ಯುರೋಪಿಯನ್ ಯೂನಿಯನ್ ನಾಯಕರು- ಭಾರತದ ಪ್ರಧಾನಿ ಮೋದಿ online desk
ಅಂಕಣಗಳು

ಇಂಡೋ ಯೂರೋಪಿಯನ್ ಒಪ್ಪಂದ ಯಾರಿಗೆ ಹೆಚ್ಚು ಲಾಭ? (ಹಣಕ್ಲಾಸು)

ಈ ಒಪ್ಪಂದ ಮೂಲತಃ ಒಂದು Free Trade Agreement (FTA) ಆಗಿದ್ದು, ಭಾರತ ಮತ್ತು ಯುರೋಪಿಯನ್ ಯೂನಿಯನ್ ನಡುವಿನ ವ್ಯಾಪಾರವನ್ನು ಸುಲಭಗೊಳಿಸುವುದೇ ಇದರ ಉದ್ದೇಶ.

27 ಜನವರಿ 2026ರಂದು ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವೆ ಸಹಿ ಆದ ಐತಿಹಾಸಿಕ ವ್ಯಾಪಾರ ಒಪ್ಪಂದವು ಜಾಗತಿಕ ಮಟ್ಟದಲ್ಲಿ ಬಹು ಚರ್ಚೆಗೆ ಕಾರಣವಾಗಿದೆ. ಇದನ್ನು ಕೆಲವರು “Mother of all Trade Deals” ಎಂದು ಕರೆಯುತ್ತಿದ್ದಾರೆ. ಸುಮಾರು 18 ವರ್ಷಗಳ ದೀರ್ಘ ಮಾತುಕತೆಗಳ ನಂತರ ಈ ಒಪ್ಪಂದ ಅಂತಿಮಗೊಂಡಿರುವುದು, ಭಾರತದ ಆರ್ಥಿಕ ಮತ್ತು ರಾಜತಾಂತ್ರಿಕ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.

ಈ ಒಪ್ಪಂದ ಮೂಲತಃ ಒಂದು Free Trade Agreement (FTA) ಆಗಿದ್ದು, ಭಾರತ ಮತ್ತು ಯುರೋಪಿಯನ್ ಯೂನಿಯನ್ ನಡುವಿನ ವ್ಯಾಪಾರವನ್ನು ಸುಲಭಗೊಳಿಸುವುದೇ ಇದರ ಉದ್ದೇಶ. ತೆರಿಗೆ ಕಡಿತ, ಹೂಡಿಕೆ ಉತ್ತೇಜನ, ಸೇವಾ ವಲಯಕ್ಕೆ ಅವಕಾಶ, ಹಾಗೂ ವೃತ್ತಿಪರ ಮತ್ತು ವಿದ್ಯಾರ್ಥಿಗಳ ಓಡಾಟಕ್ಕೆ ಇದು ದಾರಿ ಮಾಡಿಕೊಡಲಿದೆ.

