ನಾವು ಪ್ರತಿದಿನ ಕಾಣುವ ಈ ಜಗತ್ತು — ಖಗಗಳು, ಮೃಗಗಳು, ಗಿಡಗಳು, ಮರಗಳು, ಬಳ್ಳಿಗಳು, ಪರ್ವತಗಳು, ನಕ್ಷತ್ರಗಳು, ನಮ್ಮದೇ ದೇಹ — ಇವೆಲ್ಲವೂ ನಿಜಕ್ಕೂ ಅಸ್ತಿತ್ವದ ಮೂಲವೇ? ಅಥವಾ ಅವು ಇನ್ನೂ ಆಳದಲ್ಲಿರುವ ಯಾವುದೋ ಮೂಲಭೂತ ವಾಸ್ತವಿಕತೆಯಿಂದ ಹುಟ್ಟಿಕೊಂಡಿರುವ ಒಂದು ರೀತಿಯ ಅಭಿವ್ಯಕ್ತಿ ಮಾತ್ರವೇ? ಇಂತಹ ಕುತೂಹಲಕಾರಿ ಪ್ರಶ್ನೆಯನ್ನು ಎತ್ತುವ ಹೊಸ ಸಿದ್ಧಾಂತವೊಂದು ಇತ್ತೀಚೆಗೆ ವಿಜ್ಞಾನ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಚಿಂತನೆಯ ಪ್ರಕಾರ ಚೇತನ (Consciousness) ಅಸ್ತಿತ್ವದ ಮೂಲಭೂತ ಅಂಶವಾಗಿರಬಹುದು, ಮತ್ತು ಕಾಲ, ಸ್ಥಳ (time, space) ಹಾಗೂ ಪದಾರ್ಥವೆಂಬವುಗಳು (matter) ಅದರಿಂದಲೇ ನಂತರ ಉದ್ಭವಿಸುತ್ತವೆ ಎಂಬ ಸಾಧ್ಯತೆಯನ್ನು ಅದು ಪರಿಗಣಿಸುತ್ತದೆ.
ಈ ಸಿದ್ಧಾಂತವನ್ನು ಪ್ರಸ್ತಾಪಿಸಿರುವವರು ಸ್ವೀಡನ್‌ನ ಉಪ್ಸಾಲಾ ವಿಶ್ವವಿದ್ಯಾಲಯದ ಪದಾರ್ಥ ವಿಜ್ಞಾನ (material science) ವಿಭಾಗದ ಪ್ರಾಧ್ಯಾಪಕಿ ಮಾರಿಯಾ ಸ್ಟ್ರೊಮ್ಮೆ.ಅವರ ಸಂಶೋಧನಾ ಲೇಖನವು AIP Advancesಎಂಬ ಅಂತರರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆಯಲ್ಲಿ (2025ರಲ್ಲಿ) ಪ್ರಕಟವಾಗಿದೆ. ಸಾಮಾನ್ಯವಾಗಿ ಆಧುನಿಕ ವಿಜ್ಞಾನದಲ್ಲಿ ಸ್ವೀಕರಿಸಲ್ಪಟ್ಟಿರುವ ಅಭಿಪ್ರಾಯವೆಂದರೆ ಮಾನವ ಮೆದುಳಿನ ನರಕೋಶಗಳ ಸಂಕೀರ್ಣ ಕ್ರಿಯೆಯಿಂದಲೇ ಚೇತನ ಉಂಟಾಗುತ್ತದೆ ಎಂಬುದು. ಆದರೆ ಸ್ಟ್ರೊಮ್ಮೆ ಅವರ ಮಾದರಿ ಈ ಸಾಂಪ್ರದಾಯಿಕ ದೃಷ್ಟಿಕೋನವನ್ನು ಪ್ರಶ್ನಿಸುತ್ತದೆ ಮತ್ತು ಚೇತನವನ್ನು ಮೂಲಭೂತ ಅಂಶವಾಗಿ ಪರಿಗಣಿಸುವ ಹೊಸ ದೃಷ್ಟಿಕೋನವನ್ನು ಮಂಡಿಸುತ್ತದೆ.
