ಅಂಕಣಗಳು

ರೇಡಾರ್ ಅಭಿವೃದ್ಧಿಯತ್ತ ಭಾರತದ ಹೆಜ್ಜೆ (ಜಾಗತಿಕ ಜಗಲಿ)

ಡ್ರೋನ್‌ಗಳು ಈಗ ಜಾಗತಿಕ ಬಿಕ್ಕಟ್ಟುಗಳಲ್ಲಿ ಸರ್ವೇಸಾಮಾನ್ಯ ಎನ್ನುವಂತಾಗಿದ್ದು, ಇಸ್ರೇಲ್ ವಿರುದ್ಧ ಹಮಾಸ್, ಆಪರೇಷನ್ ಸಿಂದೂರದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಡ್ರೋನ್‌ಗಳನ್ನು ಬಳಸಿವೆ.

ಭಾರತ ಇಂದು ತನ್ನ ಆಗಸಗಳಲ್ಲಿ ಹೊಸದಾದ ಅಪಾಯಗಳನ್ನು ಎದುರಿಸುತ್ತಿದೆ. ಅವೇ ಡ್ರೋನ್‌ಗಳು! ಸಣ್ಣದಾದ, ಗುಂಪು ಗುಂಪಾಗಿ ಹಾರಿ ಬರುವ ಈ ಯಂತ್ರಗಳು, ಮತ್ತು ಕೆಳ ಮಟ್ಟದಲ್ಲಿ ಸಾಗಿ ಬರುವ ವೈಮಾನಿಕ ಉಪಕರಣಗಳು ರೇಡಾರ್ ವ್ಯವಸ್ಥೆಯ ಕಣ್ಣು ತಪ್ಪಿಸಿ ಒಳ ನುಸುಳಬಲ್ಲವು. ಈ ಹೊಸ ಸವಾಲುಗಳನ್ನು ಎದುರಿಸಲು, ತನ್ನ ಪಶ್ಚಿಮ ಮತ್ತು ಉತ್ತರದ ಗಡಿಗಳಲ್ಲಿ ವಾಯು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ, ಭಾರತೀಯ ಸೇನೆ ಈಗ ಆಧುನಿಕ ರೇಡಾರ್ ವ್ಯವಸ್ಥೆಗಳನ್ನು ಖರೀದಿಸಲು ಆರಂಭಿಸಿದೆ.

ಕೆಲವು ತಿಂಗಳ ಹಿಂದೆ ಪಾಕಿಸ್ತಾನದ ವಿರುದ್ಧ ನಡೆದ ಆಪರೇಷನ್ ಸಿಂದೂರ ಕಾರ್ಯಾಚರಣೆಯ ವೇಳೆ ನೂರಾರು ಪಾಕಿಸ್ತಾನಿ ಡ್ರೋನ್‌ಗಳು ವಿವಿಧ ಗಡಿ ಪ್ರದೇಶಗಳನ್ನು ದಾಟಿ, ಭಾರತದ ವಾಯು ಪ್ರದೇಶಕ್ಕೆ ಆಗಮಿಸಿದ್ದವು. ಅವುಗಳಲ್ಲಿ ಹಲವು ರೇಡಾರ್‌ಗಳನ್ನು ಗೊಂದಲಗೊಳಿಸುವ, ನಕಲಿ, ಅಗ್ಗದ ಡ್ರೋನ್‌ಗಳಾದರೆ, ಇನ್ನುಳಿದವು ಕಣ್ಗಾವಲು ಅಥವಾ ದಾಳಿ ತಂತ್ರಜ್ಞಾನವನ್ನು ಹೊಂದಿದ್ದವು. ಭಾರತೀಯ ಪಡೆಗಳು ಈ ಡ್ರೋನ್‌ಗಳನ್ನು ಹೊಡೆದುರುಳಿಸಲು ಯಶಸ್ವಿಯಾದರೂ, ಈ ಪ್ರಸಂಗ ನಮ್ಮ ವಾಯು ರಕ್ಷಣಾ ಜಾಲದಲ್ಲಿನ ದೋಷಗಳನ್ನು ತೋರಿಸಿತ್ತು. ಇದಾದ ಹಲವು ತಿಂಗಳುಗಳ ಬಳಿಕ ಈಗ ರೇಡಾರ್ ವ್ಯವಸ್ಥೆಯನ್ನು ಆಧುನೀಕರಿಸುವ ತೀರ್ಮಾನಕ್ಕೆ ಭಾರತ ಬಂದಿದೆ.

