ಸಿದ್ದರಾಮಯ್ಯ 
ಅಂಕಣಗಳು

ಸಿದ್ದರಾಮಯ್ಯರ ಮುಂದಿನ ಹಾದಿ ಏನು…. (ನೇರ ನೋಟ)

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ನಂತರ ರಾಜಕೀಯ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸುತ್ತಿಲ್ಲ. ಶಾಸಕಾಂಗ ಪಕ್ಷದ ಸಭೆಯಿಂದಲೂ ದೂರ ಉಳಿದರು. ಆದರೆ, ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡರು.

ಡಿ.ದೇವರಾಜ ಅರಸರು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿದ ಮೇಲೆ ಕರ್ನಾಟಕ ಕ್ರಾಂತಿರಂಗ ಎಂಬ ಪ್ರಾದೇಶಿಕ ಪಕ್ಷ ಕಟ್ಟಿದರು. ಕಾಂಗ್ರೆಸ್ ತಮ್ಮನ್ನು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತಿಗೊಳಿಸಿದ ನಂತರ ಎಸ್.ಬಂಗಾರಪ್ಪ ಕರ್ನಾಟಕ ಕಾಂಗ್ರೆಸ್‌ ಪಕ್ಷ ಸ್ಥಾಪಿಸಿದರು. ಈ ಇಬ್ಬರೂ ಹಿಂದುಳಿದ ವರ್ಗಗಳ ನಾಯಕರು ಆಗ ಕಾಂಗ್ರೆಸ್‌ ಹೈಕಮಾಂಡ್‌ಗೆ ಸಡ್ಡು ಹೊಡೆದಿದ್ದರು. ಕಾಂಗ್ರೆಸ್‌ ಹೈಕಮಾಂಡ್ ಈಗ ಅಹಿಂದ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದೆ. ಸಿದ್ದರಾಮಯ್ಯ ಅವರ ಮುಂದಿನ ಹಾದಿ ಏನು?

ದೇವರಾಜ ಅರಸು, ಬಂಗಾರಪ್ಪ ಮತ್ತು ಸಿದ್ದರಾಮಯ್ಯ ಅವರ ಮಧ್ಯೆ ಒಂದು ವ್ಯತ್ಯಾಸವಿದೆ. ಅರಸರಿಗೆ ನಂಬಿದವರೇ ಕೈಕೊಟ್ಟರು. ಇಂದಿರಾ ಗಾಂಧಿ ಹಾಗೂ ಅರಸರ ಮಧ್ಯೆ ಸಂಘರ್ಷ ನಡೆದಿತ್ತು. ಬಂಗಾರಪ್ಪ ಅವರನ್ನು ಪದಚ್ಯುತಗೊಳಿಸಲಾಗಿತ್ತು. ಆಗ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಬಂಗಾರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು. ಆದರೆ, ಸಿದ್ದರಾಮಯ್ಯ ಅವರ ವಿಚಾರದಲ್ಲಿ ಮುಖ್ಯಮಂತ್ರಿ ಗಾದಿ ಬಿಟ್ಟುಕೊಡುವ ಒಪ್ಪಂದ ಮೊದಲೇ ಆಗಿತ್ತು.

ಸಿದ್ದರಾಮಯ್ಯ ಕಳೆದ ಸುಮಾರು 20 ವರ್ಷಗಳಿಂದ ಕರ್ನಾಟಕದ ರಾಜಕಾರಣವನ್ನು ಆವರಿಸಿಕೊಂಡವರು. ರಾಜ್ಯ ರಾಜಕಾರಣ ಅವರ ಸುತ್ತಲೇ ಒಂದು ರೀತಿ ಗಿರಕಿ ಹೊಡೆದಿತ್ತು. ಅವರಂತೆ ಸತತ ಸುಮಾರು 17 ವರ್ಷಗಳ ಕಾಲ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದವರು ಮತ್ತೊಬ್ಬರಿಲ್ಲ. ಎರಡು ಬಾರಿ ಮುಖ್ಯಮಂತ್ರಿ. ಹೀಗಿರುವಾಗ ಮುಖ್ಯಮಂತ್ರಿ ಸ್ಥಾನದಿಂದ ಅವರು ಕೆಳಗಿಳಿದಿದ್ದು ತಕ್ಷಣಕ್ಕೆ ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರದಿರಬಹುದು. ಆದರೆ, ಮುಂದಿನ ವಿಧಾನಸಭಾ ಚುನಾವಣೆ ಹೊತ್ತಿಗೆ ಇದರ ಪರಿಣಾಮ ಗೋಚರಿಸಬಹುದು.

