ಅವತ್ತು ಮಗ ಡಾ.ಯತೀಂದ್ರ ಸಿದ್ದರಾಮಯ್ಯ. ಇವತ್ತು ಮೊಮ್ಮಗ ಧವನ್ ರಾಕೇಶ್ ಸಿದ್ದರಾಮಯ್ಯ.
ಅದು 2018ರ ಅಸೆಂಬ್ಲಿ ಎಲೆಕ್ಷನ್. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ರ ಡಾ.ಯತೀಂದ್ರ ಅವರನ್ನು ವರುಣಾ ಕ್ಷೇತ್ರದಿಂದ ಕಣಕ್ಕೆ ಇಳಿಸಿ ಗೆಲ್ಲಿಸಿಕೊಂಡು ಬಂದು ರಾಜಕೀಯ ಅಖಾಡಕ್ಕೆ ತಂದು ಬಿಟ್ಟರು. ಈಗ ಮೊಮ್ಮಗ ಧವನ್ ರಾಕೇಶ್ ಅವರನ್ನು ರಾಜಕೀಯ ರಂಗಕ್ಕೆ ಇಳಿಸಲು ಸಿದ್ದತೆ ಆರಂಭಿಸಿದ್ದಾರೆ. ಡಾ.ಯತೀಂದ್ರ ಅವರನ್ನು ರಾಜಕಾರಣಕ್ಕೆ ಕರೆತಂದಾಗ ಸಿದ್ದರಾಮಯ್ಯ ವಂಶವಾರಂಪರ್ಯ ಆಡಳಿತದ ಟೀಕೆ ಎದುರಿಸಿದರು. ಈಗ ಮೊಮ್ಮಗನನ್ನು ರಾಜಕಾರಣದ ಅಖಾಡಕ್ಕೆ ಕರೆತರುವ ಪ್ರಯತ್ನ. ಟೀಕೆ ಸಹಜ. ಎದುರಿಸಲು ಸಿದ್ದರಾಮಯ್ಯ ಅವರೂ ಸಿದ್ದ. ಜನತಾ ಪರಿವಾರದಲ್ಲಿದ್ದಾಗ ವಂಶಪಾರಂಪರ್ಯ ಆಡಳಿತ ವಿರೋಧಿಸುತ್ತಿದ್ದ ಸಿದ್ದರಾಮಯ್ಯ ಅವರಿಂದಲೇ ಡೈನಾಸ್ಟಿ ಪಾಲಿಟಿಕ್ಸ್.
ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಅಧಿಕಾರದಲ್ಲಿದ್ದಾಗಲೇ ಮಕ್ಕಳು, ಮೊಮ್ಮಕ್ಕಳನ್ನು ರಾಜಕೀಯಕ್ಕೆ ಕರೆತಂದು ಸ್ಥಾನಮಾನ ಕಲ್ಪಿಸುವುದು ಸುಲಭ ಎಂದು. ಅದಕ್ಕೇ ಮಗ ಯತೀಂದ್ರರನ್ನು ಕರೆತಂದಾಗ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ. ಈಗ ಮೊಮ್ಮಗ ಧವನ್ ಅವರಿಗೆ ಸ್ಟೇಜ್ ರೆಡಿ ಮಾಡುತ್ತಿರುವಾಗಲೂ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ.
