ಕೆಲವೊಮ್ಮೆ ಒಂದು ಕೆಲಸಕ್ಕೆ ಹತ್ತಾರು ಕೈಗಳು ಸೇರಿದರೆ ಕೆಲಸ ಕೆಡುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆಯಲ್ಲಿ ಈಗ ಆಗಿರುವುದು ಇದೇ.
ಶಿವಕುಮಾರ್ ಅವರ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಉಸ್ತುವಾರಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹೀಗೆ ಹತ್ತಾರು ನಾಯಕರು ಹಸ್ತಕ್ಷೇಪ ಮಾಡಿ ಯಾರಿಗೂ ಸಮಾಧಾನವಿಲ್ಲದ ಸಂಪುಟ ವಿಸ್ತರಣೆಯಾಗಿದೆ. ಸಮಾಧಾನಪಟ್ಟವರು ಮಾತ್ರ ಸಂಪುಟ ಸೇರಿದ ಮಂತ್ರಿಗಳು ಅಷ್ಟೇ.
ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಬರೋಬ್ಬರಿ ಎರಡು ತಿಂಗಳ ನಂತರ ಸಂಪುಟ ವಿಸ್ತರಣೆಯಾಗಿದೆ. ಒಂದು ರೀತಿ ಗಜಪ್ರಸವ. ನಾನಾ ಕಸರತ್ತುಗಳನ್ನು ನಡೆಸಿ ಸಚಿವರ ಪಟ್ಟಿ ಸಿದ್ದ. ಎಲ್ಲ ನಾಯಕರದ್ದೂ ಅವರದ್ದೇ ಆದ ಪಟ್ಟಿಗಳು. ಕೊನೆಗೆ ಪಟ್ಟಿ ಹೊರಬಿದ್ದಾಗ ಇದು ಯಾರ ಪಟ್ಟಿ ಅಂದರೆ ಯಾರದ್ದೂ ಅಲ್ಲ; ಈ ಪಟ್ಟಿಯ ಸಂಪೂರ್ಣ ಹೊಣೆಗಾರಿಕೆ ಹೊತ್ತುಕೊಳ್ಳಲು ಪಟ್ಟಿ ಸಿದ್ದಪಡಿಸಲು ಕುಳಿತುಕೊಂಡ ಯಾವ ನಾಯಕರೂ ಸಿದ್ದರಿಲ್ಲ. ಬಿಡುಗಡೆಯಾದ ಪಟ್ಟಿಯಲ್ಲೂ ತಾಸಿಗೊಮ್ಮೆ ಕೆಲವು ಹೆಸರುಗಳ ಬದಲಾವಣೆ. ಪ್ರಮಾಣವಚನ ಸ್ವೀಕಾರಕ್ಕೆ ಹೊರಟವರು ಅರ್ಧದಾರಿಯಲ್ಲೇ ಮನೆಗೆ ವಾಪಸ್.
ಇದೊಂದು ರೀತಿ ಚೌಚೌ ಪಟ್ಟಿ. ಎಲ್ಲ ನಾಯಕರ ಸರ್ವಸಮ್ಮತ ಪಟ್ಟಿಯಂತೂ ಅಲ್ಲವೇ ಅಲ್ಲ. ಎಲ್ಲ ನಾಯಕರನ್ನೂ ಸಮಾಧಾನ ಮಾಡಲು ಹೋಗಿ ಯಾರಿಗೂ ಸಮಾಧಾನ ಇಲ್ಲ. ಕೊನೆಗೆ ಇದರ ಲೋಪ ಸುತ್ತಿಕೊಳ್ಳುವುದು ಮಾತ್ರ ಮುಖ್ಯಮಂತ್ರಿ ಶಿವಕುಮಾರ್ ಅವರ ಕೊರಳಿಗೆ. ಏಕೆಂದರೆ, ಇದು ಅವರ ಸಚಿವ ಸಂಪುಟ. ಆದರೆ, ಕೃತಿಯಲ್ಲಿ ಮಾತ್ರ ಸಚಿವ ಸಂಪುಟ ರಚನೆ, ವಿಸ್ತರಣೆ, ಪುನರ್ ರಚನೆ ಎಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ. ವಾಸ್ತವದಲ್ಲಿ ಅದು ಯಾವ ಪಕ್ಷದ ಮುಖ್ಯಮಂತ್ರಿಗೂ ಅನ್ವಯವೇ ಆಗುವುದಿಲ್ಲ.
