ಹಲವಾರು ವರ್ಷಗಳ ಕಾಲ, ಭಾರತ ತನಗೆ ಹೆಮ್ಮೆ ಇಲ್ಲದ ಒಂದು ಬಿರುದನ್ನು ಹೊತ್ತುಕೊಂಡಿತ್ತು. ಅದೇನೆಂದರೆ, ಜಗತ್ತಿನ ಅತಿ ಹೆಚ್ಚು ಆಯುಧ ಆಮದು ಮಾಡುವ ರಾಷ್ಟ್ರಗಳಲ್ಲಿ ಭಾರತವೂ ಒಂದು ಎನ್ನುವುದಾಗಿತ್ತು. ಆದರೆ, ಆ ಚಿತ್ರಣ ಈಗ ನಿಧಾನವಾಗಿ ಬದಲಾಗುತ್ತಿದೆ. ಭಾರತ ಇಂದು ಕೇವಲ ತನ್ನ ರಕ್ಷಣಾ ಉಪಕರಣಗಳನ್ನು ತಾನೇ ನಿರ್ಮಿಸುತ್ತಿರುವುದು ಮಾತ್ರವಲ್ಲ, ಬದಲಿಗೆ ವಿದೇಶಗಳಿಗೆ ತನ್ನ ಆಯುಧ ವ್ಯವಸ್ಥೆಗಳನ್ನು ಮಾರಾಟ ಮಾಡುತ್ತಿದೆ. ಎಪ್ರಿಲ್ ತಿಂಗಳಲ್ಲಿ, ರಕ್ಷಣಾ ಸಚಿವಾಲಯ ಭಾರತದ ಆಯುಧ ರಫ್ತು 2025-26ನೇ ಸಾಲಿನಲ್ಲಿ ದಾಖಲೆಯ 38,424 ಕೋಟಿ ರೂಪಾಯಿ ದಾಖಲಿಸಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 62.66% ಹೆಚ್ಚಳವಾಗಿದೆ. ಈ ಅಸಾಧಾರಣ ಹೆಚ್ಚಳದ ಹಿಂದೆ ಒಂದು ಸರಳ ವಿಚಾರವಿದೆ. ಅದೇನೆಂದರೆ, ಭಾರತದಲ್ಲೇ ಆಯುಧಗಳನ್ನು ನಿರ್ಮಿಸಿ, ಅವುಗಳನ್ನು ಮಿತ್ರ ರಾಷ್ಟ್ರಗಳಿಗೆ ಮಾರಾಟ ಮಾಡುವುದು.
ಭಾರತದ ಈ ಸಾಧನೆಯನ್ನು ಇನ್ನಷ್ಟು ಮುಂದಕ್ಕೆ ಒಯ್ಯಬಲ್ಲ ಒಂದು ಉತ್ಪನ್ನವೆಂದರೆ, ಕಾಲ್ ಡ್ರೋನ್. ಇದನ್ನು ಒಡಿಶಾ ಮೂಲದ ಐಜಿ ಡಿಫೆನ್ಸ್ ಎನ್ನುವ ಸ್ಟಾರ್ಟಪ್ ಸಂಸ್ಥೆ ಅಭಿವೃದ್ಧಿ ಪಡಿಸಿದೆ. ಕಾಲ್ ಡ್ರೋನ್ ಅನ್ನು ಶಹೀದ್ ವರ್ಗದ, ದೀರ್ಘ ವ್ಯಾಪ್ತಿಯ ಏಕಮುಖ ದಾಳಿ ಡ್ರೋನ್ ಎಂದು ಪರಿಗಣಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಇದೊಂದು ಹಾರಾಡುವ ಯಂತ್ರವಾಗಿದ್ದು, ಇದು ತನ್ನೊಳಗೆ ಒಂದು ಬಾಂಬ್ ಹೊಂದಿರುತ್ತದೆ. ಇದು ಸ್ವತಂತ್ರವಾಗಿ ಬಹಳಷ್ಟು ದೂರ ಸಾಗಬಲ್ಲದಾಗಿದ್ದು, ಗುರಿಯನ್ನು ತಲುಪಿದಾಗ ತನ್ನನ್ನು ತಾನು ಸ್ಫೋಟಿಸಿ ನಾಶಪಡಿಸುತ್ತದೆ. ಇದು ಕಾರ್ಯಾಚರಣೆ ನಡೆಸಿ ಹಿಂದಕ್ಕೆ ಮರಳುವುದರಿಂದ, ಇದನ್ನು ಏಕಮುಖ ದಾಳಿ ಡ್ರೋನ್ ಎಂದು ಕರೆಯಲಾಗುತ್ತದೆ. ಇದನ್ನು ಒಂದು ಹಿಂದಕ್ಕೆ ಮರಳಿಸಲು ವಿಳಾಸವಿಲ್ಲದ ಪತ್ರಕ್ಕೆ ಹೋಲಿಸಬಹುದು. ಒಂದು ಬಾರಿ ಕಳುಹಿಸಿದರೆ, ಅಲ್ಲಿಗೆ ಕೆಲಸ ಮುಗಿಯುತ್ತದೆ.
'ಶಹೀದ್ ಕ್ಲಾಸ್' ಎನ್ನುವ ಪದವನ್ನೂ ನಾವು ವಿವರಿಸಿ ಅರ್ಥ ಮಾಡಿಕೊಳ್ಳಬೇಕು. ಶಹೀದ್ ಎನ್ನುವುದು ಇರಾನ್ ಅಭಿವೃದ್ಧಿ ಪಡಿಸಿರುವ ಡ್ರೋನ್‌ಗಳ ಕುಟುಂಬವಾಗಿದ್ದು, ಇತ್ತೀಚಿನ ಚಕಮಕಿಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆಯಿತು. ಇದರ ವಿನ್ಯಾಸ ಅತ್ಯಂತ ಸರಳ. ಇದು ಒಂದು ಸಣ್ಣ, ಡೆಲ್ಟಾ ಆಕಾರದ ದೇಹ, ಸರಳ ಇಂಜಿನ್ ಹೊಂದಿರುವ, ದುಬಾರಿ ಸ್ಟೆಲ್ತ್ ವೈಶಿಷ್ಟ್ಯಗಳಿಲ್ಲದ, ಬಹಳ ದೂರದಲ್ಲಿರುವ ಪೈಲಟ್ ನಿರಂತರ ನಿರ್ದೇಶನಗಳನ್ನು ನೀಡುವ ಆಯುಧವಾಗಿದೆ. ಗುರಿಯ ಸ್ಥಳವನ್ನು ಟೇಕಾಫ್‌ಗೆ ಮುನ್ನ ಡ್ರೋನ್‌ಗೆ ಒದಗಿಸಲಾಗುತ್ತದೆ. ಬಳಿಕ ಡ್ರೋನ್ ಮೌನವಾಗಿ ಅದರತ್ತ ಸಾಗುತ್ತದೆ. ಕಾಲ್ ಡ್ರೋನ್ ಇರಾನಿನ ಶಹೀದ್ ಡ್ರೋನ್ ಮತ್ತು ಅಮೆರಿಕದ ಲುಕಾಸ್ ಡ್ರೋನ್‌ಗಳ ವಿನ್ಯಾಸ ವಿಧಾನವನ್ನು ಅನುಸರಿಸುತ್ತದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದರ ಹಿಂದಿರುವ ಪರಿಕಲ್ಪನೆ ಸರಳ: ಕಡಿಮೆ ವೆಚ್ಚ, ಹೆಚ್ಚಿನ ವ್ಯಾಪ್ತಿ, ಭಾರೀ ಪರಿಣಾಮ.
