ನಮ್ಮ ಸುತ್ತಮುತ್ತ ಒಮ್ಮೆ ಕಣ್ಣಾಡಿಸಿ ನೋಡಿ. ಹೆಚ್ಚಿನ ಶ್ರಮ ಪಡೆಬೇಕಾದ ಅವಶ್ಯಕತೆಯಿಲ್ಲದೆ ಕಣ್ಣಿಗೆ ಕಾಣುವ ಅಂಶವೇನು ಗೊತ್ತೇ? ಹಣವಿಲ್ಲ ಎನ್ನುವ ಪರದಾಟದಲ್ಲಿರುವ ಜನ ಕಾಣುತ್ತಾರೆ. ನಿಮಗೊಂದು ಅಂಶವನ್ನು ಹೇಳುತ್ತೇನೆ. ಹಣವಿಲ್ಲ ಎನ್ನುವುದು ಮುಕ್ಕಾಲು ಪಾಲು ಅವರಾಗೇ ತಂದುಕೊಂಡ ಪರಿಸ್ಥಿತಿ. ಹಣವನ್ನು ಸರಿಯಾಗಿ ವಿನಿಯೋಗಿಸದ ಕಾರಣ ಹಣವಿಲ್ಲದ ಪರಿಸ್ಥಿತಿಗೆ ಬಂದಿರುತ್ತಾರೆ. ಮನುಷ್ಯನಿಗೆ ಅನೇಕ ರೋಗಗಳು ಬರುತ್ತವೆ. ಹೀಗೆ ಬಂದ ರೋಗಗಳು ಒಂದು ದಿನದಲ್ಲಿ ಬಂದಿರುವುದಿಲ್ಲ. ಕೆಲವೊಮ್ಮೆ ಹತ್ತಾರು ವರ್ಷಗಳ ತಪ್ಪು ಜೀವನಶೈಲಿಯ ಬಳುವಳಿಯಾಗಿ ಅವು ಬಂದು ದೇಹದಲ್ಲಿ ನೆಲೆಸಿರುತ್ತವೆ. ಹಣವಿಲ್ಲ ಎನ್ನುವ ರೋಗ ಸಹ ಅದೇ ರೀತಿಯದ್ದು. ಹಣವನ್ನು ಸರಿಯಾಗಿ ನಿರ್ವಹಿಸದೆ ಇರುವ ಕಾರಣ ಅದು ಉಲ್ಬಣವಾಗಿರುತ್ತದೆ. ಆದ್ಯತೆಯ ಕೊರತೆ ನಮ್ಮ ಸಮಾಜದಲ್ಲಿ ಮುಕ್ಕಾಲು ಪಾಲು ಹಣಕಾಸಿನ ಪರದಾಟಕ್ಕೆ ಕಾರಣವಾಗಿದೆ. ನಾವು ಸರಿಯಾಗಿ ನಮಗೇನು ಬೇಕು? ಯಾವಾಗ ಬೇಕು? ಎಷ್ಟು ಬೇಕು? ಎನ್ನುವುದನ್ನು ಅರಿತುಕೊಂಡು ಬಿಟ್ಟರೆ ಅಲ್ಲಿಗೆ ಅರ್ಧ ಗೆದ್ದಂತೆ!