ಸಿದ್ದರಾಮಯ್ಯ ಅವರು ಡಾ.ಯತೀಂದ್ರ ಅವರನ್ನು ಸಕ್ರಿಯ ರಾಜಕಾರಣಕ್ಕೆ ಇಳಿಸುವ ಮೊದಲು ವರುಣಾ ಕ್ಷೇತ್ರದಲ್ಲಿ ತಮ್ಮ ಪರ ಕೆಲಸ ಕಾರ್ಯಗಳಿಗೆ ನಿಯೋಜಿಸಿದ್ದರು. ಆಗ ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿ. ಅದು 2016ನೇ ಇಸವಿ. ಡಾ.ಯತೀಂದ್ರ ವರುಣಾ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಸರಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆರಂಭಿಸಿದರು. ತಂದೆ ಮುಖ್ಯಮಂತ್ರಿಯಾಗಿ ಬಿಜಿ. ಹೀಗಾಗಿ, ಅವರ ಪರ ತಾವು ಕ್ಷೇತ್ರ ನೋಡಿಕೊಳ್ಳುತ್ತಿರುವುದಾಗಿ ಹೇಳಿಕೆ ನೀಡುತ್ತಾ ಕ್ಷೇತ್ರಾದ್ಯಂತ ತಿರುಗಾಡಿದ್ದರು. ಕೆಲವು ಸಲ ಅಧಿಕಾರಿಗಳ ಜೊತೆ ಕ್ಷೇತ್ರದ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಚುನಾಯಿತ ಪ್ರತಿನಿಧಿಯಲ್ಲದವರು ಅಧಿಕಾರಿಗಳ ಜೊತೆ ಸಭೆ ನಡೆಸುವುದು ಆಗ ವಿವಾದಕ್ಕೆ ಎಡೆಮಾಡಿದ್ದು ಈಗ ಇತಿಹಾಸ.
ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಪುತ್ರ ಡಾ.ಯತೀಂದ್ರ ಅವರಿಗೆ ವರುಣ ಕ್ಷೇತ್ರ ಬಿಟ್ಟುಕೊಟ್ಟರು ತಂದೆ ಸಿದ್ದರಾಮಯ್ಯ. ತಾವು ಪಕ್ಕದ ಚಾಮುಂಡೇಶ್ವರಿ ಹಾಗೂ ದೂರದ ಬಾದಾಮಿ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದರು. ಚಾಮುಂಡೇಶ್ವರಿಯಲ್ಲಿ ಸುಮಾರು 36 ಸಾವಿರ ಮತಗಳ ಅಂತರದಿಂದ ಹೀನಾಯವಾಗಿ ಸೋತರು. ಬಾದಾಮಿಯಲ್ಲಿ ಅಲ್ಪಮತಗಳ ಅಂತರದಿಂದ ಗೆದ್ದು ಮುಖ ಉಳಿಸಿಕೊಂಡರು. ರಾಜ್ಯದಲ್ಲಿ ಕಾಂಗ್ರೆಸ್ ನೆಲ ಕಚ್ಚಿತ್ತು. ಇದಕ್ಕೆ ಆ ಐದು ವರ್ಷಗಳ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಪ್ರಮುಖ ಕಾರಣವಾಗಿತ್ತು. ತಮ್ಮದು ಅಹಿಂದ ಸರಕಾರ ಎಂಬ ಪದೇ ಪದೇ ಅವರ ಘೋಷಣೆ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಿತ್ತು.
