ಡೊನಾಲ್ಡ್ ಟ್ರಂಪ್, ಪ್ರಧಾನಿ ನರೇಂದ್ರ ಮೋದಿ ಸಾಂದರ್ಭಿಕ ಚಿತ್ರ online desk
ಅಂಕಣಗಳು

ಭಾರತ-ಅಮೇರಿಕಾ ಟ್ರೇಡ್ ಡೀಲ್, ಯಾರಿಗೆಷ್ಟು ಲಾಭ? (ಹಣಕ್ಲಾಸು)

ಭಾರತ ಬೇರೆ ದೇಶದ ಕೃಷಿ ಉತ್ಪನ್ನಗಳಿಗೆ ಎಂದಿಗೂ ಸುಲಭವಾಗಿ ತನ್ನ ಮಾರುಕಟ್ಟೆಯನ್ನು ತೆರೆಯುವುದಿಲ್ಲ. ಆದರೆ ಈ ಒಪ್ಪಂದದ ಪ್ರಕಾರ ಕೆಲವು ಅಮೆರಿಕನ್ ಕೃಷಿ ಪದಾರ್ಥಗಳು ಭಾರತದ ಮಾರುಕಟ್ಟೆಯನ್ನು...

ಈ ವರ್ಷ ಭಾರತದ ಆರ್ಥಿಕತೆ ಮತ್ತಷ್ಟು ಬಲಿಷ್ಠವಾಗುವುದರಲ್ಲಿ ಹೆಚ್ಚಿನ ಸಂದೇಹ ಉಳಿದಿಲ್ಲ ಇದಕ್ಕೆ ಕಾರಣ 2026 ರಲ್ಲಿ ಭಾರತ ಮತ್ತು ಅಮೆರಿಕ ಆರಂಭವಾದ ಗಂಭೀರ ವ್ಯಾಪಾರ ಒಪ್ಪಂದವು ಎರಡು ದೇಶಗಳ ನಡುವಿನ ಆರ್ಥಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆವಾಗಿದೆ. ಈ ಒಪ್ಪಂದದ ಮುಖ್ಯ ಸಾರ ಭಾರತದ ವಸ್ತುಗಳನ್ನು ಅಮೆರಿಕಕ್ಕೆ ರಫ್ತುಗಳ ಮೇಲೆ ವಿಧಿಸುತ್ತಿದ್ದ ಟ್ಯಾರಿಫ್ , ಅಥವಾ ತೆರಿಗೆಯನ್ನು ಕಡಿಮೆ ಮಾಡುವುದು ಮತ್ತು ಭಾರತವು ಅಮೆರಿಕದಿಂದ ಬರುವ ವಸ್ತುಗಳ ಮೇಲಿನ ತೆರಿಗೆಯನ್ನು ತೆಗೆದು ಹಾಕುವುದು. ಇದರ ಜೊತೆಗೆ ಭಾರತ ರಷ್ಯಾ ದೇಶದಿಂದ ಕಚ್ಚಾ ತೈಲವನ್ನು ಖರೀದಿ ಮಾಡದಿರುವಂತೆ ಅಮೇರಿಕಾ ಷರತ್ತು ವಿಧಿಸಿದೆ. ಒಟ್ಟಾರೆ 5೦೦ ಬಿಲಿಯನ್ ಡಾಲರ್ ಪದಾರ್ಥಗಳನ್ನು ಭಾರತ ಆಮದು ಮಾಡಿಕೊಳ್ಳಬೇಕು ಎನ್ನುವ ಅಂಶವನ್ನು ಕೂಡ ಸೇರಿಸಿದೆ.

