online desk
ಅಂಕಣಗಳು

ಯುರೋಪ್, ಗಲ್ಫ್ ಜತೆ ಭಾರತದ ಖದರು ವ್ಯಾಪಾರದ್ದು ಮಾತ್ರವಾ? (ತೆರೆದ ಕಿಟಕಿ)

ಒಂದು ಕಾಲದಲ್ಲಿ ಭಾರತದ ವಿರುದ್ಧ ಇಸ್ಲಾಂ ತೀವ್ರವಾದಕ್ಕೆ ಕುಮ್ಮಕ್ಕು ಕೊಟ್ಟಿದ್ದ, ಅದಕ್ಕೂ ಹಿಂದಕ್ಕೆ ಹೋದರೆ ಒಂದೊಮ್ಮೆ ಭಾರತವನ್ನು ಇಸ್ಲಾಂ ಆಡಳಿತದ ವಸಾಹತನ್ನಾಗಿಸಿದ್ದ ಮರುಭೂಮಿ ಪ್ರಾಂತ್ಯವೇಕೆ ಈಗ ಭಾರತದ ಸ್ನೇಹಿಯಾಗಿದೆ?

ಎರಡು ದಶಕಗಳ ಕಾಲ ಚರ್ಚೆಯಲ್ಲಿದ್ದ ಭಾರತ-ಯುರೋಪ್ ಮುಕ್ತ ವ್ಯಾಪಾರ ಒಪ್ಪಂದವು ಜನವರಿ 27ರಂದು ಸಾಕಾರಗೊಂಡಿತು. ಒಂದು ದಿನ ಮೊದಲು, ಯುರೋಪ್ ಒಕ್ಕೂಟದ ಮುಖ್ಯಸ್ಥೆ ಉರ್ಸುಲಾ ಸೇರಿದಂತೆ ಯುರೋಪಿನ ನೇತಾರರೆಲ್ಲ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡರು. ಗಣರಾಜ್ಯೋತ್ಸವದಲ್ಲಿ ಮಿಲಿಟರಿ ಪ್ರದರ್ಶನ ಮಾಮೂಲು. ಆದರೆ ಈ ಬಾರಿ ಇದರ ವೈಭವ ತುಸು ಹೆಚ್ಚೇ ಎಂಬಂತೆ ಇತ್ತು ಎಂದು ಮಾಧ್ಯಮ ವರದಿಗಳು ಸಾರಿವೆ. ಯುರೋಪಿನ ಪ್ರತಿನಿಧಿಗಳೆಲ್ಲ ಭಾರತದ ಶಸ್ತ್ರ ಹಾಗೂ ಮಾನವ ಬಲಗಳನ್ನು ಕಣ್ತುಂಬಿಸಿಕೊಂಡರು. ಯುರೋಪ್ ಭಾರತದೊಂದಿಗೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದದಲ್ಲಿ ಬಿಸಿನೆಸ್ ಆಯಾಮವಂತೂ ಇದ್ದೇ ಇದೆ. ಆದರೆ ತಕ್ಷಣಕ್ಕೆ ಕಣ್ಣಿಗೆ ಕಾಣದ ಸುರಕ್ಷತೆಯ ಆಯಾಮಗಳೂ ಇಲ್ಲಿವೆ.