ಸಚಿವ ಸಂಪುಟ ರಚನೆಯಲ್ಲಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ನೀಡಿದಷ್ಟು ಸ್ವಾತಂತ್ರ್ಯವನ್ನು ಶಿವಕುಮಾರ್ ಅವರಿಗೆ ಖಂಡಿತಾ ನೀಡಿಲ್ಲ. ಇದು ಸ್ಪಷ್ಟ. ಕಾರಣ ಹಲವು. ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆಯನ್ನು ನೋಡಿದರೆ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ. ಯಾವ ಮಾನದಂಡದ ಅಂದಾಜಿಗೂ ಸಿಗದ ಸಚಿವ ಸಂಪುಟ ವಿಸ್ತರಣೆ ಇದು.
ಹಿರಿಯರು, ಕಿರಿಯರ ಸಮತೋಲನದ ಸಚಿವ ಸಂಪುಟವೂ ಅಲ್ಲ, ಪೂರ್ಣ ಹಿರಿತನಕ್ಕೆ ಪ್ರಾಶಸ್ತ್ಯ ನೀಡಲಾಗಿದೆ ಎಂಬುದೂ ಇಲ್ಲ, ಇಲ್ಲವೇ ಹೊಸಮುಖಗಳಿಗೆ ಆದ್ಯತೆ ನೀಡಿ ಪ್ರಯೋಗ ನಡೆಸಲಾಗಿದೆ ಎಂದು ಹೇಳಿಕೊಳ್ಳುವ ಸ್ಥಿತಿಯಂತೂ ಇಲ್ಲವೇ ಇಲ್ಲ. ಅಹಿಂದ ವರ್ಗಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ ಎಂದರೆ ಸೂಕ್ಷ್ಮಾತಿಸೂಕ್ಷ್ಮ ಜಾತಿಗಳನ್ನು ಕಡೆಗಣಿಸಲಾಗಿದೆ. ಇನ್ನು ಯೋಗ್ಯತೆ, ಅರ್ಹತೆ ಎಂಬ ಮಾನದಂಡದ ಮಾತಂತೂ ದೂರವೇ ಉಳಿಯಿತು. ರಾಜಕಾರಣದಲ್ಲಿ ಈ ಮಾನದಂಡ ದೂರವಾಗಿ ದಶಕಗಳೇ ಉರುಳಿತು ಬಿಡಿ.
ಕರ್ನಾಟಕದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಮಹಿಳೆಯರೇ ಇಲ್ಲದ ಸಚಿವ ಸಂಪುಟ ಇದಾಗಿದೆ. ಕಾಂಗ್ರೆಸ್‌ನಲ್ಲಿ ಮಹಿಳಾ ಶಾಸಕರಿದ್ದರೂ ಒಬ್ಬರಿಗೂ ಅವಕಾಶ ಕಲ್ಪಿಸಿಲ್ಲ. ಮಹಿಳಾ ಮೀಸಲಾತಿಯ ಬಗ್ಗೆ ದೊಡ್ಡ ಮಾತುಗಳನ್ನು ಆಡುವ ಕಾಂಗ್ರೆಸ್ ವರಿಷ್ಠರು ಕರ್ನಾಟಕದಲ್ಲಿ ತಾವೇ ಸಿದ್ದಪಡಿಸಿ ಅನುಮೋದನೆ ನೀಡಿರುವ ಮಹಿಳೆಯರೇ ಇಲ್ಲದ ಈ ಸಚಿವ ಸಂಪುಟದ ಬಗ್ಗೆ ಏನು ಉತ್ತರಿಸುತ್ತಾರೆ?
