ಅಂಕಣಗಳು

ಹೊರ್ಮುಸ್, ಹಣದುಬ್ಬರ, ಮತ್ತು ಚುನಾವಣೆಗಳು: ಸಮಸ್ಯೆಯ ಸುಳಿಯಲ್ಲಿ ಟ್ರಂಪ್ (ಜಾಗತಿಕ ಜಗಲಿ)

ಟ್ರಂಪ್ ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲದಂತಹ ಪ್ರಬಲ ಕಾರಣಗಳನ್ನು ಇರಾನ್ ಹೊಂದಿದೆ ಎಂದು ಅಲ್ - ಜಜೀರಾ ಅಂಕಣಕಾರರಾದ ಜಾಸಿಮ್ ಅಲ್ ಅಜ್ಜಾ಼ವಿ ಅವರು ಹೇಳಿದ್ದಾರೆ.

ಎಲ್ಲೇ, ಯಾವುದೇ ಯುದ್ಧವಾದರೂ ಜನರ ಹೆಚ್ಚಿನ ಗಮನ ಮದ್ದುಗುಂಡುಗಳು ಮತ್ತು ಬಾಂಬುಗಳತ್ತಲೇ ಇರುತ್ತವೆ. ಆದರೆ, ಬಹಳಷ್ಟು ಬಾರಿ ಇನ್ನೊಂದು ಆಯುಧ ಯುದ್ಧದಲ್ಲಿ ಗೆಲ್ಲುವುದು ಯಾರು ಎನ್ನುವುದನ್ನು ನಿರ್ಧರಿಸುತ್ತದೆ. ಆ ಆಯುಧ ಯಾವುದು ಎಂದರೆ ಸಮಯ! ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಗಲ್ಫ್ ಪ್ರದೇಶದಲ್ಲಿ ನಡೆಯುತ್ತಿರುವ ಯುದ್ಧ ಇದಕ್ಕೆ ಅತ್ಯಂತ ಸೂಕ್ತವಾದ ಉದಾಹರಣೆಯಾಗಿದೆ. ಇಲ್ಲಿ ಪ್ರತಿಯೊಂದು ದೇಶವೂ ಪರಸ್ಪರರ ವಿರುದ್ಧ ಸೆಣಸುವುದು ಮಾತ್ರವಲ್ಲದೆ, ಕಾಲದ ವಿರುದ್ಧವೂ ಪ್ರತ್ಯೇಕ ಓಟದ ಸ್ಪರ್ಧೆಗೆ ಇಳಿದಿವೆ. ಇಲ್ಲೊಂದು ಮಹತ್ತರ ಅಂಶವೆಂದರೆ, ಮೂರೂ ದೇಶಗಳ ಕಾಲವೂ ಸಂಪೂರ್ಣ ವಿಭಿನ್ನವಾದ ಪಥದಲ್ಲಿ ಓಟಕ್ಕೆ ಇಳಿದಿವೆ. ಆದ್ದರಿಂದಲೇ ಇಲ್ಲಿನ ಪರಿಸ್ಥಿತಿ ಸಂಪೂರ್ಣ ಜಗತ್ತಿನ ಪಾಲಿಗೇ ಈಗ ಅಪಾಯಕಾರಿಯಾಗಿ ಹೊರಹೊಮ್ಮಿದೆ.

