ಪ್ರಧಾನಿ ನರೇಂದ್ರ ಮೋದಿ- ಸೌದಿ ಅರೇಬಿಯಾ-ಪಾಕಿಸ್ತಾನ ಒಪ್ಪಂದ  onlne desk
ಅಂಕಣಗಳು

ಸೌದಿ-ಪಾಕಿಸ್ತಾನ ನಡುವಣ ರಕ್ಷಣಾ ಒಪ್ಪಂದ ಭಾರತಕ್ಕೆ ತಲೆನೋವಾ? (ತೆರೆದ ಕಿಟಕಿ)

ಅಮೆರಿಕ ನಿರ್ಮಿತ ಯುದ್ಧ ವಿಮಾನ, ಶಸ್ತ್ರಗಳೆಲ್ಲ ಸೌದಿ ಬಳಿ ಇವೆಯಾದರೂ, ದೊಡ್ಡಮಟ್ಟದಲ್ಲಿ ಹೋರಾಡಬಲ್ಲ ಸೈನ್ಯ ಸೌದಿ ಬಳಿ ಇಲ್ಲ. ಅದರ ರಕ್ಷಣಾ ಪಡೆ ಆಂತರಿಕ ಮಟ್ಟದಲ್ಲಿ ರಕ್ಷಣೆ ಒದಗಿಸುವಷ್ಟರಮಟ್ಟಿಗೆ ಸಶಕ್ತವಷ್ಟೆ. ಈ ಜಾಗವನ್ನು ತುಂಬುವುದಕ್ಕೆ ಅದು ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ.

ಪಾಕಿಸ್ತಾನವು ಸೌದಿ ಜತೆಗೆ ಘೋಷಿಸಿಕೊಂಡಿರುವ ರಕ್ಷಣಾ ಒಪ್ಪಂದವು ಭಾರತಕ್ಕೆ ಆತಂಕದ ವಿಷಯವಾ? ಪ್ರಧಾನಿ ಮೋದಿ ಹಾಗೂ ಸೌದಿ ರಾಜಕುವರ ಎಂಬಿಎಸ್ ನಡುವೆ ಇದ್ದ ಬಾಂಧವ್ಯ ಇದರಿಂದ ಶಿಥಿಲವಾಗಿಹೋಯಿತಾ? ಪಾಕಿಸ್ತಾನದ ಮೇಲೆ ಭಾರತವೇನಾದರೂ ಆಪರೇಷನ್ ಸಿಂದೂರವನ್ನು ಮುಂದುವರಿಸುವ ಸ್ಥಿತಿ ಬಂದರೆ ಆಗ ಸೌದಿ ಅರೇಬಿಯವೂ ಈಗ ಮಾಡಿಕೊಂಡಿರುವ ರಕ್ಷಣಾ ಒಪ್ಪಂದದ ಪ್ರಕಾರ ಯುದ್ಧಕ್ಕೆ ಧುಮುಕುತ್ತದಾ? ಇಂಥವೆಲ್ಲ ಒಂದಿಷ್ಟು ಪ್ರಶ್ನೆಗಳು ಸುತ್ತಾಡಿಕೊಂಡಿವೆ.

ಸೌದಿ ಮತ್ತು ಭಾರತದ ನಡುವೆ ಈ ಆರೆಂಟು ವರ್ಷಗಳಲ್ಲಿ ಅರಳಿಕೊಂಡಿರುವುದು ಕೇವಲ ವೈಯಕ್ತಿಕ ವರ್ಚಸ್ಸುಗಳ ಹೊಂದಾಣಿಕೆ ಕಾರಣದಿಂದ ಅಲ್ಲ. ಎರಡು ದೇಶಗಳ ನಡುವಿನ ವ್ಯಾಪಾರ ಹಾಗೂ ಹೂಡಿಕೆಗಳ ಅಂಕಿ-ಅಂಶಗಳೇ ಅದಕ್ಕೆ ಸಾಕ್ಷಿ ಹೇಳುತ್ತವೆ. ನವೀಕೃತ ಎನರ್ಜಿ, ಎಂಟರ್ಟೇನ್ಮೆಂಟ್, ಆಹಾರೋತ್ಪಾದನೆ ಹೀಗೆ ಹಲವು ವಿಭಾಗಗಳಲ್ಲಿ ಭಾರತದಲ್ಲಿ ಸುಮಾರು 10 ಬಿಲಿಯನ್ ಡಾಲರುಗಳಷ್ಟು ಸೌದಿ ಹಣ ಹೂಡಿಕೆ ಆಗಿದೆ. ಭಾರತದ ಐದನೇ ಅತಿದೊಡ್ಡ ಟ್ರೇಡಿಂಗ್ ಸಹಭಾಗಿದಾರ ದೇಶ ಸೌದಿ. ಕೇವಲ ಆ ದೇಶದಿಂದ ತೈಲ ಖರೀದಿಸುತ್ತಿದ್ದೇವೆ ಎಂಬುದಕಷ್ಟೇ ಉಭಯ ದೇಶಗಳ ವಹಿವಾಟು ಸೀಮಿತವಾಗಿಲ್ಲ.

ತೈಲೋತ್ತರ ಆರ್ಥಿಕತೆಯ ಪ್ರಮುಖ ಆಧಾರವನ್ನಾಗಿ ಭಾರತವನ್ನು ಸೌದಿ ಹಾಗೂ ಗಲ್ಫ್ ದೇಶಗಳು ಪರಿಭಾವಿಸುತ್ತಿವೆ ಎಂಬುದಕ್ಕೆ ಭಾರತ ಪ್ರಣೀತ ಐಮೆಕ್ ವ್ಯಾಪಾರ ಕಾರಿಡಾರ್ ಅನ್ನು ಅವು ಸ್ವಾಗತಿಸಿರುವ ರೀತಿಯೇ ಪ್ರಮಾಣ. ಹೀಗೆಲ್ಲ ಇರುವಾಗ, ಭಾರತವು ಪಾಕಿಸ್ತಾನದ ಮೇಲೆ ಯಾವುದೇ ಪ್ರತಿಕ್ರಿಯಾತ್ಮಕ ದಾಳಿ ಮಾಡಬೇಕಾದ ಸಂದರ್ಭ ಬಂದಾಗ ಸೌದಿ ಆ ಬಗ್ಗೆ ಮೌನವಾಗಬಹುದು ಇಲ್ಲವೇ ಸಾರ್ವಜನಿಕ ಉಪಯೋಗಕ್ಕಿರಲಿ ಎಂಬಂತೆ ಒಂದು ಖಂಡನೆ, ಇಲ್ಲವೇ ಆತಂಕ ವ್ಯಕ್ತಪಡಿಸುವ ಹೇಳಿಕೆ ನೀಡಿ ಸುಮ್ಮನಾಗುವ ಸಂಭವ ಹೆಚ್ಚು. ಪಾಕಿಸ್ತಾನಕ್ಕೆ ಅಮೆರಿಕ ಹಾಗೂ ಚೀನಾಗಳ ರಕ್ಷಣಾ ಪರಿಕರ ಹಾಗೂ ಇಂಟೆಲಿಜೆನ್ಸ್ ಸಹಾಯವಿದ್ದಾಗಲೇ ಅದರ ನಡುವೆಯೇ ಯಶಸ್ವಿ ಮಿಲಿಟರಿ ಕಾರ್ಯಾಚರಣೆ ನಡೆಸಿರುವ ಭಾರತಕ್ಕೆ ಪ್ರಾಯೋಗಿಕವಾಗಿ ಸೌದಿ ಹೇಗೆ ಅಡ್ಡಿಯಾಗಬಲ್ಲುದು? ಸರಿ. ಸೌದಿಯು ಭಾರತಕ್ಕೆ ಆತಂಕ ಒಡ್ಡದು ಎಂದೇ ಅಂದುಕೊಂಡರೂ ಅದು ಪಾಕಿಸ್ತಾನದೊಂದಿಗೆ ರಕ್ಷಣಾ ಒಪ್ಪಂದವೊಂದನ್ನು ಅಧಿಕೃತಗೊಳಿಸಿದ್ದಾದರೂ ಏಕೆ ಎಂಬ ಪ್ರಶ್ನೆಗೆ ಹಲವು ಆಯಾಮಗಳಲ್ಲಿ ಉತ್ತರಗಳಿವೆ.

