ಸಂಗ್ರಹ ಚಿತ್ರ online desk
ಅಂಕಣಗಳು

ಆಳ ಸಮುದ್ರ, ಭಾರೀ ಅಪಾಯ: ಇರಾನನ್ನು ತಪ್ಪಿಸಿ, ವಾಹನಗಳಿಗೆ ಪೆಟ್ರೋಲ್ ತುಂಬುವ ಟ್ಯಾಂಕರ್‌ಗಳು (ಜಾಗತಿಕ ಜಗಲಿ)

ಇಂತಹ ಅಪಾಯದ ಸಾಧ್ಯತೆ ಆ ವಾರ ನಿಜವಾಗಿತ್ತು. ಇರಾನಿನ ಪ್ರಬಲ ರೆವಲ್ಯೂಷನರಿ ಗಾರ್ಡ್ಸ್ (ಇರಾನಿನ ಪ್ರಮುಖ ಮಿಲಿಟರಿ ಪಡೆ) ಹಡಗುಗಳಿಗೆ ಒಂದೋ ಇರಾನಿನ ಮಾರ್ಗ ಬಳಸಿ, ಅಥವಾ ದಾಳಿಯನ್ನು ಎದುರಿಸಿ ಎಂದು ಎಚ್ಚರಿಕೆ ನೀಡಿತ್ತು.

ಜುಲೈ 2026ರ ಆರಂಭದಲ್ಲಿ, ಇರಾನ್ ಹಾಗೂ ಅಮೆರಿಕ - ಇಸ್ರೇಲ್ ನಡುವಿನ ಉದ್ವಿಗ್ನ ಮತ್ತು ದುರ್ಬಲ ಕದನ ವಿರಾಮ ಏರ್ಪಟ್ಟಿತ್ತು. ಇದೇ ಸಮಯದಲ್ಲಿ, ಲಿಲಾ ವಾದಿನಾರ್ ಎನ್ನುವ ಬೃಹತ್ ತೈಲ ಟ್ಯಾಂಕರ್ ಒಮಾನಿನ ಕರಾವಳಿ ತೀರದಾಚೆ ಮೌನವಾಗಿ ತೇಲುತ್ತಾ ಸಾಗುತ್ತಿತ್ತು. ಅದರ ಬೃಹತ್ ಟ್ಯಾಂಕಿನ ಒಳಗೆ 2 ಮಿಲಿಯನ್ ಬ್ಯಾರಲ್‌ಗಳಷ್ಟು ಕಚ್ಚಾ ತೈಲವಿದ್ದು, ಇದಕ್ಕಾಗಿ ಜಗತ್ತು ಕಾತರಿಸುತ್ತಿತ್ತು. ಆದರೆ, ಈ ಹಡಗು ಮುಕ್ತವಾಗಿ ಸಂಚರಿಸಲು ಸಾಧ್ಯವಿರಲಿಲ್ಲ. ಹಡಗಿನ ಮಾಲಕರು ಒಂದು ಆತಂಕಕಾರಿ ಸವಾಲನ್ನು ಎದುರಿಸುತ್ತಿದ್ದರು: ಅದೇನೆಂದರೆ, ನಾವು ಇರಾನ್ ತೀರಕ್ಕೆ ಸನಿಹದಲ್ಲಿ ಹೊರ್ಮುಸ್ ಜಲಸಂಧಿಯ ಮೂಲಕ ಹಾದು ಹೋಗಬೇಕೇ ಬೇಡವೇ?