ವಾಷಿಂಗ್ಟನ್ನಿನ ಮಧ್ಯಂತರ ಆತಂಕ

2025ರ ಜನವರಿ ತಿಂಗಳಲ್ಲಿ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅತ್ಯಂತ ಆತ್ಮವಿಶ್ವಾಸ ಹೊಂದಿದ್ದರು. ಅವರು ತನ್ನ ಆಪ್ತ ಸ್ಟೀವ್ ವಿಟ್ಕಾಫ್ ಅವರನ್ನು ಒಮಾನ್‌ಗೆ ಕಳುಹಿಸಿ, ಇರಾನ್‌ಗೆ 60 ದಿನಗಳ ಗಂಭೀರ ಗಡುವು ನೀಡಿದರು. ಒಂದು ಬಾರಿ ಬಲವಾಗಿ ತಳ್ಳಿದರೆ ಇರಾನ್ ಸರ್ಕಾರ ಇಸ್ಪೀಟೆಲೆಗಳ ಹಾಗೆ ಉದುರಿ ಹೋಗುತ್ತದೆ ಎಂದು ಟ್ರಂಪ್ ಭಾವಿಸಿದ್ದರು. ಆದರೆ, ನೆತನ್ಯಾಹು ಮತ್ತು ಮೊಸಾದ್ ಈ ಆಲೋಚನೆಗೆ ತಡೆ ಒಡ್ಡಿದವು ಎಂದು ವರದಿಗಳು ಹೇಳುತ್ತವೆ. ವಾಸ್ತವತೆ ಟ್ರಂಪ್ ಆಡಳಿತ ಅಂದುಕೊಂಡದ್ದಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು. ಯುದ್ಧದಲ್ಲಿ ಟ್ರಂಪ್ ನಿರೀಕ್ಷಿಸಿದ ಕ್ಷಿಪ್ರ ಗೆಲುವು ಲಭಿಸಲೇ ಇಲ್ಲ. ಈಗ ಅಮೆರಿಕ ಅತ್ಯಂತ ಸುದೀರ್ಘವಾದ, ಯಾತನಾದಾಯಕ ಯುದ್ಧದಲ್ಲಿ ಸಿಲುಕಿದ್ದು, ಇದರ ಪರಿಣಾಮಗಳು ಇರಾನ್‌ಗಿಂತಲೂ ಟ್ರಂಪ್‌ಗೇ ಹೆಚ್ಚಿನ ಕಷ್ಟ - ನಷ್ಟ ಉಂಟುಮಾಡುವಂತಿವೆ.

