ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಸಿಎಂ-ಡಿಸಿಎಂ online desk
ಅಂಕಣಗಳು

ಕೊಟ್ಟ ಮಾತಿನ ಕದನ: ಕಾಂಗ್ರೆಸ್‌ ಹೈಕಮಾಂಡ್‌ಗೆ ಈಗ ಹಗ್ಗದ ಮೇಲಿನ ನಡಿಗೆ! (ನೇರ ನೋಟ)

ಶಿವಕುಮಾರ್‌ ಅವರ ಮಾತನ್ನೇ ಗಮನಿಸಿ. ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತ ಕೇಳುತ್ತಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎನ್ನುತ್ತಿದ್ದೇನೆ. ಇದರಲ್ಲಿ ತಪ್ಪೇನು ಎಂಬುದು ಅವರ ಪ್ರಶ್ನೆ.

ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಮಾತು ಕೊಟ್ಟಿಲ್ಲ ಅಂತಾದರೂ ಹೇಳಬೇಕು. ಮಾತು ಕೊಟ್ಟು ಅದನ್ನು ಉಳಿಸಿಕೊಳ್ಳದಿದ್ದರೆ ಜನರು ಇದನ್ನು ಒಪ್ಪುವುದಿಲ್ಲ. ಏಕೆಂದರೆ ಬಿಜೆಪಿ ಜೊತೆ ಮೈತ್ರಿ ಮಾಡಿ ಇಪ್ಪತ್ತು ತಿಂಗಳು ಅಧಿಕಾರ ಅನುಭವಿಸಿದ ನಂತರ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡದ ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಚನಭ್ರಷ್ಟರಾಗಿದ್ದರು. ಅವರಿಗೆ 2008ರ ವಿಧಾನಸಭಾ ಚುನಾವಣೆಯಲ್ಲಿ ಜನರು ಪಾಠ ಕಲಿಸಿರುವ ಇತಿಹಾಸ ನಮ್ಮ ಮುಂದಿದೆ.

ಕರ್ನಾಟಕದ ರಾಜಕಾರಣ ಇವತ್ತು ಅಂಥದ್ದೇ ಒಂದು ಪರಿಸ್ಥಿತಿಗೆ ಬಂದು ನಿಂತಿದೆ. ಆಗ ಕುಮಾರಸ್ವಾಮಿ ಅವರ ಜೆಡಿಎಸ್‌ ಹಾಗೂ ಬಿಜೆಪಿ ಮಧ್ಯೆ ಬಹಿರಂಗವಾಗಿ 20: 20 ಅಧಿಕಾರದ ಹಸ್ತಾಂತರದ ಒಪ್ಪಂದವಾಗಿತ್ತು. ಇಬ್ಬರೂ ಬಹಿರಂಗವಾಗಿಯೇ ಈ ಒಪ್ಪಂದದ ಬಗ್ಗೆ ಮಾತಾಡಿದ್ದರು.

ಆದರೆ, ಈಗ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಸ್ತಾಂತರ ಹೈಕಮಾಂಡ್‌ ಮಟ್ಟದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಆಗಿದೆ. ಇಂತಹ ಯಾವುದೇ ಒಪ್ಪಂದ ಆಗಿಲ್ಲ ಎಂದು ಕೆಲವು ತಿಂಗಳ ಹಿಂದೆ ಸಿದ್ದರಾಮಯ್ಯ ಘಂಟಾಘೋಷವಾಗಿ ಸಾರಿದ್ದರು. ಆದರೆ, ನಂತರ ಇದನ್ನು ಹೆಚ್ಚು ಪುನರುಚ್ಛರಿಸಲು ಹೋಗಿಲ್ಲ. ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ತಮಗೆ ಎರಡೂವರೆ ವರ್ಷಗಳ ನಂತರ ಸರದಿಯಂತೆ ಮುಖ್ಯಮಂತ್ರಿ ಸ್ಥಾನ ನೀಡುವ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಡಿಸಿಎಂ ಶಿವಕುಮಾರ್‌ ಪಟ್ಟು ಹಿಡಿದಿದ್ದಾರೆ.

