ನೇಪಾಳದ ರಾಜಕೀಯ ಬಿಕ್ಕಟ್ಟು: ನೇಪಾಳದ ಜೆನ್-ಜಿ (Gen–Z) ಪ್ರತಿಭಟನಾಕಾರರು ಹೋರಾಟ ನಡೆಸಿ, ಪ್ರಧಾನ ಮಂತ್ರಿ ಕೆಪಿ ಶರ್ಮಾ ಓಲಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು, ಈಗ ರಾಜ ಪ್ರಭುತ್ವದ ಪರ ಇರುವ ಧ್ವನಿಗಳು ಮತ್ತೆ ನೇಪಾಳದಲ್ಲಿ ರಾಜ ಪ್ರಭುತ್ವ ಜಾರಿಗೆ ಬರಬೇಕು ಎಂದು ಆಗ್ರಹಿಸಲು ಆರಂಭಿಸಿವೆ. ನೇಪಾಳದಲ್ಲಿ ರಾಜಾಡಳಿತವನ್ನು 2008ರಲ್ಲಿ ಅಧಿಕೃತವಾಗಿ ಕೊನೆಗೊಳಿಸಲಾಗಿತ್ತು.
ನೇಪಾಳದ ರಾಜ ವಂಶದ ಕುರಿತು ನಡೆಸುವ ಯಾವುದೇ ಮಾತುಕತೆಗಳಾದರೂ, ಜನರಿಗೆ ಅದು 2001ರಲ್ಲಿ ನಡೆದ ರಾಜವಂಶದ ಹತ್ಯಾಕಾಂಡದ ನೆನಪು ತರುತ್ತದೆ. ಆ ದುರಂತ ಘಟನೆಯಲ್ಲಿ ನೇಪಾಳದ ರಾಜವಂಶ ಬಹುತೇಕ ಅಂತ್ಯ ಕಂಡಿತ್ತು! ಈ ರಾಜಹತ್ಯೆ ಸಂಪೂರ್ಣ ಜಗತ್ತಿಗೇ ಆಘಾತ ಉಂಟುಮಾಡಿತ್ತು. ಈ ದುರ್ಘಟನೆ ಭಾರತದಲ್ಲೂ ಅಪಾರ ಚರ್ಚೆಗೊಳಗಾಗಿದ್ದು, ಇದಕ್ಕೆ ಗ್ವಾಲಿಯರ್ ಆಯಾಮವೂ ಇದೆ ಎನ್ನಲಾಗಿತ್ತು. ಯಾಕೆಂದರೆ, ನೇಪಾಳದ ರಾಜ ಕುಟುಂಬ ಗ್ವಾಲಿಯರ್‌ನ ಸಿಂದಿಯಾ ರಾಜ ವಂಶದೊಡನೆ ವೈವಾಹಿಕ ಸಂಬಂಧಗಳನ್ನು ಬೆಳೆಸುವ ಮೂಲಕ ಉತ್ತಮ ಬಾಂಧವ್ಯ ಹೊಂದಿದ್ದರಿಂದ, ನೇಪಾಳದ ರಾಜಹತ್ಯೆ ಭಾರತದಲ್ಲೂ ವ್ಯಾಪಕ ಚರ್ಚೆಗೆ ಒಳಗಾಗಿತ್ತು.
ಜನಪ್ರಿಯ ದೊರೆಯಾಗಿದ್ದ ಬೀರೇಂದ್ರ
2001ರಲ್ಲಿ, ಬೀರೇಂದ್ರ ಬೀರ್ ಬಿಕ್ರಮ್ ಶಾ ದೇವ್ ನೇಪಾಳದ ರಾಜನಾಗಿದ್ದರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ ಬೀರೇಂದ್ರ, ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲೂ ಓದಿದ್ದರು. ಅವರು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳು ಮತ್ತು ಸಾಮಾಜಿಕ ಸುಧಾರಣೆಗಳಿಂದ ದೊರೆ ಬೀರೇಂದ್ರರನ್ನು ಪ್ರಜೆಗಳು ಬಹಳ ಇಷ್ಟಪಡುತ್ತಿದ್ದರು.
