ಇಂದಿನ ಅಸ್ಥಿರ ಸಮಯದಲ್ಲಿ ಜೀವವಿಮೆ ಮಾಡಿಸುವುದು ಕಡ್ಡಾಯ. ನಮ್ಮ ಸಮಾಜ ವಿಮೆ ಬಗ್ಗೆ ಇನ್ನೂ ಹೆಚ್ಚಿನ ಗಮನವನ್ನು ನೀಡಿಲ್ಲ. ಎಷ್ಟು ಇದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಅದಿನ್ನೂ ಆಗುತ್ತಿಲ್ಲ.
ಜೀವವಿಲ್ಲದ ವಾಹನಕ್ಕೆ ವಿಮೆ ಕಡ್ಡಾಯ ಮಾಡಿರುವ ಸರಕಾರ . ಜೀವಕ್ಕೆ ವಿಮೆಯನ್ನು ಕಡ್ಡಾಯ ಮಾಡಿಲ್ಲ. ಅದನ್ನು ಆಯ್ಕೆಯಾಗಿ ಬಿಟ್ಟಿದೆ. ಇದು ಬಹುದೊಡ್ಡ ತಪ್ಪು. ಸರಕಾರ ಕಡ್ಡಾಯ ಮಾಡಲಿ ಎನ್ನುವುದನ್ನು ಬಿಟ್ಟು ನಾವು ಸ್ವಇಚ್ಛೆಯಿಂದ ವಿಮೆಯನ್ನು ಮಾಡಿಸುವುದು ಒಳ್ಳೆಯದು. ಇದು ಮನದಟ್ಟಾಗಲು ಒಂದೆರೆಡು ಸನ್ನಿವೇಶಗಳನ್ನು ವಿವರಿಸುವೆ.
ನನ್ನ ಹತ್ತಿರದ ಸಂಬಂಧಿಯೊಬ್ಬರು ಆರೋಗ್ಯ ವಿಮೆಯ ಮೊತ್ತವನ್ನು ಹತ್ತು ಲಕ್ಷದಿಂದ ಎಪ್ಪತೈದು ಲಕ್ಷಕ್ಕೆ ಏರಿಸಿಕೊಂಡರು. ಇವತ್ತಿನ ದಿನದಲ್ಲಿ ಭಾರತದಲ್ಲಿ ಅತಿ ಹೆಚ್ಚು ಹಣದುಬ್ಬರ ಇರುವುದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ. ಆಸ್ಪತ್ರೆಯ ಸೇವೆಗಳು , ಮಾತ್ರೆಗಳು ತಿಂಗಳಿನಿಂದ ತಿಂಗಳಿಗೆ ಏರಿಕೆಯಾಗುತ್ತವೆ. ನಾವು ಸದಾ ಆಸ್ಪತ್ರೆಗೆ ಹೋಗದ ಕಾರಣ ಇದು ನಮ್ಮ ಅರಿವಿಗೆ ಬರುವುದಿಲ್ಲ. ನಾಕು ಜನರಿರುವ ಕುಟುಂಬ ಕನಿಷ್ಠ 1 ಕೋಟಿ ರುಪಾಯಿಗೆ ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳಬೇಕು. ಇದು ಎಲ್ಲೆಡೆ , ಸಮಯ ಸಿಕ್ಕಾಗೆಲ್ಲಾ ನಾನು ಹೇಳುವ ಮಾತುಗಳು.ಒಂದು ಕೋಟಿ ರುಪಾಯಿಗೆ ಆರೋಗ್ಯ ವಿಮೆ ಎಂದರೆ ಎಂಬತ್ತು ಸಾವಿರ ಅಥವಾ ಲಕ್ಷ ರೂಪಾಯಿ ವಾರ್ಷಿಕ ಪ್ರೀಮಿಯಂ ಎಷ್ಟು ಜನರಿಂದ ಕಟ್ಟಲಾದೀತು? ನಾವು ಈಗಿರುವ ವಿಮೆ ಹತ್ತು ಲಕ್ಷ ಅಥವಾ ಹದಿನೈದು ಲಕ್ಷ ರೂಪಾಯಿ ಕವರೇಜ್ ಉಳಿಸಿಕೊಂಡು ಅದರ ಮೇಲೆ ಹೆಚ್ಚಿನ ಅಂದರೆ ಉಳಿದ 85 ಲಕ್ಷಕ್ಕೆ ಇನ್ನೊಂದು ಹೊಸ ವಿಮೆಯನ್ನು ಮಾಡಿಸೋಣ. ಹೊಸ ವಿಮೆ ಮಾಡಿಸುವಾಗ ಮೊದಲ ಹದಿನೈದು ಲಕ್ಷ ರೂಪಾಯಿ ಕ್ಲೇಮ್ ಏನಿದೆ ಅದನ್ನು ನಾವು ಇನ್ನೊಂದು ಪಾಲಿಸಿಯ ಮೂಲಕ ಮಾಡಿಕೊಳ್ಳುತ್ತೇವೆ. ಆ ನಂತರ ಆಸ್ಪತ್ರೆ ಬಿಲ್ ಹೆಚ್ಚಾದ ಸಂದರ್ಭದಲ್ಲಿ ಎರಡನೆಯದಾಗಿ ನಿಮ್ಮ ಬಳಿ ಕ್ಲೇಮ್ ಗೆ ಬರುತ್ತೇವೆ ಎನ್ನವುದನ್ನು ಹೇಳಲು ಮರೆಯಬಾರದು. ಎರಡನೇ ಪಾಲಿಸಿ 85 ಲಕ್ಷಕ್ಕೆ ಹತ್ತು ಸಾವಿರ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಪ್ರೀಮಿಯಂನಲ್ಲಿ ಸಿಗುತ್ತದೆ. ಈ ರೀತಿಯ ಸಣ್ಣ ಹ್ಯಾಕ್ ಬಳಸಿಕೊಂಡು ಒಂದು ಕೋಟಿ ರೂಪಾಯಿವರೆಗೂ ಕವರ್ ಇಟ್ಟು ಕೊಳ್ಳುವುದು ಅತ್ಯುತ್ತಮ ನಿರ್ಧಾರ.
ಮೊದಲೇ ಹೇಳಿದಂತೆ ನನ್ನ ಸಂಬಂಧಿಯೊಬ್ಬರು ತಮ್ಮ ಕವರ್ ಎಪ್ಪತೈದು ಲಕ್ಷಕ್ಕೆ ಮಾಡಿಸಿಕೊಂಡರು. ವರ್ಷಗಳು ಎನ್ನುವುದು ಬಹು ಬೇಗೆ ಉರುಳಿ ಹೋಗುತ್ತದೆ. ಆರೋಗ್ಯವಾಗಿದ್ದಾಗ ನಾವು ಕಟ್ಟುವ ಪ್ರೀಮಿಯಂ ದಂಡವಾಗುತ್ತಿದೆ ಎನ್ನಿಸುತ್ತದೆ. ಹೋದರೆ ಹೋಯ್ತು ಎಂದುಕೊಂಡು ಕಟ್ಟಬೇಕು. ಏಕೆಂದರೆ ಯಾವುದೇ ದೊಡ್ಡ ಖಾಯಿಲೆಗಳು ಬಂದರೆ ಅದು ವಿಮೆಯಲ್ಲಿ ಕವರ್ ಆಗಲು ಕನಿಷ್ಠ ಮೂರು ವರ್ಷ ವಿಮೆ ಹಳೆಯದಾಗಿರಬೇಕಾಗುತ್ತದೆ. ವಿಮೆ ಮಾಡಿಸುವಾಗಲೇ ಇದರ ಬಗ್ಗೆ ಮಾಹಿತಿಯನ್ನು ನೀಡಿರುತ್ತಾರೆ. ವಿಮೆ ಮಾಡಿಸಿದ ಮೊದಲ ದಿನದಿಂದ ಯಾವುದು ಕವರ್ ಆಗುತ್ತದೆ. ಯಾವುದು ಆಗುವುದಿಲ್ಲ , ಮತ್ತು ವಿಷಮ ಅನಾರೋಗ್ಯಗಳ ಪಟ್ಟಿಯನ್ನು ನೀಡಿ ,ಅವುಗಳು ಕವರ್ ಆಗಲು ಮೂರು ವರ್ಷಗಳಾಗುತ್ತವೆ ಎನ್ನುವುದನ್ನು ಕೂಡ ವಿವರಿಸುತ್ತಾರೆ. ಹೀಗಾಗಿ ಆರೋಗ್ಯವಾಗಿದ್ದಾಗ ಹೆಚ್ಚಿನ ಮೊತ್ತದ ಕವರ್ ತೆಗೆದುಕೊಳ್ಳುವುದು ಒಳ್ಳೆಯದು.
