ಅತಿಯಾದರೆ ಅಮೃತವೂ ವಿಷವೇ. ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆಯನ್ನು ಸಿದ್ದರಾಮಯ್ಯ ಅವರಿಂದ ಡಿ.ಕೆ.ಶಿವಕುಮಾರ್ ಅವರಿಗೆ ವಹಿಸಿದ ನಂತರ ಪ್ರತಿಯೊಂದಕ್ಕೂ ತನ್ನನ್ನೇ ಕೇಳಬೇಕೆಂಬ ಧೋರಣೆ ತಳೆದಿದೆ. ಒಂದು ರಾಜ್ಯದ ತನ್ನ ಪಕ್ಷದ ಸರಕಾರದಲ್ಲಿ ಯಾರಿಗೆ ಯಾವ ಖಾತೆ ನೀಡಬೇಕೆಂಬುದನ್ನೂ ಕಾಂಗ್ರೆಸ್ ವರಿಷ್ಠ ಮಂಡಳಿ ನಿರ್ಧರಿಸಬೇಕೇ? ರಾಜ್ಯ ನಾಯಕತ್ವ ಅಷ್ಟೂ ಸಮರ್ಥವಿಲ್ಲವೇ? ಕರ್ನಾಟಕದ ಕಾಂಗ್ರೆಸ್ ಸರಕಾರದ್ದು ಈಗ ಎಲ್ಲದ್ದಕ್ಕೂ ಹೈಕಮಾಂಡ್ ಕಡೆ ಮುಖ ಮಾಡಬೇಕಾದ ದುಸ್ಥಿತಿ. ಆಡಳಿತಕ್ಕೂ ಪೆಟ್ಟು.
ಹೈಕಮಾಂಡ್ ಶಿವಕುಮಾರ್ ಕೈ ಕಟ್ಟಿ ಹಾಕಿದೆ. ಶಿವಕುಮಾರ್ ಅವರದು ಈಗ ಹೈಕಮಾಂಡ್ ಮುಂದೆ ಕೈಕಟ್ಟಿ ನಿಲ್ಲಬೇಕಾದ ಸ್ಥಿತಿ. ಇದು ಸರಕಾರದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಲಿದೆ. ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೂ ಧಕ್ಕೆ.
ಕಾಂಗ್ರೆಸ್ ಹೈಕಮಾಂಡ್ ಇಲ್ಲಿ ಮೂರು ಹಂತಗಳಲ್ಲಿ ಎಡವಿದೆ. ಮೊದಲು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿದ್ದ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಹುದ್ದೆ ಹಸ್ತಾಂತರ ಕುರಿತು ಜಟಾಪಟಿ ಉಂಟಾದಾಗ ಹೈಕಮಾಂಡ್ ದಿವ್ಯ ಮೌನ ತಳೆಯಿತು. ಸುಮಾರು ಆರು ತಿಂಗಳಿಗೂ ಹೆಚ್ಚು ಕಾಲ ಈ ಗೊಂದಲ ಮುಂದುವರಿದರೂ ಹೈಕಮಾಂಡ್ ಮದ್ದು ಅರೆಯಲೇ ಇಲ್ಲ. ಆಡಳಿತದ ಮೇಲೆ ಇದು ಪ್ರತಿಕೂಲ ಪರಿಣಾಮ ಬೀರಿತು. ಸಾಕಷ್ಟು ಹಾನಿಯಾದ ನಂತರವೇ ಗೊಂದಲಕ್ಕೆ ತೆರೆ ಎಳೆಯಿತು.