ಭಾರತಕ್ಕೆ ನೂತನ ರೇಡಾರ್‌ಗಳು ಏಕೆ ಬೇಕು?

ಭಾರತೀಯ ಸೇನೆ ಈಗ 45 ಲೋ ಲೆವೆಲ್ ವೆಯ್ಟ್ ರೇಡಾರ್‌ಗಳನ್ನು (ಎನ್‌ಹ್ಯಾನ್ಸ್ಡ್), 48 ಏರ್ ಡಿಫೆನ್ಸ್ ಫೈರ್ ಕಂಟ್ರೋಲ್ ರೇಡಾರ್ - ಡ್ರೋನ್ ಡಿಟೆಕ್ಟರ್ಸ್ (ಎಡಿಎಫ್‌ಸಿಆರ್ - ಡಿಡಿ) ಮತ್ತು 10 ಲೋ ಲೆವೆಲ್ ಲೈಟ್ ವೆಯ್ಟ್ ರೇಡಾರ್‌ಗಳನ್ನು (ಇಂಪ್ರೂವ್ಡ್) ಖರೀದಿಸಲು ಯೋಜಿಸುತ್ತಿದೆ. ಈ ವ್ಯವಸ್ಥೆಗಳು ಹಳೆಯ ರೇಡಾರ್‌ಗಳ ಕಣ್ಣು ತಪ್ಪಿಸಬಲ್ಲದಾದ, ಅತ್ಯಂತ ಸಣ್ಣದಾದ ವೈಮಾನಿಕ ಅಪಾಯಗಳನ್ನೂ ಗುರುತಿಸಿ, ಹಿಂಬಾಲಿಸಿ, ದಾಳಿ ನಡೆಸಬಲ್ಲವು.

ಯುದ್ಧ ವಿಮಾನಗಳಿಗೆ ಹೋಲಿಸಿ ನೋಡಿದರೆ, ಡ್ರೋನ್‌ಗಳು ಅತ್ಯಂತ ಸಣ್ಣ ವಸ್ತುಗಳಾಗಿದ್ದು, ಬಹಳಷ್ಟು ಬಾರಿ ಅವು ರೇಡಾರ್ ಪರದೆಗಳಲ್ಲಿ ಕಾಣಿಸುವುದೇ ಇಲ್ಲ. ಅವುಗಳು ಬಹಳ ಕಡಿಮೆ ರೇಡಾರ್ ಕ್ರಾಸ್ ಸೆಕ್ಷನ್ (ಆರ್‌ಸಿಎಸ್) ಹೊಂದಿರುತ್ತವೆ. ಅಂದರೆ, ಅವುಗಳು ರೇಡಾರ್ ಸಂಕೇತಗಳನ್ನು ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಪ್ರತಿಫಲಿಸುವುದರಿಂದ, ಅದನ್ನು ಗುರುತಿಸುವುದು ಬಹಳ ಕಷ್ಟಕರವಾಗುತ್ತದೆ. ಇವುಗಳನ್ನು ಗುರುತಿಸಿ ಹೊಡೆಯಬೇಕೆಂದರೆ ಅತ್ಯಂತ ಸೂಕ್ಷ್ಮವಾದ ಆಧುನಿಕ ರೇಡಾರ್‌ಗಳು ಅತ್ಯವಶ್ಯಕವಾಗಿವೆ.

