ಮಣಿಪುರ (ಸಂಗ್ರಹ ಚಿತ್ರ) online desk
ಅಂಕಣಗಳು

ಮಾದಕ ದ್ರವ್ಯ ವ್ಯಾಪಾರಕ್ಕೆ ಮಣಿಪುರ ಸ್ವರ್ಗ? ಕಳ್ಳಸಾಗಣೆದಾರರನ್ನು ಸೆಳೆಯುತ್ತಿರುವುದಾದರು ಏನು? (ಜಾಗತಿಕ ಜಗಲಿ)

ಸಂಶೋಧನೆಯೊಂದರ ಪ್ರಕಾರ 2007 ಮತ್ತು 2023ರ ನಡುವೆ ಮಣಿಪುರದ ಅಧಿಕಾರಿಗಳು 14 ವಿಭಿನ್ನ ರಾಜ್ಯಗಳಿಂದ 115 ಜನರನ್ನು ಮಾದಕ ದ್ರವ್ಯ ಸಾಗಣೆಯ ಆರೋಪದಲ್ಲಿ ಬಂಧಿಸಿದ್ದಾರೆ.

ಅಕ್ರಮ ಮಾದಕ ವಸ್ತು ವ್ಯಾಪಾರದಿಂದ ಗಳಿಸುವ ಕ್ಷಿಪ್ರ ಮತ್ತು ಅಪಾರ ಪ್ರಮಾಣದ ಲಾಭದ ಆಸೆ ಈಗ ಭಾರತದ ವಿವಿಧ ಪ್ರದೇಶಗಳ ಕಳ್ಳ ಸಾಗಣೆದಾರರನ್ನು ಭಾರತದ ಈಶಾನ್ಯ ರಾಜ್ಯವಾದ ಮಣಿಪುರದತ್ತೆ ಸೆಳೆಯುತ್ತಿದೆ. ಈ ಬೆಳವಣಿಗೆ ಮಣಿಪುರವನ್ನು ಭಾರತದ ನಾರ್ಕೋಟಿಕ್ಸ್‌ ಜಾಲದ ಪ್ರಮುಖ ಕೇಂದ್ರವನ್ನಾಗಿಸಿದೆ.

ಜರ್ನಲ್‌ ಆಫ್‌ ಮನಿ ಲಾಂಡರಿಂಗ್‌ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯೊಂದು, 2007 ಮತ್ತು 2023ರ ನಡುವೆ ಮಣಿಪುರದ ಅಧಿಕಾರಿಗಳು 14 ವಿಭಿನ್ನ ರಾಜ್ಯಗಳಿಂದ ಬಂದ 115 ಜನರನ್ನು ಮಾದಕ ದ್ರವ್ಯ ಸಾಗಣೆಯ ಆರೋಪದಲ್ಲಿ ಮಣಿಪುರದಲ್ಲಿ ಬಂಧಿಸಿದ್ದಾರೆ ಎಂದು ತಿಳಿಸಿದೆ. ಈ ಅವಧಿಯಲ್ಲಿ ಮಣಿಪುರದಲ್ಲಿ ಒಟ್ಟು 3,627 ಜನರನ್ನು ಮಾದಕ ದ್ರವ್ಯ ಸಾಗಣೆಯ ಆರೋಪದಲ್ಲಿ ಬಂಧಿಸಲಾಗಿದೆ. ಹಂಜಬಾಮ್‌ ಈಶ್ವರಚಂದ್ರ ಶರ್ಮ ಹಾಗೂ ಶುಖ್‌ದೇಬ ಶರ್ಮ ಹಂಜಮ್‌ ಅವರು ಬರೆದಿರುವ ʼಫೇಸೆಟ್ಸ್‌ ಆಫ್‌ ಡ್ರಗ್‌ ಟ್ರಾಫಿಕಿಂಗ್‌ ಇನ್‌ ಮಣಿಪುರ್‌, ಎ ಬಾರ್ಡರ್‌ ಸ್ಟೇಟ್‌ ಆಫ್‌ ಇಂಡಿಯಾ: ವಾಲ್ಯೂಮ್ಸ್‌, ಎಥ್ನಿಸಿಟಿ ಆಂಡ್‌ ವ್ಯಾಲ್ಯೂʼ ಎಂಬ ಸಂಶೋಧನಾ ಬರಹ ಈ ಅಂತರರಾಜ್ಯ ಕಳ್ಳ ಸಾಗಣೆದಾರರ ಪೈಕಿ 42% ಜನರು ಮಣಿಪುರದ ನೆರೆ ರಾಜ್ಯವಾದ ಅಸ್ಸಾಮಿನಿಂದ ಬಂದಿದ್ದಾರೆ ಎಂದು ವಿವರಿಸಿದೆ.

