ಷೇರು ಮಾರುಕಟ್ಟೆ  online desk
ಅಂಕಣಗಳು

ಮಾರುಕಟ್ಟೆಯಲ್ಲಿನ ಗದ್ದಲ ಮತ್ತು ಸೂಚನೆ ಅರ್ಥ ಮಾಡಿಕೊಳ್ಳುವುದು ಹೇಗೆ? (ಹಣಕ್ಲಾಸು)

ಈ ಹಂತವನ್ನು ಆರ್ಥಿಕ ತಜ್ಞರು “ರಿಸ್ಕ್-ಆಫ್” ಹಂತ ಎಂದು ಕರೆಯುತ್ತಾರೆ. ಇದೇನು ಹೊಸದಲ್ಲ, ಪ್ರತಿ ಅಸ್ಥಿರತೆಯಲ್ಲೂ ನಾವು ಕಾಣುವುದು ಇದೆ ಪ್ಯಾಟ್ರನ್.

ಇಂದಿನ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಒಂದು ಮಹತ್ವದ ಪರಿವರ್ತನೆ ನಡೆಯುತ್ತಿದೆ. ಹಿಂದೆ ಷೇರು ಮಾರುಕಟ್ಟೆಗಳು ಮುಖ್ಯವಾಗಿ ಕಂಪನಿಗಳ ಲಾಭ, ಬಡ್ಡಿದರಗಳು ಮತ್ತು ಆರ್ಥಿಕ ಅಂಕಿಅಂಶಗಳ ಮೇಲೆ ಅವಲಂಬಿತವಾಗಿದ್ದವು. ಆದರೆ ಈಗ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಒಂದು ದೇಶದ ನಾಯಕನ ಹೇಳಿಕೆ, ಯುದ್ಧದ ಸುಳಿವು, ಅಥವಾ ಶಾಂತಿ ಮಾತುಕತೆಗಳ ಸುದ್ದಿ, ಇವುಗಳೆಲ್ಲವೂ ಕ್ಷಣಾರ್ಧದಲ್ಲಿ ಜಾಗತಿಕ ಮಾರುಕಟ್ಟೆಗಳನ್ನು ಕದಲಿಸುವ ಸಾಮರ್ಥ್ಯವನ್ನು ಹೊಂದಿವೆ. ಇವತ್ತಿಗೆ ಷೇರುಮಾರುಕಟ್ಟೆಯ ಮೇಲಿನ ಹೂಡಿಕೆ ಕೇವಲ ಆರ್ಥಿಕತೆಯ ವಿಷಯವಾಗಿ ಉಳಿದಿಲ್ಲ.