ಒಪ್ಪಂದದ ಹಿನ್ನೆಲೆ

ಭಾರತ ಮತ್ತು ಯುರೋಪಿಯನ್ ಯೂನಿಯನ್ ಎರಡೂ ವಿಶ್ವದ ದೊಡ್ಡ ಆರ್ಥಿಕ ಶಕ್ತಿಗಳಾಗಿವೆ. ಯುರೋಪಿಯನ್ ಯೂನಿಯನ್ ವಿಶ್ವದ ಅತಿದೊಡ್ಡ ವ್ಯಾಪಾರ ಬ್ಲಾಕ್‌ಗಳಲ್ಲಿ ಒಂದಾದರೆ, ಭಾರತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಈ ಎರಡು ಶಕ್ತಿಗಳು ಒಟ್ಟಾಗಿ ಕೈಜೋಡಿಸುವುದರಿಂದ, ಸುಮಾರು 2 ಬಿಲಿಯನ್ ಜನಸಂಖ್ಯೆ ಮತ್ತು ಜಾಗತಿಕ GDPಯ ಸುಮಾರು 25% ಭಾಗವನ್ನು ಒಳಗೊಂಡ ಮಾರುಕಟ್ಟೆ ನಿರ್ಮಾಣವಾಗುತ್ತದೆ.ಗಮನಿಸಿ ನೋಡಿ, ಈ ವಿಷಯ ಯೂರೋಪಿಯನ್ ಒಕ್ಕೂಟಕ್ಕೆಗೊತ್ತಿರಲಿಲ್ಲವೇ? ಇಂತಹ ಒಪ್ಪಂದವನ್ನು ಮಾಡಿಕೊಳ್ಳಲು ಇಷ್ಟೇಕೆ ತಡ ಮಾಡಿತು? ಚೀನಾ ದೇಶವು ಹೇಗೆ ಅಮೆರಿಕಾವನ್ನು ಬಳಸಿಕೊಂಡು ವಿಶ್ವದ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿತು, ಥೇಟ್ ಹಾಗೆ ಭಾರತ ಕೂಡ ಯೂರೋಪಿಯನ್ ಒಕ್ಕೂಟವನ್ನು ಬಳಸಿಕೊಂಡು ಇನ್ನಷ್ಟು ಬಲಾಡ್ಯವಾಗುವ ಸಾಧ್ಯತೆಯನ್ನು ಯೂರೋಪಿಯನ್ ಒಕ್ಕೂಟ ಮನಗಂಡಿತ್ತು. ಹೀಗಾಗಿ ಅವರು ಒಪ್ಪಂದಕ್ಕೆ ಸಹಿಯನ್ನು ಹಾಕಿರಲಿಲ್ಲ. ಯೂರೋಪಿಯನ್ ಒಕ್ಕೊಟದ ಬಹತೇಕ ದೇಶಗಳು ಮತ್ತು ಅಮೇರಿಕಾ ದೇಶದ ನಡುವೆ ಉಂಟಾಗಿರುವ ನಂಬಿಕೆ ಕೊರತೆ (ಟ್ರಸ್ಟ್ ಡೆಫಿಸಿಟ್) ಈ ಒಪ್ಪಂದ ಇಷ್ಟು ಬೇಗ ಜಾರಿಗೆ ಬರಲು ಕಾರಣವಾಗಿದೆ. ಇದರಿಂದ ಸದ್ಯದ ಮಟ್ಟಿಗೆ ಈ ಒಪ್ಪಂದ ವಿನ್ ವಿನ್ ಎನ್ನಿಸುತ್ತದೆ. ದೀರ್ಘಾವಧಿಯಲ್ಲಿ ಭಾರತಕ್ಕೆ ಹೆಚ್ಚು ಲಾಭವಾಗಲಿದೆ. ಕುಸಿಯುತ್ತಿರುವ ಯೂರೋಪಿನ ಜನಸಂಖ್ಯೆ, ಹೆಚ್ಚುತ್ತಿರುವ ಭಾರತದ ಜನಸಂಖ್ಯೆಯ ಕಾರಣ ಇದು ಭಾರತಕ್ಕೆ ವರದಾನವಾಗಲಿದೆ.