ಇನ್ನುಳಿದ ಬಂಧಿತ ವ್ಯಕ್ತಿಗಳು ಭಾರತದ ವಿವಿಧ ರಾಜ್ಯಗಳಾದ ಬಿಹಾರ, ಚತ್ತೀಸ್‌ಘಡ್‌, ಜಮ್ಮು ಮತ್ತು ಕಾಶ್ಮೀರ, ಮಿಜೋರಾಂ, ಮಧ್ಯ ಪ್ರದೇಶ, ನಾಗಾಲ್ಯಾಂಡ್‌, ನವದೆಹಲಿ, ಪಂಜಾಬ್‌, ರಾಜಸ್ಥಾನ, ತಮಿಳು ನಾಡು, ತ್ರಿಪುರ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಿಗೆ ಸೇರಿದ್ದಾರೆ. ಈ ಅಂಕಿ ಅಂಶಗಳು ಕೇವಲ ಬಂಧನಕ್ಕೊಳಗಾದ ವ್ಯಕ್ತಿಗಳನ್ನು ತೋರಿಸಿವೆ. ಬಹಳಷ್ಟು ಜನರು ಪೊಲೀಸರಿಗೆ ಸೆರೆಯಾಗುವುದರಿಂದ ತಪ್ಪಿಸಿಕೊಂಡು ಪಲಾಯನ ಮಾಡಿದ್ದಾರೆ, ಅಥವಾ ಪೊಲೀಸರಿಂದ ತಲೆ ಮರೆಸಿಕೊಂಡಿದ್ದಾರೆ. ಈ ಬೆಳವಣಿಗೆಗಳು ಈಗಾಗಲೇ ಅಪಾರ ಸಂಖ್ಯೆಯ ಕಳ್ಳ ಸಾಗಣೆದಾರರು ಮಣಿಪುರದ ಮಾದಕ ದ್ರವ್ಯ ವ್ಯಾಪಾರದತ್ತ ಆಕರ್ಷಿತರಾಗಿದ್ದಾರೆ ಎನ್ನುವುದನ್ನು ಪ್ರದರ್ಶಿಸುತ್ತಿದೆ. ಇದು ಮಾದಕ ವಸ್ತುಗಳ ವ್ಯಾಪಾರ ಮಣಿಪುರದಲ್ಲಿ ಎಷ್ಟು ಆಳವಾಗಿ ಬೇರೂರಿದೆ ಮತ್ತು ಅದು ಹೇಗೆ ಭಾರತದ ವಿವಿಧ ರಾಜ್ಯಗಳತ್ತ ತನ್ನ ಕರಾಳ ಹಸ್ತಗಳನ್ನು ಚಾಚುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಅಸ್ಸಾಮ್‌ ಸರ್ಕಾರದ ಅಧಿಕಾರಿಯೊಬ್ಬರು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಾ, ಭಾರತದ ಮಾದಕ ವಸ್ತುಗಳ ಮಾರುಕಟ್ಟೆ ದಿನದಿಂದ ದಿನಕ್ಕೆ ಅಪಾರವಾಗಿ ವೃದ್ಧಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಮಣಿಪುರದಲ್ಲಿ ಅಪಾರವಾಗಿ ನಡೆಯುತ್ತಿರುವ ಗಾಂಜಾ ಬೆಳೆ ಮತ್ತು ಬ್ರೌನ್‌ ಶುಗರ್‌ ಉತ್ಪಾದನೆ ಇದಕ್ಕೆ ಕಾರಣ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅದರೊಡನೆ, ನೆರೆಯ ಮಯನ್ಮಾರ್‌ನಿಂದ ಯಾಬಾ ಮತ್ತು ವರ್ಲ್ಡ ಇಸ್‌ ಯುವರ್ಸ್‌ (ಡಬ್ಲ್ಯುವೈ) ಮಾತ್ರೆಯಂತಹ ಆಂಫೆಟಾಮೈನ್‌ ಟೈಪ್‌ ಸ್ಟಿಮ್ಯುಲೆಂಟ್‌ಗಳು (ಎಟಿಎಸ್)‌ ಮಣಿಪುರಕ್ಕೆ ಪ್ರವೇಶಿಸಿ, ಅಲ್ಲಿಂದ ವಿವಿಧ ಮಾರ್ಗಗಳ ಮೂಲಕ ಭಾರತದ ಬೇರೆ ಬೇರೆ ಪ್ರದೇಶಗಳಿಗೆ ರವಾನೆಯಾಗುತ್ತಿವೆ ಎಂದು ಅವರು ವಿವರಿಸಿದ್ದಾರೆ.