ಇಂತಹ ಡ್ರೋನ್‌ಗಳು ಈಗ ಜಾಗತಿಕ ಬಿಕ್ಕಟ್ಟುಗಳಲ್ಲಿ ಸರ್ವೇಸಾಮಾನ್ಯ ಎನ್ನುವಂತಾಗಿದ್ದು, ಇಸ್ರೇಲ್ ವಿರುದ್ಧ ಹಮಾಸ್, ಆಪರೇಷನ್ ಸಿಂದೂರದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಡ್ರೋನ್‌ಗಳನ್ನು ಬಳಸಿವೆ. ಭಾರತ ಯುದ್ಧರಂಗದ ಈ ಬದಲಾವಣೆಯನ್ನು ಕಡೆಗಣಿಸಲು ಸಾಧ್ಯವಿಲ್ಲ.

ರೇಡಾರ್‌ಗಳು ಹೇಗೆ ಕಾರ್ಯಾಚರಿಸುತ್ತವೆ?

ರೇಡಾರ್ ಎಂದರೆ ರೇಡಿಯೋ ಡಿಟೆಕ್ಷನ್ ಆ್ಯಂಡ್ ರೇಂಜಿಂಗ್ ಎನ್ನುವುದರ ಹೃಸ್ವರೂಪ. ಇದು ರೇಡಿಯೋ ತರಂಗಗಳನ್ನು ಬಳಸಿಕೊಂಡು, ಆಕಾಶದಲ್ಲಿ ಹಾರುತ್ತಿರುವ ವಸ್ತುವಿನ ದಿಕ್ಕು, ದೂರ ಮತ್ತು ವೇಗವನ್ನು ಪತ್ತೆಹಚ್ಚುತ್ತದೆ. ಆ ಮೂಲಕ ಗುರಿಗಳನ್ನು ಗುರುತಿಸಿ, ಅವುಗಳ ಹಾದಿಯನ್ನೂ ಊಹಿಸುತ್ತದೆ.

ವಾಯು ರಕ್ಷಣಾ ರೇಡಾರ್‌ಗಳು ವೈಮಾನಿಕ ಅಪಾಯಗಳನ್ನು ಪತ್ತೆ ಹಚ್ಚಿ, ಅವು ಏನೆಂದು ಗುರುತಿಸಿ, ನಾಶಪಡಿಸಲು ನೆರವಾಗುತ್ತವೆ. ಇವುಗಳಲ್ಲಿ ಎರಡು ಮುಖ್ಯ ವಿಧಗಳಿವೆ. ಅವೆಂದರೆ, ಆಗಸವನ್ನು ಗಮನಿಸುವ ಕಣ್ಗಾವಲು ರೇಡಾರ್‌ಗಳು ಮತ್ತು ಆಯುಧಗಳನ್ನು ಗುರಿಯತ್ತ ನಿರ್ದೇಶಿಸುವ ಫೈರ್ ಕಂಟ್ರೋಲ್ ರೇಡಾರ್‌ಗಳು.

ಈಗ ಬಳಕೆಯಲ್ಲಿರುವ ರೇಡಾರ್‌ಗಳು

ಭಾರತೀಯ ವಾಯು ಸೇನೆ ಹೈ (ಹೆಚ್ಚಿನ) ಮತ್ತು ಮೀಡಿಯಂ (ಮಧ್ಯಮ) ಸಾಮರ್ಥ್ಯದ ರೇಡಾರ್‌ಗಳನ್ನು (ಎಚ್‌ಪಿಆರ್ ಮತ್ತು ಎಂಪಿಆರ್) ಬಳಸುತ್ತದೆ. ಇವು ನೂರಾರು ಕಿಲೋಮೀಟರ್ ದೂರದಲ್ಲಿರುವ ಅಪಾಯಗಳಾದ ಯುದ್ಧ ವಿಮಾನಗಳು, ಸಾಗಾಣಿಕಾ ವಿಮಾನಗಳು ಮತ್ತು ಎಡಬ್ಲ್ಯುಎಸಿಎಸ್ ವಿಮಾನಗಳನ್ನು ಬಹಳ ಎತ್ತರದಲ್ಲಿರುವಾಗಲೇ ಗುರುತಿಸಿ, ಹಿಂಬಾಲಿಸಬಲ್ಲವು.