ಹಣಕಾಸಿನ ವಿಷಯದಲ್ಲಿ ಮಾಡವ ಒಂದು ಸಣ್ಣ ತಪ್ಪು ಬದುಕಿನ ಹತ್ತಾರು ವರ್ಷಗಳನ್ನು ನುಂಗಿ ಬಿಡುತ್ತದೆ. ಕೆಲವೊಮ್ಮೆ ಅದು ಬದುಕನ್ನು ಕೂಡ ಕಸಿದು ಒಂದು ಬಿಡುತ್ತದೆ. ಹಣಕಾಸಿನ ವಿಚಾರದಲ್ಲಿ ನಮ್ಮದು ಇನ್ನೂ ಮಡಿವಂತ ಸಮಾಜ. ಅದರ ಬಗ್ಗೆ ಮುಕ್ತವಾಗಿ ಚರ್ಚಿಸುವುದಿಲ್ಲ. ಒಂದು ಭಾರತದಲ್ಲಿ ಹತ್ತಾರು ಭಾರತವಿದೆ. ಒಂದು ವರ್ಗದ ಜನರಿಗೆ ಹಣದ ಬಗ್ಗೆ ಮಾತಾಡುವುದು ಪಾಪ ಎನ್ನುವ ಮನಸ್ಥಿತಿಯಿದೆ. ಹಣದ ಬಗ್ಗೆ ಮಾತಾಡುವವರು ಸ್ವಾರ್ಥಿಗಳು, ಲೋಭಿಗಳು ಎನ್ನುವ ಮನೋಭಾವ ಹೊಂದಿದ್ದಾರೆ. ಇನ್ನೊಂದು ವರ್ಗದ ಜನಕ್ಕೆ ಹಣದ ಬಗ್ಗೆ ಅತೀವ ಕಾಳಜಿ. ತಾವು ನಡೆದು ಬಂದ ಬಡತನದ ದಾರಿಯಲ್ಲಿನ ಪರದಾಟದ ನೆನಪು ಅವರನ್ನು ಹಣದ ಬಗ್ಗೆ ಅತೀವ ಜಾಗರೋಕರನ್ನಾಗಿ ಮಾಡಿದೆ. ದುಡಿದ ದುಡ್ಡನ್ನು ತಮ್ಮ ಖುಷಿಗೆ ವ್ಯಯಿಸದೆ ಹಾಗೆ ಹೋಗಿಬಿಡುತ್ತಾರೆ ಈ ವರ್ಗದ ಜನ. ಈಗಿನ ತಲೆಮಾರಿನ ಹುಡುಗರಿಗೆ ಹಣದ ಬಗ್ಗೆ ಇರುವುದು ಡೋಂಟ್ ಕೇರ್ ಮನೋಭಾವ. ಅವರಿಗೆ ಶಾಲೆಯಲ್ಲಿ ಹಣದ ಗಳಿಕೆ -ಉಳಿಕೆ -ಹೂಡಿಕೆ ಬಗ್ಗೆ ಯಾರೂ ಹೇಳಿಕೊಡುವುದಿಲ್ಲ. ಇನ್ನು ಹೆತ್ತವರ ಮಾತು ಈ ಪೀಳಿಗೆ ಕೇಳುವುದೂ ಇಲ್ಲ. ಹೀಗಾಗಿ ಹಣ ಎನ್ನುವುದು ಇವರಿಗೆ ಬಯಸಿದ್ದ ಕೊಳ್ಳಲು ಇರುವ ಒಂದು ಸಾಧನ. ನಾಳೆ ಕಂಡವರಾರು ? ಹೂಡಿಕೆಯೇಕೆ ಮಾಡಬೇಕು? ಉಳಿಸಿ ಯಾರನ್ನು ಉದ್ದಾರ ಮಾಡಬೇಕು? ಎನ್ನುವ ಉದ್ದಟತನ. ಹಣವನ್ನು ಖರ್ಚು ಮಾಡದೆ ಜೋಪಾನ ಮಾಡುವುದು , ಅತಿಯಾದ ಖರ್ಚು ಎರಡೂ ತಪ್ಪು. ಹಣವೆನ್ನುವುದನ್ನು ಸರಿಯಾಗಿ ಬಳಸುವುದು ನಮ್ಮ ಸಮಾಜ ಕಲಿಯಬೇಕಿದೆ.
ದಿನನಿತ್ಯ ಸಮಾಜದಲ್ಲಿನ ತರಹಾವರಿ ಜನರನ್ನು ಭೇಟಿಯಾಗುವ ಸುಯೋಗ ನನ್ನದು. ಗೊತ್ತಿದ್ದೂ , ಗೊತ್ತಿಲದೆಯೂ ಜನರು ಮಾಡುವ ಸಾಮಾನ್ಯ ತಪ್ಪುಗಳನ್ನು ಪಟ್ಟಿ ಮಾಡಿದರೆ ಅದೊಂದು ರೆಫರೆನ್ಸ್ ಪಾಯಿಂಟ್ ಆಗಿ ಉಳಿದುಕೊಳ್ಳುತ್ತದೆ ಎನ್ನುವ ಕಾರಣಕ್ಕೆ ಈ ಹಣಕಾಸು ತಪ್ಪುಗಳನ್ನು ನೀವು ಮಾಡಬೇಡಿ ಎನ್ನುವ ಪುಸ್ತಕವನ್ನು ಬರೆದಿದ್ದೇನೆ.