ಹೈಕಮಾಂಡ್ ಮತ್ತೆ ಎಡವಿದ್ದು ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆಯಲ್ಲಿ. ಶಿವಕುಮಾರ್ ಸಂಪುಟ ವಿಸ್ತರಿಸಲು ಎರಡು ತಿಂಗಳು ಬೇಕಾಯಿತು. ಇದಕ್ಕೆ ಮತ್ತೆ ಕಾರಣ ಹೈಕಮಾಂಡೇ. ಅಳೆದು ತೂಗಿ ಸಚಿವರ ಪಟ್ಟಿ ಸಿದ್ದಪಡಿಸಿದರೂ ಶಾಸಕರ ಅಸಮಾಧಾನ ತಡೆಯಲು ಸಾಧ್ಯವಾಗಲಿಲ್ಲ. ಸಚಿವರ ಪಟ್ಟಿ ಸಿದ್ದಪಡಿಸುವಾಗ ಎಲ್ಲರೂ ಇದರಲ್ಲಿ ಹಸ್ತಕ್ಷೇಪ ಮಾಡಿದ್ದೇ ಕೆಲಸ ಕೆಡುವಂತಾಯಿತು. ಪಟ್ಟಿ ಹೊರಬಿದ್ದಾಗ ಯಾರಿಗೂ ಸಮಾಧಾನವಾಗದೇ ಆಕ್ರೋಶ ಸ್ಫೋಟಿಸಿತು. ಈಗ ಇನ್ನೊಂದು ಸಚಿವ ಹುದ್ದೆ ಮಾತ್ರ ಖಾಲಿ ಇದೆ. ಆದರೂ, ಸಚಿವ ಸಂಪುಟ ವಿಸ್ತರಣೆಯ ಗೊಂದಲ ಬಗೆಹರಿದಿಲ್ಲ. ಅದು ಬೂದಿ ಮುಚ್ಚಿದ ಕೆಂಡ. ಹೊತ್ತಿ ಉರಿಯಲು ಒಂದು ಸಣ್ಣ ಕಿಡಿ ಸಾಕು.
ಹೈಕಮಾಂಡ್ ಮೂರನೇ ಬಾರಿಗೆ ಎಡವಿದ್ದು ಸಚಿವರ ಖಾತೆ ಹಂಚಿಕೆಯಲ್ಲಿ. ಸಚಿವರಾಗಿ 19 ಮಂದಿ ಪ್ರಮಾಣವಚನ ಸ್ವೀಕರಿಸಿದರೂ ಅವರಿಗೆ ಹತ್ತು ದಿನಗಳ ಕಾಲ ಖಾತೆಗಳನ್ನೇ ಹಂಚಲಿಲ್ಲ. ಇದಕ್ಕೂ ಹೈಕಮಾಂಡೇ ಕಾರಣ. ವಿಧಾನಮಂಡಲ ಅಧಿವೇಶನ ಆಗಸ್ಟ್ 13 ರಿಂದ ಆರಂಭವಾಗದೇ ಇದ್ದಿದ್ದರೆ ಖಾತೆ ಹಂಚಿಕೆ ಇನ್ನೂ ವಿಳಂಬವಾಗಿದ್ದರೂ ಆಶ್ಚರ್ಯವಿರಲಿಲ್ಲ.
ಮುಖ್ಯಮಂತ್ರಿಯಾಗಿ ಶಿವಕುಮಾರ್ ಹುರುಪಿನಿಂದಲೇ ಅಧಿಕಾರ ಸ್ವೀಕರಿಸಿದರು. ಮುಖ್ಯಮಂತ್ರಿ ಹುದ್ದೆ ಪಡೆಯಲು ಅವರ ತಾಳ್ಮೆ, ನಡೆಯೂ ಗಮನಾರ್ಹವೇ. ಮುಖ್ಯಮಂತ್ರಿಯಾದ ನಂತರ ಪ್ರಾರಂಭದ ಎರಡು ತಿಂಗಳ ಆಡಳಿತ ಹೊಸ ದಿಕ್ಕಿನತ್ತ ಸಾಗಿದಂತೆ ಗೋಚರಿಸಿತು. ನಿಧಾನವಾಗಿ ಆಡಳಿತದ ಮೇಲೆಯೂ ಹಿಡಿತ ಸಾಧಿಸಿದರು. ಸಡಿಲಗೊಂಡಿದ್ದ ಆಡಳಿತ ಯಂತ್ರದ ನಟ್ಟು ಬೋಲ್ಟು ಟೈಟ್ ಮಾಡುತ್ತಿದ್ದರು. ಸರಕಾರಕ್ಕೆ ಒಂದು ತಾಜಾತನ ಬಂದಿರುವ ಭಾವನೆಯೂ ಮೂಡಿತ್ತು. ಅಷ್ಟೊತ್ತಿಗೆ ಎದುರಾದ ಸಚಿವ ಸಂಪುಟ ವಿಸ್ತರಣೆಯ ಗೊಂದಲ ಈ ತಾಜಾತನವನ್ನು ಮರೆಸಿತು. ಶಿವಕುಮಾರ ಅವರ ವೇಗಕ್ಕೆ ಬ್ರೇಕ್ ಹಾಕಿತು.