ಅದು ಸೆಂಟಿಮೆಂಟ್ ಮತ್ತು ರಾಜಕೀಯದ ಮಿಶ್ರಣವಾಗಿ ಬದಲಾಗಿ ಹೋಗಿದೆ. ಅಮೇರಿಕಾ ಮತ್ತು ಇಸ್ರೇಲ್ ಜಂಟಿಯಾಗಿ ಇರಾನಿನ ಮೇಲೆ ಯುದ್ಧ ಸಾರಿದ ದಿನದಿಂದ ಇಲ್ಲಿಯವರೆಗೆ ಅಂದರೆ ಸರಿಸುಮಾರು 40 ದಿನದಲ್ಲಿ ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಏರಿಳಿತಗಳನ್ನು ಗಮನಿಸಿದವರಿಗೆ ಈ ವಿಷಯ ಚನ್ನಾಗಿ ಗೊತ್ತಿರುತ್ತದೆ. ಸಂಸ್ಥೆಯ ಆಡಳಿತ, ವರ್ಕ್ ಎಥಿಕ್ಸ್ ಎಲ್ಲವೂ ಸರಿಯಿದ್ದು ಕೂಡ ಯುದ್ಧದ ಕಾರಣ, ಜಾಗತಿಕ ಅಸ್ಥಿರತೆಯ ಕಾರಣ ಮಾರುಕಟ್ಟೆಯಲ್ಲಿ ನಿಜವಾದ ಹೂಡಿಕೆದಾರ ಇಂದು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಹೀಗಾಗಿ, ಇಂತಹ ಸನ್ನಿವೇಶದಲ್ಲಿ ಒಂದು ಪ್ರಮುಖ ಪ್ರಶ್ನೆ ಉದ್ಭವಿಸುತ್ತದೆ. ಮಾರುಕಟ್ಟೆಯನ್ನು ನಿಜವಾದ ಘಟನೆಗಳು ಪ್ರಭಾವಿಸುತ್ತಿವೆಯೇ, ಅಥವಾ ಆ ಘಟನೆಗಳ ಬಗ್ಗೆ ಇರುವ ಭೀತಿ ಮತ್ತು ನಿರೀಕ್ಷೆಗಳೇ ಹೆಚ್ಚು ಪರಿಣಾಮ ಬೀರುತ್ತಿವೆಯೇ? ನಿಜವಾದ ಘಟನೆ ಘಟಿಸುವುದಕ್ಕೂ ಮುಂಚೆಯೇ ಮಾರುಕಟ್ಟೆ ರಿಯಾಕ್ಷನ್ ನೀಡಲು ಶುರು ಮಾಡಿಬಿಡುತ್ತದೆ ಎನ್ನುವುದು ಹೆಚ್ಚು ಸತ್ಯ.

ಯುದ್ಧದ ಭೀತಿ ಮಾರುಕಟ್ಟೆಯ ಮೇಲೆ ಮೊದಲ ಹೊಡೆತ ನೀಡುವ ಅಂಶವಾಗಿದೆ. ಯುದ್ಧದ ಸಾಧ್ಯತೆಗಳ ಬಗ್ಗೆ ಬಲವಾದ ಹೇಳಿಕೆಗಳು ಹೊರಬಿದ್ದಾಗ, ಮಾರುಕಟ್ಟೆಗಳು ತಕ್ಷಣವೇ ಕುಸಿತದ ದಿಕ್ಕಿನಲ್ಲಿ ಚಲಿಸುತ್ತವೆ. ಇದಕ್ಕೆ ಕಾರಣ ನಿಜವಾದ ಯುದ್ಧವಲ್ಲ, ಅದರ ಬಗ್ಗೆ ಇರುವ ಅನಿಶ್ಚಿತತೆ. ಸಾಮಾನ್ಯವಾಗಿ ಈ ಸಂದರ್ಭಗಳಲ್ಲಿ ಜಾಗತಿಕ ಸೂಚ್ಯಂಕಗಳು 1 ರಿಂದ 3 ಪ್ರತಿಶತ ಕುಸಿಯುತ್ತವೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಮಾರುಕಟ್ಟೆಗಳು ಬ್ಲಡ್ ಬಾತ್ ನಲ್ಲಿ ಮುಕ್ತಾಯಗೊಳ್ಳುತ್ತವೆ. ಹೂಡಿಕೆದಾರರು ತಕ್ಷಣವೇ ಸುರಕ್ಷಿತ ಆಸ್ತಿಗಳಾದ ಚಿನ್ನ, ಬೆಳ್ಳಿ ಮತ್ತು ಕಚ್ಚಾ ತೈಲದತ್ತ ಮುಖ ಮಾಡುತ್ತಾರೆ.