ಈ ಒಪ್ಪಂದದ ಅಡಿಯಲ್ಲಿ, ಅಮೆರಿಕವು ಹಿಂದಿನಂತೆ 25/50 ರವರೆಗೆ ಹಾಕಿದ್ದ ಉನ್ನತ ವ್ಯಾಪಾರ ತೆರಿಗೆಗಳನ್ನೂ 18% ತನಕ ಇಳಿಸುವ ಮೂಲಕ ಭಾರತದಿಂದ ಬರುವ ಉತ್ಪನ್ನಗಳಿಗೆ ಕಡಿಮೆ ತೆರಿಗೆ ದರದಲ್ಲಿ ಮಾರುಕಟ್ಟೆ ಪ್ರವೇಶ ನೀಡಲು ಒಪ್ಪಿದೆ. ಅಂದರೆ ಗಮನಿಸಿ ಸಾಮಾನ್ಯವಾಗಿ ಭಾರತದ ಉತ್ಪನ್ನಗಳ ಮೇಲೆ ಅಮೇರಿಕಾ 25 ಪ್ರತಿಶತ ತೆರಿಗೆಯನ್ನು ವಿಧಿಸುತ್ತಿತ್ತು. ಕೆಲವೊಂದು ಪದಾರ್ಥಗಳ ಮೇಲೆ ಪೆನಾಲ್ಟಿ ರೂಪದಲ್ಲಿ ಹೆಚ್ಚಿನ 25 ಪ್ರತಿಶತ ತೆರಿಗೆ ವಿಧಿಸುತ್ತಿತ್ತು. ಹೀಗಾಗಿ ಕೆಲವು ಪದಾರ್ಥಗಳ ಮೇಲೆ ತೆರಿಗೆ 50 ಪ್ರತಿಶತವಾಗಿತ್ತು.

ಇದರಿಂದ ಭಾರತೀಯ ಉತ್ಪನ್ನಗಳು ಅಮೆರಿಕಾದ ಪ್ರಜೆಗಳ ಕೈಗೆ ಎಟುಕದಂತೆ ಬೆಲೆಯಲ್ಲಿ ಹೆಚ್ಚಳವಾಗಿತ್ತು. ಈಗ ಎಲ್ಲಾ ಪದಾರ್ಥಗಳ ಮೇಲೆ 18 ಪ್ರತಿಶತ ತೆರಿಗೆಯನ್ನು ವಿಧಿಸಲಾಗಿದೆ. ಇದರಿಂದ ಮೇಲ್ನೋಟಕ್ಕೆ ಅಮೆರಿಕಕ್ಕೆ ಹೆಚ್ಚು ಲಾಭ ಆದಂತೆ ತೋರುತ್ತದೆ. ಆದರೆ ಈ ತೆರಿಗೆ ದರ ಬೇರೆ ದೇಶಗಳಿಗೆ ಹೋಲಿಸಿದರೆ ಒಂದು ಪ್ರತಿಶತ ಕಡಿಮೆಯಿದೆ. ಹೀಗಾಗಿ ಇದು ಭಾರತದ ರಫ್ತು ಹೆಚ್ಚಿಸಲು ಸಹಕಾರಿ ಆಗಲಿದೆ. ಅಲ್ಲದೆ 50 ಪ್ರತಿಶತದಿಂದ 18 ಪ್ರತಿಶತಕ್ಕೆ ಇಳಿಸಿರುವುದು ಬಹುದೊಡ್ಡ ಕಡಿತ. ಇದು ಭಾರತೀಯ ಎಕ್ಸ್ಪೋರ್ಟ್ ಹೆಚ್ಚಿಸುವುದರಲ್ಲಿ ಯಾವ ಸಂಶಯವೂ ಉಳಿದಿಲ್ಲ.