ಐದು ವರ್ಷಗಳ ವನವಾಸದ ನಂತರ ಸಿದ್ದರಾಮಯ್ಯ 2023ರಲ್ಲಿ ಮತ್ತೆ ಮುಖ್ಯಮಂತ್ರಿಯಾದರು. ಪುತ್ರ ಡಾ.ಯತೀಂದ್ರ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿದರು. ಈಗ ಮೊಮ್ಮಗನನ್ನು ವಿಧಾನಸೌಧದಲ್ಲಿ ಕಾಣುವ ಕನಸು. ಅದಕ್ಕಾಗಿ ಸದ್ದಿಲ್ಲದೇ ತಯಾರಿ. ಸಿದ್ದರಾಮಯ್ಯ ತಮ್ಮ ಮೊಮ್ಮಗನನ್ನು ಪರಿಚಯಿಸಲು ಆಯ್ಕೆ ಮಾಡಿಕೊಂಡ ವೇದಿಕೆ ಕುರುಬ ಸಮಾಜದ ಸಮಾರಂಭ. ಗದುಗಿನಲ್ಲಿ ಮೊನ್ನೆ ನಡೆದ ಕುರಬರ ಸಂಘದ ರಜತ ಮಹೋತ್ಸವ ಹಾಗೂ ರಾಜ್ಯ ಮಟ್ಟದ ಕನಕೋತ್ಸವ ಕಾರ್ಯಕ್ರಮದಲ್ಲಿ ಮೊಮ್ಮಗ ಧನುಷ್ ಅವರನ್ನು ತಮ್ಮ ಜೊತೆ ವೇದಿಕೆ ಏರಿಸಿದರು. ಆ ಮೂಲಕ ತಮ್ಮ ಸಮುದಾಯದ ಬಾಂಧವರಿಗೆ ಮೊಮ್ಮಗನ ರಾಜಕಾರಣ ಪ್ರವೇಶದ ಸಂದೇಶ ರವಾನಿಸಿದರು. ರಾಜಕಾರಣದ ಪ್ರವೇಶದ ಮೊದಲ ಹೆಜ್ಜೆ ಇದು. ವೇದಿಕೆ ಮೇಲೆ ಅವರ ಸಂಪುಟ ಸಹೋದ್ಯೋಗಿ ಎಚ್.ಕೆ.ಪಾಟೀಲ ಅವರು ಇದ್ದದ್ದು ವಿಶೇಷವಾಗಿತ್ತು.
ಜನತಂತ್ರದಲ್ಲಿ ಯಾರು ಬೇಕಾದರೂ ರಾಜಕಾರಣ ಪ್ರವೇಶಿಸಬಹುದು. ಧವನ್ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಆದರೆ, ಸಿದ್ದರಾಮಯ್ಯ ಅವರು ತಮ್ಮ ಮುಖ್ಯಮಂತ್ರಿ ಸ್ಥಾನದ ಬಲದಿಂದ ಮಕ್ಕಳು, ಮೊಮ್ಮಕ್ಕಳನ್ನು ರಾಜಕಾರಣಕ್ಕೆ ಕರೆತರುವುದು ಅವರೇ ಈ ಹಿಂದೆ ಪ್ರತಿಪಾದಿಸಿದ ಮೌಲ್ಯಗಳಿಗೆ ವಿರೋಧವಾದುದು. ಇದನ್ನು ಅವರೂ ಚೆನ್ನಾಗಿ ಬಲ್ಲರು. ಪವರ್ ಪಾಲಿಟಿಕ್ಸ್ ನಲ್ಲಿ ಮೌಲ್ಯಗಳನ್ನು ನಂಬಿ ಕುಳಿತರೆ ಪರಿಸ್ಥಿತಿ ಏನು ಎಂಬುದು ಸಿದ್ದರಾಮಯ್ಯ ಅವರಿಗೆ ಅರ್ಥವಾಗಿದೆ. ಅಧಿಕಾರದಲ್ಲಿದ್ದಾಗ ಕುಟುಂಬ ರಾಜಕಾರಣವನ್ನು ಪೋಷಿಸುವುದು ಸುಲಭ. ಜನತಾ ಪರಿವಾರದ ಸಿದ್ದರಾಮಯ್ಯ ಅವರಿಗೂ ಕಾಂಗ್ರೆಸ್ಸಿನ ಸಿದ್ದರಾಮಯ್ಯ ಅವರಿಗೂ ವ್ಯತ್ಯಾಸ ಬಹಳ. ಅದರಲ್ಲೂ ಮುಖ್ಯಮಂತ್ರಿಯಾದ ನಂತರ ಈ ವ್ಯತ್ಯಾಸ ಇನ್ನೂ ಆಳ.