ಈ ಹಂತವನ್ನು ಆರ್ಥಿಕ ತಜ್ಞರು “ರಿಸ್ಕ್-ಆಫ್” ಹಂತ ಎಂದು ಕರೆಯುತ್ತಾರೆ. ಇದೇನು ಹೊಸದಲ್ಲ , ಪ್ರತಿ ಅಸ್ಥಿರತೆಯಲ್ಲೂ ನಾವು ಕಾಣುವುದು ಇದೆ ಪ್ಯಾಟ್ರನ್. ಇವೆಲ್ಲವೂ ತಕ್ಷಣ ಸ್ಪಂದಿಸುವುದರಿಂದ ಆಗುತ್ತದೆ. ಆದರೆ ಈ ಬಾರಿ ಕಚ್ಚಾ ತೈಲದ ಮೇಲೆ ಮೋಹ ಹೆಚ್ಚಾಗಿದೆ. ಹೀಗಾಗಿ ಚಿನ್ನ ಮತ್ತು ಬೆಳ್ಳಿ ಕೂಡ ತಮ್ಮ ಸಹಜ ಹೊಳಪು ಕಳೆದುಕೊಂಡಿವೆ. ಪ್ರಥಮ ಬಾರಿಗೆ ದುರಿತ ಕಾಲದ ಡಾರ್ಲಿಂಗ್ ಚಿನ್ನ ಮಂಕಾಗಿದೆ. ಟರ್ಕಿ ತನ್ನ ಬಹುತೇಕ ಚಿನ್ನವನ್ನು ಮಾರಿದೆ. ಯುದ್ಧಕಾಲದಲ್ಲಿ ದೇಶಗಳು, ದೊಡ್ಡ ಹೂಡಿಕೆದಾರರು ಚಿನ್ನವನ್ನು ಹೆಚ್ಚು ಸಂಗ್ರಹಿಸುತ್ತಾರೆ. ಆದರೆ ಇವತ್ತಿನ ದಿನದಲ್ಲಿ ಬಹಳಷ್ಟು ಹೊಸ ಪ್ಯಾಟ್ರನ್ ಕಾಣಲು ಸಿಗುತ್ತಿದೆ. ಹೊಸ ಸಹಜತೆ ಏನಾದರೂ ಶುರುವಾಗುತ್ತಿದ್ದೆಯೇ ಎನ್ನುವ ಸಂಶಯ ಹುಟ್ಟಿಹಾಕಿದೆ.

ಆದರೆ ಆಶ್ಚರ್ಯಕರ ಸಂಗತಿ ಏನೆಂದರೆ, ಯುದ್ಧ ನಿಜವಾಗಿಯೂ ಪ್ರಾರಂಭವಾದ ನಂತರ ಮಾರುಕಟ್ಟೆಯ ವರ್ತನೆ ಬದಲಾಗುತ್ತದೆ. ಮೊದಲಿನ ಆಘಾತದ ನಂತರ ಮಾರುಕಟ್ಟೆಗಳು ನಿಧಾನವಾಗಿ ಸ್ಥಿರವಾಗಲು ಪ್ರಾರಂಭಿಸುತ್ತವೆ. ಅನಿಶ್ಚಿತತೆ ಕಡಿಮೆಯಾಗುವುದರಿಂದ ಮತ್ತು ಕೆಟ್ಟ ಪರಿಸ್ಥಿತಿಯನ್ನು ಮಾರುಕಟ್ಟೆ ಈಗಾಗಲೇ ದರದಲ್ಲಿ ಒಳಗೊಂಡಿರುವುದರಿಂದ, ಹೂಡಿಕೆದಾರರು ಭಾವನೆಗಳಿಂದ ಹೊರಬಂದು ತಾರ್ಕಿಕವಾಗಿ ಯೋಚಿಸಲು ಆರಂಭಿಸುತ್ತಾರೆ. ಈ ಹಂತದಲ್ಲಿ ಮಾರುಕಟ್ಟೆ ಭಯದಿಂದ ತಾರ್ಕಿಕತೆಗೆ ಬದಲಾಗುತ್ತದೆ.ಗಮನಿಸಿ ಇಲ್ಲೂ ಕೂಡ ಹಿಂದಿನ ಪ್ಯಾಟ್ರನ್ ಪಾಲನೆ ಯಾಗುತ್ತಿಲ್ಲ. ತಾರ್ಕಿಕತೆ ಹಂತವನ್ನು ನಾವು ತಲುಪಿಲ್ಲ.