ಒಂದು ಸ್ಥಾನ ಖಾಲಿ ಇದೆ. ಈ ಸ್ಥಾನಕ್ಕೆ ಮಹಿಳೆಯರನ್ನು ನೇಮಿಸಲಾಗುವುದು ಎಂದು ಕಾಂಗ್ರೆಸ್ ಹೇಳಬಹುದು. ಆದರೆ, ಸಚಿವ ಸ್ಥಾನದ ಪಟ್ಟಿಯಲ್ಲಿ ವಿಧಾನಪರಿಷತ್ ಸದಸ್ಯೆ ಚಿಕ್ಕಮಗಳೂರಿನ ಗಾಯತ್ರಿ ಶಾಂತೇಗೌಡ ಅವರ ಹೆಸರಿತ್ತು. ಕೊನೆ ಘಳಿಗೆಯಲ್ಲಿ ಅವರ ಹೆಸರನ್ನು ರದ್ದುಪಡಿಸಿದ್ದು ಏಕೆ? ಗಾಯತ್ರಿ ಹಿಂದುಳಿದ ಕುರುಬ ಸಮಾಜದವರು. ಇದೇ ಸಮಾಜದ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಗಾಯತ್ರಿ ಶಾಂತೇಗೌಡ ಬೆಲೆ ತೆರಬೇಕಾಯಿತೇ? ಗಾಯತ್ರಿ ಅವರಿಗೆ ಮಂತ್ರಿ ಸ್ಥಾನ ಕಲ್ಪಿಸಿದ್ದರೆ ಮಹಿಳೆಯರಿಗೆ ಹಾಗೂ ಕುರುಬ ಸಮಾಜಕ್ಕೂಪ್ರಾತಿನಿಧ್ಯ ನೀಡಿದಂತೆ ಆಗುತ್ತಿತ್ತು.
ವಿಧಾನಪರಿಷತ್ತಿನಿಂದ ಕುರುಬ ಸಮಾಜದ ಇಬ್ಬರಿಗೆ ಮಂತ್ರಿ ಸ್ಥಾನ ಕಲ್ಪಿಸಿದಂತೆ ಆಗುತ್ತಿತ್ತೆಂಬ ಕಾರಣದಿಂದ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ತಪ್ಪಿರಬಹುದು. ಈ ಎಲ್ಲ ಕಸರತ್ತಿನಲ್ಲಿ ಕುರುಬ ಸಮಾಜದ ಉತ್ತರ ಕರ್ನಾಟಕದ ಒಬ್ಬ ಶಾಸಕರಿಗೂ ಸಚಿವ ಸಂಪುಟದಲ್ಲಿ ಸ್ಥಾನ ದಕ್ಕಿಲ್ಲ. ಉತ್ತರ ಕರ್ನಾಟಕದಲ್ಲಿ ಕುರುಬ ಸಮಾಜದವರು ಅಧಿಕ ಸಂಖ್ಯೆಯಲ್ಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನತಾ ಪರಿವಾರ ಕಾಲದಿಂದಲೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅನುಯಾಯಿ. ಬಸವರಾಜ ಶಿವಣ್ಣನವರ ಜನತಾದಳ ಸರಕಾರದಲ್ಲಿ ಸಚಿವರಾಗಿದ್ದವರು. ಅವರಿಗೆ ಈಗ ಮಂತ್ರಿ ಸ್ಥಾನ ಕಲ್ಪಿಸಲು ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು. ಆದರೆ, ಪಟ್ಟಿ ಹೊರಬಿದ್ದಾಗ ಶಿವಣ್ಣನವರ ಹೆಸರೇ ನಾಪತ್ತೆ. ಇದು ಸಿದ್ದರಾಮಯ್ಯ ಅವರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಕೆಲವರನ್ನು ಸಚಿವ ಸಂಪುಟದಿಂದ ದೂರ ಇರಿಸಲು ಸಿದ್ದರಾಮಯ್ಯ ಯೋಜಿಸಿದ್ದರು. ಆದರೆ, ಕೊನೆಘಳಿಗೆಯಲ್ಲಿ ಸಚಿವರ ಪಟ್ಟಿಯಲ್ಲಿ ಅವರ ಹೆಸರು ನುಸುಳಿರುವುದು ಸಿದ್ದರಾಮಯ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ನೂತನ ಸಚಿವರ ಪ್ರಮಾಣವಚನ ಸಮಾರಂಭದಿಂದ ದೂರ ಉಳಿದು ಹೈಕಮಾಂಡ್‌ಗೆ ಸಂದೇಶ ರವಾನಿಸಿದರು. ಸಚಿವ ಸಂಪುಟ ವಿಸ್ತರಣೆಯಾಗಿ ನಾಲ್ಕು ದಿನಗಳಾದರೂ ಈ ಕುರಿತು ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಯೇ ಹೊರಬಿದ್ದಿಲ್ಲ. ಅತೃಪ್ತ ಶಾಸಕರ ಆಕ್ರೋಶಕ್ಕೂ ಮೌನವೇ ಅವರ ಉತ್ತರ.