ವರ್ಷಗಳ ಕಾಲ ನಡೆಸಿರುವ ಮಾದಕ ದ್ರವ್ಯ ವಶಪಡಿಸಿಕೊಳ್ಳುವ ಕಾರ್ಯಾಚರಣೆಗಳು ಈ ಕಳ್ಳ ಸಾಗಣೆಯ ಮಾರ್ಗದಾದ್ಯಂತ ಇದ್ದ ಹಲವಾರು ಮಾದಕ ದ್ರವ್ಯ ಹಂಚಿಕೆ ಕೇಂದ್ರಗಳನ್ನು ತೋರಿಸಿವೆ. ಈ ಕೇಂದ್ರಗಳಿಂದಲೇ ಮಾದಕ ದ್ರವ್ಯಗಳು ಭಾರತದಾದ್ಯಂತ ವಿವಿಧ ನಗರಗಳಿಗೆ ಪೂರೈಕೆಯಾಗುತ್ತಿವೆ. ಪಶ್ಚಿಮ ಬಂಗಾಳದ ಸಿಲಿಗುರಿ ಕೇವಲ ಮಾದಕ ದ್ರವ್ಯಗಳಿಗೆ ಮಾತ್ರವಲ್ಲದೆ, ಇತರ ಅಕ್ರಮ ವಸ್ತುಗಳ ಸಾಗಾಣಿಕೆಗೂ ಒಂದು ಸಕ್ರಿಯ ಕೇಂದ್ರವಾಗಿದೆ ಎಂದು ಅಧಿಕಾರಿಗಳು ಗುರುತಿಸಿದ್ದಾರೆ.