ಒಂದು ಕ್ಷಣ ಕಲ್ಪಿಸಿಕೊಳ್ಳಿ, ನೀವು ಒಂದು ದೊಡ್ಡ ನದಿಯ ತೀರದಲ್ಲಿ ನಿಂತಿದ್ದೀರಿ. ನೀರಿನ ಅಲೆಗಳನ್ನು ಪ್ರತ್ಯೇಕವಾಗಿ ನೋಡುತ್ತೀರಿ, ಕೆಲವು ಎದ್ದೇಳುತ್ತಿವೆ, ಕೆಲವು ಸಡಿಲವಾಗಿ ಹರಿಯುತ್ತಿವೆ. ಪ್ರತಿ ಅಲೆ ಸ್ವತಂತ್ರವೆಂದು ತೋರುತ್ತದೆ, ಆದರೆ ವಾಸ್ತವದಲ್ಲಿ, ಅವು ಎಲ್ಲವೂ ಒಂದೇ ನೀರಿನ ನಿರಂತರ ಹರಿವಿನ ಭಾಗ. ಅಲೆಗಳನ್ನು ಪ್ರತ್ಯೇಕವೆಂದು ನೋಡಿದರೂ, ಅವು ಪರಸ್ಪರ ಪ್ರಭಾವ ಬೀರುತ್ತಿವೆ.
ಇದೇ ರೀತಿಯಲ್ಲಿ, ನಾವು ಅನುಭವಿಸುವ ಜಗತ್ತು, ಪರ್ವತಗಳು, ನಕ್ಷತ್ರಗಳು, ನಮ್ಮದೇ ದೇಹ ಪ್ರತ್ಯೇಕ ವಸ್ತುಗಳಂತೆ ಕಾಣಬಹುದು, ಆದರೆ ಅವುಗಳನ್ನು ಚೇತನದ ಒಂದು ಏಕೀಕೃತ ವ್ಯವಸ್ಥೆ (unified system) ಎಂಬ ಕಲ್ಪನೆ ಮತ್ತು ಸೂಕ್ಷ್ಮ ಶಕ್ತಿಯ ಪರಸ್ಪರ ಸಂಬಂಧಗಳಿಲ್ಲದೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಕಷ್ಟವಾಗಬಹುದು. ಈ ದೃಷ್ಟಿಯಿಂದ, ವಾಸ್ತವಿಕತೆಯನ್ನು ಕೇವಲ ನಾವು ನೋಡುತ್ತಿರುವುದಾಗಿ ಮಾತ್ರವಲ್ಲ, ನಮ್ಮ ವೀಕ್ಷಣೆ ಮತ್ತು ಅನುಭವಗಳೊಂದಿಗೆ ಸಂಬಂಧ ಹೊಂದಿರುವ ವಾಸ್ತವಿಕತೆಯ ವಿವರಣೆಯಾಗಿ ಒಂದು ಜೀವಂತ ಅಭಿವ್ಯಕ್ತಿಯಾಗಿ ಪರಿಗಣಿಸಬಹುದು.
ಮಾರಿಯಾ ಸ್ಟ್ರೊಮ್ಮೆ ಅವರು ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಸಿದ್ಧ ವಿಜ್ಞಾನಿ. ಅತಿ ಸೂಕ್ಷ್ಮ ಮಟ್ಟದ ಪದಾರ್ಥಗಳ ರಚನೆ ಮತ್ತು ಗುಣಲಕ್ಷಣಗಳನ್ನು ಅಧ್ಯಯನ ಮಾಡುವಲ್ಲಿ ಅವರು ಹಲವಾರು ಮಹತ್ವದ ಸಂಶೋಧನೆಗಳನ್ನು ನಡೆಸಿದ್ದಾರೆ. ಆದರೆ ಇತ್ತೀಚಿನ ಈ ಅಧ್ಯಯನದಲ್ಲಿ ಅವರು ಸಂಪೂರ್ಣವಾಗಿ ವಿಭಿನ್ನ ದಿಕ್ಕಿನಲ್ಲಿ ಯೋಚಿಸಿದ್ದಾರೆ, ಅದೇನೆಂದರೆ, ಅಸ್ತಿತ್ವದ ಮೂಲವೇನು? ಬ್ರಹ್ಮಾಂಡದ ಮೂಲಭೂತ ಸ್ವರೂಪವೇನು?