ಭಾರತಕ್ಕೆ ಆಗುವ ಪ್ರಮುಖ ಲಾಭಗಳು

  1. ರಫ್ತು ವೃದ್ಧಿ: ಅಂದರೆ ಭಾರತದ ಪದಾರ್ಥಗಳು ಯೂರೋಪಿಯನ್ ಒಕ್ಕೊಟದಲ್ಲಿ ಇನ್ನಷ್ಟು ಕಡಿಮೆ ಬೆಲೆಗೆ ಸಿಗುವ ಕಾರಣ, ಯೂರೋಪಿಯನ್ನರ ಖರೀದಿ ಶಕ್ತಿಯಲ್ಲಿ ಹೆಚ್ಚಳವಾಗುತ್ತದೆ. ಹೀಗಾಗಿ ಭಾರತದ ಅನೇಕ ವಲಯಗಳಲ್ಲಿ ರಫ್ತು ಹೆಚ್ಚಾಗುವ ಸಾಧ್ಯತೆ ಬಹಳ ಹೆಚ್ಚು. ಈ ಒಪ್ಪಂದದಿಂದ ಭಾರತದಿಂದ ಯುರೋಪ್‌ಗೆ ಹೋಗುವ ಟೆಕ್ಸ್ಟೈಲ್ಸ್, ಚರ್ಮದ ಉತ್ಪನ್ನಗಳು, ರತ್ನಾಭರಣ, ರಸಾಯನಿಕಗಳು, ಔಷಧಿ ಉತ್ಪನ್ನಗಳು ಮೇಲೆ ವಿಧಿಸಲಾಗುತ್ತಿದ್ದ ಹೆಚ್ಚಿನ ತೆರಿಗೆ ಕಡಿಮೆಯಾಗಲಿದೆ. ಇದು ಭಾರತೀಯ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (SMEs) ದೊಡ್ಡ ಅವಕಾಶದ ಬಾಗಿಲು ತೆರೆಯಲಿದೆ.

  2. ಉದ್ಯೋಗ ಸೃಷ್ಟಿ: ರಫ್ತು ಹೆಚ್ಚಿದಂತೆ ಉತ್ಪಾದನೆ ಹೆಚ್ಚಾಗುತ್ತದೆ. ಉತ್ಪಾದನೆ ಹೆಚ್ಚಾದಂತೆ ಉದ್ಯೋಗಾವಕಾಶಗಳು ಸಹ ಹೆಚ್ಚುತ್ತವೆ. ವಿಶೇಷವಾಗಿ ಕಾರ್ಮಿಕಾಧಾರಿತ ಕ್ಷೇತ್ರಗಳಲ್ಲಿ ಇದು ಸ್ಪಷ್ಟ ಲಾಭ ನೀಡಲಿದೆ.

  3. ವಿದೇಶಿ ಹೂಡಿಕೆ ಮತ್ತು ತಂತ್ರಜ್ಞಾನ: ಯುರೋಪಿಯನ್ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರಲಿವೆ. ಇದರಿಂದ ಆಧುನಿಕ ತಂತ್ರಜ್ಞಾನ, ಉತ್ತಮ ನಿರ್ವಹಣೆ ಮತ್ತು ಗುಣಮಟ್ಟದ ಉತ್ಪಾದನೆ ಭಾರತಕ್ಕೆ ಬರಲಿದೆ. “Make in India” ಮತ್ತು “Atmanirbhar Bharat” ಯೋಜನೆಗಳಿಗೆ ಇದು ಬಲ ನೀಡುತ್ತದೆ.

  4. ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಅವಕಾಶ: ಈ ಒಪ್ಪಂದದ ಭಾಗವಾಗಿ, ಭಾರತ–EU ನಡುವೆ ಕೌಶಲ್ಯವಂತ ವೃತ್ತಿಪರರು, ಸಂಶೋಧಕರು ಮತ್ತು ವಿದ್ಯಾರ್ಥಿಗಳ ಓಡಾಟ ಸುಲಭವಾಗುವ ವ್ಯವಸ್ಥೆಗಳು ರೂಪುಗೊಳ್ಳುವ ಸಾಧ್ಯತೆ ಇದೆ. ಯುರೋಪ್‌ನಲ್ಲಿ ಓದು ಮತ್ತು ಕೆಲಸದ ಕನಸು ಕಾಣುವವರಿಗೆ ಇದು ಭರವಸೆಯ ಬೆಳಕು.

