ಭಾರತ ರಾಕೆಟ್‌ಗಳನ್ನು ನಿರ್ಮಿಸುತ್ತಾ, ಉಪಗ್ರಹಗಳನ್ನು ಉಡಾವಣೆಗೊಳಿಸುತ್ತಾ, ಬಾಹ್ಯಾಕಾಶವನ್ನು ನಿರಂತರವಾಗಿ ಅನ್ವೇಷಿಸುವುದನ್ನು ಊಹಿಸಿಕೊಳ್ಳಿ. ಇದು ಬಹಳ ದುಬಾರಿಯಾಗಿ ಗೋಚರಿಸುತ್ತದಲ್ಲವೇ? ಆದರೆ, ಕೇಂದ್ರ ಸರ್ಕಾರ ಭಾರತದ ಬಾಹ್ಯಾಕಾಶ ಕನಸುಗಳಿಗೆ ಭಾರೀ ಉತ್ತೇಜನ ನೀಡುವ ನಿರ್ಧಾರಕ್ಕೆ ಬಂದಿದೆ. ನೂತನ ಬಜೆಟ್‌ನಲ್ಲಿ ನಮ್ಮ ದೇಶದ ಬಾಹ್ಯಾಕಾಶ ಯೋಜನೆಗಳಿಗೆ ಮುಂದಿನ ವರ್ಷದ ಕಾರ್ಯಾಚರಣೆಗಾಗಿ 13,705.63 ಕೋಟಿ ರೂಪಾಯಿಗಳನ್ನು ನಿಯೋಜಿಸಲಾಗಿದೆ. ಇದು ಈಗಾಗಲೇ ಟೇಕಾಫ್‌ಗೆ ಸಿದ್ಧವಾಗಿರುವ ರಾಕೆಟ್‌ಗೆ ಇನ್ನಷ್ಟು ಇಂಧನ ತುಂಬಿಸಿದಂತಾಗಿದೆ.
ಭಾರತದ ದೊಡ್ಡ ಚಿತ್ರಣವೇನು?
ಬಜೆಟ್ ಎಂದರೆ ನಿಮ್ಮ ಪಾಕೆಟ್ ಮನಿಯ ರೀತಿ ಎಂದುಕೊಳ್ಳಿ. ನೀವು ಈ ತಿಂಗಳು 100 ರೂಪಾಯಿ ಪಾಕೆಟ್ ಮನಿ ಪಡೆದು, ಮುಂದಿನ ತಿಂಗಳು 102 ರೂಪಾಯಿ ಪಾಕೆಟ್ ಮನಿ ಪಡೆದರೆ, ಅದು ಒಂದು ಸಣ್ಣ ಮಟ್ಟಿನ ಹೆಚ್ಚಳ ಎನ್ನಬಹುದು. ಆದರೆ, ಈ ಕಥೆಯ ತಿರುವು ಇಲ್ಲಿದೆ. ಕಳೆದ ವರ್ಷ ಭಾರತದ ಬಾಹ್ಯಾಕಾಶ ಇಲಾಖೆ ತಾನು ಯೋಜಿಸಿದ್ದರಿಂದ ಕಡಿಮೆ ಹಣವನ್ನು ವೆಚ್ಚ ಮಾಡಿತ್ತು. ಈ ಬಾರಿಯ ನೂತನ ಬಜೆಟ್‌ನಲ್ಲಿ ಬಾಹ್ಯಾಕಾಶ ಕ್ಷೇತ್ರಕ್ಕೆ 13,705.63 ಕೋಟಿ ರೂಪಾಯಿ ನೀಡಲಾಗಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 10%ದಷ್ಟು ಭಾರೀ ಹೆಚ್ಚಳವಾಗಿದೆ. ಸರ್ಕಾರ ಭಾರತವನ್ನು ಬಾಹ್ಯಾಕಾಶ ಅನ್ವೇಷಣೆಯಲ್ಲಿ ಗಂಭೀರವಾಗಿ ಮುಂದೆ ಸಾಗುವಂತೆ ಮಾಡಲು ಉದ್ದೇಶಿಸಿರುವುದರಿಂದ, ಇದು ಮುಖ್ಯವಾಗುತ್ತದೆ.