ಇದಕ್ಕೆ ವಿರುದ್ಧವಾಗಿ, ಶಾಂತಿ ಘೋಷಣೆಗಳು ಮಾರುಕಟ್ಟೆಗೆ ಹರ್ಷದ ಅಲೆಯನ್ನು ತರುತ್ತವೆ. ಯುದ್ಧ ವಿರಾಮ ಅಥವಾ ಶಾಂತಿ ಮಾತುಕತೆಗಳ ಸುದ್ದಿ ಬಂದಾಗ ಹೂಡಿಕೆದಾರರಲ್ಲಿ ಆಶಾವಾದ ಹೆಚ್ಚುತ್ತದೆ. ಸೂಚ್ಯಂಕಗಳು ಏರಿಕೆಯಾಗುತ್ತವೆ, ಬ್ಯಾಂಕಿಂಗ್, ಐಟಿ ಮತ್ತು ಉಪಭೋಗ ಕ್ಷೇತ್ರಗಳು ಚೈತನ್ಯವನ್ನು ಕಾಣುತ್ತವೆ. ಆದರೆ ಈ ಸಂದರ್ಭದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಇಳಿಕೆಯಾಗುತ್ತವೆ, ಏಕೆಂದರೆ ಹೂಡಿಕೆದಾರರು ಮತ್ತೆ ಅಪಾಯವನ್ನು ಸ್ವೀಕರಿಸಲು ಸಿದ್ಧರಾಗುತ್ತಾರೆ. ಈ ಹಂತವನ್ನು “ರಿಸ್ಕ್-ಆನ್” ಹಂತ ಎಂದು ಕರೆಯಲಾಗುತ್ತದೆ. ನೀವೇ ಗಮನಿಸಿ ನೋಡಿ ಇದು ಕೂಡ ವಿರುದ್ದವಾಗುತ್ತಿದೆ. ಯುದ್ಧ ವಿರಾಮ ಘೋಷಣೆ ಆಗುತ್ತಿದ್ದ ಹಾಗೆ ಚಿನ್ನ ಬೆಳ್ಳಿ ಒಂದಷ್ಟು ಏರಿಕೆ ಕಂಡಿವೆ. ಇದರರ್ಥ ಬಹಳ ಸರಳ, ದೊಡ್ಡ ಹೂಡಿಕೆದಾರರು ಹಿಂದಿನ ಸಿದ್ದ ಫಾರ್ಮುಲಾ, ಫಾರ್ಮ್ಯಾಟ್ ಗೆ ಗುಡ್ ಬೈ ಹೇಳುತ್ತಿದ್ದಾರೆ.

ಆದರೆ ಮಾರುಕಟ್ಟೆಗೆ ಅತ್ಯಂತ ಅಪಾಯಕಾರಿ ಹಂತ ಯಾವುದು ಎಂದರೆ ಅದು ಅನಿಶ್ಚಿತತೆ. ಯುದ್ಧವಾಗುತ್ತದೆಯೋ ಇಲ್ಲವೋ ಎಂಬ ಗೊಂದಲ, “ಇನ್ನೂ ಕೆಲವು ದಿನಗಳಲ್ಲಿ ನಿರ್ಧಾರ” ಎಂಬ ಹೇಳಿಕೆಗಳು ಮಾರುಕಟ್ಟೆಯಲ್ಲಿ ಅಸ್ಥಿರತೆಯನ್ನು ಹೆಚ್ಚಿಸುತ್ತವೆ. ಈ ಸಮಯದಲ್ಲಿ ಮಾರುಕಟ್ಟೆಯ ದಿಕ್ಕನ್ನು ಊಹಿಸುವುದು ಬಹಳ ಕಷ್ಟವಾಗುತ್ತದೆ. ಟ್ರೇಡರ್‌ಗಳಿಗೆ ಇದು ಅವಕಾಶವಾಗಬಹುದು, ಆದರೆ ದೀರ್ಘಾವಧಿ ಹೂಡಿಕೆದಾರರಿಗೆ ಇದು ಪರೀಕ್ಷೆಯ ಕಾಲ. ನಿಜವಾಗಿ ಹೇಳಬೇಕೆಂದರೆ ಟ್ರೇಡರ್ಗಳು ಈ ಸಮಯದಲ್ಲಿ ಹೆಚ್ಚು ಲಾಭ ಮಾಡಿಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿರುವ ಅಸ್ಥಿರತೆಯನ್ನು ಇವರು ಬಂಡವಾಳವಾಗಿ ಬಳಸಿಕೊಳ್ಳುತ್ತಾರೆ. ಹೂಡಿಕೆದಾರರು ಈ ಸಮಯದಲ್ಲಿ ಮಾನಸಿಕ ಸ್ಥಿರತೆಯನ್ನು ಕಾಯ್ದು ಕೊಳ್ಳುವುದು ಬಹಳ ಮುಖ್ಯ.