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ನಂತರ ರಾಜಕೀಯ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸುತ್ತಿಲ್ಲ. ಶಿವಕುಮಾರ್ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮ್ಮ ಶಿಫಾರಸುಗಳಿಗೆ ಹೈಕಮಾಂಡ್‌ ಮನ್ನಣೆ ನೀಡಿದರೂ ಒಂದಿಬ್ಬರ ವಿಚಾರದಲ್ಲಿ ಅವರ ಮಾತು ನಡೆದಿಲ್ಲ. ಇದು ಅವರಲ್ಲಿ ಬೇಸರ ಮೂಡಿಸಿದೆ. ಶಾಸಕಾಂಗ ಪಕ್ಷದ ಸಭೆಯಿಂದಲೂ ದೂರ ಉಳಿದರು. ಆದರೆ, ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡರು.

ಹೈಕಮಾಂಡ್‌ ಈಗ ಕರ್ನಾಟಕದ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಮಾತೇ ಅಂತಿಮ ಎಂಬ ಧೋರಣೆಯಿಂದ ದೂರ ಸರಿದಿದೆ. ಕರ್ನಾಟಕದ ಕಾಂಗ್ರೆಸ್‌ ರಾಜಕಾರಣದಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಮಣೆ ಹಾಕುವ ತನ್ನ ಹಿಂದಿನ ನೀತಿಯನ್ನು ಮತ್ತೆ ಚಾಲ್ತಿಗೆ ತಂದಂತೆ ಇದೆ. ವಿಧಾನಸಭೆಯ ಸ್ಪೀಕರ್‌, ಡೆಪ್ಯೂಟಿ ಸ್ವೀಕರ್‌, ವಿಧಾನಪರಿಷತ್‌ ಸಭಾಪತಿ, ಉಪ ಸಭಾಪತಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಇದು ಸ್ಪಷ್ಟ. ಇವರೆಲ್ಲರೂ ಮೂಲ ಕಾಂಗ್ರೆಸ್ಸಿಗರೇ.

ಸಿದ್ದರಾಮಯ್ಯ 2006ರಲ್ಲಿ ಕಾಂಗ್ರೆಸ್ ಸೇರಿದ ನಂತರ ಕರ್ನಾಟಕದ ಕಾಂಗ್ರೆಸ್ ನಲ್ಲಿ ಅವರೇ ಕೇಂದ್ರ ಬಿಂದುವಾಗಿದ್ದರು. ಎಸ್‌.ಎಂ.ಕೃಷ್ಣ ಅವರು 2008ರ ವಿಧಾನಸಭಾ ಚುನಾವಣಾ ಹೊತ್ತಿಗೆ ಮಹಾರಾಷ್ಟ್ರ ರಾಜ್ಯಪಾಲರ ಹುದ್ದೆ ತ್ಯಜಿಸಿ ಕರ್ನಾಟಕ ರಾಜಕಾರಣಕ್ಕೆ ವಾಪಸಾದರೂ ಸಿದ್ದರಾಮಯ್ಯ ಅವರ ಮಹತ್ವ ಕಡಿಮೆ ಆಗಿರಲಿಲ್ಲ. ಆಗ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ರಾಜಕಾರಣದಲ್ಲಿ ಸಕ್ರಿಯರಾಗಿದ್ದರೂ ಸಿದ್ದರಾಮಯ್ಯ ಅವರ ಸುತ್ತಲೇ ಕಾಂಗ್ರೆಸ್ ರಾಜಕಾರಣ ಗಿರಕಿ ಹೊಡೆಯುತ್ತಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು 2009ರಲ್ಲಿ ಲೋಕಸಭೆಗೆ ತೆರಳಿದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರದ್ದೇ ಅಧಿಪತ್ಯವಾಗಿತ್ತು.