ಐಜಿ ಡಿಫೆನ್ಸ್ ಸಂಸ್ಥೆಯ ಪ್ರಕಾರ, ಕಾಲ್ ಡ್ರೋನ್ ಗರಿಷ್ಠ 1,000 ಕಿಲೋಮೀಟರ್ ತನಕ ಕ್ರಮಿಸಿ, ಗಾಳಿಯಲ್ಲಿ ಏಳರಿಂದ ಎಂಟು ಗಂಟೆಗಳ ಕಾಲ ಉಳಿಯಬಲ್ಲದು. ಇದು ಗರಿಷ್ಠ 50 ಕೆಜಿ ತನಕ ಪೇಲೋಡ್‌ಗಳನ್ನು ಒಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಇಲ್ಲಿ ಪೇಲೋಡ್ ಎಂದರೆ ಡ್ರೋನ್ ಒಯ್ಯುವ ಸ್ಫೋಟಕಗಳು ಮತ್ತು ಉಪಕರಣಗಳನ್ನು ಸೂಚಿಸುತ್ತದೆ. ಡ್ರೋನ್ ಸಾಮಾನ್ಯವಾಗಿ ಪ್ರತಿ ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಸಾಗಬಲ್ಲದಾಗಿದ್ದು, 200 ಕಿಲೋಮೀಟರ್ ಗರಿಷ್ಠ ವೇಗವನ್ನು ತಲುಪಬಲ್ಲದು. ಇದು ಸಮುದ್ರ ಮಟ್ಟದಿಂದ ಸರಾಸರಿ 5,000 ಮೀಟರ್‌ಗಳಷ್ಟು ಎತ್ತರಕ್ಕೆ ಏರಬಲ್ಲದು. ಯುದ್ಧ ವಿಮಾನಗಳಿಗೆ ಹೋಲಿಸಿದರೆ, ಈ ಅಂಕಿ ಅಂಶಗಳು ಸಾಧಾರಣ ಎನ್ನುವಂತೆ ಕಾಣಬಹುದು. ಆದರೆ, ಕಾಲ್ ಡ್ರೋನ್ ತಾಳ್ಮೆಯ ಕಾರ್ಯಾಚರಣೆಗಳಿಗೆ ವಿನ್ಯಾಸಗೊಂಡಿದೆಯೇ ಹೊರತು, ವೇಗಕ್ಕಲ್ಲ.
ಕಾಲ್ ಡ್ರೋನ್ ಆಧುನಿಕ ಮಾರ್ಗದರ್ಶನ ಮತ್ತು ಸಂಚರಣಾ (ನ್ಯಾವಿಗೇಶನ್) ವ್ಯವಸ್ಥೆಗಳನ್ನು ಹೊಂದಿದ್ದು, ಕಾರ್ಯಾಚರಣೆಯ ಸಂದರ್ಭದಲ್ಲಿ ಯಾರೂ ಪ್ರತಿ ಕ್ಷಣವೂ ಚಲಾಯಿಸುವ ಅಗತ್ಯವಿಲ್ಲದೆ ತಾನೇ ಮಾರ್ಗವನ್ನು ಹುಡುಕಿಕೊಂಡು ಸಾಗುತ್ತದೆ. ಇದು ಒಂದು ಲಾಯ್ಟರಿಂಗ್ ಮ್ಯುನಿಷನ್ ಆಗಿಯೂ ಕಾರ್ಯಾಚರಿಸುತ್ತದೆ. ಈ ಪದ ಏನೋ ದೊಡ್ಡದಾಗಿ ಕಂಡರೂ, ಇರದ ಅರ್ಥ ಸರಳವಾಗಿದೆ. ಕಾಲ್ ಡ್ರೋನ್ ಒಂದೇ ಪ್ರದೇಶದ ಮೇಲೆ ದೀರ್ಘಕಾಲ ತೇಲುತ್ತಾ, ಸರಿಯಾದ ಸಮಯಕ್ಕೆ ಕಾಯುತ್ತದೆ. ಆ ಸಮಯ ಬಂದಾಗ, ಅದು