ಅಮೆರಿಕದಲ್ಲೇ ಈ ಯುದ್ಧದಿಂದ ವಾಸ್ತವವಾಗಿ ಸಾಕಷ್ಟು ಹಾನಿ ಉಂಟಾಗಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ 90 ಡಾಲರ್ ದಾಟಿದ್ದು, ಯುದ್ಧಕ್ಕೂ ಮುನ್ನ ಪ್ರತಿ ಬ್ಯಾರಲ್ ಬೆಲೆ 67 ಡಾಲರ್ ಇತ್ತು. ಮಾರ್ಚ್ ತಿಂಗಳಲ್ಲಿ ಹಣದುಬ್ಬರ 3.3%ಕ್ಕೆ ಹೆಚ್ಚಳ ಕಂಡಿದ್ದು, ಪೆಟ್ರೋಲ್ ದರ 21.2% ಏರಿಕೆಯಾಗಿದೆ. ಕೇವಲ ತೈಲ ಮತ್ತು ಇಂಧನಗಳೇ ಆ ತಿಂಗಳಲ್ಲಿ ಒಟ್ಟು ಬೆಲೆ ಏರಿಕೆಯಲ್ಲಿ 75% ಕೊಡುಗೆ ನೀಡಿದ್ದವು. ಇನ್ನು ಆರ್ಥಿಕತೆಯ ವಿಚಾರದಲ್ಲಿ ಟ್ರಂಪ್ ಅನುಮೋದನಾ ಪ್ರಮಾಣ ದಾಖಲೆಯ 29%ಗೆ ಕುಸಿದಿದ್ದು, ಸ್ವತಃ ಅವರ ರಿಪಬ್ಲಿಕನ್ ಪಕ್ಷದ 40% ಮತದಾರರೇ ಟ್ರಂಪ್ ಕುರಿತು ಅಸಮಾಧಾನ ಹೊಂದಿದ್ದಾರೆ. ಚಿಕಾಗೊ ವಿಶ್ವವಿದ್ಯಾಲಯದ ಪ್ರೊಫೆಸರ್ ಜಾನ್ ಮಿಯರ್ಶೀಮರ್ ಅವರು ನೇರವಾಗಿಯೇ ಟ್ರಂಪ್ ಬಹುದೊಡ್ಡ ತಪ್ಪು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಟ್ರಂಪ್ ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲದಂತಹ ಪ್ರಬಲ ಕಾರಣಗಳನ್ನು ಇರಾನ್ ಹೊಂದಿದೆ ಎಂದು ಅಲ್ - ಜಜೀರಾ ಅಂಕಣಕಾರರಾದ ಜಾಸಿಮ್ ಅಲ್ ಅಜ್ಜಾ಼ವಿ ಅವರು ಹೇಳಿದ್ದಾರೆ. ಜಗತ್ತಿನ ಪ್ರಮುಖ ವ್ಯಾಪಾರ ಜಲಮಾರ್ಗವಾದ ಹೊರ್ಮುಸ್ ಜಲಸಂಧಿಯನ್ನು ಟೆಹರಾನ್ ನಿಯಂತ್ರಿಸುತ್ತಿದ್ದು, ಇದು ಇರಾನ್‌ಗೆ ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ನಿಯಂತ್ರಣ ನೀಡಿದೆ. ಇನ್ನು ಇರಾನ್ ಬಳಿ ಇರುವ ಕ್ಷಿಪಣಿಗಳು ಗಲ್ಫ್ ದೇಶಗಳು ಮತ್ತು ಇಸ್ರೇಲಿನ ವಾಯು ರಕ್ಷಣೆಯನ್ನು ಭೇದಿಸಬಲ್ಲವು. ಆದ್ದರಿಂದ ಈಗ ಅಮೆರಿಕದ ಬಳಿ ಯುದ್ಧವನ್ನು ಮುಕ್ತಾಯಗೊಳಿಸಲು ಯಾವುದೇ ಸ್ಪಷ್ಟವಾದ ಮಾರ್ಗ ಕಾಣುತ್ತಿಲ್ಲ. ಇನ್ನು ಅಮೆರಿಕದಲ್ಲಿ ಮಧ್ಯಂತರ ಚುನಾವಣೆಗಳು ಕೇವಲ ಏಳು ತಿಂಗಳಷ್ಟೇ ದೂರದಲ್ಲಿದ್ದು, ಟ್ರಂಪ್ ಒಂದು ರೀತಿ ಸುಳಿಯಲ್ಲಿ ಸಿಲುಕಿದಂತಾಗಿದ್ದಾರೆ. ಅಮೆರಿಕದಲ್ಲಿ ಬೆಲೆಗಳನ್ನು ಕಡಿಮೆಗೊಳಿಸುವುದಾಗಿ ಮಾತು ಕೊಟ್ಟಿದ್ದ ಅದೇ ಟ್ರಂಪ್ ಇಂದು ಅಮೆರಿಕಕ್ಕೆ ಇತ್ತೀಚಿನ ಇತಿಹಾಸದಲ್ಲೇ ಅತಿದೊಡ್ಡ ಇಂಧನ ಆಘಾತ ಉಂಟುಮಾಡಿದ ಅಧ್ಯಕ್ಷ ಎಂದು ದಾಖಲಾಗುವ ಸಾಧ್ಯತೆಗಳಿವೆ.

