ನವಜಾತ ಶಿಶುಗಳು  online desk
ಅಂಕಣಗಳು

ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು (ಕುಶಲವೇ ಕ್ಷೇಮವೇ)

ಆಹಾರದ ವಿಚಾರದಲ್ಲಿ ಆಯುರ್ವೇದವು ತಾಯಿಯ ಎದೆಹಾಲನ್ನೇ ಶಿಶುವಿಗೆ ಅತ್ಯುತ್ತಮ ಔಷಧಿಯೆಂದು ಪರಿಗಣಿಸುತ್ತದೆ.

ನವಜಾತ ಶಿಶುಗಳು ಎಂದರೆ ಹುಟ್ಟಿದಾಗಿನಿಂದ ಒಂದು ತಿಂಗಳ ಅವಧಿಯೊಳಗಿರುವ ಮಕ್ಕಳು. ಈ ಅವಧಿ ಶಿಶುವಿನ ಜೀವನದಲ್ಲಿ ಅತ್ಯಂತ ಸೂಕ್ಷ್ಮ ಹಾಗೂ ಮಹತ್ವದ ಹಂತವಾಗಿದೆ. ಈ ಹಂತದಲ್ಲಿ ಶಿಶುವಿನ ದೇಹದ ಅಂಗಾಂಗಗಳು ಸಂಪೂರ್ಣವಾಗಿ ಬೆಳೆದಿರುವುದಿಲ್ಲ ಮತ್ತು ರೋಗನಿರೋಧಕ ಶಕ್ತಿಯೂ ಕಡಿಮೆಯಿರುತ್ತದೆ. ಆದ್ದರಿಂದ ನವಜಾತ ಶಿಶುಗಳಲ್ಲಿ ಕೆಲ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಹಜ.

ತಾಯಿಯ ಎದೆಹಾಲೇ ಶಿಶುವಿಗೆ ಅತ್ಯುತ್ತಮ ಔಷಧಿ ಏಕೆ?

ಆಹಾರದ ವಿಚಾರದಲ್ಲಿ ಆಯುರ್ವೇದವು ತಾಯಿಯ ಎದೆಹಾಲನ್ನೇ ಶಿಶುವಿಗೆ ಅತ್ಯುತ್ತಮ ಔಷಧಿಯೆಂದು ಪರಿಗಣಿಸುತ್ತದೆ. ಶಿಶುವಿನ ಆರೋಗ್ಯ ಬಹುಮಟ್ಟಿಗೆ ತಾಯಿಯ ಆಹಾರ ಮತ್ತು ಮನಸ್ಥಿತಿಯ ಮೇಲೆ ಅವಲಂಬಿತವಾಗಿದೆ. ತಾಯಿ ಹಗುರವಾದ ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು; ಅತಿಯಾದ ಮಸಾಲೆ, ತಂಪು ಆಹಾರ ಮತ್ತು ಅಶಾಂತ ಜೀವನಶೈಲಿಯನ್ನು ತಪ್ಪಿಸಬೇಕು. ತಾಯಿ ಶಾಂತ ಮನಸ್ಸಿನಲ್ಲಿ ಇದ್ದರೆ ತಾಯಿಹಾಲಿನ ಗುಣಮಟ್ಟವೂ ಉತ್ತಮವಾಗುತ್ತದೆ.

ಕಡಿಮೆ ತೂಕ ಮತ್ತು ದುರ್ಬಲತೆ

ನವಜಾತ ಶಿಶುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮೊದಲ ಸಮಸ್ಯೆ ಕಡಿಮೆ ತೂಕ ಮತ್ತು ದುರ್ಬಲತೆ. ಅಕಾಲಿಕ ಜನನ, ತಾಯಿಯಲ್ಲಿ ಮಗುವಿನ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳ ಕೊರತೆ, ಗರ್ಭಾವಸ್ಥೆಯ ತೊಂದರೆಗಳು ಇದರ ಪ್ರಮುಖ ಕಾರಣಗಳಾಗಿವೆ. ಕಡಿಮೆ ತೂಕವಿರುವ ಶಿಶುಗಳು ಬೇಗ ಸುಸ್ತಾಗುವುದು ಮತ್ತು ಸರಿಯಾಗಿ ಹಾಲು ಕುಡಿಯದಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇಂತಹ ಸಂದರ್ಭಗಳಲ್ಲಿ ತಾಯಿಯ ಎದೆಹಾಲು ಅತ್ಯಂತ ಮುಖ್ಯವಾದ ಪೋಷಕಾಂಶವಾಗಿದೆ. ತಾಯಿ ಸಮತೋಲಿತ ಆಹಾರ ಸೇವಿಸುವುದರಿಂದ ಹಾಲಿನ ಗುಣಮಟ್ಟ ಹೆಚ್ಚಾಗಿ ಶಿಶುವಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

