ಡೊನಾಲ್ಡ್ ಟ್ರಂಪ್ ಅವರ 15% ಸುಂಕದ ನೀತಿ ಈಗ ಜಾಗತಿಕ ವ್ಯಾಪಾರ ಅನಿಶ್ಚಿತತೆ ಸೃಷ್ಟಿಸಿ, ದರಗಳ ಹೆಚ್ಚಳಕ್ಕೆ ಕಾರಣವಾಗಿ, ಕಾನೂನು ಸಂಬಂಧಿ ಅನುಮಾನಗಳನ್ನು ಸೃಷ್ಟಿಸಿ, ಆರ್ಥಿಕ ಪರಿಣಾಮಗಳ ಅಲೆ ಭಾರತವನ್ನೂ ತಲುಪುವಂತೆ ಮಾಡಿದೆ.
ನಾನು ನಿಮಗೊಂದು ಸರಳವಾದ ಪ್ರಶ್ನೆ ಕೇಳುತ್ತೇನೆ. ನೀವು ಯಾವುದೋ ವಸ್ತುವೊಂದನ್ನು ಖರೀದಿಸಲು ಅಂಗಡಿಗೆ ತೆರಳುತ್ತೀರಿ. ಆಗ ಅಂಗಡಿಯಾತ, "ಕ್ಷಮಿಸಿ, ಸರ್ಕಾರ ಹೊಸದಾದ ತೆರಿಗೆಯೊಂದನ್ನು ಹೇರಿದ ಕಾರಣದಿಂದಾಗಿ ವಸ್ತುವಿನ ಬೆಲೆ ಹೆಚ್ಚಾಗಿದೆ" ಎಂದಾಗ ನೀವೇನು ಮಾಡುತ್ತೀರಿ? ನೀವು ಹೆಚ್ಚಿನ ಬೆಲೆ ಕೊಟ್ಟು ಆ ವಸ್ತುವನ್ನು ಖರೀದಿಸುತ್ತೀರಿ. ಏಕೆಂದರೆ, ನಿಮ್ಮ ಮುಂದೆ ಬೇರೆ ಯಾವುದೇ ಆಯ್ಕೆಯೂ ಇರುವುದಿಲ್ಲ. ಈಗ ಅಮೆರಿಕದಲ್ಲಿ ಆಗುತ್ತಿರುವುದು ಯಥಾವತ್ ಇದೇ ಬೆಳವಣಿಗೆ. ಆದರೆ, ಅಮೆರಿಕದಲ್ಲಿ ಆಗುವ ವಿದ್ಯಮಾನಗಳು ಕೇವಲ ಅಮೆರಿಕಕ್ಕೆ ಸೀಮಿತವಲ್ಲ. ಅದು ಎಲ್ಲೆಡೆಗೂ ಸಾಗುತ್ತದೆ. ಕೊನೆಗೆ ಅದು ನಿಮ್ಮ ಜೀವನವನ್ನೂ ತಲುಪುತ್ತದೆ.