ಸಿದ್ದರಾಮಯ್ಯ ಅವರಿಗೆ ಈಗ ಅವರ ಕೆಲವು ಒಡನಾಡಿಗಳು ಅಹಿಂದ ಚಳವಳಿಯನ್ನು ಮತ್ತೆ ಆರಂಭಿಸುವ ಸಲಹೆಗಳನ್ನು ನೀಡಿದ್ದಾರೆ. ಆದರೆ, ಈ ವಿಚಾರದಲ್ಲಿ ಅವರದು ಎಚ್ಚರಿಕೆ ನಡೆ. ಸೆಪ್ಟೆಂಬರ್‌ 6 ರಂದು ನಡೆಯುತ್ತಿರುವ ಹಿಂದುಳಿದ ಜಾತಿಗಳ ಸಮಾವೇಶದಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ. ತಮ್ಮ ಪಕ್ಷದ ಸರಕಾರ ಹಾಗೂ ತಮ್ಮ ಪುತ್ರ ಆ ಸರಕಾರದಲ್ಲಿ ಭಾಗಿಯಾಗಿರುವಾಗ ಸಿದ್ದರಾಮಯ್ಯ ಅಹಿಂದ ಚಳವಳಿ ವಿಚಾರದಲ್ಲಿ ಹೆಚ್ಚು ಲೆಕ್ಕಾಚಾರ ಹಾಕಬೇಕಾಗುತ್ತದೆ. ಇಲ್ಲವೇ ತಮ್ಮ ರಾಜಕೀಯ ಶಕ್ತಿಯನ್ನು ಸಂಕಷ್ಟ ಕಾಲದಲ್ಲಿ ಮತ್ತೊಮ್ಮೆ ಸಾಬೀತುಪಡಿಸಲು ನೇರವಾಗಿ ಅಖಾಡಕ್ಕೆ ಧುಮುಕಬೇಕಾಗುತ್ತದೆ. ಈ ಸಾಧ್ಯತೆ ಇವತ್ತಿನ ಸನ್ನಿವೇಶದಲ್ಲಿ ಕ್ಷೀಣ.

ಸಿದ್ದರಾಮಯ್ಯ ಅವರ ಮತ್ತೊಂದು ಸಂಕಟವೆಂದರೆ ಅವರ ರಾಜಕೀಯ ಏಳುಬೀಳುಗಳಲ್ಲಿ ಅವರ ಜೊತೆ ಹೆಜ್ಜೆ ಹಾಕಿದ್ದ ಒಡನಾಡಿಗಳು ಇವತ್ತು ಅವರಿಂದ ದೂರ ಸರಿದಿದ್ದಾರೆ. ಸಚಿವರಾದ ಸತೀಶ್‌ ಜಾರಕಿಹೊಳಿ, ಜಮೀರ್‌ ಅಹಮದ್ ಖಾನ್, ಶಾಸಕರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್‌ , ಬಿ.ಆರ್‌.ಪಾಟೀಲ್‌ ಹೀಗೆ ಅನೇಕರು ಇವತ್ತು ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಣದಲ್ಲಿ ಇಲ್ಲ. ಸತೀಶ್‌ ಜಾರಕಿಹೊಳಿ ಅವರಿಗೆ ತಮಗೆ ಉಪ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದ್ದು ಸಿದ್ದರಾಮಯ್ಯ ಎಂಬ ಬೇಸರವಿದೆ. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆ ಹಸ್ತಾಂತರದ ಗೊಂದಲದ ವೇಳೆ ಸತೀಶ್‌ ಜಾರಕಿಹೊಳಿ ತಮಗೆ ಕೈಕೊಟ್ಟರು ಎಂಬ ನೋವಿದೆ.