ಕೊಟ್ಟ ಮಾತಿನಂತೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿ ಎಂದು ಹೈಕಮಾಂಡ್ ಎದುರು ಪಟ್ಟು ಹಾಕಿ ಪಟ್ಟ ಗಿಟ್ಟಿಸಿಕೊಂಡವರು ಶಿವಕುಮಾರ್. ಅವರಿಗೆ ಈಗ ಅದೇ ‘ಕೊಟ್ಟ ಮಾತು’ ತಿರುಗುಬಾಣವಾಗಿದೆ. ಬೆಂಗಳೂರಿನ ಎಂ.ಕೃಷ್ಣಪ್ಪ, ಮೈಸೂರಿನ ತನ್ವೀರ್ ಸೇಠ್, ತುಮಕೂರಿನ ಟಿ.ಬಿ.ಜಯಚಂದ್ರ ಅವರು ಶಿವಕುಮಾರ್ ಅವರ ಎದುರು ಕೊಟ್ಟ ಮಾತಿನಂತೆ ನಡೆದುಕೊಳ್ಳಿ ಎಂಬ ದಾಳವನ್ನು ಉರುಳಿಸುತ್ತಿದ್ದಾರೆ. ಶಿವಕುಮಾರ್ ಅವರಿಗೆ ತಮ್ಮ ಅತ್ಯಾಪ್ತರನ್ನೇ ಸಂಪುಟಕ್ಕೆ ತೆಗೆದುಕೊಳ್ಳಲು ಸಾಧ್ಯವಾಗದ ಸ್ಥಿತಿ. ಹೈಕಮಾಂಡ್‌ಗೆ ಸಂಪೂರ್ಣ ಶರಣಾಗತರಾದರೆ ಆಗುವ ಪರಿಸ್ಥಿತಿ.
ಈ ಹಿಂದೆ ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಿಂದಲೇ ಮುಖ್ಯಮಂತ್ರಿಯಾದಾಗ ಸಚಿವ ಸಂಪುಟ ರಚನೆ, ಪುನರ್ ರಚನೆ, ವಿಸ್ತರಣೆ, ಖಾತೆ ಹಂಚಿಕೆಯಲ್ಲಿ ಹೈಕಮಾಂಡ್ ಈ ಪ್ರಮಾಣದಲ್ಲಿ ಹಸ್ತಕ್ಷೇಪ ನಡೆಸಿರಲಿಲ್ಲ. ಸಿದ್ದರಾಮಯ್ಯ ಅವರಂತೂ ತಮ್ಮತನವನ್ನು ಢಾಳಾಗಿ ಪ್ರದರ್ಶಿಸಿದ್ದರು. ತಮ್ಮ ರಾಜಕೀಯ ಬಲವನ್ನು ಹೈಕಮಾಂಡ್ ಎದುರು ಅಗತ್ಯಬಿದ್ದಾಗ ತೋರಿಸಿದ್ದರು. ಅದೇ ವೇಳೆ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡುವಂತೆ ಸೂಚಿಸಿದಾಗ ಯಾವುದೇ ಒತ್ತಡಕ್ಕೂ ಮಣಿಯದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಅತ್ಯಂತ ಘನತೆಯಿಂದ ವರ್ತಿಸಿ ದೇಶದ ಗಮನ ಸೆಳೆದವರು.