ಆದರೆ ಇಲ್ಲಿಯವರೆಗೆ ನಾವು ಅಮೇರಿಕಾದಿಂದ ತರಿಸಿಕೊಳ್ಳುತ್ತಿದ್ದ ಪದಾರ್ಥಗಳಿಗಿಂತ ನಾವು ಅವರಿಗೆ ಕಳುಹಿಸುತ್ತಿದ್ದ ಪದಾರ್ಥಗಳ ಮೌಲ್ಯ ಹೆಚ್ಚಾಗಿತ್ತು . ಹೀಗಾಗಿ ನಾವು ಅಮೆರಿಕಾದೊಂದಿಗೆ ಟ್ರೇಡ್ ಸರ್ಪ್ಲಸ್ ನಲ್ಲಿದ್ದೆವು. ಅಮೇರಿಕಾದಿಂದ ಆಮದು ಮಾಡಿಕೊಳ್ಳುವ ಪದಾರ್ಥಗಳ ಮೇಲೆ 50 ರಿಂದ 70 ಪ್ರತಿಶತದ ವರೆಗೂ ತೆರಿಗೆ ಹಾಕುತ್ತಿದ್ದೆವು. ಇದೀಗ ಭಾರತ ಆ ತೆರಿಗೆಯನ್ನು ಪೂರ್ಣ ತೆಗೆದು ಹಾಕಿ ಸೊನ್ನೆ ತೆರಿಗೆ ಕಡೆಗೆ ಮುಂಬರುವ ವರ್ಷಗಳಲ್ಲಿ ಸಾಗುವುದಾಗಿ ಹೇಳಿದೆ. ಭಾರತದ ಎಕ್ಸ್ಪೋರ್ಟ್ ಹೆಚ್ಚಾಗುತ್ತದೆ ನಿಜ. ಅದೇ ಸಮಯದಲ್ಲಿ ಅಮೇರಿಕಾ ಪದಾರ್ಥಗಳ ಬೆಲೆ ಕಡಿಮೆಯಾಗುವುದರಿಂದ ಮತ್ತು ೫೦೦ ಬಿಲಿಯನ್ ಡಾಲರ್ ಉತ್ಪನ್ನಗಳನ್ನು ಕೊಳ್ಳಬೇಕು ಎಂದು ಅಮೇರಿಕಾ ಷರತ್ತು ವಿಧಿಸಿರುವುದರಿಂದ ಮುಂಬರುವ ದಿನಗಳಲ್ಲಿ ಅಮೆರಿಕಾದೊಂದಿಗೆ ಟ್ರೇಡ್ ಸರ್ಪ್ಲಸ್ ಉಳಿಸಿಕೊಳ್ಳುವುದು ಸಾಧ್ಯವೇ ಎನ್ನುವ ಪ್ರಶ್ನೆ ಕೂಡ ಎದುರಾಗುತ್ತದೆ. ಅಲ್ಲದೆ ಭಾರತ ಷರತ್ತುಗಳ ಒಪ್ಪಂದವನ್ನು ಏಕೆ ಒಪ್ಪಿಕೊಂಡಿತು ಎನ್ನುವ ಪ್ರಶ್ನೆ ಕೂಡ ಎದುರಾಗುತ್ತದೆ.

ಇವೆಲ್ಲವುಗಳ ನಡುವೆ ಭಾರತೀಯ ಷೇರು ಮಾರುಕಟ್ಟೆ ಸುಧಾರಣೆ ಕಂಡಿತು. ಕಳೆದ ಏಳೆಂಟು ತಿಂಗಳಿಂದ ತೆರಿಗೆ ನೀತಿಯಲ್ಲಿ ನಿಖರತೆ ಇಲ್ಲದ ಕಾರಣ ಷೇರು ಮಾರುಕಟ್ಟೆ, ಭಾರತೀಯ ಉತ್ಪಾದನಾ ವಲಯಗಳು ಎಲ್ಲವೂ ಕುಸಿತವನ್ನು ಕಂಡಿದ್ದವು. ಇದೀಗ ಈ ಟ್ರೇಡ್ ಡೀಲ್ ಅಷ್ಟರ ಮಟ್ಟಿಗೆ ಈ ವಲಯಗಳಲ್ಲಿ ಸಂಚಲವನ್ನು ಮೂಡಿಸಿವೆ.

ಭಾರತದಲ್ಲಿ ಲಾಭಪಡೆಯುವ ಪ್ರಮುಖ ವಲಯಗಳು

  1. ರಫ್ತು-ಆಧಾರಿತ ಉದ್ಯಮಗಳು

    ಪರ್ಯಾಯ ತೆರಿಗೆಯ ಇಳಿಕೆ ಕಾರಣಕ್ಕೆ ಭಾರತದಿಂದ ಅಮೆರಿಕಕ್ಕೆ ರವಾನೆಯಾಗುವ ಉತ್ಪನ್ನಗಳ ಸ್ಪರ್ಧಾತ್ಮಕತೆ ಹೆಚ್ಚುವುದು. ವಿಶೇಷವಾಗಿ textiles, apparel, gems & jewellery, chemicals, engineering goods, marine goods ಮತ್ತು auto parts ವಲಯಗಳು ಹೆಚ್ಚಿನ ಮಾರುಕಟ್ಟೆ ಪಡೆಯಲು ಸಾಧ್ಯತೆಗಳಿವೆ. ಉದಾಹರಣೆಗೆ, ಟೆಕ್ಸ್ಟೈಲ್ಸ್ ಮತ್ತು ಜ್ಯೂವೆಲರಿ ಕ್ಷೇತ್ರಗಳ ರಫ್ತು ಮೌಲ್ಯವೂ ಪ್ರಸ್ತುತ ದೊಡ್ಡದಾಗಿದೆ ಮತ್ತು ಈ ತೆರಿಗೆ ಇಳಿಕೆ ಈ ವಲಯಗಳಲ್ಲಿ ವ್ಯಾಪಾರವನ್ನು ಮತ್ತಷ್ಟು ವೃದ್ಧಿಸುತ್ತದೆ.