ನನ್ನ ಸಂಬಂಧಿಗೆ ರಕ್ತದ ಕ್ಯಾನ್ಸರ್ ಎಂದು ಪರೀಕ್ಷೆಗಳಲ್ಲಿ ಕಂಡುಬಂತು. ಈ ರೀತಿಯ ಖುಲಾಸೆ ಆಗುವಷ್ಟರಲ್ಲಿ ಪರಿಸ್ಥಿತಿ ಸುಧಾರಿಸುವ ಹಂತದಿಂದ ಮೇಲಕ್ಕೆ ಹೋಗಿತ್ತು. ಅವರಿಗೆ ಈ ರೋಗದ ಪತ್ತೆಯಾದ ನಂತರ ಕೇವಲ ಒಂದು ವರ್ಷದಲ್ಲಿ ಅವರು ಈ ಜಗತ್ತಿನ ಆಟಕ್ಕೆ ವಿದಾಯ ಹೇಳಿ ಹೊರಟು ಬಿಟ್ಟರು. ಒಂದು ವರ್ಷ ಅವರ ಮನೆಯವರು ಮತ್ತು ಅವರು ಅನುಭವಿಸಿದ ನೋವುಗಳನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಇವೆಲ್ಲವುಗಳ ನಡುವೆ ಒಂದು ವಿಷಯ ಮಾತ್ರ ಚೂರು ಸಮಾಧಾನ ನೀಡುವ ಅಂಶವಾಗಿತ್ತು. ಅದೇ ಅವರು ಮಾಡಿಸಿದ್ದ ಆರೋಗ್ಯ ವಿಮೆ.
ಒಟ್ಟಾರೆ ಒಂದು ವರ್ಷದಲ್ಲಿ ಆಸ್ಪತ್ರೆ ಬಿಲ್ 68 ಲಕ್ಷ ರೂಪಾಯಿ ಆಗಿತ್ತು. ಸಾವು ನೋವಿನ ಜೊತೆಗೆ ಹಣಕಾಸು ಒತ್ತಡವೂ ಸೇರಿಕೊಂಡಿದ್ದರೆ ಬದುಕಿ ಉಳಿದವರು ಜೀವನ ಪೂರ್ತಿ ಆ ಸಾಲವನ್ನು ತೀರಿಸಲು ಶ್ರಮ ಪಡಬೇಕಾಗುತಿತ್ತು.