ರಾಹುಲ್ ಗಾಂಧಿ ತಮ್ಮ ರಾಜೀನಾಮೆ ಕೇಳಿದ್ದರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಬೇಸರವಿರುವುದು ನಿಜ. ಸ್ವಲ್ಪ ದಿನಗಳ ಕಾಲಾವಕಾಶವನ್ನೂ ನೀಡದೇ ತಕ್ಷಣವೇ ರಾಜೀನಾಮೆ ಪತ್ರ ಸಲ್ಲಿಸಬೇಕೆಂದು ತಾಕೀತು ಮಾಡಿದ್ದರ ಬಗ್ಗೆ ನೋವಿದೆ. ಆದರೆ, ಇದನ್ನು ಅವರು ಬಹಿರಂಗವಾಗಿ ತೋಡಿಕೊಂಡಿಲ್ಲ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಹೆಚ್ಚು ಮಾತಾಡುತ್ತಿಲ್ಲ. ಅದರಲ್ಲೂ ಆಗಸ್ಟ್ 3 ರಂದು ಸಚಿವ ಸಂಪುಟ ವಿಸ್ತರಣೆಯಾದ ನಂತರ ರಾಷ್ಟ್ರ ಹಾಗೂ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ. ಮಾಧ್ಯಮದಿಂದಲೂ ಅಂತರ ಕಾಪಾಡಿಕೊಂಡಿದ್ದಾರೆ. ಇದು ಸಿದ್ದರಾಮಯ್ಯ ಅವರ ಸ್ವಭಾವಕ್ಕೆ ಸ್ವಲ್ಪ ಭಿನ್ನ ವರ್ತನೆ. ಇದಕ್ಕೆ ಕಾರಣವೂ ಇದೆ. ಅವರ ದಿವ್ಯಮೌನದ ಹಿಂದೆ ರಾಜಕೀಯ ಲೆಕ್ಕಾಚಾರವೂ ಇರಬಹುದು.
ಸಚಿವ ಸಂಪುಟ ವಿಸ್ತರಣೆ ಸಿದ್ದರಾಮಯ್ಯ ಅವರಿಗೆ ಪೂರ್ಣ ಸಮಾಧಾನ ತಂದಿಲ್ಲ. ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಬೇಕೆಂದು ಅವರು ಬಯಸಿದ್ದರೋ ಅವರಲ್ಲಿ ಒಂದಿಬ್ಬರು ಮಂತ್ರಿಯಾಗಿಲ್ಲ. ಸಂಪುಟಕ್ಕೆ ಒಂದಿಬ್ಬರನ್ನು ಸೇರಿಸಿರುವ ಬಗ್ಗೆ ಅವರಿಗೆ ಬಲವಾದ ಆಕ್ಷೇಪಗಳೂ ಇವೆ.
ಶಿವಕುಮಾರ ಸಚಿವ ಸಂಪುಟ ವಿಸ್ತರಣೆಯು ಸಿದ್ದರಾಮಯ್ಯ ಅವರನ್ನು ಅವರ ಒಂದು ಕಾಲದ ಒಡನಾಡಿಗಳಿಂದ ದೂರ ಸರಿಸಿದೆ. ಸಿದ್ದರಾಮಯ್ಯ ಅವರ ಆಪ್ತರಾದ ಶಾಸಕರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಬಿ.ಆರ್.ಪಾಟೀಲ್ ಹೀಗೆ ಕೆಲವು ನಾಯಕರು ಸಿದ್ದರಾಮಯ್ಯ ಅವರಿಂದ ಈಗ ಅಂತರ ಕಾಪಾಡಿಕೊಂಡಿದ್ದಾರೆ.
ಈ ಮೂವರು ನಾಯಕರಲ್ಲಿಯೂ ತಮಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಸಿದ್ದರಾಮಯ್ಯ ಅವರ ಮೇಲೆ ಬೇಸರವಿದೆ. ತಮ್ಮ ಪರವಾಗಿ ಸಿದ್ದರಾಮಯ್ಯ ಅವರು ಲಾಬಿ ಮಾಡಿಲ್ಲ ಎಂಬ ಮುನಿಸಿದೆ. ಸಿದ್ದರಾಮಯ್ಯ ಅವರು ತಮಗೆ ಮಂತ್ರಿ ಮಾಡ್ತೀನಿ ಅಂದಿದ್ದರು. ಅವರನ್ನು ನಂಬಿ ಕೆಟ್ಟೆ ಎಂದು ಅಳಂದ ಶಾಸಕ ಬಿ.ಆರ್.ಪಾಟೀಲ ಅಲವತ್ತುಕೊಂಡಿದ್ದಾರೆ.