  2. ಐ-ಟಿ ಮತ್ತು ಸೇವಾ ವಲಯ

    ಸ್ಥಳಾಂತರ ಸೇವೆಗಳು ಮತ್ತು ಐ-ಟಿ ಕಂಪನಿಗಳು ಅಮೆರಿಕದ ಮಾರುಕಟ್ಟೆಯಿಂದ ಹೆಚ್ಚಿನ ಲಾಭ ಪಡೆಯುವ ಸಾಧ್ಯತೆ ಇದೆ.ಭಾರತದ ಐಟಿ ಕ್ಷೇತ್ರದ ಐವತ್ತಕ್ಕೂ ಹೆಚ್ಚು ಪ್ರತಿಶತ ವ್ಯಾಪಾರ ಅಮೇರಿಕಾ ದೇಶ ಒಂದರಿಂದ ಬರುತ್ತದೆ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು.

  3. ಆಟೋ ಮತ್ತು ಎಂಜಿನಿಯರಿಂಗ್ ಘಟಕಗಳು

    ಭಾರತದ ವಾಹನ ಭಾಗಗಳು ಮತ್ತು ಎಂಜಿನಿಯರಿಂಗ್ ಉತ್ಪನ್ನಗಳು ಅಮೆರಿಕ ಮಾರುಕಟ್ಟೆಗೆ ರಫ್ತು ಮಾಡುವಲ್ಲಿ ಸ್ಪರ್ಧಾತ್ಮಕ ದರ ಪಡೆಯುವ ಮೂಲಕ ಹೆಚ್ಚು ವ್ಯಾಪಾರ ಮತ್ತು ಅವಕಾಶವನ್ನು ಪಡೆಯುವ ಸಾಧ್ಯತೆಗಳಿವೆ.

  4. ಪರಿಸರ-ಉತ್ಪನ್ನಗಳು

    ಭಾರತದ ಸುಧಾರಿತ ಉತ್ಪನ್ನಗಳು ಈಗ ಹೆಚ್ಚು ಸ್ಪರ್ಧಾತ್ಮಕವಾಗಿ ಅಮೆರಿಕದ ಮಾರುಕಟ್ಟೆಗೆ ಪ್ರವೇಶ ಮಾಡಬಹುದು. ಈ ಮೂಲಕ ರಸಗೊಬ್ಬರಗಳು, ರಾಸಾಯನಿಕಗಳು, ಸಂಶೋಧನಾ-ಆಧಾರಿತ ಉತ್ಪನ್ನಗಳು ಹೆಚ್ಚಿನ ವ್ಯಾಪಾರ ವೃದ್ಧಿಸಿಕೊಳ್ಳುತ್ತವೆ.

ಅಮೆರಿಕ ಪಡೆದುಕೊಳ್ಳುವ ಲಾಭಗಳು

  1. ಮೂಲಭೂತ ವಸ್ತುಗಳು ಮತ್ತು ಇಂಧನ ಖರೀದಿ

    ಭಾರತವು ಅಮೆರಿಕದಿಂದ ಹೆಚ್ಚುವರಿ ಕಚ್ಚಾತೈಲ, ವಿಮಾನ ಭಾಗಗಳು, ತಂತ್ರಜ್ಞಾನ, ಕೃಷಿ ಉತ್ಪನ್ನಗಳನ್ನು ಕಡಿಮೆ ತೆರಿಗೆಯಿಂದ ಖರೀದಿಸಲು ಒಪ್ಪಿದೆ. ಇದು ಅಮೆರಿಕಾದ ಮಾರುಕಟ್ಟೆ ವಿಸ್ತರಣೆಗೆ ಕಾರಣವಾಗುತ್ತದೆ.

