ಇತ್ತೀಚೆಗೆ ಕರ್ನಾಟಕ ಸರ್ಕಾರವು ಮಹಿಳೆಯರಿಗಾಗಿ ತಿಂಗಳಲ್ಲಿ ಒಂದು ದಿನ ವೇತನಸಹಿತ ಋತುಚಕ್ರದ ಒಂದು ದಿನ ರಜೆಯನ್ನು ಘೋಷಿಸಿರುವುದು ಅಭಿನಂದನಾರ್ಹ ಮತ್ತು ಸ್ವಾಗತಾರ್ಹ ನಿರ್ಧಾರವಾಗಿದೆ. ಈ ರಜೆಯು ಸರ್ಕಾರಿ ಮತ್ತು ಖಾಸಗಿ ರಂಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರಿಗೆ ಅನ್ವಯಿಸುತ್ತದೆ. ಈ ನಿರ್ಧಾರ ತೆಗೆದುಕೊಂಡು ರಾಜ್ಯ ಸರ್ಕಾರ ಇತರ ರಾಜ್ಯಗಳಿಗೆ ಮಾದರಿಯಾಗಿದೆ.
ಸುಪ್ರೀಂ ಕೋರ್ಟ್ ಈಗಾಗಲೇ ಮಹಿಳೆಯರಿಗೆ ಮುಟ್ಟಿನ ರಜೆಯನ್ನು ಕಾನೂನುಬದ್ಧಗೊಳಿಸಲು ನೀತಿ (ಪಾಲಿಸಿ) ರೂಪಿಸಬೇಕು ಎಂದು ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ರಜೆಯನ್ನು ಕಡ್ಡಾಯಗೊಳಿಸಿ ನ್ಯಾಯಾಲಯವೇ ಆದೇಶ ಹೊರಡಿಸಿದರೆ ಅದು ವ್ಯತಿರಿಕ್ತ ಪರಿಣಾಮ ಬೀರಬಹುದು ಮತ್ತು ಮಹಿಳೆಯರ ಉದ್ಯೋಗದ ಅವಕಾಶಕ್ಕೆ ಕುತ್ತು ಬರಬಹುದು ಎಂದು ನ್ಯಾಯಪೀಠ ಆತಂಕ ವ್ಯಕ್ತಪಡಿಸಿತ್ತು. ಆದರೆ ಈಗ ರಾಜ್ಯ ಸರ್ಕಾರವೇ ಇಂತಹ ನಿರ್ಧಾರ ತೆಗೆದುಕೊಂಡಿರುವುದು ಸರಿಯಾದ ಕ್ರಮವಾಗಿದೆ.
ಮುಟ್ಟಿನ ಅವಧಿಯಲ್ಲಿ ನೋವು ಮತ್ತು ಮನಸ್ಸಿನ ಕಿರಿಕಿರಿ ಸಾಮಾನ್ಯ. ಯಾರೇ ಮಾತನಾಡಿಸಿದರೂ ಸಿಡಿಸಿಡಿ ಎನ್ನುವ ಹಾಗಾಗುತ್ತದೆ. ನಕಾರಾತ್ಮಕ ಆಲೋಚನೆಗಳು ಬರುತ್ತಿರುತ್ತವೆ. ಮುಟ್ಟಿನ ದಿನಗಳಲ್ಲಿ ಪ್ರತಿ ಮಹಿಳೆಯೂ ಅನುಭವಿಸುವ ನೋವು ಒಬ್ಬೊಬ್ಬರಲ್ಲಿ ಒಂದೊಂದು ವಿಧವಾಗಿರುತ್ತದೆ. ಪ್ರತಿ ತಿಂಗಳೂ ಕೆಲವರಲ್ಲಿ ಹೊಟ್ಟೆನೋವು ಇನ್ನು ಕೆಲವರಲ್ಲಿ ಸೊಂಟನೋವು, ಸ್ತನಗಳಲ್ಲಿ ನೋವು, ಕಾಲು-ತೊಡೆಗಳಲ್ಲಿ ಸೆಳೆತ, ಅಧಿಕ ರಕ್ತಸ್ರಾವ, ಉರಿಮೂತ್ರ, ಮಲಬದ್ಧತೆ, ಮಾತ್ರವಲ್ಲದೇ ಮಾನಸಿಕವಾಗಿ ಆತಂಕ, ಬೇಸರ, ಕೋಪ, ಅಲ್ಪ ಪ್ರಮಾಣದ ಖಿನ್ನತೆ ಸಾಮಾನ್ಯ. ಬಹುತೇಕ ಮಹಿಳೆಯರು ಸಹಿಸಿಕೊಳ್ಳುತ್ತಾರೆ. ಆದರೆ ವ್ಯಕ್ತಪಡಿಸುವುದಿಲ್ಲ. ಎಲ್ಲರಲ್ಲೂ ಸಾಮಾನ್ಯವಾಗಿ ಮುಟ್ಟಿನ ಆರಂಭದ ದಿನ ನೋವು ಅಧಿಕವಾಗಿರುತ್ತದೆ. ಉದರದ ಮಾಂಸಖಂಡಗಳಲ್ಲಿ ಜರುಗುವ ಆಕುಂಚನ, ಸಂಕೋಚನಗಳಿAದಾಗಿ ಸಲೀಸಾಗಿ ರಕ್ತಸ್ರಾವವಾಗಲು ಈ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಗರ್ಭಕೋಶದ ಸೋಂಕು ಇದ್ದಲ್ಲಿ ಮತ್ತು ಹುಟ್ಟಿನಿಂದಲೇ ಹಿಂದಕ್ಕೆ ಬಾಗಿದ ಗರ್ಭಕೋಶ ಇದ್ದಲ್ಲಿ ನೋವು ಇದ್ದೇ ಇರುತ್ತದೆ.
ಇಂತಹ ಒಂದಲ್ಲ ಹಲವು ಕಾರಣಗಳಿಂದಾಗಿ ಮಹಿಳೆಯರಿಗೆ ವಿಶ್ರಾಂತಿಯ ಅಗತ್ಯ ಇದೆ. ಈ ಕಾರಣದಿಂದ ಉದ್ಯೋಗದ ಸ್ಥಳದಲ್ಲಿ ಮುಟ್ಟಿನ ರಜೆ ನೀಡುವ ಬಗ್ಗೆ ವಿಶ್ವದಾದ್ಯಂತ ಚರ್ಚೆಗಳು ನಡೆಯುತ್ತಿವೆ. ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ, ತೈವಾನ್‌ಗಳಲ್ಲಿ ಈಗಾಗಲೇ ಎರಡು ದಿನಗಳ ಮತ್ತು ಆಫ್ರಿಕಾದ ಜಾಂಬಿಯಾದಲ್ಲಿ ಒಂದು ದಿನದ ಮುಟ್ಟಿನ ರಜೆಯನ್ನು ಈಗಾಗಲೇ ಕಾನೂನುಬದ್ಧಗೊಳಿಸಲಾಗಿದೆ. ಈ ಎಲ್ಲಾ ದೇಶಗಳಲ್ಲಿ ಮಹಿಳೆಯರು ಕೆಲಸ ಮಾಡುವ ಸಾಮರ್ಥ್ಯ ಹೆಚ್ಚಾಗಿರುವುದು ಅಂಕಿಅಂಶಗಳು ಪ್ರಚುರಪಡಿಸುತ್ತವೆ. ಕೋವಿಡ್ ಸಮಯದಲ್ಲಿ ತಿಂಗಳುಗಟ್ಟಲೇ ವರ್ಕ್ ಫ್ರಂ ಹೋಮ್ ಮಾಡುವಾಗ ಮಹಿಳೆಯರಿಗೆ ಮುಟ್ಟಿನ ಅವಧಿಯ ರಜೆಯ ಮಹತ್ವದ ಅರಿವು ಹೆಚ್ಚಾಯಿತು. ಆ ನಂತರ ಖಾಸಗಿ ಕಂಪನಿಯೊಂದು ರಜೆ ಘೋಷಿಸಿತು.