ಬಜೆಟ್ ಅಂಕಿ ಸಂಖ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಇಲ್ಲೊಂದು ಸರಳ ವಿಧಾನವಿದೆ. ಪ್ರತಿವರ್ಷವೂ ಸರ್ಕಾರ ಪ್ರತಿಯೊಂದು ಇಲಾಖೆಗೂ ಎಷ್ಟು ಮೊತ್ತ ಲಭಿಸುತ್ತದೆ ಎನ್ನುವುದನ್ನು ಯೋಜಿಸುತ್ತದೆ. ಇದನ್ನು ಬಜೆಟ್ ಅಂದಾಜಿಸುವುದು ಎನ್ನಲಾಗುತ್ತದೆ. ಆದರೆ, ಆ ವರ್ಷದಲ್ಲಿ ಇಲಾಖೆಗಳು ತಮಗೆ ಲಭಿಸಿದ ಸಂಪೂರ್ಣ ಮೊತ್ತವನ್ನು ಖರ್ಚು ಮಾಡುತ್ತವೆ ಎನ್ನಲು ಸಾಧ್ಯವಿಲ್ಲ. ವರ್ಷದ ಕೊನೆಗೆ ಸರ್ಕಾರ ಇಲಾಖೆಗಳು ವಾಸ್ತವವಾಗಿ ಎಷ್ಟು ಹಣವನ್ನು ಖರ್ಚು ಮಾಡಿವೆ ಎಂದು ಪರಿಶೀಲಿಸುತ್ತದೆ. ಇದನ್ನು ಪರಿಷ್ಕೃತ ಅಂದಾಜು ಎಂದು ಕರೆಯಲಾಗುತ್ತದೆ. ಬಾಹ್ಯಾಕಾಶ ಇಲಾಖೆಗೆ ಉದ್ದೇಶಿತ ಮೊತ್ತ 13,416.20 ಕೋಟಿ ರೂಪಾಯಿ ಆಗಿತ್ತು. ಆದರೆ, ಇಲಾಖೆ 12,448.60 ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಉದ್ದೇಶಿತ ಮೊತ್ತಕ್ಕಿಂತ 970 ಕೋಟಿ ರೂಪಾಯಿ ಕಡಿಮೆಯಾಗಿತ್ತು. ನೂತನ ಬಜೆಟ್‌ನ 13,705.63 ಕೋಟಿ ರೂಪಾಯಿಗಳನ್ನು ಹಿಂದಿನ ವರ್ಷದ ವೆಚ್ಚದೊಡನೆ ಹೋಲಿಸಿ ನೋಡಿದಾಗ, ಇದು 10.1% ಹೆಚ್ಚಳವಾಗುತ್ತದೆ. ಈ ನೈಜ ಲೆಕ್ಕಾಚಾರಗಳನ್ನು ಗಮನಿಸಿದಾಗ, ಸರ್ಕಾರ ನಿಜಕ್ಕೂ ಬಾಹ್ಯಾಕಾಶ ಚಟುವಟಿಕೆಗಳಿಗೆ ಈಗ ವೆಚ್ಚವಾಗುವುದಕ್ಕಿಂತಲೂ ಹೆಚ್ಚಿನ ಹಣ ನೀಡುತ್ತಿದೆ ಎನ್ನುವುದು ತಿಳಿದು ಬರುತ್ತದೆ.
ಈ ಹಣ ಎಲ್ಲಿ ವೆಚ್ಚವಾಗುತ್ತದೆ?