ಪ್ರಸ್ತುತ ಸಂಶೋಧನೆಯ ಪ್ರಕಾರ, ಮಣಿಪುರದಲ್ಲಿ ಮಾದಕ ದ್ರವ್ಯ ಸಂಬಂಧಿಸಿದ ಪೊಲೀಸ್‌ ಪ್ರಕರಣಗಳ ಪೈಕಿ ಹೆರಾಯಿನ್‌ ಹೆಚ್ಚಿನ ಪಾರಮ್ಯ ಸಾಧಿಸಿದೆ. ಎಲ್ಲ ಪ್ರಕರಣಗಳ 46% ಪ್ರಕರಣಗಳು ಹೆರಾಯಿನ್‌ಗೆ ಸಂಬಂಧಿಸಿವೆ. ಯಾಬಾ ಮತ್ತು ಡಬ್ಲ್ಯುವೈ ಮಾತ್ರೆಗಳಂತಹ ಎಟಿಎಸ್‌ ಮಾದಕ ದ್ರವ್ಯಗಳು ಎರಡನೇ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಅಧಿಕೃತತೆ ಇಲ್ಲದೆ ಸೇವಿಸುವ ಪ್ರಿಸ್ಕ್ರಿಪ್ಷನ್ ಔಷಧಗಳು ಮತ್ತು ಗಾಂಜಾ ಇವೆ. ಹೆರಾಯಿನ್‌ ಮಯನ್ಮಾರಿನಿಂದ ಅಕ್ರಮ ಸಾಗಾಟದ ಮೂಲಕ ಮತ್ತು ಸ್ಥಳೀಯವಾಗಿ ಬೆಳೆಯುವ ಮೂಲಕ ಮಣಿಪುರವನ್ನು ತಲುಪುತ್ತಿದೆ ಎಂದು ಅಧ್ಯಯನ ವಿವರಿಸಿದ್ದು, ಬಹಳಷ್ಟು ರಹಸ್ಯ ಕಾರ್ಖಾನೆಗಳು ಓಪಿಯಂನಿಂದ ಹೆರಾಯಿನ್‌ ತಯಾರಿಸುವುದು ಬೆಳಕಿಗೆ ಬಂದಿವೆ.

ಇನ್ನು ಮಣಿಪುರದಲ್ಲಿ ನಡೆಯುತ್ತಿರುವ ಪಾಪ್ಪಿ (ಗಸಗಸೆ) ಕೃಷಿಯ ಪ್ರಮಾಣವಂತೂ ಆತಂಕ ಮೂಡಿಸುವಂತಿದೆ. ನಾರ್ಕೋಟಿಕ್ಸ್‌ ಆಂಡ್‌ ಅಫೇರ್ಸ್‌ ಆಫ್‌ ಬಾರ್ಡರ್‌ (ಎನ್‌ಎಬಿ) ಅಂಕಿಅಂಶಗಳ ಪ್ರಕಾರ, 2018ರಿಂದ 2022ರ ನಡುವೆ ಮಣಿಪುರದಲ್ಲಿ 105.97 ಕೋಟಿ ರೂಪಾಯಿ ಬೆಲೆಬಾಳುವ ಗಸಗಸೆ ಸಸ್ಯಗಳನ್ನು ನಾಶಪಡಿಸಲಾಗಿದೆ. ಇಲ್ಲಿಯ ತನಕ ಮಣಿಪುರದಲ್ಲಿ ಅಧಿಕಾರಿಗಳು ಅಂದಾಜು 19,547.6 ಎಕರೆಗಳಷ್ಟು ಗಸಗಸೆ ಬೆಳೆ ನಾಶಪಡಿಸಿದ್ದಾರೆ. ಗಸಗಸೆ ಬೆಳೆಯುವುದನ್ನು ಮಣಿಪುರದಲ್ಲಿ ಸಂಪೂರ್ಣವಾಗಿ ಇಲ್ಲವಾಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತಮ್ಮ ಪ್ರಯತ್ನಗಳನ್ನು ನಿರಂತರವಾಗಿ ಮುಂದುವರಿಸಿದ್ದಾರೆ.