ಯುವಕ ಧವನ್ ರಾಕೇಶ್ ಅವರೂ ತಮ್ಮ ರಾಜಕೀಯ ಆಕಾಂಕ್ಷೆಯನ್ನು ಬಚ್ಚಿಟ್ಟಿಲ್ಲ. ಎರಡು ವರ್ಷಗಳ ಹಿಂದೆ 2023ರ ಅಸೆಂಬ್ಲಿ ಚುನಾವಣೆ ವೇಳೆ ತಮ್ಮ ತಾತ ಸಿದ್ದರಾಮಯ್ಯ ಅವರ ಪರ ವರುಣಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಆಗ ಅವರು ಟೀವಿ ಸಂದರ್ಶನವೊಂದರಲ್ಲಿ ಹೇಳಿದ ಮಾತು ಹೀಗಿತ್ತು- ನನ್ನ ತಂದೆ ರಾಕೇಶ್ ಸಿದ್ದರಾಮಯ್ಯ ಅವರಿಗೆ ಎಂಎಲ್‌ಎ ಆಗುವ ಕನಸಿತ್ತು. ಆದರೆ, ಅವರು ಚಿಕ್ಕವಯಸ್ಸಿನಲ್ಲಿಯೇ ನಿಧನರಾದರು. ನನ್ನ ತಂದೆ ಆಸೆಯನ್ನು ನಾನು ಎಂಎಲ್‌ಎ ಆಗಿ ಈಡೇರಿಸಬೇಕೆಂಬ ಇಚ್ಛೆ ಇದೆ. ತಾತ ಹಾಗೂ ಅಪ್ಪನನ್ನು ನೋಡಿ ಜನರ ಸೇವೆ ಮಾಡಬೇಕೆಂಬ ಆಸೆ ಇದೆ. ನನ್ನ ವಿದ್ಯಾಭ್ಯಾಸ ಮುಗಿದ ನಂತರ ರಾಜಕಾರಣಕ್ಕೆ ಬರುತ್ತೇನೆ. ಧವನ್ ಅವರಿಗೆ ಈಗ 19 ವರ್ಷ. ಮತ ಚಲಾಯಿಸುವ ಹಕ್ಕು ಬಂದಿದೆ. ಆದರೆ, ವಿಧಾನಸಭಾ ಚುನಾವಣೆಗೆ ನಿಲ್ಲುವ ಅರ್ಹತೆ ಇನ್ನೂ ಬಂದಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ದಣಿದಂತೆ ಕಂಡು ಬರುತ್ತಾರೆ. ಸಂತೃಪ್ತ ಭಾವ ಅವರಲ್ಲಿ ಮೂಡಿರುವಂತೆ ಗೋಚರವಾಗುತ್ತದೆ. ಆಡಳಿತ ಸುಧಾರಣೆಗಿಂತಲೂ ಅವರಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯೇ ಮುಖ್ಯವಾಗಿದೆ. ಮುಖ್ಯಮಂತ್ರಿಯಾಗಿ ಕಳೆದ ಅವಧಿಯಲ್ಲಿ ಅವರು ಭಾಗ್ಯಗಳ ಯೋಜನೆ ಕೊಟ್ಟರು. ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಗ್ಯಾರಂಟಿ ಯೋಜನೆಗಳ ಜಾರಿ ಮಾಡಿದರು.
ಮುಖ್ಯಮಂತ್ರಿಯಾಗಿ ಅವರ ಎರಡನೇ ಅವಧಿಯಲ್ಲಿ ಆಡಳಿತ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನು ಮೀರಿ ಈ ಸರಕಾರ ಮೇಲೆದ್ದಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಹೊಂದಿಸಿಕೊಳ್ಳಲು ಸರಕಾರ ಎದುಸಿರು ಬಿಡುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಖಜಾನೆಯಲ್ಲಿ ಹಣವಿಲ್ಲ. ಆಡಳಿತ ವ್ಯವಸ್ಥೆಯ ಶುದ್ಧೀಕರಣಕ್ಕೆ ಪ್ರಯತ್ನಗಳು ಕಂಡು ಬರುತ್ತಿಲ್ಲ. ಆಡಳಿತದಲ್ಲಿ ಸಿದ್ದರಾಮಯ್ಯ ಅವರ ಇತಿಮಿತಿಗಳು ಕಂಡು ಬರುತ್ತಿವೆ. ಇದರಲ್ಲಿ ಅವರ ವಯೋಸಹಜ ಗುಣಗಳೂ ಅಡಗಿವೆ.