ಇಲ್ಲೊಂದು ಸತ್ಯವನ್ನು ನಾನು ನಿಮಗೆ ಹೇಳಲು ಬಯಸುತ್ತೇನೆ. ಈ ವಿಷಯಕ್ಕೆ ಎರಡು ವರ್ಷಗಳಾಗುತ್ತಾ ಬಂದಿದೆ. ಹೀಗೆ ನನ್ನ ಸಂಬಂಧಿ ಮರಣ ಹೊಂದಿದ ಕೆಲವು ವಾರಗಳು ನನ್ನ ಬದುಕಿನಲ್ಲೂ ಬದಲಾದವು. ಜೀವನ ಎಂದರೇನು ? ಇದೆಷ್ಟು ಅನಿಶ್ಚಿತ ಎನ್ನುವುದರ ಜೊತೆಗೆ ನನ್ನ ಬಳಿಯಿದ್ದ 25 ಲಕ್ಷ ವಿಮೆ ಸಾಲುವುದಿಲ್ಲ ಎನ್ನುವುದರ ಅರಿವಾಯ್ತು. ಇನ್ನೊಂದು ಕೋಟಿಗೆ ಮಾಡಿಸಿ ಈಗ ಕವರ್ ಒಂದು ಕೋಟಿ ಇಪ್ಪತೈದು ಲಕ್ಷಕ್ಕೆ ಏರಿಸಿಕೊಂಡಿದ್ದೇನೆ. ಬದುಕು ಎನ್ನುವುದು ಯಾವ ಕ್ಷಣದಲ್ಲಿ ಬದಲಾಗುತ್ತದೆ ಎನ್ನವುದನ್ನು ನಾವು ಹೇಳಲು ಸಾಧ್ಯವಿಲ್ಲ. ಮತ್ತದೇ ಹೇಳುವೆ ನಾವಿರುವುದು ಬಹಳ ಅನಿಶ್ಚಿತ ಸಮಾಜದಲ್ಲಿ , ಹೀಗಾಗಿ ನಮ್ಮ ಕೈಯಲ್ಲಿ ಎಷ್ಟು ಸ್ಥಿರತೆಯನ್ನು ಬದುಕಿಕೆ ತಂದುಕೊಳ್ಳಬಹುದು ಅಷ್ಟನ್ನು ತಂದುಕೊಳ್ಳುವಲ್ಲಿ ಜಾಸ್ತಿ ವೇಳೆಯನ್ನು ದಂಡ ಮಾಡಬಾರದು. ಈ ಸಾಲುಗಳನ್ನು ನೀವು ಓದುತ್ತಿದ್ದರೆ ಮತ್ತು ನಿಮ್ಮ ಆರೋಗ್ಯ ವಿಮೆ 25 ಅಥವಾ ಅದಕ್ಕಿಂತ ಕಡಿಮೆ ಲಕ್ಷದಲ್ಲಿದ್ದರೆ ತಕ್ಷಣ ಅದನ್ನು ಅಪ್ ಗ್ರೇಡ್ ಮಾಡಿಕೊಳ್ಳಿ.
ಆರೋಗ್ಯ ವಿಮೆಯನ್ನು ಮಾಡಿಸಿ ನನ್ನ ರಿಲೇಟಿವ್ ಅಷ್ಟರಮಟ್ಟಿಗೆ ತನ್ನ ಕುಟುಂಬದವರ ಮೇಲಿನ ಒತ್ತಡವನ್ನು ಕಡಿಮೆ ಮಾಡಿದ್ದರು. ಆದರೆ ಅವರು ಇನ್ನೊಂದು ಅಂಶದಲ್ಲಿ ಎಡವಿದ್ದರು. ಅವರು ಸರಿಸುಮಾರು ಒಂದು ಕೋಟಿ ರೂಪಾಯಿ ಮನೆ ಕಟ್ಟಲು ಸಾಲವನ್ನು ಮಾಡಿದ್ದರು. ಅದರಲ್ಲಿ 30 ಲಕ್ಷ ರೂಪಾಯಿ ತೀರಿಸಿದ್ದರು . ಇನ್ನೂ 70 ಲಕ್ಷ ರೂಪಾಯಿ ಬಾಕಿ ಉಳಿದಿತ್ತು. ಅವರು ಈ ರೀತಿಯ ಗೃಹ ಸಾಲ ಮಾಡುವಾಗ ಆ ಸಾಲಕ್ಕೆ ಇನ್ಸೂರೆನ್ಸ್ ಮಾಡಿಸುವುದಕ್ಕೆ ಅಲ್ಲಿನ ಬ್ಯಾಂಕ್ನವರು ಒತ್ತಾಯಿಸಿದ್ದಾರೆ. ಕೆಲವೊಮ್ಮೆ ಅದು ಕಡ್ಡಾಯ ಎನ್ನುವಂತೆ ಕೂಡ ಮಾತಾಡುತ್ತಾರೆ. ಆದರೆ ಇವರ ವಿಚಾರದಲ್ಲಿ ಎಲ್ಲಾ ಇನ್ಸೂರೆನ್ಸ್ ತೆಗೆದುಕೊಂಡು ಆಗಿದೆ, ಮತ್ತೇಕೆ ಈ ಹೊಸ ವಿಮೆ? ಎನ್ನುವ ಮನಸ್ಥಿತಿಯಿಂದ ಬೇಡ ಎಂದಿದ್ದಾರೆ. ತಿಂಗಳ ಕಂತಿನಲ್ಲಿ ಇನ್ನೊಂದುವರೆ ಸಾವಿರ ರೂಪಾಯಿ ಮಾತ್ರ ಹೆಚ್ಚಳವಾಗುತ್ತಿತ್ತು. ಆದರೆ ಅದು ದಂಡವಾಗುತ್ತದೆ ಎನ್ನುವ ಕಾರಣ ಅವರು ಬೇಡ ಎಂದಿದ್ದಾರೆ. ಬ್ಯಾಂಕಿನವರು ಕೂಡ ಸುಮ್ಮನಾಗಿದ್ದಾರೆ. ನಾವು ಸಾಯಬಹುದು ಅಥವಾ ಅಕಾಲಿಕವಾಗಿ ಸಾವು ನಮಗೂ ಬರಬಹುದು ಎನ್ನುವ ಆಲೋಚನೆ ಯಾರೂ ಮಾಡುವುದಿಲ್ಲ. ಆ ರೀತಿಯ ಅಂತ್ಯ ಯಾರಿಗೂ ಬರುವುದು ಬೇಡ ಕೂಡ. ಆದರೆ ವಿಮೆ ಮಾಡಿಸುವುದೇ ಆಕಸ್ಮಿಕಗಳು ಘಟಿಸಿದರೆ ಇರಲಿ ಎನ್ನುವ ಕಾರಣಕ್ಕೆ ಎನ್ನುವುದನ್ನು ಮರೆಯಬಾರದು. ಈ ರೀತಿಯ ಅಂತ್ಯವಾದಾಗ ಕಟ್ಟಬೇಕಾದ ಸಾಲದ ಮೊತ್ತವನ್ನು ವಿಮಾ ಕಂಪನಿ ಕಟ್ಟುತ್ತದೆ. ಗೃಹಸಾಲದ ಮೇಲೆ ಈ ರೀತಿಯ ವಿಮೆ ಕಡ್ಡಾಯವಾಗಿ ತೆಗೆದುಕೊಳ್ಳುವುದು ಉತ್ತಮ. ನನ್ನ ರಿಲೇಟಿವ್ ಒಂದೂವರೆ ಸಾವಿರ ಕಂತು ಹೆಚ್ಚಾಗುತ್ತದೆ ಎನ್ನುವುದನ್ನು ಮಾತ್ರ ಗಣನೆಗೆ ತೆಗೆದುಕೊಂಡರು. ಬೇಡ ಎಂದರು. ಬದಲಿಗೆ ಅವರು ಈ ರೀತಿಯ ವಿಮೆ ತೆಗೆದುಕೊಂಡಿದ್ದರೆ ಉಳಿದ ಎಪ್ಪತ್ತು ಲಕ್ಷ ರೂಪಾಯಿ ಹಣವನ್ನು ಅವರ ಕುಟುಂಬದವರು ಪಾವತಿಸಬೇಕಾದ ಅವಶ್ಯಕತೆ ಇರುತ್ತಿರಲಿಲ್ಲ. ಡೆತ್ ಸರ್ಟಿಫಿಕೇಟ್ ನೀಡಿದ್ದರೆ ಸಾಕಾಗಿತ್ತು. ಬ್ಯಾಂಕ್ ಲೋನ್ ಕ್ಲೋಸ್ ಮಾಡುತ್ತಿತ್ತು. ಇಂತಹ ಸಣ್ಣ ಪುಟ್ಟ ಅಂಶಗಳನ್ನು ನಮ್ಮ ಸಮಾಜದಲ್ಲಿ ವಿದ್ಯಾವಂತರು ಎನ್ನಿಸಿಕೊಂಡವರು ಕೂಡ ಮಾಡುತ್ತಿಲ್ಲ.