ಯುರೋಪಿಯನ್ ಯೂನಿಯನ್‌ಗೆ ಆಗುವ ಲಾಭಗಳು

  • ಭಾರತದ ವಿಶಾಲ ಮಾರುಕಟ್ಟೆಗೆ ಪ್ರವೇಶ: 140 ಕೋಟಿ ಜನರ ಭಾರತದ ಮಾರುಕಟ್ಟೆ ಯುರೋಪಿಯನ್ ಕಂಪನಿಗಳಿಗೆ ಭಾರೀ ಆಕರ್ಷಣೆ. ಈ ಒಪ್ಪಂದದಿಂದ ಯುರೋಪಿಯನ್ ಉತ್ಪನ್ನಗಳು ಭಾರತದಲ್ಲಿ ಹೆಚ್ಚು ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಾಗಲಿವೆ.

  • ಕಾರು ಮತ್ತು ಕೈಗಾರಿಕಾ ವಲಯ: ಯುರೋಪಿನ BMW, Mercedes, Volkswagen ಮೊದಲಾದ ಕಾರು ತಯಾರಕ ಕಂಪನಿಗಳಿಗೆ ಭಾರತದಲ್ಲಿ ತೆರಿಗೆ ಕಡಿತದ ಮೂಲಕ ಹೊಸ ಅವಕಾಶಗಳು ಸಿಗಲಿವೆ. ಕೈಗಾರಿಕಾ ಯಂತ್ರೋಪಕರಣಗಳ ರಫ್ತಿಗೂ ಉತ್ತೇಜನ ಸಿಗಲಿದೆ. ಐಷಾರಾಮಿ ಜರ್ಮನ್ ಕಾರುಗಳಿಗೆ ಭಾರತದಲ್ಲಿ ಬಹು ಬೇಡಿಕೆಯಿದೆ. ಇವುಗಳ ಮೇಲಿನ ತೆರಿಗೆ 110 ಪ್ರತಿಶತವಿತ್ತು. ಈ ಒಪ್ಪಂದದ ಕಾರಣ ಅದು 40 ಪ್ರತಿಶತಕ್ಕೆ ಇಳಿದಿದೆ. ಇದು ಹತ್ತು ಪ್ರತಿಶತಕ್ಕೆ ಮುಂಬರುವ ವರ್ಷಗಳಲ್ಲಿ ಇಳಿಯಲಿದೆ. ಆದರೆ ಹೀಗೆ ಮಾರಾಟ ಮಾಡುವ ಒಟ್ಟು ಕಾರುಗಳ ಸಂಖ್ಯೆಯಯನ್ನು ವಾರ್ಷಿಕವಾಗಿ ಎರಡೂವರೆ ಲಕ್ಷಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.

  • ಭೌಗೋಳಿಕ ಮತ್ತು ರಾಜತಾಂತ್ರಿಕ ಲಾಭ: ಚೀನಾ ಮತ್ತು ಅಮೆರಿಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಭಾರತವನ್ನು ಪ್ರಮುಖ ದೀರ್ಘಕಾಲಿಕ ಪಾಲುದಾರರಾಗಿ ಬೆಳೆಸುವುದು ಯುರೋಪಿನ ಪ್ರಮುಖ ತಂತ್ರವಾಗಿದೆ. ಭಾರತದ ನಂಬಿಕೆಗೆ ಅರ್ಹ ದೇಶ. ಹೀಗಾಗಿ ದೀರ್ಘಾವಧಿಯಲ್ಲಿ ಯೂರೋಪಿಯನ್ ಒಕ್ಕೊಟಕ್ಕೆ ಇದರಿಂದ ಲಾಭವಾಗಲಿದೆ.