ಎಡಬ್ಲ್ಯುಎಸಿಎಸ್ ಎಂದರೆ ಅತ್ಯಂತ ಶಕ್ತಿಶಾಲಿ ರೇಡಾರ್ ಹೊಂದಿರುವ ವಿಮಾನಗಳಾಗಿದ್ದು, ಶತ್ರು ವಿಮಾನಗಳನ್ನು ದೂರದಲ್ಲೇ ಗುರುತಿಸಿ, ಭಾರತದ ಪ್ರತಿಕ್ರಿಯಾ ಕಾರ್ಯಾಚರಣೆಗೆ ನಿರ್ದೇಶನ ಒದಗಿಸುತ್ತವೆ.

ಕೆಳ ಹಂತದಲ್ಲಿ, ಎರಡೂ ಪಡೆಗಳು ಲೋ ಲೆವೆಲ್ ಲೈಟ್ ವೆಯ್ಟ್ ರೇಡಾರ್‌ಗಳನ್ನು (ಎಲ್ಎಲ್ಎಲ್ಆರ್‌ಗಳು) ಬಳಸಿ, ಭೂಮಿಯ ಸನಿಹದಲ್ಲಿ ಸಾಗಿಬರುವ ಸಣ್ಣ ವಸ್ತುಗಳನ್ನು ಗುರುತಿಸುತ್ತವೆ. ಫೈರ್ ಕಂಟ್ರೋಲ್‌ಗಾಗಿ ಭಾರತೀಯ ವಾಯು ಸೇನೆ 3ಡಿ ಸೆಂಟ್ರಲ್ ಅಕ್ವಿಸಿಷನ್ ರೇಡಾರ್ ಮತ್ತು ರಾಜೇಂದ್ರ ರೇಡಾರ್‌ಗಳನ್ನು ಬಳಸುತ್ತದೆ. ಭಾರತೀಯ ಸೇನೆ ವಿಮಾನ ನಿರೋಧಕ ಗನ್‌ಗಳು ಮತ್ತು ಕ್ಷಿಪಣಿಗಳನ್ನು ನಿರ್ದೇಶಿಸಲು ಫ್ಲೈ ಕ್ಯಾಚರ್ ರೇಡಾರ್‌ಗಳು ಮತ್ತು ಎಡಿ ಟ್ಯಾಕ್ಟಿಕಲ್ ಕಂಟ್ರೋಲ್ ರೇಡಾರ್‌ಗಳನ್ನು ಅವಲಂಬಿಸಿದೆ.

ದೀರ್ಘಾವಧಿಯಿಂದ ಬಾಕಿಯಾದ ಅಭಿವೃದ್ಧಿ

ಭಾರತದ ಬಹಳಷ್ಟು ರೇಡಾರ್‌ಗಳು ಹಳೆಯದಾಗಿದ್ದು, ಮೇ ತಿಂಗಳಲ್ಲಿ ಪಾಕಿಸ್ತಾನದ ಜೊತೆಗಿನ ಮೂರು ದಿನಗಳ ಚಕಮಕಿ ಇವುಗಳ ಅಭಿವೃದ್ಧಿಯ ಅವಶ್ಯಕತೆಯನ್ನು ಪ್ರದರ್ಶಿಸಿದವು. ಶತ್ರು ಡ್ರೋನ್‌ಗಳು ಬಹಳಷ್ಟು ಪ್ರದೇಶಗಳಲ್ಲಿ ಒಳ ನುಸುಳಿದ್ದು, ಹಳೆಯ ಡ್ರೋನ್‌ಗಳು ಗುಂಪಾಗಿ ಹಾರಿಬರುವ ಡ್ರೋನ್‌ಗಳನ್ನು ಗುರುತಿಸಲು ಕಷ್ಟಪಟ್ಟಿವೆ.