1970ರಲ್ಲಿ ಮಹಾರಾಜ ಬೀರೇಂದ್ರ ಒಂದು ವೈಭವೋಪೇತ ಸಮಾರಂಭದಲ್ಲಿ ರಾಣಿ ಐಶ್ವರ್ಯ ರಾಜ್ಯ ಲಕ್ಷ್ಮೀ ದೇವಿ ಶಾ ಅವರನ್ನು ವಿವಾಹವಾಗಿದ್ದರು. ಈ ರಾಜ ದಂಪತಿಗಳು ಮೂವರು ಮಕ್ಕಳನ್ನು ಹೊಂದಿದ್ದರು. ಅವರೇ ಯುವರಾಜ ದೀಪೇಂದ್ರ, ರಾಜಕುಮಾರಿ ಶೃತಿ ಮತ್ತು ರಾಜಕುಮಾರ ನಿರಂಜನ.
ಅರಮನೆಯಲ್ಲಿ ಮಾರಣಹೋಮ
ಜೂನ್ 1, 2001ರಂದು ರಾಜ ಕುಟುಂಬ ಕಠ್ಮಂಡುವಿನ ನಾರಾಯಣಹಿತಿ ಅರಮನೆಯಲ್ಲಿ ಸೇರಿತ್ತು. (ಈ ಅರಮನೆಯನ್ನು ಈಗ ವಸ್ತು ಸಂಗ್ರಹಾಲಯವಾಗಿ ಮಾರ್ಪಡಿಸಲಾಗಿದೆ). ವರದಿಗಳ ಪ್ರಕಾರ, ಪಾರ್ಟಿಯ ಆರಂಭದಲ್ಲಿ ಯುವರಾಜ ದೀಪೇಂದ್ರ (29) ಕಾಣಿಸಿಕೊಂಡಿದ್ದು, ಎಲ್ಲರಿಗೂ ಕುಡಿಯಲು ಪಾನೀಯ ನೀಡುತ್ತಿದ್ದರು.
ಕೆಲ ಸಮಯದ ಬಳಿಕ ಪಾರ್ಟಿಯ ಮಧ್ಯದಿಂದಲೇ ತೆರಳಿದ ದೀಪೇಂದ್ರ, ಕೆಲ ಕಾಲದ ನಂತರ ಕಮಾಂಡೋ ಸಮವಸ್ತ್ರದಲ್ಲಿ ಪಾರ್ಟಿಗೆ ಮರಳಿದ್ದರು. ಬರುವಾಗ ತನ್ನೊಡನೆ ಎರಡು ಅಸಾಲ್ಟ್ ರೈಫಲ್‌ಗಳನ್ನೂ ತಂದಿದ್ದರು.
ದೀಪೇಂದ್ರ ಮೊದಲು ತನ್ನ ತಂದೆಯತ್ತ ನೋಡಿ, ಏನೂ ಮಾತನಾಡದೆ ಬಂದೂಕಿನ ಟ್ರಿಗರ್ ಎಳೆದರು. ಯುವರಾಜನ ಮಾವ, ಘಟನೆಗೆ ಸಾಕ್ಷಿಯಾಗಿದ್ದ ರವಿ ಶಮ್‌ಶೇರ್ ರಾಣಾ ಅವರು ಈ ಕುರಿತು ವಿವರಣೆ ನೀಡುತ್ತಾ, ಮಹಾರಾಜ ಕೆಲವು ಸೆಕೆಂಡುಗಳು ಗುಂಡೇಟು ತಿಂದು ಹಾಗೇ ನಿಂತಿದ್ದರು. ಬಳಿಕ ನೆಲದ ಮೇಲೆ ಕುಸಿದು ಕುಳಿತು, “ಕೇ ಗರ್‌ದೇಕೋ? (ನೀನೇನು ಮಾಡಿ ಬಿಟ್ಟೆ?)” ಎಂದು ಪ್ರಶ್ನಿಸಿದ್ದರು.
ಬಳಿಕ ದೀಪೇಂದ್ರ ತನ್ನ ತಾಯಿ, ರಾಜಮಾತೆ ಐಶ್ವರ್ಯರನ್ನು, ತನ್ನ ಸೋದರಿ ಶೃತಿ ಮತ್ತು ಸಹೋದರ ನಿರಂಜನರನ್ನು, ಮತ್ತು ಐವರು ಇತರ ಸಂಬಂಧಿಕರನ್ನು ಗುಂಡಿಟ್ಟು ಹತ್ಯೆಗೈದರು. ಬಳಿಕ, ದೀಪೇಂದ್ರ ತಲೆಯಲ್ಲಿ ಗುಂಡೇಟು ಬಿದ್ದ ಸ್ಥಿತಿಯಲ್ಲಿ ದೊರೆತಿದ್ದರು. ಕುಟುಂಬಸ್ಥರನ್ನು ಕೊಂದು, ಬಳಿಕ ಅವರು ಆತ್ಮಹತ್ಯೆಗೆ ಪ್ರಯತ್ನ ನಡೆಸಿದರು ಎಂದು ಸಂದೇಹಿಸಲಾಗಿತ್ತು.