ತೃತೀಯ ಜಗತ್ತಿನ ಹಲವಾರು ದೇಶಗಳಲ್ಲಿ ಇಂದಿಗೂ ಮುಟ್ಟಿನ ವಿಷಯವು ಸಂಕೋಚದ ವಿಷಯವಾಗಿಯೇ ಉಳಿದಿದೆ. ಇನ್ನು ಮುಟ್ಟಿನ ರಜೆಯ ವಿಷಯವು ಹಲವು ಕಡೆಗಳಲ್ಲಿ ಮಹಿಳೆಯರ ಕೆಲಸದ ದಕ್ಷತೆ ಮತ್ತು ಕೆಲಸದ ಸ್ಥಳದಲ್ಲಿ ಇರುವ ಲಿಂಗತಾರತಮ್ಯಕ್ಕೆ ಸಂಬಂಧಿಸಿದೆ. ಆದರೂ ಇಂಡೋನೇಷ್ಯಾ, ಜಪಾನ್, ದಕ್ಷಿಣ ಕೊರಿಯಾ ಮತ್ತು ತೈವಾನ್ ಸೇರಿದಂತೆ ಆಗ್ನೇಯ ಏಷ್ಯಾದ ಕೆಲವು ದೇಶಗಳಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ನೀಡಲಾಗಿದೆ. ಇಂಡೋನೇಷ್ಯಾ ಮಹಿಳೆಯರಿಗೆ ತಿಂಗಳಿಗೆ ಎರಡು ದಿನಗಳ ಮುಟ್ಟಿನ ರಜೆಯ ಹಕ್ಕನ್ನು ನೀಡುತ್ತದೆ. ಆದರೆ ಇವು ಹೆಚ್ಚುವರಿ ರಜೆಗಳಲ್ಲ. ಜಪಾನ್‌ನಲ್ಲಿ ಈ ಕಾನೂನು 70 ವರ್ಷಗಳಿಂದ ಜಾರಿಯಲ್ಲಿದೆ.
ಕಾನೂನಿನ ಪ್ರಕಾರ ಕಂಪನಿಗಳು ಮಹಿಳೆಯರಿಗೆ ರಜೆ ತೆಗೆದುಕೊಳ್ಳಲು ಅವಕಾಶ ನೀಡಬೇಕಾಗಿದ್ದರೂ, ಮುಟ್ಟಿನ ಸಮಯದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ವೇತನ ಸಹಿತ ರಜೆ ಅಥವಾ ಹೆಚ್ಚುವರಿ ವೇತನವನ್ನು ನೀಡುವುದನ್ನು ಕಡ್ಡಾಯಗೊಳಿಸುವುದಿಲ್ಲ. ದಕ್ಷಿಣ ಕೊರಿಯಾದಲ್ಲಿ ಮಹಿಳಾ ಉದ್ಯೋಗಿಗಳು ಮುಟ್ಟಿನ ರಜೆ ತೆಗೆದುಕೊಳ್ಳದಿದ್ದರೆ ಅವರಿಗೆ ಹೆಚ್ಚುವರಿ ವೇತನವನ್ನು ಖಾತ್ರಿಪಡಿಸಲಾಗುತ್ತದೆ. ಆದರೂ ಇದರ ಪ್ರಯೋಜನವನ್ನು ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ. 2017ರಲ್ಲಿ ಜಪಾನಿನ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಕೇವಲ ಶೇಕಡಾ 0.9ರಷ್ಟು ಮಹಿಳಾ ಉದ್ಯೋಗಿಗಳು ಈ ರಜೆಯನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂತು. ಇದೇ ಸಮಯದಲ್ಲಿ ದಕ್ಷಿಣ ಕೊರಿಯಾದಲ್ಲಿ ಕೇವಲ ಶೇಕಡಾ 19.7ರಷ್ಟು ಮಹಿಳೆಯರು ಇಂತಹ ಕಾನೂನಿನ ಉಪಯೋಗ ಪಡೆದಿದ್ದಾರೆ.