ಟೆಹರಾನಿನ ಕಲ್ಲಿದ್ದಲು ಉರಿಸುವ ಕಾರ್ಯತಂತ್ರ

ಇರಾನ್ ಸಮಯವನ್ನು ಸಂಪೂರ್ಣ ಭಿನ್ನವಾಗಿ ಗ್ರಹಿಸುತ್ತದೆ. ಟ್ರಂಪ್ ಕ್ಷಿಪ್ರವಾಗಿ ಯುದ್ಧದಿಂದ ಹೊರನಡೆಯಲು ಬಯಸಿದರೆ, ಇರಾನ್‌ಗೆ ಕೇವಲ ತಾನು ಉಳಿಯುವುದಷ್ಟೇ ಮುಖ್ಯವಾಗಿದೆ. ಫೆಬ್ರವರಿ 28, 2026ರಂದು ಆರಂಭಗೊಂಡ ಯುದ್ಧ ಇರಾನ್ ಪಾಲಿಗೆ ನಿಜಕ್ಕೂ ಕರಾಳವಾಗಿತ್ತು. ದಾಳಿಗಳಲ್ಲಿ ಸರ್ವೋಚ್ಚ ನಾಯಕ ಅಲಿ ಖಮೇನಿ, ಸೇನೆಯ ಉನ್ನತ ಕಮಾಂಡರ್‌ಗಳು ಹತ್ಯೆಯಾಗಿದ್ದು, ಪರಮಾಣು ನೆಲೆಗಳ ಮೇಲೆ ಬಾಂಬ್ ದಾಳಿಗಳಾಗಿವೆ. ಇರಾನಿನ ಆರ್ಥಿಕತೆಯಂತೂ ಭಾರೀ ಹೊಡೆತ ತಿಂದಿದೆ. ಇಷ್ಟಾದರೂ ಇರಾನ್ ಸರ್ಕಾರ ಮಾತ್ರ ಇನ್ನೂ ಉಳಿದುಕೊಂಡಿದೆ.

ಮಿಯರ್ಶೀಮರ್ ಇದರ ಕಾರಣವನ್ನೂ ಸರಳವಾಗಿ ವಿವರಿಸಿದ್ದಾರೆ. ಇರಾನ್ ಒಂದು ಬೃಹತ್ ರಾಷ್ಟ್ರವಾಗಿದ್ದು, ಅದರ ಸೇನೆ ಹಲವಾರು ಸ್ಥಳಗಳಲ್ಲಿ ಪಸರಿಸಿದೆ. ಕೆಲವೊಂದು ಅಚ್ಚರಿಯ ದಾಳಿಗಳನ್ನು ನಡೆಸುವ ಮೂಲಕ ಇರಾನಿನ ಸೇನೆಯನ್ನು ಮುಗಿಸಲು ಸಾಧ್ಯವಿಲ್ಲ. ಇರಾನಿನ ಕ್ಷಿಪಣಿಗಳು ಮತ್ತು ಪ್ರಾದೇಶಿಕ ಸಹಯೋಗಿಗಳು ಅದಕ್ಕೆ ಹಲವು ತಿಂಗಳುಗಳ ಕಾಲ ಸೆಣಸಾಡುವ ಶಕ್ತಿ ಒದಗಿಸುತ್ತಿವೆ. ಕೊಲಂಬಿಯಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರಜ್ಞರಾದ ಜೆಫ್ರಿ ಸ್ಯಾಶ್ಸ್ ಅಂತೂ ಇನ್ನಷ್ಟು ಕಟುವಾಗಿ ಈ ಬೆಳವಣಿಗೆಯನ್ನು ಟೀಕಿಸಿದ್ದಾರೆ. ಇರಾನಿನ ಪರಮಾಣು ಕಾರ್ಯಕ್ರಮವನ್ನು ಮಿತಿಗೊಳಿಸಿದ್ದ ಹಿಂದಿನ ಒಪ್ಪಂದವನ್ನು ಸ್ವತಃ ಟ್ರಂಪ್ ತಾನೇ ರದ್ದುಗೊಳಿಸಿದ್ದರು ಎಂದು ಸ್ಯಾಶ್ಸ್ ಎಲ್ಲರಿಗೂ ನೆನಪಿಸಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳು ಇಸ್ಲಾಮಿಕ್ ಕಾನೂನಿಗೆ ವಿರುದ್ಧ ಎಂದು ಬಹಿರಂಗವಾಗಿಯೇ ಸಾರಿದ್ದ ಸರ್ವೋಚ್ಚ ನಾಯಕ ಅಲಿ ಖಮೇನಿಯನ್ನು ಟ್ರಂಪ್ ಹತ್ಯೆಗೈದಿದ್ದು, ಈ ಘಟನೆ ಸಂಪೂರ್ಣ ಪ್ರದೇಶವನ್ನು ಇನ್ನೂ ಹೆಚ್ಚಿನ ಯುದ್ಧಕ್ಕೆ ತಳ್ಳಿದೆ.

ಅಲ್ ಅಜ್ಜಾ಼ವಿ ಅವರು ಇರಾನಿನ ಕಾರ್ಯತಂತ್ರವನ್ನು ಒಂದು ಶಕ್ತಿಶಾಲಿ ಚಿತ್ರದ ಮೂಲಕ ಸುಂದರವಾಗಿ ವಿವರಿಸಿದ್ದು, ಆ ಚಿತ್ರದಲ್ಲಿ ಟೆಹರಾನನ್ನು ಕೈಯಲ್ಲಿ ಉರಿಯುತ್ತಿರುವ ಕಲ್ಲಿದ್ದಲು ಹಿಡಿದುಕೊಂಡಿರುವ ವ್ಯಕ್ತಿಯೊಬ್ಬನಿಗೆ ಹೋಲಿಸಲಾಗಿದೆ. ಆ ಉರಿ, ನೋವು ಸಹಿಸಲು ಅಸಾಧ್ಯವಾಗಿದ್ದರೂ, ಆತ ಮುಷ್ಟಿಯನ್ನು ಮಾತ್ರ ತೆರೆಯುತ್ತಿಲ್ಲ. ಅದೇ ರೀತಿ, ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್ ದಾಟಿ, 150 ಡಾಲರ್ ತಲುಪಬೇಕು ಎನ್ನುವುದು ಇರಾನ್ ಲೆಕ್ಕಾಚಾರ. ಹೀಗಾದಾಗ ಇರಾನ್ ಕುಸಿಯುವ ಮುನ್ನವೇ ಅಮೆರಿಕದಲ್ಲಿ ಟ್ರಂಪ್ ರಾಜಕೀಯ ಶಕ್ತಿ ಪತನಗೊಳ್ಳಬಹುದು ಎಂದು ಅದು ಭಾವಿಸಿದೆ. ಒಂದು ವೇಳೆ ಜಗತ್ತಿನ ಬಹುತೇಕ 20% ತೈಲ ಮತ್ತು 30% ಎಲ್ಎನ್‌ಜಿ ಸಾಗಣೆಯಾಗುವ ಕಿರಿದಾದ ಸಮುದ್ರ ಮಾರ್ಗವಾದ ಹೊರ್ಮುಸ್ ಜಲಸಂಧಿ ದೀರ್ಘ ಕಾಲದ ತನಕ ಮುಚ್ಚಿದ್ದರೆ, ಜಗತ್ತು ಬಹುದೊಡ್ಡ ಇಂಧನ ಬಿಕ್ಕಟ್ಟಿಗೆ ಸಿಲುಕಲಿದೆ ಎಂದು ಸ್ಯಾಶ್ಸ್ ಎಚ್ಚರಿಕೆ ನೀಡಿದ್ದಾರೆ.