ಬಾಹ್ಯಾಕಾಶ ಬಜೆಟ್‌ನ ಬಹುದೊಡ್ಡ ಪಾಲು, ಅಂದರೆ 10,397.06 ಕೋಟಿ ರೂಪಾಯಿ ಬಾಹ್ಯಾಕಾಶ ತಂತ್ರಜ್ಞಾನ ಯೋಜನೆಗಳಿಗೆ ವೆಚ್ಚವಾಗುತ್ತದೆ. ಈ ಹಣವೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ರಾಕೆಟ್‌ಗಳು ಮತ್ತು ಉಪಗ್ರಹಗಳನ್ನು ನಿರ್ಮಿಸಲು ನೆರವಾಗುತ್ತದೆ. ಇವುಗಳು ಭಾರತದ ಬಾಹ್ಯಾಕಾಶ ಕನಸುಗಳಿಗೆ ಮೆಟ್ಟಿಲುಗಳೆಂದು ಪರಿಗಣಿಸಿ. ಈ ಹಣವೇ ಸಂಶೋಧನೆ, ವಿನ್ಯಾಸ, ಇಂಜಿನಿಯರಿಂಗ್, ಪರೀಕ್ಷೆಗಳು, ಮತ್ತು ಅಭಿವೃದ್ಧಿಗೆ ಬೇಕಾದ ಪಾವತಿಗಳನ್ನು ನಡೆಸುತ್ತದೆ. ಇದು ದೇಶಾದ್ಯಂತ ಸಾವಿರಾರು ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳು ಕಾರ್ಯಾಚರಿಸುವ ಇಸ್ರೋದ ವಿವಿಧ ಕೇಂದ್ರಗಳಿಗೆ ಬೆಂಬಲ ಒದಗಿಸುತ್ತದೆ.
ಇನ್ನೊಂದು ಪ್ರಮುಖ ಭಾಗವೆಂದರೆ ಬಂಡವಾಳ ವೆಚ್ಚ. ಇದನ್ನು ಈ ಬಾರಿ 20%ದಷ್ಟು ಹೆಚ್ಚಿಸಲಾಗಿದೆ. ಈ ಹಣವನ್ನು ವಾಸ್ತವವಾಗಿ ರಾಕೆಟ್‌ಗಳು, ಉಪಗ್ರಹಗಳು, ಮತ್ತು ಉಡಾವಣಾ ವೇದಿಕೆಗಳನ್ನು ನಿರ್ಮಿಸಲು ಬಳಸಲಾಗುತ್ತದೆ. ಇದನ್ನು ಹೊಸ ಉತ್ಪನ್ನಗಳ ತಯಾರಿಕೆಗೆ ಬೇಕಾಗುವ ಕಾರ್ಖಾನೆಯ ನಿರ್ಮಾಣದಂತೆ ಕಲ್ಪಿಸಿಕೊಳ್ಳಿ. 2026-27ರಲ್ಲಿ, ಬಂಡವಾಳ ವೆಚ್ಚ 6,375.92 ಕೋಟಿ ರೂಪಾಯಿ ಆಗಿರಲಿದ್ದು, ಇದು ಬಜೆಟ್‌ನ ಬಹುತೇಕ ಅರ್ಧ ಪಾಲು ಹೊಂದಿದೆ. ಹಿಂದಿನ ವರ್ಷ ಬಂಡವಾಳ ವೆಚ್ಚ ಕೇವಲ 5,309.87 ಕೋಟಿ ರೂಪಾಯಿ ಆಗಿದ್ದು, ಈ ವರ್ಷ 20%ದಷ್ಟು ಬೃಹತ್ ಹೆಚ್ಚಳ ಕಂಡಿದೆ. ಇದು ಭಾರತ ಭವಿಷ್ಯದ ಯೋಜನೆಗಳಿಗೆ ಬೇಕಾಗುವ ನೂತನ ಬಾಹ್ಯಾಕಾಶ ಹಾರ್ಡ್‌ವೇರ್ ಮತ್ತು ಮೂಲಭೂತ ವ್ಯವಸ್ಥೆಗಳ ನಿರ್ಮಾಣಕ್ಕೆ ಎಷ್ಟು ಗಂಭೀರವಾಗಿ ಚಿಂತಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಹಣ ಪಡೆಯುತ್ತಿರುವ ಮೂರು ದೊಡ್ಡ ಯೋಜನೆಗಳು