  • ಕೌಶಲ ವೃತ್ತಿಪರರ ಲಭ್ಯತೆ: ಯೂರೋಪಿಯನ್ ಒಕ್ಕೊಟದಲ್ಲಿ ಇನ್ನೆರೆಡು ಅಥವಾ ಮೂರು ದಶಕದಲ್ಲಿ ಭಾರಿ ಪ್ರಮಾಣದಲ್ಲಿ ಡೆಮೊಗ್ರಾಫಿ ಬದಲಾಗಲಿದೆ. ಸ್ಥಳೀಯ ಯೂರೋಪಿಯನ್ನರ ಜನಸಂಖ್ಯೆ ತೀವ್ರ ಕುಸಿತವನ್ನು ಕಾಣುತ್ತಿದೆ. ಹೀಗಾಗಿ ಅನ್ಯ ದೇಶಗಳಿಂದ ವಲಸೆ ಬರುವ ಜನರನ್ನು ಒಳಗೆ ಬಿಟ್ಟು ಕೊಳ್ಳದೆ ಅವರಿಗೆ ಬೇರೆ ದಾರಿಯಿಲ್ಲ. ಹೀಗೆ ಬಂದವರು ಬಂದು ಧಾಂಧಲೆ ಎಬ್ಬಿಸುವುದನ್ನು ಅವರು ನೋಡಿದ್ದಾರೆ. ಅಲ್ಲದೆ ಅಂತಹ ಜನರ ಬಳಿ ಕೌಶಲಗಳು ಕೂಡ ಇರುವುದಿಲ್ಲ. ಭಾರತದ ಸಭ್ಯ ಮತ್ತು ಕೌಶಲ ವೃತ್ತಿಪರರು ಅಲ್ಲಿನ ಸಮಾಜದ ಏಳ್ಗೆಗೆ ದುಡಿಯುತ್ತಾರೆ ಮತ್ತು ಶಾಂತಿಪ್ರಿಯರು ಎನ್ನುವುದು ಅವರಿಗೆ ಗೊತ್ತಿದೆ. ಹೀಗಾಗಿ ದೀರ್ಘಾವಧಿಯ ಲೆಕ್ಕಾಚಾರದಲ್ಲಿ ಕೂಡ ಯೂರೋಪಿಯನ್ ಒಕ್ಕೊಟಕ್ಕೆ ಲಾಭವಿದೆ.

ಸಾಮಾನ್ಯ ಜನರಿಗೆ ಏನು ಲಾಭ?

ಈ ಒಪ್ಪಂದದ ಲಾಭಗಳು ನೇರವಾಗಿ ಅಥವಾ ಪರೋಕ್ಷವಾಗಿ ಸಾಮಾನ್ಯ ಜನರಿಗೂ ತಲುಪುತ್ತವೆ.

  • ಹಲವಾರು ಯುರೋಪಿಯನ್ ಉತ್ಪನ್ನಗಳು ಕಡಿಮೆ ಬೆಲೆಗೆ ಸಿಗಲಿವೆ.

  • ಉದ್ಯೋಗಾವಕಾಶ ಹೆಚ್ಚಳದಿಂದ ಆದಾಯದ ಅವಕಾಶ ಹೆಚ್ಚಾಗಲಿದೆ.

  • ಗುಣಮಟ್ಟದ ವಸ್ತುಗಳು ಮತ್ತು ಸೇವೆಗಳು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.

  • ಆದರೆ, ದೇಶೀಯ ಉದ್ಯಮಗಳ ರಕ್ಷಣೆಯೂ ಅಗತ್ಯ. ಅತಿಯಾದ ಆಮದುಗಳಿಂದ ಸ್ಥಳೀಯ ಉದ್ಯಮಗಳು ಹಾನಿಯಾಗದಂತೆ ಸರ್ಕಾರ ಸಮತೋಲನ ಕಾಯ್ದುಕೊಳ್ಳಬೇಕಾಗುತ್ತದೆ.

ಗ್ಲೋಬಲ್ ಇಂಪ್ಯಾಕ್ಟ್ ಏನಿರಬಹುದು ?