ಮತ್ತೆ ಭಾರತದ ಪ್ರಭಾವದಲ್ಲಿ ಮರುಭೂಮಿ ದೇಶಗಳು

ಕೆಲ ವಾರಗಳ ಹಿಂದೆ ಯುಎಇಯ ರಾಜ ಮೂರು ತಾಸುಗಳಮಟ್ಟಿಗೆ ಭಾರತಕ್ಕೆ ತುರ್ತು ಭೇಟಿ ಕೊಟ್ಟು ಪ್ರಧಾನಿ ಮೋದಿಯವರೊಂದಿಗೆ ಮಾತುಕತೆ ನಡೆಸಿದರು. ಅದರ ಬೆನ್ನಲ್ಲೇ ಭಾರತ ಹಾಗೂ ಯುಎಇಗಳ ಮಿಲಿಟರಿ ಕಾರ್ಯತಂತ್ರ ಸಹಕಾರದ ಘೋಷಣೆ ಹೊರಬಿತ್ತು. ಯುಎಇ ಜತೆಗಾಗಲೀ, ಸೌದಿ ಸೇರಿದಂತೆ ಗಲ್ಫ್ ರಾಷ್ಟ್ರಗಳ ಜತೆಗಿನ ಹೆಚ್ಚುತ್ತಿರುವ ಬಾಂಧವ್ಯವಾಗಲೀ ಹೊಸ ಸುದ್ದಿ ಏನಲ್ಲ. ಆದರೆ ಈವರೆಗೆ ಅದು ವ್ಯಾಪಾರ ಮತ್ತು ಆರ್ಥಿಕತೆಗಳಿಗೆ ಸಂಬಂಧಿಸಿದ್ದು ಮಾತ್ರವಾಗಿತ್ತು. ಸದ್ಯದ ಯುಎಇ ಜತೆಗಿನ ಒಪ್ಪಂದ ಯಾವ ಹಂತದ್ದೆಂದರೆ ಇಲ್ಲಿ ಪರಸ್ಪರ ಮಿಲಿಟರಿ ಸಲಕರಣೆಗಳು ಹಾಗೂ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮಾತಿದೆ. ಒಂದು ಸರಳ ಉದಾಹರಣೆ ಮೂಲಕ ಇದರ ಪರಿಣಾಮ ವಿವರಿಸಬಹುದು ಎಂದಾದರೆ, ಭಾರತವು ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸಿನಿಂದ ಅತ್ಯಾಧುನಿಕ ರಫೈಲ್ ಯುದ್ಧವಿಮಾನಗಳನ್ನು ಖರೀದಿಸಿದೆಯಷ್ಟೆ. ಈಗಿರುವಷ್ಟು ಸಾಕಾಗುವುದಿಲ್ಲ ಎಂಬ ವಿಶ್ಲೇಷಣೆಗಳು ಅಲ್ಲಲ್ಲಿ ಬಂದಿದ್ದವು. ಇದೇ ಸಮಯಕ್ಕೆ ಯುಎಇ ಸಹ, ಡಿಸೆಂಬರ್ 2021ರಲ್ಲಿ 80 ರಫೈಲ್ ಯುದ್ಧವಿಮಾನಗಳಿಗೆ ಖರೀದಿ ಪ್ರಸ್ತಾವ ನೀಡಿತ್ತು. ಭಾರತವು ಪ್ರಾರಂಭಿಕ 36 ರಫೈಲ್ ಹೊಂದಿದ್ದು, ಕೆಲವು ವರ್ಷಗಳ ನಂತರ ಇನ್ನೂ 114 ಬಹುಪಯೋಗಿ ಯುದ್ಧವಿಮಾನಗಳನ್ನು ಭಾರತ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಯುಎಇ ಜತೆಗಿನ ಮಿಲಿಟರಿ ಸಹಕಾರವೂ ಸೇರಿಕೊಂಡರೆ ಇದಕ್ಕೆ ಮತ್ತೆ 80 ರಫೈಲ್ ಯುದ್ಧವಿಮಾನಗಳು ಸೇರಿಕೊಳ್ಳುತ್ತವೆ. ಎರಡು ದೇಶಗಳಿಂದ ಸೇರಿ 230 ಯುದ್ಧ ವಿಮಾನಗಳಾಗುವ ವ್ಯವಸ್ಥೆಯೊಂದನ್ನು ಕಲ್ಪಿಸಿಕೊಳ್ಳಿ. ರಫೈಲ್ ಒಂದು ಉದಾಹರಣೆ ಮಾತ್ರ. ಇಲ್ಲಿರುವ ಸಂದೇಶ- ಒಟ್ಟಿಗೇ ವ್ಯಾಪಾರ ಮಾಡೋಣ. ಆದರೆ ಸುರಕ್ಷತೆಯ ಭರವಸೆಯನ್ನೂ ಭಾರತದ ಮುಂದಾಳತ್ವದಲ್ಲಿ ಒಟ್ಟಿಗೇ ಹೊರೋಣ ಎನ್ನುವಂಥದ್ದು.