2022ರ ಒಂದೇ ವರ್ಷದಲ್ಲಿ, ವಶಪಡಿಸಿಕೊಳ್ಳಲಾದ ಮಾದಕ ದ್ರವ್ಯಗಳು ಮತ್ತು ನಾಶಪಡಿಸಲಾದ ಗಸಗಸೆ ಸಸ್ಯಗಳ ಮೌಲ್ಯವೇ ಅಂದಾಜು 1,750 ಕೋಟಿ ರೂಪಾಯಿ (ಅಂದಾಜು 19.88 ಮಿಲಿಯನ್‌ ಡಾಲರ್)‌ ಎನ್ನಲಾಗಿದ್ದು, ಇದು ಮಣಿಪುರದ ಒಟ್ಟು ಜಿಡಿಪಿಯ 0.7%ಕ್ಕೆ ಸಮನಾಗಿದೆ. ಸಂಶೋಧಕರು ಈ ಪ್ರಮಾಣದ ಮಾದಕ ದ್ರವ್ಯವೂ ಕೇವಲ ಮಂಜುಗಡ್ಡೆಯ ಕಾಣುವ ತುದಿಯಷ್ಟೇ ಎಂದಿದ್ದು, ಇದು ಅಧಿಕಾರಿಗಳು ಪತ್ತೆ ಹಚ್ಚಿ, ನಾಶಪಡಿಸಲು ಸಾಧ್ಯವಾದ ಸಣ್ಣ ಪ್ರಮಾಣದ ಮಾದಕ ವಸ್ತುಗಳು ಎಂದಿದ್ದಾರೆ. ಅಕ್ರಮ ಮಾರುಕಟ್ಟೆಯಲ್ಲಿ ಹರಿದಾಡುತ್ತಿರುವ ಮಾದಕ ವಸ್ತುಗಳ ಮೌಲ್ಯ ಇನ್ನೂ ಬಹಳಷ್ಟು ಹೆಚ್ಚಾಗಿರುವ ಸಾಧ್ಯತೆಗಳಿವೆ. ಇದಕ್ಕೆ ಹೆಚ್ಚಾಗುತ್ತಿರುವ ಮಾದಕ ಪದಾರ್ಥಗಳ ಸೇವನೆ ಹಾಗೂ ಪ್ರಭಾವಿ ರಾಜಕಾರಣಿಗಳು, ಹಿರಿಯ ಸೇನಾಧಿಕಾರಿಗಳು ಮತ್ತು ದಂಗೆಕೋರ ಗುಂಪುಗಳು ಮಾದಕ ದ್ರವ್ಯ ವ್ಯಾಪಾರದಲ್ಲಿ ಭಾಗಿಯಾಗುತ್ತಿರುವುದೂ ಕಾರಣ ಎನ್ನಲಾಗಿದೆ.

ಸಂಶೋಧಕರು ಮಣಿಪುರದ ಮಾದಕ ದ್ರವ್ಯ ಆರ್ಥಿಕತೆ ಅಂದಾಜು 5,456 ಕೋಟಿ ರೂಪಾಯಿ (62 ಮಿಲಿಯನ್‌ ಡಾಲರ್)‌ ಇರಬಹುದು ಎಂದು ಅಂದಾಜಿಸಿದ್ದು, ಬಹಳಷ್ಟು ಕಳ್ಳ ಸಾಗಣೆದಾರರು ತಮ್ಮ ಅಪರಾಧ ಸಾಬೀತಾಗುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಕಾರಣ ಈ ಮೌಲ್ಯ ಇನ್ನೂ ಬಹಗಳಷ್ಟು ಹೆಚ್ಚಾಗಿರಬಹುದು ಎಂದು ತರ್ಕಿಸಿದ್ದಾರೆ.