ಸಮರ್ಥ ಎಲ್ಎಲ್ಎಲ್ಆರ್‌ಗಳು ಡ್ರೋನ್ ಸಮೂಹಗಳನ್ನು ಗುರುತಿಸಿ, 10 ಕಿಲೋಮೀಟರ್ ತನಕ ದೂರದಲ್ಲಿರುವ ಆಯುಧಗಳಿಗೆ ಗುರಿಯ ಮಾಹಿತಿ ಒದಗಿಸುತ್ತವೆ. ಎಡಿಎಫ್‌ಸಿಆರ್ - ಡಿಡಿಗಳು ಅತ್ಯಂತ ಸಣ್ಣ ಗುರಿಯನ್ನೂ ಗುರುತಿಸಿ, ಗುರಿಗಳನ್ನು ವರ್ಗೀಕರಿಸಿ, ಅವುಗಳ ವಿರುದ್ಧ ಆಯುಧಗಳನ್ನು ನಿರ್ದೇಶಿಸುತ್ತವೆ. ಆ ಮೂಲಕ ಭಾರತದ ರಕ್ಷಣೆ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ.

ದೊಡ್ಡದಾದ ರಕ್ಷಣಾ ಜಾಲ

ಭಾರತದ ಬಳಿ ರಷ್ಯನ್ ಎಸ್-400 ಕ್ಷಿಪಣಿಗಳು ಮತ್ತು ದೇಶೀಯ ನಿರ್ಮಾಣದ ಆಕಾಶ್ ಕ್ಷಿಪಣಿಯಂತಹ ಪ್ರಬಲ ವ್ಯವಸ್ಥೆಗಳಿವೆ. ಆಪರೇಷನ್ ಸಿಂದೂರದಲ್ಲಿ ವಾಯು ರಕ್ಷಣಾ ಗನ್‌ಗಳ ಜೊತೆಗೆ ಇವು ಪರಿಣಾಮಕಾರಿಯಾಗಿ ಕಾರ್ಯಾಚರಿಸಿ, ಪಾಕಿಸ್ತಾನ ಭಾರತಕ್ಕೆ ಹೆಚ್ಚಿನ ಹಾನಿ ಮಾಡದಂತೆ ತಡೆದವು.

ಸೇನೆ ಆಕಾಶ್‌ತೀರ್ ವ್ಯವಸ್ಥೆಯನ್ನು ಬಳಸಿಕೊಂಡು, ಆಕಾಶದ ನೈಜ ಸಮಯದ ಚಿತ್ರಗಳನ್ನು ನಿಯಂತ್ರಣ ಕೇಂದ್ರ, ರೇಡಾರ್‌ಗಳು ಮತ್ತು ಆಯುಧಗಳಿಗೆ ಒದಗಿಸಿದೆ. ವಾಯುಪಡೆ ಇಂಟಿಗ್ರೇಟೆಡ್ ಏರ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸಿಸ್ಟಮ್ (ಐಎಸಿಸಿಎಸ್) ಬಳಸಿ, ಎಲ್ಲ ರೇಡಾರ್‌ಗಳು ಮತ್ತು ವಾಯು ರಕ್ಷಣಾ ಆಯುಧಗಳಿಂದ ಮಾಹಿತಿ ಪಡೆದುಕೊಂಡು, ಶತ್ರುಗಳ ವೈಮಾನಿಕ ಉಪಕರಣಗಳನ್ನು ಗುರುತಿಸಿ, ಭಾರತೀಯ ದಾಳಿಯನ್ನು ನಿರ್ದೇಶಿಸಿದೆ.

ಮುಂದಿನ ಹಾದಿ

ಭಾರತ ಈಗ 'ಮಿಷನ್ ಸುದರ್ಶನ ಚಕ್ರ' ಯೋಜನೆಯಡಿ ಸಮಗ್ರ ವಾಯು ರಕ್ಷಣಾ ಕವಚವನ್ನು ನಿರ್ಮಿಸುತ್ತಿದೆ. ಇತ್ತೀಚೆಗೆ ಡಿಆರ್‌ಡಿಒ ತನ್ನ ನೂತನ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್ (ಐಎಡಿಡಬ್ಲ್ಯುಎಸ್) ಅನ್ನು ಯಶಸ್ವಿಯಾಗಿ ಪರೀಕ್ಷಿಸಿ, ಮುಖ್ಯವಾದ ಪ್ರಗತಿಯನ್ನು ಸಾಧಿಸಿದೆ.