ಅದಕ್ಕೆ ಕೆಲವು ಗಂಟೆಗಳ ಮುನ್ನ, ಭಾರತದ ಧ್ವಜವನ್ನು ಹೊಂದಿದ್ದ ಈ ಹಡಗು ಭಯದಿಂದ ಹಿಂದಕ್ಕೆ ತೆರಳಿತ್ತು. ಇದೇ ಮಾರ್ಗವನ್ನು ಬಳಸಿ ಸಾಗಿದ್ದ ಇತರ ಟ್ಯಾಂಕರ್‌ಗಳ ಮೇಲೆ ಇರಾನಿಯನ್ ಕ್ಷಿಪಣಿಗಳು ದಾಳಿ ನಡೆಸಿದ್ದವು. ಈ ಹಡಗುಗಳ ಮಾಲಕರಿಗೆ ಒಂದು ವೇಳೆ ಇರಾನ್ ಹಡಗುಗಳನ್ನು ಸಾಗಲು ಅನುಮತಿ ನೀಡಿದರೆ, ಆಗ ಹಡಗು ಸುಲಭವಾಗಿ ಸುರಕ್ಷಿತವಾಗಿರಬಹುದು ಎನ್ನುವುದು ಅರಿವಿತ್ತು. ಆದರೆ, ಇಲ್ಲಿ ಇನ್ನೊಂದು ಆತಂಕವೂ ಇತ್ತು. ಅದೇನೆಂದರೆ, ಇರಾನ್ ಹಡಗುಗಳನ್ನು ವಶಪಡಿಸಿಕೊಂಡು, ಅದನ್ನು ತಾನೇ ಹಿಡಿದಿಟ್ಟುಕೊಳ್ಳಬಹುದಿತ್ತು. ಆದ್ದರಿಂದ ಹಡಗು ಮಾಲಕರು ಈ ಯೋಜನೆಯನ್ನು ಅನುಸರಿಸಲು ನಿರಾಕರಿಸಿದರು.

ಇದು ಏಕೆ ಮುಖ್ಯವಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಹೊರ್ಮುಸ್ ಜಲಸಂಧಿ ಎನ್ನುವುದು ಕೊಲ್ಲಿಯ ಬಾಯಿಯ ಬಳಿ ಇರುವ ಒಂದು ಕಿರಿದಾದ ಗೇಟ್ ಎಂದುಕೊಳ್ಳಿ. ಇತ್ತೀಚಿನ ಯುದ್ಧಕ್ಕೂ ಮುನ್ನ, ಜಗತ್ತಿನ ಬಹುತೇಕ ಬಳಕೆಯ ಐದನೇ ಒಂದು ತೈಲ ಮತ್ತು ನೈಸರ್ಗಿಕ ಅನಿಲ ಈ ಒಂದು ಮಾರ್ಗದ ಮೂಲಕವೇ ಹಾದುಹೋಗುತ್ತಿತ್ತು. ಒಂದು ವೇಳೆ ಹಡಗುಗಳು ಈ ಮೂಲಕ ಸಂಚರಿಸುವುದು ನಿಲ್ಲಿಸಿದರೆ, ಭಾರತವೂ ಸೇರಿದಂತೆ, ಜಗತ್ತಿನಾದ್ಯಂತ ಪೆಟ್ರೋಲ್ ದರಗಳು ದುಬಾರಿಯಾಗಲಿವೆ.

(ಹೊರ್ಮುಸ್ ಜಲಸಂಧಿಯ ನಕ್ಷೆ - ಉತ್ತರ ದಿಕ್ಕಿನಲ್ಲಿ ಇರಾನ್, ದಕ್ಷಿಣ ದಿಕ್ಕಿನಲ್ಲಿ ಒಮಾನ್)

ಸುದೀರ್ಘ ಚರ್ಚೆಯ ಬಳಿಕ, ಲಿಲಾ ವಾದಿನಾರ್ ಹಡಗಿನ ಮಾಲಕರು ಒಂದು ಬುದ್ಧಿವಂತಿಕೆಯ ಯೋಜನೆಯೊಂದನ್ನು ರೂಪಿಸಿದರು. ಅವರು ರಾತ್ರಿಯ ವೇಳೆ ಒಮಾನ್ ಮಾರ್ಗದ ಮೂಲಕ ಸಾಗಲು ನಿರ್ಧರಿಸಿ, ಎಐಎಸ್ (ಆಟೋಮ್ಯಾಟಿಕ್ ಐಡೆಂಟಿಫಿಕೇಶನ್ ಸಿಸ್ಟಮ್) ಅನ್ನು ಸ್ಥಗಿತಗೊಳಿಸಿದರು. ಸಾಮಾನ್ಯವಾಗಿ, ಪ್ರತಿಯೊಂದು ಹಡಗೂ ಎಐಎಸ್ ಮೂಲಕ ತನ್ನ ಲೈವ್ ಲೊಕೇಶನ್ ಹಂಚಿಕೊಳ್ಳುತ್ತದೆ. ಇದನ್ನು ವಾಟ್ಸಾಪ್ ಮೂಲಕ ಲೈವ್ ಲೊಕೇಶನ್ ಹಂಚಿಕೊಳ್ಳುವುದಕ್ಕೆ ಹೋಲಿಸಬಹುದು. ಇದನ್ನು ಸ್ಥಗಿತಗೊಳಿಸುವ ಮೂಲಕ ಹಡಗು ಅಗೋಚರವಾಗಿ, ಅದನ್ನು ಯಾರೂ ಹಿಂಬಾಲಿಸಲು ಸಾಧ್ಯವಿಲ್ಲ.