ಹೌದು, ಇದು ಒಂದು ಹೊಸ ರೀತಿಯ ಸಿದ್ಧಾಂತವೆಂದು ಹೇಳಬಹುದು. ಆದರೆ ಅದರ ಮೂಲಭಾವನೆ ಸರಳವಾಗಿದೆ: ಈ ಮಾದರಿಯ ಪ್ರಕಾರ, ಚೇತನ ಮೊದಲು ಅಸ್ತಿತ್ವದಲ್ಲಿರಬಹುದು; ನಂತರ ಕಾಲ, ಸ್ಥಳ ಮತ್ತು ಪದಾರ್ಥಗಳು ಉದ್ಭವಿಸಬಹುದು. ನಾವು ಅನುಭವಿಸುವ ವಾಸ್ತವಿಕತೆ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ವಿವರಿಸಲು ಇದು ಒಂದು ಮಹತ್ವಾಕಾಂಕ್ಷಿ ಪ್ರಯತ್ನ, ಎಂದು ಸ್ಟ್ರೊಮ್ಮೆ ತಿಳಿಸಿದ್ದಾರೆ.
ಸ್ಟ್ರೊಮ್ಮೆ ಹಲವು ವರ್ಷಗಳಿಂದ ಅಭಿವೃದ್ಧಿಪಡಿಸಿರುವ ಈ ಮಾದರಿ ಕ್ವಾಂಟಮ್ ಯಾಂತ್ರಿಕತೆ (theory of quantum mechanics)ಯ ಕೆಲವು ಪರಿಕಲ್ಪನೆಗಳನ್ನು ತತ್ತ್ವಶಾಸ್ತ್ರೀಯ ಚಿಂತನೆಗಳೊಂದಿಗೆ ಸಂವಾದಗೊಳಿಸುವ ಪ್ರಯತ್ನವಾಗಿದೆ. ಈ ಸಿದ್ಧಾಂತದ ಪ್ರಕಾರ ಚೇತನವನ್ನು ಅಸ್ತಿತ್ವದ ಒಂದು ಮೂಲಭೂತ ಕ್ಷೇತ್ರವಾಗಿ ಪರಿಗಣಿಸಬಹುದು ಮತ್ತು ವ್ಯಕ್ತಿಯ ಮನಸ್ಸು ಆ ವಿಶಾಲ ಚೇತನ ಕ್ಷೇತ್ರದ ಒಂದು ಅಭಿವ್ಯಕ್ತಿ ಆಗಿರಬಹುದು ಎಂಬ ಸಾಧ್ಯತೆಯನ್ನು ಇದು ಸೂಚಿಸುತ್ತದೆ.
ಈ ರೀತಿಯ ದೃಷ್ಟಿಕೋನವು ಕ್ವಾಂಟಮ್ ಯಾಂತ್ರಿಕತೆಯಲ್ಲಿ ಚರ್ಚೆಯಾಗುವ ವೀಕ್ಷಕರ ಪಾತ್ರ (observer’s role) ಮತ್ತು ವಾಸ್ತವಿಕತೆಯ ಸ್ವರೂಪದ ಬಗ್ಗೆ ನಡೆಯುತ್ತಿರುವ ಚರ್ಚೆಗಳೊಂದಿಗೆ ಒಂದು ಮಟ್ಟಿಗೆ ಸಂಬಂಧ ಹೊಂದಬಹುದು ಎಂದು ಕೆಲವರು ಸೂಚಿಸುತ್ತಾರೆ. ಆದಾಗ್ಯೂ, ಈ ಕಲ್ಪನೆಗಳು ಇನ್ನೂ ವೈಜ್ಞಾನಿಕ ಚರ್ಚೆಯ ಹಂತದಲ್ಲಿವೆ ಮತ್ತು ಹೆಚ್ಚಿನ ಪರಿಶೀಲನೆ ಅಗತ್ಯವಿದೆ.