  2. ತಂತ್ರಜ್ಞಾನ ಮತ್ತು ರಕ್ಷಣಾ ವಲಯ

    ಅಮೆರಿಕದ ದೊಡ್ಡ ಕಂಪನಿಗಳು ಭಾರತದಲ್ಲಿನ ತಂತ್ರಜ್ಞಾನ, ಡೇಟಾ ಕೇಂದ್ರ, advanced chips, defense equipment ಮುಂತಾದ ತಂತ್ರಜ್ಞಾನ ಆಧಾರಿತ ವಲಯಗಳು ಹೆಚ್ಚಿನ ಅವಕಾಶಗಳನ್ನು ಪಡೆದುಕೊಳ್ಳಲಿವೆ.

  3. ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶ

    ನಿರ್ದಿಷ್ಟ ಅಮೆರಿಕನ್ ಕೃಷಿ ಉತ್ಪನ್ನಗಳು ಅಂದರೆ ವಾಲ್ ನಟ್, ಬಾದಾಮಿ, ಕಾಟನ್ , ಸೋಯಾಬಿನ್ ಇನ್ನಿತರ ಪದಾರ್ಥಗಳು ಈಗ ಭಾರತದ ದೊಡ್ಡ ಗ್ರಾಹಕ ವಲಯಕ್ಕೆ ಬಹಳ ಸುಲಭವಾಗಿ ತಲುಪುತ್ತವೆ. ಇದು ಅಮೆರಿಕದ ರೈತರಿಗೆ ಮತ್ತು ಕೃಷಿ-ಉತ್ಪಾದಕರಿಗೆ ಭಾರತದ ಬಹು ದೊಡ್ಡ ಮಾರುಕಟ್ಟೆಯನ್ನು ತೆರೆಯುತ್ತದೆ.

ಭಾರತ ಬೇರೆ ದೇಶದ ಕೃಷಿ ಉತ್ಪನ್ನಗಳಿಗೆ ಎಂದಿಗೂ ಸುಲಭವಾಗಿ ತನ್ನ ಮಾರುಕಟ್ಟೆಯನ್ನು ತೆರೆಯುವುದಿಲ್ಲ. ಆದರೆ ಈ ಒಪ್ಪಂದದ ಪ್ರಕಾರ ಕೆಲವು ಅಮೆರಿಕನ್ ಕೃಷಿ ಪದಾರ್ಥಗಳು ಭಾರತದ ಮಾರುಕಟ್ಟೆಯನ್ನು ಸುಲಭವಾಗಿ ತಲುಪುವಂತೆ ಅನ್ನಿಸುತ್ತಿದೆ. ಇದು ಈಗಾಗಲೇ ಒಂದಷ್ಟು ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ. ಈ ಒಪ್ಪಂದವನ್ನು ಪೂರ್ಣವಾಗಿ ಜಾರಿಗೆ ತರುವಾಗ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು.

ಇನ್ನೊಂದು ಅಂಶ ಈ ಒಪ್ಪಂದದಲ್ಲಿ ಭಾರತಕ್ಕೆ ಮಾರಕ ಎನ್ನಿಸುವುದು ಅಮೆರಿಕನ್ ಉತ್ಪನ್ನಗಳ ಮೇಲೆ ಸುಂಕವನ್ನು ವಿಧಿಸದೆ ಇರುವುದು. ಆದರೆ ಅಮೇರಿಕಾದಿಂದ ಭಾರತ ಆಮದು ಮಾಡಿಕೊಳ್ಳುವ ವಸ್ತುಗಳಲ್ಲಿ ಪ್ರಮುಖವಾದದ್ದು ಮಿನರಲ್ಸ್ ಮತ್ತು ತೈಲ. ಇವುಗಳ ಮೇಲೆ ತೆರಿಗೆ ಹಾಕಿದರೆ ಅದರಿಂದ ಭಾರತದ ಗ್ರಾಹಕನ ಮೇಲೆ ಹೆಚ್ಚಿನ ಹೊರೆ ಬಿದ್ದಂತೆ ಆಗುತ್ತದೆ. ಇದರ ಜೊತೆಗೆ ಮೆಷಿನರಿಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಪದಾರ್ಥಗಳು, ಏರ್ಕ್ರಾಫ್ಟ್ ಗಳನ್ನೂ ನಾವು ಆಮದು ಮಾಡಿಕೊಳ್ಳುತ್ತೇವೆ. ಗಮನಿಸಿ ಇವುಗಳ ಮೇಲೆ ತೆರಿಗೆ ಕಡಿಮೆ ಮಾಡಿದ್ದು ನಮಗೆ ನಾವೇ ಮಾಡಿಕೊಂಡ ಉಪಕಾರವಾಗಿದೆ. ಮೇಲ್ನೋಟಕ್ಕೆ ಇದು ಭಾರತಕ್ಕೆ ಮಾರಕ ಎನ್ನಿಸಿದರೂ ಹೇಳಿಕೊಳ್ಳುವ ನಷ್ಟವನ್ನು ಇದು ಉಂಟುಮಾಡುವುದಿಲ್ಲ.