ಡಾ.ಮಹದೇವಪ್ಪ ಅವರಿಗೆ ತಮ್ಮನ್ನು ಮಂತ್ರಿ ಮಾಡಲು ಸಿದ್ದರಾಮಯ್ಯ ಪಟ್ಟು ಹಿಡಿಯಲಿಲ್ಲ ಎಂಬ ಮುನಿಸಿದೆ. ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಉಚ್ಛಾಟಿಸಿದಾಗ ಮಹದೇವಪ್ಪ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಿದ್ದರಾಮಯ್ಯ ಅವರೊಂದಿಗೆ ಗಟ್ಟಿಯಾಗಿ ನಿಂತವರು. ಸಿದ್ದರಾಮಯ್ಯ ಬಣ ತವರು ಜಿಲ್ಲೆ ಮೈಸೂರಿನಲ್ಲೇ ಈಗ ಇಬ್ಭಾಗವಾಗಿದೆ. ಹೀಗಾಗಿ, ಸಿದ್ದರಾಮಯ್ಯ ಅವರಿಗೆ ಮತ್ತೆ ಅಹಿಂದ ಚಳವಳಿ ನಡೆಸಲು ಹಳೆಯ ಸಂಗಾತಿಗಳೇ ಅವರೊಂದಿಗೆ ಇಲ್ಲ. ಇತಿಹಾಸ ಗಮನಿಸಿದರೆ ತಮ್ಮ ರಾಜಕೀಯ ಸಂಕಷ್ಟ ಕಾಲದಲ್ಲಿ ಸಿದ್ದರಾಮಯ್ಯ ಅಹಿಂದ ಸಂಘಟನೆಗೆ ಒತ್ತು ನೀಡಿರುವುದು ಸ್ಪಷ್ಟ.

ಇಲ್ಲಿ ಒಂದು ವಿಚಾರವನ್ನು ಗಮನಿಸಬಹುದು. ಸಿದ್ದರಾಮಯ್ಯ ಅಹಿಂದ ಚಳವಳಿಯನ್ನು ಬಿರುಸುಗೊಳಿಸಿದಾಗ ಅವರು ಜೆಡಿಎಸ್‌ ನಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ವಂಚಿತರಾಗಿದ್ದರು. ಅಹಿಂದ ಚಳವಳಿಯ ಅನೇಕ ಉದ್ದೇಶಗಳಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂಬುದೂ ಇತ್ತು. ಸಿದ್ದರಾಮಯ್ಯ ಅವರಿಗೆ ತಾವು ಮುಖ್ಯಮಂತ್ರಿಯಾಗಬೇಕೆಂಬ ಉತ್ಕಟ ಬಯಕೆಯೂ ಇತ್ತು. ಆ ನಿಟ್ಟಿನಲ್ಲಿ ಅವರ ಸಂಕಲ್ಪವೂ ಧೃಡವಾಗಿತ್ತು. ಇವತ್ತು ಆ ಉದ್ದೇಶ ಈಡೇರಿದೆ.

ಸಿದ್ದರಾಮಯ್ಯ ಅವರ ರಾಜಕೀಯ ಹೆಜ್ಜೆಗಳನ್ನು ಗಮನಿಸಿದರೆ ಅವರು ತಮ್ಮ ನಿರ್ಧಾರಗಳಲ್ಲಿ ದುಡುಕುವ ಸ್ವಭಾವದವರಲ್ಲ. ಅಳೆದುತೂಗಿ ಮುಂದಡಿ ಇಡುತ್ತಾರೆ. ತಮ್ಮ ನಿರ್ಧಾರಗಳ ಪರಿಣಾಮಗಳ ಬಗ್ಗೆ ಯೋಚಿಸಿಯೇ ಹೆಜ್ಜೆ ಹಾಕುತ್ತಾರೆ. ರಾಜಕೀಯವಾಗಿ ಹಿನ್ನಡೆಯಾದಾಗ ಅತಿ ಭಾವುಕರೂ ಅಲ್ಲ. ಸಿಟ್ಟಿನ ಕೈಗೆ ಬುದ್ದಿ ಕೊಡುವವರಲ್ಲ. ಮೌನವಾಗಿದ್ದುಕೊಂಡೇ ದಾಳ ಉರುಳಿಸುತ್ತಾರೆ. ಅವರನ್ನು ನಿರ್ಲಕ್ಷಿಸಿದರೆ ಪಕ್ಷಕ್ಕೆ ಸರಿಯಾದ ಪೆಟ್ಟು ಬೀಳುವುದು ಮಾತ್ರ ಗ್ಯಾರಂಟಿ. ಈ ವಿಚಾರದಲ್ಲಿ ಅವರು ಮತ್ತೊಬ್ಬ ಹಿಂದುಳಿದ ವರ್ಗಗಳ ನಾಯಕ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗಿಂತ ಭಿನ್ನ.