ಭೌತಶಾಸ್ತ್ರದ ಇತಿಹಾಸದಲ್ಲಿ ಕೆಲವು ಮಹಾನ್ ವಿಜ್ಞಾನಿಗಳು ಚೇತನ ಮತ್ತು ವಾಸ್ತವಿಕತೆಯ ನಡುವೆ ಆಳವಾಗಿ ಯೋಚಿಸಿದ್ದಾರೆ. ಜರ್ಮನ್ ಭೌತಶಾಸ್ತ್ರಜ್ಞ ಮ್ಯಾಕ್ಸ್ ಪ್ಲಾಂಕ್ ಅವರು ‘ನಾನು ಚೇತನವನ್ನು ಮೂಲಭೂತವೆಂದು ಪರಿಗಣಿಸುತ್ತೇನೆ; ಪದಾರ್ಥವು ಚೇತನದಿಂದಲೇ ಉದ್ಭವವಾಗುತ್ತದೆ’ ಎಂದು ಹೇಳಿರುವಂತೆ, ಅವರು ಚೇತನದ ಮಹತ್ವವನ್ನು ತತ್ತ್ವಶಾಸ್ತ್ರೀಯವಾಗಿ ಹೇಳಿದ್ದಾರೆ. ಪ್ಲಾಂಕ್ ಅವರ ಈ ಹೇಳಿಕೆ ವಿಜ್ಞಾನ ಮತ್ತು ತತ್ತ್ವಶಾಸ್ತ್ರದ ನಡುವಿನ ಆಳವಾದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.
ಕ್ವಾಂಟಮ್ ಯಾಂತ್ರಿಕತೆಯ ಪ್ರಮುಖ ರೂಪಶಿಲ್ಪಿಗಳಲ್ಲಿ ಒಬ್ಬರಾದ ವೆರ್ನರ್ ಹೈಸೆನ್‌ಬರ್ಗ್ ಪ್ರಕಾರ, ಕಣಗಳು ಮತ್ತು ಅಣುಗಳ ಪ್ರಪಂಚದಲ್ಲಿ ‘ಅನಿಶ್ಚಿತತೆಯ ನಿಯಮ’ ಮತ್ತು ‘ಮಾಪನ ಪ್ರಕ್ರಿಯೆ’ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಅವರು ‘ನಾವು ನೋಡುವುದು ಪ್ರಕೃತಿಯ ನಿಜವಾದ ಸ್ವರೂಪವಲ್ಲ, ಆದರೆ ಪ್ರಶ್ನಿಸುವ ನಮ್ಮ ವಿಧಾನದಲ್ಲಿ ಪ್ರಕೃತಿ ಪ್ರಜ್ವಲಿಸುತ್ತದೆ’ ಎಂದು ಹೇಳಿದ್ದಾರೆ. ಈ ಹೇಳಿಕೆ ವೀಕ್ಷಣೆಯ ಮಹತ್ವವನ್ನು ಮತ್ತು ಜಗತ್ತಿನ ವಿವರಣೆಗೆ ಮಾನವ ಕ್ರಿಯೆಯ ಪರಿಣಾಮದ ಅಂಶವನ್ನು ತೋರಿಸುತ್ತದೆ.
ಆಲ್ಬರ್ಟ್ ಐನ್‌ಸ್ಟೈನ್ ಬ್ರಹ್ಮಾಂಡದ ಆಳವಾದ ರಹಸ್ಯಗಳನ್ನು ತತ್ತ್ವಶಾಸ್ತ್ರೀಯ ದೃಷ್ಟಿಯಿಂದ ಯೋಚಿಸುತ್ತಿದ್ದರು. ಅವರು ಹೇಳಿದಂತೆ, “The most incomprehensible thing about the universe is that it is comprehensible.” ಈ ಹೇಳಿಕೆ, ಮಾನವ ಮನಸ್ಸು ಪ್ರಕೃತಿಯ ನಿಯಮಗಳನ್ನು ಅರಿಯಬಲ್ಲುದೆಂಬ ಅಚ್ಚರಿಯನ್ನು ತೋರುತ್ತದೆ. ಇದು ಬ್ರಹ್ಮಾಂಡದ ನಿಯಮಗಳನ್ನು ಮಾನವ ಮನಸ್ಸು ಅರ್ಥಮಾಡಿಕೊಳ್ಳಬಲ್ಲ ಸಾಮರ್ಥ್ಯದ ಬಗ್ಗೆ ತತ್ತ್ವಶಾಸ್ತ್ರೀಯ ಆಶ್ಚರ್ಯವನ್ನು ಸೂಚಿಸುತ್ತದೆ.