ಟೆಲ್ ಅವೀವಿನ ಕೊನೆಯಿಲ್ಲದ ಯುದ್ಧ

ಇಸ್ರೇಲ್ ಪ್ರಧಾನಿ ನೆತನ್ಯಾಹು ಎಲ್ಲರಿಗಿಂತಲೂ ಅಸಹಜವಾದ ಸ್ಥಾನದಲ್ಲಿದ್ದಾರೆ. ಅವರಿಗೆ ಈ ಯುದ್ಧ ಇನ್ನಷ್ಟು ಕಾಲ ಮುಂದುವರಿಯಬೇಕಿದೆ. ಅವರು ಸ್ವದೇಶದಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದು, ಅದರೊಡನೆ ಚುನಾವಣಾ ಒತ್ತಡವೂ ಸೇರಿದೆ. ಯುದ್ಧ ಟೀಕಾಕಾರರನ್ನು ಮೌನವಾಗಿಸಿ, ದೇಶವನ್ನು ಒಗ್ಗೂಡಿಸುವುದರಿಂದ ಮತ್ತು ಲೆಬನಾನಿನಲ್ಲಿ ಒಂದು ಮುಕ್ತ ಸ್ವಾತಂತ್ರ್ಯ ನೀಡುವುದರಿಂದ, ಯುದ್ಧ ನೆತನ್ಯಾಹು ಪಾಲಿಗೆ ಆತ್ಮೀಯ ಮಿತ್ರನಂತಾಗಿದೆ. ಅಮೆರಿಕ ಇರಾನ್ ಜೊತೆ ಕದನ ವಿರಾಮ ಘೋಷಿಸಿದರೂ, ಈ ಒಪ್ಪಂದ ಲೆಬನಾನನ್ನು ಒಳಗೊಂಡಿಲ್ಲ ಎಂದು ನೆತನ್ಯಾಹು ತಕ್ಷಣವೇ ಸ್ಪಷ್ಟನೆ ನೀಡಿದ್ದಾರೆ.

ಹಿರಿಯ ಅಂಕಣಕಾರ ಗೈಡನ್ ಲೆವಿ ಅವರು ನೆತನ್ಯಾಹು ಪಾಲಿಗೆ ಯುದ್ಧವೇ ಅಂತಿಮ ಆಶ್ರಯವಲ್ಲ. ಬದಲಿಗೆ ಯುದ್ಧ ಅವರ ಮೊದಲ ಆಯ್ಕೆ ಎಂದಿದ್ದಾರೆ. ಈ ವೇಳೆ ರಾಜತಾಂತ್ರಿಕತೆಯನ್ನು ಮೂಲೆಗುಂಪು ಮಾಡಲಾಗಿದೆ. ಬಹಳಷ್ಟು ಇಸ್ರೇಲಿ ಯಹೂದಿಗಳು ಪ್ರಸ್ತುತ ಯುದ್ಧಕ್ಕೆ ಬೆಂಬಲ ನೀಡುತ್ತಿದ್ದಾರೆ. ಮಾಜಿ ಶಾಂತಿ ಮಧ್ಯಸ್ಥಿಕೆದಾರ ಡೇನಿಯಲ್ ಲೆವಿ ಅವರು ನೆತನ್ಯಾಹು 'ಮಾಡು ಇಲ್ಲವೇ ಮಡಿ' ಎನ್ನುವಂತಹ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದು, ಇದರಿಂದ ಅಮೆರಿಕದ ದೀರ್ಘಾವಧಿಯ ಹಿತಾಸಕ್ತಿಗಳಿಗೆ ತೊಂದರೆಯಾದರೂ ಪ್ರಾದೇಶಿಕ ಪಾರಮ್ಯ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.