ಜಗತ್ತಿಗೆ ಕಾಡುತ್ತಿರುವುದು ವ್ಯಾಪಾರ ಬಿಕ್ಕಟ್ಟು ಮಾತ್ರವಲ್ಲ, ಸುರಕ್ಷತಾ ಸಮಸ್ಯೆ ಸಹ

ಒಂದು ಕಾಲದಲ್ಲಿ ಭಾರತದ ವಿರುದ್ಧ ಇಸ್ಲಾಂ ತೀವ್ರವಾದಕ್ಕೆ ಕುಮ್ಮಕ್ಕು ಕೊಟ್ಟಿದ್ದ, ಅದಕ್ಕೂ ಹಿಂದಕ್ಕೆ ಹೋದರೆ ಒಂದೊಮ್ಮೆ ಭಾರತವನ್ನು ಇಸ್ಲಾಂ ಆಡಳಿತದ ವಸಾಹತನ್ನಾಗಿಸಿದ್ದ ಮರುಭೂಮಿ ಪ್ರಾಂತ್ಯವೇಕೆ ಈಗ ಭಾರತದ ಸ್ನೇಹಿಯಾಗಿದೆ? ತಾನು ಯಾವತ್ತಿಗಿದ್ದರೂ ಆಳುವುದಕ್ಕೆ ಇರುವವ, ಎಷ್ಟೆಂದರೂ ಭಾರತವು ಒಂದು ಕಾಲದಲ್ಲಿ ಗುಲಾಮನಾಗಿದ್ದ ದೇಶ ಎಂಬ ಭಾವ ಹೊಂದಿರುವ ಯುರೋಪ್ ಏಕೆ ಈಗ ತನ್ನ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದವು ‘ಮದರ್ ಆಫ್ ಆಲ್ ಡೀಲ್’ ಎನ್ನುತ್ತಿದೆ? ಹಣಕಾಸು ವಹಿವಾಟು ಮತ್ತದರ ಲಾಭಗಳ ಲೆಕ್ಕಾಚಾರ ಒಂದು ಕಡೆ. ಆದರೆ ಇವಿಷ್ಟೇ ಇಂಥದೊಂದು ಬದಲಾವಣೆಯನ್ನು ಪ್ರೇರೇಪಿಸುತ್ತಿಲ್ಲ. ವಾಸ್ತವದಲ್ಲಿ ಗಲ್ಫ್ ಮತ್ತು ಯುರೋಪಿನ ಅಸ್ತಿತ್ವಗಳು ಅಪಾಯದಲ್ಲಿವೆ. ಏನೀ ಅಪಾಯ ಎಂದು ಅರ್ಥ ಮಾಡಿಕೊಳ್ಳಬೇಕಿದ್ದರೆ ಈ ದೇಶಗಳೆಲ್ಲ ಅಮೆರಿಕದೊಂದಿಗೆ ಈವರೆಗೆ ಹೊಂದಿದ್ದ ಬಾಂಧವ್ಯದ ನೆಲೆ ಏನೆಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಗಲ್ಫ್ ದೇಶಗಳು ತಮ್ಮ ತೈಲವನ್ನು ಡಾಲರ್ ಮೌಲ್ಯದಲ್ಲಿ ಮಾರಲು ಒಪ್ಪಿದ್ದೇಕೆ? ಅಲ್ಲಿನ ಸಮೀಕರಣ ಸ್ಪಷ್ಟ. ಇದಕ್ಕೆ ಪ್ರತಿಯಾಗಿ ಅಮೆರಿಕವು ಸೌದಿ ಅರೇಬಿಯ ಸೇರಿದಂತೆ ಗಲ್ಫ್ ದೇಶಗಳ ರಕ್ಷಣಾ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಅಂದರೆ, ಇರಾನ್ ಥರದ ದೇಶಗಳಾಗಲೀ, ಉಗ್ರ ಸಂಘಟನೆಗಳಾಗಲೀ ಗಲ್ಫ್ ದೇಶಗಳ ರಾಜಸತ್ತೆಗಳನ್ನು ಬದಲಿಸಲು ಪ್ರಯತ್ನಿಸಿದ್ದೇ ಆದರೆ ಅಮೆರಿಕವು ಅದಕ್ಕೆ ಪ್ರತಿಕ್ರಿಯಾತ್ಮಕ ಮಿಲಿಟರಿ ಕ್ರಮಕ್ಕೆ ಅಮೆರಿಕ ಸಿದ್ಧವಿತ್ತು, ಅದಕ್ಕೆ ತಕ್ಕ ಮಿಲಿಟರಿ ನೆಲೆಗಳನ್ನೂ ಇಲ್ಲೆಲ್ಲ ಹೊಂದಿತ್ತು. ಹೀಗಾಗಿ ಮುಸ್ಲಿಂ ರಾಷ್ಟ್ರಗಳ ಪೈಕಿ ಇರಾನ್ ಮತ್ತು ಟರ್ಕಿ ಬಿಟ್ಟರೆ ತುಂಬ ದೊಡ್ಡ ಸೇನಾಪಡೆ ಯಾರಲ್ಲೂ ಇಲ್ಲ. ನ್ಯಾಟೊ ರಕ್ಷಣಾ ಒಪ್ಪಂದವು ಸಹ ಇಂಥದೇ ಸುರಕ್ಷತಾ ಕವಚ ಹೊಂದಿದ್ದಾಗಿತ್ತು. ಜನನ ಪ್ರಮಾಣ ದರವು ಕುಗ್ಗಿರುವ ಯುರೋಪಿನ ದೇಶಗಳು ತುಂಬ ದೊಡ್ಡ ಪಡೆಗಳನ್ನೇನೂ ಹೊಂದಿಲ್ಲ. ಆದರೆ, ಇವು ರಕ್ಷಣಾ ಉದ್ಯಮವನ್ನು ತಮ್ಮಲ್ಲಿ ನೆಲೆಗೊಳಿಸಿಕೊಂಡಿವೆ. ಇವುಗಳ ಮೇಲೆ ಯಾರಾದರೂ ದಂಡೆತ್ತಿ ಬಂದ ಸಂದರ್ಭದಲ್ಲಿ ಸಹ ಅಮೆರಿಕ ಪ್ರಣೀತ ಪಡೆ ಇವುಗಳ ಕಾವಲಿಗೆ ಬರುತ್ತದೆ ಎಂಬುದು ಇಲ್ಲಿದ್ದ ಒಪ್ಪಂದ.