ಮಾರುಕಟ್ಟೆ ಒಂದು ಜೀವವಿಲ್ಲದ ಆದರೆ ನಿಗದಿತ ಕಾರ್ಯಕ್ಕೆ ಸೃಷ್ಟಿಯಾದ ಸಿಸ್ಟಮ್ ಎಂದು ಸಾಮಾನ್ಯ ದಿನಗಳಲ್ಲಿ ಅನ್ನಿಸಬಹುದು. ಆದರೆ ಅದು ಕೋಟ್ಯಂತರ ಜನರ, ಹೂಡಿಕೆದಾರರ ಭಾವನೆಗಳ ಪ್ರತಿಬಿಂಬವಾಗಿದೆ ಎನ್ನುವುದನ್ನು ನಾವು ಎಂದಿಗೂ ಮರೆಯಬಾರದು. ಯುದ್ಧ, ಅಸ್ಥಿರತೆ ಎಂದಾಗ ಭಯ ಉತ್ಪನ್ನಗವಾಗುತ್ತದೆ. ಆಗ ಪ್ಯಾನಿಕ್ ಮಾರಾಟ ನಡೆಯುತ್ತದೆ. ಸ್ಥಿರತೆ ಅಥವಾ ಆಶಾವಾದ ಮತ್ತೆ ಮರಳಿದಾಗ ಅತಿಯಾದ ಖರೀದಿ ಕಾಣಿಸುತ್ತದೆ. ಭಯದಲ್ಲಿ ಎಲ್ಲರೂ ಮಾರಾಟಕ್ಕೆ ಇಳಿದಾಗ ನಾವು ಮಾರಾಟ ಮಾಡಬಾರದು, ಸಾಧ್ಯವಾದರೆ ಖರೀದಿ ಮಾಡಬೇಕು. ವಿಶ್ವಾಸದಲ್ಲಿ ಹೆಚ್ಚು ಖರೀದಿ ಶುರು ಮಾಡಿದಾಗ ನಾವು ಮಾರಾಟ ಮಾಡಬೇಕು. ಅದೆಷ್ಟೇ ಬಾರಿ ಈ ನಿಯಮವನ್ನು ಹೇಳಿದರೂ ಮೂರು ಪ್ರತಿಶತ ಜನರು ಕೂಡ ಇದನ್ನು ಪಾಲಿಸುವುದಿಲ್ಲ. ಒಂದು ಕುರಿ ಹಳ್ಳಕ್ಕೆ ಬಿದ್ದರೆ ಎಲ್ಲವೂ ಅದನ್ನು ಹಿಂಬಾಲಿಸುತ್ತದೆ. ಇದನ್ನು 'ಸೆಟ್ ಪ್ಯಾಟ್ರನ್' ಎನ್ನಲಾಗುತ್ತದೆ. ಗಮನಿಸಿ ಇದರಲ್ಲಿ ಮಾತ್ರ ಬದಲಾವಣೆಯಾಗಿಲ್ಲ!