ಕೋಮಾಗೆ ತೆರಳಿದ್ದ ದೀಪೇಂದ್ರರನ್ನು ಆ ಸ್ಥಿತಿಯಲ್ಲೇ ಮಹಾರಾಜ ಎಂದು ಘೋಷಿಸಲಾಯಿತು. ದೀಪೇಂದ್ರ ಜೂನ್ 4ರಂದು ಮೃತರಾದ ಬಳಿಕ, ಅವರ ಚಿಕ್ಕಪ್ಪ ಗ್ಯಾನೇಂದ್ರ ನೇಪಾಳದ ಮಹಾರಾಜರಾಗಿ, ರಾಜಾಡಳಿತ ಕೊನೆಯಾಗುವ ತನಕ ಆಡಳಿತ ನಡೆಸಿದರು.
ಸರ್ಕಾರಿ ತನಿಖೆ ರಾಜವಂಶದ ಹತ್ಯೆಗೆ ದೀಪೇಂದ್ರರೇ ಕಾರಣ ಎಂದು ಆರೋಪಿಸಿತು. ಒಂದು ಬಲ್ಲ ಸಿದ್ಧಾಂತದ ಪ್ರಕಾರ, ದೀಪೇಂದ್ರ ನಡೆಸಿದ ಕೃತ್ಯಕ್ಕೆ ರಾಜಕಾರಣಿ ಪಶುಪತಿ ಶಮ್‌ಶೇರ್ ಜಂಗ್ ಬಹಾದೂರ್ ರಾಣಾ ಮತ್ತು ಉಷಾ ರಾಜೇ ಸಿಂದಿಯಾ ಅವರ ಪುತ್ರಿ ದೇವಯಾನಿ ರಾಣಾ ಅವರ ಜೊತೆಗೆ ದೀಪೇಂದ್ರ ಸಂಬಂಧವೇ ಕಾರಣ ಎನ್ನಲಾಗಿದೆ. ದೇವಯಾನಿ ರಾಣಾ ಗ್ವಾಲಿಯರ್ ರಾಜವಂಶಕ್ಕೆ ಸೇರಿದವರಾಗಿದ್ದು, ಮಾಧವರಾವ್ ಸಿಂಧಿಯಾ ದೇವಯಾನಿಯ ಸೋದರ ಮಾವನಾದರೆ, ವಸುಂಧರಾ ರಾಜೇ ಸಿಂದಿಯಾ ಆಕೆಯ ಚಿಕ್ಕಮ್ಮ.
ದೀಪೇಂದ್ರ ಮತ್ತು ದೇವಯಾನಿ ಯುನೈಟೆಡ್ ಕಿಂಗ್‌ಡಮ್ ನಲ್ಲಿ ಭೇಟಿಯಾಗಿದ್ದು, ಅವರಿಬ್ಬರ ಮಧ್ಯ ಪ್ರೀತಿ ಮೂಡಿತ್ತು. ವರದಿಗಳ ಪ್ರಕಾರ, ರಾಜ ಕುಟುಂಬ ಇವರಿಬ್ಬರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಇದು ದೀಪೇಂದ್ರರನ್ನು ಅಸಮಾಧಾನಗೊಳಿಸಿ, ತನ್ನ ಕುಟುಂಬವನ್ನೇ ನಾಶಪಡಿಸುವ ತೀರ್ಮಾನ ಕೈಗೊಳ್ಳುವಂತೆ ಮಾಡಿತ್ತು. ಮಹಾರಾಣಿ ಐಶ್ವರ್ಯ ತನ್ನ ಮಗ ದೀಪೇಂದ್ರ ಇನ್ನೊರ್ವ ರಾಜಕುಮಾರಿಯನ್ನು ಮದುವೆಯಾಗಬೇಕೆಂದು ಬಯಸಿದ್ದರು.
ಈ ಘಟನೆಯ ಕುರಿತು ದೇವಯಾನಿಯ ಕುಟುಂಬವೂ ಸಂದೇಹ ವ್ಯಕ್ತಪಡಿಸಿತ್ತು. ವರದಿಗಳ ಪ್ರಕಾರ, ಆಕೆಯ ಕುಟುಂಬ ನೇಪಾಳದ ರಾಜವಂಶಕ್ಕಿಂತಲೂ ಹೆಚ್ಚಿನ ಶ್ರೀಮಂತಿಕೆ ಹೊಂದಿತ್ತು. ಒಂದು ವೇಳೆ ದೇವಯಾನಿ ಏನಾದರೂ ದೀಪೇಂದ್ರ ಜೊತೆ ವಿವಾಹವಾದರೆ, ಆಕೆಯ ಜೀವನ ಶೈಲಿ ಕೆಳಮಟ್ಟಕ್ಕೆ ಇಳಿಯಬಹುದು ಎಂದು ಆಕೆಯ ಕುಟುಂಬ ಅಭಿಪ್ರಾಯ ಪಟ್ಟಿತ್ತು.