ಕೇಂದ್ರ ಸರ್ಕಾರದ ಬೆಂಬಲದೊಡನೆ, ಮಣಿಪುರ ಸರ್ಕಾರ ʼವಾರ್‌ ಆನ್‌ ಡ್ರಗ್ಸ್‌ʼ (ಮಾದಕ ವಸ್ತುಗಳ ವಿರುದ್ಧದ ಸಮರ) ಯೋಜನೆಯನ್ನು ಜಾರಿಗೆ ತಂದಿದ್ದರೂ, ಈ ಅಧ್ಯಯನ ಗಂಭೀರ ವ್ಯವಸ್ಥಾತ್ಮಕ ದೌರ್ಬಲ್ಯಗಳು ಇರುವುದನ್ನು ಪ್ರದರ್ಶಿಸಿದೆ. 2007ರಿಂದ 2023ರ ನಡುವೆ ಬಂಧಿತರಾದ ಆರೋಪಿಗಳ ಪೈಕಿ ಕೇವಲ 2% ಸಾಗಣೆದಾರರು ಮಾತ್ರವೇ ಅಪರಾಧಿಗಳೆಂದು ಸಾಬೀತಾಗಿದೆ. ಬಂಧಿತರ ಪೈಕಿ 47% ಜನರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು, ಇನ್ನುಳಿದ 40% ಜನರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮಣಿಪುರದ ಹೊರಗೆ ನಿರಂತರವಾಗಿ ಮಾದಕ ದ್ರವ್ಯ ಸರಕುಗಳನ್ನು ವಶಪಡಿಸಿಕೊಂಡಿರುವುದು ಈ ಪ್ರದೇಶದಲ್ಲಿನ ಅಸಮರ್ಥ ಕಣ್ಗಾವಲನ್ನು ತೋರಿಸುತ್ತದೆ. ಸೂಕ್ತ ಭದ್ರತೆ ಹೊಂದಿರದ ಮಣಿಪುರ – ಮಯನ್ಮಾರ್‌ ಗಡಿಯನ್ನು ದಾಟುವುದು ಬಹಳಷ್ಟು ಸುಲಭವಾಗಿದ್ದು, ಇದು ಮಾದಕ ದ್ರವ್ಯ ಸಾಗಾಟಗಾರರಿಗೆ ಅಕ್ರಮ ವಸ್ತುಗಳನ್ನು ಸಾಗಿಸಲು ಹಲವಾರು ಅವಕಾಶಗಳನ್ನು ಸೃಷ್ಟಿಸಿದೆ. ಈ ದೌರ್ಬಲ್ಯವನ್ನು ಗುರುತಿಸಿರುವ ಸರ್ಕಾರ ಗಡಿಗೆ ಬೇಲಿ ಹಾಕುವ ಕ್ರಿಯೆಯನ್ನು ಇನ್ನಷ್ಟು ವೇಗಗೊಳಿಸಿದೆ. ಇದನ್ನು ಬೇಗನೆ ಪೂರ್ಣಗೊಳಿಸಬೇಕೆಂದು ಗಡುವು ನೀಡಲಾಗಿದ್ದು, ಗಡಿ ಭದ್ರತೆಯನ್ನು ಬಲಗೊಳಿಸಿ, ಭಾರತದೊಳಗೆ ಮಾದಕ ದ್ರವ್ಯ ಪ್ರವೇಶಿಸದಂತೆ ತಡೆಯುವ ಗುರಿ ಸರ್ಕಾರದ ಮುಂದಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

BiggBoss Kannada: ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ, ಮನೆ ಖಾಲಿ ಮಾಡಲು ಬಿಗ್‌ಬಾಸ್‌ ಸ್ಪರ್ಧಿಗಳಿಗೆ 1 ಗಂಟೆ ಗಡುವು!

ತಮ್ಮದೇ ಸರ್ವಿಸ್ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಹರಿಯಾಣ ಎಡಿಜಿಪಿ ಆತ್ಮಹತ್ಯೆ!

CM ಬದಲಾವಣೆ ಹೇಳಿಕೆಗಳಿಗೆ 'ಬ್ರೇಕ್ ಹಾಕಿ': ಕಾಂಗ್ರೆಸ್ ಹೈಕಮಾಂಡ್​​ಗೆ ಹಿರಿಯ ಸಚಿವರ ಆಗ್ರಹ

ಮಾರಣಾಂತಿಕ ದಾಳಿ: ಆಸ್ಪತ್ರೆಗೆ ಭೇಟಿ ನೀಡಿ, ಬಿಜೆಪಿ ಸಂಸದನ ಆರೋಗ್ಯ ವಿಚಾರಿಸಿದ ಮಮತಾ

ಇದು 'ಮೋದಾನಿ-ನಿರ್ಭರ್ ಭಾರತ': ಸರ್ಕಾರದ ಹಳದಿ ಬಟಾಣಿ ಆಮದು ನೀತಿ ಟೀಕಿಸಿದ ಕಾಂಗ್ರೆಸ್

SCROLL FOR NEXT