ಅದೇ ರೀತಿಯೇ ರಿಚರ್ಡ್ ಫೈನ್ಮನ್ ಕೂಡ ಪ್ರಕೃತಿಯ ಆಳವಾದ ರಹಸ್ಯಗಳ ಬಗ್ಗೆ ವಿನಮ್ರ ದೃಷ್ಟಿಕೋನ ಹೊಂದಿದ್ದರು. ಕ್ವಾಂಟಮ್ ಭೌತಶಾಸ್ತ್ರದ ಪ್ರಪಂಚದಲ್ಲಿ ಅವರು ಹೇಳಿದ ಪ್ರಸಿದ್ಧ ಮಾತು: ‘I think I can safely say that nobody understands quantum mechanics.’ ಈ ಹೇಳಿಕೆ, ಕ್ವಾಂಟಮ್ ಯಾಂತ್ರಿಕತೆಯ ನಿಯಮಗಳು ಭೌತಶಾಸ್ತ್ರೀಯವಾಗಿ ಖಚಿತವಾಗಿದ್ದರೂ, ಮಾನವನ ಸಾಮಾನ್ಯ ತರ್ಕ ಮತ್ತು ಅನುಭವಕ್ಕೆ ಅನನ್ಯ ಮತ್ತು ಅಸ್ಪಷ್ಟವಾಗಿರುವುದನ್ನು ತೋರುತ್ತದೆ ಎಂದು ಹೇಳಿದ್ದಾರೆ.” ಆದಾಗ್ಯೂ, ಈ ಹೇಳಿಕೆಗಳು ತತ್ತ್ವಶಾಸ್ತ್ರೀಯ ಅಭಿಪ್ರಾಯಗಳಾಗಿದ್ದು, ಆಧುನಿಕ ವೈಜ್ಞಾನಿಕ ಸಮುದಾಯದಲ್ಲಿ ಅವು ಸಾಮಾನ್ಯವಾಗಿ ಸ್ವೀಕರಿಸಲ್ಪಟ್ಟ ಸಿದ್ಧಾಂತಗಳಲ್ಲ.
ಮಾನವ ಇತಿಹಾಸದಲ್ಲಿ ಅನೇಕ ಬಾರಿ ನಮ್ಮ ವಿಶ್ವದ ಅರಿವು ಸಂಪೂರ್ಣವಾಗಿ ಬದಲಾಗಿದೆ. ಒಂದು ಕಾಲದಲ್ಲಿ ಭೂಮಿ ಸಮತಟ್ಟಾಗಿದೆ ಎಂದು ಜನರು ನಂಬುತ್ತಿದ್ದರು. ನಂತರ ಭೂಮಿಯೇ ಬ್ರಹ್ಮಾಂಡದ ಕೇಂದ್ರ ಎಂದು, ಸೂರ್ಯ ಅದರ ಸುತ್ತ ಸುತ್ತುತ್ತದೆ ಎಂದು ಭಾವಿಸಲಾಗಿತ್ತು. ಆದರೆ ವಿಜ್ಞಾನಿಗಳ ಹೊಸ ಕಂಡುಹಿಡಿಕೆಗಳು ಆ ಧಾರಣೆಗಳನ್ನು ಸಂಪೂರ್ಣವಾಗಿ ಬದಲಿಸಿವೆ. ಸ್ಟ್ರೊಮ್ಮೆ ಅವರ ಪ್ರಕಾರ, ಚೇತನವನ್ನು ಅಸ್ತಿತ್ವದ ಮೂಲವೆಂದು ಪರಿಗಣಿಸುವ ಈ ಮಾದರಿಯೂ ಭವಿಷ್ಯದಲ್ಲಿ ಚರ್ಚೆಗೆ ಕಾರಣವಾಗುವ ಸಾಧ್ಯತೆಯನ್ನು ಹೊಂದಿದೆ.
