿಟಿಷರ ವಿರುದ್ಧ ಬಂಡಾಯ ಎದ್ದಾಗ, ಭಾರತದಲ್ಲಿ ಉಳಿದುಕೊಳ್ಳುವುದು ಕಷ್ಟ ಎಂಬುದು ತಮಗೆ ಮನದಟ್ಟಾಗಿದ್ದಾಗಿ ಬ್ರಿಟಿಷರೇ ಹೇಳಿಕೊಂಡಿರುವ ದಾಖಲೆಗಳು ಇವತ್ತಿಗೆ ಲಭ್ಯ.

ಒಟ್ಟಿನಲ್ಲಿ, ಎರಡೇ ಸಹಸ್ರಮಾನದ ಭಾರತ ಚರಿತ್ರೆಯನ್ನೇ ತೆಗೆದುಕೊಂಡರೂ ಮನದಟ್ಟಾಗುವ ಒಂದು ವಿಷಯ ಏನೆಂದರೆ, ಅಸ್ತ್ರ ಕೆಳಗಿಟ್ಟಿದ್ದೇ ಆದರೆ ಇಷ್ಟರಲ್ಲಿ ಭಾರತವೂ ಈ ಹಿಂದೆ ನೈಲ್ ಹಾಗೂ ಯುಪ್ರಟಿಸ್-ಟೈಗ್ರಿಸ್ ನದಿಬಯಲುಗಳಲ್ಲಿ ಹುಟ್ಟಿದ್ದ ನಾಗರಿಕತೆಗಳು ತಮ್ಮ ಅಸ್ತಿತ್ವ ಕಳೆದುಕೊಂಡು ಇನ್ನೇನೋ ಆಗಿಹೋದವೋ ಹಾಗಾಗುತ್ತಿತ್ತು.

ರಾಮನ ಕ್ಷಾತ್ರ ಕರ್ತವ್ಯ

ಪುತ್ರನನ್ನು ಬಯಸಿ ದಶರಥ ಮಾಡಿದ ಯಜ್ಞಯಾಗಗಳಿಗೆ ಸಂಪ್ರೀತರಾಗಿ, ಆತನ ಮನೋಕಾಮನೆ ಪರಿಧಿಯಲ್ಲಿ ಮಾತ್ರವೇ ದೇವತೆಗಳು ವರ ಕೊಟ್ಟಿದ್ದೇನಲ್ಲ. ರಾವಣನನ್ನು ನಿವಾರಿಸಬೇಕಾದ ತಮ್ಮ ಯೋಜನೆ ಜಾರಿಗೆ ದಶರಥ ಒಂದು ಮಾಧ್ಯಮ. ರಾಮನೆಂದರೆ ಪ್ರಾಣವಾಗಿಸಿಕೊಂಡಿದ್ದ ದಶರಥ, ಪ್ರಾರಂಭದಲ್ಲಿ ಆತನನ್ನು ತನ್ನ ಜತೆಗೆ ಕಳುಹಿಸುವುದಕ್ಕೆ ಹಿಂಜರಿದಾಗ ವಿಶ್ವಾಮಿತ್ರರು ಕೋಪ ತೋರಿಸಿ ಒಪ್ಪಿಸಿದ್ದಕ್ಕೂ ಕಾರಣವದೇ. ರಾಮನ ಕ್ಷಾತ್ರ ಲೋಕಕಲ್ಯಾಣಕ್ಕಾಗಿ ತರಬೇತುಗೊಳ್ಳಬೇಕಿದೆ ಎಂಬುದೇ. ತಾಟಕೆಯ ಸಂಹಾರದ ನಂತರ ರಾಮನ ಬಗ್ಗೆ ಸಂಪ್ರೀತರಾದ ವಿಶ್ವಾಮಿತ್ರರು ಒಂದೊಂದಾಗಿ ಸುಮಾರು ಐವತ್ತಕ್ಕೂ ಹೆಚ್ಚು ಅಸ್ತ್ರಗಳ ಮಂತ್ರೋಪದೇಶ ಕೊಡುತ್ತಾರೆ. ಆ ಅಸ್ತ್ರಗಳೆಲ್ಲ ಬಂದು ರಾಮನಲ್ಲಿ ನಾವು ನಿನ್ನ ಸೇವಕರು ಎಂದಾಗ, ರಾಮ ಅವುಗಳನ್ನು ನೇವರಿಸಿ, ನೀವು ನನ್ನ ಹೃದಯದಲ್ಲಿರಿ, ಬೇಕಾದಾಗ ನೆನಪಿಸಿಕೊಳ್ಳುತ್ತೇನೆ ಎಂದಿದ್ದರ ರೀತಿಯೇ ಮೋಹಕ.

ಅಸ್ತ್ರಗಳು ಇರಬೇಕು. ಅವುಗಳ ಸಾಮರ್ಥ್ಯವೃದ್ಧಿಯೂ ಆಗುತ್ತಿರಬೇಕು. ಯಾವಾಗ ಅವನ್ನು ಉಪಯೋಗಿಸಬೇಕು, ಹಿಂಸೆ-ಅಹಿಂಸೆಗಳ ನಿರ್ಣಯ ಹೇಗೆ ಮಾಡಬೇಕು ಎಂಬುದಕ್ಕೆಲ್ಲ ನಮಗೆ ರಾಮ-ಕೃಷ್ಣರು ರೆಫರೆನ್ಸ್ ಪಾಯಿಂಟುಗಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚಿತ್ರದುರ್ಗದ ಮುರುಘಾ ಶ್ರೀಗೆ ಬಿಗ್ ರಿಲೀಫ್; ಪೋಕ್ಸೋ ಪ್ರಕರಣದಲ್ಲಿ ಖುಲಾಸೆಗೊಳಿಸಿ ಕೋರ್ಟ್ ತೀರ್ಪು

Cricket: ತ್ರಿಮೂರ್ತಿಗಳ ನಿವೃತ್ತಿ.. ಭಾರತದ ಟೆಸ್ಟ್ ಕ್ರಿಕೆಟ್ ಭದ್ರಕೋಟೆ ಛಿದ್ರ.. Gautam Gambhir ಕಾರಣ..? ಟೀಂ ಇಂಡಿಯಾ ಪ್ರಧಾನ ಕೋಚ್ ಪ್ರಮಾದಗಳು!

India vs South Africa: ತವರಿನಲ್ಲಿ ಮತ್ತೊಮ್ಮೆ ಭಾರತಕ್ಕೆ ವೈಟ್‌ವಾಶ್ ಮುಖಭಂಗ: ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿದ ಬವುಮಾ ಪಡೆ!

"Gautam Gambhir Hay Hay": ತವರು ಮೈದಾನದಲ್ಲೇ ಟೀಂ ಇಂಡಿಯಾ ಪ್ರಧಾನ ಕೋಚ್ ಗೆ ತೀವ್ರ ಮುಖಭಂಗ, ಪ್ರೇಕ್ಷಕರಿಂದ ಧಿಕ್ಕಾರ! Video

ಟಿವಿಕೆ ಸೇರುವ ಊಹಾಪೋಹಗಳ ನಡುವೆ, ಶಾಸಕ ಸ್ಥಾನಕ್ಕೆ ಸೆಂಗೊಟ್ಟೈಯನ್ ರಾಜೀನಾಮೆ

SCROLL FOR NEXT