ಶಿವಕುಮಾರ್‌ ಅವರ ಮಾತನ್ನೇ ಗಮನಿಸಿ. ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತ ಕೇಳುತ್ತಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎನ್ನುತ್ತಿದ್ದೇನೆ. ಇದರಲ್ಲಿ ತಪ್ಪೇನು ಎಂಬುದು ಅವರ ಪ್ರಶ್ನೆ. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ಜಗತ್ತಿನಲ್ಲಿರುವ ದೊಡ್ಡ ಶಕ್ತಿ. ಯಾರೇ ಆದರೂ ಕೊಟ್ಟ ಮಾತಿಗೆ ತಕ್ಕಂತೆ ನಡೆಯಬೇಕಿದೆ ಎಂಬುದು ಅವರ ಪಟ್ಟು. ಶಿವಕುಮಾರ್ ಅವರ ನಡೆ ಹಾಗೂ ಮಾತು ಕುತೂಹಲ ಹೆಚ್ಚಿಸಿದೆ. ಮುಖ್ಯಮಂತ್ರಿ ಗಾದಿಗಾಗಿ ಅವರದು ಉಡದ ಪಟ್ಟು.

ಹೈಕಮಾಂಡ್‌ ಸಂಸ್ಕೃತಿ ಬಲವಾಗಿ ಬೇರೂರಿರುವ ಪಕ್ಷ ಕಾಂಗ್ರೆಸ್‌ . ಚೆಂಡು ಈಗ ಹೈಕಮಾಂಡ್‌ ಅಂಗಳದಲ್ಲಿದೆ. ಕಾಂಗ್ರೆಸ್‌ ನಾಯಕ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಕರ್ನಾಟಕ ಕಾಂಗ್ರೆಸ್‌ ರಾಜಕಾರಣದ ಬಿಕ್ಕಟ್ಟನ್ನು ಬಗೆಹರಿಸಬೇಕಿದೆ. ತೀರ್ಮಾನ ಪ್ರಕಟಿಸಬೇಕಿದೆ.

ರಾಹುಲ್‌ ಗಾಂಧಿ ಅವರಿಗೆ ಸಿದ್ದರಾಮಯ್ಯ ಪರ ಮೊದಲಿನಿಂದಲೂ ಒಲವು. ಸಿದ್ದರಾಮಯ್ಯ ಅವರ ಸೈದ್ಧಾಂತಿಕ ನಿಲುವುಗಳು ಹಾಗೂ ರಾಹುಲ್‌ ಗಾಂಧಿ ಅವರ ವಿಚಾರಧಾರೆಗಳು ಹೊಂದಿಕೆ ಆಗುತ್ತವೆ. ಸೈದ್ದಾಂತಿಕ ವಿಚಾರ ಬಂದಾಗ ಶಿವಕುಮಾರ್‌ ಈ ರಾಡಾರ್‌ ನಲ್ಲಿ ಇಲ್ಲ. ಆದರೆ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹಾಗೂ ಅವರ ಪುತ್ರಿ ಲೋಕಸಭಾ ಸದಸ್ಯೆ ಪ್ರಿಯಾಂಕಾ ವಾದ್ರಾ ಅವರಿಗೆ ಶಿವಕುಮಾರ್ ಅವರ ಪಕ್ಷ ನಿಷ್ಠೆ, ಸಂಘಟನೆ, ಹೋರಾಟಕ್ಕೆ ಮೆಚ್ಚುಗೆ ಇದೆ. ಹೀಗಾಗಿ, ಹೈಕಮಾಂಡ್‌ ತಳೆಯುವ ನಿಲುವು ಕುತೂಹಲಕಾರಿ. ಇದು ಕರ್ನಾಟಕದ ರಾಜಕಾರಣದ ಮುಂದಿನ ಬೆಳವಣಿಗೆಗಳ ಮೇಲೆಯೂ ಪರಿಣಾಮ ಬೀರುವಂಥದ್ದು. ಕರ್ನಾಟಕದ ಕಾಂಗ್ರೆಸ್‌ ರಾಜಕಾರಣ ಇದೀಗ ಕುತೂಹಲದ ಘಟ್ಟಕ್ಕೆ ಬಂದು ನಿಂತಿದೆ.

ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರಿಗೆ ಇದು ಅಗ್ನಿ ಪರೀಕ್ಷೆ ಆಗಿರಬಹುದು. ಅದಕ್ಕಿಂತಲೂ ಮುಖ್ಯವಾಗಿ ರಾಹುಲ್‌ ಗಾಂಧಿ ಅವರಿಗೆ ಸತ್ವ ಪರೀಕ್ಷೆ. ರಾಜಕೀಯ ಪ್ರಬುದ್ಧತೆ ಪ್ರದರ್ಶನಕ್ಕೆ ಅವಕಾಶ. ಕಾಂಗ್ರೆಸ್ ಹೈಕಮಾಂಡ್‌ ತನ್ನ ತೀರ್ಮಾನ ಪ್ರಕಟಿಸುವುದನ್ನು ತಡಮಾಡಿದಷ್ಟು ಶಾಸಕರ ಬಣ ರಾಜಕಾರಣ ಬಿರುಸು ಪಡೆಯಲಿದೆ. ಇದು ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸುವ ಸಾಧ್ಯತೆ ಹೆಚ್ಚು. ಹಾಗಂತ ಯಥಾಸ್ಥಿತಿ ಮುಂದುವರಿದರೂ ಬಿಕ್ಕಟ್ಟು ಬಗೆಹರಿಯುವುದಿಲ್ಲ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೂ ತನ್ನ ಈ ನಡೆಯನ್ನು ಜೀರ್ಣಿಸಿಕೊಳ್ಳುವುದು ಕಾಂಗ್ರೆಸ್ಸಿಗೆ ಅಷ್ಟು ಸುಲಭವಲ್ಲ. ಮಾಸ್‌ ಲೀಡರ್‌ ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಿದ ಪ್ರತಿಕೂಲ ಪರಿಣಾಮವನ್ನು ಕಾಂಗ್ರೆಸ್‌ ಹೇಗೆ ಎದುರಿಸುತ್ತದೆ ಎಂಬ ಪ್ರಶ್ನೆಯೂ ಇದೆ. ಕಾಂಗ್ರೆಸ್‌ ಹೈಕಮಾಂಡ್‌ಗೆ ಈಗ ನಿಜಕ್ಕೂ ಹಗ್ಗದ ಮೇಲಿನ ನಡಿಗೆಯೇ ಸರಿ. ಎಚ್ಚರ ತಪ್ಪಿದರೆ ಪಾತಾಳ.

ಮುಖ್ಯಮಂತ್ರಿ ಸ್ಥಾನದ ಹಸ್ತಾಂತರದ ಹಗ್ಗಜಗ್ಗಾಟ ತೀವ್ರವಾಗಿರುವಾಗಲೇ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಬುಧವಾರ ನೀಡಿರುವ ಹೇಳಿಕೆ ರಾಜ್ಯ ಕಾಂಗ್ರೆಸ್ಸಿನ ಬೆಳವಣಿಗೆಗಳಿಗೆ ಹೊಸ ದಿಕ್ಕನ್ನು ತೋರಿಸಿದೆ. ಉಳಿದ ಎರಡೂವರೆ ವರ್ಷಗಳ ಅವಧಿಗೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂಬ ಅಭಿಲಾಷೆ ನಮಗಿದೆ. ಶಿವಕುಮಾರ್‌ ಅವರಿಗೆ ಒಂದು ಅವಕಾಶ ನೀಡಬೇಕು. ಇದು ಎಲ್ಲರ ಒಕ್ಕೂರಲ ಕೂಗಾಗಿದೆ ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸ ಒದಗಿಸಿದೆ.

ಒಕ್ಕಲಿಗ ಸಮುದಾಯದ ಶ್ರೀಗಳ ಹೇಳಿಕೆಗೆ ಕುರುಬ ಸಮಾಜದ ಕಾಗಿನೆಲೆ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವುದು, ಬದಲಿಸುವುದು ಶಾಸಕರಿಗೆ ಬಿಟ್ಟ ವಿಚಾರ. ಇದು ಸಂವಿಧಾನದ ನಿಯಮ. ಮಠಾಧೀಶರು ಹೇಳಿದ ಕೂಡಲೇ ಮುಖ್ಯಮಂತ್ರಿ ಆಗುತ್ತಾರೆ ಎಂಬ ಅವಕಾಶ ಸಂವಿಧಾನದಲ್ಲಿ ಇದೆಯೇ ಎಂಬ ಕಾಗಿನೆಲೆ ಶ್ರೀಗಳ ಪ್ರಶ್ನೆಯು ಈ ವಿವಾದವು ಯತಿಗಳ ನಡುವಿನ ವಾಕ್ಸಮರಕ್ಕೂ ದಾರಿ ಮಾಡಿದಂತಾಗಿದೆ. ಆದಿಚುಂಚನಗಿರಿ ಶ್ರೀಗಳ ಹೇಳಿಕೆಗೆ ಕಾಂಗ್ರೆಸ್‌ ನಲ್ಲಿರುವ ಅಹಿಂದ ನಾಯಕರಿಂದ ಆಕ್ಷೇಪ ವ್ಯಕ್ತವಾಗಿರುವುದು ಕಾಂಗ್ರೆಸ್‌ನಲ್ಲಿ ಸಮುದಾಯದ ಧ್ರುವೀಕರಣ ಗಟ್ಟಿಗೊಳ್ಳುತ್ತಿರುವುದನ್ನು ಪ್ರದರ್ಶಿಸುತ್ತದೆ.