ಜೀರ್ಣಕ್ರಿಯೆಯ ತೊಂದರೆಗಳು

ಜೀರ್ಣಕ್ರಿಯೆಯ ತೊಂದರೆಗಳು ನವಜಾತ ಶಿಶುಗಳ ಮತ್ತೊಂದು ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಹೊಟ್ಟೆ ನೋವು, ವಾಂತಿ, ಮಲಬದ್ಧತೆ ಅಥವಾ ಅತಿಸಾರ ಶಿಶುಗಳಲ್ಲಿ ಕಂಡುಬರುತ್ತದೆ. ನವಜಾತ ಶಿಶುವಿನ ಜೀರ್ಣಕ್ರಿಯೆ ವ್ಯವಸ್ಥೆ ಇನ್ನೂ ಪೂರ್ಣವಾಗಿ ಬೆಳವಣಿಗೆಯಾಗದಿರುವ ಕಾರಣ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಸರಿಯಾದ ಸಮಯಕ್ಕೆ ಹಾಲು ಕೊಡುವುದು, ಹಾಲು ಕೊಟ್ಟ ನಂತರ ಮಕ್ಕಳಿಗೆ ತೇಗು ಬರಿಸುವುದು ಮತ್ತು ಅತಿಯಾಗಿ ಹಾಲು ಕುಡಿಸದಿರುವುದು ಬಹಳ ಮುಖ್ಯ.

ನವಜಾತ ಪೀತಜ್ವರ (ಜಾಂಡಿಸ್)

ನವಜಾತ ಪೀತಜ್ವರ (ಜಾಂಡಿಸ್) ಬಹುತೇಕ ಮಕ್ಕಳಲ್ಲಿ ಮೊದಲ ವಾರದೊಳಗೆ ಕಾಣಿಸಿಕೊಳ್ಳುತ್ತದೆ. ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು ಇದರ ಮುಖ್ಯಲಕ್ಷಣ. ಹೆಚ್ಚಿನ ಸಂದರ್ಭಗಳಲ್ಲಿ ಇದು ಸಹಜವಾಗಿದ್ದು, ತಾಯಿಯ ಹಾಲನ್ನು ಹೆಚ್ಚಾಗಿ ನೀಡುವುದರಿಂದ ನಿಧಾನವಾಗಿ ಕಡಿಮೆಯಾಗುತ್ತದೆ. ಆದರೆ ಪೀತಜ್ವರ ತೀವ್ರವಾಗಿದ್ದರೆ ವೈದ್ಯರ ಬಳಿಗೆ ಕರೆದೊಯ್ಯುವುದನ್ನು ತಡಮಾಡಬಾರದು.

ಚರ್ಮದ ಸಮಸ್ಯೆಗಳು

ಚರ್ಮದ ಸಮಸ್ಯೆಗಳು ನವಜಾತ ಶಿಶುಗಳಲ್ಲಿ ಸಾಮಾನ್ಯ. ಡೈಪರ್ ರಾಶ್, ಬೆವರಿನ ಗುಳ್ಳೆಗಳು, ಮತ್ತು ಸಣ್ಣ ದದ್ದುಗಳು ಚರ್ಮದ ಮೇಲೆ ಕಂಡುಬರುತ್ತವೆ. ಈ ಮಕ್ಕಳ ಚರ್ಮ ಅತಿಸೂಕ್ಷ್ಮವಾಗಿರುವುದರಿಂದ ಸ್ವಚ್ಛತೆ ಕಾಪಾಡುವುದು ಬಹಳ ಮುಖ್ಯ. ಮಗುವಿಗೆ ಹಾಕುವ ಬಟ್ಟೆಗಳು ಸದಾ ಸ್ವಚ್ಛವಾಗಿರಬೇಕು. ಹತ್ತಿ ಬಟ್ಟೆಗಳನ್ನು ಆಯ್ಕೆಮಾಡಿ ಹಾಕಿ. ಡೈಪರ್ ಅಥವಾ ಒಳಉಡುಪುಗಳನ್ನು ನಿಯಮಿತವಾಗಿ ಬದಲಾಯಿಸಬೇಕು. ಸ್ವಲ್ಲಪ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯಿಂದ ಪ್ರತಿದಿನ ಮಸಾಜ್ ಮಾಡುವುದರಿಂದ ಶಿಶುವಿನ ರಕ್ತಸಂಚಾರ ಸುಧಾರಿಸುತ್ತದೆ, ಸ್ನಾಯುಗಳು ಬಲವಾಗುತ್ತವೆ ಮತ್ತು ನರಮಂಡಲಕ್ಕೆ ಪುಷ್ಟಿ ದೊರಕುತ್ತದೆ. ಮಸಾಜ್ ಮಾಡಿದ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಬೇಕು.