ಅಮೆರಿಕ ತೆರವಾಗಿಸುತ್ತಿರುವ ರಕ್ಷಣಾ ಹೊಣೆಗಾರಿಕೆ ತುಂಬುವವರ್ಯಾರು?

ಕತಾರಿನಲ್ಲಿ ಇತ್ತೀಚೆಗೆ ಆದದ್ದೇನು ಗಮನಿಸಿ. ಜಗತ್ತಿನ ಪರಮ ಶಕ್ತಿಶಾಲಿ ಮಿಲಿಟರಿ ಬಲ ತಾನೆಂದು ಹೇಳಿಕೊಳ್ಳುವ ಅಮೆರಿಕವು ಕತಾರಿನಲ್ಲಿ ಮಿಲಿಟರಿ ನೆಲೆಯನ್ನು ಹೊಂದಿದೆ. ಅಂಥ ಕತಾರಿನ ನೆಲದ ಮೇಲೆ ಅಮೆರಿಕದ ಮಿತ್ರರಾಷ್ಟ್ರವೇ ಆಗಿರುವ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ನಡೆಸಿತು. ಅದು ಅಮೆರಿಕಕ್ಕೆ ಗೊತ್ತಿತ್ತೋ ಇಲ್ಲವೋ ಎಂಬುದಲ್ಲ ಪ್ರಶ್ನೆ. ತನ್ನ ಮಿಲಿಟರಿ ನೆಲೆ ಇರುವ ದೇಶದ ಮೇಲಾಗಿರುವ ದಾಳಿಯು ತನ್ನ ಮೇಲೆಯೇ ಆಗಿರುವ ದಾಳಿ ಎಂದು ಅಮೆರಿಕ ಪ್ರತಿಕ್ರಿಯಿಸಬೇಕಿತ್ತಲ್ಲ? ಹೋಗಲಿ, ಇಸ್ರೇಲನ್ನು ದೊಡ್ಡಮಟ್ಟದಲ್ಲಿ ಖಂಡಿಸಬೇಕಿತ್ತಲ್ಲ? ಅಂಥದ್ದೇನನ್ನೂ ಅಮೆರಿಕ ಮಾಡಲಿಲ್ಲ. ಅಲ್ಲಿಗೆ, ಈ ರಕ್ಷಣಾ ಒಡಂಬಡಿಕೆಗಳೆಲ್ಲ ಮೇಲ್ನೋಟದ ಮಾತುಗಳು ಎಂದಾಯಿತು. ಅದೂ ಅಲ್ಲದೇ, 35 ಟ್ರಿಲಿಯನ್ ಡಾಲರುಗಳ ಸಾಲ ಹೊಂದಿ ಅದರ ಭಾರ ಈಗ ಅನುಭವಕ್ಕೆ ಬರುತ್ತಿರುವ ಸ್ಥಿತಿಯ ನಡುವೆ ಇರುವ ಅಮೆರಿಕವು ಯಾರ ಪರವಾಗಿಯೂ ತನ್ನ ಸೈನ್ಯ ಕಳುಹಿಸುವ ಸನ್ನಿವೇಶದಲ್ಲಿಲ್ಲ. ಬೇಕಾದರೆ, ಅದು ಯುದ್ಧಭೀತಿ ಹುಟ್ಟಿಸಿ ಎಲ್ಲರೂ ತನ್ನ ರಕ್ಷಣಾ ಉದ್ದಿಮೆಗಳಿಂದ ಶಸ್ತ್ರ ಖರೀದಿಸುವಂತೆ ಒತ್ತಾಯಿಸಬಲ್ಲದಷ್ಟೆ. ಈ ಆಟ ಸಹ ಈಗ ಎಲ್ಲರಿಗೂ ಅರ್ಥವಾಗಿಬಿಟ್ಟಿದೆ.