ಫೆಬ್ರವರಿ 21ರ ಶನಿವಾರದಂದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬೇರೆ ದೇಶಗಳಿಂದ ಅಮೆರಿಕಗೆ ಬರುತ್ತಿರುವ ಎಲ್ಲ ಸರಕುಗಳ ಮೇಲೂ ಹೊಸದಾದ 15% ಆಮದು ಸುಂಕ ವಿಧಿಸಿದ್ದಾರೆ. ಆಮದು ಸುಂಕ, ಅಥವಾ ಟ್ಯಾರಿಫ್ ಎನ್ನುವುದು ಒಂದು ದೇಶ ವಿದೇಶಗಳಿಂದ ತನ್ನೊಳಗೆ ಬರುವ ವಸ್ತುಗಳ ಮೇಲೆ ವಿಧಿಸುವ ಹೆಚ್ಚುವರಿ ಹಣವಾಗಿದೆ. ಇದನ್ನು ಒಂದು ರೀತಿಯಲ್ಲಿ ಪ್ರವೇಶ ಶುಲ್ಕ ಎಂದುಕೊಳ್ಳಬಹುದು. ಆದರೆ, ಈ ಹೆಚ್ಚುವರಿ ಮೊತ್ತವನ್ನು ಕೇವಲ ವ್ಯಾಪಾರಿಯೇ ಹೊರುವುದಿಲ್ಲ. ಬದಲಿಗೆ, ಇದನ್ನು ಗ್ರಾಹಕರ ಮೇಲೆ, ಅಂದರೆ, ರೈಸ್ ಕುಕರ್ ಬೆಲೆ ಏಕೆ ಗಗನಕ್ಕೇರುತ್ತಿದೆ? ಅಥವಾ ರನ್ನಿಂಗ್ ಶೂ ಬೆಲೆ ಏಕೆ ಇಷ್ಟೊಂದು ಹೆಚ್ಚಳ ಕಾಣುತ್ತಿದೆ ಎಂದು ಆತಂಕಪಡುವ ಸಾಮಾನ್ಯ ಅಮೆರಿಕನ್ನರ ಮೇಲೂ ವಿಧಿಸಲಾಗುತ್ತದೆ!
ಈ ನೂತನ 15% ಸುಂಕ ಕೇವಲ ಒಂದು ದಿನದ ಹಿಂದೆ ಟ್ರಂಪ್ ವಿಧಿಸಿದ್ದ 10% ಸುಂಕದ ಬದಲಿಗೆ ಜಾರಿಗೆ ಬಂದಿದೆ. ಅಮೆರಿಕದ ಸರ್ವೋಚ್ಚ ನ್ಯಾಯಾಲಯ ಹಿಂದೆ ಟ್ರಂಪ್ ವಿಧಿಸಿದ್ದ ತೀವ್ರ ಟ್ಯಾರಿಫ್‌ಗಳನ್ನು ಹಿಂಪಡೆಯುವಂತೆ ಆದೇಶಿಸಿದ ಪರಿಣಾಮವಾಗಿ ಈ 10% ಸುಂಕ ಜಾರಿಗೆ ಬಂದಿತ್ತು. ಟ್ರಂಪ್ ಅವರಿಗೆ ಇಂಟರ್ನ್ಯಾಷನಲ್ ಎಮರ್ಜೆನ್ಸಿ ಎಕನಾಮಿಕ್ ಪವರ್ಸ್ ಆ್ಯಕ್ಟ್ (ಐಇಇಪಿಎ) ಬಳಸಿಕೊಂಡು, ಹೆಚ್ಚುವರಿ ಸುಂಕ ವಿಧಿಸುವ ಯಾವುದೇ ಅಧಿಕಾರ ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಐಇಇಪಿಎ ಎನ್ನುವುದು ಹಣ ವರ್ಗಾವಣೆಯನ್ನು ತಡೆಯುವ ಸಲುವಾಗಿ, ಅಥವಾ ಶತ್ರು ದೇಶಗಳೊಡನೆ ವ್ಯಾಪಾರವನ್ನು ತಡೆಯುವ ಸಲುವಾಗಿ ಬಳಕೆಯಾಗಬಹುದಾದ ಒಂದು ಕಾಯ್ದೆಯೇ ಹೊರತು, ಸಂಪೂರ್ಣ ಜಗತ್ತಿನ ಮೇಲೆ ಆಮದು ಸುಂಕ ವಿಧಿಸುವ ಅಸ್ತ್ರವಲ್ಲ!