ಶಿಶುವಿನ ನಿದ್ರೆ ಮತ್ತು ವಾತಾವರಣ

ಆಯುರ್ವೇದವು ಶಿಶುವಿನ ನಿದ್ರೆ ಮತ್ತು ವಾತಾವರಣಕ್ಕೂ ಹೆಚ್ಚಿನ ಮಹತ್ವ ನೀಡುತ್ತದೆ. ಶಿಶುವನ್ನು ಶಾಂತ, ಸ್ವಚ್ಛ ಮತ್ತು ಧ್ವನಿ ರಹಿತ ವಾತಾವರಣದಲ್ಲಿ ಇಡುವುದು, ಸಮಯಕ್ಕೆ ಸರಿಯಾಗಿ ನಿದ್ರೆ ಕೊಡಿಸುವುದು ಆರೋಗ್ಯಕ್ಕೆ ಸಹಾಯಕ. ಅಲ್ಲದೆ, ಶಿಶುವಿನ ಸುತ್ತಲೂ ಇರುವವರ ಪ್ರೀತಿ, ಸ್ಪರ್ಶ ಮತ್ತು ಮಾತುಗಳು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ.

ಉಸಿರಾಟದ ಸಮಸ್ಯೆಗಳು

ಉಸಿರಾಟದ ಸಮಸ್ಯೆಗಳು ಕೂಡ ಕೆಲ ಶಿಶುಗಳಲ್ಲಿ ಕಂಡುಬರುತ್ತವೆ. ಮೂಗು ಕಟ್ಟಿಕೊಳ್ಳುವುದು, ಉಸಿರಾಟದಲ್ಲಿ ತೊಂದರೆ, ಸಣ್ಣ ಕೆಮ್ಮು ಹವಾಮಾನ ಬದಲಾವಣೆ ಅಥವಾ ಸೋಂಕಿನಿಂದ ಉಂಟಾಗಬಹುದು. ಈ ಸಮಸ್ಯೆಯ ನಿವಾರಣೆಗೆ ಶಿಶುವನ್ನು ಬೆಚ್ಚಗೆ ಇಡುವುದು, ಸ್ವಚ್ಛ ಮತ್ತು ಧೂಳು ರಹಿತ ವಾತಾವರಣ ಒದಗಿಸುವುದು ಮುಖ್ಯ.

ಸೋಂಕುಗಳು

ಯಾವುದೇ ರೀತಿಯ ಸೋಂಕುಗಳು ನವಜಾತ ಶಿಶುಗಳಿಗೆ ಅಪಾಯಕಾರಿಯಾಗಬಹುದು. ಹೊಕ್ಕಳ ಭಾಗದ ಸೋಂಕು, ಜ್ವರ, ಹಾಲು ಕುಡಿಯದಿರುವುದು, ಅತಿಯಾದ ನಿದ್ರೆ ಅಥವಾ ಅಳಲು ಇವು ಗಂಭೀರ ಲಕ್ಷಣಗಳಾಗಿರಬಹುದು. ಇಂತಹ ಸಂದರ್ಭಗಳಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ಕೊನೆಮಾತು: ಒಟ್ಟಾರೆಯಾಗಿ ಹೇಳುವುದಾದರೆ ನವಜಾತ ಶಿಶುಗಳಲ್ಲಿ ಕಾಣಿಸುವ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿದ್ದು ಹೆಚ್ಚಿನವು ಗಂಭೀರವಾಗಿರುವುದಿಲ್ಲ. ಶಿಶುವಿನ ದೇಹ ಇನ್ನೂ ಸಂಪೂರ್ಣವಾಗಿ ಬೆಳೆದಿಲ್ಲದ ಕಾರಣ ಜ್ವರ, ಶೀತ, ಚರ್ಮದ ತೊಂದರೆ, ಹೊಟ್ಟೆಯ ಸಮಸ್ಯೆಗಳು ಕಾಣಿಸಬಹುದು. ಇವುಗಳ ಲಕ್ಷಣಗಳನ್ನು ಬೇಗ ಗುರುತಿಸಿ ಸರಿಯಾದ ಆರೈಕೆ ಮಾಡಿದರೆ ಸಮಸ್ಯೆಗಳು ಹೆಚ್ಚಾಗುವುದಿಲ್ಲ. ಸ್ವಚ್ಛತೆ ಕಾಪಾಡುವುದು, ನಿಯಮಿತವಾಗಿ ಹಾಲೂಡಿಸುವುದು ಮತ್ತು ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯುವುದು ಶಿಶುವಿನ ಉತ್ತಮ ಆರೋಗ್ಯಕ್ಕೆ ಸಹಾಯಕವಾಗುತ್ತದೆ. ಪೋಷಕರ ಪ್ರೀತಿಯ ಆರೈಕೆ ಮತ್ತು ಜಾಗರೂಕತೆ ಶಿಶುವಿನ ಆರೋಗ್ಯಕರ ಬೆಳವಣಿಗೆಗೆ ಅತ್ಯಂತ ಮುಖ್ಯ.


Dr Vasundhara Bhupathi

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ನೋಂದಣಿ ಇಲ್ಲದೆ 'stock tips': ‘Finfluencers’ಗಳ ಸುಮಾರು 1 ಲಕ್ಷ ವಿಡಿಯೋ ಡಿಲೀಟ್​ ಮಾಡಿದ SEBI

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ರಿಷಭ್ ಪಂತ್ ಔಟ್; ಭಾರತ ತಂಡ ಸೇರಿದ 24 ವರ್ಷದ ಆಟಗಾರ!

SCROLL FOR NEXT