ಇಂತಹ ಹೊತ್ತಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಯ ಹುತ್ತಕ್ಕೆ ಮತ್ತೆ ಕೈ ಹಾಕಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಗಣತಿಯ ದಾಳ ಉರುಳಿಸಿದ್ದಾರೆ. ಈ ಹಿಂದಿನ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷಾ ವರದಿಯನ್ನು ಜಾರಿ ಮಾಡದಂತೆ ಹೈಕಮಾಂಡ್ ತಡೆದಿತ್ತು. ಸಿದ್ದರಾಮಯ್ಯ ಆಗ ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಲಿಲ್ಲ. ಆಯೋಗದ ವರದಿ ಜಾರಿಗೆ ಬದ್ಧ ಎಂದಿದ್ದವರು ಹೈಕಮಾಂಡ್ ನಿರ್ಧಾರಕ್ಕೆ ಮೌನರಾದರು. ಡಿಸಿಎಂ ಡಿ.ಕೆ.ಶಿವಕುಮಾರ್ ಕೈ ಮೇಲಾಯಿತು ಎಂದು ಬಿಂಬಿತವಾಯಿತು.
ಹಿಂದುಳಿದ ವರ್ಗಗಳ ಆಯೋಗದ ಎರಡನೇ ಸಮೀಕ್ಷೆ ಬಗ್ಗೆ ಸಿದ್ದರಾಮಯ್ಯ ಹೆಚ್ಚು ಆಸಕ್ತರಾಗಿದ್ದಾರೆ. ಎಷ್ಟೇ ವಿರೋಧ ಎದುರಾದರೂ ಸೆಪ್ಟೆಂಬರ್ 22 ರಿಂದ ಸಮೀಕ್ಷೆ ಆರಂಭವಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗುವ ಮುನ್ನ ಈ ಅಧ್ಯಯನ ನಡೆದು ವರದಿ ಪಡೆದು ಬಹಿರಂಗಪಡಿಸುವುದು ಅವರ ಉದ್ದೇಶವಿದ್ದಂತೆ ಇದೆ. ವರದಿಯ ಅಂಶಗಳನ್ನು ಮುಂದಿಟ್ಟು ಸಿದ್ದರಾಮಯ್ಯ ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳುವ ಲೆಕ್ಕಾಚಾರ ಹೊಂದಿದಂತೆ ಇದೆ. ಇದು ಕಾಂಗ್ರೆಸ್ಸಿನ ರಾಜ್ಯ ಮುಖಂಡರಷ್ಟೇ ಅಲ್ಲ, ಹೈಕಮಾಂಡ್ ನ ವರಿಷ್ಠರಿಗೂ ಚಿಂತೆ ತಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್ ವೇಳೆಗೆ ಸಚಿವ ಸಂಪುಟವನ್ನು ಪುನಾರಚಿಸಲಿದ್ದಾರೆ ಎಂಬ ಚರ್ಚೆ ಕಾಂಗ್ರೆಸ್ ನಲ್ಲಿ ನಡೆದಿದೆ. ಸಚಿವ ಸಂಪುಟದಲ್ಲಿ ಈಗಿರುವ ಸಚಿವರಲ್ಲಿ ಅರ್ಧದಷ್ಟು ಸಚಿವರನ್ನು ಪಕ್ಷದ ಕಾರ್ಯಗಳಿಗೆ ನಿಯೋಜಿಸಿ ಹೊಸಬರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಎಲ್ಲದರ ಮಧ್ಯೆ ಬಿಹಾರ ವಿಧಾನಸಭಾ ಚುನಾವಣೆ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕತ್ವ ಬದಲಾಗುತ್ತದೆ ಎಂಬ ಚರ್ಚೆ ನಡೆದೇ ಇದೆ.
ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com