ಬಾಹ್ಯಾಕಾಶ ಬಳಕೆಗಳಿಗೆ 1,725.06 ಕೋಟಿ ರೂಪಾಯಿ ನೀಡಲಾಗಿದೆ. ಇದು ಮೇಲ್ನೋಟಕ್ಕೆ ಭಾರೀ ಮೊತ್ತದಂತೆ ಕಂಡರೂ, ವಾಸ್ತವವಾಗಿ ಉಪಗ್ರಹಗಳಿಂದ ಹವಾಮಾನ ಮುನ್ಸೂಚನೆ, ನಕ್ಷೆಗಳು, ಮತ್ತು ವಿಪತ್ತು ನಿರ್ವಹಣಾ ವ್ಯವಸ್ಥೆಗಳಂತಹ ಜನ ಸಾಮಾನ್ಯರಿಗೆ ನೆರವಾಗುವ ಪ್ರಾಯೋಗಿಕ ಕಾರ್ಯಗಳಿಗೆ ಬಳಕೆಯಾಗುತ್ತದೆ. ಹವಾಮಾನ ತಜ್ಞರು ಮಳೆಯ ಪ್ರಮಾಣವನ್ನು ಅಂದಾಜಿಸುವಾಗ, ಅವರು ಉಪಗ್ರಹ ಮಾಹಿತಿಗಳನ್ನೇ ಅವಲಂಬಿಸಿರುತ್ತಾರೆ. ವಿಪತ್ತು ನಿರ್ವಹಣಾ ಸಂಸ್ಥೆಗಳು ಪ್ರವಾಹಗಳು ಅಥವಾ ಚಂಡಮಾರುತಗಳ ಕುರಿತು ಎಚ್ಚರಿಕೆ ನೀಡುವಾಗ, ಅವು ಉಪಗ್ರಹಗಳನ್ನೇ ಆಧರಿಸಿರುತ್ತವೆ. ರೈತರಿಗೆ ಮಣ್ಣಿನ ಪರಿಸ್ಥಿತಿ ತಿಳಿಯಬೇಕಾಗಿ ಬಂದಾಗ, ಉಪಗ್ರಹ ಮಾಹಿತಿಗಳು ನೆರವಾಗುತ್ತವೆ. ಇವೆಲ್ಲವೂ ಬಾಹ್ಯಾಕಾಶ ಬಳಕೆಯಲ್ಲೇ ಬರುತ್ತವೆ.
ಖಾಸಗಿ ಬಾಹ್ಯಾಕಾಶ ಸಂಸ್ಥೆಗಳಿಗೂ ಈಗ ಬೆಂಬಲ ಲಭಿಸುತ್ತಿದೆ! ಬಾಹ್ಯಾಕಾಶ ಕ್ಷೇತ್ರದಲ್ಲಿ ಕಾರ್ಯಾಚರಿಸುವ ಖಾಸಗಿ ಸಂಸ್ಥೆಗಳಿಗೆ ನೆರವಾಗುವ ಇನ್-ಸ್ಪೇಸ್ ಸಂಸ್ಥೆಗೆ 194.57 ಕೋಟಿ ರೂಪಾಯಿ ನಿಯೋಜಿಸಲಾಗಿದೆ! ಅಂದರೆ, ಭಾರತ ಈಗ ತನ್ನ ಬಾಹ್ಯಾಕಾಶ ಅನ್ವೇಷಣೆಯ ಬಾಗಿಲುಗಳನ್ನು ಕೇವಲ ಸರ್ಕಾರಿ ಸಂಸ್ಥೆಗಳಿಗಲ್ಲದೆ, ಖಾಸಗಿ ಉದ್ಯಮಗಳಿಗೂ ತೆರೆಯುತ್ತಿದೆ. ಸ್ಕೈರೂಟ್ ಏರೋಸ್ಪೇಸ್, ಅಗ್ನಿಕುಲ್, ಮತ್ತು ಇತರ ಸಂಸ್ಥೆಗಳು ರಾಕೆಟ್‌ಗಳು ಮತ್ತು ಉಪಗ್ರಹಗಳನ್ನು ನಿರ್ಮಿಸುತ್ತಿವೆ. ಖಾಸಗಿ ಸಂಸ್ಥೆಗಳು ಬಾಹ್ಯಾಕಾಶ ಅನ್ವೇಷಣೆಯಲ್ಲಿ ತೊಡಗಿದಾಗ, ಭಾರತಕ್ಕೆ ಹೆಚ್ಚಿನ ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಯಾಗುವುದರಿಂದ ಸರ್ಕಾರವೂ ಅವುಗಳಿಗೆ ನೆರವಾಗುತ್ತಿದೆ.