ವಲಯವಾರು ಪರಿಣಾಮಗಳನ್ನು ಗಮನಿಸಿದರೆ, ಯುದ್ಧದ ಭೀತಿಯ ಸಮಯದಲ್ಲಿ ರಕ್ಷಣಾ (ಡಿಫೆನ್ಸ್), ಲೋಹ ಮತ್ತು ಇಂಧನ ಕ್ಷೇತ್ರಗಳು ಲಾಭ ಪಡೆಯುತ್ತವೆ. ಆದರೆ ಶಾಂತಿಯ ಸಮಯದಲ್ಲಿ ಬ್ಯಾಂಕಿಂಗ್, ಐಟಿ ಮತ್ತು FMCG ಕ್ಷೇತ್ರಗಳು ಚೇತರಿಕೆ ಕಾಣುತ್ತವೆ. ಇದರಿಂದ ಒಂದು ಅಂಶ ಸ್ಪಷ್ಟವಾಗುತ್ತದೆ. ಅದೇನೆಂದರೆ ಪ್ರತಿ ಪರಿಸ್ಥಿತಿಯಲ್ಲೂ ಅವಕಾಶಗಳಿವೆ, ಆದರೆ ಅವುಗಳನ್ನು ಗುರುತಿಸುವ ದೃಷ್ಟಿ ಹೂಡಿಕೆದಾರರಿಗೆ ಇರಬೇಕು. ನಾನು ಸದಾ ಹೇಳುವ ಮಾತು 'ಪ್ರತಿ ಕುಸಿತವೂ ಹೊಸ ಜಿಗಿತಕ್ಕೆ ಮುನ್ನುಡಿ' ಎನ್ನುವುದನ್ನು ಮನನ ಮಾಡಿಕೊಳ್ಳುವುದಕ್ಕೆ ಇದು ಸೂಕ್ತ ಸಮಯ.

ಯುದ್ಧದ ಭೀತಿ ಅಥವಾ ಶಾಂತಿ ಘೋಷಣೆಗಳ ನಂತರ 5 ರಿಂದ 10 ದಿನಗಳಲ್ಲಿ ಮಾರುಕಟ್ಟೆಯ ನಡವಳಿಕೆಯಲ್ಲಿ ಸ್ಪಷ್ಟವಾದ ಚಿತ್ರಣ ಕಾಣಿಸುತ್ತದೆ. ಭೀತಿಯ ನಂತರ “ಬೈ ದ ಡಿಪ್” ತಂತ್ರ ಚಾಲೂ ಆಗುತ್ತದೆ, ಅಲ್ಲಿಯವರೆಗೆ ನಿಜವಾದ ಹೂಡಿಕೆದಾರ ಕಾಯಬೇಕು. ಆ ನಂತರ “ಸೆಲ್ ಆನ್ ರೈಸ್” ತಂತ್ರವನ್ನು ಅನುಸರಿಸಬೇಕು.

ಹೂಡಿಕೆದಾರರಿಗೆ ಇಲ್ಲಿ ಮುಖ್ಯ ಪಾಠವೇನೆಂದರೆ, ಯಾವಾಗ ಖರೀದಿ ಮಾಡಬೇಕು ಮತ್ತು ಯಾವಾಗ ಮಾರಾಟ ಮಾಡಬೇಕು ಎಂಬುದನ್ನು ಅರಿತುಕೊಳ್ಳುವುದು. ಮಾರುಕಟ್ಟೆ ಭಯದಿಂದ ಕುಸಿದಾಗ ಉತ್ತಮ ಗುಣಮಟ್ಟದ ಷೇರುಗಳನ್ನು ಖರೀದಿ ಮಾಡುವುದು ಒಳ್ಳೆಯದು. ಅದೇ ಸಮಯದಲ್ಲಿ, ಮಾರುಕಟ್ಟೆ ತೀವ್ರ ಏರಿಕೆ ಕಂಡಾಗ ಮತ್ತು ಎಲ್ಲರೂ ಪಾಸಿಟಿವ್ ಆಗಿರುವಾಗ ಹೂಡಿಕೆದಾರ 'ಪ್ರಾಫಿಟ್ ಬುಕ್' ಮಾಡಿಕೊಳ್ಳಬೇಕು.