ಅಂತಿಮ ಚಿತ್ರಣ

ಟ್ರಂಪ್‌ಗೆ ನವೆಂಬರ್ ತಿಂಗಳಿಗೂ ಮುನ್ನ ಶಾಂತಿ ಸ್ಥಾಪನೆಯಾಗಬೇಕಿದೆ. ಇರಾನ್‌ಗೆ ತಾನು ಟ್ರಂಪ್‌ಗಿಂತ ಹೆಚ್ಚು ಕಾಲ ಉಳಿದುಕೊಳ್ಳಬೇಕು. ಇನ್ನು ನೆತನ್ಯಾಹುಗಂತೂ ಯುದ್ಧ ಮುಗಿಯುವುದೇ ಬೇಕಾಗಿಲ್ಲ. ಮೂರು ಕಾಲಗಳು, ಮೂರು ಪ್ರತ್ಯೇಕ ದಿಕ್ಕುಗಳಾಗಿದ್ದು, ಇದರಿಂದಾಗಿ ಒಂದೇ ಪ್ರದೇಶ ಹೊತ್ತಿ ಉರಿಯುತ್ತಿರುವುದು ಮಾತ್ರ ವಿಪರ್ಯಾಸ. ಈ ಯುದ್ಧದಲ್ಲಿ ಇರಾನ್ ಉಳಿದುಕೊಂಡಿರುವುದು ಮಾತ್ರವಲ್ಲದೆ, ಈಗ ಅಮೆರಿಕವೇ ಯುದ್ಧದಿಂದ ಹೊರಬರಲು ಮಾರ್ಗ ಹುಡುಕುವಂತೆ ಮಾಡಿದ್ದು, ಇದು ಇರಾನ್ ಪಾಲಿನ ಗೆಲುವು ಎಂದು ಮಿಯರ್ಶೀಮರ್ ಭಾವಿಸಿದ್ದಾರೆ. ಸ್ಯಾಶ್ಸ್ ಇನ್ನೊಂದು ಹೆಜ್ಜೆ ಮುಂದೆ ಸಾಗಿದ್ದು, ಈಗ ಕದನ ವಿರಾಮಕ್ಕೆ ಟೆಹರಾನ್‌ಗಿಂತಲೂ ಶ್ವೇತ ಭವನ ಹೆಚ್ಚು ಹತಾಶೆಯಿಂದ ಪ್ರಯತ್ನಿಸುತ್ತಿದೆ ಎಂದಿದ್ದಾರೆ. ಇದೆಲ್ಲದರ ಕೊನೆಯಲ್ಲಿ, ಯಾರೂ ಬಾಂಬ್ ದಾಳಿ ಮಾಡಲಾಗದ, ಲಂಚ ನೀಡಲಾಗದ, ಅಥವಾ ಶೋಷಿಸಲಾಗದ ಆಯುಧವೆಂದರೆ ಅದು ಸಮಯ. ಈಗಂತೂ ಸಮಯ ಮೌನವಾಗಿಯೇ ವಾಷಿಂಗ್ಟನ್‌ನ ಕೈ ಜಾರುತ್ತಿದೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran war: ಇರಾನ್ ಹಡಗು ವಶಕ್ಕೆ ಪಡೆದ ಅಮೆರಿಕಾ; ಪ್ರತೀಕಾರ ತೀರಿಸಿಕೊಳ್ಳುತ್ತೇವೆಂದ ಟೆಹ್ರಾನ್, ಸಂಘರ್ಷ ಮತ್ತೆ ಉಲ್ಬಣ

ಅಮೆರಿಕದ ಅತಿಯಾದ ಬೇಡಿಕೆ-ದ್ವಂದ್ವ ನೀತಿ ವಿರುದ್ಧ ಇರಾನ್ ಗರಂ: 2ನೇ ಹಂತದ ಶಾಂತಿ ಮಾತುಕತೆಗೆ ನಕಾರ, ಸಂಘರ್ಷ ಉಲ್ಬಣ ಸಾಧ್ಯತೆ

ಹಡಗು ವಶಕ್ಕೆ ಪ್ರತೀಕಾರ: ಅಮೆರಿಕಾ ನೌಕಾಪಡೆ ಮೇಲೆ ಇರಾನ್ ಡ್ರೋನ್ ದಾಳಿ, ಸಂಘರ್ಷ ಉಲ್ಬಣ

ಶಾಸಕ ಸತೀಶ್ ಸೈಲ್ ಪುತ್ರಿಗೆ 'ಮಿಸ್ ಇಂಡಿಯಾ' ಕಿರೀಟ!

'ಭಾರತೀಯ ಪೌರತ್ವ' ಪಡೆಯುವಂತೆ ಹಿರಿಯ ಆಟಗಾರನಿಂದ ಆಫರ್! ರಶೀದ್ ಖಾನ್ ಹೇಳಿದ್ದೇನು?

SCROLL FOR NEXT