ಹೀಗೆ ಅಮೆರಿಕವು ಹಿಂದೆ ಸರಿದುಕೊಳ್ಳುತ್ತಿರುವ ವಿದ್ಯಮಾನವು ಸೌದಿ ಅರೇಬಿಯಕ್ಕೆ ಸಹಜವಾಗಿಯೇ ರಕ್ಷಣಾ ಬಿಕ್ಕಟ್ಟನ್ನು ಹುಟ್ಟುಹಾಕಿದೆ. ಏಕೆಂದರೆ, 1971ರಲ್ಲಿ ಸೌದಿ ಸೇರಿದಂತೆ ಗಲ್ಫ್ ದೇಶಗಳು ತಮ್ಮ ತೈಲವನ್ನು ಡಾಲರ್ ಮಾಧ್ಯಮದಲ್ಲಿ ಮಾರುವುದಕ್ಕೆ ಒಪ್ಪಿಕೊಂಡಿದ್ದರ ಕಾರಣವೇ, ತಮ್ಮ ಮೇಲೆ ಬೇರೆಯವರ ದಾಳಿಯಾದರೆ ಅದನ್ನು ತಡೆಯುವುದಕ್ಕೆ ಅಮೆರಿಕವು ಅದರ ಮಿಲಿಟರಿ ಬಲವನ್ನು ಉಪಯೋಗಿಸುತ್ತದೆ ಎಂಬ ಒಪ್ಪಂದದ ಮೇರೆಗೆ. ಆ ವಿಶ್ವಾಸವೀಗ ಮುರಿದುಬಿದ್ದಿದೆ ಹಾಗೂ ಡಾಲರ್ ಸಹ ಸಂಕಷ್ಟದ ದಿನಗಳಿಗೆ ಹೋಗಬಹುದಾದ ಸೂಚನೆ ಸಿಗುತ್ತಿದೆ. ಕತಾರಿಗೆ ಇಸ್ರೇಲ್ ಬಂದು ಬಡಿದುಹೋದಹಾಗೆ, ತನಗೆ ನಾಳೆ ಇರಾನೋ ಇಲ್ಲವೇ ಮತ್ಯಾವುದೋ ಇಸ್ಲಾಮಿಕ್ ಉಗ್ರರ ಗುಂಪೋ ಹೊಡೆದುಹೋದರೆ ತಾನು ಮಿಲಿಟರಿ ಶಕ್ತಿ ತೋರಿಸುವುದಾದರೂ ಹೇಗೆ ಎಂಬುದು ಸೌದಿ ಚಿಂತೆ. ಅಮೆರಿಕ ನಿರ್ಮಿತ ಯುದ್ಧ ವಿಮಾನ, ಶಸ್ತ್ರಗಳೆಲ್ಲ ಸೌದಿ ಬಳಿ ಇವೆಯಾದರೂ, ದೊಡ್ಡಮಟ್ಟದಲ್ಲಿ ಹೋರಾಡಬಲ್ಲ ಸೈನ್ಯ ಸೌದಿ ಬಳಿ ಇಲ್ಲ. ಅದರ ರಕ್ಷಣಾ ಪಡೆ ಆಂತರಿಕ ಮಟ್ಟದಲ್ಲಿ ರಕ್ಷಣೆ ಒದಗಿಸುವಷ್ಟರಮಟ್ಟಿಗೆ ಸಶಕ್ತವಷ್ಟೆ.