ಈ ಮಾದರಿಯ ಕೆಲವು ಅಂಶಗಳನ್ನು ಭೌತಶಾಸ್ತ್ರ, ನರಶಾಸ್ತ್ರ ಮತ್ತು ಬ್ರಹ್ಮಾಂಡಶಾಸ್ತ್ರದ ಕ್ಷೇತ್ರಗಳಲ್ಲಿ ಮುಂದಿನ ಸಂಶೋಧನೆಗಳ ಮೂಲಕ ಪರಿಶೀಲಿಸಬಹುದೆಂದು ಸ್ಟ್ರೊಮ್ಮೆ ಸೂಚಿಸುತ್ತಾರೆ. ಆದರೆ ಈ ಸಿದ್ಧಾಂತವು ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಅದರ ಮಾನ್ಯತೆಯನ್ನು ಸ್ಥಾಪಿಸಲು ಹೆಚ್ಚಿನ ವೈಜ್ಞಾನಿಕ ಅಧ್ಯಯನ ಅಗತ್ಯವಿದೆ.
ನಾನು ಪದಾರ್ಥ ವಿಜ್ಞಾನಿ. ಆದ್ದರಿಂದ ದೀರ್ಘಕಾಲದಿಂದ ಪದಾರ್ಥವೇ ಅಸ್ತಿತ್ವದ ಮೂಲಭೂತ ಅಂಶವೆಂದು ನಾನು ಭಾವಿಸಿದ್ದೆ. ಆದರೆ ಈ ಹೊಸ ಮಾದರಿಯ ಪ್ರಕಾರ ಪದಾರ್ಥವು ಮೂಲವಲ್ಲ, ಅದು ದ್ವಿತೀಯ ಸ್ವರೂಪದ್ದಾಗಿರಬಹುದು. ನಾವು ಅನುಭವಿಸುವ ವಾಸ್ತವಿಕತೆಯ ಬಹುಭಾಗವು ನೇರವಾದ ಭೌತಿಕ ಅಸ್ತಿತ್ವವಲ್ಲ; ಇದು ಕೇವಲ ನೇರ ಭೌತಿಕ ಪ್ರತಿಬಿಂಬವಾಗಿರದೆ, ಒಂದು ರೀತಿಯ ಅನುಭವಾತ್ಮಕ ಅಭಿವ್ಯಕ್ತಿಯಾಗಿರಬಹುದು, ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಸಿದ್ಧಾಂತವು ಸಂಪೂರ್ಣವಾಗಿ ಗಣಿತ ಮತ್ತು ಭೌತಶಾಸ್ತ್ರದ ಭಾಷೆಯಲ್ಲಿ ವಿವರಿಸಲ್ಪಟ್ಟಿದ್ದರೂ, ಅದರ ಕೆಲವು ತತ್ತ್ವಶಾಸ್ತ್ರೀಯ ಅಂಶಗಳು ಪುರಾತನ ಧಾರ್ಮಿಕ ಮತ್ತು ತತ್ತ್ವಶಾಸ್ತ್ರದ ಚಿಂತನೆಗಳನ್ನು ನೆನಪಿಸಬಹುದು. ವಿವಿಧ ಸಂಸ್ಕೃತಿಗಳಲ್ಲಿ ಬ್ರಹ್ಮಾಂಡದ ಏಕತೆಯ ಬಗ್ಗೆ ಚಿಂತನೆಗಳು ಕಂಡುಬರುತ್ತವೆ. ಆದರೆ ಸ್ಟ್ರೊಮ್ಮೆ ಅವರ ಮಾದರಿ ಈ ವಿಚಾರವನ್ನು ಆಧುನಿಕ ವಿಜ್ಞಾನಿಕ ಚೌಕಟ್ಟಿನಲ್ಲಿ ಪರಿಶೀಲಿಸಲು ಪ್ರಯತ್ನಿಸುತ್ತದೆ.
ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಹುಡುಕುವ ಪ್ರಯತ್ನ ಇನ್ನೂ ವಿಜ್ಞಾನಿಗಳಲ್ಲೂ ಹಾಗೂ ತತ್ತ್ವಶಾಸ್ತ್ರಜ್ಞರಲ್ಲೂ ಮುಂದುವರಿಯುತ್ತಿದೆ. ಬ್ರಹ್ಮಾಂಡದ ಮೂಲ ಸ್ವರೂಪವೇನು? ಚೇತನವು ವಾಸ್ತವಿಕತೆಯ ನಿರ್ಮಾಣದಲ್ಲಿ ಯಾವ ಪಾತ್ರ ವಹಿಸುತ್ತದೆ? ಎಂಬಂತಹ ಪ್ರಶ್ನೆಗಳು ಇಂದಿಗೂ ಸಂಪೂರ್ಣವಾಗಿ ಪರಿಹಾರ ಕಂಡುಕೊಂಡಿಲ್ಲ.
ಆಧುನಿಕ ಭೌತಶಾಸ್ತ್ರ, ನರವಿಜ್ಞಾನ ಮತ್ತು ತತ್ತ್ವಶಾಸ್ತ್ರಗಳ ಸಂಯೋಜಿತ ಅಧ್ಯಯನಗಳು ಈ ವಿಷಯವನ್ನು ಹೊಸ ದೃಷ್ಟಿಕೋನಗಳಿಂದ ಪರಿಶೀಲಿಸಲು ಪ್ರೇರೇಪಿಸುತ್ತಿವೆ. ಮುಂದಿನ ವರ್ಷಗಳಲ್ಲಿ ಈ ಪ್ರಶ್ನೆ ವಿಜ್ಞಾನ ಸಮುದಾಯದಲ್ಲಷ್ಟೇ ಅಲ್ಲ, ತತ್ತ್ವಶಾಸ್ತ್ರೀಯ ಚಿಂತನೆಯಲ್ಲಿಯೂ ಮಹತ್ತರವಾದ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.
ಭವಿಷ್ಯದಲ್ಲಿ ನಡೆಯುವ ಸಂಶೋಧನೆಗಳು ವಾಸ್ತವಿಕತೆಯ ಸ್ವರೂಪದ ಬಗ್ಗೆ ನಮ್ಮ ಮೂಲಭೂತ ಅರಿವನ್ನೇ ಬದಲಾಯಿಸಬಹುದೇ ಎಂಬ ಕುತೂಹಲವನ್ನು ಈ ಸಿದ್ಧಾಂತ ಹುಟ್ಟುಹಾಕುತ್ತಿದೆ. ವಿಜ್ಞಾನ ಮತ್ತು ತತ್ತ್ವಶಾಸ್ತ್ರಗಳ ನಡುವಿನ ಸಂವಾದ ಮತ್ತಷ್ಟು ಗಾಢವಾಗುವ ಸಾಧ್ಯತೆಯೂ ಇದರಿಂದ ಕಾಣಿಸುತ್ತದೆ.
ಗಮನಿಸಬೇಕಾದ್ದೇನೆಂದರೆ, ಇಲ್ಲಿ ವಿವರಿಸಲಾಗಿರುವ ಈ ಮಾದರಿ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಇದು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ವೈಜ್ಞಾನಿಕ ಸಿದ್ಧಾಂತವಲ್ಲ. ಇದರ ಮಾನ್ಯತೆಯನ್ನು ಸ್ಥಾಪಿಸಲು ಹೆಚ್ಚಿನ ಪ್ರಯೋಗಾತ್ಮಕ ಮತ್ತು ಸಿದ್ಧಾಂತಾತ್ಮಕ ಅಧ್ಯಯನಗಳು ಅಗತ್ಯವಿದೆ. ನಾವು ನೋಡುವ ಜಗತ್ತು ವಾಸ್ತವಿಕತೆಯೇ ಅಲ್ಲದಿದ್ದರೆ, “ಚೇತನವೇ ಬ್ರಹ್ಮಾಂಡದ ನಿಜವಾದ ಮೂಲವಾಗಿರಬಹುದೇ ಎಂಬ ಪ್ರಶ್ನೆ, ಮುಂದಿನ ವೈಜ್ಞಾನಿಕ ಅನ್ವೇಷಣೆಗೆ ಹೊಸ ದಿಕ್ಕನ್ನು ನೀಡಬಹುದೇ?”
ಪ್ರೊ. ಸತೀಶ್. ಎಲ್.ಎ
ಭೌತಶಾಸ್ತ್ರ ಪ್ರಾಧ್ಯಾಪಕರು
lasgayit@gmail.com