ಈ ಸಚಿವ ಸಂಪುಟ ವಿಸ್ತರಣೆಯಲ್ಲೇ ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಕರಸತ್ತು ನಡೆದಿತ್ತು. ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಎಂ.ಬಿ.ಪಾಟೀಲರಿಗೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬಡ್ತಿ ಕೊಡುವ ಲೆಕ್ಕಾಚಾರವೂ ಇತ್ತು. ಇದು ಶಿವಕುಮಾರ್ ಅವರ ಕಾರ್ಯತಂತ್ರವಾಗಿತ್ತು. ಆದರೆ, ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಅವರ ಮಧ್ಯೆ ನಡೆದಿರುವ ಶೀತಲ ಸಮರದಿಂದ ಇದು ಕಾರ್ಯಗತಗೊಂಡಿಲ್ಲ ಎಂಬ ಮಾತು ಕಾಂಗ್ರೆಸ್ ವಲಯದಲ್ಲೇ ಹರಿದಾಡುತ್ತಿದೆ.
ಶಿವಕುಮಾರ್ ಸಚಿವ ಸಂಪುಟದಲ್ಲಿ ಇನ್ನೆರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಿದರೆ ಈಗ ಉಪ ಮುಖ್ಯಮಂತ್ರಿ ಹುದ್ದೆಯಲ್ಲಿರುವ ಡಾ. ಜಿ.ಪರಮೇಶ್ವರ್ ಅವರ ಮಹತ್ವ ಕಡಿಮೆಯಾಗುತ್ತದೆ ಎಂಬುದು ಸಿದ್ದರಾಮಯ್ಯ ಅವರ ವಾದ ಎನ್ನಲಾಗಿದೆ. ಸತೀಶ್ ಜಾರಕಿಹೊಳಿ ಅವರನ್ನು ಡಿಸಿಎಂ ಮಾಡುವುದಾದರೆ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೂ ಡಿಸಿಎಂ ಹುದ್ದೆ ನೀಡಬೇಕೆಂದು ಸಿದ್ದರಾಮಯ್ಯ ಹೊಸ ದಾಳ ಉರುಳಿಸಿದ್ದಾರೆ. ಹೀಗಾಗಿ, ಕೊನೆಘಳಿಗೆಯಲ್ಲಿ ಇನ್ನೂ ಎರಡು ಡಿಸಿಎಂ ಹುದ್ದೆಗಳ ಸೃಷ್ಟಿಯನ್ನು ಕೈಬಿಡಲಾಗಿದೆ. ಅಂದರೆ, ತೆರೆಮರೆಯಲ್ಲಿ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಮಧ್ಯೆ ಹಗ್ಗ-ಜಗ್ಗಾಟ ನಡೆಯುತ್ತಿರುವುದು ಸ್ಪಷ್ಟ.
ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆಯು ಸಿದ್ದರಾಮಯ್ಯ ಅವರ ರಾಜಕೀಯ ಏಳುಬೀಳುಗಳಲ್ಲಿ ಅವರೊಂದಿಗೆ ಹೆಜ್ಜೆ ಹಾಕಿದವರಲ್ಲಿ ಬೇಸರ ಮೂಡಿಸಿದೆ. ಡಾ.ಎಚ್.ಸಿ.ಮಹದೇವಪ್ಪ ಅವರು ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರು. ಈಗ ಸಚಿವ ಸ್ಥಾನ ಕೈತಪ್ಪಿ ಅಸಮಾಧಾನಗೊಂಡಿದ್ದಾರೆ. ಬಹಿರಂಗವಾಗಿ ಹೇಳಿಕೆಯನ್ನೂ ನೀಡಿಲ್ಲ. ಸಿದ್ದರಾಮಯ್ಯ ಅವರು ಗುರುವಾರ ಮೈಸೂರಿಗೆ ಆಗಮಿಸಿದಾಗಲೂ ಮಹದೇವಪ್ಪ ಅವರೊಂದಿಗೆ ಕಂಡು ಬರಲಿಲ್ಲ.
ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಉಚ್ಛಾಟಿಸಿದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದವರು ಡಾ. ಮಹದೇವಪ್ಪ. ಸಿದ್ದರಾಮಯ್ಯ ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಅವರ ಸಂಪುಟದಲ್ಲಿದ್ದರು. ಮುಖ್ಯಮಂತ್ರಿ ಸ್ಥಾನ ಹಸ್ತಾಂತರ ವಿಚಾರದಲ್ಲಿ ಮಹದೇವಪ್ಪ ಅವರು ಶಿವಕುಮಾರ್ ನಡೆಯನ್ನು ವಿರೋಧಿಸುತ್ತಾ ಬಂದಿದ್ದರು. ಸಿದ್ದರಾಮಯ್ಯ ಪರ ಗಟ್ಟಿಯಾಗಿ ನಿಂತಿದ್ದರು.
ಈ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಚ್.ಕೆ.ಪಾಟೀಲ್, ಬಿ.ಆರ್.ಪಾಟೀಲ್, ಟಿ.ಬಿ.ಜಯಚಂದ್ರ, ಡಾ.ಎಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ದಿನೇಶ್ ಗುಂಡೂರಾವ್ ಅವರಂತಹ ಹಿರಿಯ ನಾಯಕರನ್ನು ಪರಿಗಣಿಸಿಲ್ಲ. ಇದು ಮುಂಬರುವ ದಿನಗಳಲ್ಲಿ ಪಕ್ಷದ ಮೇಲೆ ಬೀರುವ ಪ್ರತಿಕೂಲ ಪರಿಣಾಮವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದೂ ಮುಖ್ಯ.
ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರನ್ನು ಎರಡು ತಿಂಗಳ ಹಿಂದೆ ಅತ್ಯಂತ ಸುಲಭವಾಗಿ, ಯಾವುದೇ ಗೊಂದಲವಿಲ್ಲದೆ ಹೈಕಮಾಂಡ್ ಕೆಳಗಿಳಿಸಿತ್ತು. ಸಿದ್ದರಾಮಯ್ಯ ಅವರ ನಡೆ ಅತ್ಯಂತ ಘನತೆಯಿಂದ ಕೂಡಿತ್ತು. ಈಗ ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಆಕ್ರೋಶ ಭುಗಿಲೆದ್ದಿದೆ. ಶಾಸಕರು ಯಾರಾದರೂ ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುತ್ತೇವೆ ಎಂದು ಮೊದಲು ಹೇಳಿದ್ದ ಶಿವಕುಮಾರ್ ಈಗ ಶಾಸಕರ ಮನೆಗಳಿಗೆ ಎಡತಾಕುತ್ತಿದ್ದಾರೆ. ಪರಿಸ್ಥಿತಿಯ ಗಂಭೀರತೆ ಅವರಿಗೆ ಅರಿವಾಗಿದೆ.
ಪ್ರಾದೇಶಿಕ ಸಮತೋಲನ, ಹಿರಿತನ, ಜಾತಿ ಸಮೀಕರಣ, ಹೊಸಬರಿಗೆ ಅವಕಾಶ ಎಲ್ಲವನ್ನೂ ಪರಿಗಣಿಸಿಯೇ ಸಚಿವ ಸಂಪುಟ ರಚಿಸಬೇಕಾಗುತ್ತದೆ. ಇದು ರಾಜಕೀಯ ಅನಿವಾರ್ಯ ಕೂಡ. ಯಾವುದೇ ಪಕ್ಷ ಅಧಿಕಾರದಲ್ಲಿದ್ದಾಗಲೂ ಆ ಸರ್ಕಾರದ ಸಚಿವ ಸಂಪುಟ ರಚನೆ, ಪುನರ್ ರಚನೆ, ವಿಸ್ತರಣೆ ಇರಲಿ ಇದರ ಬೆನ್ನಿಗೆ ಅಸಮಾಧಾನ ಭುಗಿಲೇಳುತ್ತದೆ. ಆದರೆ, ಹೀಗೆ ಭುಗಿಲೆದ್ದ ಅಸಮಾಧಾನವನ್ನು ಹೇಗೆ ಶಮನಗೊಳಿಸುತ್ತಾರೆ ಎಂಬುದೇ ಮುಖ್ಯ.
ಶಿವಕುಮಾರ್ ಅವರಿಗೆ 2028ರ ಅಸೆಂಬ್ಲಿ ಚುನಾವಣೆ ಮೇಲೆಯೇ ಕಣ್ಣು. ಹೀಗಿರುವಾಗ ಶಾಸಕಾಂಗ ಪಕ್ಷದ ನಾಯಕರಾಗಿ ಅವರು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಕುತೂಹಲಕಾರಿ.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com