ಈ ಜಾಗವನ್ನು ತುಂಬುವುದಕ್ಕೆ ಅದು ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ. ಹಲವೆಡೆಗಳಲ್ಲಿ ಹೀಗೆ ಬಾಡಿಗೆ ಯೋಧರನ್ನು ಕಳುಹಿಸಿರುವ ಅನುಭವ ಪಾಕಿಸ್ತಾನಕ್ಕಿದೆ. ಇಷ್ಟಕ್ಕೂ, ಪಾಕಿಸ್ತಾನ ಹಾಗೂ ಸೌದಿ ನಡುವೆ ಸಂಬಂಧವು ಒಂದು ಹಂತದಲ್ಲಿ ಹಳಸಿದ್ದಕ್ಕೆ ಕಾರಣವೇ ಪಾಕಿಸ್ತಾನವು 2015ರಲ್ಲಿ ತನ್ನ ಸೇನೆಯನ್ನು ಸೌದಿಯ ಬಳಕೆಗೆ ಕೊಡುವುದಕ್ಕೆ ನಿರಾಕರಿಸಿದ್ದು ಎಂದು ವಿಶ್ಲೇಷಕರು ಹೇಳುತ್ತಾರೆ. ಆರ್ಥಿಕ-ರಾಜಕೀಯ ಸ್ಥಿತಿಗಳೆಲ್ಲವೂ ಹದಗೆಟ್ಟಿರುವ ಈ ಸಮಯದಲ್ಲಿ ಸೌದಿಯ ಬಾಡಿಗೆಗೆ ತನ್ನ ಸೈನಿಕರನ್ನು ಬಳಸುವುದು ಪಾಕಿಸ್ತಾನದಮಟ್ಟಿಗೆ ಲಾಭದಾಯಕವೇ. ಹಲವು ದಶಕಗಳಿಂದಲೂ ಪಾಕಿಸ್ತಾನದ ನಿವೃತ್ತ ಮಿಲಿಟರಿ ಅಧಿಕಾರಿಗಳು ಸೌದಿಯ ರಕ್ಷಣಾ ವ್ಯವಸ್ಥೆಯ ತರಬೇತು ಇತ್ಯಾದಿಗಳಲ್ಲಿ ತೊಡಗಿಸಿಕೊಂಡು ಅಲ್ಲಿ ಉದ್ಯೋಗ ಕಂಡುಕೊಳ್ಳುವುದು ಸಾಮಾನ್ಯವಾಗಿತ್ತು. ಪಾಕಿಸ್ತಾನವು ಅಧಿಕೃತವಾಗಿಯೇ ಸುಮಾರು 10,000 ಸೌದಿ ಯೋಧರಿಗೆ ತರಬೇತು ನೀಡಿದೆ. ಅದನ್ನೀಗ ರಕ್ಷಣಾ ಒಪ್ಪಂದದ ಚೌಕಟ್ಟಿಗೆ ತರುವ ಕೆಲಸವಷ್ಟೇ ಈಗ ಆಗಿದೆ.

ಸದ್ಯದ ನಿಗಾ ಯೆಮೆನ್ ಕಡೆಗೆ

ಸೌದಿ ಅರೇಬಿಯದೊಂದಿಗೆ ಗಡಿ ಹಂಚಿಕೊಂಡಿರುವ ಯೆಮೆನ್ ದೇಶದ ಅರ್ಧಕ್ಕಿಂತ ಹೆಚ್ಚು ಭಾಗ ಹೂತಿ ಉಗ್ರರ ಕೈಯಲ್ಲಿದೆ. ಇದು ಇರಾನ್ ಪ್ರೇರಿತ ಉಗ್ರ ಗುಂಪು. ಇಸ್ರೇಲಿನ ಪರಮ ವೈರತ್ವವೇ ಅದರ ಗುರಿಯಾದರೂ, ಪಕ್ಕದ ಸೌದಿ ಅದಕ್ಕೆ ಸ್ನೇಹಿತನೇನಲ್ಲ. ಇಷ್ಟಕ್ಕೂ ಶಿಯಾ ಬಹುಸಂಖ್ಯಾತ ಇರಾನ್ ಹಾಗೂ ಸುನ್ನಿ ಬಹುಸಂಖ್ಯಾತ ಸೌದಿ ಅರೇಬಿಯಗಳ ನಡುವೆ ಇರುವ ಹಗೆತನ ಹಾಗೂ ಮುಸುಕಿನ ಗುದ್ದಾಟಗಳು ಎಲ್ಲರಿಗೂ ಪರಿಚಿತವೇ. ಇಂಥ ಇರಾನ್ ಬೆಂಬಲಿತ ಹೂತಿ ಉಗ್ರರು ಸಾವಿರಾರು ಕಿಲೊಮೀಟರುಗಳ ದೂರದಲ್ಲಿರುವ ಇಸ್ರೇಲಿಗೆ ಕ್ಷಿಪಣಿ ಹಾರಿಸುತ್ತಾರೆ. ಅದು ಸೌದಿಯ ತಲೆಮೇಲೆಯೇ ಹಾರಿಹೋಗುತ್ತದೆ. ಸೌದಿಯನ್ನೇ ಗುರಿಯಾಗಿಸಿಕೊಂಡು ಕ್ಷಿಪಣಿಗಳನ್ನು ಬಿಟ್ಟ ಉದಾಹರಣೆಗಳೂ ಇವೆ. ಸೌದಿ ಈ ಹೂತಿಗಳನ್ನು ಗುರಿಯಾಗಿರಿಸಿಕೊಂಡು ಯೆಮೆನ್ ಮೇಲೆ ಮಿಲಿಟರಿ ಕಾರ್ಯಾಚರಣೆಗಳನ್ನೂ ಮಾಡಿದೆ. ಇಂಥ ಹೂತಿಗಳ ವಿರುದ್ಧ ಹೋರಾಡುವುದಕ್ಕೆ ಸೌದಿಗೆ ಜನ ಬೇಕಲ್ಲವೇ? ಅದನ್ನು ಒದಗಿಸುವ ಕೆಲಸಕ್ಕೀಗ ಪಾಕಿಸ್ತಾನ ಹೆಗಲು ಕೊಟ್ಟಿದೆ.