ದೇವರಾಜ ಅರಸರ ನಿಧನದ ನಂತರ ಬಂಗಾರಪ್ಪ ಕ್ರಾಂತಿರಂಗದ ನೇತೃತ್ವ ವಹಿಸಿದ್ದವರು. ಹಾಗೇ ನೋಡಿದರೆ ಕಾಂಗ್ರೆಸ್‌ ವಿರುದ್ಧ ಅಹಿಂದ ಮತಗಳನ್ನು ಮೊದಲು ಕ್ರೂಢೀಕರಿಸಿದವರೇ ಬಂಗಾರಪ್ಪ ಅವರು. ಅದು 1983ರ ಅಸೆಂಬ್ಲಿ ಚುನಾವಣೆ. ಆ ಚುನಾವಣೆಯಲ್ಲಿ ಕ್ರಾಂತಿರಂಗ ಪಡೆದ ಸ್ಥಾನಗಳು 34. ಬಂಗಾರಪ್ಪ ತಾವಿರುವ ಕಡೆ ತಮಗೆ ಹಿನ್ನಡೆಯಾಯಿತೆಂದರೆ ಹೆಚ್ಚು ಲೆಕ್ಕಾಚಾರ ಹಾಕದೇ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಅವರದು ಪುಟಿಯುವ ಸ್ವಭಾವ. ನಿರ್ಧಾರಗಳ ಪರಿಣಾಮಗಳ ಬಗ್ಗೆ ಹೆಚ್ಚು ಯೋಚಿಸುತ್ತಿರಲಿಲ್ಲ. ಹೀಗಾಗಿಯೇ ಅವರು ಸಮಾಜವಾದಿ ಪಕ್ಷದ ಸೈಕಲ್ಲನ್ನೂ ಏರಿದರು. ಮರಳಿ ಕಾಂಗ್ರೆಸ್‌ ತೆಕ್ಕೆಗೂ ಬಿದ್ದರು. ಬಿಜೆಪಿಗೂ ಹೋಗಿ ಬಂದರು. ಜೆಡಿಎಸ್‌ ಅಂಗಳದಲ್ಲೂ ನಿಂತರು.

ಸಿದ್ದರಾಮಯ್ಯ ಅವರನ್ನುಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಬಹಳ ಮುಖ್ಯ. ಆ ಎಚ್ಚರಿಕೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಇರಬೇಕು.

- ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು

kudliguru@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ಚೀನಾ ಗಡಿ ಉದ್ವಿಗ್ನತೆ ನಡುವೆ ಅಮೆರಿಕ ರಾಯಭಾರಿ ಲಡಾಖ್ ಭೇಟಿ; ಬೀಜಿಂಗ್ ಗೆ ಪ್ರಬಲ ಸಂದೇಶ

'Pak ಜೊತೆ ಯುದ್ಧ ಮಾಡಿದ್ದರೂ...' ಭಾರತದ ಅಸಲಿ ಕಾಂಪಿಟೇಟರ್ China; ಮಾಜಿ ಸೇನಾ ಮುಖ್ಯಸ್ಥ ಜನರಲ್ ನರವಾಣೆ..!

ವೀಸಾ ಅವಧಿ ಮೀರಿಯೂ ರಾಜ್ಯದಲ್ಲೇ ಉಳಿದ 446 ವಿದೇಶಿಗರು; 3 ವರ್ಷಗಳಲ್ಲಿ 911 ಅಕ್ರಮ ವಲಸಿಗರ ಪತ್ತೆ..!

Southern Zonal Council meet: ಜಲ ವಿವಾದಗಳ ಕುರಿತು ಮಾತುಕತೆಗೆ ಅಮಿತ್ ಶಾ ಕರೆಗೆ ರಾಜ್ಯಗಳ ಬೆಂಬಲ

ಹಿಸಾರ್ ಜಿಲ್ಲಾ ನ್ಯಾಯಾಲಯದ ಹೊರಗೆ ಗ್ಯಾಂಗ್‌ಸ್ಟರ್ ವಿನೋದ್ ಪನ್ನುಗೆ ಗುಂಡಿಕ್ಕಿ ಹತ್ಯೆ