ಕರ್ನಾಟಕದಲ್ಲಿ ಒಕ್ಕಲಿಗರು ಹಾಗೂ ವೀರಶೈವ-ಲಿಂಗಾಯತರು ಕಾಂಗ್ರೆಸ್‌ ನಿಂದ ದೂರ ಸರಿದು ಅನೇಕ ವರ್ಷಗಳೇ ಉರುಳಿತು. 1999 ಹಾಗೂ 2023ರ ಅಸೆಂಬ್ಲಿ ಚನಾವಣೆಯಲ್ಲಿ ಎಸ್.ಎಂ.ಕೃಷ್ಣ ಹಾಗೂ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದ ಕಾರಣಕ್ಕೆ ಮುಖ್ಯಮಂತ್ರಿ ಆಗಬಹುದೆಂದು ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದರು. ಆಗ ಎಸ್‌.ಎಂ.ಕೃಷ್ಣ ಅನಾಯಾಸವಾಗಿ ಮುಖ್ಯಮಂತ್ರಿಯಾದರು. ಶಿವಕುಮಾರ್ ಈಗ ಮಾತು ತಪ್ಪಬೇಡಿ ಎಂದು ಮುಖ್ಯಮಂತ್ರಿಯಾಗಲು ಹಠಕ್ಕೆ ಬಿದ್ದಿದ್ದಾರೆ. ಶಿವಕುಮಾರ್‌ ಅವರಿಗೆ ಮಾತು ಕೊಟ್ಟಿಲ್ಲದಿದ್ದರೆ ಹೈಕಮಾಂಡ್‌ ಬಿಗಿ ಆಗಿರುತ್ತಿತ್ತು. ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಇಷ್ಟೊತ್ತಿಗಾಗಲೇ ಹೇಳುತ್ತಿತ್ತು ಅಲ್ಲವೇ?

ಕಾಂಗ್ರೆಸ್‌ ವೋಟು ಬ್ಯಾಂಕು ಹಾಗೂ ಸಿದ್ದರಾಮಯ್ಯ ಅವರ ಮತಬ್ಯಾಂಕು ಬಹುತೇಕ ಒಂದೇ ಆಗಿರುವುದು ಹೈಕಮಾಂಡ್‌ಗೆ ಸವಾಲಾಗಿದೆ. ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸುವುದರಿಂದ ಅವರ ವೋಟು ಬ್ಯಾಂಕು ಕಾಂಗ್ರೆಸ್‌ ನಿಂದ ದೂರ ಸರಿದರೆ ಎಂಬ ಚಿಂತೆ ಇದೆ. ಕಾಂಗ್ರೆಸ್ಸಿಗೆ ಈ ಸಮುದಾಯದ ಅಂದರೆ ಅಹಿಂದ ಸಮುದಾಯದ ವೋಟು ಬ್ಯಾಂಕೇ ಮುಖ್ಯ. ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಅವರಿಗೂ ಲಾಭವಾಗಿದೆ. ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ಸಿಗೂ ಲಾಭ ಆಗಿದೆ. ಸಿದ್ದರಾಮಯ್ಯ ಕಾಂಗ್ರೆಸ್‌ ಸೇರಿದ ನಂತರ ಎರಡು ಬಾರಿ ಆ ಪಕ್ಷ ಆಡಳಿತ ಚುಕ್ಕಾಣಿ ಹಿಡಿದಿದೆ.