ತೀರಾ ಇತ್ತೀಚೆಗೆ ಅಂದರೆ ಮಾರ್ಚ್ 2025ರ ಸಮಯದಲ್ಲಿ ನಾನು ಕುಟುಂಬ ಸಮೇತ ನೆದರ್ಲ್ಯಾಂಡ್ ಮತ್ತು ಸ್ಪೇನ್ , ಡೆನ್ಮಾರ್ಕ್ ಪ್ರವಾಸದಲ್ಲಿದ್ದೆ. ನಾನಿದ್ದ ಸಮಯ್ದಲ್ಲಿ ನನ್ನ ಸ್ನೇಹಿತ ಕುಟುಂಬ ಸಮೇತ ಸ್ಪೇನ್ ದೇಶಕ್ಕೆ ಬರುತ್ತಿದ್ದೇನೆ. ಸ್ವಲ್ಪ ನನ್ನ ಜೊತೆಗೆ ಇದ್ದು ಗೈಡ್ ಮಾಡು ಎಂದಿದ್ದ. ನಾನು ಅದಕ್ಕೆ ಸಂತೋಷದಿಂದ ಒಪ್ಪಿಕೊಂಡಿದ್ದೆ. ಆತನಿಗೆ ಟ್ರಾವೆಲ್ ಇನ್ಸೂರೆನ್ಸ್ ತಪ್ಪದೆ ಮಾಡಿಸಿಕೊಂಡು ಬರುವಂತೆ ಹೇಳಿದ್ದೆ. ಯೂರೋಪು , ಅಮೇರಿಕಾ ಅಥವಾ ಮತ್ತ್ಯಾವುದೇ ದೇಶದಲ್ಲಿ ಆರೋಗ್ಯ ತಪ್ಪಿದರೆ ಬಹಳಷ್ಟು ಹಣವನ್ನು ತೆರೆಬೇಕಾಗುತ್ತದೆ. ರೂಪಾಯಿಯಲ್ಲಿ ದುಡಿದು ಡಾಲರಿನಲ್ಲಿ ಅಥಾ ಯುರೋ ನಲ್ಲಿ ಖರ್ಚು ಮಾಡುವುದು ನೋವು ತರಿಸುವ ಬಾಬತ್ತು. 2014 ರಲ್ಲಿ ಅಂದಿಗೆ ವಿಶ್ವದ ಅತಿ ದೊಡ್ಡ cruz ಶಿಪ್ ಲಿಬರ್ಟಿಸ್ ಆಫ್ ಸೀಸ್ ನಲ್ಲಿ ಕುಟುಂಬ ಸಮೇತ ಪ್ರಯಾಣ ಮಾಡಿದ್ದೆ. ಆಗ ಟ್ರಾವೆಲ್ ಇನ್ಸೂರೆನ್ಸ್ ಮಾಡಿಸಿರಲಿಲ್ಲ. 40 ರ ಹರಯದಲ್ಲಿ ಏನಾದೀತು ಎನ್ನುವ ಹುಂಬುತನ. ಎರಡನೇ ದಿನಕ್ಕೆ ಸಿ ಸಿಕ್ಕ್ನೆಸ್ಸ್ ಗೆ ತುತ್ತಾಗಿದ್ದೆ. ಶಿಪ್ಪಿನಲ್ಲಿ ಆಸ್ಪತ್ರೆ ಕೂಡ ಇರುತ್ತೆ. ಡಾಕ್ಟರ್ ಸಿಕ್ಕರು. ಒಂದು ದಿನಕ್ಕೆ ಬರೋಬ್ಬರಿ ಐನೂರು ಯುರೋ ಶುಲ್ಕ ಹಾಕಿದ್ದರು. ವಿಮೆ ಇದ್ದಿದ್ದರೆ ಆ ಹಣ ಕಟ್ಟುವುದು ತಪ್ಪುತ್ತಿತ್ತು.