ಯಾವಾಗ ಎಗ್ಗಿಲ್ಲದ ಡಾಲರ್ ಮುದ್ರಣದ ಮೂಲಕ ಆ ಹಣದ ಮೇಲೆ ವಿಶ್ವಾಸ ಕುಸಿಯಿತೋ, ತೀರಿಸಲಾಗದಮಟ್ಟದಲ್ಲಿ ಅಮೆರಿಕದ ಸಾಲ ಬೆಳೆಯಿತೋ ಆಗ ಇಂಥದೊಂದು ಪರಿವರ್ತನೆ ಆಗಲೇಬೇಕು. ಇಲ್ಲಿ ಟ್ರಂಪ್ ಈ ಕ್ಷಣದ ಪಾತ್ರಧಾರಿ ಮಾತ್ರ. ಡಾಲರ್ ಕುಸಿತವನ್ನು ಮುಂದೂಡಬಹುದೇಬಿಟ್ಟರೆ ಅದನ್ನು ತಡೆಯಲಾಗದು. ಏಕೆಂದರೆ, ಅದರ ಇಡೀ ಪರಿಕಲ್ಪನೆ ಗಟ್ಟಿಯಲ್ಲದ ತಳಹದಿ ಮೇಲೆ ನಿಂತಿದೆ. ಡಾಲರ್ ಮೌಲ್ಯ ಕಳೆದುಕೊಳ್ಳುವುದು, ಗಲ್ಫ್ ದೇಶಗಳ ತೈಲ ಬರಿದಾಗುತ್ತ ಸಾಗುವುದು, ಯುರೋಪಿನಲ್ಲಿ ಯುವಜನಸಂಖ್ಯೆಯ ಅಭಾವ ಈ ಎಲ್ಲ ಕಾರಣಗಳೂ ಸಂಗಮಿಸಿದ ಮೇಲೆ ಈವರೆಗೆ ಅಮೆರಿಕದೊಂದಿಗೆ ಮಾಡಿಕೊಂಡಿದ್ದ ರಕ್ಷಣಾ ಒಪ್ಪಂದ ಅಪ್ರಸ್ತುತವಾಗುತ್ತದೆ.