ಗುರಿಯತ್ತ ಧುಮುಕುತ್ತದೆ. ಇದನ್ನು ಒಂದು ಮನೆಯ ಹೊರಗೆ, ಇಂಜಿನ್ ಚಾಲ್ತಿಯಲ್ಲಿಟ್ಟು ಕಾಯುತ್ತಿರುವ ಟ್ಯಾಕ್ಸಿಗೆ ಹೋಲಿಸಬಹುದು. ಪ್ರಯಾಣಿಕರು ಹತ್ತಿ ಕುಳಿತ ಬಳಿಕವೇ ಆ ಟ್ಯಾಕ್ಸಿ ಚಲಿಸುತ್ತದೆ. ಈ ಡ್ರೋನ್ ಮೂಲಭೂತ ವ್ಯವಸ್ಥೆಗಳ ಮೇಲೆ, ರೇಡಾರ್ ಕೇಂದ್ರಗಳ ಮೇಲೆ, ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ, ಮತ್ತು ಶತ್ರು ಪ್ರದೇಶಗಳ ಒಳಗಿರುವ, ಕನಿಷ್ಠ ರಕ್ಷಣೆ ಹೊಂದಿರುವ ಪ್ರದೇಶಗಳ ಮೇಲೆ ದಾಳಿ ನಡೆಸಬಲ್ಲದು. ಇದನ್ನು ರಾಕೆಟ್ ಅಸಿಸ್ಟೆಡ್ ಟೇಕಾಫ್ ವಿಧಾನದಿಂದ ಅಥವಾ ನೇರವಾಗಿ ಒಂದು ವಾಹನದಿಂದಲೂ ಉಡಾವಣೆಗೊಳಿಸಬಹುದು.
ಕಾಲ್ ಡ್ರೋನ್ ಕುರಿತು ವಿದೇಶಗಳಿಂದಲೂ ಹೆಚ್ಚಿನ ಆಸಕ್ತಿ ಕಂಡುಬರುತ್ತಿದೆ. ಆಗಸ್ಟ್ 5, ಬುಧವಾರದಂದು, ಹಲವು ಗಲ್ಫ್ ರಾಷ್ಟ್ರಗಳು ತಮ್ಮ ಯುದ್ಧ ರಂಗದ ಅವಶ್ಯಕತೆಗಳಿಗಾಗಿ ಕಾಲ್ ಡ್ರೋನ್ ಖರೀದಿಗೆ ಆಸಕ್ತಿ ತೋರಿಸಿವೆ ಎಂದು ಐಜಿ ಡಿಫೆನ್ಸ್ ಹೇಳಿಕೊಂಡಿದೆ. ಪಶ್ಚಿಮ ಏಷ್ಯಾದಲ್ಲಿ ತಲೆದೋರಿರುವ ಉದ್ವಿಗ್ನ ಪರಿಸ್ಥಿತಿಯ ಕಾರಣದಿಂದ, ಈಗ ಅಗ್ಗದ, ದೀರ್ಘ ವ್ಯಾಪ್ತಿಯ ಡ್ರೋನ್‌ಗಳು ಅತಿಹೆಚ್ಚು ಮೌಲ್ಯ ಪಡೆದುಕೊಂಡಿವೆ ಎಂದು ಫಸ್ಟ್ ಪೋಸ್ಟ್ ವರದಿ ಹೇಳಿದೆ. ಡ್ರೋನ್ ವ್ಯಾಪಾರದ ಕುರಿತಂತೆ ಮಾತುಕತೆಗಳು ಸಾಕಷ್ಟು ಪ್ರಗತಿ ಹೊಂದಿದ್ದು, ಈ ಹಣಕಾಸು ವರ್ಷದಲ್ಲೇ ಒಂದಷ್ಟು ಒಪ್ಪಂದಗಳಿಗೆ ಸಹಿ ಹಾಕಬಹುದು ಎಂದು ಮೂಲಗಳು ಹೇಳಿವೆ. ಇದೇ ಅವಧಿಯಲ್ಲಿ ಮೊದಲ ಹಂತದ ರಫ್ತು ಭಾರತೀಯ ನೆಲದಿಂದ ಆರಂಭಗೊಳ್ಳಬಹುದು ಎನ್ನುವ ನಿರೀಕ್ಷೆಗಳಿವೆ.