ಆದರೆ ಒಮಾನ್ ಬದಿಯಿಂದ ಸಾಗಿದ್ದೇಕೆ? ಏಕೆಂದರೆ, ಒಮಾನಿನ ಕರಾವಳಿಯ ಬಳಿ ಇರುವ 22 ಕಿಲೋಮೀಟರ್ ಪ್ರದೇಶ ಮಾತ್ರ ಸಂಪೂರ್ಣ ಹೊರ್ಮುಸ್ ಜಲಸಂಧಿಯ ಪೈಕಿ ಇರಾನ್‌ಗೆ ಸುಲಭವಾಗಿ ನಿಯಂತ್ರಿಸಲು ಅಥವಾ ಸಮುದ್ರ ಮೈನ್‌ಗಳ ಮೂಲಕ ತಡೆಗಟ್ಟಲು ಸಾಧ್ಯವಿಲ್ಲದ ಪ್ರದೇಶವಾಗಿದೆ. ಸಮುದ್ರ ಮೈನ್‌ಗಳೆಂದರೆ ನೀರಿನಾಳದಲ್ಲಿ ತೇಲುವ ಸ್ಫೋಟಕಗಳಾಗಿವೆ. ಮೇ ತಿಂಗಳ ಕೊನೆಯ ಭಾಗದ ಬಳಿಕ, ಈ ಕಿರಿದಾದ ಮಾರ್ಗದ ಮೂಲಕ ಸಾಗುವ ಹಡಗುಗಳಿಗೆ ವಾಯು ರಕ್ಷಣೆ ಒದಗಿಸುತ್ತಿದ್ದು, ಆ ಮೂಲಕ ಗಲ್ಫ್‌ನಿಂದ ತೆರಳುವ ಪಾಶ್ಚಾತ್ಯ ಟ್ಯಾಂಕರ್‌ಗಳಿಗೆ ಸುರಕ್ಷಿತ ಮಾರ್ಗ ಒದಗಿಸುತ್ತದೆ.

ಫೈನಾನ್ಸಿಯಲ್ ಟೈಮ್ಸ್ 7 ಸಾಗಾಣಿಕಾ ಸಂಸ್ಥೆಗಳು ಮತ್ತು ಸಲಹೆಗಾರರೊಡನೆ ಸಮಾಲೋಚನೆ ನಡೆಸಿದ್ದು, ಕೇವಲ ಬೆರಳೆಣಿಕೆಯಷ್ಟು ಹಡಗುಗಳು ಮಾತ್ರವೇ ಪರ್ಯಾಯ ಇರಾನಿಯನ್ ಮಾರ್ಗವನ್ನು ಬಳಸುವ ಧೈರ್ಯ ಪ್ರದರ್ಶಿಸಿವೆ. ಇದಕ್ಕೆ ಕಾರಣವೂ ಸರಳ. ಇರಾನಿನ ಷರತ್ತುಗಳನ್ನು ಒಪ್ಪಿಕೊಂಡರೆ ಅಪಾರ ಪ್ರಮಾಣದ ಪಾಶ್ಚಾತ್ಯ ನಿರ್ಬಂಧಗಳನ್ನು ಎದುರಿಸಬೇಕಾಗಬಹುದು. ಒಂದು ವೇಳೆ ಇರಾನಿನ ಸಮುದ್ರ ಪ್ರದೇಶದಲ್ಲಿ ಏನಾದರೂ ತೊಂದರೆ ಉಂಟಾದರೆ, ಆಗ ಹಡಗನ್ನು ರಕ್ಷಿಸುವ ಯಾವ ಭರವಸೆಯೂ ಇರುವುದಿಲ್ಲ.