ಹೆಚ್ಚಿನ ಹೂಡಿಕೆದಾರರು ಮಾಡುವ ಸಾಮಾನ್ಯ ತಪ್ಪುಗಳು ಕೂಡ ಇಲ್ಲಿ ಗಮನಾರ್ಹ. ಹೆಡ್ಲೈನ್‌ಗಳನ್ನು ನೋಡಿ ತಕ್ಷಣ ನಿರ್ಧಾರ ತೆಗೆದುಕೊಳ್ಳುವುದು, ಮಾರುಕಟ್ಟೆಯಲ್ಲಿನ ಆ ಕ್ಷಣದ ಭಾವನೆಗೆ ಸ್ಪಂದಿಸುವುದು , ಕುಸಿತದ ಸಮಯದಲ್ಲಿ ಭಯದಿಂದ ಮಾರಾಟ ಮಾಡುವುದು ಮಾಡುತ್ತಾರೆ. ಮಾರುಕಟ್ಟೆಯಲ್ಲಿ ದೀರ್ಘಾವಧಿಯಲ್ಲಿ ಗೆಲುವಿಗೆ ಇರುವ ಮಂತ್ರದಲ್ಲಿ ಪ್ರಮುಖವಾದದ್ದು ತಾಳ್ಮೆ ಎನ್ನುವುದು ನೆನಪಿರಲಿ.

ದೀರ್ಘಾವಧಿಯಲ್ಲಿ ನೋಡಿದರೆ, ಜಾಗತಿಕ ರಾಜಕೀಯ ಘಟನೆಗಳು ತಾತ್ಕಾಲಿಕ ಪರಿಣಾಮ ಮಾತ್ರ ಉಂಟುಮಾಡುತ್ತವೆ. ಆದರೆ ಮಾರುಕಟ್ಟೆಯ ನಿಜವಾದ ಚಾಲಕ ಅಂಶಗಳು (ಡ್ರೈವಿಂಗ್ ಫೋರ್ಸ್) ಆರ್ಥಿಕ ಬೆಳವಣಿಗೆ, ಕಂಪನಿಗಳ ಲಾಭ ಮತ್ತು ತಂತ್ರಜ್ಞಾನ ವೃದ್ಧಿ. ಹೀಗಾಗಿ ಶಾಂತ ಮನಸ್ಸು ಮತ್ತು ದೀರ್ಘಾವಧಿ ದೃಷ್ಟಿಕೋನ ಹೊಂದಿರುವ ಹೂಡಿಕೆದಾರರು ಯಶಸ್ಸನ್ನು ಸಾಧಿಸುತ್ತಾರೆ.

ವಿಶ್ವದ ವಿವಿಧ ಘಟನೆಗಳನ್ನು ಗಮನಿಸಿದರೆ ಮಾರುಕಟ್ಟೆಯ ನಡವಳಿಕೆ ಸ್ಪಷ್ಟವಾಗುತ್ತದೆ. ಮಧ್ಯಪ್ರಾಚ್ಯದ ಉದ್ವಿಗ್ನತೆ ಸಾಮಾನ್ಯವಾಗಿ ತಾತ್ಕಾಲಿಕ ಕುಸಿತಕ್ಕೆ ಕಾರಣವಾಗುತ್ತದೆ, ಆದರೆ ನಂತರ ಚೇತರಿಕೆ ಕಾಣಿಸುತ್ತದೆ. ಸೈನಿಕ ದಾಳಿಗಳು ತೈಲದ ಬೆಲೆಯನ್ನು ಏರಿಸುತ್ತವೆ, ಆದರೆ ಮಾರುಕಟ್ಟೆಯಲ್ಲಿ ಕುಸಿತ ಉಂಟುಮಾಡುತ್ತವೆ. ಶಾಂತಿ ಮಾತುಕತೆಗಳು ಮಾರುಕಟ್ಟೆಗೆ ಚೈತನ್ಯ ನೀಡುತ್ತವೆ.