ನ್ಯಾಯಾಲಯದ ಆದೇಶದ ಬೆನ್ನಲ್ಲೇ ಟ್ರಂಪ್ ಇನ್ನೊಂದು ಕಾನೂನು ಪತ್ತೆಹಚ್ಚಿದ್ದಾರೆ. ಟ್ರೇಡ್ ಆ್ಯಕ್ಟ್ ಆಫ್ 1974ರ ಸೆಕ್ಷನ್ 122 ಈಗ ಟ್ರಂಪ್ ಕೈಗೆ ಸಿಕ್ಕಿದೆ. ಅಮೆರಿಕದ ಇತಿಹಾಸದಲ್ಲಿ ಎಂದಿಗೂ ಬಳಕೆಯಾಗಿರದ ಈ ಕಾನೂನು ಗರಿಷ್ಠ 150 ದಿನಗಳ ಅವಧಿಗೆ, ಅಂದರೆ ಬಹುತೇಕ 5 ತಿಂಗಳ ಕಾಲಾವಧಿಗೆ ಗರಿಷ್ಠ 15% ತನಕ ಆಮದು ಸುಂಕ ವಿಧಿಸಲು ಅವಕಾಶ ಮಾಡಿಕೊಡುತ್ತದೆ. ಅಮೆರಿಕ ಯಾವುದಾದರೂ ದೇಶಗಳಿಂದ ಹೆಚ್ಚಿನ ಆಮದು ಮಾಡಿಕೊಂಡು, ಕಡಿಮೆ ರಫ್ತು ಮಾಡುವ ಪರಿಸ್ಥಿತಿಗೆ ಬಳಸುವ ರೀತಿಯಲ್ಲಿ ಸೆಕ್ಷನ್ 122 ಜಾರಿಗೆ ಬಂದಿದೆ. ಇಂತಹ ಪರಿಸ್ಥಿತಿಯನ್ನು ವ್ಯಾಪಾರ ಕೊರತೆ (ಟ್ರೇಡ್ ಡಿಫಿಸಿಟ್) ಎಂದು ಕರೆಯಲಾಗುತ್ತದೆ. ಟ್ರಂಪ್ ಈ ಸಮಸ್ಯೆಯ ನಿವಾರಣೆಗಾಗಿಯೇ ಈ ಕಾನೂನು ಜಾರಿಯಲ್ಲಿದೆ ಎಂದು ವಾದಿಸುತ್ತಿದ್ದಾರೆ. ಕಾನೂನು ತಜ್ಞರು ಟ್ರಂಪ್ ವಾದದಿಂದ ಸಂಪೂರ್ಣ ಸಮಾಧಾನ ಹೊಂದಿಲ್ಲ. ಆದ್ದರಿಂದ, ಈ ವಿಚಾರವೂ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲು ಹತ್ತುವ ಎಲ್ಲ ಸಾಧ್ಯತೆಗಳೂ ದಟ್ಟವಾಗಿವೆ. ಆದರೆ, ಸದ್ಯದ ಮಟ್ಟಿಗೆ, ಟ್ರಂಪ್ ಟ್ಯಾರಿಫ್ ಜಾರಿಯಲ್ಲಿರುವುದು ವಾಸ್ತವ ಸಂಗತಿಯಾಗಿದೆ.
ಸರಳ ಸಂಖ್ಯೆಗಳಲ್ಲಿ ಹೇಳುವುದಾದರೆ - ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನ, ಅಮೆರಿಕದ ಸರಾಸರಿ ಆಮದು ಸುಂಕ 16% ಆಗಿತ್ತು. ಆದರೆ, ನ್ಯಾಯಾಲಯದ ಆದೇಶದ ಬಳಿಕ, ಅದು ತೀವ್ರವಾಗಿ ಇಳಿಕೆ ಕಂಡು, 9.1%ಗೆ ತಲುಪಿತು. ಈಗ ನೂತನವಾಗಿ 15% ಸುಂಕ ಜಾರಿಗೆ ಬಂದಿದ್ದು, ಸರಾಸರಿ ಆಮದು ಸುಂಕ ಮತ್ತೆ 13.7% ತಲುಪುವ ನಿರೀಕ್ಷೆಗಳಿವೆ. ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಯೇಲ್ ವಿಶ್ವವಿದ್ಯಾಲಯದ ಬಜೆಟ್ ಲ್ಯಾಬ್ ಸಹ ಈ ಅಂಕಿಅಂಶಗಳನ್ನು ಖಚಿತಪಡಿಸಿದೆ.