ಬಾಹ್ಯಾಕಾಶ ವಿಜ್ಞಾನಕ್ಕೆ 569.76 ಕೋಟಿ ರೂಪಾಯಿ ನೀಡಲಾಗಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳವಾಗಿದೆ! 184.62 ಕೋಟಿ ರೂಪಾಯಿಗೆ ಹೋಲಿಸಿದರೆ ಇದು ಬಹುದೊಡ್ಡ ಹೆಚ್ಚಳ. ಈ ಹಣ ಭಾರತಕ್ಕೆ ಗ್ರಹಗಳ ಅಧ್ಯಯನ ನಡೆಸಲು, ಭೂಮಿಯ ವಾತಾವರಣವನ್ನು ಅರ್ಥ ಮಾಡಿಕೊಳ್ಳಲು, ಮತ್ತು ಬಾಹ್ಯಾಕಾಶದ ರಹಸ್ಯಗಳನ್ನು ಅನ್ವೇಷಿಸಲು ನೆರವಾಗಲಿದೆ. ಇದು ಏಕೆ ಮುಖ್ಯವಾಗುತ್ತದೆ? ಯಾಕೆಂದರೆ, ಬಾಹ್ಯಾಕಾಶ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳುವುದರಿಂದ ನಮಗೆ ನಮ್ಮ ಗ್ರಹವಾದ ಭೂಮಿಯನ್ನು ಇನ್ನಷ್ಟು ಉತ್ತಮವಾಗಿ ತಿಳಿಯಲು ಸಾಧ್ಯವಾಗುತ್ತದೆ. ವಾತಾವರಣದ ಸಂಶೋಧನೆ, ಹವಾಮಾನ ಮಾದರಿಗಳ ಅನ್ವೇಷಣೆ, ಮತ್ತು ಸೂರ್ಯ ಹೇಗೆ ಭೂಮಿಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದರ ಅಧ್ಯಯನಗಳೆಲ್ಲವೂ ಬಾಹ್ಯಾಕಾಶ ವಿಜ್ಞಾನವನ್ನೇ ಅವಲಂಬಿಸಿವೆ.
ದೂರದರ್ಶಕಗಳು ಮತ್ತು ಕಲಿಕಾ ಕೇಂದ್ರಗಳು
ಸರ್ಕಾರ ಈಗ ನಾಲ್ಕು ಪ್ರಮುಖ ಟೆಲಿಸ್ಕೋಪ್ ವ್ಯವಸ್ಥೆಗಳನ್ನು ನಿರ್ಮಿಸುತ್ತಿದೆ. ಒಂದು ನ್ಯಾಷನಲ್ ಲಾರ್ಜ್ ಸೋಲಾರ್ ಟೆಲಿಸ್ಕೋಪ್ ಆಗಿದ್ದು, ಲಡಾಖಿನಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದರ ಮೂಲಕ ಸೂರ್ಯನ ವಿಸ್ತೃತವಾದ ಅಧ್ಯಯನ ನಡೆಸಲು ಸಾಧ್ಯವಾಗುತ್ತದೆ. ಇದೇ ಸ್ಥಳದಲ್ಲಿರುವ ಇನ್ನೊಂದು ದೂರದರ್ಶಕ ದೂರದ ನಕ್ಷತ್ರಪುಂಜಗಳು ಮತ್ತು ನಕ್ಷತ್ರಗಳನ್ನು ಅಧ್ಯಯನ ಮಾಡಲು ನೆರವಾಗುತ್ತವೆ. ಹಿಮಾಲಯನ್ ಚಂದ್ರ ದೂರದರ್ಶಕಕ್ಕೆ ಉತ್ತಮ ಉಪಕರಣಗಳನ್ನು ಅಳವಡಿಸಿ, ಅದನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಇನ್ನು ಬೆಂಗಳೂರಿನಲ್ಲಿ ಕಾಸ್ಮೋಸ್-2 ಎನ್ನುವ ಒಂದು ನೂತನ ತಾರಾಲಯವನ್ನು ಸ್ಥಾಪಿಸಲಾಗುತ್ತದೆ. ಇದು ಜನರಿಗೆ ಕುತೂಹಲಕಾರಿ, ಆಸಕ್ತಿಕರ ರೀತಿಯಲ್ಲಿ ಖಗೋಳ ವಿಜ್ಞಾನದ ಅರಿವು ಮೂಡಿಸಲಿದೆ. ಈ ವ್ಯವಸ್ಥೆಗಳು ಮುಂದಿನ ತಲೆಮಾರಿನ ವಿಜ್ಞಾನಿಗಳಿಗೆ ಸ್ಫೂರ್ತಿ ನೀಡಲಿದ್ದು, ಬಾಹ್ಯಾಕಾಶ ಕ್ಷೇತ್ರವನ್ನು ಎಲ್ಲರಿಗೂ ರೋಮಾಂಚಕವಾಗಿಸಲಿವೆ.