ಗ್ರೀನ್ಲೆಂಡ್, ಕೆನಡಾ ಸೇರಿದಂತೆ ತನ್ನ ಮೈತ್ರಿಗಳ ಸಂಪತ್ತನ್ನೇ ತನ್ನದಾಗಿಸಿಕೊಳ್ಳುವ ಆಶಯವನ್ನು ಅಮೆರಿಕದ ಅಧಿಕಾರಸ್ಥರು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ನ್ಯಾಟೊ ಕೂಟಕ್ಕೆ ಮಿತ್ರದೇಶಗಳು ಹೆಚ್ಚು ದುಡ್ಡು ಕೊಡಲಿ ಎಂದು ಸಹ ಟ್ರಂಪ್ ಧಮಕಿ ಹಾಕಿದ್ದಾಗಿದೆ. ಅಲ್ಲದೇ, ಚೀನಾದ ವಿರುದ್ಧ ತೈವಾನನ್ನು ರಕ್ಷಿಸಿಕೊಳ್ಳುವುದಕ್ಕೆ ತನಗೆ ಅಂಥ ಆಸಕ್ತಿಯೇನೂ ಇಲ್ಲ ಎಂದು ಅಮೆರಿಕ ತೋರ್ಪಡಿಸಿಕೊಂಡಿದೆ. ಇಂಥ ಹಲವು ಕಾರಣಗಳಿಂದ, ಇವತ್ತಿಗೆ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕವು ಸೇನಾಬಲದ ಮೂಲಕ ತನ್ನ ಸಹಾಯಕ್ಕೆ ಬರುತ್ತದೆ ಎಂಬ ವಿಶ್ವಾಸ ಯಾವ ಮಿತ್ರರಲ್ಲೂ ಉಳಿದಿಲ್ಲ. ಹಾಗೆಂದೇ ಸೌದಿಯು ಪಾಕಿಸ್ತಾನದ ಸೈನಿಕರನ್ನು ತನ್ನ ರಕ್ಷಣಾ ಕವಚವನ್ನಾಗಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದರೆ, ಯುಎಇ ಭಾರತದ ಬಳಿಸಾರಿದೆ. ಫ್ರಾನ್ಸ್, ಜರ್ಮನಿ ಸೇರಿದಂತೆ ಯುರೋಪಿನ ಹಲವು ದೇಶಗಳು ರಕ್ಷಣಾ ಪರಿಕರಗಳು ಹಾಗೂ ತಂತ್ರಜ್ಞಾನ ಉತ್ಪಾದನೆಯ ನೆಲೆಗಳನ್ನಂತೂ ಹೊಂದಿವೆ. ಅಪಾರ ಜನಬಲವಿರುವ ಭಾರತದೊಂದಿಗೆ ಕೈಜೋಡಿಸುವುದು ಅವಕ್ಕೆ ಭವಿಷ್ಯದಲ್ಲಿ ರಕ್ಷಣೆಯ ಛತ್ರ ಬಯಸುವ ದೃಷ್ಟಿಯಿಂದಲೂ, ಮಾರುಕಟ್ಟೆ ಒದಗಿಸಿಕೊಳ್ಳುವ ದೃಷ್ಟಿಯಿಂದಲೂ ಲಾಭದಾಯಕ.