ಒಂದಷ್ಟು ವರದಿಗಳ ಪ್ರಕಾರ, ಜೂನ್ 1ರಂದು ನಡೆದ ಪಾರ್ಟಿಯಲ್ಲಿ ದೀಪೇಂದ್ರ ಅತಿಥಿ ಒಬ್ಬರೊಡನೆ ವಾದಿಸಿದ್ದು, ತನ್ನ ಕುಟುಂಬದತ್ತ ಬಂದೂಕು ಚಾಚುವ ವೇಳೆಗೆ ಸಾಕಷ್ಟು ಮಧ್ಯ ಸೇವಿಸಿದ್ದರು ಎನ್ನಲಾಗಿದೆ.
ನೇಪಾಳದ ರಾಜಾಡಳಿತ ಪರ ಹೋರಾಟಗಳು
ಪ್ರಧಾನ ಮಂತ್ರಿ ಕೆಪಿ ಶರ್ಮಾ ಓಲಿ ಅವರನ್ನು ಜೆನ್-ಜಿ ಪ್ರತಿಭಟನಾಕಾರರು ಪದಚ್ಯುತಿಗೊಳಿಸುವ ಕೆಲ ತಿಂಗಳ ಮುನ್ನ, ಅವರು ಮಾಜಿ ಅರಸ ಗ್ಯಾನೇಂದ್ರ ರಾಜಾಡಳಿತ ಪರ ಪ್ರತಿಭಟನೆಗಳಲ್ಲಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದರು ಎಂದು ಆರೋಪಿಸಿದ್ದರು.
ಮಾರ್ಚ್ 28ರಂದು ರಾಜಾಡಳಿತ ಪರವಾಗಿ ನಡೆದ ಪ್ರತಿಭಟನೆಗಳಲ್ಲಿ ತಲೆದೋರಿದ ಹಿಂಸಾಚಾರ ಕುರಿತು ಸಂಸತ್ತಿನಲ್ಲಿ ಮಾತನಾಡಿದ ಓಲಿ, ಈ ಹಿಂಸಾಚಾರಕ್ಕೆ ಗ್ಯಾನೇಂದ್ರ ಅವರೇ ಕಾರಣ ಎಂದು ಆರೋಪಿಸಿದ್ದರು. ಓಲಿ ಗ್ಯಾನೇಂದ್ರ ಅವರು ಜನರ ಸಾವಿಗೆ ಕುಮ್ಮಕ್ಕು ನೀಡುವ ನಾಯಕ ಎಂದು ಆರೋಪಿಸಿದ್ದು, ಇತಿಹಾಸ ಅವರನ್ನು ತಿರಸ್ಕರಿಸಿದ್ದರೂ, ಈಗ ಮತ್ತೊಮ್ಮೆ ನೇಪಾಳದ ರಾಜನಾಗುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಮಾಜಿ ದೊರೆ ಗ್ಯಾನೇಂದ್ರ ಈ ಹಿಂಸಾಚಾರದ ಜವಾಬ್ದಾರಿ ಹೊರಬೇಕು ಎಂದು ಓಲಿ ಆರೋಪಿಸಿದ್ದರು.
ಜನ ಸಾಮಾನ್ಯರು ಹಿಂಸಾಚಾರಕ್ಕೆ ಬಲಿಯಾದ ಕುರಿತು ಮಾಜಿ ದೊರೆ ಗ್ಯಾನೇಂದ್ರ ವಿಷಾದ ವ್ಯಕ್ತಪಡಿಸಿದ್ದರು. “ಪ್ರಜೆಗಳ ಸ್ವಾತಂತ್ರ್ಯಕ್ಕೆ ಖಾತರಿ ನೀಡುವಲ್ಲಿ ಪ್ರಜಾಪ್ರಭುತ್ವಕ್ಕಿಂತಲೂ ಉತ್ತಮ ಆಡಳಿತ ವ್ಯವಸ್ಥೆಯೇ ಇಲ್ಲ” ಎಂದು ಅವರು ಅಭಿಪ್ರಾಯ ಪಟ್ಟಿದ್ದರು.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com