ಇಂತಹ ಅಪಾಯದ ಸಾಧ್ಯತೆ ಆ ವಾರ ನಿಜವಾಗಿತ್ತು. ಇರಾನಿನ ಪ್ರಬಲ ರೆವಲ್ಯೂಷನರಿ ಗಾರ್ಡ್ಸ್ (ಇರಾನಿನ ಪ್ರಮುಖ ಮಿಲಿಟರಿ ಪಡೆ) ಹಡಗುಗಳಿಗೆ ಒಂದೋ ಇರಾನಿನ ಮಾರ್ಗ ಬಳಸಿ, ಅಥವಾ ದಾಳಿಯನ್ನು ಎದುರಿಸಿ ಎಂದು ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯ ಬೆನ್ನಲ್ಲೇ ಸೋಮವಾರ ಮತ್ತು ಮಂಗಳವಾರ ಟ್ಯಾಂಕರ್‌ಗಳ ಮೇಲೆ ದಾಳಿ ನಡೆದವು. ಗಾಬರಿಗೊಂಡ ಹಲವಾರು ಹಡಗುಗಳು ಹಿಂದಕ್ಕೆ ಮರಳಿದವು.

ಒಮಾನ್ ಮಾರ್ಗದ ಮೂಲಕ ನಡೆಯುವ ಪ್ರತಿಯೊಂದು ಪ್ರಯಾಣವನ್ನೂ ಒಂದು ಮಿಲಿಟರಿ ಕಾರ್ಯಾಚರಣೆಯಂತೆಯೇ ಯೋಜಿಸಲಾಗುತ್ತಿದೆ. ಇಂತಹ ಪ್ರಯಾಣವನ್ನು ಆರಂಭಿಸುವ ಮುನ್ನ ಹಡಗಿನ ಮಾಲೀಕರು, ಚಾರ್ಟರ್ ಕಂಪನಿ (ಹಡಗನ್ನು ಬಾಡಿಗೆಗೆ ಪಡೆಯುವ ಸಂಸ್ಥೆ), ವಿಮಾ ಕಂಪನಿ, ಹಡಗಿನ ಸಿಬ್ಬಂದಿ, ಮತ್ತು ಅಮೆರಿಕನ್ ನೌಕಾಪಡೆಯ ನಡುವೆ ಜಾಗರೂಕ ಸಮಾಲೋಚನೆ ನಡೆಸಬೇಕಾಗುತ್ತದೆ ಎಂದು ಫೈನಾನ್ಸಿಯಲ್ ಟೈಮ್ಸ್ ವರದಿ ಮಾಡಿದೆ. ಎಲ್ಲರೂ ಒಪ್ಪಿಗೆ ಸೂಚಿಸುವ ತನಕ ಯಾವ ಹಡಗೂ ಪ್ರಯಾಣಿಸಲು ಸಾಧ್ಯವಿಲ್ಲ.

ಸಿಬ್ಬಂದಿಗಳ ಸುರಕ್ಷತೆ ಮೊದಲ ಆದ್ಯತೆಯಾಗಿದೆ. 'ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿತ್ತು' ಎಂದು ಓರ್ವ ಹಿರಿಯ ಸಾಗಾಣಿಕಾ ಎಕ್ಸಿಕ್ಯುಟಿವ್ ಹೇಳಿದ್ದಾರೆ. ಈ ಅಪಾಯದ ಪ್ರಯಾಣವನ್ನು ಕೈಗೊಳ್ಳಬೇಕೇ ಬೇಡವೇ ಎನ್ನುವುದನ್ನು ತೀರ್ಮಾನಿಸಲು ನಾವಿಕರಿಗೇ ಬಹುತೇಕ ಅವಕಾಶ ನೀಡಲಾಗಿತ್ತು. ಈ ಮಾರ್ಗದ ಮೂಲಕ ಪ್ರಯಾಣಿಸಲು ನಿರಾಕರಿಸುವವರನ್ನು ಮರಳಿ ಕಳುಹಿಸಿ, ಅವರ ಬದಲು ಬೇರೆಯವರನ್ನು ನಿಯೋಜಿಸಲಾಗುತ್ತಿತ್ತು. ಈ ಮಾರ್ಗದ ಮೂಲಕ ಸಂಚರಿಸಲು ಒಪ್ಪಿದವರಿಗೆ ಅವರ ಸಂಬಳದ ದುಪ್ಪಟ್ಟು, ಮೂರು ಪಟ್ಟು ಸಂಬಳ ನೀಡಲಾಗುತ್ತಿತ್ತು. ಇದು ಅಪಾಯವನ್ನು ಎದುರಿಸುವ ನಾವಿಕರಿಗೆ ನೀಡುವ ಬಹುಮಾನವೂ ಆಗಿತ್ತು.