ವ್ಯಾಪಾರ ಎಂದ ಮೇಲೆ ಎಲ್ಲರೂ ಲಾಭವನ್ನು ಬಯಸುತ್ತಾರೆ. ಅದರಲ್ಲೂ ದೇಶ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಎಂದರೆ ಅಲ್ಲಿ ಒಬ್ಬಿಬ್ಬರ ಪಾತ್ರವಿರುವುದಿಲ್ಲ. ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ವೃತ್ತಿಪರರ ದಂಡು ನೆರೆದಿರುತ್ತದೆ. ಎರಡೂ ದೇಶದ ಇಂತಹ ವೃತ್ತಿಪರರು ತಮ್ಮ ತಮ್ಮ ದೇಶಕ್ಕೆ ಏನು ಲಾಭ ಎನ್ನುವುದನ್ನು ಖಂಡಿತ ನೋಡುತ್ತಾರೆ. ಕೆಲವೊಂದು ಅಂಶಗಳು ಮೇಲ್ನೋಟಕ್ಕೆ ಜನ ಸಾಮಾನ್ಯನ ಅರಿವಿಗೆ ಬರುವುದಿಲ್ಲ. ಇನ್ನಷ್ಟು ಅಂಶಗಳನ್ನು ನಾವು ಹೇಗೆ ಇಂಟೆರ್ಪ್ರಿಟ್ ಮಾಡುತ್ತೇವೆ ಎನ್ನುವುದರ ಮೇಲೆ ಕೂಡ ಅವಲಂಬಿತವಾಗಿರುತ್ತದೆ. ಅಂದರೆ ಇಂತಹ ಒಪ್ಪಂದಗಳನ್ನು ಸುಮ್ಮನೆ ಓದುವುದರಿಂದ ಅವು ಕೊಡುವ ಅರ್ಥ ಬೇರೆಯಾಗಿರುತ್ತದೆ. ಅವುಗಳನ್ನು ಇದು ಹೀಗೆ ಎಂದು ಸರಕಾರ ಅರ್ಥೈಸಬೇಕಾಗುತ್ತದೆ . ಅಂದರೆ ಇವುಗಳ ಬಗ್ಗೆ ಕ್ಲಾರಿಫಿಕೇಷನ್ ಅಗತ್ಯವಿರುತ್ತದೆ.