ಐವತ್ತು ಯುರೋ ಕೊಟ್ಟಿದ್ದರೆ ಸಾಕಿಗಿತ್ತು ಲಕ್ಷ ಯುರೋ ವರೆಗೂ ಕ್ಲೇಮ್ ಸಿಗುತ್ತಿತ್ತು. ಅವತ್ತಿನಿಂದ ಟ್ರಾವೆಲ್ ಇನ್ಸೂರೆನ್ಸ್ ಮಾಡಿಸುವುದು ತಪ್ಪಿಸುವುದಿಲ್ಲ. ಹೀಗಾಗಿ ಗೆಳೆಯನಿಗೂ ಹೇಳಿದ್ದೆ. ಪುಣ್ಯಕ್ಕೆ ಆತ ಮಾಡಿಸಿಕೊಂಡು ಬಂದಿದ್ದ. ಆತ ಪ್ಯಾರಿಸ್ ನೋಡಿಕೊಂಡು ನಂತರ ಸ್ಪೇನ್ ದೇಶಕ್ಕೆ ಬರುವುದು ಎಂದು ಪ್ಲಾನ್ ಮಾಡಿಕೊಂಡಿದ್ದ. ಪ್ಯಾರಿಸ್ ಏರ್ಪೋರ್ಟ್ ಇಳಿದವನೇ ಎರಡು ಹೆಜ್ಜೆ ಹಾಕುವಷ್ಟರಲ್ಲಿ ತನ್ನ ಕಾಲಿಗೆ ತಾನೇ ತೊಡರಿಕೊಂಡು ಬಿದ್ದಿದ್ದಾನೆ. ದೇಹದ ಎರಡು ಮೂರು ಕಡೆ ಮೂಳೆ ಮುರಿದು , ಮುಂದಿನ ಹದಿನೈದು ದಿನ ಆಸ್ಪತ್ರೆಗೆ ಸೇರಿಕೊಂಡ. ಸ್ವಲ್ಪ ಕೂರುವಂತೆ ಆಗದ ಹೊರತು ಪ್ರಯಾಣ ಮಾಡಲು ಅನುಮತಿ ನೀಡುವುದಿಲ್ಲ ಎಂದು ವೈದ್ಯರು ಹೇಳಿದ ಕಾರಣ ಅಷ್ಟು ಸಮಯ ಆಸ್ಪತ್ರೆಯಲ್ಲಿ ಇರಬೇಕಾಯ್ತು. ಕೊನೆಗೆ ಏನನ್ನೂ ನೋಡದೆ ಪ್ಯಾರಿಸಿನ ಆಸ್ಪತ್ರೆಯಲ್ಲಿ ದಿನ ಕಳೆದು ಹೊರಟಾಗ ಕೈಗಿಟ್ಟದ್ದು ೨೫ ಸಾವಿರ ಯುರೋ ಬಿಲ್ ! ಅಂದರೆ ಭಾರತೀಯ ರೂಪಾಯಿ ಸರಿಸುಮಾರು 25ಲಕ್ಷ. ವಿಮೆ ಇದ್ದ ಕಾರಣ ಬಚಾವಾದೆ ಕಣೋ , ಸಾವಿರ ಧನ್ಯವಾದಗಳು ನಿನಗೆ ಎಂದಿದ್ದನಾತ.
ಕೊನೆ ಮಾತು: ಮೇಲಿನವು ಕೇವಲ ಒಂದೆರೆಡು ಉದಾಹರಣೆ ಮಾತ್ರ ! ಹೀಗೆ ವಿಮೆಗೆ ಸಂಬಂಧಿಸಿದ ಹತ್ತಾರು ಕಥೆಗಳನ್ನು ನಿಮಗೆ ನಾನು ಹೇಳಬಹುದು. ಇವೆಲ್ಲವುಗಳ ಅರ್ಥ ಬಹಳ ಸರಳ. ಯಾವೆಲ್ಲಾ ವಿಷಯಗಳಿಗೆ ವಿಮೆ ಸಿಗುತ್ತದೆ, ಮತ್ತು ಅದು ಅವಶ್ಯಕ ಎನ್ನಿಸುತ್ತದೆ ಅವುಗಳನ್ನು ಪಡೆಯುಕೊಳ್ಳುವುದು ಬುದ್ದಿವಂತರ ಲಕ್ಷಣ. ನೆನಪಿರಲಿ ಅಸ್ಥಿರ ಸಮಯದಲ್ಲಿ ಸಾಧ್ಯವಾದಷ್ಟು ಸ್ಥಿರತೆ ಕಂಡುಕೊಳ್ಳುವುದು ಆದ್ಯತೆಯಾಗಬೇಕು.

-ರಂಗಸ್ವಾಮಿ ಮೂಕನಹಳ್ಳಿ
muraram@yahoo.com