ಚೀನಾಕ್ಕಿಂತ ಭಾರತವೇ ಹೆಚ್ಚು ತೂಗುವುದೇಕೆ?

ಅಧ್ಯಯನ ವರದಿಗಳು ಹಾಗೂ ಮಾಧ್ಯಮದ ಪ್ರಚಾರಗಳೆಲ್ಲ ಸಾರುತ್ತಿರುವಂತೆ ರಕ್ಷಣೆಯೂ ಸೇರಿದಂತೆ ತಂತ್ರಜ್ಞಾನಗಳ ಅಭಿವೃದ್ಧಿ ವಿಷಯದಲ್ಲಿ ಚೀನಾ ಭಾರತಕ್ಕಿಂತ ಬಹಳವೇ ಮುಂದಿದೆ. ತಾರ್ಕಿಕವಾಗಿ ನೋಡುವುದಾದರೆ ಅಮೆರಿಕವು ಸೃಷ್ಟಿಸಿರುವ ನಿರ್ವಾತವನ್ನು ಚೀನಾ ತುಂಬಬೇಕಿತ್ತಲ್ಲವೇ? ಯುರೋಪ್ ಆಗಲೀ, ಗಲ್ಫ್ ಆಗಲೀ ಚೀನಾದ ವಿರೋಧಿಗಳೇನಲ್ಲ. ಅದರೊಂದಿಗೆ ವ್ಯವಹಾರ ಮಾಡುವ ಎಲ್ಲ ಸಾಧ್ಯತೆಗಳನ್ನು ಇವರೆಲ್ಲ ಮುಕ್ತವಾಗಿಯೇ ಇರಿಸಿಕೊಂಡಿದ್ದಾರೆ. ಆದರೆ ಅಲ್ಲಿನ ವ್ಯವಸ್ಥೆ ಭಾರತದಷ್ಟು ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲ. ಚೀನಾದ್ದು ಇತರ ದೇಶಗಳಿಗೆ ಸಾಲದ ಆಸೆ ತೋರಿಸಿ ಅಲ್ಲಿನ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸುವ ಮಾದರಿ. ಐತಿಹಾಸಿಕವಾಗಿ ಸಹ ಅದು ಭಾರತದ ರೀತಿ ಸಕಾರಾತ್ಮಕ ಪ್ರಭಾವ ಹೊಂದಿಲ್ಲ. ಉದಾಹರಣೆಗೆ, ಹಿಂದು-ಬೌದ್ಧ ವಿಚಾರಗಳ ಮೂಲಕ ಪ್ರಾಚೀನ ಭಾರತವು ಚೀನಾ ಸೇರಿದಂತೆ ಹಲವು ದೇಶಗಳನ್ನು ಸಕಾರಾತ್ಮಕವಾಗಿ ಪ್ರಭಾವಿಸಿತ್ತು. ಪ್ರಥಮ ಮತ್ತು ಎರಡನೇ ಮಹಾಯುದ್ಧಗಳ ಗೆಲುವು ಪಾಶ್ಚಿಮಾತ್ಯರ ಹೆಸರಿನಲ್ಲೇ ದಾಖಲಾಗಿವೆಯಾದರೂ ವಾಸ್ತವದಲ್ಲಿ ಹೋರಾಡಿ ಪ್ರಾಣತೆತ್ತವರು ಭಾರತೀಯ ಯೋಧರೆಂಬುದು ಎಲ್ಲರಿಗೂ ಗೊತ್ತಿದೆ.