ಕೊನೆಮಾತು: ವ್ಯಾಪಾರ ಎಂದ ಮೇಲೆ ಒಮ್ಮೆ ಒಬ್ಬರು ಹೆಚ್ಚು ಲಾಭ ಪಡೆಯುತ್ತಾರೆ. ಕೆಲವೊಮ್ಮೆ ಮತ್ತೊಬ್ಬರು. ಯಾವಾಗಲೂ ಟ್ರೇಡ್ ಬ್ಯಾಲೆನ್ಸ್ ಆಗಿರಬೇಕು ಎನ್ನುವುದು ಅಸಾಧ್ಯ. ಭಾರತ ಇಲ್ಲಿಯವರೆಗೂ ಅಮೇರಿಕಾ ದೇಶದ ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಂಡಿದೆ. ಅಂದರೆ ನಾವು ಯಾವಾಗಲೂ ಟ್ರೇಡ್ ಸರ್ಪ್ಲಸ್ ನಲ್ಲಿದ್ದೇವೆ. ಮುಂಬರುವ ದಿನಗಳು ಈ ಅನುಪಾತವನ್ನು ಬದಲಿಸುತ್ತದೆಯೇ? ಎನ್ನುವುದನ್ನು ಕಾದು ನೋಡಬೇಕು. ನಾವು ಅಮೇರಿಕಾದಿಂದ ತರಿಸಿಕೊಳ್ಳುವ ಪದಾರ್ಥಗಳು ಹೆಚ್ಚಾಗಬಹುದು. ಅದೇ ಸಮಯದಲ್ಲಿ ಜವಳಿ ಮತ್ತು ಜ್ಯೂವೆಲರಿ ಹಿಂದಿಗಿಂತ ಹೆಚ್ಚು ನಾವು ಅವರಿಗೆ ಮಾರಬಹುದು. ಟ್ರೇಡ್ ಬ್ಯಾಲೆನ್ಸ್ ಆದರೂ ಕೂಡ ಅದು ಭಾರತಕ್ಕೆ ಸಿಕ್ಕ ಜಯ. ಅಮೇರಿಕಾ ಕೂಡ ಡೆಫಿಸಿಟ್ ಕಡಿಮೆ ಮಾಡಿಕೊಂಡದ್ದು ಜಯ ಎಂದು ಬೀಗಬಹುದು. ಅಷ್ಟರಮಟ್ಟಿಗೆ ಇದು ವಿನ್ -ವಿನ್ ಎನ್ನಬಹುದು. ಆದರೆ ನಿಜವಾದ ಫಲಿತಾಂಶ , ಔಟ್ ಕಮ್ ಏನಾಗಿರುತ್ತದೆ ಎನ್ನುವುದಕ್ಕೆ ಕಾದು ನೋಡಬೇಕು . ಇವತ್ತಿಗೆ ಪರ-ವಿರೋಧ ಮಾತಾಡಿ ಪ್ರಯೋಜನವಿಲ್ಲ. ಆದರೆ ಈ ಒಪ್ಪಂದ ಮುಂದೆ ಸಾಗಲು ಅವಶ್ಯಕವಾಗಿತ್ತು.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ ಪ್ರತಿಕ್ರಿಯೆ ಇಲ್ಲದೆ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಅಂಗೀಕಾರ; ವಿಪಕ್ಷಗಳ ತೀವ್ರ ಗದ್ದಲ, ಮಧ್ಯಾಹ್ನ 3 ಗಂಟೆಗೆ ಲೋಕಸಭೆ ಕಲಾಪ ಮುಂದೂಡಿಕೆ

ನಮ್ಮ ರಾಜಕೀಯ ಶಕ್ತಿಯನ್ನು HDKಗೆ ಧಾರೆ ಎರೆದಿದ್ದೇವೆ: ನಾವು ಬಾಯ್ಬಿಟ್ರೆ ಬ್ಲಾಸ್ಟ್ ಆಗುತ್ತೆ, ಅಭ್ಯರ್ಥಿ ಘೋಷಣೆ ಮಾಡಲು ನಿಖಿಲ್ ಗೆ ಏನು ಅಧಿಕಾರವಿದೆ?

T20 World Cup 2026: ರನ್ ಗಳಿಸಲು ಸಂಜು ಸ್ಯಾಮ್ಸನ್ ಹೆಣಗಾಟ; ಅಗ್ರ ಕ್ರಮಾಂಕದಲ್ಲಿ ಇಶಾನ್ ಕಿಶನ್ ಜಾಗ ಫಿಕ್ಸ್!

India vs Pakistan T20 World Cup 2026: ಪಂದ್ಯ ಬಹಿಷ್ಕರಿಸುವ​ ನಿರ್ಧಾರ, ನಮ್ಮ ನಿಲುವು ಸ್ಪಷ್ಟ ಎಂದ ಪಾಕ್ ಪ್ರಧಾನಿ

Namma Metro Price Hike: ಪರಿಷ್ಕೃತ ದರ ಪ್ರಕಟ, ಫೆಬ್ರವರಿ.9 ರಿಂದ ಹೊಸ ದರ ಜಾರಿಗೆ..!

SCROLL FOR NEXT