ಭಾರತದಲ್ಲಿ 1992ರಲ್ಲಿ ಬಿಹಾರದಲ್ಲಿ ಮಹಿಳೆಯರಿಗೆ ಎರಡು ದಿನಗಳ ಮುಟ್ಟಿನ ರಜೆ ನೀಡಲಾಗುತ್ತಿದೆ. 2017ರಲ್ಲಿ ಅರುಣಾಚಲ ಪ್ರದೇಶದಲ್ಲಿ ‘ದಿ ಮೆನ್ಸುಟ್ರುಯೇಷನ್ ಬೆನಿಫಿಟ್ಸ್ ಬಿಲ್ 2017’ ಎಂಬ ಖಾಸಗಿ ಮಸೂದೆ ಮಂಡಿಸಲಾಗಿದೆ. ಇದರ ಪ್ರಕಾರ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳು ಉದ್ಯೋಗಸ್ಥ ಮಹಿಳೆಯರು ಪ್ರತಿ ತಿಂಗಳು ಎರಡು ದಿನಗಳ ರಜೆಗೆ ಅರ್ಹರಾಗಿರುತ್ತಾರೆ.
ಕೊನೆಮಾತು: ವಿಜ್ಞಾನ-ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಮುಟ್ಟಿನ ಸಮಸ್ಯೆಗಳು ಮಾತ್ರ ಬದಲಾವಣೆ ಆಗಲಾರವು. ಪ್ರತಿ ತಿಂಗಳೂ ಮಹಿಳೆಯರು ಕಿರಿಕಿರಿ, ನೋವು ಅನುಭವಿಸಲೇಬೇಕು. ಒಬ್ಬೊಬ್ಬರಲ್ಲಿ ಒಂದೊಂದು ಬಗೆಯದಾಗಿರುತ್ತವೆ. ಪ್ರತಿ ತಿಂಗಳೂ ಹೊಟ್ಟೆನೋವು, ಸೊಂಟನೋವು, ಸ್ತನಗಳಲ್ಲಿ ನೋವು, ಕಾಲು, ತೊಡೆಗಳಲ್ಲಿ ಸೆಳೆತ, ಅಧಿಕ ರಕ್ತಸ್ರಾವ, ಉರಿಮೂತ್ರ, ಮಲಬದ್ಧತೆ ಮತ್ತು ಮಾನಸಿಕವಾಗಿ ಆತಂಕ, ಬೇಸರ, ಕೋಪ ಮತ್ತು ಖಿನ್ನತೆ ಸಾಮಾನ್ಯ. ಬಹಳಷ್ಟು ಮಹಿಳೆಯರು ಈ ನೋವನ್ನು ಅನುಭವಿಸುತ್ತಿದ್ದರೂ ಅದನ್ನು ಸಹಿಸಿಕೊಳ್ಳುತ್ತಾರೆ. ಅದನ್ನು ವ್ಯಕ್ತಪಡಿಸುವುದಿಲ್ಲ. ಋತುಮತಿಯಾದ ಆರಂಭದ 2-3 ವರ್ಷ ನೋವು ಇರುವುದಿಲ್ಲವಾದರೂ ಅಂಡಾಣು ಬಿಡುಗಡೆಯಾಗಲು ಶುರುವಾದ ನಂತರ ನೋವು ಆರಂಭವಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಅವರು ರಜೆ ತೆಗೆದುಕೊಂಡು ವಿಶ್ರಾಂತಿ ತೆಗೆದುಕೊಂಡಲ್ಲಿ ಅವರ ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚುತ್ತದೆ. ಜೊತೆಗೆ ಮುಟ್ಟಿನ ದಿನಗಳು ಹೆಚ್ಚು ಸಹನೀಯವಾಗಲು ಸಾಧ್ಯ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com