ಕೊನೆ ಮಾತು: ಇಂದಿನ ಹೂಡಿಕೆದಾರರಿಗೆ ಕೇವಲ ಆರ್ಥಿಕ ಜ್ಞಾನ ಸಾಕಾಗುವುದಿಲ್ಲ. ಅವರಿಗೆ ಮನೋವೈಜ್ಞಾನಿಕ ಅರಿವು ಕೂಡ ಅಗತ್ಯ. ನಾಯ್ಸ್ (ಗದ್ದಲ) ಮತ್ತು ಸಿಗ್ನಲ್ (ಸೂಚನೆ) ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳಬೇಕು, ಭಾವನಾತ್ಮಕ ನಿರ್ಧಾರಗಳನ್ನು ತಪ್ಪಿಸಬೇಕು ಮತ್ತು ಅಸ್ಥಿರತೆಯನ್ನು ಅವಕಾಶವಾಗಿ ಬಳಸಿಕೊಳ್ಳಬೇಕು. ಜಾಗತಿಕ ರಾಜಕೀಯ ಹೇಳಿಕೆಗಳು ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಕದಲಿಸಬಹುದು, ಆದರೆ ಅವು ಶಾಶ್ವತ ಪರಿಣಾಮ ಬೀರುವುದಿಲ್ಲ. ಈ ಅಸ್ಥಿರತೆಯನ್ನು ಅರ್ಥಮಾಡಿಕೊಳ್ಳುವ ಹೂಡಿಕೆದಾರರು ಅದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Strait of Hormuz: 'ಮುಲಾಜೇ ಇಲ್ಲ, ಅನುಮತಿ ಇಲ್ದೇ ಬಂದ್ರೆ ಹೊಡೆದುರುಳಿಸ್ತೀವಿ': Iran ಎಚ್ಚರಿಕೆ

Kerala, Karnataka Bypoll & Assam, Puducherry Election 2026 Live Updates |ಮಧ್ಯಾಹ್ನ 1ರವರೆಗೆ ಅಸ್ಸಾಂನಲ್ಲಿ ಶೇ. 59.63, ಕೇರಳ ಶೇ. 49.7, ಪುದುಚೆರಿ ಶೇ. 56.83 ಮತದಾನ, ಸೊನಿತ್ಪುರ್ ನಲ್ಲಿ ಮತಗಟ್ಟೆ ಅಧಿಕಾರಿ ಸಾವು

ಇರಾನ್ ಯುದ್ಧವೇ ಮುಗಿದಿಲ್ಲ.. ಆಗಲೇ Ballistic Missile ಹಾರಿಸಿದ ಉತ್ತರ ಕೊರಿಯಾ, Japan ಹೈ ಅಲರ್ಟ್!

ಲೆಬೆನಾನ್ ಮೇಲೆ ಇಸ್ರೇಲ್ ದಾಳಿ; Hezbollah ಮುಖ್ಯಸ್ಥನ ಸಲಹೆಗಾರ ಹತ!

Video: ಈರುಳ್ಳಿ ಖರೀದಿಗೆ ರೈತ ತಂದಿದ್ದ 5 ಲಕ್ಷ ರೂ ಹಣ ಕದ್ದ ಖತರ್ನಾಕ್ ಕಳ್ಳ; ದುಷ್ಕರ್ಮಿ ಕೈಚಳಕ CCTVಯಲ್ಲಿ ಸೆರೆ!

SCROLL FOR NEXT