ಆದರೆ, ಅಮೆರಿಕದ ಸುಂಕಗಳ ಕುರಿತು ನಾವು ಭಾರತೀಯರೇಕೆ ತಲೆ ಕೆಡಿಸಿಕೊಳ್ಳಬೇಕು? ಭಾರತ ಅಮೆರಿಕಾಗೆ ಔಷಧಗಳು, ವಸ್ತ್ರ, ಸಾಫ್ಟ್‌ವೇರ್ ಸೇವೆಗಳು, ಹವಳಗಳು, ಮತ್ತು ಇಂಜಿನಿಯರಿಂಗ್ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. 15% ತೆರಿಗೆ ಎಂದರೆ, ಭಾರತೀಯ ಕಂಪನಿಗಳು ಒಂದೋ ನಷ್ಟವನ್ನು ಸಹಿಸಿಕೊಂಡು ವ್ಯಾಪಾರ ನಡೆಸಬೇಕು, ಅಥವಾ ಹೆಚ್ಚಿನ ಬೆಲೆ ವಿಧಿಸಿ, ಗ್ರಾಹಕರನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸಬೇಕು. ಇದು ಯಾವ ರೀತಿಯಲ್ಲೇ ಆದರೂ, ಉದ್ಯೋಗಗಳ ಮೇಲಂತೂ ಪರಿಣಾಮ ಬೀರುತ್ತದೆ. ವ್ಯಾಪಾರ ಎನ್ನುವುದು ಯಾವುದೋ ದೂರದ ಸರ್ಕಾರಕ್ಕೆ ಸಂಬಂಧಿಸಿದ ವಿಚಾರವಲ್ಲ. ಇದು ಯಾರದೋ ಉದ್ಯೋಗಕ್ಕೆ, ಇನ್ಯಾರದೋ ಊಟಕ್ಕೂ ಸಂಬಂಧಿಸಿರಬಹುದು.
"ಆದರೆ, ಭಾರತ ಕೇವಲ ಕಳೆದ ತಿಂಗಳಷ್ಟೇ ಒಂದು 18% ಸುಂಕದ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿಲ್ಲವೇ?" ಎಂದು ನೀವು ಪ್ರಶ್ನಿಸಬಹುದು. ಹೌದು, ನಾವು ಒಪ್ಪಂದ ಮಾಡಿಕೊಂಡಿದ್ದೇವೆ. ಆದರೆ, ಆ ಒಪ್ಪಂದ ಅಮೆರಿಕದ ಸುಪ್ರೀಂ ಕೋರ್ಟ್ ತೊಡೆದು ಹಾಕಿರುವ ಕಾನೂನು ಚೌಕಟ್ಟಿನ ಮೇಲೇ ರೂಪಿತವಾಗಿತ್ತು. ಮೇಲ್ನೋಟಕ್ಕೆ ಈ 15% ಸುಂಕ ಕಡಿಮೆ ಎನ್ನುವಂತೆ ಕಂಡರೂ, ವಾಸ್ತವವಾಗಿ ಇದೊಂದು ಬಲೆಯೇ ಸರಿ. ಇದು ಭಾರತದ ವಿಶೇಷ ಸ್ಥಾನಮಾನವನ್ನು ಇಲ್ಲವಾಗಿಸಿ, ನಮ್ಮನ್ನು ಇತರ ಎಲ್ಲ ದೇಶಗಳ ಸಾಲಿನಲ್ಲಿ ಕೂರಿಸುತ್ತದೆ. ಇದರೊಡನೆ, ನಮ್ಮ ತಲೆಯ ಮೇಲೂ 150 ದಿನಗಳ ಗಡುವು ತೂಗಾಡುತ್ತಿರುತ್ತದೆ. ವ್ಯಾಪಾರದಲ್ಲಿ, ಹೆಚ್ಚಿನ ಅನಿಶ್ಚಿತತೆ ಮತ್ತು ಕಡಿಮೆ ತೆರಿಗೆ ಎನ್ನುವುದು ಹೆಚ್ಚಿನ ತೆರಿಗೆ ಮತ್ತು ನಿಶ್ಚಿತ ಭವಿಷ್ಯಕ್ಕಿಂತಲೂ ಬಹಳ ಕೆಟ್ಟ ಪರಿಸ್ಥಿತಿ ಆಗಿರುತ್ತದೆ.