ಒಟ್ಟಾರೆ ಸಾಮಾನ್ಯವಾಗಿ ನಾವೆಲ್ಲಾ ಹಣಕಾಸಿನ ವಿಷಯದಲ್ಲಿ ಮಾಡುವ ನೂರು ತಪ್ಪುಗಳನ್ನು ಇಲ್ಲಿ ದಾಖಲಿಸಿದ್ದೇನೆ. ಅಂದ ಮಾತ್ರಕ್ಕೆ ಇದನ್ನು ಬಿಟ್ಟು ಬೇರೆ ತಪ್ಪುಗಳಿಲ್ಲವೇ? ಜನರು ಬೇರೆ ತಪ್ಪುಗಳನ್ನು ಮಾಡುವುದಿಲ್ಲವೇ? ಎನ್ನುವ ಪ್ರಶ್ನೆ ಯಾರಿಗಾದರೂ ಉದ್ಭವವಾದರೆ, ಗಮನಿಸಿ ಇವು ಸಾಮಾನ್ಯ ತಪ್ಪುಗಳು. ಯಾರೂ ಬೇಕಾದರೂ ಮಾಡಬಹುದಾದ ತಪ್ಪುಗಳು. ಇವೆಷ್ಟು ಸಣ್ಣ ತಪ್ಪುಗಳು ಎಂದರೆ, ಇವು ತಪ್ಪು ಎಂದು ತಪ್ಪು ಮಾಡಿದವರಿಗೆ ಅನ್ನಿಸುವುದೇ ಇಲ್ಲ ಅಂತಹ ತಪ್ಪುಗಳು. ಆದರೆ ಅವುಗಳು ಬೀರುವ ಪ್ರಭಾವ ದೊಡ್ಡದು. ಸಣ್ಣ ಕಿಡಿ ಎಂದು ನಿರ್ಲಕ್ಷ ಮಾಡಿದರೆ ಆ ಸಣ್ಣ ಕಿಡಿ ಮನೆಯನ್ನು, ಊರನ್ನು ಸುಡುವ ಕ್ಷಮತೆಯನ್ನು ಹೊಂದಿರುತ್ತದೆ. ಇಲ್ಲಿನ ತಪ್ಪುಗಳು ಸಹ ಅದೇ ರೀತಿಯವು. ಮೇಲ್ನೋಟಕ್ಕೆ ಸಣ್ಣವು, ಬೀರುವ ಪ್ರಭಾವ ದೊಡ್ಡದು. ಇಲ್ಲಿ ಹತ್ತು ಅಧ್ಯಾಯಗಳಿವೆ, ಅವುಗಳಲ್ಲಿ ಒಂದೊಂದು ಅಧ್ಯಾಯದಲ್ಲೂ ಹತ್ತು ತಪ್ಪುಗಳ ಪಟ್ಟಿಯಿದೆ. ಇದರರ್ಥ ಇವುಗಳನ್ನು ಮೀರಿದ ತಪ್ಪು ಮಾಡುವುದಿಲ್ಲ ಎಂದಲ್ಲ. ಇಷ್ಟು ಕಲಿತು ಬಿಟ್ಟರೆ ಇದನ್ನು ಹೊರತುಪಡಿಸಿ ಬೇರೊಂದು ತಪ್ಪು ಮಾಡುವಾಗ ಕೊನೆಪಕ್ಷ ತಪ್ಪು ಮಾಡುತ್ತಿದ್ದೇನೆ ಎನ್ನುವ ಅರಿವಾಗುತ್ತದೆ.