ಡಾ.ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ ಡಾ.ಮಹದೇವಪ್ಪ ಅಭಿಮಾನಿಗಳ ಬಳಗ, ಪ್ರಗತಿಪರ, ದಲಿತ ಸಂಘಟನೆಗಳ ವತಿಯಿಂದ ಮೈಸೂರಿನಲ್ಲಿ ಗುರುವಾರ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಮುಖ್ಯಮಂತ್ರಿ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ಎಲ್ಲ ಬೆಳವಣಿಗೆಗಳು ಸಿದ್ದರಾಮಯ್ಯ ಪಾಳೆಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರುತ್ತದೆ.
ಡಾ.ಮಹದೇವಪ್ಪ, ವೆಂಕಟೇಶ್, ತನ್ವೀರ್ ಸೇಠ್ ಮೊನ್ನೆ ಮೈಸೂರಿನಲ್ಲಿ ಸಭೆ ಸೇರಿ ಚರ್ಚಿಸಿರುವುದು ಈ ನಿಟ್ಟಿನಲ್ಲಿ ಕುತೂಹಲಕಾರಿ ಬೆಳವಣಿಗೆ. ಸತತ ಆರು ಬಾರಿ ವಿಧಾನಸಭಾ ಸದಸ್ಯರಾಗಿರುವ ತನ್ವೀರ್ ಸೇಠ್ ಕಾಂಗ್ರೆಸ್‌ನಲ್ಲಿ ಮೊದಲಿನಿಂದಲೂ ಸಿದ್ದರಾಮಯ್ಯ ಅವರ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡವರು.
ಪ್ರತಿಪಕ್ಷ ಬಿಜೆಪಿಯು ಕಾಂಗ್ರೆಸ್ಸಿನ ಗೊಂದಲದ ಲಾಭ ಪಡೆಯುವ ಪರಿಸ್ಥಿತಿಯಲ್ಲಿಲ್ಲ. ಏಕೆಂದರೆ, ಬಿಜೆಪಿಯೇ ಒಳಜಗಳದಲ್ಲೇ ಮುಳುಗಿದೆ. ಇನ್ನು ಜೆಡಿಎಸ್ ಹಳೆಯ ಮೈಸೂರು ಪ್ರಾಂತ್ಯಕ್ಕೆ ಸೀಮಿತವಾದ ಪಕ್ಷ. ಕಾಂಗ್ರೆಸ್‌ನಲ್ಲಿರುವ ಅತೃಪ್ತ ಶಾಸಕರಿಗೆ ಜೆಡಿಎಸ್ ಬಾಗಿಲು ಸದಾ ತೆರೆದಿದೆ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಗಮನಾರ್ಹ. ಆದರೆ, ಈಗಿನ ಪರಿಸ್ಥಿತಿಯಲ್ಲಿ ಶಾಸಕರ ಪಕ್ಷಾಂತರದ ಬೆಳವಣಿಗೆಗಳು ಕಷ್ಟ. ವಿಧಾನಸಭೆ ಚುನಾವಣೆಗೆ ಇನ್ನು 20 ತಿಂಗಳು ಇರುವಾಗ ಯಾರಾದರೂ ಅತೃಪ್ತ ಶಾಸಕರು ರಾಜೀನಾಮೆ ನೀಡಿದರೆ ಅದೊಂದು ದುಸ್ಸಾಹಸವೇ ಸರಿ.
ಶಿವಕುಮಾರ್ 2028ರ ವಿಧಾನಸಭಾ ಚುನಾವಣೆಯ ಗೆಲುವಿನ ಗುರಿ ಹೊತ್ತು ಸಾಗಿರುವಾಗ ಶಾಸಕಾಂಗ ಪಕ್ಷದಲ್ಲಿ ಎದ್ದಿರುವ ಅಸಮಾಧಾನ ಅವರಿಗೆ ಮಗ್ಗುಲಮುಳ್ಳು. ಶಾಸಕಾಂಗ ಪಕ್ಷದಲ್ಲಿ ಗೊಂದಲ ಇಟ್ಟುಕೊಂಡು ಅವರು ಚುನಾವಣೆಗೆ ಸಜ್ಜುಗೊಳ್ಳುವುದು ದುಸ್ತರ. ಶಾಸಕಾಂಗ ಪಕ್ಷದಲ್ಲಿರುವ ಅತೃಪ್ತಿಯನ್ನು ನಿಭಾಯಿಸುವುದು ಶಿವಕುಮಾರ ನಾಯಕತ್ವಕ್ಕೆ ಒಂದು ಸವಾಲು.
- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com