ಸಂಚಾರಕ್ಕೂ ಮುನ್ನ, ಪ್ರತಿಯೊಂದು ಹಡಗೂ ಅಮೆರಿಕನ್ ನೌಕಾಪಡೆಯ ಮಾರ್ಗದರ್ಶನ ತಂಡಕ್ಕೆ ಮಾಹಿತಿ ನೀಡುತ್ತವೆ. ಈ ತಂಡ ಹಡಗಿಗೆ ನಿಖರ ಮಾರ್ಗ, ಸುರಕ್ಷಿತ ಸಮಯ (ಕದನ ವಿರಾಮಕ್ಕೆ ಮುನ್ನ ರಾತ್ರಿ 10 ಗಂಟೆ), ಮತ್ತು ಮೈನ್‌ಗಳ ಕುರಿತು ಎಚ್ಚರಿಕೆ ನೀಡುತ್ತಿತ್ತು.

ಹಡಗುಗಳು ತಮ್ಮ ಇಲೆಕ್ಟ್ರಾನಿಕ್ ಉಪಕರಣಗಳನ್ನು ಸ್ಥಗಿತಗೊಳಿಸಿ, ಪೋರ್ತೋಲ್ಸ್ ಎನ್ನುವ ಸಣ್ಣ ಕಿಟಕಿಗಳನ್ನು ಮುಚ್ಚಿ, ತಮ್ಮ ಸ್ಥಾನವನ್ನು ಬಚ್ಚಿಡುತ್ತಿದ್ದವು. ಒಂದು ಬಾರಿ ಚಲನೆ ಆರಂಭಗೊಂಡ ಬಳಿಕ, ಸುರಕ್ಷತೆಗಾಗಿ ಹಲವು ಹಡಗುಗಳ ಒಂದು ಗುಂಪಾಗಿ ಸಂಚರಿಸುತ್ತಿದ್ದವು. ಈ ಅಪಾಯಕಾರಿ 6ರಿಂದ 7 ಗಂಟೆಗಳ ಪ್ರಯಾಣದಲ್ಲಿ, ಹಡಗುಗಳು ಪ್ರತಿ ಅರ್ಧ ಗಂಟೆಗೊಮ್ಮೆ ತಮ್ಮ ಸ್ಥಾನದ ಮಾಹಿತಿ ನೀಡುತ್ತಿದ್ದವು‌.

ಆದರೆ ಇಲ್ಲೊಂದು ನೋವಿನ ವಿಚಾರವೂ ಇದೆ. ಅಮೆರಿಕದ ವಾಯು ರಕ್ಷಣೆ ಪಡೆಯುವ ಸಲುವಾಗಿ, ಹಡಗು ತನ್ನ ವಾಸ್ತವ ಸ್ಥಾನವನ್ನು ಬಯಲುಗೊಳಿಸಬೇಕು. ಓರ್ವ ಅಧಿಕಾರಿ ಇದನ್ನು ವಿವರಿಸುವಾಗ, ಒಂದು ವೇಳೆ ಅಮರಿಕ ನಿಮ್ಮನ್ನು ಕಾಣಬಹುದಾದರೆ, ಇರಾನ್ ಕಣ್ಣಿಗೂ ನೀವು ಬೀಳುತ್ತೀರಿ ಎಂದಿದ್ದಾರೆ.

ಇನ್ನು ಹಣದ ವಿಚಾರವೂ ಹೆಚ್ಚಿನ ಭಯ ಮೂಡಿಸುವ ಅಂಶವಾಗಿದೆ. ವಿಮೆಗಳು ಹಡಗಿನ ಹಲ್ ಮೌಲ್ಯದ 7-8% ಮೌಲ್ಯದಷ್ಟು ಹೆಚ್ಚಾಗಿವೆ. (ಅಂದರೆ, ಇದು ಹಡಗಿನ ಲೋಹದ ದೇಹದ ಮೌಲ್ಯವೇ ಹೊರತು, ಸರಕಿನ ಬೆಲೆಯಲ್ಲ). ಶಾಂತಿ ಮರಳಿದಾಗ, ಈ ವಿಮಾ ಮೌಲ್ಯ ಅಂದಾಜು 2%ಗೆ ಇಳಿಯಿತು. ಬೃಹತ್ತಾದ ಕಚ್ಚಾ ತೈಲ ಟ್ಯಾಂಕರ್‌ಗಳು ಎಂದಿಗೂ ಪ್ರಮುಖ ಗುರಿಗಳಾಗಿದ್ದವು.