ಚಾಪ್ಟರ್ 1: ಮನಸ್ಥಿತಿ ತಪ್ಪುಗಳು
ಚಾಪ್ಟರ್ 2: ಬ್ಯಾಂಕಿಂಗ್ ಮತ್ತು ಕ್ಯಾಶ್ ಫ್ಲೋ ತಪ್ಪುಗಳು
ಚಾಪ್ಟರ್ 3 :ಬಜೆಟಿಂಗ್ ಮತ್ತು ಖರ್ಚಿನಲ್ಲಿ ಮಾಡುವ ತಪ್ಪುಗಳು
ಚಾಪ್ಟರ್ 4 : ಹೂಡಿಕೆ ತಪ್ಪುಗಳು
ಚಾಪ್ಟರ್ 5 : ತೆರಿಗೆ ಮತ್ತು ಕಾನೂನಾತ್ಮಕ ತಪ್ಪುಗಳು
ಚಾಪ್ಟರ್ 6 : ಸಾಲದಲ್ಲಿನ ತಪ್ಪುಗಳು
ಚಾಪ್ಟರ್ 7: ಇನ್ಸೂರೆನ್ಸ್ ಗೆ ಸಂಬಂಧಿಸಿದ ತಪ್ಪುಗಳು
ಚಾಪ್ಟರ್ 8 : ಲೈಫ್ ಸ್ಟೈಲ್ ತಪ್ಪುಗಳು
ಚಾಪ್ಟರ್ 9 : ಪ್ಲಾನಿಂಗ್ನಲ್ಲಿನ ತಪ್ಪುಗಳು
ಚಾಪ್ಟರ್ 10 : ಭಾವನಾತ್ಮಕ ತಪ್ಪುಗಳು
ಈ ತಪ್ಪುಗಳನ್ನು ಸಾಧ್ಯವಾದಷ್ಟೂ ಮಾಡದಿರುವುದು ಒಳ್ಳೆಯದು. ಆದರೆ ನಾವೆಲ್ಲರೂ ಇಲ್ಲಿನ ನೂರು ಸಾಮಾನ್ಯ ತಪ್ಪುಗಳಲ್ಲಿ ಒಂದಲ್ಲ ಒಂದನ್ನು ಮಾಡಿಯೇ ಇರುತ್ತೇವೆ. ಇಂದಿಗೂ ಮಾಡುತ್ತಿರುತ್ತೇವೆ. ಅವುಗಳನ್ನು ನಿಲ್ಲಿಸುವುದು, ಅದರಿಂದ ಹೊರಬರುವ ಅಂಶಗಳ ಬಗ್ಗೆ ಕೂಡ ಒಂದೆರೆಡು ಸಾಲಿನಲ್ಲಿ ತಿಳಿಸುವ ಪ್ರಯತ್ನ ಇಲ್ಲಿದೆ.
ಜನ ಸಾಮಾನ್ಯರಲ್ಲಿ 99 ಪ್ರತಿಶತ ಜನ ಮಾಡುವ ಸಾಮಾನ್ಯ ಒಂದು ತಪ್ಪನ್ನು ಹೇಳುವೆ. ಅದು ಇವತ್ತಿಗೆ ನನಗೆ ಬರುತ್ತಿರುವ ಆದಾಯ ಉಳಿಕೆ ಮಾಡಲು, ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಆದಾಯ ಹೆಚ್ಚಾದಾಗ ಹೂಡಿಕೆ ಮಾಡುವೆ ಎಂದು ಸಂತೈಸಿ ಕೊಳ್ಳುವ ತಪ್ಪು!
ಇವತ್ತಿಗೆ ನನಗೆ ಬರುತ್ತಿರುವ ಆದಾಯ ಹೆಚ್ಚಿಲ್ಲ. ಕೈ ಬಾಯಿಗೆ ಸರಿಯಾಗಿ ಹೋಗುತ್ತೆ. ಇನ್ನೆಲ್ಲಿಂದ ಉಳಿಸುವುದು? ಹೆಚ್ಚು ಹಣ ಸಂಪಾದಿಸಲು ಶುರು ಮಾಡಿದಾಗ ಉಳಿಸಲು ಶುರು ಮಾಡುತ್ತೇನೆ ಎನ್ನುವುದು ಬಹಳಷ್ಟು ಜನ ತಮಗೆ ತಾವೇ ಹೇಳಿಕೊಳ್ಳುವ ಮಾತು. ಇದೊಂದು ರೀತಿಯಲ್ಲಿ ಅವರಿಗೆ ಅವರೇ ಸಾಂತ್ವನ ಹೇಳಿಕೊಂಡಂತೆ! ವರ್ಷ, ಎರಡು ವರ್ಷದಲ್ಲಿ ಅವರ ಆದಾಯ ಹೆಚ್ಚಾಗಿರುತ್ತದೆ. ಆದರೆ ಅವರು ಉಳಿಸಲು ಶುರು ಮಾಡಿರುವುದಿಲ್ಲ. ಅಂದಿಗೆ ಬರುತ್ತಿದ್ದ ಹಣದಲ್ಲಿ ಉಳಿಕೆ ಸಾಧ್ಯವಿರಲಿಲ್ಲ. ಆದರೆ ಇಂದಿಗೆ ಆದಾಯವೇನೂ ಹೆಚ್ಚಾಗಿದೆ ,ಆದರೆ ಅದಕ್ಕೆ ತಕ್ಕಂತೆ ಖರ್ಚು ಹೆಚ್ಚಾಗಿದೆ. ಹೊಸ ಜವಾಬ್ದಾರಿಗಳು ಹೆಗಲೇರಿವೆ. ಉಳಿಸು ಎಂದರೆ ಎಲ್ಲಿಂದ ಉಳಿಸಲಿ? ಎನ್ನುವ ಪ್ರಶ್ನೆ ಅವರ ಮುಂದೆ ನಿಂತಿರುತ್ತದೆ. ನೀವು ಗಮನಿಸಿ ನೋಡಿ ಬಹುತೇಕರ ಜೀವನ ಪೂರ್ತಿ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಒಂದಲ್ಲ ಒಂದು ಇಂತಹ ಪ್ರಶ್ನೆಗಳು ಎದುರಾಗುತ್ತವೆ. ಅವುಗಳಿಗೆ ಪೂರ್ಣ ಶರಣಾಗಿ ಜೀವನ ಸವೆಸಿ ಬಿಡುತ್ತಾರೆ. ಒಳ್ಳೆ ಸಮಯ ಬರಲಿ ಎಂದು ಕಾಯುವುದು ತಪ್ಪಲ್ಲ ಅದು ಅಪರಾಧ.
ನಮಗೆಷ್ಟು ಆದಾಯ ಬರುತ್ತದೆ ಎನ್ನುವುದು ಮುಖ್ಯವಲ್ಲ. ಉಳಿಸಬೇಕು ಹೂಡಿಕೆ ಮಾಡಬೇಕು ಎನ್ನುವ ತವಕ ಬಹಳ ಮುಖ್ಯ. ಯಾವಾಗ ಕನಸಿರುತ್ತದೆ, ಅದು ಹೇಗೋ ಜಾಗ ಮಾಡಿಕೊಳ್ಳುತ್ತದೆ. ನಾವು ಬಯಸಿದ ಬದುಕು ನಮ್ಮದಾಗುತ್ತದೆ. ಹೇಳುವುದು ಸುಲಭ, ಬರೆಯುವುದು ಸುಲಭ. ಆದರೆ ನನಗೆ ಬರುವುದು ಹದಿನೈದು ಸಾವಿರ ಅಥವಾ ಇಪ್ಪತ್ತು ಸಾವಿರ ರೂಪಾಯಿ ಇದರಲ್ಲಿ ಹೇಗೆ ಉಳಿಸುವುದು? ಎನ್ನುವ ಪ್ರಶ್ನೆ ಕೂಡ ಯಾರಿಗಾದರೂ ಬಂದಿರಬಹುದು. ಹೆಚ್ಚು ಆದಾಯವಿದ್ದಾಗ ಉಳಿಸುವುದು ಸುಲಭ. ಕಡಿಮೆ ಆದಾಯವಿದ್ದಾಗ ಹೇಗೆ ಉಳಿಸುವುದು? ಎನ್ನುವುದು ಕೂಡ ಸಾಮಾನ್ಯ ಪ್ರಶ್ನೆ.
ಉಳಿಸಬೇಕು ಎನ್ನುವುದು ಆದಾಯಕ್ಕೆ ಸಂಬಂಧಿಸದ ವಿಷಯವಲ್ಲ. ಅದು ಮನಸ್ಥಿತಿಗೆ ಸಂಬಂಧಿಸಿದ್ದು. ಒಂದು ಪೇಪರ್ ಮತ್ತು ಪೆನ್ನು ಹಿಡಿದು ಕುಳಿತುಕೊಳ್ಳಿ. 15/20 ಸಾವಿರ ಆದಾಯವಿದ್ದವರು 5೦೦/1೦೦೦ ರೂಪಾಯಿ ಉಳಿಸುವುದು ಸಾಧ್ಯವಿಲ್ಲವೇ? ಎನ್ನುವುದನ್ನು ಪ್ರಶ್ನಿಸಿಕೊಳ್ಳಿ. ಮೊಬೈಲಿನಲ್ಲಿ ಬೇಡದ ರೀಲ್ಸ್ ನೋಡಲು ಬಳಸುವ ಡೇಟಾ ಹಣ ಉಳಿಸಬಹುದು. ಉಳಿಸಲು ಸಾಧ್ಯವಿಲ್ಲ ಎಂದು ಗೊಣಗುವವರು ಬೀಡಿ , ಸಿಗರೇಟು, ಗುಟುಕಾಕ್ಕೆ ಖರ್ಚು ಮಾಡುವುದನ್ನು ಉಳಿಸಿ ಅದನ್ನು ಹೂಡಿಕೆ ಮಾಡಬಹುದು. ಹೀಗೆ ಉಳಿಸಲು ಒಂದಲ್ಲ ಒಂದು ಜಾಗ ಇದ್ದೆ ಇರುತ್ತದೆ. ಆದರೆ ನಾವು ಮನಸ್ಸು ಮಾಡಿರುವುದಿಲ್ಲ ಅಷ್ಟೇ. ಮನಸ್ಸು ಮಾಡಿ ನೋಡಿ, ಬದಲಾವಣೆ ಆಗದಿದ್ದರೆ ಕೇಳಿ.