ಎಲ್ಲ ಸರಕು ಮತ್ತು ಸೇವೆಗಳ ಮೇಲೂ ಸಮಾನವಾಗಿ ತೆರಿಗೆ ವಿಧಿಸುವುದಿಲ್ಲ. ಔಷಧಗಳು, ಮುಖ್ಯ ಖನಿಜಗಳು, ರಕ್ಷಣಾ ಉತ್ಪನ್ನಗಳು, ಕೆನಡಾ ಮತ್ತು ಮೆಕ್ಸಿಕೋಗಳಿಂದ ಪ್ರಸ್ತುತ ವ್ಯಾಪಾರ ಒಪ್ಪಂದದಡಿ ಆಮದಾಗುವ ಉತ್ಪನ್ನಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಶೀನ್ ಮತ್ತು ಟೆಮು ಸೇರಿದಂತೆ, ಕಡಿಮೆ ಬೆಲೆಯ ಚೈನೀಸ್ ಆ್ಯಪ್‌ಗಳಿಂದ ಪೂರೈಕೆಯಾಗುವ ಉತ್ಪನ್ನಗಳ ಮೇಲೆ, ಮತ್ತು ಬಹುತೇಕ ಇತರ ಎಲ್ಲ ಉತ್ಪನ್ನಗಳ ಮೇಲೆ ತೆರಿಗೆ ಸಂಪೂರ್ಣವಾಗಿ ಅನ್ವಯಿಸುತ್ತದೆ. ಹಿಂದೆ, 800 ಡಾಲರ್ ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಉತ್ಪನ್ನಗಳು ಯಾವುದೇ ತೆರಿಗೆ ಇಲ್ಲದೆ ಅಮೆರಿಕದೊಳಗೆ ಪ್ರವೇಶಿಸಬಹುದಾಗಿತ್ತು. ಆದರೆ, ಟ್ರಂಪ್ ಈ ಪ್ರಯೋಜನವನ್ನೇ ಕೊನೆಗೊಳಿಸಿದ್ದಾರೆ. ಶ್ವೇತ ಭವನವೂ ಸಹ ಇದು ಲಾಭ ಮರಳುವ ಸಾಧ್ಯತೆಗಳಿಲ್ಲ ಎಂದು ಖಚಿತಪಡಿಸಿದೆ. ರಿಪಬ್ಲಿಕನ್ ಪಕ್ಷವೂ ಸಹ ಜೂನ್ 2027ರಿಂದ ಈ ವ್ಯವಸ್ಥೆಯನ್ನು ಶಾಶ್ವತವಾಗಿ ಕೊನೆಗೊಳಿಸುವ ಕಾನೂನನ್ನು ಜಾರಿಗೊಳಿಸಿದೆ.