ಇಲ್ಲಿ ಒಂದನ್ನು ಗಮನಿಸಬೇಕು. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿ ಕಳೆದ 17 ವರ್ಷಗಳಿಂದ ಅಂದರೆ 2008 ರಿಂದ ನಿರಂತರವಾಗಿ ಸಿದ್ದರಾಮಯ್ಯ ಅವರೇ ಇದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ, ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಜೊತೆ ಕೈಜೋಡಿಸಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ, ಪ್ರತಿಪಕ್ಷದಲ್ಲಿದ್ದಾಗಲೂ ಅವರೇ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು. ಮೂಲ ಕಾಂಗ್ರೆಸ್ಸಿಗರಿಗೆ ಅವಕಾಶವೇ ದೊರೆತಿಲ್ಲ. ಕರ್ನಾಟಕದ ರಾಜಕಾರಣದಲ್ಲಿ ಬಹುಶಃ ಇಷ್ಟು ಸುದೀರ್ಘ ಅವಧಿಗೆ ಯಾರೂ ಯಾವುದೇ ಪಕ್ಷದಲ್ಲೂ ಶಾಸಕಾಂಗ ಪಕ್ಷದ ನಾಯಕರಾಗಿಲ್ಲ. ಸಿದ್ದರಾಮಯ್ಯ ಅವರ ನಾಯಕತ್ವಕ್ಕೂ ಈಗ ಒಂದು ರೀತಿ ಜಡತ್ವ ಆವರಿಸಿದೆ. ಆಡಳಿತದ ಮೇಲೆಯೂ ಇದರ ಪ್ರತಿಕೂಲ ಪರಿಣಾಮ ಬೀರಿದೆ. ಇದಕ್ಕೆ ಸಿದ್ದರಾಮಯ್ಯ ಅವರ ವಯೋಸಹಜ ಗುಣವೂ ಕಾರಣ ಇರಬಹುದು.

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರಕ್ಕೆ ನಿಚ್ಛಳ ಬಹುಮತವಿದೆ. ಹೀಗಿದ್ದರೂ ಹೈಕಮಾಂಡ್‌ ಯಾವುದೇ ನಿರ್ಧಾರ ಕೈಗೊಂಡರೂ ಇನ್ನು ಸ್ಥಿರ ಸರಕಾರದ ಮಾತು ದೂರ ಉಳಿಯುವ ಸಾಧ್ಯತೆಯೇ ಹೆಚ್ಚು. ಉಳಿದ ಎರಡೂವರೆ ವರ್ಷಗಳ ಸರಕಾರದ ಹಾದಿ ಪೂರ್ವಾರ್ಧದ ಎರಡೂವರೆ ವರ್ಷಗಳಷ್ಟು ಸುಗಮವಲ್ಲ.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೃಷ್ಣನೂರು ಉಡುಪಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ: ಹೂಮಳೆ ಸುರಿಸಿ ಸ್ವಾಗತ ಕೋರಿದ ಜನತೆ..!

ಮೂರನೇ ಜಗತ್ತಿನ ದೇಶಗಳಿಗೆ ಮತ್ತೊಂದು ಶಾಕ್ ನೀಡಿದ ಡೊನಾಲ್ಡ್ ಟ್ರಂಪ್! ಜಾಗತಿಕವಾಗಿ ಬಹು ದೊಡ್ಡ ಹೊಡೆತ?

ಉಗ್ರರಿಗೆ ನೆರವು: ನಿಷೇಧಿತ ಜಮಾತ್-ಇ-ಇಸ್ಲಾಂಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಮ್ಮು-ಕಾಶ್ಮೀರ ಪೊಲೀಸರು ದಾಳಿ, ತೀವ್ರ ಶೋಧ

ಮೀರತ್​ ಕೊಲೆ ಪ್ರಕರಣ: ಹೆಣ್ಣು ಮಗುವಿಗೆ ರಾಧಾ ಎಂದು ಹೆಸರಿಟ್ಟ ಮುಸ್ಕಾನ್, DNA ಪರೀಕ್ಷೆಗೆ ಸೌರಭ್ ಕುಟುಂಬಸ್ಥರ ಆಗ್ರಹ

ಬೆಳಗಾವಿ: ಖಾನಾಪುರದಲ್ಲಿ ತಹಶಿಲ್ದಾರ್ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ಕಚ್ಚಾಟ!

SCROLL FOR NEXT