ಅಣ್ವಸ್ತ್ರ ಬೆದರಿಕೆಯ ಕವಚ

ಮುಸ್ಲಿಂ ದೇಶಗಳ ನಾಯಕತ್ವ ಸ್ಥಾನಕ್ಕಾಗಿ ಹಲವು ಗುಂಪುಗಳು ಮತ್ತು ಹಿತಾಸಕ್ತಿಗಳ ಸಂಘರ್ಷ ಮೊದಲಿನಿಂದಲೂ ಇದೆ. ಮೆಕ್ಕಾ-ಮದೀನಾಗಳನ್ನು ಹೊಂದಿರುವ ಕಾರಣಕ್ಕೆ ಸಹಜವಾಗಿಯೇ ಸೌದಿ ಇಸ್ಲಾಂ ಮತಸ್ಥರ ಪಾಲಿಗೆ ಅತಿಮುಖ್ಯ ದೇಶ. ಕೇವಲ ಕಣ್ಣಿಗೆ ಕಾಣುವ ಇರಾನ್ ಪ್ರತಿಸ್ಪರ್ಧೆ ಮಾತ್ರವಲ್ಲ, ಹಲವು ಆಯಾಮಗಳಲ್ಲಿ ಈ ಸ್ಥಾನ ಕಾಯ್ದುಕೊಳ್ಳಬೇಕಾದ ಒತ್ತಡ ಸೌದಿಗಿದೆ. ಸೌದಿಯು ಹಿಂದೊಮ್ಮೆ ತಾನೇ ಸಾಕಿದ್ದ ಉಗ್ರ ಗುಂಪುಗಳೇ ಇವತ್ತು ಮೆಕ್ಕಾ - ಮದೀನಾ ವಶಕ್ಕೆ ಹವಣಿಸಿದ್ದಿರಬಹುದು, ಅಮೆರಿಕವು ಗಲ್ಫ್ ಅನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳುವುದಕ್ಕೆ ಸೌದಿಯನ್ನು ಗುರಿಯಾಗಿರಿಸಿಕೊಂಡು ಯಾವುದೇ ಆಟ ಆಡಬಲ್ಲದು, ಇಸ್ರೇಲ್ ಎದುರಿಗೆ ಸಹ ತಾನು ತೀರ ಬಲಹೀನ ಎಂದು ಎನ್ನಿಸಿಕೊಳ್ಳುವಂತಿಲ್ಲ. ಐಮೆಕ್ ಸೇರಿದಂತೆ ಹಲವು ಯೋಜನೆಗಳಲ್ಲಿ ತಾನು ಹೊರಗಾಗಿರುವುದರ ಬಗ್ಗೆ ಟರ್ಕಿಯಂಥ ದೇಶಗಳಿಗೆ ಸಹ ಅಸೂಯೆ ಇದೆ. ಈ ಎಲ್ಲ ಹಿನ್ನೆಲೆಗಳಲ್ಲಿ, ಜಗತ್ತಿನ ಯಾವುದೇ ಶಕ್ತಿ ತನ್ನ ವಿರುದ್ಧ ಬಂದರೂ, ತನ್ನ ಸೇನೆ ಎಷ್ಟೇ ಚಿಕ್ಕದಿದ್ದರೂ ಪರೋಕ್ಷವಾಗಿ ಪಾಕಿಸ್ತಾನದ ಅಣ್ವಸ್ತ್ರ ಬಲವೂ ತನ್ನ ಬೆನ್ನಿಗಿದೆ ಎಂಬ ಸಂದೇಶವನ್ನು ಸೌದಿ ಅರೇಬಿಯ ಜಗತ್ತಿಗೆ ನೀಡುತ್ತಿದೆ. ಕೆಲ ವರ್ಷಗಳ ಹಿಂದೆ ಸೌದಿಯ ಎಂಬಿಎಸ್ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೀಗೆ ಹೇಳಿದ್ದರು- “ನಾವು ಅಣ್ವಸ್ತ್ರದ ರೇಸಿನಲ್ಲಿಲ್ಲ. ಆದರೆ ಇರಾನ್ ಅದನ್ನು ಹೊಂದಿದರೆ ತಕ್ಷಣಕ್ಕೆ ನಾವೂ ಹೊಂದುತ್ತೇವೆ.” ಹಲವು ವರ್ಷಗಳ ತಯಾರಿಯ ನಂತರವಷ್ಟೇ ಹೊಂದಬಲ್ಲ ಅಣ್ವಸ್ತ್ರ ವ್ಯವಸ್ಥೆಯನ್ನು ತಕ್ಷಣಕ್ಕೆ ಹೊಂದಬಲ್ಲೆವು ಎಂದು ಎಂಬಿಎಸ್ ಹೇಳಿದ್ದರಲ್ಲೇ ಪಾಕಿಸ್ತಾನದ ಬಳಿ ಇರುವುದೇ ಅಗತ್ಯಬಿದ್ದಾಗ ಸೌದಿಯದೂ ಆಗಬಲ್ಲದೆಂಬುದರ ಸುಳಿವು ಇತ್ತು.