ಸರಿ ಈ ಸಮಸ್ಯೆ ಬಹುತೇಕರದ್ದು, ಇದಕ್ಕೆ ಪರಿಹಾರವೇನಾದರೂ ಇದೆಯಾ? ಈ ಪರಿಸ್ಥಿತಿಯಿಂದ ಹೊರಬರಲು ಏನಾದರೂ ಸರಳ ಫಾರ್ಮುಲಾ ಇದೆಯಾ? ಎನ್ನುವ ಪ್ರಶ್ನೆಗೆ ಹೌದು ಇದೆ. ಓನು ಸಣ್ಣ ಫಾರ್ಮುಲಾ ಇದೆ. ಅದನ್ನು ತಪ್ಪದೆ ಪಾಲಿಸುವುದು ಮಾತ್ರ ನಿಮ್ಮ ಕೈಲಿದೆ.
ಆದಾಯಕ್ಕೆ ತಕ್ಕಂತೆ ಖರ್ಚು ಹೆಚ್ಚುವುದು ಸಹಜ. ಅದು ಗೊತ್ತಿಲ್ಲದೇ ಆಗಿಬಿಡುತ್ತದೆ. ಹೀಗಾಗಿ ಸಾಮಾನ್ಯವಾಗಿ ಆದಾಯ ಮೈನಸ್ ಖರ್ಚು ಉಳಿದದ್ದು ಉಳಿಕೆ ಎನ್ನುವ ಸಿದ್ದಾಂತ ಸಮಾಜ ಪಾಲಿಸುತ್ತ ಬಂದಿದೆ. ಇಲ್ಲಿ ಒಂದು ಪುಟ್ಟ ಬದಲಾವಣೆ ಮಾಡಿಕೊಳ್ಳೋಣ. ಆದಾಯ ಮೈನಸ್ ಉಳಿಕೆ ಉಳಿದದ್ದು ಖರ್ಚು ಎನ್ನುವ ತತ್ವ ಅಳವಡಿಸಿಕೊಳ್ಳೋಣ. ಉದಾಹರಣೆ ನೋಡೋಣ ಆದಾಯ 20 ಸಾವಿರ ಎಂದುಕೊಳ್ಳೋಣ. ನಾವು 2 ಸಾವಿರ ಉಳಿಸಬೇಕು ಎಂದು ನಿರ್ಧಾರ ಮಾಡಿದ್ದೇವೆ ಎಂದುಕೊಳ್ಳೋಣ. ಆಗ ಆದಾಯ ಮೈನಸ್ ಉಳಿತಾಯ 18 ಸಾವಿರವಾಗುತ್ತದೆ. ಇದನ್ನು ಆದಾಯ ಎಂದುಕೊಳ್ಳುವುದು ಮತ್ತು ಅದರ ಮಿತಿಯಲ್ಲಿ ಬದುಕುವುದು. ಇದು ಒಂದು ದಿನದಲ್ಲಿ ಆಗುವಂತಹದಲ್ಲ. ಹಾಗೆಂದು ಸಾಧ್ಯವಿಲ್ಲ ಎನ್ನುವಂತಿಲ್ಲ.
ನೆನಪಿಡಿ: ಉಳಿಸಬೇಕು ಎನ್ನುವುದು ಮನಸ್ಥಿತಿಯೇ ಹೊರತು ಆದಾಯಕ್ಕೆ ಸಂಬಂಧಿಸಿದ್ದಲ್ಲ !

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com