ಮೊದಲೇ ದುರ್ಬಲಗೊಂಡಿದ್ದ ಕದನ ವಿರಾಮವೂ ಈಗ ಕುಸಿದು ಬಿದ್ದಿದೆ. ಶಾಂತಿ ಮಾತುಕತೆಗಳು ಮುಂದುವರಿದಿರುವಾಗಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಮುಗಿದಿದೆ ಎಂದಿದ್ದಾರೆ. ಇದರಿಂದಾಗಿ ಹೊರ್ಮುಸ್ ಜಲಸಂಧಿಯ ಹಡಗು ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಇದೇ ಸಮಯದಲ್ಲಿ, ಇರಾನ್ ಮತ್ತು ಒಮಾನ್ ಇಂದಿಗೂ ಇಲ್ಲಿ ಹಾದುಹೋಗುವ ಹಡಗುಗಳಿಂದ ಶುಲ್ಕ ಪಡೆಯುವ ಕುರಿತು ಚರ್ಚೆಯಲ್ಲಿ ತೊಡಗಿವೆ. ಇರಾನ್ ಹಡಗುಗಳ ಮೇಲೆ ಶುಲ್ಕ ವಿಧಿಸಬೇಕು ಎಂದರೆ, ಒಮಾನ್ ಇದನ್ನು ನಿರಾಕರಿಸಿದೆ.

ಭಾರತದ ಪಾಲಿಗೆ ಇದೇನು ಎಲ್ಲೋ ದೂರದಲ್ಲಿನ ಕಥೆಯಲ್ಲ. ನಾವು ನಮ್ಮ ಬಳಕೆಯ 80%ಕ್ಕೂ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಬಹುತೇಕ ಹೊರ್ಮುಸ್ ಜಲಸಂಧಿಯ ಮೂಲಕವೇ ಬರುತ್ತದೆ. ಜಲಸಂಧಿಯಲ್ಲಿನ ಯಾವುದೇ ಅಡಚಣೆ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರದಲ್ಲಿ ಭಾರೀ ಹೆಚ್ಚಳಕ್ಕೆ ಕಾರಣವಾಗಲಿದೆ. ಈಗ ಎಲ್ಲವೂ ಹಡಗುಗಳ ಮೇಲೆ ದಾಳಿ ಆಗದಿರುವುದನ್ನೇ ಅವಲಂಬಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪುತ್ರಿಯರ ಅಕ್ರಮ ನೇಮಕಕ್ಕೆ ನೆರವು: 'KPSC' ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಅಮಾನತುಗೊಳಿಸಿ ರಾಜ್ಯಪಾಲರ ಆದೇಶ

US-Iran ಸಂಘರ್ಷ ತೀವ್ರ: Hormuz ಜಲಸಂಧಿ ಬಳಿ ಅಮೆರಿಕ ಭೀಕರ ವೈಮಾನಿಕ ದಾಳಿ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ..!

ಬದಲಾದ ಸಂಸತ್ ಬಲಾಬಲದ ನಡುವೆ ಮುಂಗಾರು ಅಧಿವೇಶನ; ಜು.19 ರಂದು ಸರ್ವಪಕ್ಷಗಳ ಸಭೆ; ಜಿದ್ದಾಜಿದ್ದಿನ ರಾಜಕೀಯಕ್ಕೆ ವೇದಿಕೆ ಸಜ್ಜು..!

ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ನಿಗೂಢ ಮಾಸ್ಕ್ ಮ್ಯಾನ್! ಕೊನೆಗೂ ಗುರುತು ಬಹಿರಂಗ

2028 ವಿಧಾನಸಭಾ ಚುನಾವಣೆ: BJP ಬಣ ಬಡಿದಾಟದ ಲಾಭ JDSಗೆ?; NDA ಸಿಎಂ ರೇಸ್‌ನಲ್ಲಿ ಕುಮಾರಸ್ವಾಮಿ ಹೆಸರು ಮುನ್ನೆಲೆಗೆ..!