ಭವಿಷ್ಯದ ದೃಷ್ಟಿಯಿಂದ ಯೋಚನೆ ಮಾಡಿದರೂ ಚೀನಾ ವಯೋವೃದ್ಧ ದೇಶ. ಮಿಲಿಟರಿ ಮತ್ತು ಮಾರುಕಟ್ಟೆ ಈ ಎರಡೂ ದೃಷ್ಟಿಯಿಂದ ಇದು ನಕಾರಾತ್ಮಕ ಅಂಶ. ಈ ಹಿನ್ನೆಲೆಯಲ್ಲಿ ಭಾರತೀಯರು ಜನಸಂಖ್ಯೆದರವನ್ನು ತಕ್ಕಮಟ್ಟಿಗೆ ಇಟ್ಟುಕೊಳ್ಳಲು ಕಾರಣರಾಗಿರುವ ಉತ್ತರ ಪ್ರದೇಶ ಹಾಗೂ ಬಿಹಾರದವರಿಗೆ ಧನ್ಯವಾದ ಹೇಳಬೇಕಿದೆ. ಗಲ್ಫ್ ಮತ್ತು ಯುರೋಪ್ ಅನ್ನು ಒಳಗೊಂಡ ಐಮೆಕ್ ಕಾರಿಡಾರ್ ಪರಿಕಲ್ಪನೆಗೆ ಭಾರತ ಅದಾಗಲೇ ಚಾಲನೆ ಕೊಟ್ಟಿದೆ. ಈ ವ್ಯಾಪಾರಿ ಮಾರ್ಗದ ಸುರಕ್ಷತೆಯನ್ನು ಭಾರತದ ಪಡೆಗಳೇ ಖಾತ್ರಿಪಡಿಸಲಿವೆ. ಗಲ್ಫ್ ಹೂಡಿಕೆ, ಯುರೋಪಿನ ರಕ್ಷಣಾ ಕಾರ್ಖಾನೆಗಳು ಇದಕ್ಕೆ ಜತೆ ನೀಡಲಿವೆ. ಈ ಮಹಾಯಾನದ ಪ್ರಾರಂಭಿಕ ಹೆಜ್ಜೆಗಳು ಶುರುವಾಗಿವೆ.

- ಚೈತನ್ಯ ಹೆಗಡೆ

cchegde@gmail.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಡಾ ಹಗರಣ: ಸಿದ್ದರಾಮಯ್ಯ ಹಾಗೂ ಕುಟುಂಬಕ್ಕೆ ಬಿಗ್ ರಿಲೀಫ್; ಲೋಕಾಯುಕ್ತ ಸಲ್ಲಿಸಿದ್ದ 'ಬಿ' ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಕೇಂದ್ರದಿಂದ ರಾಜ್ಯಪಾಲರಿಗೆ ಕರೆ, ರಾಜ್ಯ ಸರ್ಕಾರದಿಂದ ಫೋನ್ ಕದ್ದಾಲಿಕೆ ಆರೋಪ, ವಿಧಾನಸಭೆಯಲ್ಲಿ ಬಿಜೆಪಿ ಗದ್ದಲ!

Baramati plane crash: ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನಕ್ಕೂ ಮುನ್ನ ಆಗಿದ್ದೇನು? ಸ್ಫೋಟಕ ಮಾಹಿತಿ ಬಹಿರಂಗ!

ಮಹಾಂತೇಶ್​​ ಬೀಳಗಿ ಪುತ್ರಿಗೆ ಸರ್ಕಾರಿ ನೌಕರಿ: ನೇಮಕಾತಿ ಆದೇಶ ಪತ್ರ ಹಸ್ತಾಂತರಿಸಿದ ಸಿಎಂ; ಕೆಲಸ ಎಲ್ಲಿ ಗೊತ್ತಾ?

ಬೆಳಗಾವಿ: ವಿವಾಹಿತ ಯುವಕ, ಆತನ ಪ್ರೇಯಸಿ ಇಬ್ಬರೂ ಒಟ್ಟಿಗೆ ನದಿಗೆ ಹಾರಿ ಆತ್ಮಹತ್ಯೆ!

SCROLL FOR NEXT