ಭಾರತದ ಟೆಕ್ಸ್ ಟೈಲ್ ವಲಯಕ್ಕೆ ಇದರಿಂದ ಬಂಪರ್ ಲಾಭವಾಗಲಿದೆ. ಪಕ್ಕದ ಬಾಂಗ್ಲಾ ಯೂರೋಪಿಗೆ ತನ್ನ ಸಿದ್ದ ಉಡುಪುಗಳನ್ನು ಕಳಿಸುತ್ತಿತ್ತು. ಕೆಲವು ತಿಂಗಳುಗಳ ಹಿಂದೆ ಅದು ವಿದೇಶಿ ಶಕ್ತಿಗಳ ಪಿತೂರಿಯಿಂದ ಭಾರತದ ವಿರುದ್ಧ ಮಾತಾಡಿತ್ತು. ಇವತ್ತಿಗೆ ಅಲ್ಲಿನ ಬಹಳಷ್ಟು ಗಾರ್ಮೆಂಟ್ ಫ್ಯಾಕ್ಟಾರಿಗಳು ಬಂದಾಗಿವೆ. ಏಕೆಂದರೆ ಅಲ್ಲಿ ಹಣವನ್ನು ಬ್ಯಾಂಕಿನಿಂದ ಪಡೆದು, ಉತ್ಪತ್ತಿ ಮಾಡಿ, ಮಾರಾಟ ಮಾಡಿ ಬಂದ ಹಣದಿಂದ ಈ ಫ್ಯಾಕ್ಟಾರಿಗಳು ಉಳಿಯಲು ಆಗದಷ್ಟು ಹಣದುಬ್ಬರ ಏರಿಕೆಯಾಗಿದೆ. ಈ ಒಪ್ಪಂದ ಬಾಂಗ್ಲಾ ದೇಶವನ್ನು ಆರ್ಥಿಕವಾಗಿ ದಿವಾಳಿ ಎಬ್ಬಿಸಲಿವೆ.

ಭಾರತದ ಟೆಕ್ಸ್ ಟೈಲ್ ಮಾರುಕಟ್ಟೆ ತೀವ್ರವಾಗಿ ಬೆಳೆಯಲಿದೆ. ಈ ಒಪ್ಪಂದ ಅಮೇರಿಕಾ ದೇಶದ ಧ್ವನಿಯನ್ನು ಕೂಡ ಒಂದಷ್ಟು ಮೆತ್ತಗೆ ಮಾಡಲಿದೆ. ಸೌತ್ ಏಷ್ಯಾದಲ್ಲಿ ಚೀನಾದ ಪ್ರಾಬಲ್ಯಕ್ಕೆ ಭಾರತ ಸೆಡ್ಡು ಹೊಡೆಯಲಿದೆ. ಚೀನಾ ಮುಂದಿನ ವರ್ಷಗಳಲ್ಲಿ ಭಾರತದೊಂದಿಗೆ ಇನ್ನಷ್ಟು ಗೌರವಯುತವಾಗಿ ನಡೆದುಕೊಳ್ಳಬೇಕಾದ ಅನಿವಾರ್ಯತೆಯನ್ನು ಈ ಒಪ್ಪಂದ ಸೃಷ್ಟಿಸಲಿದೆ. ಇಷ್ಟು ದೊಡ್ಡ ಮಟ್ಟದ ವ್ಯಾಪಾರ ಯುರೋ ಮತ್ತು ರೂಪಯಿಯಲ್ಲಿ ಆಗಲು ಶುರುವಾದರೆ ಅದು ಅಮೆರಿಕಾದ ಡಾಲರಿಗೆ ಕೂಡ ಬಹುದೊಡ್ಡ ಪೆಟ್ಟು ನೀಡಲಿದೆ.