ವಾಲ್ ಸ್ಟ್ರೀಟ್ ಜರ್ನಲ್ ಪ್ರಕಟಿಸಿರುವ ಜನವರಿ ತಿಂಗಳ ಹಣದುಬ್ಬರದ ವರದಿಯ ಪ್ರಕಾರ, ಗೃಹ ಬಳಕೆ ವಸ್ತುಗಳು, ಪೀಠೋಪಕರಣಗಳು, ಮತ್ತು ನೂತನ ಕಾರುಗಳ ಬೆಲೆ ಈಗಾಗಲೇ ಹೆಚ್ಚಳವಾಗಿದೆ. ಬಹುತೇಕ 2025ರ ವರ್ಷಾದ್ಯಂತ, ಅಮೆರಿಕನ್ ಕಂಪನಿಗಳು ಮತ್ತು ಗ್ರಾಹಕರು 90%ಕ್ಕೂ ಹೆಚ್ಚುವರಿ ವೆಚ್ಚವನ್ನು ತಾವೇ ಭರಿಸಿದ್ದಾರೆ. ಕೆಲವು ಅಮೆರಿಕನ್ ಕಂಪನಿಗಳಂತೂ ಹೊಸ ಉದ್ಯೋಗಿಗಳ ನೇಮಕಾತಿಯನ್ನೂ ನಿಲ್ಲಿಸಿವೆ. ಆದರೆ, ಅಲಬಾಮಾದ ಸೀಗಡಿ ಮೀನುಗಾರರು ಟ್ರಂಪ್ ಸುಂಕಗಳು ತಮಗೆ ಕಡಿಮೆ ಬೆಲೆಯ ವಿದೇಶೀ ಆಮದುಗಳ ವಿರುದ್ಧ ಸ್ಪರ್ಧಿಸಲು ನೆರವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ, ಟ್ರಂಪ್ ಸುಂಕದ ಕಥೆಗೆ ಎರಡು ಆಯಾಮಗಳಿವೆ.
ಈ ಕುರಿತು ನನ್ನ ಪ್ರಾಮಾಣಿಕ ಅಭಿಪ್ರಾಯ ಏನು? ಸುಂಕ ನೀತಿ ಎನ್ನುವುದು ನೀವು ಕೆಲವು ದಿನಗಳಿಗೊಮ್ಮೆ ಚಾಲ್ತಿಗೆ ತರಲು, ಅಥವಾ ಹಿಂಪಡೆಯಲು ಲೈಟ್ ಸ್ವಿಚ್ ರೀತಿಯದ್ದಲ್ಲ. ಅನಿಶ್ಚಿತತೆ ಎನ್ನುವುದೇ ಒಂದು ಹೆಚ್ಚುವರಿ ವೆಚ್ಚ. ಪ್ರತಿಬಾರಿಯೂ ಈ ವೆಚ್ಚ ಜನ ಸಾಮಾನ್ಯರನ್ನೇ ಹುಡುಕಿ ಬರುತ್ತದೆ. ಅಮೆರಿಕನ್ ಉದ್ಯಮಗಳನ್ನು ರಕ್ಷಿಸಬೇಕು, ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಬೇಕು, ಮರಳಿ ಉದ್ಯೋಗಗಳನ್ನು ಹೆಚ್ಚಾಗಿ ಸೃಷ್ಟಿಸಬೇಕು ಎನ್ನುವ ಟ್ರಂಪ್ ಗುರಿ ತಪ್ಪೇನಲ್ಲ. ಆದರೆ, ಪ್ರತಿ 48 ಗಂಟೆಗಳಿಗೊಮ್ಮೆ ದರ ಬದಲಾವಣೆ ನಡೆಸಿ, ಅದನ್ನು ನ್ಯಾಯಾಲಯ ತಿರಸ್ಕರಿಸಿ, ಮತ್ತೆ ಹೊಸ ಕಾನೂನುಗಳಿಗೆ ಹುಡುಕಾಟ ನಡೆಸುವುದು ಆತ್ಮವಿಶ್ವಾಸ ಮೂಡಿಸುವುದಿಲ್ಲ. ಒಂದು ದೇಶದ ವ್ಯಾಪಾರ ನೀತಿ ಸದಾ ಸ್ಥಿರವಾಗಿರಬೇಕು, ಮತ್ತು ಕಾನೂನುಬದ್ಧವಾಗಿರಬೇಕು. ಆದರೆ, ಅಮೆರಿಕದಲ್ಲಿ ಈಗ ನಾವು ನೋಡುತ್ತಿರುವುದು ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾದ ಬೆಳವಣಿಗೆ. ಆದ್ದರಿಂದಲೇ ಅಮೆರಿಕದ ಬೆಳವಣಿಗೆಗಳ ಕುರಿತು ನಾವೂ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)