ಆಧುನಿಕ ರೇಡಾರ್‌ಗಳು, ಅಭಿವೃದ್ಧಿ ಹೊಂದಿದ ವ್ಯವಸ್ಥೆಗಳು, ಮತ್ತು ಆಧುನಿಕ ಕ್ಷಿಪಣಿಗಳು ಡ್ರೋನ್‌ಗಳಿಂದ ಯುದ್ಧ ವಿಮಾನಗಳ ತನಕ ಭಾರತ ಯಾವುದೇ ವೈಮಾನಿಕ ಅಪಾಯವನ್ನೂ ಎದುರಿಸಲು ಶಕ್ತವಾಗಿಸಲಿವೆ.

ವಾಯು ಶಕ್ತಿ ಭವಿಷ್ಯದ ಯುದ್ಧವನ್ನು ರೂಪಿಸಲಿದ್ದು, ಡ್ರೋನ್‌ಗಳು ಸೇನಾಪಡೆಗಳು ಮತ್ತು ಸಶಸ್ತ್ರ ಗುಂಪುಗಳ ನೆಚ್ಚಿನ ಆಯುಧಗಳಾಗುತ್ತಿವೆ. ಭಾರತದ ರೇಡಾರ್ ಆಧುನೀಕರಣ ಬದಲಾಗುತ್ತಿರುವ ಯುದ್ಧ ಚಿತ್ರಣದಲ್ಲಿ ಭಾರತವನ್ನು ಸುರಕ್ಷಿತವಾಗಿಸಲಿದೆ.

ವಾಯು ರಕ್ಷಣೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಮೂಲಕ ಭಾರತ ನಮ್ಮ ಮೇಲಿನ ಆಕಾಶ ಸದಾ ಸುರಕ್ಷಿತವಾಗಿರಲಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದೆ.

ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.

ಇಮೇಲ್: girishlinganna@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಉತ್ತರಾಖಂಡದಲ್ಲಿ 8,000 ಕೋಟಿ ರೂ. ಯೋಜನೆಗಳಿಗೆ ಮೋದಿ ಚಾಲನೆ; 'ವಿಶ್ವದ ಆಧ್ಯಾತ್ಮಿಕ ರಾಜಧಾನಿ' ಮಾಡುವ ಗುರಿ

ರಾಜ್ಯ ಸರ್ಕಾರ ಎರಡು ವರ್ಷದಲ್ಲಿ ರೂ.1 ಲಕ್ಷ ಕೋಟಿಯನ್ನು ನೇರವಾಗಿ ರಾಜ್ಯದ 'ಜನರ ಜೇಬಿ'ಗೆ ಹಾಕಿದೆ: ಸಿಎಂ ಸಿದ್ದರಾಮಯ್ಯ

ಶಾಕಿಂಗ್: 14 ವರ್ಷದ ಬಾಲಕನ ಬೆದರಿಸಿ, ಅಪಹರಿಸಿ 'ಕಾಮಕೇಳಿ', 38 ವರ್ಷದ ಮಹಿಳೆಗೆ 54 ವರ್ಷ ಜೈಲು, 6 ಲಕ್ಷ ರೂ ಪರಿಹಾರಕ್ಕೆ ಆದೇಶ!

ಬಿಹಾರದ 2ನೇ ಹಂತದ ಚುನಾವಣೆಗೂ ಮುನ್ನ ನೇಪಾಳ-ಭಾರತ ಗಡಿ ಬಂದ್

Gujarat: ದೇಶಾದ್ಯಂತ ಭಯೋತ್ಪಾದಕ ದಾಳಿಗೆ ಸ್ಕೆಚ್; ಡಾಕ್ಟರ್ ಸೇರಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ ಗುಜರಾತ್ ATS!

SCROLL FOR NEXT