ದ ಪ್ರಿಂಟ್ ಜೊತೆ ಮಾತನಾಡಿದ ಐಜಿ ಡಿಫೆನ್ಸ್ ಸಂಸ್ಥೆ, ತಾನು ಎಲ್ಲ ರಫ್ತು ಅನುಮತಿಗಳನ್ನು ಪಡೆದ ಬಳಿಕ, ಭಾರತ ಸರ್ಕಾರದಿಂದ ಅನುಮೋದನೆ ಸ್ವೀಕರಿಸಿದ ಬಳಿಕ, ಮಿತ್ರ ರಾಷ್ಟ್ರಗಳಿಗೆ ನಂಬಿಕಾರ್ಹ ದೇಶೀಯ ನಿರ್ಮಾಣದ ಆಯುಧಗಳ ಪೂರೈಕೆದಾರನಾಗಬೇಕು ಎನ್ನುವ ಭಾರತದ ಗುರಿ ಸಾಧನೆಗೆ ಕಾಲ್ ಡ್ರೋನ್ ನೆರವಾಗಲಿದೆ ಎಂದು ಅಭಿಪ್ರಾಯ ಪಟ್ಟಿದೆ. ರಕ್ಷಣಾ ವ್ಯಾಪಾರದಲ್ಲಿ, ಇಂತಹ ಅನುಮತಿ ಮತ್ತು ಅನುಮೋದನೆಗಳು ಆಯುಧಗಳನ್ನು ಯಾರು ಖರೀದಿಸುತ್ತಾರೆ, ಯಾವಾಗ ಖರೀದಿಸುತ್ತಾರೆ ಎನ್ನುವುದನ್ನು ನಿರ್ಧರಿಸುತ್ತವೆ.
ಕಾಲ್ ಡ್ರೋನನ್ನು ಭಾರತದ ಅತ್ಯಂತ ಯಶಸ್ವಿ ರಕ್ಷಣಾ ರಫ್ತಾದ ಬ್ರಹ್ಮೋಸ್ ಕ್ಷಿಪಣಿಯ ಜೊತೆ ಹೋಲಿಸಲಾಗುತ್ತಿದೆ. ಭಾರತದ ಡಿಆರ್‌ಡಿಒ ಮತ್ತು ರಷ್ಯಾದ ಎನ್‌ಪಿಒ ಮಶಿನೊಸ್ಟ್ರೊಯೆನಿಯಾಗಳು ಜಂಟಿಯಾಗಿ ಅಭಿವೃದ್ಧಿ ಪಡಿಸಿರುವ ಈ ಸೂಪರ್‌ಸಾನಿಕ್ ಕ್ಷಿಪಣಿ ತನ್ನ ವೇಗ, ನಿಖರತೆ, ಮತ್ತು ಭೂಮಿ, ಸಮುದ್ರ ಹಾಗೂ ಆಕಾಶಗಳಿಂದ ಉಡಾವಣೆಗೊಳ್ಳಬಲ್ಲ ಸಾಮರ್ಥ್ಯಕ್ಕೆ ಶ್ಲಾಘಿಸಲ್ಪಟ್ಟಿದೆ. ಆಪರೇಷನ್ ಸಿಂದೂರ ಕಾರ್ಯಾಚರಣೆಯ ಸಂದರ್ಭದಲ್ಲಿ ಇದರ ಸಾಮರ್ಥ್ಯ ಪ್ರದರ್ಶನ ವಿದೇಶಗಳ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಿತು. ಫಿಲಿಪೈನ್ಸ್ 2022ರಲ್ಲಿ ಕ್ಷಿಪಣಿಗಾಗಿ 375 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿತು. ಇದರ ಬಳಿಕ, ವಿಯೆಟ್ನಾಂ ಸಹ ಒಪ್ಪಂದ ಮಾಡಿಕೊಂಡಿತು. ಜುಲೈ ತಿಂಗಳ ಆರಂಭದಲ್ಲಿ, ಭಾರತ ಇಂಡೋನೇಷ್ಯಾಗೆ ಬ್ರಹ್ಮೋಸ್ ರಫ್ತನ್ನು ಘೋಷಿಸಿತು. ಇನ್ನು ಅಲ್ಜೀರಿಯಾ, ಗ್ರೀಸ್, ಈಜಿಪ್ಟ್, ಯುಎಇ ಮತ್ತು ಚಿಲಿಗಳು ಬ್ರಹ್ಮೋಸ್ ಖರೀದಿಗೆ ಆಸಕ್ತಿ ತೋರಿವೆ.