ಕೊನೆ ಮಾತು: ಈ ಒಪ್ಪಂದವು ಎರಡೂ ಪಕ್ಕಕ್ಕೂ ಲಾಭದ ಒಪ್ಪಂದ. ಆದರೆ, ಕಡಿಮೆ ಅವಧಿಯಲ್ಲಿ ಯುರೋಪಿಯನ್ ಕಂಪನಿಗಳಿಗೆ ಹೆಚ್ಚು ಲಾಭವಾಗುವ ಸಾಧ್ಯತೆ ಹೆಚ್ಚು. ದೀರ್ಘಾವಧಿಯಲ್ಲಿ ಭಾರತಕ್ಕೆ ಉದ್ಯೋಗ, ತಂತ್ರಜ್ಞಾನ ಮತ್ತು ಆರ್ಥಿಕ ಬೆಳವಣಿಗೆಯ ಮೂಲಕ ದೊಡ್ಡ ಲಾಭವಾಗಲಿದೆ. ಜಾಗತಿಕ ವ್ಯಾಪಾರಕ್ಕೆ ಹೊಸ ದಿಕ್ಕು ಇದು ತೋರಲಿದೆ. ಇದು ಕೇವಲ ಎರಡು ದೇಶಗಳ ನಡುವಿನ ಒಪ್ಪಂದ ಮಾತ್ರವಲ್ಲ. ಇದು ಜಾಗತಿಕ ಶಕ್ತಿಯಲ್ಲಿ ಆಗಿರುವ ಬದಲಾವಣೆಯನ್ನು ಸಹ ಹೇಳುತ್ತಿದೆ. ಜಗತ್ತು ಇವತ್ತಿಗೆ ಯೂನಿಪೊಲಾರ್ ಅಂದರೆ ಒಂದು ದೇಶದ ಆದೇಶದ ಮೇಲೆ ನಡೆಯುತ್ತಿಲ್ಲ, ಇವತ್ತಿಗೆ ಜಗತ್ತು ಮಲ್ಟಿ ಪೋಲಾರ್ ಅಂದರೆ ವಿವಿಧ ಶಕ್ತಿ ಕೇಂದ್ರಗಳಾಗಿ ವಿಭಜಿತವಾಗಿದೆ ಎನ್ನುವುದನ್ನು ಹೇಳುತ್ತಿದೆ. ಸರಿಯಾದ ನೀತಿ, ಜಾಗ್ರತೆ ಮತ್ತು ಸಮತೋಲನದಿಂದ ವ್ಯಾಪಾರವನ್ನು ಕಾಪಾಡಿ ಕೊಂಡರೆ ಇದು ಭಾರತವನ್ನು ಮುಂದಿನ ದಶಕದಲ್ಲಿ ಆರ್ಥಿಕ ಮಹಾಶಕ್ತಿಯನ್ನಾಗಿ ರೂಪಿಸುತ್ತದೆ.

-ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

'ಅಪಾಯಕಾರಿ ಪರಿಣಾಮಕ್ಕೆ ಕಾರಣ, ಸಮಾಜ ವಿಭಜನೆ': ಜಾತಿ ತಾರತಮ್ಯದ ವಿರುದ್ಧದ ಹೊಸ UGC ನಿಯಮಗಳಿಗೆ ಸುಪ್ರೀಂ ಕೋರ್ಟ್ ತಡೆ!

ಬೆಂಗಳೂರು: 4 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾ ಬಲೆಗೆ ಬಿದ್ದ ಕೆ.ಪಿ ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್‌

ಕೊಡಗಿನ ಯುವತಿಯರ ಜತೆ ರಾಸಲೀಲೆ; ವಿಡಿಯೋ ಮಾಡಿ, ಪ್ರಸಾರ: ಬಿಬಿಎ ವಿದ್ಯಾರ್ಥಿ ಮೊಹಮ್ಮದ್ ಬಂಧನ

ಛತ್ತೀಸ್‌ಗಢ: ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳ ಹತ್ಯೆ

SCROLL FOR NEXT