ಎಂಬಿಎಸ್ ಆಂತರಿಕ ಆತಂಕದ ಸಾಧ್ಯತೆ

2017ರಲ್ಲಿ ಎಂಬಿಎಸ್ ಸೌದಿಯ ಚುಕ್ಕಾಣಿ ಹಿಡಿಯುವುದರವರೆಗೂ ಅದು ಸಂಪ್ರದಾಯಸ್ಥ ಇಸ್ಲಾಂವಾದಿಗಳ ಹಿಡಿತದಲ್ಲೇ ಇತ್ತು. ಎಂಬಿಎಸ್ ಅಧಿಕಾರಕ್ಕೆ ಬಂದಿರುವುದರಲ್ಲೂ ಸಹೋದರನನ್ನು ಪಕ್ಕಕ್ಕೆ ಸರಿಸಿರುವ, ಆಂತರಿಕವಾಗಿ ಹಲವು ಪೈಪೋಟಿಗಳನ್ನು ಮೆಟ್ಟಿನಿಂತು ಆ ಸ್ಥಾನಕ್ಕೆ ಬಂದಿರುವುದು ಸ್ಪಷ್ಟ. ಎಂಬಿಎಸ್ ಬಂದ ನಂತರ ಸೌದಿಯನ್ನು ಆಧುನಿಕಗೊಳಿಸುವ ನಿಟ್ಟಿನಲ್ಲಿ ಅಲ್ಲಿ ನೈಟ್ಲೈಫ್ ಪ್ರೇರಿತ ಪಾರ್ಟಿಗಳಿಗೆ ಜಾಗ ಮಾಡಿಕೊಟ್ಟಿರುವುದು, ಸಂಗೀತ-ನೃತ್ಯಗಳಿಗೆ ಸಾರ್ವಜನಿಕವಾಗಿ ಅವಕಾಶ ಸಿಗುತ್ತಿರುವುದು, ಇಸ್ಲಾಂ ಮತಾಧಾರಿತ ಜಾಗಗಳಿಗೆ ಹೊರತಾಗಿರುವ ಇಸ್ಲಾಂ ಪೂರ್ವದ ಸೌದಿಯ ಜಾಗಗಳು ಪ್ರವಾಸೋದ್ಯಮದ ಮ್ಯಾಪಿನಲ್ಲಿ ಮೇಲೆ ಬಂದಿರುವುದು ಇಂಥವೆಲ್ಲ ಸಂಪ್ರದಾಯವಾದಿಗಳಿಗೆ ಇಷ್ಟವಿಲ್ಲದ ಸಂಗತಿಗಳೇ. ಅಲ್ ಸೌದ್ ಮನೆತನದಲ್ಲೇ ಯುವರಾಜ ಪದವಿಗೆ ಬೇರೆಯವರ ಆಸೆ-ಅಭಿಲಾಷೆಗಳೂ ಸಹಜ. ಇಡೀ ಇಸ್ಲಾಮಿನ ಇತಿಹಾಸವನ್ನೇ ಗಮನಿಸಿದರೂ ಅಲ್ಲಿ ಮಗನು ತಂದೆಯನ್ನು ಕೊಂದು ಅಧಿಕಾರಕ್ಕೆ ಬರುವುದು, ಸಂಬಂಧಿಕರನ್ನು ಜೈಲಿನಲ್ಲಿರಿಸುವುದು, ಗದ್ದುಗೆಗಾಗಿ ಸಹೋದರರನ್ನು ಕೊಲ್ಲಿಸುವುದು ಇವೆಲ್ಲ ತುಂಬ ಮಾಮೂಲಿನ ಸಂಗತಿಗಳು. ಹೀಗಿರುವಾಗ ಎಂಬಿಎಸ್ ಇರುವ ಹುದ್ದೆ ವಿಚಾರದಲ್ಲಿ ಅದಕ್ಕಿರುವ ಆಂತರಿಕ ಅಪಾಯಗಳನ್ನು ತಳ್ಳಿಹಾಕುವಂತಿಲ್ಲ. ಈ ಎಲ್ಲ ಆಯಾಮಗಳಲ್ಲಿ ಸೌದಿಯು ತನ್ನ ರಕ್ಷಣೆ ಹೆಚ್ಚಿಸಿಕೊಳ್ಳಬೇಕಿರುವಾಗ ಅದಕ್ಕೆ ಪಾಕಿಸ್ತಾನದ ಯೋಧರನ್ನು ಬಳಸಿಕೊಳ್ಳಬೇಕಿರುವುದರ ಅನಿವಾರ್ಯತೆಯನ್ನು ಭಾರತವಂತೂ ಅರ್ಥಮಾಡಿಕೊಳ್ಳಬಲ್ಲದು!

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಹಿರಿಯ ಸಾಹಿತಿ SL Bhyrappa ನಿಧನ

CWC ಸಭೆ: ಬಿಹಾರ ವಿಧಾನಸಭಾ ಚುನಾವಣೆ ಮೋದಿ ಸರ್ಕಾರದ 'ಭ್ರಷ್ಟ ಆಡಳಿತ' ಅಂತ್ಯಕ್ಕೆ ನಾಂದಿಯಾಗಲಿದೆ; ಮಲ್ಲಿಕಾರ್ಜುನ ಖರ್ಗೆ

'ಸನ್ ಆಕಾಶದಲ್ಲಿ ಬೆಳಗುತ್ತಿರುವಾಗ, ಅದನ್ನು ಘೋಷಿಸುವ ಅಗತ್ಯವಿಲ್ಲ': ಬಿಹಾರ ಸಿಎಂ ಅಭ್ಯರ್ಥಿಯಾಗಿ ತೇಜಸ್ವಿಗೆ ಕಾಂಗ್ರೆಸ್ ಬೆಂಬಲ

'ತಮ್ಮದೇ ಜನರ ಮೇಲೆ ಬಾಂಬ್ ದಾಳಿ': ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ AIRSTRIKE ಕುರಿತು ಭಾರತ ವ್ಯಂಗ್ಯ

ವಿಶ್ವಸಂಸ್ಥೆ ನಿರ್ಣಯಗಳ ಆಧಾರದ ಮೇಲೆ ಕಾಶ್ಮೀರ ಸಮಸ್ಯೆ ಪರಿಹರಿಸಬೇಕು: ಭಾರತದ ವಿರುದ್ಧ ಮತ್ತೆ ಕ್ಯಾತೆ ತೆಗೆದ ಟರ್ಕಿ ಅಧ್ಯಕ್ಷ..!

SCROLL FOR NEXT