ಸಂತಸಗೊಂಡ ಖಾಸಗಿ ಬಾಹ್ಯಾಕಾಶ ಕಂಪನಿಗಳು
ಗ್ರಾಹಕ ಸಂಸ್ಥೆಗಳ ಉಪಗ್ರಹ ಉಡಾವಣೆಗಳನ್ನು ನಡೆಸುವ ಮೂಲಕ ಆದಾಯ ಸಂಪಾದಿಸುವ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಗೆ ಈ ಬಾರಿ ಉದ್ಯಮದ ಮೂಲಕ ಹೆಚ್ಚು ಹಣ ಸಂಪಾದಿಸಲು ಅವಕಾಶವಿದೆ. ಸರ್ಕಾರ ಇದಕ್ಕೆ ನೇರ ಬೆಂಬಲವನ್ನು ಕಡಿಮೆಗೊಳಿಸಿದ್ದರೂ, ಎನ್ಎಸ್ಐಎಲ್ ತನ್ನ ಸ್ವಂತ ಸೇವೆಗಳ ಮೂಲಕ 1,403 ಕೋಟಿ ರೂಪಾಯಿ ಸಂಪಾದಿಸುವ ನಿರೀಕ್ಷೆಗಳಿವೆ. ಇದು ಭಾರತೀಯ ಬಾಹ್ಯಾಕಾಶ ಸಂಸ್ಥೆಗಳು ಸ್ವತಂತ್ರವಾಗಿ, ಪ್ರಬಲವಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇವುಗಳು ಜಾಗತಿಕ ಬಾಹ್ಯಾಕಾಶ ಸಂಸ್ಥೆಗಳೊಡನೆ ಸ್ಪರ್ಧಿಸಿ, ಭಾರತಕ್ಕೆ ಹಣವನ್ನು ಮರಳಿ ತರುತ್ತಿವೆ.
ನಾವು ಏಕೆ ಈ ಕುರಿತು ಚಿಂತಿಸಬೇಕು?
ಬಾಹ್ಯಾಕಾಶ ತಂತ್ರಜ್ಞಾನ ನಮ್ಮ ದೈನಂದಿನ ಜೀವನದಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸುತ್ತದೆ. ನಮ್ಮ ಹವಾಮಾನ ಮುನ್ಸೂಚನಾ ಆ್ಯಪ್‌ಗಳು ಉಪಗ್ರಹಗಳ ಕಾರಣದಿಂದಲೇ ಕಾರ್ಯಾಚರಿಸುತ್ತವೆ. ನಮ್ಮ ಮೊಬೈಲ್ ಫೋನ್ ನೆಟ್‌ವರ್ಕ್ ಉಪಗ್ರಹ ತಂತ್ರಜ್ಞಾನದ ಮೇಲೆಯೇ ಅವಲಂಬಿತವಾಗಿದೆ. ಕಾರುಗಳಲ್ಲಿನ ಜಿಪಿಎಸ್, ವಿಪತ್ತು ಮುನ್ಸೂಚನೆ, ಮತ್ತು ಕೃಷಿ ತಂತ್ರಗಳೆಲ್ಲವೂ ಬಾಹ್ಯಾಕಾಶ ವಿಜ್ಞಾನದ ಕೊಡುಗೆಗಳು. ನ್ಯಾಷನಲ್ ಜಿಯೋಸ್ಪೇಷಿಯಲ್ ಮಿಷನ್ ಉಪಗ್ರಹ ಮಾಹಿತಿಗಳನ್ನು ಅಭಿವೃದ್ಧಿ ಯೋಜನೆಗಳು ಮತ್ತು ಆಡಳಿತಕ್ಕೆ ಬಳಸಿಕೊಳ್ಳುತ್ತದೆ. ಅಂದರೆ, ಉಪಗ್ರಹ ಮಾಹಿತಿಗಳು ರಸ್ತೆ ನಿರ್ಮಾಣ, ಆಸ್ಪತ್ರೆಗಳು ಮತ್ತು ಶಾಲೆಗಳ ನಿರ್ಮಾಣವನ್ನು ಉತ್ತಮಗೊಳಿಸಲು ಪೂರಕವಾಗಿವೆ.