ಇಂಡೋ ಪೆಸಿಫಿಕ್ ಪ್ರದೇಶದ ಸಾಕಷ್ಟು ದೇಶಗಳು ಜಂಟಿ ಮಿಲಿಟರಿ ಮೈತ್ರಿಕೂಟಗಳಿಗೆ ಸೇರ್ಪಡೆಯಾಗುವ ಬದಲು, ಎ2/ಎಡಿ ಆಯುಧಗಳನ್ನು ಹೊಂದುವ ಮೂಲಕ ಬಲವರ್ಧನೆ ಹೊಂದುತ್ತಿವೆ ಎಂದು ದ ಹಿಂದೂ ವರದಿ ಮಾಡಿದೆ. ಈ ಆಯುಧಗಳು ಶತ್ರುಗಳು ಸುಲಭವಾಗಿ ತಮ್ಮ ಪ್ರದೇಶವನ್ನು ಪ್ರವೇಶಿಸಿ, ಕಾರ್ಯಾಚರಣೆ ನಡೆಸದಂತೆ ತಡೆಯುತ್ತವೆ. ಇವು ಒಂದು ಬಲವಾದ ಬೀಗ ಮತ್ತು ಸಕ್ರಿಯ ಕಾವಲುಗಾರನ ಸಂಯೋಜನೆಯ ರೀತಿಯಲ್ಲಿ ಕಾರ್ಯಾಚರಿಸಿ, ಶತ್ರುಗಳು ತೊಂದರೆ ನೀಡಲು ಯೋಚಿಸುವ ಮುನ್ನವೇ ಅವರನ್ನು ಹಿಂಜರಿಯುವಂತೆ ಮಾಡುತ್ತವೆ. ಭಾರತದಲ್ಲಿ, ಸರ್ಕಾರಿ ಸ್ವಾಮ್ಯದ ರಕ್ಷಣಾ ಸಂಸ್ಥೆಗಳು ತಮ್ಮ ರಫ್ತನ್ನು 151% ಹೆಚ್ಚಿಸಿದ್ದು, ಈಗ 21,071 ಕೋಟಿ ರೂಪಾಯಿ ಮೌಲ್ಯ ಹೊಂದಿವೆ. ಖಾಸಗಿ ಕಂಪನಿಗಳು ಇದೇ ಅವಧಿಯಲ್ಲಿ 14% ಹೆಚ್ಚಳ ಕಂಡಿದ್ದು, 17,353 ಕೋಟಿ ರೂಪಾಯಿ ಪ್ರಗತಿ ಸಾಧಿಸಿವೆ. ಭಾರತ ಈಗ 145 ರಫ್ತುದಾರರ ಮೂಲಕ 80ಕ್ಕೂ ಹೆಚ್ಚು ದೇಶಗಳಿಗೆ ಮಾರಾಟ ಮಾಡುತ್ತಿದೆ. ಭಾರತದ ಮುಂದಿನ ಗುರಿ 2029-30ರ ವೇಳೆಗೆ 50,000 ಕೋಟಿ ರೂಪಾಯಿ ಸಾಧಿಸುವುದಾಗಿದೆ. ಕಾಲ್ ಡ್ರೋನ್ ಈ ಸಾಧನೆ ನಿರ್ಮಿಸಲು ಭಾರತಕ್ಕೆ ನೆರವಾಗುವ ನಿರೀಕ್ಷೆಗಳಿವೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com