ಸ್ಪಷ್ಟ ಗುರಿ - ಉದ್ದೇಶ
ಭಾರತದ ಬಾಹ್ಯಾಕಾಶ ಬಜೆಟ್ ಸ್ಪಷ್ಟ ಉದ್ದೇಶ, ಗುರಿಗಳೊಂದಿಗೆ ಹೆಚ್ಚಳ ಕಾಣುತ್ತಿದೆ. ಇದು ಕೇವಲ ಬಾಹ್ಯಾಕಾಶವನ್ನು ತಲುಪುವುದಕ್ಕೆ ಸೀಮಿತವಾಗಿಲ್ಲ. ಬದಲಿಗೆ, ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಂಡು, ಭೂಮಿಯಲ್ಲಿನ ನೈಜ ಸಮಸ್ಯೆಗಳನ್ನು ಪರಿಹರಿಸುವುದಕ್ಕೂ ಮುಖ್ಯವಾಗಿದೆ. ರೈತರಿಗೆ ಮಣ್ಣಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುವುದರಿಂದ, ಹವಾಮಾನ ಮುನ್ಸೂಚನೆ ನೀಡುವ ತನಕ ಬಾಹ್ಯಾಕಾಶ ವಿಜ್ಞಾನ ನಮ್ಮ ಜೀವನವನ್ನು ಸುಧಾರಿಸುತ್ತಿದೆ.
13,705.63 ಕೋಟಿ ರೂಪಾಯಿಗಳ ಬಾಹ್ಯಾಕಾಶ ಹೂಡಿಕೆ ಭಾರತ ಬಾಹ್ಯಾಕಾಶದಲ್ಲೇ ಭವಿಷ್ಯವಿದೆ ಎನ್ನುವುದನ್ನು ಅರ್ಥ ಮಾಡಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ. ನೂತನ ಟೆಲಿಸ್ಕೋಪ್‌ಗಳು, ಸುಧಾರಿತ ವ್ಯವಸ್ಥೆಗಳು, ಮತ್ತು ಖಾಸಗಿ ಸಂಸ್ಥೆಗಳಿಗೆ ನೀಡಿರುವ ಬೆಂಬಲಗಳು ಭಾರತ ಕೇವಲ ಬಾಹ್ಯಾಕಾಶ ಓಟದಲ್ಲಿ ಭಾಗಿಯಾಗುವುದು ಮಾತ್ರವಲ್ಲದೆ, ಅದರಲ್ಲಿ ಗೆಲ್ಲುವ ಸ್ಪಷ್ಟ ಉದ್ದೇಶ ಹೊಂದಿರುವುದನ್ನು ತೋರಿಸಿದೆ.
ಇದು ಭಾರತದ ಕ್ಷಣ. ಆಗಸ ಇನ್ನು ಭಾರತಕ್ಕೆ ಮಿತಿಯಾಗಿ ಉಳಿದಿಲ್ಲ. ಇದು ಕೇವಲ ಹೊಸ ಹಾದಿಯ ಆರಂಭವಷ್ಟೇ!
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com